Monday 23 April 2012

ಹೊಸ ಹುಟ್ಟು !


ಏಳು ಘಂಟೆ.. ಹೊಸಾ ಕೆಲಸಕ್ಕೆ ಬೇಗ ಬಂದಿದ್ದೇ ಮ್ಯಾನೇಜರ್ ಮುಗುಳ್ನಕ್ಕ. ಹೋಗಪ್ಪಾ ರೂಂ ನಂಬರ್ 203ಕ್ಕೆ ಒಂದು ಲೀಟರ್ ನೀರು ಕೊಟ್ಟು ಬಾ ಎಂದ ಮಾತಿಗೆ ತಲೆಯಾಡಿಸಿ ಲಿಫ್ಟ್ ಹತ್ತಿ ಹೊರಟ.

ಹುಂ ಹುಂ.. ಬಿಸಿನೆತ್ತರಿಗೆ ಆದ ತಪ್ಪಿಗೆ ಹುಟ್ಟುವ ಪಿಂಡ, ಓ ದೇವರೇ ಮಾಡಿಸು ಗರ್ಭಾಪಾತ ! ಇಲ್ಲವಾದರೆ ಮತ್ತೊಂದು ನನ್ನಂತ ಅನರ್ಥ ಬೀಜ ಹುಟ್ಟೀತು..

ಅಬ್ಬಾ .. ಒಮ್ಮೆಲೇ ಕೋಪ ನೆತ್ತಿಗೇರಿತು. ಮೊನ್ನೆ ತಾನೇ ಎಂ ಎಲ್ ಎ ಪಕ್ಕದಲ್ಲಿ ನಿಂತ ಫೋಟೋ ಪೇಪರಿನಲ್ಲಿ ಬಂದ ಕ್ಷಣದಿಂದ ಅರ್ಧ ಸಮಾಜ ಸುಧಾರಕನಾಗಿದ್ದ ನಾನು ಈ ರೀತಿಯ ಕೆಟ್ಟ ಕೆಲಸವನ್ನು ತಡೆಯದೇ ಬಿಡಲಾದೀತೇ ?. ಭ್ರೂಣ ಹತ್ಯೆ ಮಹಾಪಾಪ. ಹುಟ್ಟುವ ಮಗು ಹೇಗೇ ಇರಲಿ, ಅದನ್ನ ಚಿವುಟಿ ಹಾಕುವ ಈ ದ್ರೋಹಿಗಳನ್ನ ಇಂತಹ ಹೋಟೆಲ್ಗಳು ಪೋಷಿಸುತ್ತದೆಯೇ ? ಒಳ್ಳೆಯದಾಯಿತು ನನ್ನನ್ನು ಇಲ್ಲಿ ಸೇರಿಸಿದ್ದು. ಈಗಲೇ ಹೋಗಿ ತಡೆಯಬೇಕು.

ಅವನ ಮೈ ಉರಿಯತೊಡಗಿಸಿತು. ಅವನೇ ಅವನಲ್ಲಿ ಪ್ರೇರೇಪಿಸಿದ್ದ ಸಮಾಜ ಸುಧಾರಕ ಎದ್ದೆದ್ದು ಕುಣಿಯತೊಡಗಿದ. ಬಾಗಿಲು ಒಡೆದು ಒಳನುಗ್ಗುವ ಸಿನಿಮೀಯ ಆಲೋಚನೆ ಬಂದರೂ ಆಗುವುದಿಲ್ಲ ಎಂದುಕೊಂಡ. ಬಾಗಿಲು ತೆರೆದು ವಿಚಾರಿಸಿಕೊಂಡರಾಯಿತು ಅಷ್ಟೇ .

ಟಕ್ ಟಕ್ ಟಕ್ !
ಒಬ್ಬ ತೆಳ್ಲಗಿನ ಮನುಷ್ಯ ಬಾಗಿಲು ತೆರೆದ. ಇವನ ಬಾಯಿ ಒಣಗಿತು. ನೀರೂಊ ಎಂದ. ಸರಿ ಒಳಗೆ ಬಾರಪ್ಪ ಎಂದನವನು.
ಇನ್ನೊಂದು ಹೆಣ್ಣು ಜೀವಕ್ಕಾಗಿ ಹುಡುಕತೊಡಗಿದ ಇವನು. ಕೇಳಿದ ತಡೆಯಲಾರದೆ , ಯಾರಲ್ಲಿ ಮಾತನಾಡುತ್ತಿದ್ದಿರಿ ಭ್ರೂಣ ಹತ್ಯೆಯ ಬಗ್ಗೆ ?

ಓಹೋ , ಹಾಗೇನಿಲ್ಲ, ನಾನು ಸಣ್ಣ ಕವಿ.. ನಾಳೆಯ ಕವನ ವಾಚನಕ್ಕಾಗಿ ಹೊಸತೊಂದನ್ನ ರಚಿಸುತ್ತಾ ಇದ್ದೇನೆ ..

