Saturday 11 February 2012

ಇಬ್ಬಂದಿ - ಭಾಗ ೨


ಭಾಗ ೨.

ಯಾರು ಹಿತವರು  ನಿನಗೆ   ಈ ಮೊವರೊಳಗೆ
ನಾರಿಯೋ ? ಧಾರುಣಿಯೋ ? ಬಲುಘನದ ಸಿರಿಯೋ

ಅನ್ಯರಲಿ  ಜನಿಸಿದ್ದ ಅಂಗನೆಯ  ಕರ ತಂದು
ತನ್ನ ಮನೆಗವಳ  ಯಜಮಾನಿಯೆನಿಸಿ
ಭಿನ್ನವಿಲ್ಲದಲರ್ಧ ದೇಹವೆನಿಸುವ  ಸತಿಯು
ಕಣ್ಣಿನಲಿ  ನೋಡಲಂಜುವಳು   ಕಾಲವಶದೀ..

ಡಬ್ಬಾ ಮೊಬೈಲು. ಈ ಕಾಲದ ಹಾಡುಗಳ ಮಧ್ಯೆ ಕೆಲವು ಇಂತಹದ್ದು ಕೂಡಾ ಸೇರಿಹೋಗಿದೆ. ಕಳೆದ ಸುಮಾರು ದಿನಗಳಿಂದ ಹೀಗೇಕೆ ಆಗುತ್ತಿದೆ ? ಅಪ್ಪ ಅಮ್ಮ ಇಬ್ಬರ ಅಸ್ತಿತ್ವದ ಬಗ್ಗೆ ಇದುವರೆಗೆ ಯೋಚಿಸಿರಲಿಲ್ಲ. ಇದೀಗ ಅಪ್ಪ ಅಮ್ಮ ಎನ್ನುವ ವಿಚಾರ ತುಂಬಾ ತಲೆಕೆಡಿಸಿಕೊಳ್ಳುತ್ತಿದೆ. ಇಲ್ಲೂ ದ್ವಂದ್ವವೇ .

ಸರೀ ಎರಡು ವರ್ಷಗಳಾಯಿತು ಇವತ್ತಿಗೆ ಈ ಆಫೀಸಿನ ಬಾಗಿಲಿಗೆ ಬಂದು. ಕೆಲಸ ಏನು ಎನ್ನುವುದು ನನಗೂ ಅಗತ್ಯ ಇಲ್ಲ, ನನ್ನ ಮ್ಯಾನೇಜರ್ ಮಹಾಶಯನಿಗೂ ಬೇಡ, ಅಂತೂ ಒಳ್ಳೆಯ ಸಂಬಳ, ಜೊತೆಗಾರರು, ಕೆಲಸವೇ ಇಲ್ಲದ ಪೊಸಿಷನ್ ! ಲಾಟರಿ . ಮತ್ತೇನು ಮಾಡುವುದು ? ಹಣವೇನೋ ನದಿ ನೀರಿನಂತೆ ಇರುವಾಗ ನನ್ನ ಆಸೆಯ ಒಂದು ಬಕೀಟು ನೀರು ಮುಗಿಯುವುದೇ ಕಷ್ಟವಿತ್ತು.

ಹೆಚ್ಚಾಗಿ ಕಥೆಯ ಆರಂಭ ಎಲ್ಲಿಯದು ಎನ್ನುವುದರ ಒಳಗೆ ನಡೆದು ಹೋಗುವ ಸಂಗತಿಗಳನ್ನು ಹೇಳಲಾಗುವುದಿಲ್ಲ. ಆ ಕಲಾಕ್ಷೇತ್ರದ ಸಂಗೀತದಲ್ಲೂ ಹಾಗೆಯೇ ! ತ್ಯಾಗರಾಜರ ಕೀರ್ತನೆಗಳನ್ನು ಸುಗಮ ಸಂಗೀತದಂತೆ ಹಾಡಿದ ಆ ಹುಡುಗಿ. ಬೇಡವಿತ್ತು. ಹಠಮಾರಿ ಹೆಣ್ಣಾದರೂ ಸೆಳೆಯುವ ಗುಣ ಹುಟ್ಟಿನಿಂದಲೇ ಬಂದಿರಬೇಕು ಎಂದೆನಿಸುತ್ತದೆ. ಸುಮ್ಮನೆ ಚೆನ್ನಾಗಿತ್ತು ಅಂತ ಹೇಳಿ ಅವಳ ಅಭಿಮಾನಕ್ಕೆ ನಾನು ಪಾತ್ರನಾಗುವುದೇನಕ್ಕೆ ಎಂದೆನಿಸಿತಾದರೂ ಅವಳನ್ನು ಮಾತನಾಡಿಸದೆ ಹೋಗುವುದು ಕಷ್ಟವಿತ್ತು. ಸ್ವಲ್ಪ ಹೆದರಿಕೆ ಇತ್ತು ,ಆದರೂ ನಾನೇನು ಪ್ರಪೋಸ್ ಮಾಡುವವನಲ್ಲವಲ್ಲ!

