Thursday 1 December 2011

ಅಡುಗೆ ಮತ್ತು ಪ್ರೀತಿ!!

ಗಂಡ ಓಫಿಸಿಂದ ಬರುತ್ತಿದ್ದಂತೇ ಮೊದಲೇ ಗಟ್ಟಿಮಾಡಿಕೊಂಡಂತಹ ಮಾತುಗಳ ಮಳೆ !
ಏನ್ರೀ ಇಷ್ಟು ಲೇಟು? ನಾನೂ ನಿಮ್ಮಷ್ಟೇ ಕೆಲಸ ಮಾಡಿ ಬಂದೋಳು!
ಇಲ್ಲ, ಇವತ್ತು ತಿಂಗಳಿನ ಕೊನೆ ಅಲ್ವೇ ? ಮೀಟಿಂಗ್ ಇತ್ತು.
ಏನು ಮೀಟಿಂಗ್? ನಂಗೂ ಇತ್ತು. ಸ್ವಲ್ಪ ತಡ ಆದ್ರೂ ೮ ಘಂಟೆಗೆ ಮನೆಗೆ ಬಂದೆ.. ಈಗ ಎಷ್ಟಾಯ್ತು ಸಮಯ ಗೊತ್ತಾ ನಿಮಗೆ?
ಆಯ್ತು ಕಣೇ, ಮುಂದೆ ಹೀಗಾಗೊಲ್ಲ. ಅಡುಗೆ ಏನಾದ್ರೂ ಮಾಡಿದೀಯಾ?
ಅಂದ್ರೆ? ಮೊನ್ನೆ ನೀವೆ ಹೇಳಿದ್ದಲ್ವಾ?
ಏನು?
ಇವತ್ತಿನ ದಿನ ನಿಮ್ದು. ಇವತ್ತು ಅಡುಗೆ ನಿಮ್ಮ ಕೆಲಸ. ಅದ್ಕೇ ನಾನೇನೂ ಮಾಡಿಲ್ಲ..ತುಂಬಾ ಹಸಿವಾಗ್ತಾ ಇದೆ.
ಲೇಟಾಗತ್ತೆ ಅಂತ ಮೆಸೇಜ್ ಮಾಡಿದ್ರೂ ನೀ ಹೀಗೆ ಮಾಡ್ಬಾರ್ದಿತ್ತು.
ಮೆಸೇಜಾ? ನಾ ನೋಡ್ಲಿಲ್ಲ.. ಈಗ ಏನ್ ಮಾಡ್ತೀರಿ?
ಪರವಾಗಿಲ್ಲ . ನಾನೇ ಅಡುಗೆ ಮಾಡ್ತೀನಿ. ಏನು ಮಾಡ್ಲಿ?
ಏನಾದ್ರೂ ಮಾಡಿ. ಪಲಾವ್ ವಾಂಗಿಬಾತ್ ಅನ್ನ ಸಾಂಬಾರ್ ಯಾವುದಾದ್ರೂ??

ಮೆಲ್ಲ ಬದುಕಿದೆ ಅನ್ನುತ್ತಾ ಗಂಡ ಅಡುಗೆಕೋಣೆಗೆ ಹೋದ..
ಇನ್ನೇನು ಪಲಾವಿಗೆ ಬೀನ್ಸು ಹಚ್ಚಬೇಕು, ಹಿಂದೆಯೇ ಹೆಂಡತಿ!
ತಪ್ಪಾಯ್ತೆನುವಂತೆ ಹಚ್ಚತೊಡಗಿದ. ಜೊತೆಗೆ ಒಂದು ಬೆರಳಿಗೆ ಏಟು ಮಾಡಿಕೊಂಡ!

ಅಂದು ಅಡುಗೆಗಿಂತ ಪ್ರೀತಿಯೇ ಮುಖ್ಯವಾಯಿತು ಇಬ್ಬರಿಗೂ. ಗಂಡನ ಕೈಯ್ಯನ್ನು ಹಿಡಿದುಕೊಂಡು ನಿದ್ದೆಹೋದಳವಳು.

Tuesday 15 November 2011

ವಿಶ್ವ ಸಹನಾ ದಿನಾಚರಣೆ - World tolerance Day.


ವಿಶ್ವ ತಾಳುವಿಕೆಯ ದಿನಾಚರಣೆಯಂತೆ ಇಂದು. (World tolerance day). ಹ್ಹ ಹ್ಹ, ಇದನ್ನು ಆಚರಣೆ  ಅಂತ ಪ್ರಾರಂಭ ಮಾಡಿದವನಿಗೆ ತಾಳ್ಮೆಯಿರಬೇಕು.
ತಾಳು ಅನ್ನೋದಕ್ಕೆ ಏನೆಲ್ಲಾ ಅರ್ಥ ಇದೆ. ಹೊರು , ಸೈರಿಸು, ಸಹನೆ ಎಂದೆಲ್ಲಾ ಅರ್ಥೈಸಿಕೊಳ್ಳಬಹುದು. ತಾಳಿಕೊಳ್ಳುವುದು (ತಾಳಿ ಅಂದರೆ ಮಂಗಳಸೂತ್ರ ಅಲ್ಲ!) ಅಷ್ಟು ಸುಲಭವೇ? ಭೂಮಿ ನಮ್ಮನ್ನೆಲ್ಲಾ ತಾಳಿಕೊಂಡಿದ್ದಾಳೆ ಎಂದು ಭೂಮಿಯ ಬಗ್ಗೆ ಅಭಿಮಾನ ಹೊಂದಿದ್ದೇವೆ. ಸಮಾಜವೂ ನಮ್ಮನ್ನ ತಾಳಿಕೊಂಡಿದೆ. ಈಗ ಮುಖ್ಯ ವಿಷಯಕ್ಕೆ ಬರೋಣ. ಆಚರಣೆಯ ಉದ್ದೇಶ ಏನು ?

ಈ ಆಚರಣೆ ಶುರುವಾಗಿದ್ದು ೧೯೯೫ರಲ್ಲಿ. ಮುಖ್ಯವಾಗಿ ಸಹನೆ ಎನ್ನುವ ವಸ್ತು ಚರ್ಚಿತವಾಗಿದ್ದು ಹಿಂಸೆ ಎನ್ನುವುದಕ್ಕೆ ವಿರೋಧವಾಗಿ. ಸಹನೆ ಇದ್ದರೆ ಹಿಂಸೆ ಇಲ್ಲ ಎನ್ನುವ ವಿಚಾರದಿಂದ ಈ ಸಹನೆಗೂ ಒಂದು ದಿನ ಪ್ರಾರಂಭವಾಯಿತು. ಯುನೆಸ್ಕೋದ ಪ್ರೇರಣೆಯಿಂದ ಅಮೇರಿಕಾದಲ್ಲಿ ಈ ಆಚರಣೆಗೆ ಅಡಿಗಲ್ಲು.

ಬೇರೆ ಬೇರೆ ಸಂಸ್ಕೃತಿಗಳನ್ನು ಆಚರಣೆಗಳನ್ನು ಒಪ್ಪುವುದು ಅಥವಾ ಅದರ ಪಾಡಿಗೆ ಅದನ್ನ ಬಿಡುವುದು (ಒಪ್ಪಲಾಗದಿದ್ದಲ್ಲಿ) ತುಂಬಾ ಮುಖ್ಯ. ಬೇರೆ ಬೇರೆ ಜಾತಿಗಳು, ಆಚರಣೆಗಳು, ಪದ್ಧತಿಗಳು ಎಲ್ಲವನ್ನೂ ಟೀಕಿಸುವ ಗುಣ ಇರುವ ನಮ್ಮ ಮಧ್ಯೆ ಇಂತಹ ಆಚರಣೆಗೊಂದು ಪ್ರಾಮುಖ್ಯತೆ ಕೊಡಲೇಬೇಕು. ಆಚರಣೆ ದಿನಕ್ಕೆ ಮಾತ್ರ ಸೀಮಿತವಾಗದೇ ಸಹನಾಗುಣವನ್ನು ಬೆಳೆಸಿಕೊಂಡಲ್ಲಿ ತುಂಬಾ ಸಂಘರ್ಷಗಳನ್ನ ತಪ್ಪಿಸಬಹುದು.

ತಲ್ಲಣಸಿದಿರು ಕಂಡ್ಯ ತಾಳು ಮನವೆ , ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ ,ತಾಳುವಿಕೆಗಿಂತ ಅನ್ಯ ತಪವು ಇಲ್ಲ. ಎನ್ನುವುದು ದಾಸವಾಣಿ. ಇಲ್ಲಿಯೂ ತಾಳುವಿಕೆ ಪ್ರಧಾನ.