ಬಿಸಿನೆತ್ತರಿಗೆ ಆದ ತಪ್ಪಿಗೆ ಹುಟ್ಟುವ ಪಿಂಡ,
ಓ ದೇವರೇ ಮಾಡಿಸು ಗರ್ಭಾಪಾತ !
ಇಲ್ಲವಾದರೆ ಮತ್ತೊಂದು ನನ್ನಂತ ಅನರ್ಥ ಬೀಜ ಹುಟ್ಟೀತು..

ಹೇಗಿದೆ ಸಾಲುಗಳು ?

Saturday 21 April 2012

ನ ಚ ನಾರೀ ಹೃದಿಸ್ಥಿತಂ !!


ಆಹಾ, ಬೆಳಗ್ಗೆ ಏಳುವಾಗಲೇ ಲೇಟ್. 7.15 ಕ್ಕೆ ಇಟ್ಟ ಅಲರಾಮನ್ನ ನಿಲ್ಲಿಸಿ ಇನ್ನು ಐದು ನಿಮಿಷ ನಿದ್ದೆ ಹೋಗೋಣವೆಂದು ಪುನಃ ಮಲಗಿದ್ದಕ್ಕೆ ಏಳುವಾಗ ಎಂಟು ಘಂಟೆ. ನೀರಲ್ಲಿ ಆಟ ಆಡಿ, ಪಟ ಪಟ ಡ್ರೆಸ್ಸಿನ ಒಳಗೆ ಹೋಗಿ ಓಡಿ ಬಸ್ ಸ್ಟಾಪಿಗೆ ಬಂದ. ಬೆಳಗ್ಗೆ ಎಂತಹ ಅಸಹನೀಯ ಎಂದೆನಿಸಿ ಬಿಟ್ಟಿತ್ತು ಅವನಿಗೆ..

ಓಹ್.. ಖಾಲಿ ಬಸ್ಸನ್ನೂ ಕಾಯುವಂತಿಲ್ಲ. ಎಲ್ಲಾ ಬಸ್ಸುಗಳು ಆರು- ಏಳು ತಿಂಗಳುಗಳ ಗರ್ಭಿಣಿಯರು.. ಹೇಗೋ ಒಂದು ಬಸ್ಸಿಗೆ ಏರಿದ. ಎದುರು ಹೋಗಿ ಎನ್ನುವ ಕಲಿಯುಗದ ಅಭಿಮನ್ತ್ಯು ಕಂಡಕ್ಟರನ ಮಾತನ್ನು ಪಾಲಿಸಿ ಮುಂದೆ ಹೋದ..

ಕೆಂಪು ಕೆನ್ನೆಯ, ನೀಳಕೇಶದ ಬೆಳ್ಳಗಿನ ತರುಣಿ ಆಹ್ ಅವನ ಆನಂದಕ್ಕೆ ಪಾರವೇ ಇಲ್ಲ .ಅವಳ ಸಾಮೀಪ್ಯ ಇವನನ್ನು ತುಂಬಾ ಉತ್ಸಾಹಿತನನ್ನಾಗಿ ಮಾಡಿಸಿತು. ಅವಳು ಧರಿಸಿದ್ದ ಐ ಡಿ ಕಾರ್ಡಿನಲ್ಲಿದ್ದ ಐಸಿಐಸಿಐ ಬ್ಯಾಂಕಿನ ಚಿಹ್ನೆ ಕಂಡು ಇನ್ನೂ ಖುಷಿಯಾಯ್ತು.

ಅವಳಲ್ಲಿ ಮಾತನಾಡಬೇಕು ಎಂಬ ಆಸೆ ಅವನಿಗೆ. ಅವಳು ನೋಡುತ್ತಾಳೇನೋ ಎಂದು ಹಾರೈಸತೊಡಗಿದ. ನೋಡಿದಳು.. ಕಣ್ಣಿನಲ್ಲಿ ಏನೋ ಆಕರ್ಷಣೆ. ಮಾತಾಡಿದಂತೆನಿಸಿತು ..ಕಣ್ಣು ಮಾತಾಡಿದರೆ ಸಾಕೇ ?
ಹಾಯ್ ..
ಹಾಯ್ ಎಂದಳವಳು.
ನಿಮ್ಮ ಹೆಸರು ಮೇಡಂ ?
ಅನನ್ಯ ,

ಏನು ಮಾಡ್ತಾ ಇದೀರಿ ಅನನ್ಯರವರೇ ?
ಅನನ್ಯ ಎನ್ನಿ ಸಾಕು! ನಾನು ಕ್ರೆಡಿಟ್ ಮ್ಯಾನೇಜರ್ ಆಗಿದ್ದೇನೆ ಬ್ಯಾಂಕಿನಲ್ಲಿ.
ಓಹೋ, ಸರಿ.
ಹ್ಮ್
ನಿಮ್ಮನ್ನ ಏನೋ ಕೇಳಬೇಕು ಬೇಜಾರಿಲ್ಲ ಅಲ್ವೇ ?
ಹಾಂ ! ಏನು ?
ಅಲ್ಲ  ಕೇಳಬಹುದೇ ?
ಹುಂ ! ಕೇಳಿ.