ಸಂಗೀತಕ್ಕೆ ಸೀರೆ, ಈಗ ಜೀನ್ಸು ತೊಟ್ಟು ಹೊರಗೆ ಬಂದಾಗ ಒಮ್ಮೆಗೇ ಪಿಚ್ಚೆನಿಸಿತು. ನಾನೂ ರೀಬಾಕ್ ಶೂ ಧರಿಸಿಯೇ ಸಂಗೀತ ಕೇಳಿದವನೆಂದು ಸ್ವಲ್ಪ ಸಮಾಧಾನ. ಚೆನ್ನಾಗಿತ್ತು ಹಾಡು ಎಂದೆ. ಸೋ ವಾಟ್ ಎಂದಳವಳು. ಅಂಹಕಾರವೇನೋ ಅದು , ಅಲ್ಲ ಎಂದೆನಿಸಿದ ಪ್ರಾಯವದು. ಒಂದು ಮಾತಿಗೆ ಬಳಲಿದ ನಾನು ಪುನಃ ಅವಳನ್ನು ಭೇಟಿಯಾದದ್ದು ನನ್ನ ಆಫೀಸಿನಲ್ಲೇ .

ಪ್ರತಿಯೊಂದಕ್ಕೂ ತಾಳೆ ಹಾಕಿ ನೋಡುವ ಅವಳ ಗುಣ ಅಷ್ಟಾಗಿ ಹಿಡಿಸದಿದ್ದರೂ ಇತ್ತೀಚೆಗೆ ಅವಳು ನನ್ನ ಕಡೆ ವಾಲುವ ಹಾಗೆ ತೋರುತ್ತಿದ್ದುದರಿಂದ ಸಹಿಸಿಕೊಳ್ಳುತ್ತಿದ್ದೆ. ಸರಿ ಒಂದು ತಿಂಗಳ ಹಿಂದೆ ಅವಳೇ ಎರೇಂಜ್ ಮಾಡಿದ ಟ್ರಿಪ್ಪಿಗೆ ಹೋಗುವಾಗಲೂ ಅಷ್ಟೆ, ಅವಳ ಜೊತೆಗೇ ಇದ್ದೆ. ತುಂಬಾ ಮಾತಾಡುತ್ತಾಳೆ. ಎಲ್ಲಿ ಅನ್ ರೊಮ್ಯಾಂಟಿಕ್ ಅನ್ನುತ್ತಾಳೋ ಎನ್ನುವ ಭಯದಲ್ಲಿ ನಾನು ಉದ್ದೇಶವಿಲ್ಲದೇ ಹೇಳುವ ಮಾತುಗಳಿಗೂ ಅವಳು ನಗುತ್ತಿದ್ದ ರೀತಿಗೇ ಸೋತದ್ದು ನಾನು .!

ಪ್ರೇಮದ ಪ್ರೀತಿಯ ಬಗ್ಗೆ ಎಲ್ಲಾ ನಿರ್ದಿಷ್ಟ , ಇದೇ ಅದು ಅನ್ನುವ ಅರ್ಥ ನನಗಿಲ್ಲ. ತುಟಿಗೆ ತುಟಿ ಮೈಗೆ ಮೈ ಕೂಡ ಪ್ರೇಮವೇ ನನ್ನ ಮಟ್ಟಿಗೆ. ಅವಳೂ ಹಾಗೆಯೇ.ಕಾಮದ ಹೊಳಹಲ್ಲಿ ಮಾತ್ರ ನನ್ನನ್ನು ಅವಳು ಗೆಲ್ಲಬಲ್ಲಳು ಎನ್ನುವ ವಿಲಕ್ಷಣವಾದ ಭಾವವೇ ನಾನು ಸೋಲೊಪ್ಪಿದ್ದು.  ಇಂತಹದ್ದೇ ಹೊಂದಾಣಿಕೆಗಳಿಂದ ನಾವು ಅಪ್ಪ ಅಮ್ಮನೂ ಆಗಿಬಿಡುತ್ತಿದ್ದೆವೇನೋ ?. ಇದೆಲ್ಲಾ ಅವಳನ್ನು ಹಚ್ಚಿಕೊಳ್ಳುವುದಕ್ಕೆ ಇದ್ದ ಮಾರ್ಗಗಳು ಖಂಡಿತ ಆಗಿರಲಿಲ್ಲ. ಮೊದಲು ಅವಳನ್ನು ಸೋಲಿಸುವ ನೆಪ ಮಾತ್ರ, ಈಗ ಅವಳಲ್ಲೇ ನಾನು ಸೋತದ್ದು ನನ್ನ ಗೆಲುವು ಎನ್ನುವಷ್ಟರ ಮಟ್ಟಿಗೆ ನನ್ನಲ್ಲಿದೆ.

