Saturday 27 October 2012

ಅವಳಿಗೆ ಬರೆದ ಕೊನೆಯ ಪತ್ರ.


ನೀನಿಲ್ಲದೇ ಇದ್ದರೆ ಇರಲಾಗುವುದಿಲ್ಲ ಎನ್ನುವುದು ಆಕರ್ಷಣೆಯ ಪರಾಕಾಷ್ಟೆ ಆಗಿರಬೇಕೇನೊ. ಹಾಗನ್ನಿಸಿಲ್ಲವಲ್ಲ. ಏನೋ ಒಂದೆರಡು ಬಾರಿ ಹಾಗೆ ಹೇಳಿರಬಹುದು ಬಿಟ್ಟತೆ ಆ ಭಾವವಾಗಲೀ, ಗಟ್ಟಿಯಾಗಿ ನಂಬಿದ್ದಾಗಲಿ ಇಲ್ಲ. ತಲೆತಗ್ಗಿಸಿದ್ದ ನನ್ನ ಮುಖವನ್ನು ಎತ್ತಿ ಒಂದೆರಡು ಕ್ಷಣ ನೋಡಿ ಮಾತನಾಡಲಿಲ್ಲ. ಹಾಗೇ ಹಿಂದೆ ಸರಿದೆ ನೀನು. ಇದೆಲ್ಲವನ್ನೂ ಆಗ ನಾನು ಅನುಭವಿಸಿದ್ದೆ. ಈಗ ನೆನಪಿಸುತ್ತಿದ್ದೇನೆ..

ಅದೇನು ಸುಖವೋ ಗೊತ್ತಿಲ್ಲ. ನೆನಪಿಸುವಾಗಲೂ ನೀನಿದ್ದಂತೆ ಅನಿಸುತ್ತದೆ. ಹೆಗಲಿಗೆ ತಲೆ ಇಟ್ಟು ಮಾತನ್ನಾಡಿದಂತೆ. ಎಲ್ಲಿಂದಲೋ ಒಂದು ಕರ್ಕಶ ಕೂಗು ಬೆಚ್ಚಿಬೀಳಿಸುತ್ತದೆ. ಪುನಃ ಗಾಬರಿಯಿಂದ ಎಲ್ಲಾ ಕಡೆ ನೋಡುತ್ತೇನೆ. ಅವಳಿಲ್ಲ ಎಂದು ಪುನಃ ವಾಸ್ತವ ಜಗತ್ತಿಗೆ ಬಂದು ಸುಮ್ಮನೇ ಇದೇ ಪಾರ್ಕಿನ ಇದೇ ಬೆಂಚಿನ ಮೇಲೆ ಕುಳಿತು ಯೋಚಿಸುತ್ತೇನೆ. ಸುಮ್ಮನೇ  ಲಂಗುಲಗಾಮಿಲ್ಲದಂತೆ ಹರಿಯುವ ವಿಚಾರಗಳನ್ನು ಆಳಕ್ಕಿಳಿದು ಯೋಚನೆ ಮಾಡುವ ಮನಸ್ಸಾಗುತ್ತದೆ. ಆದರೂ ಅಲ್ಲಿಯೂ ಹಿತವಿಲ್ಲ.

ಪ್ರಯತ್ನಪೂರ್ವಕವಾಗಿ ಅಲ್ಲದಿದ್ದರೂ ನೀನು ದೊರಕುತ್ತೀ ಎಂದು ನಿನ್ನ ಹಿಂದೆ ಸುಳಿದಾಡಿದ್ದು ನನ್ನ ತಪ್ಪೇ ಅಲ್ಲ. ಏಕೆಂದರೆ ಆಗ ಸಿಗುವ ಭರವಸೆಯಿಲ್ಲದೇ ಸುಮ್ಮನೇ ತಿರುಗುತ್ತಿದ್ದೆ. ಬೇರೆಯವರಿಗೆ ಅದು ಹೇಗೆ ಕಂಡರೂ ನಾನು ನಿನ್ನನ್ನು ಮರೆತೇ ಬಿಡುತ್ತಿದ್ದೆ ಅದೇ ಸಂಜೆ. ಆ ಮಳೆಯ ದಿನ ನಿನಗೆ ಕಾಟಕೊಡುವುದಕ್ಕೆಂದೇ ನಿನ್ನ ಹಿಂದೆ ಬಂದೆ. ಮೊದಲು ನೀನು ತಿರುಗಿದಾಗಲೋ ಅಲ್ಲ ನಕ್ಕಾಗಲೋ ಅಲ್ಲಿ ನಾನಿರಬಹುದೇನೋ ಎಂದು ಕಾಯುತ್ತಿದ್ದೆ.ಯಾವಾಗ ನೀನು ಪ್ರತಿಕ್ರಿಯೆ ನೀಡಿದೆಯೋ ಆ ದಿನದಿಂದ ನಾನು ನಿನ್ನಲ್ಲಿ ನನ್ನನ್ನು ಹುಡುಕುವುದನ್ನು ಬಿಟ್ಟೆ. ಸಂಪೂರ್ಣ ನಂಬಿಕೆಯಿತ್ತು. ಯಾರೋ ಸಾಲ ಕೊಡುತ್ತಾರೆಂದರೆ ನಂಬಲಾಗುವುದಿಲ್ಲ. ಆದರೆ ನಿನ್ನ ನಗು ಮತ್ತು ನೀನಾಡಿದ ಮಾತು ಮೊದಲ ಬಾರಿಗೆ ನಂಬಿಕೆ ಎಂದರೇನು ಎಂದು ಕಲಿಸಿತ್ತು.

ಹುಚ್ಚಾಟಗಳು ಅತಿಯೆನಿಸಲೇ ಇಲ್ಲ. ನಾನು ಕಾಯುತ್ತಿರಲಿಲ್ಲ ನೀನು ಹಾದಿಯಲ್ಲಿ ಬರುವುದನ್ನು ಅಥವಾ ನೀನೂ ಕಾಯುತ್ತಿರಲಿಲ್ಲ. ಆದರೆ ಸಿಗದೇ ಇದ್ದ ದಿನಗಳು ಅಪರೂಪ. ನೀನು ಮಾತನ್ನಾರಂಭಿಸಿದರೆ ನಾನು ಯಾವತ್ತೂ ಮಾತನಾಡಬೇಕೆಂದೆನಿಸಿಲ್ಲ. ಅಲ್ಲೇ ಮುಳುಗಿರುತ್ತಿದ್ದೆ. ಹೊರಗಿನ ಯಾರೋ ನಮ್ಮ ಬಗ್ಗೆ ಮಾತನಾಡುತ್ತಿದ್ದದನ್ನು ನಾನು ಗಮನಿಸಿದ್ದು ನೀನು ಇಲ್ಲದಿರುವ ದಿನಗಳಲ್ಲೇ.

ನಾನು ನಿನ್ನನ್ನು ಇಷ್ಟಪಡುತ್ತೇನೆ, ಅಥವಾ ಪ್ರೀತಿಸುತ್ತೇನೆ ಎಂದು ಯಾವತ್ತೂ ಹೇಳಿಲ್ಲವಲ್ಲ. ಅದು ಹೇಗೆ ಇಬ್ಬರಿಗೂ ತೋಚದೇ ಉಳಿಯಿತೋ ಗೊತ್ತಿಲ್ಲ. ಆದರೆ ಹೇಳದಿದ್ದರೂ ಒಳಗಿಂದೊಳಗೇ ಹೇಳಿದಂತೆ ಅಥವಾ ಒಬ್ಬನೇ ಇದ್ದಾಗ ನಾನೂ ನೀನೂ ಮಾತನಾಡಿದಂತೆ ಆ ಭಾವವನ್ನು ಅನುಭವಿಸಿದ್ದೇನೆ ಅಂದಮೇಲೆ ನೀನೂ ಹಾಗೆಯೇ ಅಂದುಕೊಂಡಿರುತ್ತೀಯ. ಕ್ರಮೇಣ ನಾವು ಒಬ್ಬರನ್ನು ಬಿಟ್ಟು ಇರಲಾರೆವು ಎನ್ನುವ ತೀರ್ಮಾನಕ್ಕೆ ಬಂದೆವೇನೋ, ನೀನು ಬಾರದೇ ಇದ್ದಲ್ಲಿ, ನಿನ್ನ ಊರಿಗೆ ಹೊರಟು ಹೋದಮೇಲೆ ಅದೇನು ಚಡಪಡಿಕೆ? ನಾನು ಊಟ ಮಾಡಿರಲಿಲ್ಲ ನಿದ್ದೆ ಮಾಡಿರಲಿಲ್ಲ ಎನ್ನುವುದಲ್ಲ. ಅದ್ಯಾವುದೂ ರುಚಿಸಿರಲಿಲ್ಲ ಎಂಬುದು ಸತ್ಯ. ಪುನಃ ಬಂದಾಗ ಅದೇನು ಸಂಭ್ರಮ. ಯಾವುದೋ ಕಿತ್ತುಹೋಗಿದ್ದ ಒಂದು ರಕ್ತದನಾಳ ಹೃದಯಕ್ಕೆ ಪುನಃ ಜೋಡಿಸಿದಂತೆ ಉಸಿರಾಟ ಸರಾಗವಾಯಿತು!

ಹೀಗೇ ಕಾಲವು ನಡೆಯುತ್ತಿತ್ತು. ಸಖ್ಯವೂ ಹಾಗೆಯೇ. ನಾವು ಕುಳಿತ, ಮಾತನಾಡಿದ, ನೆಗೆಯಾಡಿದ ಸ್ಥಳಗಳಲ್ಲಿ ನಿನ್ನೆಯ ತರಗೆಲೆಗಳೂ ಹೇರಳ, ನಿನ್ನೆಯ ಹೂಗಳೂ ಬೇಕಾದಷ್ಟು. ನಾವು ಕಾಯುತ್ತಿದ್ದುದಕ್ಕೆ ಸಾಕ್ಷಿಯೋ ಎಂಬಂತೆ ದಿನವೂ ಆ ಬೆಂಚು ನಮಗಾಗಿಯೇ ಕಾಯುತ್ತಿತ್ತೇನೋ. ನಾವು ಹೀಗೆಯೇ ಇದ್ದೆವು. ದಿನಕ್ಕೂ ಹೊಸ ಜಗತ್ತಿನ ಸಖಿ ಸಖರಂತೆ.

ದಿನ ಸರಿದಂತೆಯೂ ಒಂದು ರೀತಿಯ ಗಟ್ಟಿತನ ನಿನ್ನಲ್ಲಿ ಕಾಡತೊಡಗಿತು. ಅದೇನು ಎಂದು ನಾನು ಇಣುಕುವಷ್ಟರಲ್ಲಿ ನೀನೇ ಅದನ್ನು ಹೇಳಿದಂತೆ. ನಾನು ನೀನು ಸುಮಾರು ಸಲ ಮಾತನಾಡಿದರೂ ನಮ್ಮ ಮಧ್ಯೆ ಬೇರೆ ಬೇರೆ ಎನ್ನುವ ಭಾವವಿರಲಿಲ್ಲ. ಆ ದಿನ ಹಾಗೆ ಅನ್ನಿಸಲಿಲ್ಲ. ಎಲ್ಲಿಯೋ ಹೋಗಬೇಕು, ದೇಹದ ಯಾವುದೋ ಅಂಗವನ್ನು ತೆಗೆಯಬೇಕು ಎನ್ನುವಷ್ಟರಲ್ಲಿ ಘಾಸಿಯಾಯಿತು ನನಗೆ. ಮಾತು ಬರಲಿಲ್ಲ.

ನಿನ್ನ ಊರಿಗೆ ಬಂದು ನಿನ್ನ ಜೊತೆ ಇರುವ ಬಗ್ಗೆ ಯೋಚನೆ ಮಾಡಿದರೂ ನಿನ್ನಲ್ಲಿ ಹೇಳದೇ ಇರುವ ಬಗ್ಗೆ ಗೊಂದಲ. ನಿನಗೂ ಹಾಗೆಯೇ ಇರಬೇಕು. ನಾನೇ ಹೇಳಬೇಕಿತ್ತು. ಆಗಲಿಲ್ಲ. ನನ್ನ ಐಡೆಂಟಿಟಿಯೋ ಅಹಂಕಾರವೋ ನನ್ನಲ್ಲಿ ಮಾತನಾಡಲು ಆಗಲೇ ಇಲ್ಲ. ಆ ದಿನದ ಸಂಜೆಯೂ ನೀನು ಸಿಕ್ಕಿದೆ. ಗುಲಾಬಿ ಬಣ್ಣದ ದಿರಿಸಿನಲ್ಲಿ. ಕೈಯ್ಯಲ್ಲೊಂದು ಬ್ಯಾಗ್. ಕೆಲವೊಮ್ಮೆ ಸೂರ್ಯ ಮುಳುಗಿದಾಗಲೂ ಇದೇ ಬಣ್ಣ ಕಾಣುತ್ತದೆ. ನಾನು ಆ ಸೂರ್ಯ ಮುಳುಗುತ್ತಿರುವುದನ್ನೇ ದಿಟ್ಟಿಸಿದೆ. ಕ್ರಮೇಣ ಗುಲಾಬಿ ಕೆಂಪಾಯಿತು, ಕೆಂಪು ಕಪ್ಪಾಯಿತು. ನೀನು ಹೊರಟು ಹೋದೆ.

ಬಸವನಹುಳ ನೋಡಿದಂತೆಲ್ಲಾ ನಿನ್ನ ನೆನಪಾಗುತ್ತದೆ ಎಂದರೆ ಏನೆನ್ನಬೇಕು. ಅದೂ ಕೂಡ ಹಾಗೆಯೇ, ತಾನು ಹೋದೆ ಎಂದು ತನ್ನ ಗುರುತು ಬಿಟ್ಟು ಮುಂದೆ ಸಾಗುತ್ತದೆ. ನೀನೂ ಹಾಗೆಯೇ, ಹೋದಮೇಲಿನ ಗುರುತು ನಿಚ್ಚಳವಾಗಿ ಮೂಡಿದೆ ನನ್ನಲ್ಲಿ. ನಾನು ಬದಲಾದೆ. ನನ್ನಲ್ಲಿ ನಿನ್ನನ್ನು ಅಗಲಿ ಇರುವಂತಹ ಒಂದು ಶಕ್ತಿ ಇಲ್ಲ. ನೀನು ನನ್ನೊಳಗೆ ಇರುತ್ತೀ ಹಾಗೆ ಹೀಗೆ ಎಂದೆಲ್ಲಾತತ್ವಜ್ಞಾನದ ಮಾತುಗಳನ್ನಾಡಲು ಆಗಲಾರದು ನನಗೆ. ನೀನು ಹೀಗೇ ಇರಬೇಕು, ನಾನೂ ಹೀಗೆಯೇ ಇರಬೇಕು.

ಈ ಪತ್ರ ಎಲ್ಲಿಗೆ ಕಳುಹಿಸಬೇಕು ಎಂದು ಇನ್ನೂ ಗೊಂದಲದಲ್ಲಿರುವ ನಿನ್ನ ಮಿತ್ರ.

ನಿನ್ನ ನೆನಪುಗಳೆಲ್ಲ ನನಗೆ ಗೌಣ
ಎಂದಾಗ ಕೋಪಿಸಬೇಡ,
ಲೆಕ್ಕಿಸದಿದ್ದಾಗಲೇ
ನೋವು ವಿಪರೀತ ಕಣಾ!

Tuesday 23 October 2012

ಅಪ್ಪಚ್ಚಿ ಹೇಳಿದ ಅಪ್ಪನ ಕತೆ- ಭಾಗ ೬ ( ಶಾಮನ ಕತೆ )


ಅಪ್ಪಚ್ಚಿ ಇದುವರೆಗೆ ಹೇಳಿದ ಕತೆಗಳಲ್ಲಿ ಈ ಕತೆ ಏಕೋ ಅಷ್ಟು ಸರಿಹೋಗಲಿಲ್ಲ. ನಡುವಿನಲ್ಲಿ ಏನೋ ತಿರುಚಿದಂತೆ ಕಾಣತೊಡಗಿತು. ಇದೇಕೆ ಒಂದೇ ರೀತಿಯ ಹರಿವು ಈ ಕತೆಯಲ್ಲಿಲ್ಲ ಎಂದು ಅನಿಸಿದ್ದಕ್ಕೇ ಕೇಳಬೇಕೆನಿಸಿತು. ಸುಮ್ಮನೇ ಒಂದು ಕತೆಯೆಂದು ಹೇಳಿದರೇ? ಆಗಿರಲಿಕ್ಕಿಲ್ಲ. ಪುನಃ ಕೆದಕೋಣ ಎನ್ನುವುದೂ ಅನಿಸಿತು.ಚಿಕ್ಕಪ್ಪಾ, ಇದೇಕೋ ಕತೆಯಲ್ಲಿ ಏನೋ ಸಂಕೋಚವಿದೆ ಎಂದ ತಕ್ಷಣ ತಾನು ಹೇಳಲೇ ಬಾರದಿತ್ತು ಎನ್ನುವಂತೆ ಮುಖ ಮಾಡಿದ ಚಿಕ್ಕಪ್ಪ.

ಮಗನೇ ಸತ್ಯವೋ ಸುಳ್ಳೋ ಗೊತ್ತಿಲ್ಲ. ಪುನಃ ಆ ಕತೆಯನ್ನು ಹೇಳದೇ ಇದ್ದರೆ ನಿನಗೂ ಸಮಾಧಾನ ಆಗುವುದಿಲ್ಲ. ನನಗೂ ಅಷ್ಟೇ. ಈ ಸಂದರ್ಭ ಬಂದೀತೆಂದು ನನಗೂ ಅರಿವಿದ್ದಿತು. ಆ ಕತೆ ಹೇಳುತ್ತೇನೆ ಕೇಳು. ಯಕ್ಷಗಾನದಿಂದ ಬರುತ್ತಿದ್ದ ನಾವು ಬಂಡೆಯಲ್ಲಿ ಮಲಗಿದ್ದನ್ನು ಹೇಳಿದ್ದೇನೆ ಸರಿಯಷ್ಟೆ. ಅಲ್ಲಿಂದ ಸುಮ್ಮನೇ ನಡೆಯುತ್ತಾ ಬಾಬು ಸೋಜರ ಮನೆಯ ಮೇಲೆ ಬಂದಿದ್ದೆವಷ್ಟೆ. ಆಗ ಬಾಬು ಸೋಜರನ್ನು ನಾವು ರಕ್ಷಿಸಿದೆವು ಎನ್ನುವ ವಿಷಯವನ್ನು ನಿನಗೆ ಹೇಳಿದ್ದೆ. ಅದರ ಹಿಂದೆ ಇನ್ನೊಂದು ಕತೆಯಿದೆ. ಅದನ್ನು ನಾವು ತಿಳಿದದ್ದು ಬಾಬು ಸೋಜರನ್ನು ಪೋಲೀಸರು ಹಿಡಿದಾಗಲೇ!

ಶಾಮನ ಬಗ್ಗೆ ಹೇಳಿದ್ದೆ ಮೊದಲು. ಆತ ನಮ್ಮ ಮಿತ್ರನೂ ನಮ್ಮಲ್ಲಿ ಮಿತಭಾಷಿಯೂ ಆಗಿದ್ದವನು. ಯಾವ ತುಂಟತನದ ಕೆಲಸವನ್ನೂ ಮಾಡುತ್ತಿರಲಿಲ್ಲ. ಆತನೊಂದು ರೀತಿಯ ವ್ಯಕ್ತಿ. ನಿನ್ನಪ್ಪನಷ್ಟೇ ವಯಸ್ಸು ಆತನದು. ತೆಳ್ಳಗಿನ ದೇಹವಾದರೂ ಕಣ್ಣುಗಳಲ್ಲಿ ವಿಶೇಷ ಹೊಳಪು. ಏನು ಮಾಡುತ್ತಿದ್ದರೂ ಹೇಳುತ್ತಿದ್ದರೂ ಸ್ವಲ್ಪ ಸಮಯ ತೆಗೆದುಕೊಳ್ಳುತ್ತಿದ್ದ. ತಲೆಗೂ ಕೈಗೂ ಸ್ವಲ್ಪ ಅಂತರವಿತ್ತು ಆತನಲ್ಲಿ.

ಶಾಲೆಯ ದಿನಗಳು ಮುಗಿದವು. ನಿನ್ನಪ್ಪನಂತೇ ಆತನೂ ಒಂದು ವರುಷ ಶಾಲೆಯಲ್ಲಿ ಹೆಚ್ಚು ಕಲಿತವರು. ಚುರುಕಿರಲಿಲ್ಲ ಎಂದಲ್ಲ, ಅವರಿಗೆ ಪಠ್ಯೇತರ ಚಟುವಟಿಕೆಗಳು ಪ್ರಧಾನವಾಗಿದ್ದುದರಿಂದ. ಶಾಮ ಚೆನ್ನಾಗಿ ಬರೆಯುತ್ತಿದ್ದ ಕೂಡ. ಅವನು ಬರೆದ ನೋಟ್ ಪುಸ್ತಕಗಳು ನಮ್ಮ ಮನೆಯಲ್ಲಿಯೇ ಇರಬೇಕು ಅಟ್ಟದಲ್ಲಿ. ಗೆದ್ದಲಿನ ಕೃಪಾಶೀರ್ವಾದವಿಲ್ಲದೆ ಸರಿಯಾಗಿದ್ದರೆ ನಿನಗೂ ಒದಬಹುದು. ಇಂತಹ ಶಾಮ ಕೆಲವು ರಜಾದಿನ ಶಾಲೆಗೆ ಬರುತ್ತಲೇ ಇರಲಿಲ್ಲ. ಎಲ್ಲಿಯೋ ಕುಳಿತುಬಿಡುತ್ತಿದ್ದ. ಅವನ ಅಮ್ಮನೂ ಅಪ್ಪನೂ ತುಂಬಾ ಪಾಪದವರು. ಅವನ ಶಾಲೆಯ ಖರ್ಚಿನ ಅರ್ಧದಷ್ಟು ನಮ್ಮ ಅಪ್ಪನೇ ನೋಡಿಕೊಳ್ಳುತ್ತಿದ್ದರು ಕೂಡ. ಶಾಲೆ ಮುಗಿದ ಮೇಲೂ ನಮ್ಮೊಂದಿಗೆ ಅಷ್ಟಾಗಿ ಜೊತೆಯಿರುತ್ತಿರಲಿಲ್ಲ.

ನಿನ್ನ ದೊಡ್ಡಪ್ಪನ ಮದುವೆಯ ದಿನವೇ ಕೊನೆ ಅವನನ್ನು ನೋಡಿದ್ದು ನಾವು. ಈ ಶಾಮ ಸುಮಾರು ದಿನ ಮನೆಯಲ್ಲೇ ಮಂಕಾಗಿ ಕುಳಿತಿದ್ದ ಎನ್ನುವುದು ಆಮೇಲೆ ಗೊತ್ತಾಯಿತು. ಶಾಮ ಮನೆ ಬಿಟ್ಟು ಹೋದನಂತೆ. ಅದೂ ಅವನ ಅಪ್ಪ ಅಮ್ಮ ಪೋಲೀಸ್ ಕಂಪ್ಲೇಂಟ್ ಕೊಟ್ಟು ಶಾಮ ಕಾಣಿಸುತ್ತಿಲ್ಲ ಎಂದು ಹೇಳಿದ ಮೇಲೆ. ಈ ಶಾಮ ಏನಾದ ಎನ್ನುವುದೇ ನಮಗೊಂದು ದೊಡ್ಡ ಚಿಂತೆಯಾಯಿತು.
-
ಆ ದಿನ ನಾವು ಬಾಬುಸೋಜರನ್ನು ರಕ್ಷಿಸಿದೆವು ಎಂದೆನಲ್ಲ. ಆ ದಿನ ಬಾಬು ಸೋಜರು ಮಾಡಿದ ದೊಡ್ಡ ಕೆಲಸವೆಂದರೆ ಶಾಮನ ಹೆಣವನ್ನು ಸೂಟುಮಣ್ಣಿಗೆ ಹಾಕಿ ಅದನ್ನು ಮುಚ್ಚಿದ್ದು. ಆ ಕೆಲಸದಲ್ಲಿಯೇ ಬಾಬು ಸೋಜರು ಬಿದ್ದಿದ್ದು ಮತ್ತೆ ನಾವು ಅವರನ್ನು ರಕ್ಷಿಸಿದ್ದು ಎಲ್ಲವೂ. ನನಗೆ ಅರಿವಾಗಲೇ ಇಲ್ಲ ಆದಿನ. ನಿನ್ನಪ್ಪ ಹೇಳಿದ ಕತೆಯನ್ನೇ ನಿನಗೂ ಹೇಳಿದ್ದೇನೆ, ಆದರೆ ನಿನಗಾದ ಸಂಶಯ ನನಗಾಗಲಿಲ್ಲ ಆಗ. ನಾನೂ ಬಾಬು ಸೋಜರು ಕುಡಿದು ಬಿದ್ದಿದ್ದಾರೆ ಎಂದುಕೊಂಡಿದ್ದೆ. ಆದರೆ ಆದ ಘಟನೆಯೇ ಬೇರೆಯಾಗಿತ್ತು.

ನಾನು, ನಿನ್ನಪ್ಪ ಕೂಡ ಸಾವಿನ ಘೋರಮುಖವನ್ನು ನೋಡಿದ ಘಟನೆ ಅದು. ನಮ್ಮ ಮನೆಯ ನಾಯಿ, ಬೆಕ್ಕು, ಮೆಚ್ಚಿನದನಗಳು, ಇತ್ಯಾದಿ ಸತ್ತಾಗ ಒಂದೋ ಎರಡೋ ದಿನ ನಿರ್ಭಾವುಕತೆಯಿಂದ ಸುಮ್ಮನೇ ಕುಳಿತದ್ದುಂಟು. ಆದರೆ ಈ ಸಾವಿನ ಘಟನೆ ತಿಳಿದಂದಿನಿಂದ ನಾವು ಸಾವಿಗೆ ಇನ್ನಷ್ಟು ಹೆದರತೊಡಗಿದೆವು. ಅಲ್ಲದೇ, ಅಲ್ಲಿ ಇಲ್ಲಿ ಸತ್ತ, ಸಾಯಿಸಿದ ಘಟನೆಗಳನ್ನು ಕೇಳಿದಾಗೆಲ್ಲ ನಮ್ಮ ಮನದ ಪಟಲಗಳಲ್ಲಿ ಈ ಘಟನೆ ಸುಳಿದಾಡುತ್ತಿತ್ತು.