ತ್ರಿಶಂಕುವಿನ ಕಥೆ ಗೊತ್ತೇ? ೯೯ ಯಾಗಗಳನ್ನು ಮಾಡಿದ ಆತ ಸಶರೀರನಾಗಿ ಸ್ವರ್ಗವನ್ನು ಸೇರುವ ಮಹತ್ವಾಕಾಂಕ್ಷೆ ಹೊಂದಿದ್ದ. ೧೦೦ನೇ ಯಾಗವನ್ನು ನಡೆಸಲು ವಶಿಷ್ಠರನ್ನು ಕಾಣಲು ಹೋದಾಗ ವಶಿಷ್ಠರಿರಲಿಲ್ಲ ಅಲ್ಲಿ. ವಶಿಷ್ಠರಂತೆಯೇ ಸಮರ್ಥರಾದ ವಶಿಷ್ಠರ ಮಕ್ಕಳು (ವಾಶಿಷ್ಠರು) ಇವನ ಯಾಗದ ಆಸೆಗೆ "ನಿನಗೆ ಯೋಗವಿಲ್ಲ " ಎಂದರು. ಕುಪಿತಗೊಂಡ ತ್ರಿಶಂಕು ಅವರನ್ನ ಹೀಯಾಳಿಸಿದ. ಕಡೆಗೆ ಚಾಂಡಾಲತ್ವದ ಶಾಪವನ್ನು ಪಡೆದ. ಮುಂದೆ ವಿಶ್ವಾಮಿತ್ರರ ಸಹಾಯದಿಂದ ವಿಚಿತ್ರಸ್ವರ್ಗವನ್ನೇನೋ ಪಡೆದ. ಒಂದುವೇಳೆ ಸಹನೆಯಿಂದ ಇರುತ್ತಿದ್ದರೆ ತ್ರಿಶಂಕು ?

ಪುರಾಣದಲ್ಲಿ, ವಾಸ್ತವದಲ್ಲಿ ಇಂತಹಾ ಎಷ್ಟೋ ಉದಾಹರಣೆಗಳನ್ನು ಕೊಡಬಹುದು. ಯಾರೋ ಹೇಳಿ, ಏನೋ ಓದಿ ಸಹನೆ ಬರುವಂತದ್ದಲ್ಲ. ಅವರವರ ಚಿಂತನೆಯಿಂದಲೇ ಬರಬೇಕು ಅಲ್ಲವೇ.. ಏನಂತೀರಿ.

ಇಷ್ಟನ್ನು ಓದಿದ ನಿಮ್ಮ ಸಹನೆಯನ್ನು ಇನ್ನು ಪರೀಕ್ಷಿಸುವುದಿಲ್ಲ.. :) :) ಶುಭಾಶಯಗಳು..

Sunday 13 November 2011

ಮಕ್ಕಳ ದಿನಾ+ಆಚರಣೆ !!

ಮೊದಲು ಮಕ್ಕಳಿಗೆ ಶುಭಾಶಯಗಳು.. ಮತ್ತೆ ದೊಡ್ಡವರಿಗೆ ಶುಭಾಶಯಗಳು.

ಮತ್ತೆ ಮಕ್ಕಳ ದಿನಾಚರಣೆ ಅಂತ ಬೇಕೇ.. ಮಕ್ಕಳಿಗೆ ದಿನಾ ಆಚರಣೆ. ಎಲ್ಲೆಂದರಲ್ಲಿ ಹಾಡುವ, ಓಡುವ, ಜಗಳವಾಡುವ, ಪ್ರೀತಿಸುವ, ಒಂದಾಗುವ, ಕಲಿಯುವ , ಬೆರೆಯುವ ಆಸಕ್ತಿ ಮತ್ತು ಸಮಯ ಸಹಾಯ ಮಕ್ಕಳಿಗಲ್ಲದೆ ಬೇರೆಯವರಿಗುಂಟೇ?

ಚಾಚಾ ನೆಹರು ಹುಟ್ಟಿದ ದಿನವನ್ನು ಮಕ್ಕಳ ದಿನ ಆಚರಿಸೋದು ಹೌದು. ಆದರೆ ನಮ್ಮ ಕನ್ನಡ ಮಕ್ಕಳು ಯಾವತ್ತೂ ನೆನಪಿಸಿಕೊಳ್ಳಬೇಕಾದ ಇಬ್ಬರು ಸಾಹಿತಿಗಳು ರಾಜರತ್ನಂ ಮತ್ತೆ ದಿನಕರ ದೇಸಾಯಿ.

ಕುಟುಕುವ ಚುಟುಕಗಳಿಂದ ಹೆಸರುವಾಸಿಯಾದ ದಿನಕರ ದೇಸಾಯಿಯವರ ಘಂಟೆಯ ನೆಂಟನೆ ಓ ಗಡಿಯಾರ ಹಾಡನ್ನು ಕೇಳದ ಮಕ್ಕಳಿರಲಿಲ್ಲ.. ಈಗ ಯೆಲ್ಲೋ ಯೆಲ್ಲೋ ಡರ್ಟಿ ಫೆಲ್ಲೋ ಎಂದೊದರಿದರೂ ಮೊದಲು ನಮಗೆ ತುಂಬಾ ಆಪ್ಯಾಯಮಾನವಾಗಿದ್ದ ಹಾಡು. ಇದೊಂದೇ ಅಲ್ಲದೆ ತುಂಬಾ ಮಕ್ಕಳ ಸಾಹಿತ್ಯವನ್ನು ಬರೆದಿದ್ದಾರೆ. ಮಕ್ಕಳ ಗೀತೆಗಳು , ಶಿಶುಕವನ ಸಂಕಲನಗಳನ್ನು ಮಕ್ಕಳಿಗೋಸ್ಕರ ಪ್ರಕಟಿಸಿದ್ದಾರೆ.
ಮಕ್ಕಳು ಕೊಳ್ಳಲು ಸಾಧ್ಯವಿಲ್ಲವಾದ್ದರಿಂದ ಅಪ್ಪ ಅಮ್ಮ ಕೊಂಡು ಮಕ್ಕಳಿಗೆ ಕೊಡಿಸಬೇಕು ಅಷ್ಟೇ..

ಕುಡುಕ ರತ್ನನಿಂದಾಗಿ ಹೆಸರುವಾಸಿಯಾದ ಇನ್ನೊಬ್ಬ ಕವಿ ರಾಜರತ್ನಂ. ರತ್ನನ ಪದಗಳು, ನಾಗನ ಪದಗಳು ಮಕ್ಕಳಿಗಲ್ಲ ಬಿಡಿ, ದೊಡ್ಡವರಿಗೂ ಒಂದೇ ಬಾರಿ ಓದಬೇಕಾದಲ್ಲಿ ಒಮ್ಮೆ ಬಾರಿಗೆ ಹೋಗಿ ಬರಬೇಕು.
ಆದರೆ ಬಣ್ಣದ ತಗಡಿನ ತುತ್ತೂರಿ, ನಮ್ಮ ಮನೆಯಲೊಂದು ಪುಟ್ಟ ಪಾಪು ಇರುವುದು.. ಇಂತಹ ಹಾಡುಗಳನ್ನೆಲ್ಲ ಎಷ್ಟು ಬಾರಿ ಆನಂದದಿಂದ ಮಕ್ಕಳು ಹಾಡುವುದನ್ನ ನೋಡಿದ್ದೇವೆ!. ತುತ್ತೂರಿ, ಕಂದನ ಕಾವ್ಯ ಎನ್ನುವಂತಹದ್ದನ್ನ ಮಕ್ಕಳಿಗಾಗಿ ಕೊಟ್ಟ ಕವಿ.

ಇವರಿಬ್ಬರನ್ನು ಮಕ್ಕಳ ದಿನಾಚರಣೆ ಪ್ರಯುಕ್ತ ನೆನಪು ಮಾಡಿಕೊಂಡಿದ್ದೇನೆ. ನಾನೂ ಮಗುವೇ ಆದ್ದರಿಂದ. .. ಮಕ್ಕಳಿಗೊಂದು ಕವಿಗಳಿಗೆರಡು ಜೈ ಹೋ...

ಮತ್ತೆ ಮಕ್ಕಳಿಗೆ ಒಂದು ಹಾಡು..

ಚಿಕ್ಕ ಚಿಕ್ಕ ಮಕ್ಕಳೆಲ್ಲ ಬನ್ನಿರೀ ಬದಿ
ಚೊಕ್ಕವಾದ ಆಟಗಳನು ಆಡಿ ಚಂದದಿ

ದೊಡ್ಡ ದೊಡ್ಡ ಚೆಂಡು ದಾಂಡು ಕೈಯ್ಯಲೇತಕೆ
ಗುಡ್ಡ ಬೆಟ್ಟ ಹತ್ತಿ ಇಳಿವ ಯಾಕೆ ನಾಚಿಕೆ ?

ಎದ್ದು ಬಿದ್ದು ನಗುವ ಸದ್ದು ಮಾಡಿರೆಲ್ಲರೂ
ಹದ್ದು ಕಾಗೆ ಗುಬ್ಬಿ ಮೊಲವ ನೋಡಿರೆಲ್ಲರೂ

ಹರಿವ ನೀರು ಬೆಳೆವ ಪೈರು ನಮ್ಮ ನಾಡಿಗೆ
ಬಿರಿವ ಮನಸು ನಮ್ಮದೆನುತ ಮರಳಿ ಗೂಡಿಗೆ.

ಶುಭಾಶಯಗಳು..