ಅಪ್ಪನ ಭೇಟಿಯೂ ಅಗತ್ಯ ಇರಲಿಲ್ಲ ನಮಗೆ. ನನ್ನ ಮಾತಿಗೆ ಎದುರು ಮಾತನಾಡುವವರಲ್ಲ ನನ್ನ ಅಪ್ಪ. ಅಮ್ಮನಂತೂ ಅಪ್ಪನಿಂದ ಸಾಧು. ಆದರೂ ಇವಳು ಪರಿಚಯವಾಗಲಿ ಎಂದು ಮನೆಗೆ ಕರೆದುಕೊಂಡು ಹೋದದ್ದು. ಅಪ್ಪನಲ್ಲಿ ಮಾತನಾಡಿದ್ದಾಳೆ ಎಂದು ಅಪ್ಪನಿಂದಲೇ ತಿಳಿದದ್ದು. ಮಗನೇ ನಿನ್ನ ಇಷ್ಟ ಎಂದಾಗ ಸ್ವಲ್ಪ ಖೇದವಾಯಿತು. ಹಳೆಯ ಸಂಪ್ರದಾಯಗಳನ್ನು ಮೀರಿ ನಡೆದದ್ದು ತಪ್ಪೇ ಸರಿಯೇ ಅರ್ಥವಾಗಲಿಲ್ಲ.ಅಪ್ಪನಿಗೆ ಗೊತ್ತಿಲ್ಲದಂತೆ ಸಿಗರೇಟು ಎಳೆಯುವುದು, ವೀಕೆಂಡ್ ಪಾರ್ಟಿಗಳಲ್ಲಿ ತಿರುಗಾಡುವುದು ಕುಡಿಯುವುದು ಎಲ್ಲಾ ಈಗ ಸಾರ್ವಕಾಲಿಕವಾಗಿದೆ. ಪ್ರತಿಯೊಬ್ಬರೂ ಸುಳ್ಳು ಹೇಳುತ್ತಾರೆ ಮತ್ತು ಎಲ್ಲಾ ಅಪ್ಪಂದಿರಿಗೆ ಗೊತ್ತಿರುವ ಸತ್ಯವೇ ಆಗಿರಬೇಕು ! ಈ ವಿಷಯದಲ್ಲಿ ಅಪ್ಪ ಚರ್ಚೆ ಮಾಡದೇ ಇದ್ದುದಕ್ಕೆ ಕಾರಣವೂ ಗೊತ್ತಿಲ್ಲ.

ನಿನ್ನೆ ಕೂಡಾ ಅವಳು ಹೀಗೆಯೇ ಹೇಳಿದ್ದಳು. ಅವಳ ಮನೆಯಲ್ಲಿ ಮದುವೆಗೆ ನಿರ್ಬಂಧವಿದೆ. ತುಂಬಾ ಕಲಿತ ವರ್ಗ ಅವರದ್ದು. ಅವಳ ಅಪ್ಪ ಅಮ್ಮನನ್ನು ಕೂಡಾ ಭೇಟಿಯಾಗಿದ್ದೇನೆ. ನನ್ನ ಅಪ್ಪ ಅಮ್ಮನಂತೆಯೇ ಅವಳನ್ನು ಪ್ರತಿನಿಧಿಸುತ್ತಾರೆ ಎಂದೆನಿಸಿತು. ಬೇಗ ಮದುವೆಯಾಗುವುದಕ್ಕೆ ನನ್ನದೇನೂ ಅಭ್ಯಂತರವಿಲ್ಲ, ಆದರೆ ಅವಳ ನಿರ್ಧಾರ ಸರಿ ಎನ್ನಿಸುವುದಿಲ್ಲ.

ಪ್ರತಿಯೊಂದು ಬೀಜವೂ ಹಕ್ಕಿಯೂ ತನ್ನ ಮರದಲ್ಲೇ ಅಥವಾ ಗೂಡಲ್ಲೇ ಇರುವುದಿಲ್ಲ. ಮನುಷ್ಯನಾದವನು ತಾನು ಇನ್ನೊಂದು ಜೋಡಿಗೆ ಅಂಟಿಕೊಂಡು, ಜೊತೆಗಿದ್ದುಕೊಂಡು ಬಾಳುವುದು ಅವಳ ಕಣ್ಣಿಗೆ ವಿಪರೀತವಾಗಿದೆ. ಈಗೀಗ ನನಗೂ. ನಾನೀಗ ಹಿಂದಿನಿಂದ ಬಂದ ಆಚಾರ ಅಥವಾ ವ್ಯವಸ್ಥೆಗೆ ವಿಮುಖತೆಯನ್ನ ಹೇಗೆ ವ್ಯಕ್ತ ಪಡಿಸಲಿ? ಇಡೀ ಸಂಬಂಧಗಳನ್ನು ಕಳಚಿ ಹೋಗಬೇಕೆನ್ನುವ ಅವಳ ಮಾತು ಅತಾರ್ಕಿಕವಾಗಿ ಕಂಡರೂ ಅದರಲ್ಲೇನೋ ಇದೆ ಎನ್ನುವುದು ಸ್ಪಷ್ಟ. ಸಾಕುವ ಹೊಣೆಗಾಗಿ ಈ ಮಾತನ್ನವಳು ಖಂಡಿತಾ ಆಡಲಿಲ್ಲ ಎಂದೆನಿಸುತ್ತದೆ.