ಬಾಬು ಸೋಜರಿಗೆ ಒಬ್ಬ ಮಗ ಮತ್ತು ಇನ್ನೊಬ್ಬಳು ಮಗಳು. ಮಗಳಿಗೆ ಇಪ್ಪತ್ತೈದು ಅಥವಾ ಇಪ್ಪತ್ತಾರು ವರ್ಷವಾಗಿರಬೇಕು ಆಗ. ಅವಳಿಗಿನ್ನೂ ಮದುವೆಯಾಗಿರಲಿಲ್ಲ. ಭವ್ಯನೋ  ದಿವ್ಯನೋ ಹೆಸರು. ಈ ಸಣಕಲ ಶಾಮನಿಗೆ ಅದು ಹೇಗೆ ಪರಿಚಯವಾಯಿತೋ, ಅವಳು ಈತನನ್ನು ಮೋಹಿಸಿದಳಂತೆ. ಶಾಮ ಕೂಡ ಇದೇನೋ ಹೊಸತು ಎಂಬಂತೆ ಅವಳು ಬೀಡಿಗೋ, ಪೇಟೆಗೋ ಹೋದಂತೆಲ್ಲಾ ಹಿಂಬಾಲಿಸುತ್ತಿದ್ದ. ಅವಳು ಆದಿತ್ಯವಾರವಂತೂ ಸಿಗುತ್ತಿದ್ದಿರಬೇಕು ಈತನಿಗೆ. ಇದು ಊರಲ್ಲಿ ಸಣ್ಣ ಸುದ್ಧಿಯನ್ನೂ ಉಂಟುಮಾಡುತ್ತಿತ್ತು. ನಾವೂ ಅದನ್ನು ಕೇಳಿ ಶಾಮನನ್ನು ಹೊಗಳಿದ್ದೂ ಇದೆ.

ಒಂದು ಆದಿತ್ಯವಾರ ಅಂದರೆ ನಾವು ಯಕ್ಷಗಾನಕ್ಕೆ ಹೋದ ರಾತ್ರಿಯ ಹಗಲು, ಶಾಮ ಬಾಬು ಸೋಜರ ಮನೆಗೇ ಹೋದನಂತೆ. ಆ ದಿನ ಬಾಬುಸೋಜರೂ ಮಗ ಇಮಾನ್ ಸೋಜರೂ ಚರ್ಚಿಗೆ ಹೋಗಿದ್ದರು. ಬಾಬುಸೋಜರು ಏನೋ ಚರ್ಚಿಗೆ ಹೋಗದೇ ವಾಪಸ್ಸು ಬಂದಾಗ ಶಾಮನೂ ಮಗಳೂ ಮನೆಯಲ್ಲಿದ್ದರು. ಈ ವಿಷಯಗಳು ಮೊದಲೇ ಸಣ್ಣ ಮಟ್ಟಿನಲ್ಲಿ ಊರಿನವರಿಂದ ತಿಳಿದಿದ್ದ ಬಾಬು ಸೋಜರು ಕೋಪಗೊಂಡರು. ಕೋಪದ ಕೈಗೆ ಬುದ್ಧಿಯನ್ನು ಕೊಟ್ಟ ಬಾಬು ಸೋಜರು ಶಾಮನ ತಲೆಗೆ ಹೊಡೆದರು. ಶಾಮ ಅಲ್ಲಿಯೇ ಕುಸಿದು ಬಿದ್ದ. ಕುಸಿದು ಬಿದ್ದವನು ಏಳಲಿಲ್ಲ.

ಮಗಳನ್ನು ಹೆದರಿಸಿ ಸುಮ್ಮನಿರಿಸಿ ಮಧ್ಯಾಹ್ನ ಅತ್ತೆಮನೆಗೆ ಕಳುಹಿಸಿದರು. ಮಗ ಬರುವ ಮೊದಲೇ ಮನೆಯಲ್ಲಿ ಬಿದ್ದಿದ್ದ ಶಾಮನ ಹೆಣವನ್ನು ಹೊಲದ ಕೆಳಗೆ ಹರಿಯುವ ಸಣ್ಣ ಹಳ್ಳದ ಬದಿಯಲ್ಲಿ ಇರಿಸಿದರು. ಇದೇ ರಾತ್ರಿ ನಾವು ವಾಪಸ್ಸು ಬರುತ್ತಿರುವಾಗ ಆ ಹೆಣವನ್ನು ಅಲ್ಲಿಂದ ಎತ್ತಿಕೊಂಡು ಬಂದು ಯಾರೂ ಅರಿಯದಂತೆ ಸೂಟುಮಣ್ಣಿನ ಒಳಗೆ ಹಾಕಿಬಿಡಲು ಯೋಚಿಸಿ ಆ ಕೆಲಸ ಮಾಡಿದರು. ಎಲ್ಲಿ ನಾವು ಅಲ್ಲೇ ಇದ್ದರೆ ತಿಳಿದುಬಿಡುತ್ತದೋ ಎಂದು ನಮ್ಮನ್ನು ಗದರಿಸಿ ಮನೆಗೆ ಕಳುಹಿಸಿದರು.
-
ಈ ಕಾಣೆಯಾದವನ ತನಿಖೆ ಮಾಡುತ್ತಾ ಪೋಲೀಸರು ಬಂದಾಗ ಮೊದಲು ಈ ಸಾವಿನ ಸುಳಿವು ಸಿಗಲಿಲ್ಲ. ಕೊನೆಗೆ ಊರಿನವರಿಂದಲೇ ಬಾಬು ಸೋಜರ ಮಗಳ ಜೊತೆಗಿದ್ದ ವ್ಯವಹಾರವನ್ನು ಹೇಳಿದಾಗ ಅನುಮಾನಗೊಂಡು ಬಾಬುಸೋಜರ ತನಿಖೆಯಾಯಿತು. ಹೀಗೆ ಬಾಬುಸೋಜರು ಮಾಡಿದ ಕೊಲೆಗೆ ಶಿಕ್ಷೆಯೂ ಆಯಿತು. ಸುಮಾರು ಎರಡು ತಿಂಗಳಲ್ಲಿ ಈ ಕತೆ ನಮಗೆ ತಿಳಿಯಿತು. ನಾವೂ ಶಾಮನ ತಂದೆತಾಯಿಯರ ಜೊತೆ ಕಣ್ಣೀರು ಸುರಿಸಿದೆವು.

Monday 22 October 2012

ಅಪ್ಪಚ್ಚಿ ಹೇಳಿದ ಅಪ್ಪನ ಕತೆ- ಭಾಗ ೫ ( ಸೂಟು ಮಣ್ಣು ಮತ್ತಿತರ ಕತೆ)


ಏನಿದು ದುಗುಡ ಪ್ರಿಯಾ.. ಎನ್ನುವ ಮೊಬೈಲ್ ಸಂಗೀತಕ್ಕೆ ವಾಸ್ತವಕ್ಕೆ ಬಂದೆ. ಈಗ ಎಲ್ಲೆಲ್ಲೂ ಸಂಗೀತವೇ. ಮೊಬೈಲು ಬಂದಮೇಲೆ ಜಗತ್ತು ಸಣ್ಣದಾಗಿದೆ, ಸುಳ್ಳು ವ್ಯಾಪಕವಾಗಿದೆ. ಹೆಚ್ಚೇಕೆ ವಾಸ್ತವವನ್ನೇ ಹೇಳಿದರೂ ನೀನು ಸುಳ್ಳು ಹೇಳಬೇಡ ಎನ್ನುವ ಮಾತು ಕೇಳಲೇಬೇಕು. ಚಿಕ್ಕಪ್ಪ ಹೇಳಿದ ಕತೆಯೊಳಗೆ ಮುಳುಗಿದ್ದ ನನ್ನನ್ನು ಯಾವುದೋ ಅನಾಮಿಕ ಕರೆ ಅದಷ್ಟು ಆಫರುಗಳನ್ನು ಕೊಟ್ಟು ದುಡ್ಡನ್ನು ಹೀಗೆ ಬಳಸು ಎಂದು ಬೋಧನೆ ಮಾಡತೊಡಗಿತು. ಚಿಕ್ಕಪ್ಪನ ಮಾತುಗಳಿಗಾಗಿ ಕಾದೆ, ಮೊಬೈಲು ಒಳಗಿರಿಸಿ.ಚಿಕ್ಕಪ್ಪನ ಮಾತುಗಳು ನಾನೆಷ್ಟು ಬರೆದರೂ ಕಾಮನಬಿಲ್ಲನ್ನು ವರ್ಣಿಸಿದಂತೆ. ಅದೋ ನೋಡು ನೇರಳೆ ಬಣ್ಣದ ಕೆಳಗೆ ಹಳದಿ, ಇನ್ನೊಂದು ಕೆಂಪು, ಇನ್ನೊಂದು ನೇರಳೆ ಎಂದಂತೆ. ಎಲ್ಲವುಗಳನ್ನೂ ನಾನು ಹೇಳಲು ಅಸಮರ್ಥನಾದೇನು. ಕತೆಗಳೆಷ್ಟೋ ಇರಬಹುದು ಜೀವನದ ಪಯಣದಲ್ಲಿ.

ಓಯ್, ಅದೆಂತ ಹಾಡು ಮಾರಾಯ? ಎಲ್ಲಿಗೆ ಹೋದರೂ ಯಕ್ಷಗಾನದ ಹಾಡೇ?. ನಿನ್ನಪ್ಪನೂ ಯಕ್ಷಗಾನ ತುಂಬಾ ಇಷ್ಟಪಡುತ್ತಿದ್ದ ಮಾರಾಯ. ಒಂದು ಯಕ್ಷಗಾನದ ಕತೆ ಹೇಳ್ತೇನೆ ಕೇಳು. ಈ ಊರು ಇದೆಯಲ್ಲಾ ಇದು ಯಕ್ಷಗಾನಕ್ಕೆ ಹೆಸರುವಾಸಿ. ನಮ್ಮವರು ಯಾರೂ ಕುಣಿಯದಿದ್ದರೂ, ಮೇಳದಲ್ಲಿ ಇಲ್ಲದಿದ್ದರೂ ಅವನು ಇಷ್ಟು ತಪ್ಪು ಕುಣಿದ, ಎರಡು ಘಂಟೆಯ ಮೇಲೆ ಆ ಭಾಗವತರಿಗೆ ಸ್ವರವೇ ಇಲ್ಲ, ಈ ಪ್ರಸಂಗ ಬಿಟ್ಟು ಯಾವುದಾದ್ರು ಚಂದ ಮಾಡ್ತಾನೆ ಎನ್ನುವ ಹೇರಳವಾದ ವಿಮರ್ಶೆ ಕೊಡುವುದರಲ್ಲಿ ಎತ್ತಿದ ಕೈ. ಯಕ್ಷಗಾನದವರಿಗೂ ಸಂಭಾವನೆ ಊಟ ಎಲ್ಲಾ ನಮ್ಮ ಊರಲ್ಲಿ ಚೆನ್ನಾಗಿರುತ್ತಿತ್ತು. ಹಾಗಾಗಿ ವಿಮರ್ಶೆ ಜಾಸ್ತಿ ಇದ್ದರೂ ಊರಲ್ಲಿ ಯಕ್ಷಗಾನಕ್ಕೆ ಯಾರೂ ರಜೆ ಹಾಕುತ್ತಿರಲಿಲ್ಲ. ಸುಮಾರು ೧೦-೧೫ ಕಿಲೋಮೀಟರು ನಡೆದಾದರೂ ನಾನೂ ನಿನ್ನಪ್ಪನೂ ಆಟಕ್ಕೆ ಹೋಗುತ್ತಿದ್ದೆವು. ಕ್ರಮೇಣ ದೊಡ್ಡಪ್ಪ ಬರುತ್ತಿರಲಿಲ್ಲ. ನಾನೂ ನಿನ್ನಪ್ಪ ಇಬ್ಬರೇ ಹೆಚ್ಚಾಗಿ ಹೋಗುತ್ತಿದ್ದೆವು. ಹೀಗೆ ಒಂದು ಮೇಳದ ಆಟಕ್ಕೆ ನಾವು ಹೊರಟೆವು.

ಆಟದ ದಿನ ಮನೆಯಲ್ಲಿ ಊಟ ಮಾಡಿ ಹೊರಟರೆ ಮತ್ತೇನೂ ಹೊರಗಿನ ತಿಂಡಿಗಳಿಲ್ಲ. ಮೇಳದಲ್ಲಿ ಪರಿಚಯಸ್ಥರು ಇರುವುದರಿಂದ ಚೌಕಿಗೆ ಒಂದು ಭೇಟಿ. ಅವರ ಲೆಕ್ಕದಲ್ಲಿ ಒಂದು ಚಾಯ. ಹೋಗುವುದೂ ಹಾಗೆಯೇ. ತೆಂಗಿನಗರಿಯ ದೊಂದಿಯನ್ನು ಹಿಡಿದುಕೊಂಡು ಹೊರಟರೆ ಕಾಡಿನ ದಾರಿಯಾಗಿ ಸುಮಾರು ೮ ಮೈಲಿ ನಡೆಯಬೇಕು. ನಿನ್ನಪ್ಪನೂ ಭೂತ ಪಿಶಾಚಿ ಇತ್ಯಾದಿ ಭಯವಿಲ್ಲದೇ ಕತೆ ಹೇಳುತ್ತಾ ಸಾಗುತ್ತಿದ್ದ. ನಾನೂ ಅವನಷ್ಟೇ ಆಟ ನೋಡಿದ್ದರೂ ಸುಬ್ಬಣ್ಣನ ಭೀಮನೋ, ತಿಮ್ಮಣ್ಣನ ಕೃಷ್ಣನೋ ನಿನ್ನಪ್ಪನೇ ಆಗಿ ವಿಜೃಂಭಿಸಿ ಬಿಡುತ್ತಿದ್ದ. ನನಗೂ ೮ ಮೈಲಿ ನಡೆಯುವ ಅರಿವೇ ಆಗುತ್ತಿರಲಿಲ್ಲ

ಹೀಗೇ ಆಗಿರಬಹುದು ಎನ್ನುವ ಕತೆಗಳು ತುಂಬಾ ಇವೆ, ಉದಾಹರಣೆಗೆ ನಮ್ಮ ತೋಟಕ್ಕೆ ಕೆಲಸಕ್ಕೆ ಬರುತ್ತಿದ್ದ ತಿಮ್ಮಪ್ಪ ಹೇಳುತ್ತಿದ್ದ ಕೊಳ್ಳಿದೆವ್ವಗಳ ಕತೆಗೂ ಒಂದು ತಾರ್ಕಿಕವಾದ ಗ್ಯಾರಂಟೀ ಎನ್ನುವಂತೆ ಕಾರಣ ತಿಳಿಸಿದ್ದ. ತಿಮ್ಮಪ್ಪನ ಮನೆ ನಮ್ಮ ಮನೆಯ ಮೇಲೆ ಅಂದರೆ ಕಾಡಿನ ದಾರಿಯೂ ಮಣ್ಣಿನ ರೋಡೂ ಸೇರುವ ದಾರಿಯ ಅಂಚಿನಲ್ಲೇ ಇತ್ತು. ಯಾವುದೋ ದಿನ ಅವನು ರಾತ್ರಿ ಹನ್ನೆರಡು ಗಂಟೆಗೆ ಬೆಂಕಿ ನೋಡಿದನಂತೆ. ಒಂದಿದ್ದದ್ದು ಎರಡಾದಂತೆ ಎರಡು ನಾಲ್ಕಾದಂತೆ ಹೀಗೇ. ಅದೇ ಹೆದರಿಕೆಯಲ್ಲಿ ಅಪ್ಪನಲ್ಲೂ ಹೇಳಿದ್ದ. ಹೀಗೇ ಸ್ವಲ್ಪ ದಿನಗಳು ಸರಿದಂತೆ ಇದು ಪುನರಾವರ್ತನೆಯಾಯಿತು. ಆಗ ನಿಜವಾಗಿಯೂ ಭಯಭೀತನಾದ ತಿಮ್ಮಪ್ಪ. ಏನು ಮಾಡುವುದು ಎಂದು ಇದ್ದವರನ್ನೆಲ್ಲಾ ಕೇಳುತ್ತಿದ್ದ. ಏನು ಮಾಡಿದ ಗೊತ್ತಿಲ್ಲ. ಆದರೆ ನಿನ್ನಪ್ಪ ಅದನ್ನೆಲ್ಲಾ ಅಲ್ಲಗಳೆಯುತ್ತಿದ್ದ.

ಆಟಕ್ಕೆ ಹೋಗುತ್ತಿರಬೇಕಾದರೆ ಹೀಗೆ ಹೇಳಿದ. ಈ ದೊಂದಿಯ ಬೆಳಕಿನಲ್ಲಿ ಹೋಗುವಾಗ ಒಬ್ಬ ಇನ್ನೊಬ್ಬನಿಗೆ ದೊಂದಿ ಹಚ್ಚಲು ನೆರವಾಗುತ್ತಿದ್ದ. ಎಲ್ಲಿಂದಲೋ ಗುಂಪಾಗಿ ಬಂದು ನಂತರ ತಮ್ಮ ತಮ್ಮ ಹಾದಿ ಹಿಡಿಯುವವರು ಒಂದು ದೊಂದಿಯಿಂದ ಹಚ್ಚಿಕೊಳ್ಳುವ ಬೆಂಕಿಗೆ ದೂರದಲ್ಲಿ ನೋಡಿದ ಇಂತಹ ಜನರು ಕೊಟ್ಟ ವಿಪರೀತ ಅರ್ಥ ಇದು ಎಂದು ನನಗೆ ಹೇಳಿದ. ಮತ್ತೆ ನಾನೂ ಕೊಳ್ಳಿದೆವ್ವವಾಗಲಿ ಪಿಶಾಚಿಯಾಗಲಿ ನೋಡಿದ್ದಿಲ್ಲ. ಆದರೆ ನಿನ್ನಪ್ಪನಿಗೆ ವಾಸ್ತವದಲ್ಲಿ ಹೆದರಿಕೆಯೂ ಇರಲಿಲ್ಲ ಎನಿಸುತ್ತದೆ. ನನಗೆ ಆ ಹೆದರಿಕೆ ಇತ್ತು.

ಅಂದಿನ ಆಟಕ್ಕೆ ಹೋದೆವು. ಆಟ ಚೆನ್ನಾಗಿರಲಿಲ್ಲ. ಪ್ರಮುಖರು ಕೈಕೊಟ್ಟಿದ್ದರು. ನಮ್ಮ ಊರಾದರೆ ಬರುತ್ತಿದ್ದರು ಎಲ್ಲ ಕಲಾವಿದರು. ಜನರೂ ಅಷ್ಟಾಗಿ ಇರಲಿಲ್ಲ. ಹನ್ನೆರಡು ಘಂಟೆಯ ಹೊತ್ತಿಗೆ ವಾಪಸ್ಸು ಹೊರಡೋಣ ಎಂದು ಇಬ್ಬರೂ ಹೊರಟೆವು. ದೊಂದಿ ಹಚ್ಚಿಕೊಳ್ಳಲಿಲ್ಲ. ಮನೆಗೆ ಬೇಗ ಬರುವಂತೆಯೂ ಇಲ್ಲ. ಸುಮಾರು ೪-೫ ಘಂಟೆ ಆಗದೇ ಮನೆಗೆ ಬಂದರೆ ನೀವು ಇನ್ನು ಯಕ್ಷಗಾನಕ್ಕೆ ಹೋಗುವುದೇ ಬೇಡ ಎಂಬ ತೀರ್ಮಾನವೂ ಆದೀತು. ನಡೆಯುತ್ತಾ ನಡೆಯುತ್ತಾ ಬಂದು ಸುಮಾರು ಮನೆಗೆ ೨ ಕಿಲೋಮೀಟರ್ ದೂರದ ವರೆಗೆ ತಲುಪಿದೆವು. ಅಲ್ಲಿ ಸ್ವಲ್ಪ ಮಲಗುವುದು. ಬೆಳಕು ಬಂದಂತೆ ಮನೆಗೆ ಹೋಗುವುದೆಂದು ತೀರ್ಮಾನ ಮಾಡಿ ಅಲ್ಲಿಯೇ ಇದ್ದ ಬಂಡೆಯ ಮೇಲೆ ನಿದ್ದೆ ಮಾಡುವುದಕ್ಕೆ ಸಿದ್ಧತೆ ಮಾಡಿದೆವು.

ನಿದ್ದೆ ಬರುವಂತಾಗುತ್ತಿತ್ತು, ಹಾಗೇ ಎಚ್ಚರಾಗುತ್ತಿತ್ತು. ಕ್ರಮೇಣ ಒಂದು ಕೀಚಲು ಧ್ವನಿ ಇಬ್ಬರನ್ನೂ ಗಾಬರಿಗೊಳಿಸಿತು. ಅದೇನೋ ಕೀಚ್ ಕೀಚ್ ಎಂದಂತೆ, ಯಾರೋ ನಡೆದಂತೆ, ಗೆಜ್ಜೆಯಂತೆ ಕೇಳತೊಡಗಿತು. ನನಗೆ ಅತೀವ ಹೆದರಿಕೆಯಾಗತೊಡಗಿತು. ಬಹುಷಃ ನಿನ್ನಪ್ಪನಿಗೂ, ಆದರೆ ತೋರ್ಪಡಿಸುವದಕ್ಕೆ ಆಗದೆ ಸುಮ್ಮನಿದ್ದ. ಆದರೂ ಒಂದು ಹುಚ್ಚು ಧೈರ್ಯದಲ್ಲಿ ಶಬ್ಧ ಬಂದ ಕಡೆ ಕಲ್ಲನ್ನೆಸೆದ. ಸ್ವಲ್ಪ ಕಡಿಮೆಯಾಯಿತು. ಕೊನೆಗೆ ಶಬ್ಧವಾದಂತೆಲ್ಲಾ ಕಲ್ಲೆಸೆಯುವುದು ಮಜಾ ಕೊಡುತ್ತಿತ್ತು. ಮರುದಿನ, ತನಿಖೆ ಮಾಡಿ, ಈಚಲ ಮರದಲ್ಲಿ ಕಟ್ಟಿದ್ದ ಗೂಬೆಯ ಮರಿಗಳೆಂದು ಕೂಡ ಅಣ್ಣನೇ ಹೇಳಿದ.

ನೀನು ಇದನ್ನು ಮಾಡಲಾರೆ, ಸಣ್ಣವ ಇತ್ಯಾದಿ ಮಾತುಗಳು ಕೆಲವು ಸಲ ಋಣಾತ್ಮಕವಾದರೂ ಧೈರ್ಯವಿದ್ದವನಿಗೆ ಅತ್ಯಂತ ಪ್ರೇರಣೆಯನ್ನೇ ಕೊಡುತ್ತದೆ. ನಾವು ಸಣ್ಣವರಿದ್ದಾಗ ಇಂತಹ ಮಾತುಗಳಲ್ಲೇ ನಾವು ನಮ್ಮ ಮುಂದಿನ ಬಗೆಯನ್ನು ಕಂಡೆವು. ಮರಕ್ಕೆ ಹತ್ತಲಾರ ಇವನು ಎಂದು ಹೇಳುವ ಅಪ್ಪನ ಮಾತಿಗೆ ನಿನ್ನಪ್ಪ ಮರ ಹತ್ತುವುದಕ್ಕೆ ಕಲಿತ. ನಿನ್ನಿಂದಾಗುವುದಿಲ್ಲ ಬಿಡೋ ಎಂದು ಹೇಳಿದ ಹೆಚ್ಚಿನ ಕೆಲಸವನ್ನು ನಿನ್ನಪ್ಪ ಮಾಡುತ್ತಿದ್ದುದರಿಂದಲೋ ಏನೋ ನಮ್ಮಲ್ಲೇ ಆತನಿಗೆ ವಿಶೇಷ ಗೌರವ ಸಿಗುತ್ತಿದ್ದುದು.

ಇನ್ನು ನಿದ್ದೆ ಬರುವಂತಿಲ್ಲ. ಸುಮ್ಮನೇ ನಡೆಯೋಣವೆಂದು ಮೆಲ್ಲನೆ ನಡೆಯುತ್ತಾ ಬಂದೆವು. ನಾವು ಅಂದು ಮಾಡಿದ ಒಂದು ತಪ್ಪೆಂದರೆ ದೊಂದಿಯನ್ನು ಹಚ್ಚದೇ ಅಲ್ಲಿಯೇ ಎಸೆದು ಬಂದಿರುವಂತಹದ್ದು. ಸುಮಾರು ೧ ಕಿಲೋಮೀಟರಿನಷ್ಟು ಹಾದಿಯನ್ನು ಕಾಡಿನ ಕಪ್ಪಿನ ಮಧ್ಯೆ ನಡೆಯಬೇಕಿತ್ತು. ಉಳಿದ ದಾರಿಯಾದರೋ ಚಂದ್ರನ ಬೆಳಕಿಗೆ ಸಾಮಾನ್ಯವೆಂಬಂತೆ ಕಾಣಿಸುತ್ತಿತ್ತು. ಏನಾದರಾಗಲಿ ಎಂದು ಕಾಡಿನ ದಾರಿ ಇಳಿಯುತ್ತಾ ಬಂದೆವು. ದನಗಳು ಮಾಡಿರುವ ದಾರಿಯದು. ಹೀಗೇ ಮುಂದುವರೆಯುತ್ತಾ ಬಾಬು ಸೋಜರ ಮನೆಯ ಮೇಲಿನ ದಾರಿಯವರೆಗೆ ತಲುಪಿದಾಗ ಬಾಬು ಸೋಜರ ಮನೆಯ ಬಳಿ ಬೆಂಕಿ ಕಂಡಂತಾಯಿತು.

ನಮ್ಮಲ್ಲಿ ಮೊದಲು ತೋಟಕ್ಕೆ ಹಾಕಲು ಬೂದಿಗಾಗಿ ಹೊಲದ ಮಧ್ಯದಲ್ಲಿ ಕಸದ/ಗೊಬ್ಬರದ ದೊಡ್ಡ ರಾಶಿಯನ್ನು ಮಾಡಿ ಅದಕ್ಕೆ ಬೆಂಕಿ ಕೊಡುತ್ತಿದ್ದರು. ಅದನ್ನೂ ಬಹಳ ಒಪ್ಪವಾಗಿ ಮಾಡುತ್ತಿದ್ದರು. ಎಲ್ಲಾ ಸಣ್ಣ ಪೊದೆಗಳನ್ನು ಕಡಿದು, ತರಗೆಲೆಗಳನ್ನು ಪೇರಿಸಿ, ಗೊಬ್ಬರ ಒಣಗಿದ್ದಲ್ಲಿ ಅದನ್ನೂ ಅದೇ ರಾಶಿಗೆ ಹಾಕಿ ಅದರ ಮೇಲೆ ಮಣ್ಣನ್ನು ಹಾಕಿ ಅದಕ್ಕೆ ಬೆಂಕಿ ಕೊಡುತ್ತಿದ್ದರು. ಸೂಟುಮಣ್ಣು ಎನ್ನುತ್ತಾರೆ ಅದನ್ನು. ನಿನಗೂ ಗೊತ್ತಿರಬಹುದು. ಆದರೆ ನಾವು ಹಾಕುತ್ತಿದ್ದ ಸೂಟುಮಣ್ಣಿನ ಬೆಂಕಿ ಸುಮಾರು ದಿನಗಳವರೆಗೆ ಅಂದರೆ ವಾರಗಟ್ಟಲೇ ಉರಿಯುತ್ತಿತ್ತು.