Monday 7 November 2011

ಗೋಪ ಗೃಹಿಣೀ ನ್ಯಾಯ


ಹತ್ಪಾ ನೃಪಂ ಪತಿಮವಾಪ್ಯ ಭುಜಂಗದಷ್ಟಂ
ದೇಶಾಂತರೇ ವಿಧಿವಷಾತ್ ಗಣಿಕಾಸ್ಮಿ ಜಾತಾ
ಪುತ್ರಂ ಸ್ವಕಂ ಸಮಧಿಗಮ್ಯ ಚಿತಾಂ ಪ್ರವಿಷ್ಟಾ
ಶೋಚಾಮಿ ಗೋಪಗೃಹಿಣೀ ಕಥಮದ್ಯ ತಕ್ರಂ

ಅವಳು ರಾಜನ ಮಡದಿಯಾಗಿ ಸುಖವಾಗಿದ್ದಳು.  ಆದರೂ ಅವಳು ಬೇರೆ ಒಬ್ಬ ಗೆಳೆಯನಲ್ಲಿ ಮನಸ್ಸನ್ನು ಹೊಂದಿದ್ದಳು . ರಾಜನಿಗೆ ವಿಷವನ್ನಿಕ್ಕಿ ಗೆಳೆಯನ ಜೊತೆ ಓಡಿ ಹೋದಳು. ಗೆಳೆಯ ಹಾವಿನ ಕಡಿತಕ್ಕೊಳಗಾಗಿ ಮೃತನಾದನು. ಬೇರೆ ಗತಿಯಿಲ್ಲದೆ ಹೆಂಗಸು ವೇಶ್ಯಾವೃತ್ತಿಯನ್ನ ಕೈಗೊಂಡಳು.

ಈಡಿಪಸ್ಸಿನಂತೆ , ತಾನೇ ಹಡೆದ ಮಗ ಅಕಸ್ಮತ್ತಾಗಿ ಅವಳನ್ನು ಕೂಡಿದನು.ಅನಂತರ ತಾಯಿ ಮಕ್ಕಳೆಂದು ಅರಿತೊಡನೆ , ಪ್ರಾಯಶ್ಚಿತ್ತಾಕ್ಕಾಗಿ ಚಿತೆಯಲ್ಲಿ ಮಲಗಿ ಬೆಂಕಿ ಹಚ್ಚಿಕೊಂಡರು.
ರಾಜಪುತ್ರ ಸುಟ್ಟುಹೋದ, ಇವಳೋ ಅಲ್ಲಿಂದಲೂ ಓಡಿದಳು. ಸುಟ್ಟ ಗಾಯಗಳಿಂದ ನೊಂದ ಇವಳನ್ನು ಒಬ್ಬ ಗೊಲ್ಲ
ಉಪಚರಿಸಿದನು. ಅವನನ್ನೇ ಇವಳು ಮದುವೆಯಾದಳು.

ಕೆಲಸದಂತೆ ಮಜ್ಜಿಗೆ ಮಾರಲು ಪೇಟೆಗೆ ಒಯ್ಯುತ್ತಿರುವಾಗ , ಮಡಿಕೆ ಉರುಳಿಬಿದ್ದು ಮಜ್ಜಿಗೆ ಭೂಮಿ ಪಾಲಾಯಿತು.

ತನ್ನ ಕೆಟ್ಟನಡವಳಿಕೆಗಳಿಂದ ಮಜ್ಜಿಗೆ ಹಾಳಾಯಿತು ಎಂದು ಎಂದು ಅವಳು ಪಶ್ಚಾತ್ತಾಪ ಪಟ್ಟಳಂತೆ.
ಇದನ್ನು "ನ್ಯಾಯ"ದಲ್ಲಿ ಗೋಪ ಗೃಹಿಣೀ ನ್ಯಾಯ ಎನ್ನುತ್ತಾರೆ. ಅಧ್ಬುತ ಕಥೆ ಅಲ್ಲವೇ ?

Tuesday 25 October 2011

ದೀಪಾವಳಿಯ ಮಾತು ಕಥೆ.


ಮಾತು ಮುಖ್ಯ ಯಾಕೆ ಗೊತ್ತೇ? ಮಾತೇ ಮುತ್ತು.. ಮಾತು ಮನೆ ಕೆಡಿಸಿತು ..

ಭಾರತಾಂಬೆ ನಮ್ಮ "ಮಾತೆ " ನಿನ್ನ ಜೀವಕಿಂತ ಮೇಲು ಹೇಳುವವರೂ ಇದ್ದಾರಲ್ಲಾ.. .. ವಾಗ್ಭೂಷಣಂ ಭೂಷಣಂ.. ಮಾತು ಚೆನ್ನಾಗಿರಲಿ.. ಇಷ್ಟವಾಗಲಿ ..

ಕೇಯೂರಾಣಿ ನ ಭೂಷಯಂತಿ ಪುರುಷಂ ಹಾರಾ ನ ಚಂದ್ರೋಜ್ವಲಾ
ನ ಸ್ನಾನಂ ನ ವಿಲೇಪನಂ ನ ಕುಸುಮಂ ನಾಲಂಕೃತಾ ಮೂರ್ಧಜಾಃ
ವಾಣ್ಯೇಕ್ಯಾ ಸಮಲಂಕರೋತಿ ಪುರುಷಂ ಯಾ ಸಂಸ್ಕೃತಾಧಾರ್ಯತೇ
ಕ್ಷೀಯಂತೇ ಖಲು ಭೂಷಣಾನಿ ಸತತಂ ವಾಗ್ಭೂಷಣಂ ಭೂಷಣಮ್ ... ..

ಮಾತು ಮಾತು ಮಥಿಸಿ ಬಂದ ನಾದದ ನವನೀತ..

ವಾದೇ ವಾದೇ ಜಾಯತೇ ತತ್ವಭೋಧಃ.. ಮಾತು ಅನುಭವಕ್ಕೆ, ವಾದಕ್ಕೆ (ವಾದದಲ್ಲಿ ವಿಧಗಳಿವೆ) ಮತ್ತೆ ಸ್ವಾಧ್ಯಾಯಕ್ಕೆ ಉಪಯೋಗ ಆಗಬೇಕು...

ವಾದಲ್ಲಿ ಮೂರು ವಿಧ ಇದೆ.
೧. ವಾದ - ಈ ಚರ್ಚೆಯ ಉದ್ದೇಶ ಸೋಲು ಗೆಲುವಿಂದ ಮುಖ್ಯವಾಗಿ ಸತ್ಯದ ಆವಿಷ್ಕಾರ.
೨. ಜಲ್ಪ- ಇದರಲ್ಲಿ ಗೆಲುವೇ ಪ್ರಧಾನ. ಪ್ರತಿಪಾದಿಸಿದ ವಿಷಯ ಸುಳ್ಳಾದರೂ ಸರಿ.
೩. ವಿತಂಡ - ಇದು ಪ್ರಧಾನ ವಾದದ ವಿಷಯ ಬಿಟ್ಟು ಬೇರೆ ವಿಷಯದ ಬಗ್ಗೆ ಚರ್ಚೆ ಮಾಡುವುದು... ..

ವಾದ ಒಳ್ಳೆದಿರಲಿ, ಸತ್ಯವಾಗಿರಲಿ .. ...

ಮಾತಾಡದಿದ್ದರೂ ಸಮಸ್ಯೆಯೇ ಮಾರಾಯರೆ, ಹಿಂದೆ ದಕ್ಷಯಾಗದ ಸಮಯಲ್ಲಿ ಶಿವ ಮಾತಾಡದ್ದಕ್ಕೆ,

ಸರಸಿಜಾಸನನೆಂದ ನುಡಿಗೆ ನಾ ಮರುಳಾಗಿ
ತರಳೆಯನು ಕೊಟ್ಟೆ ನಿರರ್ಥ
ಪರಿಕಿಸಲು ಕೋಡಗನ ಕೈಯ್ಯ ಮಾಲೆಯ
ತೆರನಾದುದಕಟೆನ್ನ ಬದುಕು.

ಹೇಳಿ ದಕ್ಷ ಯಾಗ ಮಾಡಿಸಿ, ಕೊನೆಗೆ ವೀರಭಧ್ರನಿಂದ ಹತನಾಗುವ ಹಾಗಾಯಿತನ್ನೆ...ಇಷ್ಟಕ್ಕೂ ಕಾರಣ ಶಿವ ಮಾತನಾಡದಿದ್ದುದೇ ಅಲ್ವಾ ?