ಇವತ್ತು ಖಂಡಿತಾ ಅವಳಲ್ಲಿ ಈ ಮಾತಿನ ಬಗ್ಗೆ ಕೇಳಬೇಕು. ಇದೆಲ್ಲಾ ಒಂದು ಬಗೆಯ ಸೋಲೇ ಆಗಿರಬೇಕು. ನಿರ್ದಿಷ್ಟವಾದ ಒಂದು ನಕಾಶೆ ಇಲ್ಲದೆ ಜೀವನವನ್ನು ರೂಪಿಸುವುದು ಹೇಗೆ? ಬರೀ ಲೈಂಗಿಕತೆಯ ನೋಟದಿಂದ ಅವಳನ್ನು ಸೇರಿದ್ದೆನೇ ? ಒಂದು ವೇಳೆ ಆ ಭಾವಸ್ರಾವ ಕಡಿಮೆಯಾದಾಗ ಅವಳಲ್ಲಿ ನನ್ನ ಮೋಹ ತೀರಬಹುದೇ ? ಪುನಃ ಏನೋ ಬೇಕು ಎನ್ನುವ ಅಭಿಲಾಷೆಗೆ ಮಿತಿ ?

ಅವಳಲ್ಲಿ ಕೇಳುವ ಮೊದಲು ಅಪ್ಪನಲ್ಲಿ ಮನಬಿಚ್ಚಿ ಮಾತನಾಡಬೇಕು...

Wednesday 8 February 2012

ಕಥೆ-ಇಬ್ಬಂದಿ



ಬೆಂಕಿಯೇರಿದಂತೆನಿಸಿ ಚುಮುಚುಮು ಚಳಿಯ ಕನಸು ಬಿಟ್ಟು ಎದ್ದಿದ್ದಾಯಿತು. ಎಲ್ಲಾ ಹೊಸದಾಗಿರುತ್ತದೆ ಎಂದು ದಿನಾ ಅಂದುಕೊಳ್ಳುವುದು ತಪ್ಪೇ? ಅಲ್ಲ, ಏನೂ ಬದಲಾಗುವುದಿಲ್ಲ ಎನ್ನುವ ವಾಸ್ತವ ನಿತ್ಯವೇ? ನನ್ನ ವಿಷಯ ಕೂಡಾ ಒಂದು ರೀತಿ ತಿರುವನ್ನು ಪಡೆದುಕೊಳ್ಳಬಹುದು ಎನ್ನುವ ಯೋಚನೆಯೇ ಎಷ್ಟು ಮುದ ಕೊಡುತ್ತದೆ?

ಹಗುರಾಗುತ್ತಾ ಇದ್ದೇನೆ ಎಂದುಕೊಳ್ಳುವ ಹೊತ್ತಿಗೆ ಕಾಡುತ್ತಾರೆ ನನ್ನನ್ನು ಜೊತೆಗೂಡಿ ಕೊಂಡಿರುವ ನನ್ನ ಮಂದಿ. ವ್ಯರ್ಥ , ಬೇಡ ಎನ್ನುವಂತೆ ಆದರೂ ಏಕೆ ಅವರನ್ನು ಹಚ್ಚಿಕೊಳ್ಳುತ್ತೇನೆ. ಎರಡು ಭಾವಗಳಿಗೆ, ಎರಡು ಬದಲಾವಣೆಗೆ ನಾನೇ ನೇರ ಹೊಣೆಯೇ?

ಒಬ್ಬಂಟಿತನ ಅಂದರೆ ನನ್ನ ಜೊತೆಗೆ ಯಾರೂ ಇಲ್ಲ ಅಂದುಕೊಳ್ಳುವದಲ್ಲ. ನನ್ನೊಳಗೆ ಯಾರನ್ನೂ ತಂದುಕೊಳ್ಳದಿರುವುದಾಗಿರಬೇಕು. ಅಥವಾ ಎಲ್ಲರೊಂದಿಗಿದ್ದರೂ ಬೇಕಾದವರ ಜೊತೆಗೆ ಇಲ್ಲದಿರುವುದು ! ತಾಕಲಾಟಗಳು ಹೆಚ್ಚಾಗಿದೆ..

೧.
ಇದೆಲ್ಲಾ ಮುಗಿದು ತುಂಬಾ ದಿನ ಆಗಿಲ್ಲ. ನಿನ್ನೆ ಮಗನ ಜೊತೆ ಬಂದಿದ್ದ ಹುಡುಗಿ ಹೇಳಿದ ಮಾತುಗಳು ಇನ್ನೂ ಮೆದುಳಲ್ಲೇ ತಿರುಗಾಡುತ್ತಿದೆ ಎಂದೆನಿಸಿತು. ಹಾಗೆ ಅವಳಂದಿಲ್ಲವಾದಲ್ಲಿ ಈ ಇರುವಿಕೆಗೆ ಅರ್ಥವನ್ನು ಕಲ್ಪಿಸಿಕೊಂಡು ಏನೇನೋ ಯೋಚನೆ ಮಾಡುವ ಅಗತ್ಯವಿರಲಿಲ್ಲ. ಥತ್ ಅವಳ ಹೆಸರೇನು ಎನ್ನುವುದನ್ನೂ ಮರೆತ ಮೆದುಳಿಗೆ ವಿಷಯದ ಜಿಜ್ಞಾಸೆ ಏತಕ್ಕೆ ?