ಇದೇ ರೀತಿಯ ಬೆಂಕಿಯಾಗಿರಬಹುದು ಎಂದು ನಾವು ಅಂದಾಜಿಸಿದರೂ ಅದರಲ್ಲೇನೋ ಕೌತುಕವಿದೆ ಎಂದು ಬಾಬು ಸೋಜರ ಹೊಲದ ಬಳಿ ಬಂದೆವು. ಹತ್ತಿರಕ್ಕೆ ಬಂದು ನೋಡಿದಾಗ ಆ ಸೂಟುಮಣ್ಣಿನ ರಾಶಿ ಬಿದ್ದಂತಿತ್ತು. ಬೆಂಕಿ ಎಲ್ಲಾ ಕಡೆ ಚಲ್ಲಾಪಿಲ್ಲಿಯಾಗಿತ್ತು. ಸೂಟುಮಣ್ಣಿಗೆ ಸುತ್ತ ಬಂದಾಗ ಅಲ್ಲಿ ಬಿದ್ದಿದ್ದ ಬಾಬು ಸೋಜರನ್ನು ಕಂಡೆವು.

ನಮಗೆ ಆತಂಕವಾಯಿತು. ಸುಟ್ಟ ಗಾಯಗಳಿಂದ ಪ್ರಜ್ಞಾಹೀನರಾಗಿ ಬಿದ್ದಿದ್ದ ಬಾಬು ಸೋಜರನ್ನು ಎಳೆದು ಹಾಕಿದೆವು. ನಂತರ ತೋಟದ ಬದಿಯ ಸುರಂಗದ ವರೆಗೆ ಹೋಗಿ ನೀರು ತಂದು ಚಿಮುಕಿಸಿದೆವು. ನರಳುತ್ತಾ ಬಾಬುಸೋಜರು ಎದ್ದು ಕುಳಿತು ನಮ್ಮನ್ನು ಗುರುತಿಸಿದರು. ಗುರುತಿಸಿದ ಕೂಡಲೇ ತಲೆಕೆಳಗೆ ಮಾಡಿ ನಿಮಗೆ ಇಲ್ಲೇನು ಕೆಲಸ? ಮನೆಗೆ ಹೋಗಿ. ನೀವು ಯಾಕೆ ಈ ಅಪರಾತ್ರಿಗೆ ಇಲ್ಲಿಗೆ ಬಂದಿರಿ ಎಂದು ನಮ್ಮನ್ನೇ ಗದರಿಸಿ ಓಡಿಸಿದರು. ನಾವು ಅಲ್ಲಿಂದ ನೇರ ಮನೆಗೆ ಬಂದು ಜಗಲಿಯಲ್ಲೇ ಮಲಗಿದೆವು. ನಿದ್ದೆಯ ಬದಲು ಏನಕ್ಕೆ ಬಾಬು ಸೋಜರು ಬೆಂಕಿಗೆ ಬಿದ್ದರು ಎಂದೇ ಯೋಚಿಸುತ್ತಾ ಬೇರೆ ಬೇರೆ ಸಾಧ್ಯತೆಗಳನ್ನು ಚರ್ಚಿಸುತ್ತಿದ್ದೆವು.

ಸುಮಾರು ಒಂದು ವಾರದ ಬಳಿಕ ನಿನ್ನಪ್ಪ ನನ್ನಲ್ಲಿ ಈ ಕತೆ ಹೇಳಿದ. ಆ ದಿನ ಬಾಬು ಸೋಜರು ಮನೆಯಲ್ಲೇ ಮಾಡಿದ್ದ ಗೇರುಹಣ್ಣಿನ ಸಾರಾಯಿಯನ್ನು ಕಂಠಪೂರ್ತಿ ಕುಡಿದಿದ್ದರಂತೆ. ಮನೆಯಲ್ಲಿ ನಿದ್ದೆ ಬಾರದೇ ಹೊರಳಾಡಿ ಹೊಲದ ಬಳಿ ಬಂದರಂತೆ. ಸೂಟುಮಣ್ಣಿನ ಬೆಂಕಿಯ ಜೊತೆ ಆಟವಾಡುತ್ತಾ ಅದೇನೋ ಹಿಡಿದು ಎಳೆದರಂತೆ. ಆಗ ಇಡೀ ಸೂಟುಮಣ್ಣಿನ ಗುಡ್ಡವೇ ಜಾರಿ ಬಿದ್ದಿತು. ಆ ಬೆಂಕಿಯ ಕಾವಿಗೆ ಒಮ್ಮೆಲೇ ಪ್ರಜ್ಞೆ ತಪ್ಪಿ ಅಲ್ಲಿಯೇ ಬಿದ್ದರು. ಪುಣ್ಯಕ್ಕೆ ಸ್ವಲ್ಪ ಹೊರಗೆ ಬಿದ್ದಿದ್ದರಿಂದ ಮತ್ತೆ ಬೆಂಕಿ ಆ ಭಾಗದಲ್ಲಿ ಹರಡದೇ ಇದ್ದುದರಿಂದ ಏನೂ ದೊಡ್ಡ ಗಾಯಗಳಾಗದೇ ಬದುಕಿದರು. ನೀವೆಲ್ಲಾದರೂ ಅವರನ್ನು ಮನೆಗೆ ತಲುಪಿಸುವುದು ಅಥವಾ ಇನ್ನೊಂದು ಮಾಡುವುದು ಏನಾದರೂ ನಿಮ್ಮ ಮನೆಯವರಿಗೆ ತಿಳಿದರೆ ಎಂಬ ಉದ್ದೇಶದಿಂದ ಗದರಿ ಕಳುಹಿದರು.

ಹೀಗೆ ನಮ್ಮ ಸಹಾಯಕ್ಕೆ, ಬಾಬು ಸೋಜರನ್ನು ಬೆಂಕಿಯಿಂದ ಪಾರುಮಾಡಿದ್ದೇವೆ ಎನ್ನುವ ಅಭಿಮಾನಕ್ಕೆ ಸೋಲಾಗಲಿಲ್ಲ. ಆದರೂ ಬಾಬು ಸೋಜರು ಮೊದಲಿನಂತೆಯೇ ನಮ್ಮ ಜೊತೆ ಎಷ್ಟು ಬೇಕೋ ಅಷ್ಟೇ ಮಾತನಾಡುತ್ತಿದ್ದರು. ನಾವು ಏನೋ ಮಾಡಿದ್ದೇವೆ ಎನ್ನುವ ನಮ್ಮ ಹೆಮ್ಮೆಗೆ ಸೊಪ್ಪು ಹಾಕುತ್ತಿಲ್ಲವೆಂದು ನಮಗೆ ಬೇಸರವಿತ್ತು. ಇದೆ.

(* ಸೂಟು ಮಣ್ಣು : ದಕ್ಷಿಣ ಕನ್ನಡ, ತುಳುವರು ಬಳಸುವ ಪದ. ಸೂ=ಬೆಂಕಿ, ಬೆಂಕಿಯಲ್ಲಿ ಮಣ್ಣು ಸುಡುವುದು ಎಂದು)

Thursday 18 October 2012

ಕತೆ- ರಾಜಮ್ಮನೂ ಊರಿನ ಕೆರೆಯೂ

ಅಕ್ಕಮ್ಮಾ, ನಂಗೆ ಚಿಂತೆ ಏನೇನೂ ಇಲ್ಲ ಕಣಮ್ಮ. ಮೊದಲು ಮಗ ಬರ್ಲಿ ಪೇಟೆಯಿಂದ, ಮದ್ವೆ ಆದ್ಮೇಲೆ ಇರೋ ಎರಡೆಕ್ರೆ ಜಮೀನು ನೋಡ್ಕಂಡು ಆರಾಮಾಗಿರ್ತಾನಂತೆ. ಸೊಸೆಯಾಗೋಳಂತೂ ಮೊದಲೇ ಪರಿಚಯದೋಳಲ್ವೇ, ಸುಧಾರ್ಸ್ಕಂಡು ಹೋಗ್ತಾಳೆ. ಈ ಗೌರಿ ಹಬ್ಬ ಮುಗಿದ ಕೂಡ್ಲೇ ಮದ್ವೆ ಮಾಡಿ ಮುಗ್ಸೋದು ... ಹೀಗೇ ಸಾಗಿತ್ತು ರಾಜಮ್ಮನ ಮಾತುಗಳು.
ಸ್ವಂತ ಊರು ಬೇರೆ ಆದರೂ ಸುಮಾರು ಮೂವತ್ತೈದು ವರ್ಷಗಳಿಂದ ಈ ಮನೆ ಈ ಹೊಲ, ಒಂದಿಪ್ಪತ್ತು ತೆಂಗಿನ ಮರಗಳೊಂದಿಗೆ ಆರಾಮವಾದ ಬದುಕು ರಾಜಮ್ಮನದು.ಕುಡಿದೇ ಟ್ರಾಕ್ಟರು ಓಡಿಸುತ್ತಿದ್ದ ಗಂಡನ ಸಂಪಾದನೆಯು ಮನೆಗಿರಲಿಲ್ಲದಿದ್ದರೂ ತೋಟದ ಆದಾಯದಿಂದಲೇ ಸರಕಾರಿ ಶಾಲೆಯಲ್ಲಿ ಪಿಯುಸಿ ತನಕ ಓದಿಸಿದ್ದಳು ಮಗನನ್ನು. ಮಗನೂ ಕಾರ್ ಡ್ರೈವರು ಈಗ ಬೆಂಗಳೂರಲ್ಲಿ. ಸುಮಾರು ೧೦ ವರ್ಷಗಳಿಂದ ಅಂದರೆ ಗಂಡನ ಮರಣಾನಂತರ ಏಕಾಂಗಿ ಜೀವನ ಒಗ್ಗಿಹೋಗಿತ್ತು ರಾಜಮ್ಮಳಿಗೆ, ಇದೀಗ ಮಗನ ಮದುವೆ ಮಾಡಿಸಿ ನಂತರ ಮಗನನ್ನೂ ಸೊಸೆಯನ್ನೂ ಮನೆಯಲ್ಲಿರಿಸಬೇಕೆಂಬ ಮಹದಾಸೆ ರಾಜಮ್ಮಳಿಗೆ.

ರಾಜಮ್ಮ ಏನೇನೂ ಓದಿರಲಿಲ್ಲದಿದ್ದರೂ ಒಳ್ಳೆಯ ವ್ಯವಹಾರಸ್ಥೆ. ಅವಳೇ ನಂಬಿರುವ ದೇವರುಗಳು ಅಪಾರವಾದ ಸಮಯೋಚಿತ ಬುದ್ಧಿಶಕ್ತಿಯನ್ನ ಕೊಟ್ಟಿದ್ದರು. ಹೀಗಾಗಿ ಯಾವುದೇ ವ್ಯವಹಾರದಲ್ಲಿ ರಾಜಮ್ಮ ನಷ್ಟ ಅನುಭವಿಸುತ್ತಿರಲಿಲ್ಲ.ತನ್ನ ತರಕಾರೀ ಬೆಳೆಗಳನ್ನು ಸರಿಯಾದ ಬೆಲೆಗೆ ಮಾರಿ ಅದರಿಂದ ಬಂಡವಾಳದ ಸರಿಯಾದ ವಿನಿಯೋಗ ಮಾಡುವ ಕಲೆ ಹುಟ್ಟಿನಿಂದಲೇ ಬಂದಿರಬೇಕು ರಾಜಮ್ಮನಿಗೆ. ಸ್ವಂತ ಬೋರ್’ವೆಲ್ ಕೊರೆಸಿ ಒಳ್ಳೆಯ ನೀರು ಸಿಕ್ಕಿದಾಗಂತೂ ರಾಜಮ್ಮನನ್ನು ಎಲ್ಲರೂ ಮೆಚ್ಚಿದವರೇ. ಸ್ವಂತ ಮನೆ, ರಸ್ತೆಯ ಸಮೀಪ ಇದ್ದುದರಿಂದ ಹೆಚ್ಚಾಗಿ ಒಳ್ಳೆಯ ಸಂಪರ್ಕವಿತ್ತು.

ಬೇಡ ಬೇಡ ಎಂದು ಮನದಲ್ಲಿ ಅಂದುಕೊಂಡರೂ ಮಗನನ್ನು ಬೆಂಗಳೂರಿಗೆ ಕಳುಹಿಸಲು ಗಟ್ಟಿ ಮನಸ್ಸು ಮಾಡಿದ್ದಳು. ಈಗ ೧೦-೧೫ ಸಾವಿರ ದುಡಿಯುವ ಮಗ ಮೇಲಿನ ಮನೆಯ ಅಕ್ಕಮ್ಮನ ಮಗನಿಗಿಂತ ಹೆಚ್ಚಿನವ. ಹಾಗಾಗಿ ಅಕ್ಕಮ್ಮನೊಂದಿಗೆ ತನ್ನ ಅಂತಸ್ತನ್ನು ಕಾಯ್ದುಕೊಂಡಳು ರಾಜಮ್ಮ.
--
ಊರು ಬೆಳೆಯುತ್ತಿರಬೇಕಾದರೆ ನೀರು ಜಾಸ್ತಿ ಬೇಕಲ್ಲವೇ?. ಯಾವತ್ತೂ ನೀರಿನ ಕೊರತೆ ಇರದಿದ್ದ ಊರಿಗೆ ಇತ್ತೀಚಿನ ವರ್ಷಗಳಲ್ಲಿ ಮಳೆಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತಾ ಬಂದಿದೆ. ಸರಕಾರವೂ ೩-೪ ವರ್ಷದಿಂದ ಗಂಭೀರ ಚಿಂತನೆಗಳನ್ನು ಮಾಡಿ ಕೊನೆಗೂ ಚುನಾವಣೆಯ ಕಾಲ ಸಮೀಪಿಸಿದಾಗ ಆ ಊರಿಗೊಂದು ಕೆರೆಯನ್ನೂ ಅದರ ಕಾಮಗಾರಿಯನ್ನೂ ಶುರುಮಾಡುವ ಕಾರ್ಯಕ್ಕೆ ಗಣನೀಯ ಕೊಡುಗೆ ಕೊಡುತ್ತಾ ಬಂತು. ಇತ್ತೀಚೆಗೆ ಅಂದರೆ ಸುಮಾರು ೭-೮ ತಿಂಗಳುಗಳ ಹಿಂದೆ ಕೊನೆಗೂ ಕೆರೆಗೊಂದು ರೂಪುರೇಶೆ ಅಂದಾಜು ವಿಸ್ತೀರ್ಣ ಇತ್ಯಾದಿಗಳ ಚರ್ಚೆಯಾಗಿ ಸುಮಾರು ಎರಡು ಹೆಕ್ಟೇರ್ ಜಾಗದಲ್ಲಿ ಕೆರೆಯಾಗುವುದೆಂದು  ನಿರ್ಧಾರವಾಗಿ ಕಾರ್ಯರೂಪಕ್ಕೂ ಬಂತು. ಊರಿನ ಶಾಲೆಯಲ್ಲೇ ಕಲಿತು ಊರಿನ ಬಗ್ಗೆ ಬಹಳ ಅಭಿಮಾನವನ್ನು ಹೊಂದಿದ ನಟರಾಜಪ್ಪ ಎನ್ನುವವನೇ ಪ್ರಧಾನ ಇಂಜಿನೀಯರ್ ಆದ.

ಕೆರೆಯ ಸುತ್ತಲೂ ಕಲ್ಲಿನ ಕಟ್ಟೆಯಂತೆ ಕಟ್ಟಿ ಕೆರೆಗೆ ಅಂದವನ್ನು ಕೊಡುವುದಕ್ಕೆ ನಡುಗಡ್ಡೆ. ಮುಂದೆ ಬೋಟಿಂಗ್ ಮುಂತಾದ ವ್ಯವಸ್ಥೆ ಮಾಡುವುದಕ್ಕೆ ಅನುಕೂಲವಾಗುವಂತೆ ಎಲ್ಲಾ ರೀತಿಯಿಂದಲೂ ಸುಸಜ್ಜಿತಗೊಳಿಸಲಾಯಿತು.
ಇದೆಲ್ಲಾ ವಿಶೇಷವಾಗಿ ಆನಂದ ನೀಡಿದ್ದು ರಾಜಮ್ಮನಿಗೆ ಎಂದರೆ ಆಶ್ಚರ್ಯವಾಗಲಿಕ್ಕಿಲ್ಲ. ಬೋರ್’ವೆಲ್ ನೀರು ಕ್ರಮೇಣ ಕಡಿಮೆಯಾಗುತ್ತಾ ಬಂದಿದ್ದು ರಾಜಮ್ಮನ ಗಮನಕ್ಕೆ ಬಂದಿತ್ತು. ಈ ಕೆರೆಯಾದರೆ ನೀರು ಸಮೃದ್ಧಿಯಾಗುವುದರಲ್ಲಿ ಸಂದೇಹವಿರಲಿಲ್ಲ ರಾಜಮ್ಮನಿಗೆ.

ಹಳೆ ಕೆರೆಯ ಹೊಳೆತ್ತಲಾಯಿತು. ಕಟ್ಟೆ ಕಟ್ಟಲಾಯಿತು. ಈಗ ನೀರು ಬಿಡುವುದೆಂದು ತೀರ್ಮಾನವಾಯಿತು. ಹೀಗೆ ಒಂದು ದಿನ ನದಿಯ ಕಾಲುವೆಯಿಂದ ನೀರನ್ನು ಕೆರೆಗೆ ಹರಿಸಲಾಯಿತು. ಸುಮಾರು ಎರಡು ತಿಂಗಳು ನೀರನ್ನು ಹರಿಸಿದ್ದರಿಂದ ಹಸಿದಿದ್ದ ಭೂಮಿ ಬೇಕಾದಷ್ಟನ್ನು ಕುಡಿದು ಉಳಿದಿದ್ದನ್ನು ಮೈತುಂಬಾ ಹೇರಿಕೊಂಡಳು. ನೀರು ದಿನೇ ದಿನೇ ಕೆರೆಯನ್ನು ಸಾಗರದಂತೆ ಕಾಣಿಸಲು ಪ್ರಯತ್ನಮಾಡಿತು. ಊರು ತಂಪಾಯಿತು. ಕೆರೆ ನೀರು ತುಂಬಿ ಊರಿಗೊಂದು ವಿಶಿಷ್ಟ ಮೆರುಗು ತಂದುಕೊಟ್ಟಿತು. ನಟರಾಜಪ್ಪನ ಮನೆಗೆ ಕಾರೂ ಬಂತು.
-
ದಿನವು ನಿನ್ನೆಯಂತೇ ಇದ್ದರೆ ಭೂಮಿ ಚಲನಶೀಲ ಎನ್ನುವುದು ಸುಳ್ಳಾಗುತ್ತಿತ್ತೇನೋ ಅದಕ್ಕೆಂದೇ ರಾಜಮ್ಮನ ಬೋರು ನೀರು ತುಂಬಿ ಹರಿಯತೊಡಗಿತು. ಎಲ್ಲೆಲ್ಲಿಯೂ ನೀರು. ರಾಜಮ್ಮ ಖುಷಿಯಿಂದ ಸ್ವಲ್ಪದಿನ ಊರಿನವರೊಂದಿಗೆ ಅಂತರ ಕಾಯ್ದುಕೊಂಡಳು. ಹೀಗೇ ಆಗುತ್ತದೆ ಎಂದು ಯಾವುದನ್ನೂ ಹೇಳುವ ಹಾಗಿಲ್ಲವಲ್ಲ. ಆ ದಿನ ಬೆಳಗ್ಗೆ ರಾಜಮ್ಮ ಎದ್ದು ಕಣ್ಣುಜ್ಜುತ್ತಾ ಹೊರಗೆ ಬರುತ್ತಿರಬೇಕಾದರೆ ಜಾರಿ ಬಿದ್ದಳು. ಯಾವ ಪುಣ್ಯದಿಂದಲೋ ರಾಜಮ್ಮನಿಗೆ ಏನೂ ಆಗಲಿಲ್ಲ.ಹೊರಗೆ ಬಂದಾಗ ಜಮೀನಿನಲ್ಲಿ ನೀರು ಹಾಯಿಸಿದಂತೆ ಇತ್ತು.ಅದೂ ರಾಜಮ್ಮ ಮಾಡಿದ ಕಾರ್ಯವಾಗಿರಲಿಲ್ಲ. ಆದರೆ ಮನಸ್ಸಿಗೆ ಒಂದು ಆಘಾತ!

ಇದೇಕೆ ಹೀಗೆ, ನೆಲವು ಬೆವರಿದಂತೆ ನೆಲದ ಮೇಲೆಲ್ಲಾ ನೀರು ಎಂದು ತಿಳಿಯುವುದಕ್ಕೆ ರಾಜಮ್ಮನಿಗೆ ಅಕ್ಕಮ್ಮನ ಸಹಾಯವೇ ಬೇಕಾಯಿತು. ಮನೆಯು ಕೆರೆಯ ಬದಿಯ ರಸ್ತೆಯ ಕೆಳಗಿದ್ದುದರಿಂದ ಕೆರೆಯ ನೀರೇ ಅದು ಎಂದು ಅಕ್ಕಮ್ಮ ಹೇಳಿದ್ದು ರಾಜಮ್ಮನ ಹೊಟ್ಟೆಯನ್ನು ತಲುಪಿ ನೋವಿನ ಬೆಂಕಿಯನ್ನು ಹುಟ್ಟುಹಾಕಿತು. ಮನೆಯಲ್ಲೆಲ್ಲಾ ನೀರಿನ ಸಣ್ಣ ಸಣ್ಣ ಹನಿಗಳನ್ನು ಒರೆಸಿ ಒರೆಸಿ ಸಾಕಾಗುತ್ತಿತ್ತು ರಾಜಮ್ಮನಿಗೆ, ನೀರು ತಂಪೆನಿಸುತ್ತಿರಲಿಲ್ಲ.

ಮಗ ಬೆಂಗಳೂರಿನಿಂದ ಬಂದಮೇಲೆ ಮನೆಯನ್ನು ಸೂಕ್ಷ್ಮವಾಗಿ ಗಮನಿಸತೊಡಗಿದ. ಕೆರೆಯ ನೀರಿನ ಮಟ್ಟವು ಮನೆಯ ಗೋಡೆಯ ಎತ್ತರವಿರುವುದನ್ನು ಗಮನಿಸಿ ಮನೆ ಅಂಜಿಕೆಯಾಗತೊಡಗಿತು. ರಾಜಮ್ಮ ಅದೇ ಕಾಲಕ್ಕೆ ಮಗನ ಮದುವೆಯ ವಿಚಾರವನ್ನೂ ಎತ್ತಿದ್ದರಿಂದ ಗೊಂದಲಕ್ಕೆ ಬಿದ್ದ ಮಗ. ಒಪ್ಪಿದ. ಕೊನೆಗೆ ಹುಡುಗಿ ಮತ್ತವರ ಸಂಬಂಧಿಕರು ಮನೆಗೆ ಬಂದು ಹೋದರು. ಹೋಗುವಾಗ ಮಗನ ಬಳಿ ಏನೋ ಹೇಳಿದ್ದು, ಮಗನ ಮುಖ ಕಪ್ಪಿಟ್ಟಿದ್ದು ಗಮನಿಸಿದ್ದಳು ರಾಜಮ್ಮ.

ಅದೇ ದಿನ ರಾಜಮ್ಮನಿಗೆ ಹೃದಯಾಘಾತವಾಗುವುದು ಪ್ರಕೃತಿಗೆ ವಿರೋಧವಿತ್ತೇನೋ, ಹಾಗಾಗಲಿಲ್ಲ. ಸೊಸೆಯೆಂದೇ ಅಂದುಕೊಂಡಿದ್ದ ಹುಡುಗಿ ಈ ಮನೆಗೆ ಬರುವುದಿಲ್ಲವೆನ್ನುವ ಮಾತಿಗಿಂತ ಮಗ ಹೇಳಿದ ಮಾತು ಇನ್ನೂ ಕಠೋರವಾಗಿತ್ತು. ಎರಡೆಕರೆ ಜಮೀನು ಮತ್ತೆ ಮನೆಯನ್ನು ಮಾರಿ ಬೇರೆ ಕಡೆ ಹೋಗೋಣ ಎಂದು ಹೇಳಿದ್ದ ಮಗ. ಕಾರಣ ಜಮೀನು ನೀರಿನಿಂದ ಕೊಳೆತಂತಾಗಿ ಮುಂದೆ ಬೆಳೆಯಾಗಲೀ ಕಳೆಯೂ ಬೆಳೆಯುವುದು ಸಾಧ್ಯವಿಲ್ಲ ಎನ್ನುವುದೇ ಆಗಿತ್ತು. ಯಾವುದೋ ದಿನ ನೀರಿನ ಅಂಶದಿಂದ ಮಣ್ಣಿನ ಗೋಡೆ ಬೀಳುವುದು ಖಚಿತವೆಂದೂ ಮಗನ ವಾದ. ಆ ರಾತ್ರಿ ಮಗ ಸ್ನೇಹಿತನ ಮನೆಗೆ ಹೊರಟ. ಅಲ್ಲಿಂದ ಬೆಂಗಳೂರಿಗಂತೆ!

ತಾನು ೧೦-೧೨ ವರ್ಷಗಳಿಂದ ಕಷ್ಟಪಟ್ಟು ಬೆಳೆಸಿದ ತೋಟ, ಮನೆ, ಅದಕ್ಕಿದ್ದ ಬೆಲೆ ಇದೆಲ್ಲವನ್ನೂ ಒಂದು ಸಣ್ಣ ಕಾಲದಲ್ಲಿ ನೀರಿನ ಗುಳ್ಳೆಯಂತೆ ಮಾಡಿದ ಶಕ್ತಿಯನ್ನು ಮನಸಾರೆ ಶಪಿಸಿದಳು. ಸಾಧ್ಯವೇ ಇರಲಿಲ್ಲ. ಈ ಮನೆ ಈ ಜಮೀನು ಬಿಟ್ಟು ತಾನು ಎಲ್ಲಿಯೂ ಬದುಕುವುದು ಸಾಧ್ಯವೇ ಇಲ್ಲ. ಈ ವಿಷಯ ನಿಚ್ಚಳವಾಗುತ್ತಾ ರಾಜಮ್ಮನ ಮನಸ್ಸಿನಲ್ಲಿ ಮುಂದಿನ ಕ್ರಿಯೆಯ ಸ್ಪಷ್ಟ ಚಿತ್ರಣ ಮೂಡತೊಡಗಿತು.

