Saturday 24 March 2012

ಅಸ್ಪಷ್ಟ !


ಸುಂದರವಾದ ಒಂದು ಬಿಳಿಯ ಗುಲಾಬಿ, ತಿಳಿ ಬಣ್ಣ.. ನೋಡನೋಡುತ್ತಿದ್ದಂತೇ ಬೆಳೆಯಲಾರಂಭಿಸಿತು. ಇದೇಕೆ ಹೀಗೆ?  
ಆ ಬಿಳಿಯ ಪಕಳೆಗಳು ದೊಡ್ಡದಾಗುತ್ತಾ ಅದರ ಒಳಗೆ ಇಳಿಯುತ್ತಿದ್ದೇನೆ ಎಂದೆನಿಸಿತು.. ಸತ್ತಿದ್ದ ನೊಣ ಕೂಡ ಕಾಣಬಲ್ಲೆ ! ಏನಾಯಿತು ? ಎಲ್ಲಿ ಇಳಿಯುತ್ತಿದ್ದೇನೆ ಎಂಬುದನ್ನೂ ಯೋಚಿಸದೆ ಇಳಿಯತೊಡಗಿದೆ.. ಒಂದೊಂದು ಪಕಳೆಯಿಂದ ಇನ್ನೊಂದು ಪಕಳೆಗೆ ಜಾರುಬಂಡೆಯ ರೀತಿ ಇಳಿಯುತ್ತಾ ಮುಂದುವರೆದೆ.. ಪಕಳೆಗಳ ಮೇಲೆ ಇದ್ದ ನೀರಿನ ದೊಡ್ಡ ದೊಡ್ದ ಹನಿಗಳು ಕೆಣಕಿದಂತೆ ಜಾರುತ್ತಾ ಮುಂದುವರೆದೆ.. ಜಾರಿದೆ, ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಹಾರಿದೆ. .

ಹಾರುತ್ತಿದ್ದಂತೆ ಮತ್ತೇರಿಸುವ ಆ ಗುಲಾಬಿಯ ಸುಗಂಧ ಮತ್ತೇನನ್ನೋ ಯೋಚಿಸದಂತೆ ಇರುವಂತ ಸ್ಥಿತಿ..ಆಘ್ರಾಣಿಸುತ್ತಾ ಜಾರತೊಡಗಿದೆ. ಒಮ್ಮೊಮ್ಮೆ ಪ್ರಪಾತಕ್ಕಿಳಿಯುತ್ತೇನೆಂದೆಣಿಸಿದರೂ ಆ ಜಾರುವಿಕೆಯಲ್ಲಿ ಅದೆಂತಹ ಅಮೋಘ ಸುಖ. ಜಾರುವುದೂ ಒಂದು ಕಲೆಯೆಂದು ನನ್ನ ಮೇಲೆಯೇ ಹೆಮ್ಮೆಪಡುತ್ತಾ ಜಾರುತ್ತಾ ಹೋದೆ..

ಕೆಳಕ್ಕಿಳಿದಂತೆ ಹಳದಿ, ಸ್ವಲ್ಪಬಿಳಿ, ಮತ್ತೆ ಕೆಂಪು ಕೇಸರ.. ಹೂವಿನ ಒಳಪದರು.. ಸಣ್ಣ ಪಕಳೆಗಳು. ಸ್ವಲ್ಪ ಕಸಿವಿಸಿಯೆಂದೆನಿದರೂ ಮತ್ತೆ ನೋಡುತ್ತಾ ಕುಳಿತೆ.. ಗುಲಾಬಿಯ ಪರಿಮಳದ ತೀವ್ರತೆ ಹುಚ್ಚುಹಿಡಿಸುವಂತೆ ಹೆದರಿಸತೊಡಗಿತು ..

ಇಳಿಯುವಾಗ ಸುಲಭವಾಗಿದ್ದ ಪಕಳೆಗಳ ದಾರಿಯನ್ನು ಹತ್ತುವುದು ಸಾಧ್ಯವಲ್ಲ. ಮತ್ತೆ ಕೊಳೆಯಲಾರಂಬಿಸಿದ ಹೂವಿನ ಬುಡದಲ್ಲಿರುವುದು ಆಗದ ಕಾರ್ಯ, ಇನ್ನೂ ಇಲ್ಲಿ ಇರುವುದು ಸಾಧ್ಯವೇ ಇಲ್ಲ.. ಹತ್ತುವ ಬಗೆ ಹೇಗೆ ?

ಹತ್ತತೊಡಗಿದೆ, ಜಾರಿ ಬಿದ್ದೆ, ಪುನಃ ಹತ್ತಿದೆ ಪುನಃ ಬಿದ್ದೆ.. ಇನ್ನು ಆಗುವುದಿಲ್ಲ ಎಂದೆಣಿಸಿ ಹೂವಿನ ಪಕಳೆಗಳನ್ನ ಒಂದೊಂದಾಗಿ ಹರಿಯತೊಡಗಿದೆ. ಅದೂ ಆಗಲಿಲ್ಲ. ಸುಗಂಧವೆಲ್ಲಾ ವಾಸನೆಯೆಂದೆಣಿಸಿ ವಾಕರಿಕೆ ಬರತೊಡಗಿತು. ಹೇಗಾದರೂ ಹತ್ತಬೇಕು ಎನ್ನುವ ಆದಮ್ಯ ಆಸೆಯಿಂದ ಕಷ್ಟಪಟ್ಟು ಮೇಲೇರತೊಡಗಿದೆ. ಏನೋ ಬೇರೆಯ ಜಗತ್ತಿನ ಬೆಳಕು ನೋಡಿದಂತೆ ಅನ್ನಿಸತೊಡಗಿತು. ಆ ಬೆಳಕಿಗಾಗಿ, ಆ ಹೊರಜಗತ್ತಿಗಾಗಿ ಹಾತೊರೆಯುತ್ತಾ ಮೇಲೇರಿದೆ .. ಇನ್ನೇನು ಹೊರಗೆ ಇಣುಕಬೇಕು, ಅಷ್ಟರಲ್ಲಿ ಕಾಲು ಜಾರಿತು..

ಕನಸಿನಿಂದ ಬೆಚ್ಚೆತ್ತು ಎದ್ದು ಹಾಸಿಗೆಯಿಂದ ಹೊರಗೆ ನೋಡಿದಾಗ ಬೆಳಕಾಗಿತ್ತು.