ತೂಗುಹಾಕಿದ ಫೊಟೋದಲ್ಲಿರುವ ಸ್ವಲ್ಪ ಎಣ್ಣೆಕಪ್ಪಿನ ಮಗ, ಈಗ ಬೆಳೆದು ಬಿಳುಚಿದ್ದಾನೆ. ಏಸಿ ರೂಮು, ಕೈತುಂಬಾ ಸಂಬಳ, ಬಿಸಿಲನ್ನು ನೋಡದ ಮುಖ ! ಕಲ್ಲನ್ನು ನೋಡದ ಕಾಲು. ಮಗನಿಂದ ನಾನೇ ಸ್ವಲ್ಪ ಚಂದ ಅನ್ನಿಸಿದರೂ , ಹಾಗಂದುಕೊಂಡು ಏನು ಮಾಡುವುದು. ಅವನಮ್ಮ ಕೂಡ ಹಾಗೆಯೇ ತಾನೆ !
ಆ ಕೋಲುಮುಖದ ಮಗನಿಗೆ ಸರಿಯಾದ ಜೋಡಿಯನ್ನು ಹುಡುಕುವುದು ಅಸಾಧ್ಯವೇ ಅಲ್ಲವಾಗಿತ್ತು. ಆದರೆ ಮಗನದ್ದೇ ಒತ್ತಾಯ , ತಾನೇ ಹುಡುಗಿಯನ್ನು ನೋಡಿ ಇಷ್ಟಪಟ್ಟ  ಮೇಲೆ ಮದುವೆಯಾಗುತ್ತಾನಂತೆ.

ಅದಕ್ಕೇ ನಿನ್ನೆ ಆ ಹುಡುಗಿಯ ಪರಿಚಯ ಮಾಡಿಸಿದ. ಅವನಿಗಿಷ್ಟವಂತೆ ಅವಳು. ಅವಳಿನ್ನೂ ಮದುವೆಯ ಬಗ್ಗೆ ಯೋಚಿಸಿಲ್ಲವಂತೆ. ಕಾಮವನ್ನು ಮುಕ್ತಗೊಳಿಸಿದ್ದಾರೆ ಈ ತಲೆಮಾರಿನವರು ! . ಸಿಗರೇಟಿನ ಕಿಚ್ಚಿನ ತುಟಿ ಅವಳದ್ದು. ಸ್ಪಷ್ಟ ಮಾತು.. ನಾನೂ ಒಮ್ಮೆ ನನ್ನವಳಿಗೆ ಕೇಳಿಸೀತೇನೋ ಅಂತ ಹೆದರಿ ಮಾತಾಡಿದರೆ, ಅವಳು ಸಂಕೋಚವಿಲ್ಲದೇ ಮಾತಾಡುವ ಕಲೆ ಹೇಗೆ ಬೆಳಸಿಕೊಂಡಳು ಎಂದೇ ಯೋಚಿಸುತ್ತಿದ್ದೆ.

ನೇರವಾದ ಮಾತು ಕೆಲವೊಮ್ಮೆ ಘಾಸಿ ಮಾಡುತ್ತದೆ. ಅನುಭವವೂ ಇದೆ. ಆದರೆ ಇಂತಹ ಘಾಸಿ ?ಆ ಬೆವರು ಸುರಿಸಿಕೊಂದು ಕೆಲಸಕ್ಕಾಗಿ ಅಲೆದ ನನಗಿಂತ , ನನ್ನ ಮಗ ಗ್ರೇಟ್ ಅನ್ನಿಸಿಕೊಳ್ಳುವುದೇ .. ಅಲ್ಲ, ನನ್ನ ಅಪ್ಪನಿಂದ ನಾನು ಒಳ್ಳೆಯ ಅಪ್ಪನೆಂದೆನಿಸಿಕೊಳ್ಳುವುದೇ ? ಅರ್ಥವಾಗುತ್ತಿಲ್ಲ.

ಹಳ್ಳಿಯ ಮನೆ, ಆ ಕಾಲಕ್ಕೆ ತುಂಬಾ ಬೆಳೆದ ಹಳ್ಳಿಯದು, ನೀರು ಗಾಳಿ ಮಣ್ಣು ಎಲ್ಲಾ ಪರಿಶುದ್ದವಾಗಿದ್ದುದಕ್ಕೇ ನನ್ನಪ್ಪನಂತಹ ಮಹಾನುಭಾವ ಚೆನ್ನಾಗಿ ಬದುಕಿದ್ದ. ತಾಯಿ ತಂದೆ ನಾನು ಮತ್ತೊಬ್ಬ ತಮ್ಮ ಇಷ್ಟು ಜನರ ಮಧ್ಯೆ ಈಗಲೂ ನೆನಪಿಗೆ ಬರುವವರು ಅಪ್ಪ. ಅಮ್ಮ ಆ ಊರಿನವರ ಲೆಕ್ಕಕ್ಕೆ ನನ್ನ ಅಪ್ಪನಿಗೆ ಜೋಡಿಯೇ ಅಲ್ಲ. ತುಂಬಾ ಸುಂದರ ಮೈಕಟ್ಟು ಅಲ್ಲದಿದ್ದರೂ ಶಮ್ಮೀಕಪೂರನನ್ನು ಹೋಲುತಿದ್ದ ಅಪ್ಪನ ಫೋಟೋ ಅಮ್ಮನಿಗೆ ಅಷ್ಟು ಸರಿಯಾದ ಜೋಡಿಯಲ್ಲವೆಂದು ನನಗೂ ಅನ್ನಿಸಿತ್ತು. ಮದುವೆಯಾಗುವ ಕಾಲಕ್ಕೆ ಅಪ್ಪನಿಗೆ ಹಾಗನ್ನಿಸಿರಲೂ ಬಹುದು. ಅಜ್ಜನ ಕಾರುಬಾರು !