ನುಡಿದರೆ ಮುತ್ತಿನ ಹಾರದಂತಿರಬೇಕು
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು
ನುಡಿದರೆ ಸ್ಫಟಿಕದ ಸಲಾಕೆಯಂತಿರಬೇಕು
ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು
ನುಡಿಯೊಳಗಾನು ನೆಡೆಯದಿದ್ದರೆ ಮೆಚ್ಚ ನಮ್ಮ ಕೂಡಲಸಂಗಮದೇವ

ಇದು ಬಸವಣ್ಣನ ವಚನ.. ಮಾತು ಎಷ್ಟು ಇಂಪಾರ್ಟೆಂಟು ಅಲ್ವಾ.. ಜಸ್ಟ್ ಮಾತ್ ಮಾತಲ್ಲಿ

ಮತ್ತೆ ಮಾತು ! ಮಾತುಗಳಲ್ಲಿ ಎಷ್ಟು ವಿಧ ನೋಡಿ ! ಬಿರುಮಾತು, ಪಿಸುಮಾತು, ಗಾಳಿಮಾತು ... ಬಿರುಬಿಸಿಲಿನಲ್ಲಿಯೂ ನಲ್ಲೆಯ ಪಿಸುಮಾತು ತಂಗಾಳಿಯಾದೀತು !! ಮತ್ತೆ ಇನ್ನೊಂದಿದೆ ಮಾತು ಕೊಡುವುದು..ಮಾತು ಕೊಟ್ಟು ಸಿಕ್ಕಿಬೀಳುವುದಿದೆ, ಸಿಕ್ಕಿಬಿದ್ದಮೇಲೆ ಮಾತುಕೊಡುವುದೂ ಇದೆ..

ಮಾತಿನಿಂ ನಗೆ ನುಡಿಯು ಮಾತಿನಿಂ ಹಗೆಹೊಲೆಯು
ಮಾತಿನಿಂ ಸರ್ವಸಂಪದವು ಜಗಕೆ
ಮಾತೆ ಮಾಣಿಕವು ಸರ್ವಜ್ಞ ... ಅಂತ ಸರ್ವಜ್ಞನೂ ಒಂದು ಮಾತು ಹೇಳಿದ್ದಾನೆ .

ಚನ್ನವೀರ ಕಣವಿ ಅನ್ನುವ ಅಮೋಘ ಸಾಹಿತಿ ಕನ್ನಡಕ್ಕೆ ಒಳ್ಳೆ ಕೊಡುಗೆ ನೀಡಿದ್ದಾರೆ... ಸಾಹಿತ್ಯಲೋಕದಲ್ಲಿ ಅವರದ್ದೇ ಆದ ವಿಶೇಷ ಸ್ಥಾನ ಇರುವ ಕವಿ ಅವರು ..ಅವರ ಒಂದು ಕವನದ ಸಾಲು ಹೀಗಿದೆ ...

ನಾವು ಆಡುವ ಮಾತು ಹೀಗಿರಲಿ ಗೆಳೆಯ
ಮೃದುವಚನ ಮೂಲೋಕ ಗೆಲ್ಲುವುದು ತಿಳಿಯ
ಮೌನ ಮೊಗ್ಗೆಯನೊಡೆದು ಮಾತರಳಿ ಬರಲಿ
ಮೂರು ಗಳಿಗೆಯ ಬಾಳು ಮಗಮಗಿಸುತಿರಲಿ.... ಹೇಗಿದೆ ಮಾತು ?

 ಚಾಣಕ್ಯನ ಬಗ್ಗೆ ಕೇಳದವರ್ಯಾರು ? ತನ್ನ ನೀತಿಯ ಭೋಧೆಗಳಿಂದಲೇ ಹೆಸರುವಾಸಿ. ಅವನೂ ಮಾತಿನ ಬಗ್ಗೆ ಮಾತಿನ ನೀತಿ ಹೇಳಿದ್ದಾನೆ .. ಇಂತಿದೆ ಅದು..
ಪ್ರಿಯ ವಾಕ್ಯ ಪ್ರದಾನೇನ ಸರ್ವೇ ಪಷ್ಯಂತಿ ಜಂತವಃ ತಸ್ಮಾತ್ ತದೇವ ವಕ್ತವ್ಯಂ ವಚನೇ ಕಾ ದರಿದ್ರತಾ . (ಪ್ರಿಯವಾಕ್ಯಗಳನ್ನು ಮಾತನಾಡುವುದರಿಂದ ಎಲ್ಲರೂ ಚೆನ್ನಾಗಿರುತ್ತಾರೆ, ಆದ್ದರಿಂದ ಅದನ್ನೇ ಮಾತಾಡು , ಶಬ್ಧಗಳಿಗೆ ದಾರಿದ್ರ್ಯವಿದೆಯೇ?

ಎಲ್ಲರಿಗೂ ದೀಪಾವಳಿಯ ಶುಭಾಶಯ.. ಹೋಗಿ ಹೋಗಿ ಇಲ್ಲಿ ಶುಭಾಶಯ ಹೇಳ್ತೀರಲ್ಲಾ ಅಂತ ಸಿಟ್ಟು ಮಾಡ್ಕೋಬೇಡಿ.. ಒಂದು ವಿಷಯ ಹೇಳ್ತೀನಿ.. ಜಾಸ್ತಿ ಮಾತಾಡುವವರಿಗೆ , ಬಡಾಯಿ ಕೊಚ್ಚುವವರಿಗೆ "ಪಟಾಕಿ " ಅಂತಲೂ ಅನ್ವರ್ಥ ನಾಮ ಇದೆ . ಈ ದೀಪಾವಳಿಯನ್ನು ಮನಸ್ಸುತುಂಬಿ ಬಾಯಿ ಪಟಾಕಿಯಿಂದ ಆಚರಿಸಿ.. ..ಮತ್ತೊಮ್ಮೆ ಶುಭಾಶಯಗಳು ..

Tuesday 27 September 2011

ಒಂದು ಪ್ರಮೇಯದ ಕಥೆ - ತಪ್ಪಾಗಿ ಓದದಿರಿ ಪ್ರೇಮಕಥೆಯೆಂದು !


ಪ್ರಮೇಯ : ಮೂರು ಮತ್ತೆ ಒಂದರ ಬೆಲೆ ಸಮವಾಗಿದೆ.
ಸಾಧನೆ :- ಇವತ್ತು ಬಸ್ಸಲ್ಲಿ ತುಂಬಾ ರಶ್ಶು ! ನನಗೆ ಸೀಟು ಸಿಕ್ಕಿತ್ತು. ಪಕ್ಕದಲ್ಲಿ ಕೂತವನೊಬ್ಬ ಅಲ್ಲೆ ಹತ್ತಿರದ ನಿಲ್ದಾಣದಲ್ಲಿಳಿಯಬೇಕಿತ್ತು. ಐದು ರೂಪಾಯಿ ಕೊಟ್ಟ ನಿರ್ವಾಹಕನಿಗೆ. ನಾಲ್ಕು ರೂಪಾಯಿ ಟಿಕೇಟ್ ಆದ್ದರಿಂದ ಇಬ್ಬರೂ ಲಾಭ ಮಾಡಿಕೊಂಡರು. ನಿರ್ವಾಹಕ ಟಿಕೇಟ್ ಕೊಡದೆ ಎರಡು ರೂಪಾಯಿ ವಾಪಸ್ಸು ಮಾಡಿದ.
ನಿರ್ವಾಹಕನಿಗೆ ಟಿಕೇಟ್ ಕೊಡದೆ ಆದ ಲಾಭ = ೩ ರೂಪಾಯಿ !
ಪ್ರಯಾಣಿಕನಿಗೆ ಆದ ಲಾಭ = ೧ ರೂಪಾಯಿ.

ನಿಲ್ದಾಣದಲ್ಲಿ ಇಳಿಯುವ ಮೊದಲೇ ಬಂದ ಪರೀಕ್ಷಕರು ತಪಾಸಣೆ ಮಾಡಿದರು.
ಟಿಕೇಟ್ ಕೊಡದ ನಿರ್ವಾಹಕನಿಗೆ ಹಾಕಿದ ದಂಡ = ೫೦೦ ರೂಪಾಯಿ
ಪ್ರಯಾಣಿಕನಿಗೆ ಹಾಕಿದ ದಂಡ = ೫೦೦ ರೂಪಾಯಿ.

ಆದ್ದರಿಂದ ಮೂರು ಮತ್ತು ಒಂದರ ಬೆಲೆ ಸಮವಾಗಿರುತ್ತದೆ .

Sunday 25 September 2011

ತರಕಾರಿಯಮ್ಮ !!


ತುಂಬಾ ದುಸ್ತರವಾದ ಬದುಕಾಗಿತ್ತು ಅವರದ್ದು. ತಾಯಿ ಬೀದಿಬೀದಿಯಲ್ಲಿ ತರಕಾರಿ ಮಾರಿ ಹೇಗೋ ಮಗನನ್ನು ಏಳನೇ ಓದಿಸಿದ್ದಳು. ಮುಂದೆ ಮಗನೂ ತರಕಾರಿ ಮಾರತೊಡಗಿದ.
ತಾನು ತರಕಾರಿ ಮಾರುವ ಬೀದಿಯಲ್ಲೇ ಒಂದು ಅಂಗಡಿ ನೋಡಿ ಬಟ್ಟೆಬರೆ ವ್ಯಾಪಾರ ತೊಡಗಿಸಿದ ಮಗ. ಅಂಗಡಿ ಮುಂದೆ ತರಕಾರಿ ಮಾರತೊಡಗಿದಳು ತಾಯಿ.