ಅದೇ ಕೆರೆಯ ಸುತ್ತಲೂ ನಡೆದುಕೊಂಡು ಬಂದಳು ರಾಜಮ್ಮ. ಕಾಲುವೆಯ ಗೇಟುಗಳ ಬಳಿ ಕಟ್ಟಿದ ಕಟ್ಟೆಯನ್ನು ಗುದ್ದಲಿಯಿಂದ ಕೊಚ್ಚಲಾರಂಭಿಸಿದಳು. ಅಂದಿನ ರಾಜಮ್ಮನ ರಾಕ್ಷಸ ಶಕ್ತಿಗೆ ಕೆರೆಯ ಕಟ್ಟೆ ಸಣ್ಣದಾಗುತ್ತಾ ಬಂತು, ನೀರಿನ ಒತ್ತಡಕ್ಕೂ ರಾಜಮ್ಮನ ಕೆಲಸಕ್ಕೂ ನೀರು ಪ್ರವಾಹದಂತೆ ಕಟ್ಟೆಯನ್ನು ಒಡೆದು ಪ್ರವಹಿಸಿತು. ಆ ಪ್ರವಾಹದಲ್ಲಿ ರಾಜಮ್ಮನ ಗುದ್ದಲಿ ತೇಲಿಹೋಯಿತು, ರಾಜಮ್ಮನೂ ಕೊಚ್ಚಿಹೋದಳು.
-
ಸರಕಾರದ ಕಾಮಗಾರಿ ಕಳಪೆಯೆಂದೂ, ಕೆರೆಯ ಕಟ್ಟೆಯೊಡೆದು ತರಕಾರಿ ಮಾರುವ ರಾಜಮ್ಮಳ ಜೀವಾಪಹರಣವಾಯಿತೆಂದೂ ಪೇಪರುಗಳಲ್ಲಿ ಬಂತು. ಪರಿಹಾರವಾಗಿ ಸಿಕ್ಕಿದ ಲಕ್ಷರೂಪಾಯಿಗಳನ್ನು ರಾಜಮ್ಮನ ಹೆಸರಿನಿಂದ ಮಗ ತೆಗೆದುಕೊಂಡು ಬೆಂಗಳೂರು ನಗರದಲ್ಲು ಲೀಸ್ ಮನೆ ಪಡೆದುಕೊಂಡು ಮದುವೆಯಾಗಿ ಸುಖವಾಗಿದ್ದಾನೆ. ಈ ಬಾರಿ ಇನ್ನೂ ಹೆಚ್ಚಿನ ತಂತ್ರಜ್ಞಾನದ ಮೂಲಕ ಕೆರೆಗೆ ಕಟ್ಟೆ ಕಟ್ಟಲಾಗುವುದೆಂದೂ ಪತ್ರಮುಖೇನ ಸಚಿವರು ತಿಳಿಸಿದ್ದಾರೆ..

Tuesday 16 October 2012

ಅಪ್ಪಚ್ಚಿ ಹೇಳಿದ ಅಪ್ಪನ ಕತೆ- ಭಾಗ ೪ ( ಉರುಳಿ ಕತೆ)


ಇದೇನು ವಿಶೇಷ ಕತೆಯಾಗಲಿಲ್ಲ ನನಗೆ. ಇಂತಹ ಕತೆಗಳು ಗೆಳೆಯರ ನಡುವೆ ಎಷ್ಟೋ ನಡೆದಿದೆ. ಆದರೆ ಆ ಕಾಲಕ್ಕೆ ಅಪ್ಪನ ಧೈರ್ಯ ಮೆಚ್ಚತಕ್ಕದ್ದು. ಚಿಕ್ಕಪ್ಪ ಮನೆಗೆ ಬಂದ ಕೂಡಲೇ ಚಹಾ ಮಾಡಲು ಹೇಳಿ ಒಂದು ತಂಬಾಕುಯುಕ್ತ ಎಲೆ ಅಡಿಕೆಯನ್ನು ಏರಿಸಿದ. ಇದ್ದ ಮದುವೆ ಕಾಗದಗಳು, ಅದೇನೋ ಕರೆಯೋಲೆಗಳು ಎಲ್ಲವನ್ನೂ ನೋಡುತ್ತಾ ಕುಳಿತೆ. ಸ್ವಲ್ಪ ಸಮಯದಲ್ಲೇ ಚಹಾರಾಧನೆಯೂ ನಡೆದು ಉಭಯ ಆತ್ಮಗಳೂ ಶಾಂತಿಯನ್ನು ಹೊಂದಿ ಪುನಃ ಎಲೆ ಅಡಿಕೆಯ ತಟ್ಟೆಯನ್ನು ನೋಡತೊಡಗಿದವು. ಹಾಗೆಯೇ ತೋಟಕ್ಕೆ ಹೊರಟೆವು.
--
ನೀನು ಮದುವೆ ಕಾಗದಗಳನ್ನು ನೋಡುತ್ತಿದ್ದಾಗ ಒಂದು ಕತೆ ಹೇಳಲು ನೆನಪಿಗೆ ಬಂತು ನೋಡು. ಇದು ತುಂಬಾ ಚೆನ್ನಾಗಿರುವ ಕತೆ. ಈಗ ನೆನಪು ಮಾಡಿಕೊಂಡರೂ ಒಳ್ಳೆಯ ನಗೆ ಬರುವಂತಹದ್ದು. ಇದರಲ್ಲಿ ಕೂಡ ತುಂಬಾ ಸ್ವಾರಸ್ಯವಿದೆ. ಅಣ್ಣನಿಗೆ ಅಂದರೆ ದೊಡ್ಡಪ್ಪನಿಗೆ ಆಗಲೇ ಮದುವೆ ನಿಶ್ಚಯವಾಗಿತ್ತು. ದೊಡ್ಡಮ್ಮ ತುಂಬಾ ದೂರದ ಊರಿನವರೇನೂ ಅಲ್ಲ. ವರುಷದ ಹಿಂದೆ ಊರಿನ ದೇವರ ಜಾತ್ರೆಗೆ ಬಂದಿದ್ದ ತಂದೆಯ ಪರಿಚಯದವರ ಮಗಳು ಆಕೆ. ಒಂದೇ ಸಲಕ್ಕೆ ಎಲ್ಲಾ ತೀರ್ಮಾನವಾಗಿ ಇಂತಹ ದಿನ ಮದುವೆ ಎಂದು ನಿಶ್ಚಯವಾಗಿತ್ತು. ಏಪ್ರಿಲ್ ತಿಂಗಳಲ್ಲಿ ಮದುವೆ. ಶಾಲೆಗೆ ರಜೆ, ನಿನ್ನಪ್ಪನ ಹತ್ತನೇ ಕ್ಲಾಸು ಮುಗಿದಿತ್ತು. ಮುಂದೇನು ಎನ್ನುವ ಯೋಚನೆಯಿರಲಿಲ್ಲ. ದೊಡ್ಡಪ್ಪ ಕೃಷಿಯೇ ಮುಖ್ಯವೆಂದಿದ್ದರೂ ಕೂಡ ಆಫೀಸು ಕೆಲಸದ ಆಸೆ ಇಟ್ಟುಕೊಂಡಿದ್ದರು.

ಮದುವೆಗೆ ಮೊದಲು ಕರೆಯೋಲೆ ಕೊಡುವುದಕ್ಕೆಂದು ನಾವು ತಿರುಗಿದ ಊರುಗಳಿಗೆ ಲೆಕ್ಕವಿಲ್ಲ. ಈಗ ಈಮೈಲು, ಫೋನು ಅಲ್ಲದೇ ಬೈಕು ಹಿಡಿದುಕೊಂಡು ಆಮಂತ್ರಣ ಕಳುಹಿಸಬಹುದು ಆದರೆ ಜನರು ಬರುವುದಿಲ್ಲ. ಹಿಂದೆ ನಾವೆಷ್ಟು ಮನೆಗೆ ಹೋಗುತ್ತೇವೋ ಅಷ್ಟು ಜನರು ಗ್ಯಾರಂಟಿಯಾಗಿ ಬರುತ್ತಿದ್ದರು.ಅದೂ ನಮ್ಮ ಮನೆ ಎಂದರೆ ಬಂದೇ ಬರುತ್ತಿದ್ದರು. ದೂರದ ಸಂಬಂಧಿಕರಿಗೆ, ಮನೆಯ ಮಿತ್ರರಿಗೆಲ್ಲಾ ನಾವು ಆಮಂತ್ರಣ ಕೊಡುವುದಿದ್ದರೆ ಹತ್ತಿರದ ನೆಂಟರಿಗೆ, ಹತ್ತಿರದ ಮನೆಯವರಿಗೆಲ್ಲಾ ದೊಡ್ಡಪ್ಪನ ಕರೆಯೋಲೆ. ಹೀಗೇ ಸಂಭ್ರಮ. ಮದುವೆ ಇದು ಎರಡನೆಯದ್ದು ನಾವು ನೋಡುತ್ತಿದ್ದದ್ದು. ಮೊದಲ ಮದುವೆ ಅಕ್ಕನ ಮದುವೆ. ಆಗ ನನಗೆ ೧೧ ಅಥವಾ ೧೨ ವಯಸ್ಸು.

ದೂರದ ಊರುಗಳಿಗೆ ಕಾಗದ ವಿತರಣೆ ಆದಂತೆ ನಮ್ಮ ಕೆಲಸಗಳು ಬೇರೆ ಆಗತೊಡಗಿದವು. ಪೇಟೆಯಿಂದ ಅಕ್ಕಿ, ಬೆಲ್ಲ, ಬೇಳೆ ಮುಂತಾದವುಗಳನ್ನ ತರುವುದು, ತರಕಾರಿ ತರುವುದು, ತೆಂಗಿನಕಾಯಿ ಸುಲಿಯುವುದು ಇದೆಲ್ಲದಕ್ಕೂ ನಾವು ಬಿದ್ದೆವು. ಚಪ್ಪರವನ್ನೂ ಹಾಕಿದ್ದಾಯಿತು. ದಾರಿಯಲ್ಲಿದ್ದ ಮುಳ್ಳು, ಬೇಡದ ಗಿಡಗಳ ಕೈ ಕಾಲು ಕತ್ತರಿಸಿದ್ದೂ ಆಯಿತು. ಮನೆಯ ಅಂಗಳದಿಂದ ತೋಟದ ತನಕವೂ ಸಗಣಿ ಸಾರಿಸಿ, ಕಸ ತರಗೆಲೆ ಬೀಳದಂತೆ ನೋಡಿಕೊಂಡೆವು. ಇದೆಲ್ಲಾ ಆದಮೇಲೆ ಮದುವೆಗೆ ಎರಡು ದಿನ ಮಾತ್ರ ಬಾಕಿ ಇದ್ದಿತು.

ನಮ್ಮೂರು ಎಂದಾದಮೇಲೆ ಹಸರುಬೇಳೆ ಪಾಯಸ ಆಗಲೇಬೇಕು. ಈ ಹಸರನ್ನು ಮೊದಲು ಚೆನ್ನಾಗಿ ಹುರಿಯಬೇಕು, ಇಲ್ಲವಾದಲ್ಲಿ ಪಾಯಸಕ್ಕೆ ಮೆರುಗು ಇಲ್ಲ, ರುಚಿಯೂ ಇಲ್ಲ. ಎಷ್ಟು ಪ್ರಮಾಣದಲ್ಲಿ ಹುರಿಯಬೇಕು? ಹೇಗೆ ಹುರಿಯಬೇಕು ಎಂಬುದೆಲ್ಲಾ ನಮ್ಮಲ್ಲಿ ಅಳತೆ ಮಾಪನಗಳಿದ್ದಾವೆ. ಈ ತಾಮ್ರದ ಉರುಳಿ ಎನ್ನುವ ಪಾತ್ರೆ ನಮ್ಮ ಮನೆಯಲ್ಲಿದ್ದ, ಈ ಹಸರುಬೇಳೆ ಹುರಿಯುವುದಕ್ಕೇ ಇದ್ದಂತಹ ಪಾತ್ರೆ. ಅಮ್ಮ ಮತ್ತೆ ಅಕ್ಕ ಇಡೀ ದಿನ ಮನೆಯಲ್ಲಿ ಹುಡುಕಾಡಿ ಕೊನೆಗೂ ಸಿಗಲಿಲ್ಲ. ಅದೇ ಸಂಜೆ ಅಪ್ಪನಲ್ಲಿ ಹೇಳಿದಾಗ, ಮೊನ್ನೆಯ ಸಮಾರಂಭಕ್ಕೆ ನಮ್ಮ ತೋಟದ ಆಚೆಮನೆಯ ಸರಸಕ್ಕ ತೆಗೆದುಕೊಂಡು ಹೋಗಿದ್ದಾರೆ ಎನ್ನುವ ನೆನಪು ಮಾಡಿಕೊಟ್ಟರು. ಈಗ ಏನು ಮಾಡುವುದು? ಆ ಪಾತ್ರೆಯಿಲ್ಲದೇ ಪಾಯಸಕ್ಕೆ ಹುರಿಯಲಾಗುವುದಿಲ್ಲ. ಪಾಯಸವಿಲ್ಲದೇ ಊಟವಿಲ್ಲ. ಊಟವಿಲ್ಲದೇ ಮದುವೆಯಿಲ್ಲ. ಕೊನೆಗೆ ನನ್ನನ್ನೂ ನಿನ್ನಪ್ಪನನ್ನೂ ಕರೆದು ಪಾತ್ರೆಯನ್ನು ತರಲು ಕಳುಹಿಸಿದರು.

ಈಗ ನಿಮಗೆಲ್ಲಾ ಕಂಪೆನಿಗಳಲ್ಲಿ ಟಾರ್ಗೆಟ್ ಕೊಡುತ್ತಾರಲ್ಲವೇ? ಹಾಗೆಯೇ ಆಗಿತ್ತು ಅದು. ನಾವು ಆ ದಿನದ ರಾತ್ರಿಯೊಳಗೆ ಆ ಪಾತ್ರೆಯನ್ನು ತರಬೇಕಿತ್ತು. ದೊಡ್ಡ ಕೆಲಸವೇ ಅಲ್ಲವೆಂದು ಹೊರಟೆವು.

ಸರಸಕ್ಕನ ಮನೆ ಎನ್ನುವುದು ದೊಡ್ಡ ಅರಮನೆಯಂತೆ. ಪಾಳು ಬಿದ್ದ ಅರಮನೆಯಂತೆ ಇದ್ದಿತ್ತು. ಈಗಲೂ ಅದರ ಗೋಡೆಗಳನ್ನು ನೋಡು. ಆಗಿನ ಕಾಲಕ್ಕೆ ದೊಡ್ಡ ಹೆಂಚಿನ ಮನೆಯದು. ಅವರ ತೋಟವೂ ಅಷ್ಟೇ ದೊಡ್ಡದು. ನಮ್ಮ ತೋಟದ ಮೂರರಷ್ಟು ಆ ಕಾಲಕ್ಕೆ ಇತ್ತು ಅವರಿಗೆ. ತೋಟ ನೋಡುವುದಕ್ಕೆ ಯಾರೂ ಇರಲಿಲ್ಲ. ಗಂಡ ಹೆಂಡತಿ ಇಬ್ಬರೇ ಆ ಮನೆಯಲ್ಲಿ ಸಧ್ಯದ ವಾಸ. ಆ ತೋಟದ ಕೆಲವು ತೆಂಗಿನ ಮರದ ಕಾಯಿಗಳಲ್ಲಿ, ಎಳನೀರಿನಲ್ಲಿ, ಪೇರಳೆ ಮರದ ಪೇರಳೆಗಳಲ್ಲಿ, ಹಲಸಿನಕಾಯಿಗಳಲ್ಲಿ ಆ ಕಾಲಕ್ಕೆ ನನ್ನ ಮತ್ತೆ ನಿನ್ನಪ್ಪನ ಹೆಸರೇ ಬರೆದಿತ್ತೇನೋ. ಹೆಚ್ಚಿನವು ನಮ್ಮ ಹೊಟ್ಟೆಯಲ್ಲೇ ಕರಿಗಿದವುಗಳು.

ಸರಸಕ್ಕ ತುಂಬಾ ಪಾಪದವರು. ತುಂಬಾ ಪ್ರೀತಿ ನಮ್ಮ ಮೇಲೆ. ಕರೆದು, ಉಂಡೆಗಳನ್ನೋ, ಬೆಳಗ್ಗಿನ ತಿಂಡಿಗಳನ್ನೋ ನಮಗೆ ಕೊಡದಿದ್ದರೆ ಸಮಾಧಾನವಿಲ್ಲ ಅವರಿಗೆ. ಸಧ್ಯದಲ್ಲೇ ಮಗಳ ಮಗನಿಗಾಗಿ ಏನೋ ಪೂಜೆ ಮಾಡಿಸಿದ್ದರು ಮನೆಯಲ್ಲಿ. ಆ ಪೂಜೆಯ ಊಟಕ್ಕಾಗಿ ಪಾತ್ರೆಯನ್ನು ತೆಗೆದುಕೊಂಡು ಹೋಗಿದ್ದರು. ಈಗ ನಮ್ಮ ಉದ್ದೇಶ ಆ ಪಾತ್ರೆಯನ್ನು ಕೇಳಿ ಪುನಃ ತರುವುದಾಗಿತ್ತು.

ಸುಮಾರು ಆರೂ ಮುಕ್ಕಾಲಿಗೆ ಅವರ ಮನೆಗೆ ಬಂದರೆ ಆಶ್ಚರ್ಯ ಕಾದಿತ್ತು. ಮನೆಗೆ ದೊಡ್ಡ ಬೀಗ ನಮ್ಮನ್ನು ಅಣಕಿಸಿ, ಈ ಕೆಲಸವೂ ಸುಲಭವಲ್ಲ ಮಕ್ಕಳೇ ಎಂದಿತು.  ಮನೆಯಲ್ಲಿ ಯಾರೂ ಇಲ್ಲದಂತೆ ಇಬ್ಬರೂ ಬೇರೆ ಊರಿಗೇ ಹೋಗಿರಬೇಕು ಎನಿಸಿತು. ಪುನಃ ಮನೆಗೆ ಹೋಗಿ ನಮ್ಮ ದಿಗ್ವಿಜಯದಲ್ಲಿ ಸೋಲಾಯಿತು ಎನ್ನಲು ನಮಗೆ ಸಾಧ್ಯವಿರಲಿಲ್ಲವೇನೋ? ಆಗ ನಿನ್ನಪ್ಪನಿಗೆ ಪ್ರಳಯಾಂತಕ ಉಪಾಯ ಬಂತು. ಆ ಮನೆಯ ಹಿಂದಿನಿಂದ ಒಂದು ಮಣ್ಣಿನ ದಿಬ್ಬವಿತ್ತು. ಅಲ್ಲಿಂದ ಎರಡು ಕೋಲುಗಳನ್ನಿಟ್ಟು ಮನೆಯ ಮಾಡನ್ನೇರುವುದು. ಮಾಡಿನ ಹಂಚುಗಳನ್ನು ತೆಗೆದು ಒಳಗಿಳಿಯುವುದು. ಇಳಿದ ಮೇಲೆ ಪಾತ್ರೆಯನ್ನು ಹುಡುಕಿ ಕಿಟಕಿಯ ಮೂಲಕ ಹೊರಗೆ ಕೊಡುವುದು. ನಂತರ ಪುನಃ ಬಂದ ದಾರಿಯಲ್ಲಿಯೇ ವಾಪಸ್ಸು ಬರುವುದು ಈ ಪ್ಲಾನಾಗಿತ್ತು.

ನಾನು ಸುಮ್ಮನುಳಿದೆ. ನಿನ್ನಪ್ಪ ಹೇಳಿದರೆ ಮುಗಿಯಿತು. ನಾನು ಆಗುವುದಿಲ್ಲ ಎಂದರೆ ಒಬ್ಬನೇ ಹೋಗಿಯಾದರೂ ಪಾತ್ರೆ ತರುವುದು ಖಚಿತ. ಈಗಲೂ ಅಷ್ಟೆ. ಮೊಂಡು ಎಂದರೆ ಮೊಂಡು. ಬಿಡು. ಹೀಗೇ ಮೊದಲ ಪ್ರಯತ್ನ ಫಲಕಾರಿಯಾಯಿತು. ನಿನ್ನಪ್ಪ ತುಂಬಾ ಮುತುವರ್ಜಿಯಿಂದ ಮನೆಯ ಮಾಡನ್ನೇರಿ ಹಂಚನ್ನು ತೆಗೆದು ಒಳಗಿಳಿದ. ಆಗ ಮನೆಯ ಹೊರಗಿನಿಂದ ಬೀಗ ತೆಗೆದ ಸದ್ದಾಯಿತು.

ಕ್ಷಣಕ್ಕೆ ಕಳವಳಗೊಂಡರೂ ಸಾವರಿಸಿ ನಾನು ಮನೆಯ ಎದುರಿಗೆ ಓಡಿದೆ. ಸರಸಕ್ಕ ನನ್ನನ್ನು ಕಂಡ ಕೂಡಲೇ ಏನಾಯ್ತೋ, ಈ ಹೊತ್ತಲ್ಲಿ ಎಲ್ಲಿಗೆ ತಿರುಗಾಟ ಎಂದರು. ನಾನು ಕೂಡಲೇ ಉರುಳಿ ಬೇಕಾಗಿತ್ತು. ಮನೆಯಲ್ಲಿ ಅಮ್ಮ ಕಳುಹಿಸಿದ್ದಾರೆ ಎಂದೆ. ಸರಸಕ್ಕ ಕೂಡಲೇ ತನ್ನಿಂದ ದೊಡ್ಡ ತಪ್ಪಾಗಿದೆ ಎಂದುಕೊಳ್ಳುತ್ತಾ ಅಡುಗೆಕೋಣೆಗೆ ಹೋಗಿ, ಉರುಳಿ ತೆಗೆದುಕೊಂಡು ಬಂದು ಕೈಯ್ಯಲ್ಲಿ ಕೊಟ್ಟರು. ಹಾಗೆಯೇ ಒಳಗೆ ಇದ್ದ ಬಾಳೆಹಣ್ಣುಗಳನ್ನೂ ಕೊಟ್ಟು ಗಂಡನಲ್ಲಿ ನನ್ನನ್ನು ನಮ್ಮ ತೋಟದ ವರೆಗೆ ಬಿಟ್ಟು ಬರಲು ಕಳುಹಿಸಿದರು.

ನಾನು ಮಾತನಾಡುವುದಕ್ಕೆ ಅವಕಾಶವೇ ಕೊಡಲಿಲ್ಲ. ನನ್ನನ್ನು ತೋಟದವರೆಗೆ ಬಿಟ್ಟು ಸರಸಕ್ಕನ ಗಂಡ ಹೋದರು. ನಾನು ಮನೆಗೆ ಬಂದು ಉರುಳಿಯನ್ನು ಕೊಟ್ಟೆ. ಉರುಳಿ ನೋಡಿದ ಖುಷಿಯಿಂದ ಏನೂ ಕೇಳಲಿಲ್ಲ. ಅಣ್ಣ ಅಲ್ಲೆಲ್ಲೋ ಹೊರಗಿದ್ದಾನೆ ಎಂದು ನಾನು ತೋಟದ ದಾರಿಯಲ್ಲಿ ಪುನಃ ಬಂದೆ. ಆ ದಿನ ಸುಮಾರು ಎರಡು ಘಂಟೆ ಬಿಟ್ಟು ನಿನ್ನಪ್ಪ ಮನೆಗೆ ಬಂದ. ಯಾರೂ ಏನೂ ಕೇಳಲಿಲ್ಲವಾದರೂ ನಾನು ಹೇಗೆ ಬಂದೆ ಎಂದು ಕೇಳಲೇ ಬೇಕಿತ್ತು.

ಅಪ್ಪ ಒಳಕ್ಕಿಳಿದ ಕೂಡಲೇ ಸರಸಕ್ಕ ಬಂದುದರಿಂದ ನಾನು ಮನೆಯ ಎದುರಿಗೆ ಬಂದೆ. ಅದೇ ಸಮಯಕ್ಕೆ ಅಪ್ಪ ಮನೆಯ ಅಟ್ಟದಿಂದ ಮೆಲ್ಲನಿಳಿದು ಅಡುಗೆಯ ಕೋಣೆಯ ಪಕ್ಕದ ದಾಸ್ತಾನು ಕೋಣೆಗೆ ಬಂದು ನಿಂತಿದ್ದ. ಈಗಿನ ಹಾಗೆ ಕರೆಂಟಾಗಲೀ, ಬೆಳಕಾಗಲೀ ಅಷ್ಟು ಇಲ್ಲದುದರಿಂದ ಅಪ್ಪನನ್ನು ಕಂಡುಹಿಡಿಯುವುದು ಸಾಧ್ಯವಿಲ್ಲ. ಸರಸಕ್ಕನ ಅಡುಗೆಯಾಗಿ, ಊಟವಾಗಿ ನಂತರ ಹೊರಗಡೆ ಹೋದ ಸಂದರ್ಭ ನೋಡಿ, ನಿನ್ನಪ್ಪ ಅಡುಗೆಕೋಣೆಯ ಬಾಗಿಲಿಂದ ಹೊರಬಿದ್ದಿದ್ದ. ಅದೂ ಕಾಣದ ರಾತ್ರಿಯಲ್ಲಿ ತೋಟದ ಹೊಂಡಗಳಲ್ಲಿ ಬಿದ್ದೆದ್ದು ಬರುವಷ್ಟರಲ್ಲಿ ಸುಮಾರು ಹೊತ್ತಾಗಿತ್ತು. ಆದರೂ ಯಾರಿಗೂ ತಿಳಿಯಲಿಲ್ಲ.

ಮರುದಿನ ನಮ್ಮ ಅಪ್ಪ ಹೇಳುತ್ತಿದ್ದರು. ನಿನ್ನೆ ರಾತ್ರಿ ಯಾರೋ ಸರಸಕ್ಕನ ಮನೆಗೆ ಕಳ್ಳರು ಬಂದಿದ್ದಾರೆ. ಪುಣ್ಯಕ್ಕೆ ಏನೂ ತೆಗೆದುಕೊಳ್ಳಲಾಗಲಿಲ್ಲ. ಪುಣ್ಯಕ್ಕೆ ಸರಸಕ್ಕ ಚಿನ್ನವೆಲ್ಲಾ ಬ್ಯಾಂಕಿನಲ್ಲಿಟ್ಟಿದ್ದು ಒಳ್ಳೆದಾಯಿತು ಎಂದು. ನಾವೇ ಇದಕ್ಕೆಲ್ಲ ಕಾರಣ ಎಂದು ಯಾರಿಗೂ ಗೊತ್ತಿಲ್ಲ ಬಿಡು.

(ಉರುಳಿ: ಬಾಣಲೆಯಾಕಾರದ ಒಂದು ಪಾತ್ರೆ. ತಾಮ್ರದ್ದು).

Monday 15 October 2012

ಅಪ್ಪಚ್ಚಿ ಹೇಳಿದ ಅಪ್ಪನ ಕತೆ- ಭಾಗ ೩ ( ಕೇಶವನ ಕತೆ)


ಇದು ಯಾರು? ಓಹೋ ಯಾವಾಗ ಬಂದದ್ದು? ಎಂತ ವಿಶೇಷ? ಅಪ್ಪನ ಹಾಗೆಯೇ ಮೀಸೆ ಬಿಟ್ಟದ್ದ ನೀವು. ನೋಡುವಾಗ ಮೊದಲು ಅವರನ್ನೇ ಸಣ್ಣ ಪ್ರಾಯದಲ್ಲಿ ನೋಡಿದ ಹಾಗಾಯಿತು. ಆದರೆ ಪೇಟೆಯ ಬೊಜ್ಜು ಮಾತ್ರ ನಿಮ್ಮದ್ದು ಜಾಸ್ತಿ ಅಷ್ಟೆ ಹಿಹ್ಹಿಹ್ಹಿಹ್ಹಿ.. ಇಮಾನ್ ಸೋಜರು ನಗುತ್ತಿದ್ದುದನ್ನು ಚಿಕ್ಕಪ್ಪ ತಡೆದು ಬೇರೇನೋ ಮಾತನಾಡಲು ಶುರು ಮಾಡಿಕೊಂಡರು.