ಅಪ್ಪ ಎಲ್ಲಿಯೂ ಏನನ್ನೂ ಬಿಟ್ಟುಕೊಡಲಿಲ್ಲ. ಇರುವಷ್ಟು ಅಡಕೆ, ತೆಂಗಿನಕಾಯಿಯನ್ನು ಸಂಪಾದನೆಗೆ ಮಾರ್ಗ ಮಾಡಿಕೊಂಡು, ನನ್ನನ್ನೂ ತಮ್ಮನನ್ನೂ ಓದಿಸಿ ಸೈ ಅನಿಸಿಕೊಂಡವರು. ನಮ್ಮಿಬ್ಬರನ್ನು ಓದಿಸಲೂ ಕಷ್ಟ ಪಡಲಿಲ್ಲ. ಇದ್ದ ಒಂದು ಎಕರೆಯನ್ನು ನಾನು ನನ್ನ ತಮ್ಮನಿಗೇ ಕೊಟ್ಟಾಗ, ಓದಿದ್ದು ಹೆಚ್ಚಾಯಿತು ಎಂದನ್ನಿಸಿದ್ದುಂಟು.ಆಗಿನ ನನ್ನ ವಿದ್ಯಾಭ್ಯಾಸದಲ್ಲಿ ಮತ್ತೆ ಕಲಿತ ಕಂಪ್ಯೂಟರಿನ ಕೊಡುಗೆಯೇ ಏನೋ ಪಟ್ಟಣಕ್ಕೆ ನನ್ನನ್ನ ಸೇರಿಸಿತು.

ಊರಿನವರಿಂದಲೂ ಅಪ್ಪನ ಬಗ್ಗೆ ಒಂದೇ ಒಂದು ತಕರಾರಿಲ್ಲ. ಊರಿನ ಆ ಕಾಲದ ನನ್ನಪ್ಪನ ಸಮಕಾಲೀನ ಜನರೆಲ್ಲಾ ಸ್ವಲ್ಪ ಮೋಜು ಮಸ್ತಿ ಮಾಡಿದವರೇ ಆದರೂ ಅಪ್ಪನ ನಿಲುಮೆಯಲ್ಲಿದ್ದ ಬದ್ದತೆ ನನಗೇ ಆಶ್ಚರ್ಯ. ಯಾವ ದಿಕ್ಕಿನಿಂದಲೂ ತೋಟದ ಮನೆಗೆ ಹೋಗುವಂತೆ ಪ್ರೇರೇಪಿಸದ ಅವರ ಮನಃಸ್ಥಿತಿ ಏನಾಗಿರಬಹುದು ? ಅಷ್ಟಾಗಿ ದೇವರು ದೈವ ಎಂದೆಲ್ಲಾ ತಲೆಕೆಡಿಸಿಕೊಳ್ಳದ ಅವರ ಈ ಸ್ಥೈರ್ಯ ಒಂದೇ ನನ್ನನ್ನು ಇನ್ನೂ ಕುತೂಹಲಿಯಾಗಿಸಿದೆ.

ಅಪ್ಪನ ವಯಸ್ಕಳೇ ಆದ ಅವಳು ಈಗಲೂ ಪ್ರಾಯದಲ್ಲಿದ್ದಂತೆಯೇ ಇದ್ದಾಳಂತೆ. ನನ್ನ ಮೀಸೆ ಮೂಡುವ ಕಾಲಕ್ಕೆ ಅವಳಿಗೆ ೩೦-೩೫ ವಯಸ್ಸಿರಬೇಕು. ಅವಳನ್ನು ಕರೆದು ಮಾತನಾಡಿಸುವ ಧೈರ್ಯ ಮಾಡಿದ್ದೆ. ಏನೋ ತೋಟದ ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಅವಳು, ಬರುವ ಸಮಯವನ್ನೇ ಕಾದು ಮಾತಾಡಿಸಿದ್ದೆ. ದೇಹಸುಖದ ಕಲ್ಪನೆಯಿಲ್ಲದಿದ್ದರೂ ಶಾಲೆಯಲ್ಲಿ ಸಹಪಾಠಿಗಳಿಂದ ಕೇಳಿ ಕಲಿದ ಶಬ್ಧ, ಅರ್ಥಗಳನ್ನು ಕಲ್ಪಿಸಿ ಅವಳನ್ನು ಮಾತಾಡಿಸುವ ಭಂಡ ಧೈರ್ಯ ಹೇಗೆ ಬಂತೋ. ಇತರ ಹುಡುಗರ ಮಾತುಗಳೂ ಅಂತೆಯೇ ಇತ್ತು, ಅವಳು ಯಾರಿಗೂ ಸಿಗುತ್ತಾಳೆ ಎನ್ನುವ ಕಲ್ಪನೆಯಲ್ಲೇ ಕೇಳುವ ಪ್ರಯತ್ನ ಮಾಡಿದೆ.