ದೇಶ ಬೆಳೆದ ಮೇಲೆ ವೇಷ ಬದಲದಿರುವುದೇ?. ಅಂಗಡಿಗೆ ಜೀನ್ಸು, ಸ್ಕರ್ಟು ಬರತೊಡಗಿತು. ಮಗ ಕೂಲಿಂಗ್ ಗ್ಲಾಸ್ ಧರಿಸಿ ಗಲ್ಲದ ಮೇಲೆ ಕೂರತೊಡಗಿದ.
ಸಮಸ್ಯೆ ಎಂದರೆ ಅಂಗಡಿ ಮುಂದೆ ತರಕಾರಿ ಮಾಡುವ 'ಹೆಂಗಸ'ನ್ನು ಕಂಡರಾಗುವುದಿಲ್ಲ. ವ್ಯಾಪಾರಕ್ಕೆ ನಷ್ಟವಂತೆ !

Thursday 15 September 2011

ಚಂದಿರನ ನಗು !


ನಿನ್ನೆ ರಾತ್ರಿ ಆಗಸದಲ್ಲಿ ಚಂದ್ರ ಜೋರಾಗಿ ನಗುತ್ತಿದ್ದ. ಕಾರಣ ಕೇಳಿದೆ. ಅವನ ಕಥೆ ಚೆನ್ನಾಗಿತ್ತು , ನಿಮಗೆ ಹೇಳಬೇಡವೇ ?
"ನಿನ್ನೆ ಆ ಬಡಾವಣೆಯ ಎರಡನೇ ಮನೆ ಇದೆಯಲ್ಲ, ಅಲ್ಲಿ ಒಂದು ಪುಟ್ಟ ಪಾಪುವಿದೆ. ನಿನ್ನೆ ಊಟವನ್ನೇ ಮಾಡದ್ದಕ್ಕೆ ಆ ಪಾಪುವಿನ ಅಮ್ಮ ಟೇರೆಸ್ ಮೇಲಿಂದ ನನ್ನನ್ನು ತೋರಿಸಿ ತಿನ್ನಿಸುವ ಪ್ರಯತ್ನ ಮಾಡುತ್ತಿದ್ದಳು. ಆದರೂ ಪಾಪು ತಿನ್ನಲೇ ಇಲ್ಲ. ನೀನು ತಿನ್ನದಿದ್ದರೆ ಚಂದಮಾಮಂಗೆ ಊಟ ಕೊಡುತ್ತೇನೆ ಅಂದರೂ ಆ ಪಾಪು ಊಟವನ್ನೊಪ್ಪಲೇ ಇಲ್ಲ. "
ಅದಕ್ಯಾಕೆ ನಗು ಚಂದಿರಾ ?
ಅಲ್ಲ, ಮಗುವಿಗೆ ಆಶೆ ಬರಿಸಲು ಅಮ್ಮ ಆ ಊಟವನ್ನು ಒಂದೊಂದೇ ಮುದ್ದೆ ಕಟ್ಟಿ ನನ್ನೆಡೆಗೆ ಎಸೆದಳು. ನನಗೋ ತಿನ್ನಲಾಗುವುದಿಲ್ಲ, ಬಿಡು ನನ್ನ ವರೆಗೆ ತಲುಪುವುದೇ ಇಲ್ಲ !
ನನಗೆ ಇನ್ನೂ ಆಶ್ಚರ್ಯ, ನಗುವುದ್ಯಾಕೆ ಹೇಳು ಚಂದಿರಾ ?
ಆ ಅನ್ನದ ಉಂಡೆಗಳು ಎಸೆದಿದ್ದು ನನಗಾದರೂ ಬಿದ್ದಿದ್ದು ಕೆಳಗಿನ ಗುಡಿಸಿಲಿಗೆ, ಅಲ್ಲಿಯೂ ಒಂದು ಸಣ್ಣ ಪಾಪು ಇತ್ತು. ಅಮ್ಮ ಊಟ ಕೊಡದ್ದಕ್ಕೆ ಚಂದಮಾಮ ಊಟ ಕೊಟ್ಟ ಎಂದೇ ನನ್ನನ್ನು ನೋಡಿ, ಹೆಕ್ಕಿ ಹೆಕ್ಕಿ ತಿಂದ ಮಗುವಿನ ನಗು ನನ್ನಲ್ಲಿ !!!

೧೫-೦೯-೨೦೧೧

Sunday 11 September 2011

ಹೂವಿನ ಅಹಂಕಾರ !!


ಮಲ್ಲಿಗೆ ಗಿಡ ಸೊಂಪಾಗಿ ಬೆಳೆದಿತ್ತು. ಚಪ್ಪರದ ತುಂಬೆಲ್ಲಾ ನಕ್ಷತ್ರಗಳನ್ನು ಉದುರಿಸಿದಂತೆ ಬೆಳಗ್ಗೆ. ಅಪ್ಪನ ಚಪ್ಪರ, ಅಮ್ಮನ ನೀರು ಗೊಬ್ಬರ ಹಾಕಿದ ಸಾಕುವಿಕೆ ಖುಷಿಕೊಟ್ಟರೂ ಮನೆಯ ಪುಟ್ಟಿ ತನ್ನ ಹೂಗಳನ್ನ ಕೀಳುವುದು ಕೋಪ ತಂದಿತ್ತು ಬಳ್ಳಿಗೆ.
ಯಾರಿಗೂ ಅರಿವಾಗದಂತೆ ಪಕ್ಕದ ಮರವನ್ನು ಹತ್ತತೊಡಗಿತು ಬಳ್ಳಿ.ಈಗ ಚಪ್ಪರದಲ್ಲಿ ಹೂಬಿಡದೆ, ಪುಟ್ಟಿಗೆ ಸಿಗದಂತೆ ಮರದ ಮೇಲೆ ಹೂ ಬಿಡಲಾರಂಭಿಸಿತು.

ಮತ್ತೊಂದು ದಿನ ಬೆಳಗ್ಗೆ ಬಳ್ಳಿ ಅಳುತ್ತಿತ್ತು, ಕಾರಣ ಪುಟ್ಟಿ ಸಣ್ಣ ಏಣಿ ತಂದು ಹೂಗಳನ್ನು ಕೊಯ್ಯುವುದಲ್ಲದೇ, ಎತ್ತರದ ಬಳ್ಳಿಯನ್ನು ಕಡಿದು ಹಾಕಿದ್ದಳು.

Thursday 8 September 2011

ಪುಟ್ಟ ಮತ್ತೆ ಅವನಪ್ಪ !!


ನಮ್ಮ ಪುಟ್ಟ ಕಲಿಯೋದ್ರಲ್ಲಿ ಚುರುಕು. ಹಾಗೆಯೇ ಶಾಲೆಯಲ್ಲಿ ಸಣ್ಣ ಪುಟ್ಟ ಕಳ್ಳತನದಲ್ಲು ಕೂಡ. ಒಮ್ಮೆ ಸಿಕ್ಕಿಬಿದ್ದ . ಟೀಚರ್ ಹೊಡೆಯಲಿಲ್ಲ ಬದಲಿಗೆ ೫೦೦ ಸಲ "ಇನ್ನು ನಾನು ಕದಿಯುವುದಿಲ್ಲ ಅಂತ ಬರೆಯಲು ಹೇಳಿದರು".

ಮರುದಿನ ೫೦೦ ಸಲ ಬರೆದು ತಂದ ಪುಟ್ಟ. ಆಗ ಟೀಚರ್ ಗೆ ಗೊತ್ತಾಯಿತು, ಅವನ್ಯಾಕೆ ಕದಿಯುತ್ತಿದ್ದ ಅಂತ!!

ಬರೆದ ಪೇಪರುಗಳು ಪುಟ್ಟನ ತಂದೆಯು ಆಫೀಸಿಂದ ತಂದದ್ದಾಗಿತ್ತು !!

ಮನೆಯೆ ಮೊದಲ ಪಾಠಶಾಲೆ !!

Wednesday 7 September 2011

ಕೃಷ್ಣನ್ ಸ್ಟೋರಿ ..


ಇಮಾಂ ಸಾಬಿ ಊರಿಗೆ ಹೆಸರುವಾಸಿ, ಮಗನಿಗೆ ವಾಸಿಯಾಗದ ಪೋಲಿಯೋ ಇದ್ರೂ ಬದುಕೋ ಮಾರ್ಗ ಅಂತ ಒಂದು ಅಂಗಡಿ ಹಾಕ್ಕೊಟ್ಟಿದ್ರು. ನಮ್ದುಕೆ ಅಂಗ್ಡೀಲಿ ಒಂದು ಕೇಜಿದು ರೈಸ್ದು ಬೆಲೆ ಇಪ್ಪತ್ತೇ ಇರ್ತಾವ್ ಅಂತ ಹೇಳಿ ಒಳ್ಳೆ ಬಿಸಿನೆಸ್ ಮಾಡ್ತಿದ್ದ ಮಗ.