ಇಮಾನ್ ಸೋಜರನ್ನು ನೋಡುವಾಗ ತುಂಬಾ ಗೌರವವೆನಿಸಿತು. ಅವರ ಅಪ್ಪ ಬಾಬು ಸೋಜರನ್ನು ನೋಡಿದ ನೆನಪಿರಲಿಲ್ಲ. ಅಪ್ಪನಿಂದ ಸುಮಾರು ೧೦ ವರ್ಷ ಹೆಚ್ಚು ಆಗಿರಬಹುದು ಇಮಾನ್ ಸೋಜರಿಗೆ. ಕುತೂಹಲದ ವಿಷಯಗಳನ್ನು ಇಮಾನ್ ಸೋಜರಲ್ಲಿ ಕೇಳಬೇಕೆಂದು ಅವರನ್ನೂ ಮನಸ್ಸಿನಲ್ಲಿ ನೋಟ್ ಮಾಡಿಕೊಂಡೆ. ಅಷ್ಟರಲ್ಲಿ ಚಿಕ್ಕಪ್ಪನ ಪಂಪಿನ ಸ್ಪಾನರೂ, ಇಬ್ಬರಿಗೆ ಎಳನೀರೂ ಯಾವ ವೇಗದಲ್ಲಿ ಬಂದಿತೆಂದು ಊಹಿಸಲಾಗಲಿಲ್ಲ. ಎಳನೀರು ಕುಡಿದು ಸೋಜರಿಗೆ ಪ್ರತಿವಂದನೆ ಹೇಳಿ ಮನೆಕಡೆ ಹೊರಟೆವು.ಒಂದು ಕಾಲವಿತ್ತು. ಊರಲ್ಲಿ ಒಂದು ಅಂಗಡಿ, ಅಲ್ಲಿ ಏನು ಮಾರಾಟಕ್ಕಿದೆಯೋ ಅದನ್ನು ಕೊಳ್ಳಬೇಕಿತ್ತು. ದಿನಾ ಬೀನ್ಸು ಆದರೂ ಸರಿಯೇ, ಆಲೂಗಡ್ಡೆಯಾದರೂ ಸರಿಯೇ.ಈಗ ಹಾಗಲ್ಲ. ಏನು ಬೇಕೋ ಅದನ್ನು ಆರಿಸಿಕೊಂಡು ತೂಕಹಾಕಿ ತರಬಹುದು.ಇದೇ ಮಾತುಗಳು ಮನುಷ್ಯರಿಗೂ ವೃತ್ತಿಗೂ ಅನ್ವಯಿಸಬಹುದು. ಆರಿಸಿಕೊಳ್ಳುವ ರೀತಿ ಈಗ ನಮ್ಮಲ್ಲಿದೆ, ಮೊದಲಿರಲಿಲ್ಲವೇನೋ? ಕಾಲ ಉತ್ತರಿಸಬೇಕು ಅಷ್ಟೆ.
--
ಇತ್ತೀಚೆಗೆ ಹಂದಿ ಕಾಟ ಜಾಸ್ತಿ ಮಾರಾಯ. ಮೊನ್ನೆಯಿಂದ ಸುಮಾರು ನಾಲ್ಕು ಹಂದಿಗಳನ್ನಾದರೂ ಇಮಾಮ್ ಸೋಜರು ಹಿಡಿದಿರಬಹುದು. ಸೋಜರ ತೋಟ ಒಟ್ಟಲ್ಲಿ ನಮ್ಮ ತೋಟಕ್ಕೆ ಕೋಟೆಯ ಬಾಗಿಲಿದ್ದಂತೆ, ಅಲ್ಲಿಂದ ತಪ್ಪಿಸಿಕೊಂಡು ಒಳಗೆ ಬಂದರೆ ಸರ್ವನಾಶ ಮಾಡಿಯೇ ಹಿಂದೆ ಹೋಗುವುದು ಹಂದಿಗಳು. ಈಗ ಏನು ಮಾಡುವುದು? ಮನೆಗೆ ಹೋಗಿ ಒಂದು ಮುಕ್ಕಾಲು ಚಹಾ ಕುಡಿದು ಮತ್ತೆ ನೋಡೋಣ ಅಲ್ಲವೇ? ಹಾಳು ಸೆಖೆಗೆ ಎಂತ ಕೆಲಸವೂ ಬೇಡ ಮಾರಾಯ. ಈಗ ೪೩ ವರ್ಷ ನನಗೆ, ಈಗಲೇ ಸುಸ್ತು. ಆ ಇಮಾನ್ ಸೋಜರನ್ನು ನೋಡು, ಮಾತನಾಡುತ್ತಿದ್ದಂತೆ ತೆಂಗಿನಮರ ಹತ್ತಿ ಎಳನೀರು ಕೊಯ್ದು ಪುನಃ ನಗಾಡುತ್ತಾ ನಿಂತದ್ದನ್ನು ನೋಡಿದಾಗ ಮೂವತ್ತಿರಬೇಕು ಅವರ ವಯಸ್ಸು ಎನಿಸುತ್ತಿದೆ. ೫೪ ವರ್ಷ ಅವರಿಗೆ. ನಾವು ಬ್ರಾಹ್ಮಣರು ಹಾಳಾದದ್ದೇ ಹೀಗೆ ನೋಡು, ಸಣ್ಣವರಿದ್ದಾಗಲೂ ದೊಡ್ಡವರಿದ್ದಾಗಲೂ ಕೆಲಸಕ್ಕೆ ಆಳು ಕಾಳು ಎಂದುಕೊಂಡೇ ನಮ್ಮ ತೋಟಗಳನ್ನು ನಾವೇ ಹಾಳುಮಾಡಿದೆವು. ಈಗ ಇಮಾನ್ ಸೋಜರ ತೆಂಗಿನಮರದಲ್ಲಿ ಎಳನೀರು ಸಿಗುವಂತೆ ನಮ್ಮಲ್ಲಿ ಸಿಗಲಾರದು ಅಲ್ಲವೇ? ಎಂತಹ ವಿಷಾದ.

ಹಿರಿಯರು ದುಡಿಸಿಕೊಂಡು ಗಳಿಸಿದ ಮೂರು ಅಂತಸ್ಥಿನ ಮನೆ, ದೊಡ್ಡ ದೊಡ್ಡ ಒಲೆ ಬಿಟ್ಟರೆ ನಮ್ಮವರ ಹಳೇ ಮನೆಗಳಲ್ಲಿ ಏನೂ ಸಿಗಲಿಕ್ಕಿಲ್ಲ. ಇದು ಸುಮಾರು ೨೫ ವರ್ಷಗಳಿಂದ ಗಮನಿಸುತ್ತಾ ಬಂದದ್ದು ನಾನು. ಹೇಳಬಾರದು ನಾವು, ಆದರೂ ಏನು ಮಾಡುವುದು ಹೇಳಲೇ ಬೇಕು. ಸುಮಾರು ವರ್ಷ ಹಿಂದೆ, ಅಂದರೆ ಈ ಸುರಂಗದ ಕತೆಯ ಬೆನ್ನಲ್ಲೇ ಇನ್ನೊಂದು ಘಟನೆ. ಜಗ್ಗು ಇಲ್ಲದೆ ಕತೆ ಮುಂದುವರೆಯುವುದಿಲ್ಲ, ಏಕೆಂದರೆ ನಿನ್ನಪ್ಪ ಮತ್ತೆ ಜಗ್ಗು ಅಷ್ಟು ಆತ್ಮೀಯರು. ನಾವು ಶಾಲೆಯನ್ನು ಕೊನೆಯ ಬಾರಿ ನೋಡಿದ ವರ್ಷ ಅದು. ಒಂದು ಒಳ್ಳೆಯ ಒಪ್ಪಂದವಿತ್ತು ಆಗ ನಮ್ಮಲ್ಲಿ. ಜಗ್ಗು, ನಿನ್ನಪ್ಪ, ಶಾಮ ಮತ್ತೆ ನಾನು ಒಟ್ಟಾಗಿ ಶಾಲೆಗೆ ಹೋಗುತ್ತಿದ್ದೆವು. ನಿನ್ನಪ್ಪ ನನ್ನನ್ನು ಶಾಲೆಯಲ್ಲೇ ಬಿಟ್ಟು ಬೇಕಾದರೆ ಬರುತ್ತಿದ್ದ. ಆದರೆ ಜಗ್ಗು ಜೊತೆಗಿಲ್ಲದಿದ್ದರೆ ಅಂದಿನ ದಿನ ಅತ್ಯಂತ ಗೋಳು.

ನಿನ್ನಪ್ಪನ ಒಂದು ಕತೆ ಯಾವತ್ತೂ ಇರುತ್ತಿತ್ತು. ಕನಸಿನ ಕತೆಗಳು. ಉದಾಹರಣೆಗೆ ನಿನ್ನೆ ಭಯಂಕರ ಕನಸು ಎಂದೇ ಪ್ರಾರಂಭಿಸಿ ಪದಕ್ಕೆ ಪದ ಕಟ್ಟಿ ಕತೆಗೆ ಕತೆ ಕಟ್ಟಿ ಶಾಲೆಯವರೆಗೆ ಅದನ್ನು ಹೇಳಿಕೊಂಡು ಹೋಗುತ್ತಿದ್ದ. ಎಷ್ಟೋ ದಿನ ನಡೆಯುವ ನಾಲ್ಕು ಮೈಲು ಕತೆಯ ನಾಲ್ಕು ಮಾತಾಗುತ್ತಿತ್ತು. ಇನ್ನೂ ನೆನಪಿರುವ ಕತೆಗಳು ಇರಬೇಕು ಅಪ್ಪನಲ್ಲಿ. ಪುರಾಣದ ಕತೆಗಳನ್ನು ಯಕ್ಷಗಾನದಲ್ಲಿ ಕೇಳಿ ಅದನ್ನ ತಿರುಚಿ ಹೇಳಿ ಅದಕ್ಕೊಂದು ರಮ್ಯವೋ ವೀರವೋ ಪ್ರಧಾನವಾದ ಅಂತ್ಯ ಕೊಟ್ಟು ಶಾಲೆಯ ಪಾಠವನ್ನು ಮರೆಸುತ್ತಿದ್ದ ನಿನ್ನ ಅಪ್ಪನ ತಾಕತ್ತನ್ನು ವಿವರಿಸಲು ತುಂಬಾ ಸಮಯ ಬೇಕಾದೀತು. ಹೀಗೇ ನಮ್ಮ ಶಾಲಾದಿನಗಳು ಮುಗಿಯುತ್ತಾ ಬಂತು. ಈಗಿನಂತೆ ಪಾಸಾದರೆ ಏನು ಮಾಡೋದಪ್ಪಾ ಎಂದು ಯಾವತ್ತೂ ನಾವು ಚಿಂತೆ ಮಾಡಿರಲಿಲ್ಲ. ನಾವ್ಯಾಕೆ ನಮ್ಮ ತಂದೆತಾಯಿಗಳು ಕೂಡ. ಇಂತಹ ದಿನಗಳಲ್ಲಿ ಒಂದು ನಿರೀಕ್ಷಿಸಿರದ ಘಟನೆ ನಡೆಯಿತು.

ಕೇಶವ ಸಾದಾ ಮನುಷ್ಯನಾಗಿದ್ದರೂ ಸ್ವಲ್ಪ ನಮ್ಮಿಂದ ದೂರವಿದ್ದ. ಏಕೆಂದರೆ ನಮ್ಮೆಲ್ಲರಿಂದ ೩-೪ ವರ್ಷಕ್ಕೆ ದೊಡ್ಡವನಾಗಿದ್ದುದು ಒಂದು ಕಾರಣವಾದರೆ ಇನ್ನೊಂದು ಕಾರಣ ಒಂದು ಹುಡುಗಿ. ಹೆಸರು ಏನೆಂದು ಮರೆತುಹೋಗಿದೆ ಈಗ. ನೋಡೋದಿಕ್ಕೆ ಸಾಧಾರಣ ಚಂದವಿದ್ದಳು ಮತ್ತೆ ಆಗ ನಮಗೆಲ್ಲ ಚಂದದ ವಿಶ್ಲೇಷಣೆ ತಿಳಿದಿರಲಿಲ್ಲವೇನೋ. ಆದರೆ ಭಾರೀ ಚುರುಕಿನ ಹುಡುಗಿ ಅದು. ಸುಲಭವಾಗಿ ಹೇಳುವುದೇ ಆದರೆ ಕೇಶವನಂತಹನಿಗೆ ದೇವರು ಸೃಷ್ಟಿಸಿದ ಸರಿಯಾದ ಜೋಡಿ. ಈ ಹುಡುಗಿ ಅದೇನು ಮೋಡಿ ಮಾಡಿದ್ದಳೋ ಏನೋ, ನಮ್ಮೊಂದಿಗೆ ಹತ್ತು ವರುಷ ಮಾತನಾಡಿದಷ್ಟಕ್ಕಿಂತ ಹೆಚ್ಚು ಒಂದೇ ದಿನ ಮಾತನಾಡುತ್ತಿದ್ದ. ಅವಳೂ ಹಾಗೆ ನಮ್ಮೊಂದಿಗೆ ತುಂಬಾ ಸಂಕೋಚವಿಲ್ಲದೇ ಅಣ್ಣ ಅಣ್ಣ ಎಂದಿರುತ್ತಿದ್ದಳು. ಹತ್ತನೇಯಲ್ಲಿರುವಾಗ ಶಾಲೆಗೆ ಎಂದು ಕೇಶವನಿದ್ದರೆ ಬೀಡಿ ಕೊಡುವುದಕ್ಕೆಂದು ಅವಳು ಬರುತ್ತಿದ್ದುದು ಕೂಡಾ ದೈವ ಲೀಲೆಯ ಒಂದು ಅಂಶವೆಂದು ಕೇಶವನ ಮಟ್ಟಿಗೆ ಸತ್ಯ.

ಇಷ್ಟು ಹೇಳದೇ ಇದ್ದರೆ ನಿನ್ನಪ್ಪನ ಸಾಹಸಕ್ಕೆ ಸಾಥ್ ನೀಡಿದಂತಾಗುವುದಿಲ್ಲ ಮಗನೆ. ಒಂದು ದಿನ ಇದ್ದಕ್ಕಿದ್ದಂತೇ ನಿನ್ನಪ್ಪ ಕತೆ ಹೇಳತೊಡಗಿದ. ಆಗ ಕೇಶವನಿರಲಿಲ್ಲವೆಂದೋ ಏನೋ, ನಿನ್ನಪ್ಪ ಹೇಳುತ್ತಿದ್ದುದು ಕೇಶವನ ಕತೆಯೇ ಆಗಿತ್ತು. ಕೇಶವ ಆ ಹುಡುಗಿಯನ್ನು ಮದುವೆಯಾಗುತ್ತಾನಂತೆ. ಆದರೆ ಹುಡುಗಿಯ ಮನೆಯಲ್ಲೂ ಕೇಶವನ ಮನೆಯಲ್ಲೂ ಇದಕ್ಕೆ ವಿರೋಧವಿದೆ. ಏನಾದರೂ ಮಾಡಿ ಮದುವೆಯಾದರೆ ಸಾಕು. ಕೊನೆಗೆ ಎಲ್ಲವೂ ಸರಿಯಾಗುತ್ತದೆ ಎಂದು ಕೇಶವನ ವಿಶ್ವಾಸ. ಹೇಗೆ ಮದುವೆಯಾಗುವುದು? ಊರನ್ನು ಬಿಟ್ಟು ಓಡಿ ಹೋದರೆ ಹೇಗೆ ಬದುಕುವುದು ಎಂಬಿತ್ಯಾದಿ ವಿಚಾರಗಳಿದ್ದ ಕತೆಯಾಗಿತ್ತು. ವಾಸ್ತವದಲ್ಲಿ ಏನಾಗಿತ್ತೋ ಅದೇ ಕತೆಯನ್ನು ನಿನ್ನಪ್ಪ ಹೇಳಿದ್ದು ಹೇಗೆ ಎಂಬುದು ನಿಜವಾಗಿಯೂ ಆಶ್ಚರ್ಯದ ವಿಚಾರ, ಅಥವಾ ಕಾಕತಾಳೀಯವೋ?

ಒಂದು ಸಂಜೆ ಏನೋ ಆತಂಕ ಮತ್ತು ಭಯದೊಂದಿಗೆ ಕೇಶವ ನಮ್ಮನ್ನು ಸೇರಿಕೊಂಡ. ಕೇಶವ ನಮ್ಮಲ್ಲಿ ದೊಡ್ಡವನು ವಯಸ್ಸಿನಲ್ಲಿ. ಆತಂಕಕ್ಕೆ ಕಾರಣವೇನೆಂದರೆ ಅವನು ಮೆಚ್ಚಿದ ಹುಡುಗಿಗೆ ಮನೆಯಲ್ಲಿ ಬೇರೆ ಹುಡುಗನನ್ನು ನಿಶ್ಚೈಸುವ ವಿಚಾರ. ಕೇಶವ ಬದುಕುವುದು ಸಾಧ್ಯವೇ ಇಲ್ಲ ಎಂದೆಲ್ಲಾ ಹೇಳಿದ್ದ ಆಗ. ನಮ್ಮಂತ ಹುಡುಗರಿಗೆ ಅಸಾಧ್ಯವಾದ ಮದುವೆ ಮಾಡಿಸುವ ವಿಚಾರ ಅವನಿಗೂ ಅರಿವಿತ್ತೇನೋ? ಅದಕ್ಕೇ ಇಬ್ಬರೂ ಓಡಿಹೋಗುವ ಮಾತನ್ನೇ ಹೇಳಿದರು. ನಾಳೆ ಒಂದೇ ದಿನ ಬಾಕಿ ಇರುವುದು. ಇಂತಹ ವಿಚಾರಗಳಿಗೆ ಆಗಿನ ಮೆದುಳುಗಳಿಗೆ ೧೦ ನಿಮಿಷ ಸಾಕಿತ್ತು. ನಿನ್ನಪ್ಪ ಏನೋ ಮೌನದಲ್ಲೇ ಲೆಕ್ಕಾಚಾರ ಹಾಕಿ, ಓ ಕೇಶವಾ ನಾವು ನೋಡಿಕೊಳ್ಳುತ್ತೇವೆ ಎಂದು ಆಶ್ವಾಸನೆ ಕೊಟ್ಟು ಬಿಟ್ಟ. ಮತ್ತೆ ಏನೋ ಕಿವಿಯಲ್ಲಿ ಉಸುರಿದ.

ಶಾಲೆಗೆ ಹೋಗುವಾಗ ನಮ್ಮಲ್ಲಿ ಹಣದ ವಿಷಯ ಬಹಳ ಅಪರೂಪ. ಹಣವೇನು ಎಂದೇ ನಮಗೆ ಗೊತ್ತಾಗಿದ್ದು ಈ ಕೇಶವನ ವಿಷಯದಲ್ಲಿ. ನಿನ್ನಪ್ಪ ಅದು ಹೇಗೋ ೧೦ ರೂಪಾಯಿಗಳನ್ನು ತಂದಿದ್ದ. ಕೇಶವನಲ್ಲಿ ಸ್ವಲ್ಪ ಹಣವಿತ್ತು. ಇದಾಗಿ ಶಾಲೆ ಮುಗಿದ ಸಂಜೆ, ಕೇಶವನೂ ಅವಳೂ ಭೇಟಿಯಾಗಿ ಏನೋ ಚರ್ಚಿಸಿದರು. ಕೊನೆಗೆ ಇಬ್ಬರೂ ಜೊತೆಗೇ ಬಂದರು. ನಿನ್ನಪ್ಪ ಅದೇನೋ ಧೈರ್ಯದ ಮಾತುಗಳನ್ನು ಹೇಳಿದ. ಎಲ್ಲಿಗೆ ಹೋಗುವುದೆಂದು ಅರಿವಿಲ್ಲ. ಈಗಿನಂತೆ ಆಗ ಸಂಚಾರಕ್ಕೆ ವ್ಯವಸ್ಥೆ ಇಲ್ಲ. ಅದಲ್ಲದೇ ರಾತ್ರಿಯೇ ಹೊರಡಬೇಕು. ಒಂದೇ ಎರಡೇ? ಜಗ್ಗುವಿಗೆ ಕಾಲುನೋವು, ದೂರ ಬರಲಾರ. ಕೊನೆಗೆ ನಾನೂ ನಿನ್ನಪ್ಪನೂ ಇಬ್ಬರೇ ಜೊತೆಯಲ್ಲಿ ಕೇಶವ ಮತ್ತೆ ಆ ಹುಡುಗಿಯ ಜೊತೆ ಹೊರಟೆವು.

ತುಂಬಾ ದೂರ ಹೋಗಲಿಲ್ಲ. ಒಂದು ಡಬ್ಬಾ ಬಸ್ಸು ನೆನಪಿದೆಯೇ ನಿನಗೆ? ಈಗ ರಸ್ತೆಯಿದೆ ಶಾಲೆಯಿಂದಲೇ, ಆದರೆ ಮೊದಲು ಇರಲಿಲ್ಲ. ಹಾಗೆ ನಾವು ಅವರ ಜೊತೆ ನಡೆದಿದ್ದನ್ನ ನೀನು ಕಲ್ಪಿಸಲಾರೆ. ನಾನು ಆ ದಿನ ತುಂಬಾ ನಡೆಯುವ ಸ್ಥಿತಿಯಲ್ಲಿರಲಿಲ್ಲ. ಜ್ವರವೋ ಏನೋ ಬಂದಿತ್ತು. ಆದರೆ ಒಬ್ಬನೇ ಮನೆಗೂ ಬರಲಾರೆ, ಬಂದರೆ ಅಣ್ಣನೆಲ್ಲಿ ಎಂದು ಕೇಳಿದರೆ ಉತ್ತರವನ್ನೂ ಕೊಡುವ ಹಾಗಿಲ್ಲವಲ್ಲ. ಅದಕ್ಕಾಗಿ ಜೊತೆಗೆ ನಡೆಯತೊಡಗಿದೆ. ಅಂದ ಹಾಗೆ ಬೆಳಗ್ಗಿನ ಜಾವ ೫.೩೦ರ ಸುಮಾರಿಗೆ ಆ ಬಸ್ಸು ಬರುತ್ತಿತ್ತು. ಈಗಿನಂತೆ ಆಗ ರಾತ್ರಿ ಯಾವುದೇ ವಾಹನವಿರಲಿಲ್ಲ. ಒಂದೆರಡು ಲಾರಿಗಳು ಇಡೀ ರಾತ್ರಿಯಲ್ಲಿ ಕಂಡರೆ ಅದೇ ಹೆಚ್ಚು. ಈ ದಿನಗಳಲ್ಲಿ ಇಂತಹ ಕಪ್ಪಿನ ರಾತ್ರಿ ನಾವು ನಾಲ್ಕು ಜನ ಕಳೆದ ಒಂದೊಂದು ನಿಮಿಷವೂ ಈಗ ಊಹೆಗೂ ನಿಲುಕದ್ದು.

ನಡೆದು ಬಂದು ಗೋಳಿ ಮರದ ಬುಡದಲ್ಲಿ ಕುಳಿತೆವು. ಈ ಗೋಳಿ ಮರ ಅಥವಾ ಆಲದ ಮರ ಅನಭಿಷಿಕ್ತ ಬಸ್’ಸ್ಟಾಂಡು ಆಗಿನ ಕಾಲದಲ್ಲಿ. ಈಗ ಮರವೂ ಇಲ್ಲ ಬೇರೂ ಇಲ್ಲ.  ಸುಮಾರು ೭ ಘಂಟೆಯಾಗಿರಬಹುದೇನೋ, ನಮ್ಮನ್ನು ಅಷ್ಟಾಗಿ ಯಾರೂ ಗಮನಿಸಿರಲಿಲ್ಲ. ಅಷ್ಟಾಗಿ ನಾನು ಸಣ್ಣವನಾದ್ದರಿಂದ ಎರಡು ಬೇರೆ ಬೇರೆ ತಂಡದಂತೆ ಕಾಣುತ್ತಿದ್ದೆವೇನೋ? ಅಂದಾಜು ೧೧ ಘಂಟೆ ಅನ್ನ ಆಹಾರ ಇಲ್ಲದೆ ಅಲ್ಲಿ ಕಾಯುವ ಸ್ಥಿತಿ ನಮ್ಮದೆಂದು ನನಗೆ ಊಹೆಯೂ ಇರಲಿಲ್ಲ. ಆದರೆ ನಿನ್ನಪ್ಪ ಅದಕ್ಕೆಲ್ಲ ಸಿದ್ಧನಾಗಿದ್ದಂತೆ ಕಾಣುತ್ತಿದ್ದ.

ಕೇಶವ ಮತ್ತೆ ಆ ಹುಡುಗಿ ಒಂದು ಮಾತು ಆಡಿರಲಿಲ್ಲ. ಆಡಿದ್ದರೂ ಒಂದೂ ನೆನಪಿಲ್ಲ. ಅವಳು ಆಗಾಗ ಅಳುತ್ತಿದ್ದಳು. ಆಗಾಗ ವಾಪಸ್ಸು ಹೋಗುವ ಮಾತನ್ನಾಡುತ್ತಿದ್ದಳು. ಮತ್ತೆ ಅದೇ ಮಳೆಗಾಲದ ನದಿಯ ನೆನಪನ್ನ ತರುತ್ತಿದ್ದಳು. ಪ್ರೇಮ ಉಕ್ಕುವ ರಭಸ, ಹರಿಯುವ ಚೇಸ್ಟೆ, ಬೆಳೆಯುವ ರೀತಿ ಆ ಸಮಯದಲ್ಲಿ ಹೊಳೆಯುವ ಆಲೋಚನೆಗಳೋ .. ಇದೆಲ್ಲ ಜೀವನವನ್ನು ನೆನಪಿನಲ್ಲಿಡಲು ಸಹಕಾರಿಯಾಗುತ್ತದೆ. ಸುಮಾರು ಹೊತ್ತು ಸುಮ್ಮನೇ ಕುಳಿತೆವು. ಆಗ ಸಮಯ ಎಷ್ಟೆಂದು ನಮಗೆ ಹೇಳಲು ಅರಿವೂ ಇಲ್ಲ, ಸಾಧನಗಳೂ ಇಲ್ಲ. ಸುಮಾರು ಮಧ್ಯರಾತ್ರಿಯ ಹೊತ್ತಿರಬೇಕು, ನಾನು ಜ್ವರದಿಂದ ಕಂಪಿಸತೊಡಗಿದೆ. ಅಲ್ಲಿಯೇ ಕುಸಿದಂತೆ ಬಿದ್ದೆ. ಏನು ಮಾಡುವುದೆಂದು ತಿಳಿಯದಾದ ಅಣ್ಣ ಗಾಳಿ ಹಾಕಿದ. ಎಲ್ಲಿಂದಲೋ ನೀರನ್ನು ತಂದು ಕುಡಿಸಿದ. ಮಂಜಿನ ಹನಿ ಬೀಳದಂತೆ ಮರದ ಬುಡದಲ್ಲಿ ಮಲಗಿಸಿದ ನನ್ನನ್ನು.