ಕೆಕ್ಕರಿಸಿಕೊಂಡೇನೂ ನೋಡಲಿಲ್ಲ ಅವಳು.  ಸಲುಗೆಯಿತ್ತೇ ಇರಲಿಲ್ಲವೇ ಗೊತ್ತಿಲ್ಲ,. ಏನೋ ? ಎಂದಳು. ಅದು ಅದು ಎಂದು ತೊದಲುತ್ತಾ. ನೀವು ತುಂಬಾ ಚಂದ ಇದ್ದೀರಿ ಎಂದೆ. ಅಷ್ಟರಲ್ಲೇ ಭಾವ ಅರ್ಥ ಮಾಡಿಕೊಂಡಂತೆ " ಈ ಸಂಜೆ ಹೊತ್ತಲ್ಲಿ ಇಲ್ಲೆಲ್ಲಾ ತಿರುಗಾಡುವುದು , ಹೀಗೆಲ್ಲಾ ಹೇಳುವುದು ಸರಿಯಲ್ಲ, ಹೋಗು ಮನೆಗೆ , ಅಪ್ಪನಲ್ಲಿ ಹೇಳುವುದಿಲ್ಲ ಬಿಡು"ಎಂದದ್ದು ಇನ್ನೂ ನೆನಪಿದೆ . ಸೋತ ಭಾವದಲ್ಲೇ ಮನೆಗೆ ಬಂದ ನನಗೆ ಆ ದಿನದಿಂದ ಅವಳು ತುಂಬಾ ಕಾಡತೊಡಗಿದಳು.

ಹತ್ತನೇ ಮುಗಿಸಿ ಪಟ್ಟಣ ಸೇರಿದ ನನಗೆ ಎರಡು ಕಂಪೆನಿಗಳಲ್ಲಿ ಕೆಲಸ ಸಿಕ್ಕಿದ್ದು ನನ್ನ ಪುಣ್ಯ. ಬೆಳಗ್ಗೆ ೭ ಘಂಟೆಯಿಂದ ಮಧ್ಯಾಹ್ನ ೫ ಘಂಟೆಯವರೆಗೆ ದುಡಿದು,ಇನ್ನೊಂದು ಕಡೆ ೪ ಘಂಟೆಗಳ ಕೆಲಸ ಮಾಡುತ್ತಿದ್ದೆ.. ಅದೇನೋ ಮೊದಲ ವರ್ಷ ಮನೆಗೇ ಹೋಗಲಾಗಲಿಲ್ಲ. ಬರೀ ಕೆಲಸದಲ್ಲಿ ಮುಳುಗಿದ್ದ ನನಗೆ ಅಮ್ಮನಿಗೆ ಜ್ವರ ಬಂದ ಮೇಲೆ ಮನೆಗೆ ಹೋಗುವಂತಾಯಿತು. ಒಳ್ಳೆ ಸಂಪಾದನೆಯಿದ್ದ ನಾನು ಊರಿಗೆ ಹೋಗುತ್ತಿರುವಾಗ ಮೊದಲ ಚಿತ್ರದಲ್ಲೇ ಕಂಡ ಅವಳು.

ಅಮ್ಮನ ಜ್ವರ ಸ್ವಲ್ಪ ಹದಕ್ಕೆ ಬಂದಿದ್ದರಿಂದ ಮೂರನೇ ದಿನ ಮನೆಯಿಂದ ಹೊರಗೆ ಹೊರಟೆ. ತೋಟಕ್ಕೆ ಒಂದು ಸುತ್ತು ಬಂದು ದಾರಿಯಲ್ಲಿ ಒಬ್ಬನೇ ನಿಂತಿರಬೇಕಾದರೆ ಅವಳನ್ನು ನೋಡಿ ಏನೋ ಅವ್ಯಕ್ತ ಖುಷಿ. ಆದರೆ ಜೊತೆಯಲ್ಲೇ ಇದ್ದ ಅಪ್ಪನಿಂದ ಕಸಿವಿಸಿ. ನೋಡಿ ನಕ್ಕವಳು ಮುಂದೆ ಸರಿದಾಗ ವಿಚಿತ್ರ ಕಲ್ಪನೆಗಳು.

ಮರುದಿನವೂ ಅಂತೆಯೇ, ಅವಳಲ್ಲಿ ಮಾತನಾಡಬೇಕು ಎಂದೆನಿಸಿತು. ಅಪ್ಪನಿರದಿದ್ದ ಸಮಯದಲ್ಲಿ ಮಾತನಾಡಿದೆ. ಈಗ ನಾನೂ ದೊಡ್ಡವನಾಗಿದ್ದೇನೆ ಅಂದೆ. ಈ ಮನಸ್ಸನ್ನು ಹೇಗೆ ಅರ್ಥ ಮಾಡಿಕೊಳ್ಳುವ ಕಲೆ ಬಂದಿರುತ್ತದೋ ಗೊತ್ತಿಲ್ಲ, ನನ್ನಿಂದ ಮುನ್ನೂರು ರೂಪಾಯಿ ಅಪೇಕ್ಷಿಸಿದ ಅವಳು ನೇರವಾಗಿ ಹೇಳಿದಳು. ನಿನ್ನ ವಯಸ್ಸಿನಲ್ಲಿ ಎಲ್ಲರಿಗೂ ಸಹಜ, ಆದರೆ ನಿನ್ನಪ್ಪನಂತೆ ಬದುಕು. ನಾನೇ ಒಪ್ಪಿಕೊಂಡ ಸಂದರ್ಭದಲ್ಲೂ ಒಪ್ಪದ ನಿನ್ನ ಅಪ್ಪನ ಬಗ್ಗೆ ಅತಿಯಾದ ಗೌರವವಿದೆ. ಈ ಹಣವನ್ನು ನಾನು ನಿನ್ನ ಅಮ್ಮನಿಗೆ ತಲುಪಿಸುತ್ತೇನೆ.