ಹಳ್ಳಿ ಬೆಳೆದಂತೆ ಡಿಗ್ರೀ ಓದಿದ್ದ ಸೋಮಪ್ಪನ ಮಗ ಕೃಷ್ಣ ಕೂಡ ಸೂಪೆರ್ ಮಾರ್ಕೆಟ್ಟು ಓಪನ್ ಮಾಡಿದ. ಸಾಬಿಯ ಬಿಸಿನೆಸ್ ಕೂಡ ಫ್ರಿಡ್ಜ್ ಹೊರಗೆ ಇಟ್ಟಿದ್ದ ಕೊತ್ತಂಬರಿ ಸೊಪ್ಪಾಯ್ತು. ಕೊನೆಗೆ ಸಹಿಸಲಾಗದ ಸಾಬಿ ಸೂಪರ್ ಮಾರ್ಕೆಟ್ಟಿಗೆ ಬೆಂಕಿ ಹಚ್ಚುವ ಪ್ಲಾನ್ ಮಾಡಿದ.

ಸೂಪರ್ ಆಗೇ ಬೆಂಕಿ ಬಿತ್ತು. ಉರಿಯಿತು, ಎಲ್ಲಾ ಬೇಯುವ ಬದಲು ಸುಟ್ಟು ಹೋಯಿತು. ಇಮಾಂ ಸಾಬಿಗೆ ಮಗನ ಕೃತ್ಯ ಸರಿ ಕಾಣಲಿಲ್ಲ.
ಬುದ್ದಿಯಲ್ಲೂ ಪೋಲಿಯೋ ಇರುವ ಮಗ ಈಗ ಬಸ್ ಸ್ಟಾಂಡಲ್ಲಿ ಇರ್ತಾನೆ, ಕೃಷ್ಣ ಇನ್ಸೂರೆನ್ಸ್ ಬಂದ ಮೇಲೆ ಪುನ: ಕೆಟ್ಟು ಹೋಗಿರೋ ಸೂಪರ್ ಮಾರ್ಕೆಟ್ಟು ಉದ್ಘಾಟನೆ ಮಾಡ್ತಾನಂತೆ.

ಕುರುಡು ಪ್ರೀತಿ !


ನಾ ಕಣ್ಣು ಮುಚ್ಚಿದರೆ ಅವಳು , ಕಣ್ಣು ಬಿಟ್ಟರೆ ಅವಳು , ಆನಂದ ಭಾಷ್ಪವೇ ಅವಳು , ಕಣ್ಣೀರೂ ಅವಳೇ ... ನನ್ನ ಕಣ್ಣುಗಳು ಅವಳೇ ಆಗಿದ್ದಾಳೆ .
ಒಹ್ , ಅವಳೆಂದರೆ ಕತ್ತಲಿರಬೇಕು !
ಯಾಕೆ ?
ನನಗೆಲ್ಲವೂ ಕತ್ತಲೆ , ಎಂದ ಕುರುಡ .

ಬೆಳಕಿನ ಕತ್ತಲು .!


ಆ ದಿನ ಹಬ್ಬ , ಪಟಾಕಿಗಳ ಅಬ್ಬರ .. ಕತ್ತಲನ್ನು ಸೀಳಿ ರುಯ್ಯನೆ ಹಾರುವ ಬೆಳಕಿನ ಬಾಣಗಳು , ಬಣ್ಣಗಳು . ಅಬ್ಬ ಕತ್ತಲನ್ನೇ ಬೆಳಕು ಮಾಡಿಬಿಟ್ಟರು .


ಎಲ್ಲಿಂದಲೋ ಸಿಡಿದ ಪಟಾಕಿ ಕಣ್ಣಿಗೆ ಬಿದ್ದು ಬೆಳಕೇ ಕತ್ತಲಾಯಿತು !

ಕೆಲಸವಿಲ್ಲ !!


ಗಂಡ ಹೆಂಡತಿ ,ಗಂಡ ಕೂಲಿ ಕೆಲಸ ಮಾಡುತ್ತಿದ್ದರೆ ಹೆಂಡತಿ ಕೂಡ ಮನೆ ಒರೆಸುವುದು ಪಾತ್ರೆ ತೊಳೆಯುವುದು ಮತ್ತಿತರ ಕೆಲಸ ಮಾಡಿ ದಿನ ದೂಡುತ್ತಿದ್ದರು ..

ಗಂಡನ ಕೆಟ್ಟ ಹವ್ಯಾಸದ ಅದೃಷ್ಟ ಅಂದರೆ ಲಾಟರಿಯಲ್ಲಿ ೫೦ ಲಕ್ಷ ಬಹುಮಾನ ಬಂದಿದ್ದು !.

ಈಗ ದೊಡ್ಡ ಮನೆ, ಕಾರು, ಬೈಕು , ಕೆಲಸವಿಲ್ಲ ... ಆದರೆ ದೊಡ್ಡ ಸಮಸ್ಯೆ ಅಂದರೆ ಮನೆ ಗುಡಿಸಲು , ಕಾರು ಒರೆಸಲು ಕೆಲಸಗಾರರು ಸಿಕ್ಕಿಲ್ಲ !!

ಮರಣೋತ್ತರ ಸಾಹಿತಿ !


ಬರೆದ ಬರೆಯುತ್ತಾ ಇದ್ದ. ಸ್ವಂತ ದುಡ್ಡು ಹಾಕಿ ಪ್ರಕಟಣೆ ಕೂಡ ಮಾಡಿದ. ಹೆಚ್ಚಿಂದು ರಮ್ಯ ಕವನ. ಗೋಗರೆದರೂ ಓದಲಿಲ್ಲ ಜನರು. ಈಗಿಲ್ಲ ಆ ಲೇಖಕ, ಆದರೆ ಸತ್ತ ಮೇಲೆ ತುಂಬಾ ಪ್ರಸಿದ್ಧಿ.

ಕೊನೆಯ ಕಾಲಕ್ಕೆ ಮೂರೂ ಮಕ್ಕಳಿಗೆ ಆಸ್ಥಿಯನ್ನು ಹಂಚಿ ವಿಲ್ ಬರೆದಿದ್ದ. ವಕೀಲರಿಗೂ ಅರ್ಥವಾಗದೆ ಪತ್ರಿಕೆಯಲ್ಲಿ ಪ್ರಕಟಿಸಿದ್ದರು..

ಮನೆಯೆ ಮೊದಲ ಪಾಠಶಾಲೆ !


ಅಪ್ಪ ನಶ್ಯ ಸೇದುವವ, ಅದೂ ಸುಗಂಧ ನಶ್ಯ. ದಿನಕ್ಕೆ ಎರಡು ರುಪಾಯಿಯ ನಶ್ಯ ಆದರೂ ಬೇಕಾಗಿತ್ತು ಅವನಿಗೆ. ತಿಂಡಿಯ ನಂತರ, ಗದ್ದೆ ಕೆಲಸದ ಸಮಯ.. ಏನಿದ್ದರೂ ನಶ್ಯ ಅವನ ಸಂಗಾತಿ.. ಹೀಗೆ ಭೇಟಿಯಾದ ಒಬ್ಬ ಕೇಳಿದ " ಹೇಗೆ ನಶ್ಯ ಸೇದಲು ಕಲಿತೆ ?"
----ನಾನು ಶಾಲೆಗೆ ಹೋಗುವಾಗ ನನ್ನಪ್ಪ ನನ್ನಲ್ಲಿ ೨ ರುಪಾಯಿ ಕೊಟ್ಟು ನಶ್ಯ ತರಿಸುತ್ತಿದ್ದರು. ನಾನು ಯಾವುದೋ ಒಂದು ನಶ್ಯ ತರುತ್ತಿದ್ದೆ. ಬೇರೆ ನಶ್ಯ ತಂದಾಗೆಲ್ಲ ಅಪ್ಪನ ಸಿಟ್ಟು ನೆತ್ತಿಗೇರುತ್ತಿತ್ತು. ಕೊನೆಗೆ ಅಪ್ಪ ಶಾಲೆಗೆ ಹೋಗುವ ಮೊದಲು ನಶ್ಯದ ಸ್ಯಾಂಪಲ್ ನನಗೆ ತೋರಿಸಿ, ಇದೇ ನಶ್ಯ ಅಂಗಡಿಯಿಂದ ತಾ ಎನ್ನುತ್ತಿದ್ದರು. ಹಾಂ ಅವರದೂ ಸುಗಂಧ ಬ್ರಾಂಡಿನ ನಶ್ಯವೇ ಆಗಿತ್ತು.

ಮನೆಯೆ ಮೊದಲ ಪಾಠಶಾಲೆ !!

ಕುಂಬಾರ ಮತ್ತು ಶಿಲ್ಪಿ !!


ಒಂದು ದೊಡ್ಡ ಕಥೆ ಹೇಳ್ತೇನೆ ಕೇಳಿ.. !

ಒಬ್ಬ ಶಿಲ್ಪಿ , ಬೆಟ್ತದ ಮೇಲೆ ಹತ್ತಿ ಒಳ್ಲೆಯ ಕಲ್ಲನ್ನು ಕೆತ್ತುತ್ತಿದ್ದ. ಹಾಗೆ ಕೆತ್ತುವಾಗ ಸಣ್ಣ ಬಂಡೆಯ ತುಣುಕೊಂದು ಹಾರಿ, ಉರುಳಿ ಬೆಟ್ಟದಿಂದ ಕೆಳಗೆ ಬಿತ್ತು.