ಕೇಶವನೂ, ಆ ಹುಡುಗಿಯೂ ಬಸ್ಸನ್ನೇರಿದರಂತೆ. ಅಣ್ಣ ತನ್ನಲ್ಲಿರುವ ಹಣವನ್ನೂ ಜೊತೆಗೆ ಕೊಟ್ಟನಂತೆ. ಜ್ವರದಿಂದ ಬಿದ್ದಿದ್ದ ನನ್ನನ್ನು ಎತ್ತಿಕೊಂಡು ಪುನಃ ಶಾಲೆಗೆ ಬಂದ. ಶಾಲೆಗೆ ಮೊದಲು ಬಂದ ಮೇಷ್ಟರ ಬಳಿ ಜ್ವರವಿದ್ದುದನ್ನು ವಿವರಿಸಿ ಹೇಗೋ ಆಸ್ಪತ್ರೆಗೆ ಸಾಗಿಸಿದ ನನ್ನನ್ನು. ಆಗ ನಮ್ಮ ಅಪ್ಪನೂ ಶಾಲೆಗೆ ಬಂದಿದ್ದರು. ಅವರೂ ಆಸ್ಪತ್ರೆಗೆ ಬಂದರು.

ಆ ದಿನ ಸುಮಾರು ಮಧ್ಯಾಹ್ನದ ವೇಳೆಗೆ ನನಗೆ ಎಚ್ಚರವಾಯಿತು. ನಾನೆಲ್ಲಿ ಬಾಯಿ ಬಿಡುತ್ತೇನೋ ಎಂದು ಹೆದರಿದ್ದ ನಿನ್ನಪ್ಪ, ನನ್ನ ಬಳಿಯೇ ಇದ್ದ. ಕೊನೆಗೆ ಅದಕ್ಕೂ ಒಂದು ಕತೆಯನ್ನು ಹೇಳಿದ. ನಿನ್ನೆ ಶಾಲೆಯಿಂದ ಬರಬೇಕಿದ್ದರೆ ನಾನು ಬಿದ್ದೆನೆಂದೂ, ಆ ಬೀಳುವಿಕೆಯಿಂದ ಜ್ವರ ಬಂದೀತೆಂದೂ, ಮನೆಯ ತನಕ ಕರೆತರಲು ಆಗಲಿಲ್ಲವೆಂದೂ, ರಾತ್ರಿಯಿಡೀ ಶಾಲೆಯಲ್ಲೇ ಇದ್ದೆನೆಂದೂ ಹೇಳಿ ನಂಬಿಸಿದ ಅಪ್ಪನನ್ನು. ಮತ್ತೆ ಕೇಶವನ ವಿಚಾರವು ಯಾರ ಬಾಯಿಯಲ್ಲಿಯೂ ಇಲ್ಲದೇ ಇದ್ದುದರಿಂದ ನಮ್ಮ ಹೆದರಿಕೆ ಸ್ವಲ್ಪ ಕಡಿಮೆಯಾಯಿತು.

ಇದಾಗಿ ಸ್ವಲ್ಪ ಹೊತ್ತಿನಲ್ಲೇ ಕೇಶವನೂ ಬಂದ ಎಂದಾಗ ನಮಗಾದ ಆಶ್ಚರ್ಯಕ್ಕೆ ಪಾರವಿಲ್ಲ. ಬಸ್ಸಿಗೇರಿದ್ದ ಕೇಶವನನ್ನೂ ಅವನ ಹುಡುಗಿಯನ್ನೂ ಯಾರೋ ಬಸ್ಸಿನಿಂದ ಇಳಿಸಿದರಂತೆ. ಕೊನೆಗೆ ಕೇಶವ ಆ ಹುಡುಗಿಯ ಜೊತೆಗೇ ಹುಡುಗಿಯ ಮನೆಗೆ ಹೋದನಂತೆ, ಹುಡುಗಿಯ ತಂದೆ ಎಷ್ಟು ಬೈದರೂ ಕೇಶವ ಲೆಕ್ಕಿಸದೆ ನನಗೆ ಈ ಹುಡುಗಿ ಫಿಕ್ಸ್’ಡ್ ಎಂದನಂತೆ. ಇಂತಹ ಘಟನೆಯಾದ ಮೇಲೆ ಬೇರೆ ಮದುವೆ ಆಲೋಚನೆ ಸರಿ ಬರುವುದಿಲ್ಲವೆಂದ ಮನೆಯಲ್ಲಿದ್ದ ಬೇರೆ ನೆಂಟರ ಮಾತುಗಳಿಗೆ ಬೆಲೆಕೊಟ್ಟು ಕೇಶವನಿಗೇ ಮದುವೆ ಮಾಡಿಕೊಡುವ ತೀರ್ಮಾನವಾಯಿತೆಂದೂ ಹೇಳಿದ. ಹೀಗೆ ಕೇಶವ ನಮ್ಮನ್ನು ಬಿಟ್ಟು ಸಂಸಾರಿಯಾದ ಕೇವಲ ಕೆಲವೇ ತಿಂಗಳುಗಳಲ್ಲಿ.

ಒಟ್ಟಿನಲ್ಲಿ ನಿನ್ನಪ್ಪನ ಈ ಸಾಹಸ ಹೇಗೋ ಕೇಶವನಿಗೆ ಒಳ್ಳೆಯದನ್ನೇ ಮಾಡಿತು. ಈಗಲೂ ಅವರು ಚೆನ್ನಾಗಿದ್ದಾರೆ. ನಿನ್ನಪ್ಪನೂ ಈ ಸಾಹಸದಿಂದ ಹೆಸರುವಾಸಿಯಾಗದೇ ನಮ್ಮಲ್ಲೇ ಹೀರೋ ಆಗಿ ಇದ್ದಾನೆ. ಕೇಶವನೋ ಸಣ್ಣ ಅಡಕೆ ತೋಟ, ಜೊತೆಗೆರಡೋ ಮೂರೋ ದನಗಳನ್ನು ಹೊಂದಿದ್ದಾನೆ. ಒಳ್ಳೆ ಸಂಸಾರ. ಈಗಲೂ ನಿನ್ನಪ್ಪ ಆ ದಾರಿಯಲ್ಲಿ ಹೋದರೆ ಕಾಲು ಹಿಡಿದು ಆಶೀರ್ವಾದ ಪಡೆದೇ ಗೌರವಿಸುತ್ತಾನೆ.

Sunday 14 October 2012

ಕಥೆ- ರಾಮನ ವೇಷ


ಸುತ್ತಮುತ್ತಲ ಮೂರು ನಾಲ್ಕು ಹಳ್ಳಿಗಳ ಮಧ್ಯೆ ಅದೊಂದು ಪುಟ್ಟ ಊರು. ಎಲ್ಲಾ ಹಳ್ಳಿಗಳ ಹೃದಯವದು. ಬರೀ ೩೦ ಮನೆಗಳು ಸ್ವಲ್ಪವೇ ಜಮೀನು ಹೊಂದಿರುವ ಜನರು ಒಬ್ಬರಿಗೊಬ್ಬರು ಬೆರೆತು ರಾಮಪುರವಾಗಿತ್ತು ಹಳ್ಳಿ. ಸಣ್ಣ ದೇವರ ಗುಡಿಯೊಂದು, ಎದುರೇ ಸಣ್ಣ ಕೆರೆ ಹಿಂದಿನಿಂದ ಬೆಟ್ಟದೊಂದಿಗೆ ಕಾಡು. ಆಲೋಚಿಸಿದರೆ ಸಣ್ಣಮಕ್ಕಳು ಚಿತ್ರ ಬಿಡಿಸಿದಂತೆ ತೋರುತ್ತಿತ್ತು.

ಪೇಟೆಯಲ್ಲಿ ಕೋಳಿಅಂಗಡಿ ಇಟ್ಟ ತಿಮ್ಮನ ಮನೆ ಮೊದಲ್ಗೊಂಡು ರಾಮಣ್ಣನ ಮನೆ ದಾಟಿದರೆ ಟೈಲರಣ್ಣನ ಮನೆ. ನಂತರ ಒಂದೆಕರೆಯಷ್ಟು ಮಳೆನೀರಾವರಿ ಜಮೀನು. ಅದಾಗಿ ಪುನಃ ಮನೆಗಳು. ತಿಮ್ಮನೂ ರಾಮಣ್ಣನೂ ಟೈಲರಣ್ಣನೂ ನಮಗೆ ಪ್ರಧಾನವಾದ್ದರಿಂದ ಉಳಿದವರ ಹೆಸರು ಬೇಡವೆನಿಸುತ್ತದೆ. ಅಂದಹಾಗೆ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುವ ಕೃಷ್ಣಪ್ಪನ ಮನೆಯೂ ತಿಮ್ಮನ ಮನೆಯಿಂದ ಒಂದೈದು ಫರ್ಲಾಂಗ್ ದೂರದಲ್ಲಿದೆ. ಹರಟೆಹೊಡೆಯುವುದರಲ್ಲೇ ನಿಸ್ಸೀಮನೆನಿಸಿದ ತಿಮ್ಮ ಮತ್ತೆ ಟೈಲರಣ್ಣರನ್ನು ದಿನವೂ ಭೇಟಿಯಾಗುತ್ತಾನೆ ರಾಮಣ್ಣ. ಅದೇನಕ್ಕೋ ಹಾಗಿರುವ ಸೆಳೆತ ಅವರ ಮಧ್ಯೆ ಇದೆ.
--
ಪಕ್ಕದ ಹಳ್ಳಿಯ ವಿಜೃಂಭಣೆಯ ಜಾತ್ರೆಯ ಬಗ್ಗೆ ಎಲ್ಲರೂ ಹೊಗಳಿದ್ದೇ ಹೊಗಳಿದ್ದು. ಜಾತ್ರೆಗಿಂತಲೂ ಪ್ರಧಾನವಾಗಿ ಆಕರ್ಷಿಸಿದ್ದು ಅಲ್ಲಿನ ಸಂತೆ ಮತ್ತೆ ಕಾರ್ಯಕ್ರಮಗಳು. ಊರದೇವಿಯ ಜಾತ್ರೆ ಅದೂ ಎರಡುವರ್ಷಕ್ಕೊಮ್ಮೆ ನಡೆಯುವುದು. ಇತ್ತೀಚೆಗೆ ಸರ್ಕಾರದ ಸರ್ಪಕಾವಲಿನಲ್ಲಿ ಕುರಿ ಕೋಣಗಳನ್ನು ಬಲಿ ಕೊಡದಿದ್ದರೂ ಉಳಿದೆಲ್ಲಾ ಆಧುನಿಕ ಕಾರ್ಯಕ್ರಮಗಳು ಸಾಂಗವಾಗಿ ನೆರವೇರಿ ಕಳೆದುಕೊಂಡವರು ಅಷ್ಟನ್ನೂ ಕಳೆದುಕೊಂಡರೆ ಗಳಿಸಿದವರು ಮುಂದಿನ ಎರಡು ವರ್ಷಕ್ಕೆ ಜೀವನ ಸಾಗಿಸಬಹುದು.

ನೆಮ್ಮದಿಯಿಂದ ನಿಟ್ಟುಸಿರು ಬಿಡುವ ಕಾಲಕ್ಕೇ ಜಾತ್ರೆಯಾಗಿದ್ದು ಎಲ್ಲಾ ಹಳ್ಳಿಯ ಗ್ರಾಮಸ್ಥರನ್ನು ಖುಷಿಗೊಳಿಸಿತ್ತು. ಹರಕೆಯನ್ನು ತೀರಿಸಲೆಂದು ತೆಗೆದಿಸಿದ ಅಷ್ಟೂ ಹಣವನ್ನು ಉಪಯೋಗಿಸಿ ಮೆರೆದಾಡಿದರು ಜಾತ್ರೆಯಲ್ಲಿ. ಪೇಟೆಯಲ್ಲಿರುವವರೂ ಹಳ್ಳಿಗೆ ಬಂದು ಒಂದೈದಾರು ದಿನ ವ್ಯಯಿಸಿ ಪುನಃ ಪೇಟೆಗೆ ನಡೆದರು. ಯಾವುದೋ ಸಂಭ್ರಮದ ಕನಸು ಸೂರ್ಯನ ಬೆಳಕಿನ ಕಿರಣಗಳಿಗೆ ಎಚ್ಚರವಾದ ಹಾಗೆ ಪುನಃ ಮೌನಕ್ಕೆ ಜಾರಿತು.

ಇದೆಲ್ಲಾ ಜಾತ್ರೆಯ ವ್ಯವಹಾರಗಳು ರಾಮಣ್ಣನ ತಲೆಯ ಮೂಲೆಯಲ್ಲಿ ಇದ್ದರೂ ಪ್ರಧಾನವಾಗಿ ಕುಣಿಯತೊಡಗಿದ್ದು ಆ ಯಕ್ಷಗಾನ. ಎಂತಹ ಆಟವದು? ಆ ಭೀಮ ಆ ಧುರ್ಯೋಧನ ಆ ಭಾಗವತರ ಹಾಡು ಆ ಚೆಂಡೆಯ ಅಬ್ಬರ. ಇದರ ಬಗ್ಗೆ ಪೇಪರಿನ ಮೂಲೆಯಲ್ಲೂ ಪ್ರಕಟವಾಗಿ ಮತ್ತಷ್ಟು ತುಪ್ಪ ಸುರುವಿದಂತಾಗಿತ್ತು. ಹಳ್ಳಿಯಲ್ಲಿ ಎಂತಹ ಕಲೆಯ ಬೀಜ ಅಡಗಿದೆ? ಎಂತಹ ಅಧ್ಬುತ ಪ್ರತಿಭೆಗಳಿದ್ದಾವೆ ಎಂದೆಲ್ಲಾ ಚಿತ್ರಸಮೇತ ಪತ್ರಿಕೆಯವರು ಪ್ರಕಟಿಸಿದ್ದರು. ಈ ಚರ್ಚೆ ಸುಮಾರು ದಿನದ ವರೆಗೆ ಮಿತ್ರರಲ್ಲೂ ಸಾಗಿ ಬಂದಿತ್ತು.
---
ಸೂರ್ಯ ಮುಳುಗಿದನೋ, ಕರುಗಳಿಗೆ ಮೇವಾಯಿತೋ ಗೊತ್ತಿಲ್ಲ. ರಾಮಣ್ಣಾದಿ ಮಿತ್ರರು ಹರಟಲು ಕಟ್ಟೆಗೆ ಹಾಜರು. ಯಾವುದೇ ವಿಷಯವಿದ್ದರೂ ಇಂದೇ ಚರ್ಚೆಯಾಗಿ ಮುಕ್ತಾಯವಾಗುವವರೆಗೂ ಒಂದು ಕಟ್ಟು ಬೀಡಿ, ಒಂದಷ್ಟು ಎಲೆ ಅಡಕೆ ಬಿಟ್ಟರೆ ಬೇರೆ ವಿಷಯವಿಲ್ಲ. ಇಂದಿನ ಮುಖ್ಯವಾದ ವಿಚಾರ ರಾಮಪುರದ ಜಾತ್ರೆಯಾಗಿತ್ತು. ಜಾತ್ರೆ ಹೇಗಾದರೂ ಆಗಲಿ, ಸಂತೆ ಎಷ್ಟಾದರೂ ಬರಲಿ, ಪಕ್ಕದ ಹಳ್ಳಿಯ ವೈಭವದ ಯಕ್ಷಗಾನ ಮರೆಸುವ ಆಟವೊಂದು ಇಲ್ಲಿ ಆಗಲೇ ಬೇಕು ಎನ್ನುವ ಸರ್ವಾನುಮತದ ಅಭಿಪ್ರಾಯ.

ಹೌದು. ತೀರ್ಮಾನವೇನೋ ಆಯಿತು. ಯಾವ ಪ್ರಸಂಗ ಯಾರು ಪಾತ್ರಧಾರಿಗಳು?
ಹೆಸರೂ ರಾಮಣ್ಣ, ಊರು ರಾಮಪುರವಾದ್ದರಿಂದ ರಾಮಾಯಣದ ಯಕ್ಷಗಾನವನ್ನೇ ಮಾಡುವುದು ಎಂದು ರಾಮಣ್ಣನ ಅಂಬೋಣ. ಉಳಿದ ಮಿತ್ರರು ಸಮ್ಮತಿ ಸೂಚಿಸಿದರು. ಅಂತೂ ರಾಮಾಯಣದ ಯಾವ ಭಾಗವೆನ್ನುವುದು ಸುಲಭವಾಗಿ ನಿರ್ಣಯವಾಗದೇ ಹಾಗೇ ಉಳಿದಿತ್ತು. ತೀರ್ಮಾನಿಸುವ ವಿಚಾರವನ್ನೂ ರಾಮಣ್ಣನಿಗೇ ಬಿಟ್ಟಿ ಕೈತೊಳೆದುಕೊಂಡರು.

ತಲೆಯೊಳಗೆ ಹುಳವೊಂದು ಕೊರೆದಂತೆ ರಾಮಣ್ಣನಿಗೆ ದಿನವೂ ರಾಮಾಯಣ ಕಾಡತೊಡಗಿತು. ರಾಮ ಕಾಡಿಗೆ ಹೋದ,ವಾಲಿಯನ್ನು ಕೊಂದ, ಸೇತುವೆ ಕಟ್ಟಿದ, ರಾವಣನನ್ನೂ ಕೊಂದ ಪುನಃ ಅಯೋಧ್ಯೆಗೆ ಬಂದು ರಾಜ್ಯವಾಳಿದ ಎಂಬಷ್ಟು ವಿಷಯ ಸಂಪತ್ತಿನ ಹೊರತು ಜಾಸ್ತಿ ವಿಶ್ಲೇಷಣೆ ರಾಮಣ್ಣನಿಗೂ ಉಳಿದವರಿಗೂ ಇರಲಿಲ್ಲ. ಜೊತೆಗೆ ಈ ಯಕ್ಷಗಾನದಲ್ಲಿ ಏನಾದರೂ ಜಾಸ್ತಿ ಹೆಸರು ಮಾಡಬೇಕಿದ್ದರೆ ಸ್ವಲ್ಪ ಜಾಸ್ತಿ ಮಾತನಾಡಬೇಕು. ರಾಮಾಯಣವನ್ನು ಓದಲೇಬೇಕು ಎನಿಸತೊಡಗಿತು.

ಇದು ಎರಡನೇ ಸಲ ರಾಮಣ್ಣ, ಶಾಸ್ತ್ರಿಗಳ ಮನೆಗೆ ಹೋಗುತ್ತಿರುವುದು. ಮೊದಲ ಬಾರಿ, ಹೆಂಡತಿ ಮತ್ತೆ ಇವನ ನಡುವಿನ ಸಮಸ್ಯೆಯ ಬಗೆಗೊಂದು ತೀರ್ಮಾನ ಕೊಟ್ಟವರು ಇದೇ ಶಾಸ್ತ್ರಿಗಳು. ಈಗ ರಾಮಾಯಣದ ಪುಸ್ತಕವೋ ಅಲ್ಲ ಅದಕ್ಕಿಂತ ಹೆಚ್ಚಿನ ಮಾಹಿತಿಯನ್ನು ತಿಳಿಯುವುದಕ್ಕೆ ರಾಮಣ್ಣ ಬಂದಿದ್ದು. ಹಾಗೇ ಒಂದು ಪುಸ್ತಕವನ್ನೂ ತೆಗೆದುಕೊಂಡು ವಾಪಸ್ಸಾದ ರಾಮಣ್ಣ. ಆ ದಿನದಿಂದ ಶುರುವಾಗಿ ಮೂರ್ನಾಲ್ಕು ದಿನ ರಾಮಣ್ಣನ ಮನೆಯಲ್ಲಿ ರಾತ್ರಿ ಎರಡು ಘಂಟೆಯವರೆಗೂ ಬೆಳಕು ಇರುತ್ತಿತ್ತು.
---
ಅದೀಗ ಇಪ್ಪತ್ತಮೂರು ತುಂಬುತ್ತಿತ್ತು. ಸ್ವಲ್ಪ ಓದು ಶಾಲೆಯ ಮೆಟ್ಟಿಲಿನ ಲೆಕ್ಕವನ್ನು ಕಲಿಸಿತ್ತು ಅವನಿಗೆ, ಕಾಲೇಜಿನ ಮೆಟ್ಟಿಲು ಲೆಕ್ಕಕ್ಕೇ ಸಿಗಲಿಲ್ಲ. ಎರಡು ಎಕರೆ ಮಳೆಗಾಲದ ಜಮೀನಿನ ಜೊತೆಗೆ ಮನೆಯಲ್ಲಿ ತಕ್ಕಮಟ್ಟಿಗೆ ಚೆನ್ನಾಗಿದ್ದ ಹೈನುಗಾರಿಕೆ ಅವನ ಓದನ್ನು ಮೊಟಕುಗೊಳಿಸಿ ತಿರುಗಾಟಕ್ಕೆ ಉತ್ತೇಜಕವಾಗಿತ್ತು. ಬೆಂಗಳೂರಿಗೆ ಹೋಗಬೇಕು ಎನ್ನುವ ಅಚಲವಾದ ಆಸೆ ಮೊಳಕೆಯೊಡೆದು ಬೇರೂರಿ ರಾಮಣ್ಣ ಬೆಂಗಳೂರಿಗೆ ಹೊರಟ.

ಬೆಂಗಳೂರಿನ ಟ್ರೈನು ಇಳಿದದ್ದೇ ಜನರ ಮುಖ ಪರೀಕ್ಷೆಗೆ ತೊಡಗುತ್ತಿದ್ದನವನು.ಇವನು ಹೊಸಬನೆಂದು ಬೆಂಗಳೂರಿಗೆ ಹೇಗೆ ಅರಿವಾಗಬೇಕು? ತನ್ನ ಹಸಿವೆ, ತನ್ನ ಭೀಕರತೆ ಎಲ್ಲವನ್ನೂ ಮೊದಲ ದಿನವೇ ತೋರಿಸಿತ್ತು. ಎಂತವರನ್ನೂ ಮರುಳುಗೊಳಿಸುವ ಬೆಂಗಳೂರಿನ ಸೆಳೆತಕ್ಕೆ ಯಾರಾದರೇನು? ಬೆಳಗ್ಗಿನ ಚಳಿಯನ್ನು ತಾಳಲಾರದೇ ಕಾಫಿ ಕುಡಿದು, ಒಂದು ಸಿಗರೇಟನ್ನು ಗಮ್ಮೆನ್ನಿಸುತ್ತಿದ್ದಾಗ ತನ್ನನ್ನು ಯಾರೂ ಗಮನಿಸುವುದಿಲ್ಲ ಎಂದು ಬೇಗನೇ ಅರ್ಥಮಾಡಿಕೊಂಡ. ಒಂದೆರಡು ತಿಂಗಳಾಗುವಷ್ಟರಲ್ಲಿ ಹೇಗೋ ಬೆಂಗಳೂರು ಇವನಿಗೆ ಹೊಂದಿಕೊಂಡು ಬಿಟ್ಟಿತು.

ಸುಮಾರು ಐದು ತಿಂಗಳಾದಮೇಲೆ ಮನೆಗೆ ಬರುತ್ತಿರುವನನ್ನು ಮೊದಲಿನ ಉತ್ಸಾಹದಲ್ಲಿ ಹಳ್ಳಿ ಸ್ವೀಕರಿಸಲಿಲ್ಲ. ಅದೇನೋ ದೂರದ ನೆಂಟಸ್ಥಿಕೆಯವರೇನೋ ಹಳ್ಳಿಗೆ ಬಂದಂತೆ ಎನಿಸಿತು. ಅಮ್ಮನ ಪೇಲವ ಮುಖ, ಅಪ್ಪನ ಕೆಮ್ಮು ಎರಡನ್ನೂ ಬೆಂಗಳೂರಿನ ಅಮಲಿನಲ್ಲಿ ಅಲ್ಲಗಳೆದ. ಹಾಲು ಕುಡಿಯದೇ ಮಾರಿದ್ದೇ ಅಮ್ಮನ ಕೃಶ ಶರೀರಕ್ಕೆ ಕಾರಣ, ಹೆಚ್ಚು ತಿರುಗಿದ್ದೇ ಅಪ್ಪನ ಕೆಮ್ಮಿಗೆ ಕಾರಣ ಎಂದು ತನ್ನ ಸೂತ್ರಗಳನ್ನೂ ಪ್ರಯೋಗಿಸಿದ. ಹಾಗೇ ಸಮಯ ಸುಮ್ಮನಿರಲಿಲ್ಲ, ಬಂದ ಎರಡೇ ತಿಂಗಳಿನಲ್ಲಿ ಅಪ್ಪನನ್ನು ಯಾವುದೋ ಕಾಯಿಲೆಯ ರಸೀದಿ ನೀಡಿ ಇವನ ದುಡಿದ ಹಣವನ್ನು ಬೊಜ್ಜಕ್ಕೆ ಖರ್ಚು ಮಾಡಿಸಿತು.

ಸ್ವಲ್ಪ ಅನಾಥನಾದ ರಾಮಣ್ಣನಿಗೆ ಬೇರೇನೂ ತೋಚದೇ ಇದ್ದುದಕ್ಕೇ ಮದುವೆಯಾದ. ಅಮ್ಮನ ಒತ್ತಾಯಕ್ಕೆಂದು ಊರವರ ಬಳಿ ಹೇಳಿಕೊಂಡ. ಹೀಗೇ ಬಂದವಳು ಗೌರಿ. ಮೂರನೇ ಕ್ಲಾಸು ಓದಿದರೂ ದನಕರುಗಳ ಆರೈಕೆ, ಸಣ್ಣ ಪುಟ್ಟ ಕಾಯಿಲೆಗಳಿಗೆ ಸ್ವಯಂ ವೆಟರ್ನರಿ ಡಾಕ್ಟರು. ಕೆಲವೇ ತಿಂಗಳುಗಳಲ್ಲಿ ಹಳ್ಳಿಗೆ ಗೌರಕ್ಕ ಅಥವಾ ಗೌರಮ್ಮನಾಗಿ ಪ್ರಸಿದ್ಧಳೂ ಆದಳು. ಇವನ ತಿರುಗಾಟದ ಜ್ವರಕ್ಕೆ ತಕ್ಕಮಟ್ಟಿನ ಮದ್ದು ಕೊಡಬಲ್ಲಳೂ ಆದ್ದರಿಂದ ಒಂದೆರಡುವರ್ಷ ಸುಖವಾಗಿದ್ದರು ಎಂಬಲ್ಲಿಗೆ ಕತೆಯ ಪ್ರಾರಂಭ.