ಅತೀವವಾದ ದುಃಖವಾಯಿತು. ಪಟ್ತಣಕ್ಕೆ ಮರಳಿದ ಕೂಡಲೇ ಎಲ್ಲೆಂದರಲ್ಲಿ ತಿರುಗಾಡಿದೆ. ನನ್ನ ಸಹನೌಕರನ ಜೊತೆಗೆ ವೇಶ್ಯೆಯೊಂದಿಗೂ ಇದ್ದು ಬಂದೆ. ಅವಳಿಗಿಂತ ನಾನೇ ಹೆಚ್ಚು ಎನ್ನುವ ರೀತಿ ವಾರಕ್ಕೊಮ್ಮೆ ಅತ್ತ ಸುಳಿಯುತ್ತಿದ್ದೆ. ಅದೇನೋ ಗೊತ್ತಿಲ್ಲ, ತಪ್ಪು ಮಾಡುತ್ತಿದ್ದೇನೆ ಅಥವಾ ಇದು ಸರಿಯಲ್ಲ ಎನ್ನುವುದನ್ನೂ ಚಿಂತಿಸಲಿಲ್ಲ.

ಮತ್ತೊಂದು ವರ್ಷಕ್ಕೆ ಮದುವೆ. ಅಲ್ಲೇ ಪಕ್ಕದ ಊರಿನ ಸಿರಿವಂತ ಮಾವ. ಹೆದರಿ ತಾಳಿ ಕಟ್ಟಿದ್ದ ನೆನಪು. ಅವಳೂ ಅಷ್ಟೆ , ತಾನಾಯಿತು ತನ್ನ ಪಾಡಾಯಿತು ಎಂಬ ಹಾಗೆ. ಮಾವನಿಂದ ತಾನು ಒಳ್ಳೆಯ ಫ್ಯಾಕ್ಟರಿ ಮಾಡಿ, ದೊಡ್ಡ ವ್ಯಕ್ತಿ ಎನ್ನಿಸಿಕೊಂಡೆ. ಊರಿಗೂ ದೂರವಾಗಿ ಇಷ್ಟು ವರ್ಷ ನೆಮ್ಮದಿಯಿಂದ ಬದುಕಿದ್ದ ನನಗೆ ಈ ಪ್ತಶ್ನೆ ತುಂಬಾ ಮಾರ್ಮಿಕವಾಗಿ ನಾಟಿತ್ತು .

ನನ್ನ ಅಪ್ಪನನ್ನು ಕೂಡಾ ನೋಡದೇ ಮದುವೆಯಾಗಿದ್ದ ನನ್ನ ಅಮ್ಮ. ಹುಡುಗಿ ನೋಡಿ ಮದುವೆಯಾದ ನಾನು ಇಬ್ಬರೂ ಈ ಕಾಲಕ್ಕಲ್ಲ ಎನಿಸಿಬಿಟ್ಟಿದೆ.  ಬದುಕು ಎಂಬುದು ಲೈಂಗಿಕತೆಯನ್ನೇ ಮೀರಿ ತಪಸ್ಸಿನಂತೆ ಕಳೆದಿದ್ದರು ಅಪ್ಪ. ನಾನಂತೂ ಅದರ ವಿವಿಧ ಮಜಲುಗಳನ್ನ ನೋಡಿ, ಯಾವುದಕ್ಕೂ ಸಿಲುಕದೆ ಉಳಿದುಬಿಟ್ಟೆ. ಈಗ ಮಗನ ಸರದಿ. ಎಂತಹ ಮುಕ್ತತೆ. ಹೇಗೆ ಇರಲಿ ಲೈಂಗಿಕವಾಗಿ ಸದೃಢನೆನಿಸಿಕೊಳ್ಳುವುದೇ ಮದುವೆಯ ಮುಖ್ಯತೆಯೇ ?

ನೋಡಿ ಅಂಕಲ್, ನಿಮ್ಮ ಮಗ ರೊಮ್ಯಾನ್ಸ್ ನಲ್ಲೇ ಸ್ವಲ್ಪ ವೀಕು. ಇನ್ನೊಂದೆರಡು ಡೇಟ್ ಗೆ ಹೋಗಿ ಬಂದಮೇಲೆ ಮದುವೆಯ ವಿಚಾರ ಎಂದ ಆ ಹುಡುಗಿಯೇ ನನ್ನ ಸೊಸೆಯೇ ?