ಬೆಟ್ತದ ಕೆಳಗೆ ಒಬ್ಬ ಕುಂಬಾರ ಮಡಕೆ ಸುಡುತ್ತಿದ್ದ, ಸಣ್ಣ ಚೂರು ಕಲ್ಲು ಒಂದೆರಡು ಮಡಕೆಯನ್ನು ಪುಡಿ ಮಾಡಿತು, ಕೋಪಗೊಂಡ ಕುಂಬಾರ.

ಈಗ ಶಿಲ್ಪಿ ಬೆಟ್ತದ ಕೆಳಗೆ ಶಿಲ್ಪ ಕಡೆಯುತ್ತಿದ್ದಾನೆ. ಕುಂಬಾರ ಬೆಟ್ಟದ ಮೇಲೆ ಮಡಕೆ ಸುಡುತ್ತಿದ್ದಾನೆ .

ಬೆವರಿನ ಕಥೆ !


ಮಗ ಶಾಲೆಯಿಂದ ಬರುತ್ತಿದ್ದಾಗಲೇ ತೋಟದಲ್ಲಿ ಅಪ್ಪನನ್ನು ಕಂಡ. ಏನಪ್ಪಾ ಇನ್ನೂ ಕೆಲಸ ಇದೆಯಾ ಅಂದಾಗ " ಬೆವರು ಸುರಿಸಿದರೇ ಮಗನೆ, ನಾವು ತಿಂದುಂಡು ಸುಖವಾಗಿರಬಹುದು " ಅಂದ.

ರಾತ್ರಿ ಊಟ ಸೊಗಸಾಗಿತ್ತು. ಮಗ ಊಟ ಮಾಡುತ್ತಾ ಯೋಚಿಸತೊಡಗಿದ,. ಸಾರಿಗೆ ಅಮ್ಮನ ಬೆವರು ಬಿದ್ದಿರಬಹುದೇ ??

ಕೆಲಸ ಕಲಿತ ಅಪ್ಪ .

ಅಪ್ಪ ಕೂಲಿ ನಾಲಿ ಮಾಡಿ ಕಲಿಸಿದ ಮಗನಿಗೆ. ದಿನವಿಡೀ ದುಡಿದು ಕೊಡಿಸಿದ ಬೇಕಾದ್ದು.ಮಗ ಕಲಿತ, ಬಲಿತ. ಕಡೆಗೆ ಒಳ್ಳೆ ಕೆಲಸ ಹಿಡಿದ, ಪಟ್ಟಣ ಸೇರಿದ. ಭಡ್ತಿಯಾಯಿತು, ಪರದೇಶಕ್ಕೆ ಹೋಗಿ ಅಲ್ಲೇ ಉಳಿದ.

ಅಪ್ಪ ಈಗ ನಿಜವಾದ ದುಡಿಮೆ ಕಲಿತ. ತನಾಗಾಗಿ ದುಡಿಯ ತೊಡಗಿದ !

ಪ್ರೀತಿಯ ವ್ಯವಹಾರ

ಅವಳು ಗುಲಾಬಿ ಮಾರುವ ಹುಡುಗಿ , ಅಂಗಡಿಗೆ, ದೇವರಿಗೆ , ನಾಮಕರಣಕ್ಕೆ , ಸಂಸ್ಕಾರಕ್ಕೆ ಎಲ್ಲಾ ಹೂವು ಕೊಡುವ ಅವಳಲ್ಲಿ ಬೇರೆ ಭಾವ ಇಲ್ಲ ವ್ಯವಹಾರ ಮಾತ್ರ ! 


ಇತ್ತೀಚೆಗೆ ಒಬ್ಬನಿಗೆ ಪ್ರೀತಿಯಿಂದ ಗುಲಾಬಿ ಕೊಟ್ಟಳು. ಆದರೆ ಅವಳ ಪ್ರೀತಿ ಅವನ ವ್ಯವಹಾರ !.ಅವನು ಆ ಹೂವಿಗೆ ದುಡ್ಡು ಕೊಟ್ಟ...

ಬೀಡಿ ವಿಷಯ

ನಿಜವಾದ ಪಾಪದ ಮನುಷ್ಯ ಅಂವ.. ಆದರೂ ಕೆಟ್ಟ ಪ್ರಚಾರ ಸಿಕ್ಕಿತ್ತು. ಆದದ್ದು ಇದು.

ಅವನಿಗೆ ಯಾವುದೇ ಕೆಲಸ ಮಾಡೋ ಮೊದಲು ಬೀಡಿ ಸೇದಬೇಕು. ನೆರೆಮನೆಗೆ ಬೆಂಕಿ ಬಿದ್ದಿತ್ತು, ನಂದಿಸುವ ಮೊದಲು ಅದೇ ಬೆಂಕಿಯಿಂದ ಬೀಡಿ ಹೊತ್ತಿಸಿದ್ದಕ್ಕೆ ಜನರೆಲ್ಲಾ ಹೀಗೆ ಮಾತಾಡುತ್ತಿದ್ದಾರೆ.

ಕುರುಡನ ಕಥೆ !

ಆ ದಿನ ಹೊತ್ತು ಮೀರಿದ ದುಡಿಮೆ,ಫಾಕ್ಟರಿಯಿಂದ ಮನೆಗೆ ಬರುತ್ತಿದ್ದವಳು ನೆನೆಯುತ್ತಿದ್ದಳು ತನ್ನ ಸ್ಥಿತಿಯ ಬಗ್ಗೆ.ಅಪ್ಪ ಅಮ್ಮ, ನನ್ನ ಮದುವೆಗಾಗಿ ಒದ್ದಾಡುತ್ತಿರುವ ಅಣ್ಣ ..ಮಳೆ ಧೋ ಎಂದು ಸುರಿಯತೊಡಗಿತು, ಯಾವುದೋ ಪಾಳು ಬಿದ್ದ ಮನೆ ಸೇರಿಕೊಂಡಳು.


ಅಲ್ಲಿದ್ದ ಕುರುಡನಿಗೆ ಈಗ ಗೆಜ್ಜೆಯ ಸದ್ದು, ಹಿತವಾದ ಅನುಭವ.


ಆ ದಿನ ಭೂಮಿ ಮೊದಲ ಮಳೆಯನ್ನು ಸಂಪೂರ್ಣ ಒಪ್ಪಿತ್ತು. ತಣಿಯಿತು ಭೂಮಿ.!


ಕುರುಡನ ಮಕ್ಕಳು ಕುರುಡರಾಗಬೇಕಿಲ್ಲ !

ವಾಸ್ತವ ೨ !

ಟ್ರೀಂ ಟ್ರೀಂ .. ಹಳೆ ಸೈಕಲ್ಲಿನ ಮೇಲೆ ಕುದುರೆ ಸವಾರಿಯ ಪೋಸು ಕೊಡುತ್ತಿದ್ದ ಅವನ ಮೇಲೆ ಕನಿಕರವಿದ್ದ ದನಕರುಗಳೂ ಸೈಡು ಬಿಡಲಿಲ್ಲ. ಬೆಲ್ಲಿನೊಂದಿಗೆ ಬಾಯಲ್ಲಿ ಕಿರುಚಿದ. 
ಇವತ್ತೂ ಹಾಲು ಲೇಟಾದರೆ ನೀನು ತರುವುದೇ ಬೇಡ ಎಂದ ವಿನಾಯಕ ದರ್ಶಿನಿಯ ಓನರಿನ ಮೇಲೆ ಸಿಟ್ಟಲ್ಲಿ ದನ ಸಾಕುವವರಿಗೆಲ್ಲ ಶಾಪ ಹಾಕಿದ. 


ಅಂತೂ ಮುಂದೆ ಬಂದವನಿಗೆ ತಾನೂ ದನ ಸಾಕುವವನೇ ಎಂದು ಅರಿವಾಯಿತು.  

ಹಳ್ಳಿ ಕಥೆ !

ಹಳ್ಳಿ ಮನೆ , ಹಟ್ಟಿ ತುಂಬಾ ಅಂಬಾ ಕೂಗು..ಚಂದದ ದನ ಇತ್ತು . ಅಪ್ಪ ಅಮ್ಮ ಮಗ ಮತ್ತೆ ಒಂದು ದನ !

ಮಗ ಕಲಿತ, ಬೆಳೆದ ಕೆಲಸಕ್ಕೆ ಸೇರಿದ, ಎರಡು ಫ್ಲೋರಿನ ಮನೆ ಕಟ್ಟಿ ಕೂತ. 
ಮದುವೆಯ ವಯಸ್ಸು, ಮದುವೆಯಾದ.

ಈಗ ಅಪ್ಪ, ಅಮ್ಮ, ಮಗ ಮತ್ತೆ ವಂದನ !


ನಗಬೇಕು !