ಇದ್ದಕಿದ್ದಂತೇ ರಾಮಣ್ಣ ಬದಲಾಗುತ್ತಾ ಬಂದ. ಮದುವೆಗೂ ಮೊದಲು ಅವನ ವ್ಯಕ್ತಿತ್ವ ಹೀಗೇ ಎಂದು ಸಾಕ್ಷಾತ್ ಅಮ್ಮನಿಗೂ ಊಹಿಸುವುದಕ್ಕಾಗಿರಲಿಲ್ಲ. ಖಂಡಿತ ಕುಡುಕನಾಗುವ ಗುಣಲಕ್ಷಣ ಇರಲಿಲ್ಲ. ಒಮ್ಮೊಮ್ಮೆ ಯಾವುದೋ ಹಬ್ಬಕ್ಕೆ ಮದುವೆಗೆ ಸ್ವಲ್ಪ ಕುಡಿಯುತ್ತಿದ್ದುದು ನೀರು ಕುಡಿದಷ್ಟೇ ಸಣ್ಣ ವಿಷಯ. ಆದರೆ ದಿನಾ ಕುಡಿಯುವುದನ್ನ ಯಾಕೆ ಎಂದು ಪತ್ತೆ ಹಚ್ಚುವುದು ಸಾಧ್ಯವಾಗಲಿಲ್ಲ. ಇದು ಪ್ರಕೋಪಕ್ಕೆ ತಿರುಗತೊಡಗಿದ್ದು ಸ್ಪಷ್ಟವಾದಂತೆ ಗೌರಿ ಕಾರಣಗಳನ್ನ ಹುಡುಕತೊಡಗಿದಳು. ಮದುವೆಯಾಗಿ ಮೂರುವರ್ಷ ಸಮೀಪಿಸಿದರೂ ತಾನು ತಾಯಿಯಾಗದೇ ಇರುವ ಬಗೆಯನ್ನು ರಾಮಣ್ಣನ ಮೇಲೆ ಆರೋಪಿಸಿದ್ದಳು. ಇದು ರಾಮಣ್ಣನಿಗೆ ಅಷ್ಟು ಸುಲಭವಾಗಿ ಒಗ್ಗದೇ ಹೋಯಿತು. ರಾಮಣ್ಣನ ಅಮ್ಮ ಮೂಕ ಪ್ರೇಕ್ಷಕಿಯಾದಳು.

ಮುಂದಿನ ದಿನಗಳನ್ನ ಮನೆಯ ಮಾಡೂ ನಿರೀಕ್ಷಿಸಿರಲಿಲ್ಲ. ಎಲ್ಲವೂ ಜಟಿಲವಾಗುತ್ತಾ ಬಂತು. ಹೇಗೋ ರಾಮಣ್ಣ ಕುಡಿದು ಕುಪ್ಪಳಿಸಿ ಹನ್ನೆರಡು ಘಂಟೆಗೆ ಮನೆಯ ಅಂದಾಜಿನ ಮೇಲೆ ಬರುತ್ತಿದ್ದ. ನಂತರ ಮನೆಯಲ್ಲಿ ಮಹಾಯುದ್ಧವು ಪ್ರಾರಂಭವಾಗಿ ಬೈಗುಳ ಸಣ್ಣಪುಟ್ಟ ಹೊಡೆತದೊಂದಿಗೆ ಮುಕ್ತಾಯವಾಗುತ್ತಿತ್ತು. ದಿನವೂ ಇದನ್ನ ಸಹಿಸಿಕೊಂಡು ಅದು ಹೇಗೋ ಗೌರಮ್ಮ ಸುಮ್ಮನಿದ್ದಳು.ಒಂದು ದಿನ ಮಾತ್ರ ತುಂಬಾ ರೋಸಿಹೋಗಿ, ಅದೇನು ನಿಮ್ಮ ತಾಕತ್ತು ಕುಡಿದ ಮೇಲೆ? ಮಕ್ಕಳನ್ನು ಕೊಡುವ ತಾಕತ್ತಿಲ್ಲದವರು ಬದುಕಿದರೆಷ್ಟು ಸತ್ತರೆಷ್ಟು? ಎಂದಳು.

ಏನಾದರೂ ಸಹಿಸಿಕೊಳ್ಳಬಲ್ಲ ರಾಮಣ್ಣ ತನ್ನ ಕುಡಿತದ ಅತ್ಯಂತ ಹೆಚ್ಚಿನ ಅಮಲಿನಲ್ಲೂ ಈ ಮಾತುಗಳಿಂದ ತುಂಬಾ ಘಾಸಿಗೊಂಡನು. ಇದೇ ಮಾತುಗಳ ಪ್ರಭಾವವೋ ಏನೋ ಮತ್ತೆ ಕೆಲವು ತಿಂಗಳು ರಾಮಣ್ಣನಿಲ್ಲದ ರಾಮಣ್ಣನ ಮನೆ ಬಿಕೋ ಎನ್ನುತ್ತಿತ್ತು.

ಚೆನ್ನಾಗಿದ್ದ ರಾಮಣ್ಣ ಮಂಕಾಗುತ್ತಾ ಹೋದ. ಮಂಕಾಗುತ್ತಿದ್ದವ ಪುನಃ ಪ್ರಕಾಶಮಾನವಾಗತೊಡಗಿದ.  ಸುಮಾರು ದೂರದಲ್ಲಿರುವ ಹಳ್ಳಿಯ ವಾಸ್ತವ್ಯವನ್ನು ಗೆಳೆಯರ ಬಳಿ ಹೇಳಿಕೊಂಡ, ಹೇಗೋ ಕೆಲಸ ಮಾಡಿ ಬದುಕಿದ್ದ ರಾಮಣ್ಣ ಪುರುಷಾರ್ಥದ ಸಾಧನೆಗಾಗಿ ಯಾವುದೋ ಎರಡನೇ ಮದುವೆಯನ್ನೂ ಆದ. ಹೊಸಾ ಹೆಂಡತಿ ಗೌರಮ್ಮನಷ್ಟು ಒಳ್ಳೆಯವಳಲ್ಲದಿದ್ದರೂ ತನ್ನ ಪುರುಷಾಭಿಮಾನಕ್ಕೆ ಕಳಶವನ್ನಿಟ್ಟಳು. ತಾನು ಗರ್ಭವತಿ ಎಂದು ಮದುವೆಯಾಗಿ ಮೂರು ತಿಂಗಳಲ್ಲೇ ಸಾರಿದಳು. ಸುಮಾರು ಏಳೆಂಟು ತಿಂಗಳಾಗುವಂತೆಯೇ ಮನೆಯ ನೆನಪಾಗಿ ಪುನಃ ಹಳ್ಳಿಗೆ ಬಂದು ಬಿಕೋ ಎನ್ನುತ್ತಿದ್ದ ಮನೆಯನ್ನು ರಾತ್ರಿ ಹನ್ನೆರಡರವರೆಗೂ ಎಚ್ಚರಿಸಿದ.

ತಾನು ಹೇಗೆ ಗಂಡಸು ಎಂಬುದಕ್ಕೆ ಗೌರಮ್ಮನಿಗೆ ಪುರಾವೆಯಾಗಿ ಇನ್ನೊಂದು ಮದುವೆಯ ಕಥೆಯನ್ನೂ ಹೇಳಿದ. ಇದರಿಂದ ಮನೆಯ ಜಗಳ ಇನ್ನೂ ಹೆಚ್ಚಾಗಿ ಊರಿಗೆಲ್ಲಾ ದೊಡ್ಡ ವಿಷಯವಾಯಿತು. ಜಾಸ್ತಿಯಾದಂತೆ ಊರಿನವರೇ ಸೇರಿ ರಾಮಣ್ಣ, ತಾಯಿ ಮತ್ತೆ ಗೌರಮ್ಮನನ್ನು ಊರಿನ ಶಾಸ್ತ್ರಿಗಳ ಮನೆಗೆ ಕರೆದುಕೊಂಡುಹೋಗಿ, ಎಲ್ಲಾ ವಿಚಾರಗಳನ್ನು ನಿರ್ಣಯಿಸಿ ತೀರ್ಪು ಕೊಡಲಾಯಿತು. ಯಾವುದೇ ಕಾರಣಕ್ಕೂ ರಾಮಣ್ಣ ಹಳ್ಳಿಯನ್ನು ಬಿಟ್ಟು ಹೋಗದಂತೆ, ಯಾವುದೇ ಜಗಳ ಮಾಡದಂತೆ ರಾಮಣ್ಣನನ್ನು ಶಾಸ್ತ್ರಿಗಳೇ ಎಚ್ಚರಿಸಿ ಕಳುಹಿಸಿದ್ದರು. ಒಂದುವೇಳೆ ನಿನ್ನನ್ನು ಹುಡುಕಿ ಯಾರಾದರೂ ಬಂದಲ್ಲಿ ಪುನಃ ಮಾತನಾಡೋಣ ಎಂದು ಕೂಡಾ ಹೇಳಿದ್ದರು.
---
ಇದೇ ಬರುವ ಶನಿವಾರ ಯಕ್ಷಗಾನ. ಹಳ್ಳಿಯ ಮರ್ಯಾದೆಯನ್ನು ಜಾಸ್ತಿ ಮಾಡುವಂತಹ ವಿಷಯ ಎಂದು ಎಲ್ಲರೂ ಶಕ್ತಿಮೀರಿ ದುಡಿಯತೊಡಗಿದರು. ತಮ್ಮ ತಮ್ಮ ಪಾತ್ರಗಳಿಗೆ ಬೇಕಾದ ವಸ್ತು,ವಿಷಯಗಳ ಸಂಗ್ರಹಣೆಯಲ್ಲಿ. ರಾಮಣ್ಣನಂತೂ ತನ್ನ ದೇಹದ ಚಿಂತೆಯನ್ನೂ ಮರೆತು ಓದುತ್ತಾ ಇದ್ದ ರಾಮಾಯಣವನ್ನು. ನಾಳೆಯ ಪಾತ್ರಕ್ಕಾಗಿ ಕೊನೆಯ ಬಾರಿ ಕಣ್ತುಂಬ ರಾಮಾಯಣದ ರಾಮನನ್ನು ಕಾಣತೊಡಗಿದ ರಾಮಣ್ಣ.

ರಾಮಾಯಣ ಏನಕ್ಕೆ ರಾಮಣ್ಣನನ್ನು ಘಾಸಿಗೊಳಿಸುತ್ತಾ ಸಾಗಿತೋ? ರಾಮನ ಆದರ್ಶಗಳೇನು? ತನ್ನ ಪಾತ್ರವೇನು? ಬರಿಯ ಯಕ್ಷಗಾನದ ಪಾತ್ರಕ್ಕಾಗಿ ರಾಮನ ಮುಖವಾಡವೇ? ಅಲ್ಲ ರಾಮನಂತಹ ಒಂದು ಆದರ್ಶ ಬೇಕೇ? ಈ ಗೌರಮ್ಮ ಇನ್ನೂ ನನ್ನನ್ನು ಕ್ಷಮಿಸುತ್ತಾ ನನ್ನ ಜೊತೆ ಇರುವುದಕ್ಕೆ ಕಾರಣವೇನು? ಎರಡನೇ ಹೆಂಡತಿಯ ಮಗು ನನ್ನ ಹಾಗೇ ಇರಬಹುದೇ? ಇರಬಹುದಾದರೆ ನನ್ನನ್ನು ಹುಡುಕುವ ಪ್ರಯತ್ನ ಅವರು ಮಾಡಿರಬಹುದೇ? ಇದೆಲ್ಲಾ ರಾಮಣ್ಣನ ತಲೆಯಲ್ಲಿ ತುಂಬುತ್ತಾ ಹೋಯಿತು.

ಶನಿವಾರ ಗೌರಮ್ಮ ತನ್ನ ಬೆಳಗ್ಗಿನ ಕೆಲಸಗಳನ್ನೆಲ್ಲಾ ಮುಗಿಸಿ ಕಸಗುಡಿಸುತ್ತಾ ರಾಮಣ್ಣನ ಕೋಣೆಯನ್ನು ಹೊಕ್ಕಿದ್ದೇ ದೊಡ್ಡದಾಗಿ ಕಿರುಚಾಡಿದಳು. ರಾಮಣ್ಣ ಏನಕ್ಕೆ ಆತ್ಮಹತ್ಯೆ ಮಾಡಿಕೊಂಡ ಎಂಬ ವಿಷಯ ಶಾಸ್ತ್ರಿಗಳೂ ಊಹಿಸದೇ ಹೋದರು.
----0-----

Friday 12 October 2012

ಅಪ್ಪಚ್ಚಿ ಹೇಳಿದ ಅಪ್ಪನ ಕತೆ- ಭಾಗ ೨ (ಸುರಂಗದ ಕತೆ)



ನಿನ್ನೆಯ ಕತೆ ಬಹಳ ಹೊತ್ತು ಯೋಚಿಸುವಂತೆ ಮಾಡಿತು. ಕತೆಯೇನೋ ರಮ್ಯವಾಗಿತ್ತು. ಅಂತಹ ಧೈರ್ಯವಿತ್ತೇ? ಯೋಚನೆಯಿತ್ತೇ ಬಾಲ್ಯದಲ್ಲೇ? ಸಾಧ್ಯವಿಲ್ಲವೇನೋ. ಚಿಕ್ಕಪ್ಪ ನನ್ನನ್ನು ರಂಜಿಸುವುದಕ್ಕೆಂದು ಹೇಳಿದ್ದಿರಬಹುದೇ? ಇಲ್ಲ ಕಟ್ಟುಕತೆಯಾಗಿರಬಹುದೇ? ಇದೆಲ್ಲಾ ವಿಚಾರಗಳು ತಲೆಯಲ್ಲಿ ಕೊರೆಯುತ್ತಿದೆ. ನಾಳೆಯೂ ಚಿಕ್ಕಪ್ಪನಿಗೆ ಎಲ್ಲೂ ಹೋಗಲಿಕ್ಕಿರಲಿಕ್ಕಿಲ್ಲ. ಹೋಗಿ ಅವರಮನೆಯಲ್ಲೇ ಕುಳಿತು ಸುಮ್ಮನೆ ಹೀಗೇ ಮಾತನಾಡಿಸಿದರೆ ಮುಂದಿನ ಕೆಲವು ಕತೆಗಳನ್ನಾದರೂ ಹೇಳಬಹುದು. ಹೇಗಾದರೂ ಮಾಡಿ ಇನ್ನೂ ತಿಳಿದುಕೊಳ್ಳಬೇಕು. ಸಾಧ್ಯವಿದ್ದರೆ ಅಂಗಡಿಯ ಜಗ್ಗಣ್ಣನನ್ನೂ ಭೇಟಿಯಾಗಬೇಕು. ಈ ರಜೆ ಮುಗಿಯುವುದರೊಳಗೆ ಒಂದು ಅಧ್ಯಯನ ಮಾಡಿದಂತೆ ಇದನ್ನೆಲ್ಲ ಡೈರಿಯಲ್ಲಿ ಬರೆದಿಟ್ಟು ಮಲಗುತ್ತೇನೆ.
--
ಓಹ್, ಬಾ ಮಾರಾಯ. ನಿನ್ನೆ ನೀನು ಕೊಟ್ಟ ಯಕ್ಷಗಾನದ ಸೀಡಿ ನೋಡಿ ನಿದ್ದೆ ಕಡಿಮೆಯಾಯಿತು. ಈಗ ತಿಂಡಿ ಆಗಿ ಹೊರಗೆ ಬರ್ತಾ ಇದ್ದೆ. ತಿಂಡಿ ಆಯಿತೇ ನಿನ್ನದ್ದು?. ನೀನೂ ಎಲೆ ಅಡಿಕೆ ಹಾಕುತ್ತೀಯಲ್ಲಾ? ತೋಟಕ್ಕೆ ಹೋಗಿ ಅಡಕ್ಕೆ ಹೆಕ್ಕುವುದಕ್ಕಿದೆ. ಈ ಹಾಳು ಬಾವಲಿಗಳು ಎಲ್ಲಾ ತಿಂದು ಚಲ್ಲಾಪಿಲ್ಲಿ ಚೆಲ್ಲುತ್ತವೆ.ಬಾವಲಿಗಳಿಗೆ ಟ್ರೈನಿಂಗ್ ಕೊಟ್ಟು ಅಡಕೆ ಕೊಯಿಲು ಮಾಡುವುದಕ್ಕೆ ಆಗುವುದಿಲ್ಲವೇ? ಇನ್ನು ಕೊಯಿಲು ಮಾಡಬೇಕು. ಈ ಸಲ ಇಳುವರಿ ಜಾಸ್ತಿ, ರೇಟು ಕಡಿಮೆ. ಹಾಳಾದ್ದು ಕಲ್ಲಿದ್ದಾಗ ನಾಯಿ ಕಾಣುವುದಿಲ್ಲ ನಾಯಿ ಇದ್ದಾಗ ಕಲ್ಲೇ ಕೈಗೆ ಸಿಗುವುದಿಲ್ಲ. ನಿನಗೆ ಗೊತ್ತಿರಲಿಕ್ಕಿಲ್ಲ,

ಮೊದಲು ಈ ತೋಟ ಇದೆಯಲ್ಲ ಇದರ ೧೫ ಪಟ್ಟು ನಮ್ಮ ತೋಟವಿತ್ತು. ಇದೇ ಅಡಕೆ ಮರಗಳು ಆಗ ಸಣ್ಣವು. ನಾವೇ ಅಡಿಕೆ ಮರದ ಬಟ್ಟಲಿಂದ ನೀರು ಎರೆದು ಇದನ್ನೆಲ್ಲ ಬೆಳೆಸಿದ್ದು ನೋಡು. ಮುಂದೆ ಹರಿದು ಹಂಚಿಹೋದ ತೋಟಗಳನ್ನು ಬೇಲಿಯಾಚೆಯಿಂದ ನೋಡುವಾಗ ನೋವಾಗುತ್ತದೆ. ಇಮಾನ್ ಸೋಜರು ಗದ್ದೆ ಮಾಡುತ್ತಿದ್ದಾರಲ್ಲಾ ಅಲ್ಲಿವರೆಗೆ ನಮ್ಮ ತೋಟ. ನಿನ್ನಪ್ಪನೂ, ದೊಡ್ಡಪ್ಪನೂ ನಾನೂ ಸುಮಾರು ಮೂರು ಸಾಲುಗಳಿಗೆ ನೀರು ಹಾಕಬೇಕಿತ್ತು ದಿನಾ. ಇದೇ ನೀರಿನದಂಡೆ. ಮೊದಲು ಇಮಾನ್ ಸೋಜರ ಮನೆಯ ಹಿಂದೆ ಇದ್ದ ಸುರಂಗದಿಂದ ನೀರು ಬರುತ್ತಿತ್ತು. ಇಲ್ಲೂ ಒಂದು ವಿಶೇಷವಾದ ಕತೆ ಇದೆ. ನಿನಗೆ ಕೇಳಿ ಗೊತ್ತಿರಬೇಕು.!

ಹೇಳು ಚಿಕ್ಕಪ್ಪ. ಇಮಾನ್ ಸೋಜರು ಗೊತ್ತು. ಅವರ ಅಪ್ಪ ಬಾಬುವೂ ಕೇಳಿ ಗೊತ್ತು.

ಓಹೋ. ಬಾಬುವನ್ನೂ ನೆನಪಿದೆಯೇ? ಸರಿ. ಬಾ, ಹೇಗೂ ಇಮಾನ್ ಸೋಜರ ಮನೆಯಿಂದ ಪಂಪಿನ ಸ್ಪಾನರು ತರಲಿಕ್ಕಿದೆ. ಹಾಗೇ ಹೋಗಿ ಬರೋಣ. ಇದೇ ಬಾಬು ಸೋಜರಿದ್ದಾರಲ್ಲ, ಅವರು ಮೊದಲು ನಮ್ಮ ಮನೆಯಲ್ಲಿ ಕೆಲಸಕ್ಕಿದ್ದವರು. ಈಗ ಕೊಡುವಂತೆ ದಿನಕ್ಕೆ ೩೦೦, ೪೦೦ ಕೊಡುವಂತಿಲ್ಲ ಆಗ. ಹೇಳಿದ ಕೆಲಸ ಮಾಡಬೇಕಿತ್ತು, ಹಾಗೆಯೇ ಕೊಟ್ಟದ್ದನ್ನು ತೆಗೆದುಕೊಂಡು ಹೋಗಬೇಕಿತ್ತು. ಮತ್ತೆ ನಮ್ಮ ಹಿರಿಯರು ಮಾಡಿದ್ದೂ ಅದೇ, ಕೊಟ್ಟರೂ ಕೊಡದವರಂತೆ ಸಿಟ್ಟಾಗುತ್ತಾ ಇರುತ್ತಿದ್ದರು. ಕೊಡದೇ ಇದ್ದರೂ ನಾನೇನೂ ಕೊಡಲಿಲ್ಲವೆಂದು ಜಗತ್ತಿಗೆ ಸಾರುತ್ತಿದ್ದರು. ನಮ್ಮ ಅಪ್ಪ, ಅಂದರೆ ನಿಮ್ಮ ಅಜ್ಜ ಏನೂ ಕೊಡುತ್ತಿರಲಿಲ್ಲ. ಆದರೆ ಅಮ್ಮ ಕೊಡುತ್ತಿದ್ದದು ತಿಳಿದು ಸುಮ್ಮನೇ ಇದ್ದರು. ಅಂದರೆ ಚಿವುಟುವುದೂ ತೊಟ್ಟಿಲು ತೂಗುವುದೂ ಎರಡೂ ಕೆಲಸವನ್ನು ಮಾಡುತ್ತಿದ್ದರು.

ನೋಡು ಇದೇ ಈಗ ಇಮಾನ್ ಸೋಜರ ಮನೆ. ಮೊದಲ ಮಗನಿಗೆ ಮದುವೆಯಾಗಿ ಈಗ ಪೇಟೆಯಲ್ಲಿದ್ದಾನೆ. ಎರಡನೇ ಮಗ, ಹೆಂಡತಿ ಮತ್ತೆ ಸೋಜರು ಮಾತ್ರ ಇಲ್ಲಿ. ಸೋಜರು ಮನೆಯಲ್ಲಿದ್ದಂತಿಲ್ಲ, ನಾವು ತೋಟದಲ್ಲೇ ಮುಂದೆ ಹೋಗಿ ಸುರಂಗ ನೋಡಿಕೊಂಡು ಬರುವುದರೊಳಗೆ ಬಂದಾರವರು.

ನೋಡು ಈ ಈಚಲಮರದ ಗುರುತು. ಇಲ್ಲಿ ಈ ಕಲ್ಲಿಂದ ಬಗ್ಗಿ ನೋಡಿದರೆ ಗವ್ವೆನ್ನುವ ಕತ್ತಲೆ ಬಿಟ್ಟರೆ ಬೇರೇನೂ ಕಾಣಿಸುತ್ತಿರಲಿಲ್ಲ ಮೊದಲು. ಇದೇ ಜಾಗದಲ್ಲಿ ಮೊದಲು ಸಣ್ಣ ಕೆರೆ ಇತ್ತು. ಸುರಂಗದ ಶುದ್ಧ ನೀರು ಹರಿದು ಕೆರೆಯನ್ನು ಸೇರಿ ನಂತರ ನಮ್ಮ ಮನೆಯ ಎದುರಾಗಿ ಹರಿದು ತೋಡು ಸೇರುತ್ತಿತ್ತು. ಈಗ ಮಳೆಗಾಲದಲ್ಲಿ ಮಾತ್ರ ನೀರು. ಮೇಲೆ ರಬ್ಬರಿದೆ ನೋಡು ಅದಕ್ಕೇ.

ಮೊದಲು ನಾವು ಸಣ್ಣದಿದ್ದಾಗ, ದೊಡ್ಡಪ್ಪ, ನಿನ್ನಪ್ಪ, ಜಗ್ಗು, ಎಲ್ಲಾ ಇಲ್ಲಿನ ಖಾಯಂ ಸದಸ್ಯರು. ಸುರಂಗದ ತಂಪು ನೀರು ಈ ಕರಾವಳಿಯ ಬೆಚ್ಚನೆಯ ಬೆವರಿಗೆ ಒಳ್ಳೆಯ ಸಾಂತ್ವನ ಒದಗಿಸುತ್ತಿತ್ತು. ಹಾಗೆಯೇ ಆಡಿ ದಣಿದಾಗ ಇಲ್ಲಿ ಬಂದು ಕುಳಿತು ಕಲ್ಲೆಸೆದೋ ಈಜಿಯೋ ಸಮಯ ಸಾಗಹಾಕುತ್ತಿದ್ದೆವು. ಈಗಲೂ ನೆನೆದರೆ ನಗುಬರುತ್ತಿದ್ದ ವಿಷಯವೆಂದರೆ ಇದೂ ಟಿಪ್ಪು ಸುಲ್ತಾನ್ ಮಾಡಿದ ಸುರಂಗವೆಂದು. ಇಲ್ಲಿಂದ ಹೋದರೆ ಸುಮಾರು ಮೈಲು ದೂರದಲ್ಲಿ ಅದಾವುದೋ ಊರಿಗೆ ತಲುಪುತ್ತದೆ ಎಂಬ ಕತೆ. ಹ್ಹ ಹ್ಹ. ನನಗೂ ಡಿಗ್ರೀ ಮುಗಿಯುವವರೆಗೆ ಇದು ಸತ್ಯವೆಂದೇ ಇತ್ತು.

ಒಂದು ದಿನ ತುಂಬಾ ಬಿಸಿಲು. ರಜಾದಿನ ಬೇರೆ. ಬೆಳಗ್ಗಿನಿಂದ ಮದ್ಯಾಹ್ನದವರೆಗೆ ಆಟವಾಡಿ ಇದೇ ಸುರಂಗದ ಬಳಿಯಲ್ಲಿ ಆಟವಾಡುವುದಕ್ಕೆಂದು ಬಂದಿದ್ದೆವು. ಜಗ್ಗುವೂ ನಿನ್ನಪ್ಪನದೂ ಎಂದಿನಂತೆ ಕೆರೆಯಲ್ಲಿ ಈಜುವ ಪಂದ್ಯ. ನೀನೆಷ್ಟು ಸುತ್ತು ನಾನೆಷ್ಟು ಸುತ್ತು ಎಂದು ಈಜಿ ಈಜಿ ಸುಸ್ತಾದರು. ಶಾಮ ಮತ್ತೆ ಕೇಶವ ಎಂದೂ ತುಂಬಾ ಹೊತ್ತು ನಿಲ್ಲುತ್ತಿರಲಿಲ್ಲ. ಕೇಶವನಿಗಂತೂ ಮನೆ ದೂರವೆಂದು ಬೇಗನೆ ಓಡುತ್ತಿದ್ದ. ಜಗ್ಗು ನಮ್ಮ ಮನೆಯಲ್ಲೇ ಊಟ ಮಾಡಿ, ಬೇಕಾದರೆ ಮೂರು ದಿನ ಇದ್ದು ನಾಡಿದ್ದು ಹೋದರೂ ಯಾರೂ ಏನನ್ನುತ್ತಿರಲಿಲ್ಲ. ಈಗಲೂ ಹಾಗೆಯೇ ಇದ್ದಾನೆ ಬಿಡು.