ಶ್ಮಶಾನ, ಅದೇ ದಿನ ಸುಟ್ಟ ದೇಹದಲ್ಲಿ ಬುರುಡೆ ಮಾತ್ರ ಎದ್ದು ಕಾಣುತ್ತಿತ್ತು.. ದೊಡ್ಡ ವ್ಯಕ್ತಿ ಆಗಿರಬೇಕು ! ಕಂಬನಿಯಿಂದ ನೆಲ ತೋಯ್ದಿತ್ತು.

ತುಟಿ ಇರಲಿಲ್ಲ, ಕಣ್ಣಿರಲಿಲ್ಲ, ರೆಪ್ಪೆ ಇರಲಿಲ್ಲ, ಮನಸು , ಮೆದುಳು ಏನೂ ಕಾಣುತ್ತಿರಲಿಲ್ಲ. ಆ ಬುರುಡೆಯ ಮೂಲಕ ನಗುವಿನ ಪ್ರತೀಕವೇನೋ ಎಂಬಂತೆ ಹಲ್ಲು ಮಾತ್ರ ಕಾಣುತ್ತಿತ್ತು .

ವಾಸ್ತವ !

ದಾರಿಯಲ್ಲಿ ಹೋಗುವಾಗ ಮೂಳೆಯೊಂದನ್ನು ಕಂಡ,  ಸಿಡಿಮಿಡಿಗೊಂಡ. ಯಾವುದರದ್ದು ? ದನದ್ದೇ ಎಂದು ತುಂಬ ನೊಂದುಕೊಂಡ.. ತನ್ನ ಕಣ್ಣೆದುರಿಗೆ ಹಾಕಿದವರಿಗೆ ಹಿಡಿಶಾಪ ಹಾಕಿದ.

ಹಿಂದಿನಿಂದ ಓಡಿಬಂದ ನಾಯಿ ಇನ್ನೇನು ಅವನನ್ನು ಕಚ್ಚಬೇಕು.. ಮೂಳೆ ಎಸೆದ ..! ನಾಯಿ ಮೂಳೆ ನೋಡಿ ಸುಮ್ಮನಾಯಿತು .

ಅವಳ ವ್ಯಥೆ !

ಅವಳು ಬಟ್ಟೆ ತೊಳೆಯುತ್ತಿದ್ದಳು , ಗಂಡನ ಶರ್ಟು , ತುಂಬಾ ಕೊಳೆ !! ಕಾಲರಿನ ಕೆಸರು ನೋಡಿ ಗಂಡನ ಶ್ರಮದ ಬಗ್ಗೆ ಹೆಮ್ಮೆ ಪಟ್ಟಳು . ನನಗೋಸ್ಕರ ಎಷ್ಟು ದುಡಿಮೆ ಗಂಡನದು ??

ಆದರೆ ಆ ದಿನ ಕಾಲರಿನ ಕೊಳೆ , ಕೈಯ ಕೊಳೆ ಹೋದರೂ ತಾನು ಬಳಸದ ಲಿಪ್ ಸ್ಟಿಕ್ ಕಲೆ ಹೋಗಿಲ್ಲ ಎನ್ನೋದೆ ಅವಳ ಕೊನೆ ಮಾತಾಗಿತ್ತು !!

ರಿಕ್ಷಾವಾಲನ ಕಥೆ.

ಸಮಾಜದಲ್ಲಿ ಎಲ್ಲರು ಮೇಲೆ ಬರಬೇಕು .ಸ್ವಂತ ಕಾಲ ಮೇಲೆ ನಿಲ್ಲಬೇಕು ಬೇರೆಯವರನ್ನ ತುಳಿಯೋದು ಒಳ್ಳೆಯದಲ್ಲ .. ತುಳಿದು ನಾವು ಗಳಿಸೋದು ಏನೂ ಇಲ್ಲ ಎಂದೆಲ್ಲ ಪ್ರವಚನ ಸಾಗಿತ್ತು .

...ಕೇಳಿದ ,

ಒಳ್ಳೇದು ಸ್ವಾಮೀ ನಾವು ತುಳಿಯದೆ ಇದ್ರೆ ನಮ್ ಜೀವನ ಸಾಗಲ್ಲ ಎಂದು ಸೈಕಲ್ ರಿಕ್ಷಾವಾಲ ತುಳಿಯುತ್ತಾ ಹೊರಟ ..

ಪರಿಸರ ಪ್ರೇಮಿ

ನಿಂತಲ್ಲಿ ಚಡಪಡಿಕೆ , ಕೂತಲ್ಲೂ .. ಹಾಗಾಗಿ ಅವನು ನಡೆಯಲು ತೊಡಗಿದ .. ಅಬ್ಬ ಎಲ್ಲಿ ನೋಡಿದರೂ ಸಿಮೆಂಟು ಕಟ್ಟಡ , ಆಫ್ಫೀಸು , ಮನೆ .. ಅಯ್ಯೋ ಎಂದು ಮರುಗಿದ .

ಬೇಸರದಿಂದ ಮುನ್ನಡೆದ ಅವನಿಗೆ ಮರಗಳು ಕಂಡವು , ಬಯಲು ಸಿಕ್ಕಿತು .. ಉಲ್ಲಾಸಗೊಂಡ ..

ಬೇಗನೆ ಹೋಗಿ ಮರದೆಡೆ ಮರೆಯಾದ . . ಮೂತ್ರದಾನ ಸಮಾಧಾನ !!

ಹೊಳೆ ಮತ್ತು ಮೀನು.

ಹೊಳೆಯಲ್ಲಿ ಮೀನು ಮೇಲ್ಮುಖವಾಗಿ ಈಜುತ್ತಿತ್ತು , ನೀರನ್ನು ಛೇಡಿಸುವ ಉದ್ದೇಶದಿಂದ ಹೇಳಿತು "ನೋಡು ನಾನು ಎರಡೂ ದಿಕ್ಕಿಗೆ ಹೋಗಬಲ್ಲೆ , ನೀನು ಕೆಳಮುಖವಾಗಿ ಮಾತ್ರ "...


ಅದೆ ದಿನ ಬೆಸ್ತನ ಮನೆಯಲ್ಲಿ ಒಳ್ಳೆ ಮೀನು ಸಾರು , ಮೀನು ಕೆಳಮುಖ ನೀರು ಮೇಲ್ಮುಖವಾಗಿ ಕುದಿಯುತ್ತಿತ್ತು..

ಕಥೆ ವ್ಯಥೆ !

"ನಾನು ಅವಳು ಬರೆದಿಟ್ಟ ಡೈರಿ ಓದಿದೆ , ಅವಳು ನಾನು ಬರೆದಿಟ್ಟ ಡೈರಿ ಓದಿದಳು .. ಪರಿಣಾಮ ಅವಳ ಮಾತು ನಾನು ಅಡಗಿಸಿದೆ , ಅವಳು ನನ್ನ ಮಾತುಗಳನ್ನೂ " 

ರೆಕ್ಕೆಯನ್ನು ಕಳೆದುಕೊಂಡ ಹಾರಲಾಗದ ಕೀಟ ನಡೆಯುವುದಿಲ್ಲ ಏಕೆ?

             ಅದ್ಭುತ ಅನ್ನೋ ವಿಷಯಗಳು ಕೆಲವು ಇರುತ್ತವೆ .. ಅಂದರೆ "ಇದು" ಆಗದೆ ಇದ್ದರೆ "ಅದು" ಅನ್ನುವ ನಮ್ಮ ಮನಸ್ಥಿತಿಯ ನಿರ್ಧಾರಗಳು ಸರಿಯಲ್ಲ ಎಂದು ಸ್ಥಾಪಿತವಾಗುವ ಸಮಯ ! ಯಾಕೆ ಈ ಮಾತು ಎಂದರೆ ಒಂದು ಉದಾಹರಣೆ ಕೊಡ್ತೇನೆ .. ಕೆಲವೊಮ್ಮೆ ಹೀಗೆ ಅನ್ನಿಸೋದುಂಟು .. ಬಸ್ ಸ್ಟ್ಯಾಂಡ್ ನಲ್ಲಿ ನಿಂತು, ತುಂಬಾ ಹೊತ್ತು ಕಾದ ಮೇಲೆ ೨ ಬಸ್ಸು ಬರೋದು .. ಕ್ಷಣದ ಯೋಚನೆ ಮಾಡಿ ಒಂದು ಬಸ್ಸಿಗೆ ಹತ್ತುವುದು .. ನಾವು ಹತ್ತಿದ ಬಸ್ಸನ್ನೇ ಇನ್ನೊಂದು ಓವರ್ ಟೇಕ್ ಮಾಡುವುದು !! ನಮ್ಮ ಮನಸ್ಸಿನ ಯೋಚನೆ ಏನಾಗಿರುತ್ತದೆ ಅಂದರೆ ಆ ಬಸ್ಸೇ ಹತ್ತಿಬಿಡಬಹುದಿತ್ತಲ್ಲ ಎಂದು ! ಇದರ ಬೆನ್ನಿಗೆ ಮತ್ತೊಂದು ಪ್ರಶ್ನೆ . ರೆಕ್ಕೆಯನ್ನು ಕಳೆದುಕೊಂಡ ಹಾರಲಾಗದ ಕೀಟ ನಡೆಯುವುದಿಲ್ಲ ಏಕೆ?