ಸುಸ್ತಾದವರು ಸುಮ್ಮನಿರುವುದು ಲೋಕದ ರೂಢಿ. ಆದರೆ ಮನಸ್ಸು ಸುಸ್ತಾಗದೇ ಇದ್ದರೆ ಎಂತಹುದನ್ನೂ ದೇಹ ಮಾಡುತ್ತದೆ ಎನ್ನುವುದಕ್ಕೆ ನಮ್ಮಲ್ಲೇ ಎಷ್ಟೋ ಉದಾಹರಣೆಗಳಿರುತ್ತವೆ. ಅದೇ ಹುರುಪು ಅದೇ ಉತ್ಸಾಹದಲ್ಲಿ ಏನು ಮಾಡುವುದು ಎಂದು ಯೋಚಿಸುತ್ತಾ ಇರಬೇಕಾದರೆ ಸುರಂಗದ ಒಳಗೆ ಇರುವ ಕುತೂಹಲ ಇದೆಲ್ಲದಕ್ಕೂ ಸಾಹಸ ತೋರಿಸಲು ಮುಂದಾಯಿತು. ಜಗ್ಗು ಮತ್ತೆ ನಿನ್ನಪ್ಪ ಇದರಲ್ಲಿ ತುಂಬಾ ಮುತುವರ್ಜಿ ವಹಿಸಿದರು. ಆಗ ಬ್ಯಾಟರಿ ಇಲ್ಲ, ಬೇರೆ ಬೆಳಕಿನ ವ್ಯವಸ್ಥೆ ಇಲ್ಲ. ಸುರಂಗವೆಂದರೆ ಕತ್ತಲು, ತೋಟದ ಕತ್ತಲು ಎಲ್ಲಾ ಸೇರಿ ಸ್ವಲ್ಪ ಹೆದರಿಕೆ ಉಂಟುಮಾಡತೊಡಗಿತು.

ಏನಿದ್ದರೂ ಹೊರಗೆ ಬರಲಿ ಎಂದು ಮೊದಲು ಕಲ್ಲೆಸೆಯುವುದು. ಸುಮಾರು ಕಲ್ಲೆಸೆದಾದ ಮೇಲೆ ಸ್ವಲ್ಪ ಧೈರ್ಯ ಬಂತು. ಮೆಲ್ಲನೇ ಸುರಂಗದೊಳಕ್ಕೆ ಎರಡು ಮೂರು ಮೀಟರಿನಷ್ಟು ಒಳಗೆ ಬಂದೆವು. ನಾನು ಮುಂದೆ ಹೋಗಲಿಕ್ಕಾಗಲಿಲ್ಲ, ಅದ್ಯಾವುದೋ ಮೊನಚು ಕಲ್ಲು ತಾಗಿ ಕಾಲ್ಬೆರಳಿಗೆ ಏಟಾಗಿ ನಾನು ಪುನಃ ಹೊರಗೆ ಬಂದು ಕುಳಿತೆ. ಜಗ್ಗು ಮತ್ತೆ ನಿನ್ನಪ್ಪ ಒಳಗೆ ಹೋದರು. ಸಾಧಾರಣ ಇನ್ನೆರಡು ಅಥವಾ ಮೂರು ಮೀಟರು ಹೋಗಿರಬೇಕು ಅಷ್ಟರಲ್ಲಿ ಅದ್ಯಾವುದೋ ಕಾಡು ಹಂದಿ ಅರಚುತ್ತಾ ಹೊರಗೆ ಬಂತು. ನಾನು ಹೆದರಿ ಕೆರೆಗೆ ಹಾರಿದೆ.

ಇದಾದ ಐದಾರು ನಿಮಿಷದಲ್ಲಿ ನಿನ್ನ ಅಪ್ಪ ಜಗ್ಗುವನ್ನು ಹೇಗೋ ಹೊತ್ತುಕೊಂಡೋ ಎಳೆದುಕೊಂಡೋ ಹೊರಗೆ ಬಂದ. ಜಗ್ಗುವಿನ ಕಾಲಿನ ಮಾಂಸ ಕಿತ್ತು ಬಂದಂತಿತ್ತು. ಜೊತೆಗೇ ಮೂಗು ಒಡೆದು ನೆತ್ತರು ಬರುತ್ತಿತ್ತು. ಬಂದವನೇ ಜೋರಾಗಿ ಅಳತೊಡಗಿದೆ. ನಾನು ಓಡಿ ಹೋಗಿ ಬಾಬು ಸೋಜರನ್ನು ಕರೆದುಕೊಂಡು ಬಂದೆ.

ಬಾಬು ಸೋಜರು ಏನೂ ಹೇಳದೇ ಮನೆಗೆ ಎತ್ತಿಕೊಂಡು ನಡೆದರು. ನಾವಿಬ್ಬರೂ ಅಪರಾಧಿಗಳಂತೆ ಹಿಂದೆ. ಮತ್ತೆ ನಮ್ಮನ್ನು ಅವರೇ ಸಮಾಧಾನ ಮಾಡಿ ಜಗ್ಗುವಿನ ಕಾಲಿಗೆ ಕಟ್ಟು ಹಾಕಿ, ಕಳುಹಿಸಿದರು. ಜಗ್ಗು ಸುಮಾರು ೧೦-೧೫ ದಿನ ಅಲ್ಲಿಯೇ ಇದ್ದ. ನಂತರ ಸುಮಾರು ನಾಲ್ಕು ತಿಂಗಳ ವರೆಗೆ ಜಗ್ಗು ನಡೆದಾಡುವುದು ಸಾಧ್ಯವಾಗಲೇ ಇಲ್ಲ.

ಕೊನೆಗೆ ನಿನ್ನಪ್ಪನೇ ಒಳಗಾದ ಕತೆ ಹೇಳಿದ. ಒಳಗೆ ಹೋದಂತೆ ಕತ್ತಲೂ ಬೆಳಕಾಗುತ್ತದಂತೆ. ಹಾಗೆಯೇ ಹೊರಗೆ ಅಸಾಧ್ಯವಾಗಿದ್ದ ಸುರಂಗ ಒಳಸರಿದಂತೆ ಸ್ವಲ್ಪ ಸುಲಭವೆನಿಸಿತು. ಸುರಂಗದ ಬಾಯಿ ಇಷ್ಟೇ ಇದ್ದರೂ ಒಳಗೆ ಸ್ವಲ್ಪ ವಿಶಾಲವಂತೆ. ಮುಂದುವರೆಯುತ್ತಿದ್ದಂತೆ ಎಲೆಬಾವಲಿ ಇತ್ಯಾದಿ ಓಡಿಸಿ, ಕೆಸರಿನ ಕಾಲುಗಳನ್ನೆತ್ತೆತ್ತಿ ಸಾಗುತ್ತಾ ತಿಳಿಯದೇ ನಿನ್ನಪ್ಪ ಹಂದಿಯ ಸಂಸಾರದ ಮೇಲೆ ಕಾಲಿಟ್ಟರಂತೆ. ಅದೆಲ್ಲಿತ್ತೋ ಏನೋ, ದೊಡ್ಡ ಕೋರೆ ಹಲ್ಲಿನ ಹಂದಿಯೊಂದು ಓಡಿಬಂದು ಜಗ್ಗುವಿಗೆ ಹೊಡೆಯಿತಂತೆ. ಆ ಘಳಿಗೆ ಏನುಮಾಡುವುದೆಂದು ತೋಚದ ನಿನ್ನಪ್ಪ ಯಾವುದೋ ಕೈಗೆ ಸಿಕ್ಕ ಕಲ್ಲನ್ನೇ ಹಂದಿಗೆ ಹೊಡೆದ. ಹಂದಿಗೆ ಏಟಾಗಿ ಅದು ಓಡಿ ಹೊರಗೆ ಬಂತು. ನಿನ್ನಪ್ಪ ಬಿದ್ದ ಜಗ್ಗುವನ್ನೆತ್ತಿಕೊಂಡು ಬಂದ.

ಜಗ್ಗುವಿಗೆ ಹಂದಿಯ ಏಟೆಂದು ಯಾರಿಗೂ ಗೊತ್ತಾಗದಂತೆ ಕಟ್ಟು ಕಟ್ಟಿದ ಮಹಾನುಭಾವ ಬಾಬು. ಇವತ್ತಿನವರೆಗೂ ಗುಟ್ಟಾಗಿಟ್ಟು ಈಗ ನಿನ್ನಲ್ಲಿ ಹೇಳಿದೆ. ಜಗ್ಗುವಿನಂಗಡಿಗೆ ಹೋಗಿ ಹೇಳಿಬಿಡಬೇಡ ಮತ್ತೆ. ಇಮಾನ್ ಸೋಜರು ಬಂದಿರಬೇಕು ಈಗ, ಹೋಗೋಣ ನಡೆ.

೧೨-೧೦-೧೨

Thursday 11 October 2012

ಅಪ್ಪಚ್ಚಿ ಹೇಳಿದ ಅಪ್ಪನ ಕತೆ :ಭಾಗ ೧ (ಪ್ರವಾಹದ ಕತೆ)

ಇದೇನು ಅಪ್ಪಚ್ಚಿ ಎಂದರೆ? ನಮ್ ಕಡೆ ಹೀಗೇ, ಅಂದ್ರೆ ಹವ್ಯಕ ಭಾಷೆಯಲ್ಲಿ ಅಪ್ಪಚ್ಚಿ ಅಂದ್ರೆ ಚಿಕ್ಕಪ್ಪ ಎಂದು. ಈಗ ಹೇಳಲಿರುವ ಕಥೆಗಳು ಮಾತ್ರ ಇಂತಹ ಒಬ್ಬ ಅಪ್ಪಚ್ಚಿ ಹೇಳಿದ ನಮ್ಮ ನಾಯಕನ ಅಪ್ಪನ ಕಥೆ.
--
ಭಾಗ ೧.

ಅಪ್ಪಚ್ಚಿ ಹೇಳಿದ ಕಥೆ (೧೯೭೦, ಊಹಿತ ವರ್ಷ) : ಆ ಕಾಲಕ್ಕೆ ಒಂದು ಅದ್ಭುತ ಮನೆಯಾಗಿತ್ತು ಅದು. ಈಗಿನ ಊರು ಬಿಡು, ಹತ್ತಿರದ ಹತ್ತು ಹದಿನೈದು ಊರಿಗೂ ನಮ್ಮ ಮನೆತನ ಹೇಳಿದರೆ ಹೆಸರುವಾಸಿ. ಆಗ ನನಗೆ ೧೦ ನಿನ್ನ ಅಪ್ಪನಿಗೆ ೧೨ ವರ್ಷ ವಯಸ್ಸು. ತೋಡಿನಲ್ಲಿ (ಸಣ್ಣ ನದಿಗಳಿಗೆ ತೋಡು ಎಂದೇ ಕರೆಯುವುದು ನಮ್ಮ ಕಡೆ!) ಮಳೆಗಾಲದಲ್ಲಿ ತೆಂಗಿನಕಾಯಿ ಹಿಡಿಯುವುದು ಈಗ ನೆಟ್’ನಲ್ಲಿ ಹುಡುಗಿಯನ್ನ ಹುಡುಕುವುದಕ್ಕಿಂತ ಸಾಹಸದ ಕೆಲಸ. ಇದಕ್ಕೆ ನಿಯೋಜಿತವಾಗಬೇಕಿದ್ದರೆ ಮೊದಲು ಕೆರೆಯಲ್ಲಿ ಕೈಕಾಲು ಬಡಿದು ಪ್ರಾಕ್ಟೀಸು ಮಾಡಿರಬೇಕು. ಮತ್ತೆ ನಾಯಕ ಹೇಳುವ ಕೆಲಸ ಮಾತ್ರ ಮಾಡಬೇಕು. ಹೆಚ್ಚಾಗಿ ದೂರದಲ್ಲಿ ಸಾಗುವ ಕಾಯಿಯನ್ನು ಹಿಡಿಯಲು ನಾಯಕನಿಗೆ ಮಾತ್ರ ಅವಕಾಶ.
ಇಂತಹದ್ದರಲ್ಲಿ ನಿನ್ನ ಅಪ್ಪನಿಗೆ ಸಿಕ್ಕಿದ ಅವಕಾಶದ ಬಗ್ಗೆ ಆಗ ನಮಗೆಲ್ಲ ಹೆಮ್ಮೆ. ಚೆನ್ನಾಗಿ ಈಜು ಕಲಿತಿದ್ದ ನಿನ್ನ ಅಪನಿಗೆ ಇಂತಹ ಅವಕಾಶ ಸಿಕ್ಕಿತು. ಆ ದಿನ, ಜುಲೈ ಆಗಿರಬೇಕು. ಬೆಕ್ಕೂ ತನ್ನ ದೈನಂದಿನ ವಿಧಿಗಳನ್ನ ಮನೆಯ ಅಟ್ಟದಮೇಲೇ ಪೂರೈಸಿಕೊಳ್ಳುವಷ್ಟು ಮಳೆ.

ಇಂತಹ ಅಮೋಘ ಮಳೆಯ ದಿನ ಜಗ್ಗು,ಶಾಮ, ಕೇಶವ, ನಾನು ಮತ್ತೆ ನಿನ್ನ ಅಪ್ಪ ಪ್ರವಾಹದಲ್ಲಿ ತೆಂಗಿನ ಕಾಯಿ ಹಿಡಿಯಲು ಹೊರಟೆವು. ನಿನ್ನಪ್ಪ ಎಲೆಅಡಿಕೆ ಜಗಿಯುತ್ತಿದ್ದರೂ ಜಗ್ಗು ಬೀಡಿ ಸೇದುತ್ತಿದ್ದರೂ ಮನೆಯಲ್ಲಿ ಯಾರಿಗೂ ಗೊತ್ತಿರಲಿಲ್ಲ. ಹಾಗಾಗಿ ನಮ್ಮಲ್ಲೇ ರಾಜಾರೋಷವಾಗಿ ಇಬ್ಬರೂ ರಾಜಿಸುತ್ತಿದ್ದರು.
--
ದೊಡ್ಡ ನದಿಯಲ್ಲವದು. ಮಳೆಗಾಲದಲ್ಲಿ ಮಾತ್ರ ಸ್ವಲ್ಪ ಭಯ ಹುಟ್ಟಿಸುತ್ತಿತ್ತು. ನಾವು ತೋಡು ಎಂದೇ ಕರೆಯುವುದು. ಈಗಿನ ಭಾಷೆಯಂತೆ ಅದನ್ನು ನದಿ ಎನ್ನುವ ಹಾಗಿಲ್ಲ. ನದಿ ಎಂದರೆ ನೇತ್ರಾವತಿ ನೋಡು.
ಆ ದಿನ ಯಾವನನ್ನು ಮಳೆಗೆ ರಾಜನನ್ನಾಗಿಸಿದ್ದಾರೋ, ಎಡೆಬಿಡದೆ ಸುರಿಯುತ್ತಿದ್ದ. ಅದೂ ಭೂಮಿಯಲ್ಲಿ ನೀರಾದ ಮೇಲೆ ಬಂದ ಮಳೆಯಾದುದರಿಂದ ಬಿದ್ದ ನೀರು ಹಾಗೆಯೇ ತೋಡು ಸೇರುತ್ತಿತ್ತು.
-
ಈಜುವುದು ಸಣ್ಣಕೆರೆಯಿಂದಾರಂಭಿಸಿದ್ದು. ಉತ್ಸಾಹ ಹೆಚ್ಚಿದಂತೆ ಕಲಿಯುವ, ಕಲಿತಂತೆ ಫಲಿತವಾಗುವ ಅನುಭವ ಈಜಿನಿಂದ ಸಿಗುವಷ್ಟು ಯಾವುದರಿಂದಲೂ ಸಿಗುವುದಿಲ್ಲವೆನಿಸುತ್ತದೆ. ಎಲ್ಲರೂ ಒಂದೇ ರೀತಿಯ ಜಲಸ್ಥಂಭ ವಿದ್ಯೆ ಕಲಿತವರು. ಹಾಗಾಗಿ ಎಲ್ಲರಲ್ಲೂ ಸಮಾನತೆಯಿತ್ತು. ಎಲ್ಲರಿಂತ ಸ್ವಲ್ಪ ಕುಳ್ಳನಾದ ಮತ್ತು ಸಣ್ಣವನಾದ ನನ್ನ ಮೇಲೆಯೇ ಕಡಿಮೆ ಹೊರೆಯಿತ್ತು. ನಿನ್ನ ಅಪ್ಪ ಮತ್ತೆ ಜಗ್ಗು ತುಂಬಾ ಉತ್ಸಾಹಿಗಳು ಮತ್ತೆ ಧೈರ್ಯ ಜಾಸ್ತಿ. ಮರದ ತುಂಡು ಕಂಡರೂ ಹಾರುತ್ತಿದ್ದರು ಹಿಡಿಯುವುದಕ್ಕೆ.

ಹೇಳಿದಂತೆ ಮಳೆಯ ಪ್ರವಾಹ ಎಲ್ಲರ ತೋಟವನ್ನೂ ಹೊಕ್ಕು ಬೇಕಾದುದನ್ನು ತನ್ನ ಹೊಟ್ಟೆಗಿಳಿಸಿ ಬೇಡದುದನ್ನು ತೋಟಗಳಲ್ಲಿಯೇ ಬಿಟ್ಟು ಬರುತ್ತಿತ್ತು. ಶಂಕರಜ್ಜನ ತೋಟದೆದುರು ನಾವೆಲ್ಲಾ ಸೇರಿದೆವು. ದಿನಾ ನೀರು ನೋಡುತ್ತಿದ್ದಂತೆ ಇರಲಿಲ್ಲ ಅಂದು. ಈಗಿನ ವರೆಗೂ ನಾನು ಆದಿನ ಕಂಡಂತ ಪ್ರವಾಹ ನೋಡಿಲ್ಲ. ಮಳೆ ಮುಂದುವರೆದಂತೆ ಕ್ರಮೇಣ ತಿಳಿಯಾಗಬೇಕಿತ್ತು ನೀರು. ಇದು ಕಣ್ಣನ್ ದೇವನ್ ಚಹಾದಂತೆ ಮತ್ತಷ್ಟು ರಂಗಿನೊಂದಿಗೆ ಮತ್ತೇರಿಸುತ್ತಿತ್ತು.

ತೆಂಗಿನಮರವೇ ಬರುವ ಪ್ರವಾಹದಲ್ಲಿ ತೆಂಗಿನಕಾಯಿ ಬಾರದೇ? ಸುಮಾರು ೧೦-೧೨ ತೆಂಗಿನಕಾಯಿಗಳಾಗಿತ್ತು ಹಿಡಿದದ್ದು. ನೀರು ಹೆಚ್ಚುತ್ತಿತ್ತು. ಭಯವೂ ಹೆಚ್ಚುತ್ತಿತ್ತಿ. ನಿನ್ನಪ್ಪನಿಗೂ ಜಗ್ಗುವಿಗೂ ಉತ್ಸಾಹ ಅತಿಯಾಗುತ್ತಿತ್ತು. ಕಾಯುತ್ತಿದ್ದರು ಪ್ರವಾಹಕ್ಕೆ ಜಿಗಿಯಲು. ಅದೇ ಸಮಯಕ್ಕೆ ಎರಡು ತೆಂಗಿನಕಾಯಿಗಳು ಬಂತು. ಇಬ್ಬರೂ ಜಿಗಿದರು ಪ್ರವಾಹಕ್ಕೆ. ಒಂದು ಕ್ಷಣದಲ್ಲಿ ಏನಾಯಿತು ಎಂದು ತಿಳಿಯುವಷ್ಟರಲ್ಲಿ ಇಬ್ಬರೂ ತುಂಬಾ ದೂರದಲ್ಲಿ ಪ್ರವಾಹದಲ್ಲಿ ತೇಲಿ ಸಾಗುತ್ತಿದ್ದರು. ಜಗ್ಗುವೂ ನಿನ್ನಪ್ಪನೂ ನಮ್ಮೆಲ್ಲರ ಕಣ್ಣಿಂದ ಮರೆಯಾದರು.

ನಾವು ಸುಮಾರು ಎರಡು ಗಂಟೆಗಳ ಕಾಲ ನೀರು ನೋಡುತ್ತಾ ಅವರನ್ನು ಕಾದು ಕುಳಿತೆವು. ಸಂಜೆಯಾದರೂ ಇವರಿಬ್ಬರ ಪತ್ತೆ ಇರಲಿಲ್ಲ. ಪ್ರವಾಹದಲ್ಲಿ ಈಜಿಕೊಂಡು ಮೇಲೆ ಬರುವುದು ಸಾಧ್ಯವಿಲ್ಲ. ಬದಿಯಲ್ಲೇ ನಡೆದುಕೊಂಡು ಬರಬೇಕು. ಏನು ಮಾಡುವುದು ಎಂದು ತಿಳಿಯದೆ ಸುಮ್ಮನೇ ಇದ್ದೆವು. ಮನೆಯಿಂದ ಕೇಶವನ ಅಪ್ಪ ನಮ್ಮನ್ನು ಹುಡುಕಿಕೊಂಡು ಬಂದರು. ಮುಚ್ಚಿಡಲಾಗದೇ ಹೇಳಿದೆವು. ನಮ್ಮೆಲ್ಲರ ಮನೆಯವರೆಗೆ ಸುದ್ಧಿ ಹೋಯಿತು. ಜಗ್ಗುವಿನ ಅಮ್ಮನ ಗೋಳಾಟವಂತೂ ನೋಡುವಂತದ್ದಲ್ಲ. ಒಬ್ಬನೇ ಮಗ ಬೇರೆ. ನನ್ನನ್ನು ಹೊರತು ಪಡಿಸಿ ಎಲ್ಲರಿಗೂ ಏಟುಗಳು ಬೇರೆ ಸಿಕ್ಕಿ ಮಳೆಯ ಚಳಿಯು ಮರೆತೇ ಹೋಗಿತ್ತು.

ಮಳೆಯ ಕಾರಣಕ್ಕೆ ಮರುದಿನ ಶಾಲೆಗೆ ರಜೆ. ಎಲ್ಲಾ ಸಂಬಂಧಿಕರು ಜಗ್ಗು ಮತ್ತು ನಿನ್ನ ಅಪ್ಪನ ಅನ್ವೇಷಣೆಯಲ್ಲಿ ತೊಡಗಿದ್ದರು. ಮರುದಿನ ಮಧ್ಯಾಹ್ನವಾಗಿತ್ತು. ಜಗ್ಗು ಮತ್ತೆ ನಿನ್ನಪ್ಪ ಇದ್ದಕ್ಕಿದ್ದಂತೇ ಮನೆಯಲ್ಲಿ ಪ್ರತ್ಯಕ್ಷವಾಗಿದ್ದರು ಅದೂ ೨೦-೨೫ ತೆಂಗಿನಕಾಯಿಗಳೊಂದಿಗೆ. ಎಲ್ಲರಿಗೂ ಸಂತೋಷವೂ ರೋಷವೂ ಒಟ್ಟಿಗೇ ಬಂದಿತ್ತು. ಕ್ರಮೇಣ ಹುಡುಕುತ್ತಿದ್ದವರಿಗೆ ಸುದ್ಧಿ ಸಂಚಾರವಾಗಿ ಎಲ್ಲರೂ ಮನೆಯ ಕಡೆ ಬಂದರು. ಏನೇ ತೀರ್ಮಾನವಾದರೂ ನಮ್ಮ ಹಳೆಯ ಮನೆಯಲ್ಲೇ ತಾನೇ?. ಇಬ್ಬರಿಗೂ ಮೊದಲು ಬಿದ್ದಿದ್ದು ಏಟು. ನಾವು ಮೊದಲು ಖುಷಿಪಟ್ಟರೂ ಕೊನೆಗೆ ನಮಗೇ ಏಟು ಬಿದ್ದಂತೆ ಅನಿಸುತ್ತಿತ್ತು. ಅದೆಲ್ಲಾ ಆದ ಮೇಲೆ ಕತೆಯನ್ನು ಕೇಳತೊಡಗಿದರು.

ಪ್ರವಾಹದಲ್ಲಿ ಬಿದ್ದ ಇಬ್ಬರೂ ಬದಿಗೆ ಬರಲಾಗದೆ ಸುಮ್ಮನೆ ತೇಲುತ್ತಾ ಹೋದರು. ಮುಂದೆ ಹೋದಂತೆ ಒಂದು ಕಡೆ ಕವಲೊಡೆಯುತ್ತದೆ ತೋಡು. ಅಲ್ಲಿ ಮಧ್ಯದಲ್ಲಿ ನಡುಗಡ್ಡೆಯ ಮೇಲೆ ಎಸೆದಂತೆ ಇಬ್ಬರನ್ನೂ ನೀರು ಬಿಟ್ಟು ಮುಂದುವರೆಯಿತು. ಆಗ ಸುಮಾರು ಸಂಜೆಯಾಗಿತ್ತಂತೆ. ಮುಳ್ಳು ಜಿಗ್ಗುಗಳಿಂದ ಕೂಡಿದ ಆ ಜಾಗದಲ್ಲಿ ಇಬ್ಬರೂ ಉಳಿದುಬಿಟ್ಟರು. ಎರಡೂ ಬದಿಗೆ ಪ್ರವಾಹವಿರುವುದರಿಂದ ಹೊರಗೆ ಬರುವುದು ಅಸಾಧ್ಯವಾದ ಮಾತಾಗಿತ್ತು. ಹಾಗೆಯೇ ನೀರಿನ ಮೇಲೆ ಸಣ್ಣ ಭಯವೂ ಉಂಟಾಗಿತ್ತು ಇಬ್ಬರಿಗೂ.

ರಾತ್ರಿಯಿಡೀ ಹೇಗೋ ಅಲ್ಲಿಯೇ ಕಳೆದರು ಇಬ್ಬರೂ. ನೀರು ಕ್ರಮೇಣ ಕಡಿಮೆಯಾಗುತ್ತಿತ್ತು ಬೆಳಗ್ಗೆ. ಅದೇ ಸಮಯಕ್ಕೆ ಇಬ್ಬರಿಗೂ ಇನ್ನೊಂದು ಆಲೋಚನೆ ಬಂತು. ನಮ್ಮನ್ನೇ ಎಸೆದು ಹೋದ ನೀರು ಎಷ್ಟು ತೆಂಗಿನಕಾಯಿ ಇಲ್ಲಿ ಎಸೆದಿರಬಹುದೆಂದು? ಆ ರೀತಿ ಕಾರ್ಯಪ್ರವೃತ್ತರಾದ ಇವರು ಅಲ್ಲಿಂದ ತೆಂಗಿನ ಕಾಯಿಗಳನ್ನು ಆರಿಸಿಕೊಂಡು ಅದನ್ನು ಅಲ್ಲೆಲ್ಲೋ ಸಿಕ್ಕಿದ ಬಟ್ಟೆಯನ್ನು ಗಂಟುಗಳನ್ನಾಗಿ ಮಾಡಿ ತೆಗೆದುಕೊಂಡು ಮದ್ಯಾಹ್ನದ ಹೊತ್ತಿಗೆ ಮನೆ ತಲುಪಿದ್ದರು. ಇದಕ್ಕೆ ಪ್ರಶಸ್ತಿಯನ್ನು ಕೊಡಬೇಕಿತ್ತು ಅಲ್ಲವೇ? ಏಟು ಸಿಕ್ಕಿತು.

೧೧/೧೦/೨೦೧೨