ಹೇಗೆ ಕೇಳೋದು ? ನೀವೇನೂ ತಪ್ಪು ತಿಳ್ಕೊಳಲ್ಲ ತಾನೆ ?
ಇಲ್ಲ ಬಿಡಿ, ಕೇಳಿ.(ಕೆಂಪಾಗುತ್ತಾ!)
ಸರಿ. ಆದ್ರೂ ಮೊದಲ ಪರಿಚಯದಲ್ಲೇ ಹೀಗೆ ಕೇಳೋದು ಸರೀನಾ ?
ಪರವಾಗಿಲ್ಲ ಕೇಳಿ, ನಿಮ್ಮನ್ನು ನಾನು ತುಂಬಾ ದಿನಗಳಿಂದ ನೋಡ್ತಾ ಇದೀನಿ..
ಓಹ್ , ಹೌದೇ , ಹಾಗಿದ್ದಲ್ಲಿ ಕೇಳಬಹುದು ಅಂತೀರಾ ?
ಹೌದು , ಕೇಳಿ, ಒಪ್ಪಿಗೆಯಾದ್ರೆ ಸರಿ ಅನ್ನುತ್ತೀನಿ.
ಹುಂ, ಹಾಗಿದ್ರೆ ಕೇಳೇ ಬಿಡ್ತೇನೆ
(ಅವಳು, ಸ್ವಲ್ಪ ನಾಚಿಕೆ, ಕುತೂಹಲದಿಂದ ನೋಡತೊಡಗಿದಳು)
.
.
.
ಅನನ್ಯಾರವರೆ , ನಿಮ್ಮ ಕಂಪೆನಿಯಲ್ಲಿ ಜಾಬ್ ಓಪನಿಂಗ್ಸ್ ಇದೆಯಾ ? ಡಿಗ್ರೀಯಲ್ಲಿ ೬೫% ಮಾರ್ಕು ಇದೆ. ಕೆಲ್ಸ ಹುಡುಕಿ ಸಾಕಾಯ್ತು. ಇದ್ರೆ ನಿಮ್ಮ ಮೈಲ್ ಐಡಿಗೆ ನನ್ನ ರೆಸ್ಯೂಮ್ ಕಳಿಸ್ತೇನೆ..

ಮತ್ತೆ ಬಸ್ಸಿನಲ್ಲಿ ಅನನ್ಯ ಭೇಟಿಯಾಗಿಲ್ಲ ಅವನಿಗೆ !!

Thursday 19 April 2012

ಆಕ್ಶೀಈಈ


ಸೀನ ನೋಡುತ್ತಾ ಇದ್ದ ಸ್ವಾಮಿಗಳನ್ನ.. ಅದ್ಯಾರೋ ಅಂದಂತೆ ಸ್ವಾಮಿಗಳ ತಲೆಹಿಂದೆ ವಿಶೇಷ ಪ್ರಭೆ ಹುಡುಕುತ್ತಾ ಇದ್ದ !


ಇದ್ದಕ್ಕಿದ್ದಂತೆ ಎಲ್ಲರೂ ತಿರುಗಿದರು. ಆಕ್ಷೀಈಈ...ಎನ್ನುವ ಸದ್ಧು.. ಎಲ್ಲ ಪ್ರಭೆಗಳೂ ಮಾಯವಾಗಿ ಸ್ವಾಮಿಗಳು ಮೂಗನ್ನು ಸರಿಪಡಿಸಸಿಕೊಂಡರು.


ದಿವ್ಯಪ್ರಭೆ ಸೀನನಿಗೆ ಗೊತ್ತಾಗಬಹುದು, ಸೀನಿಗೆ ಗೊತ್ತಾಗುವುದೆಂತು ?



ಆಭಾಸ !!


ಬೆಳಗ್ಗೆ ಏಳು ಘಂಟೆಯ ಹೊತ್ತಿರಬೇಕು. ಕಮಲಮ್ಮ ಬೆಳಗ್ಗಿನ ಅಡುಗೆಯ ಕಾರ್ಯಕಲಾಪ ಮುಗಿಸಿ ಕಣ್ಣುಜ್ಜುತ್ತಾ ಹೊರಗೆ ಬರುತ್ತಿದ್ದಂತೆಯೇ ಹತ್ತು-ಹನ್ನೆರಡು ಜನ ! ಇದೇನು ಎಂದು ಆಶ್ಚರ್ಯ ಪಡುತ್ತಿರಬೇಕೇ ಬೇಡವೇ ಎಂಬಷ್ಟು ಹೊತ್ತಿಗೆ ಸೆಕ್ರೆಟರಿಯಂತಿದ್ದವನೊಬ್ಬ ಹತ್ತರೊಳಗಿಂದ ರಾಜಪ್ಪ ಇಲ್ವೇ ? ಎಂದ .

ಹಿಂದಿನ ಇರುಳು ಮಗ ರಾಜಪ್ಪ ಮಾತಾಡದೇ ಬಂದು ಮಲಗಿದ್ದಾಗಲೇ ಯೋಚನೆ ಬಂದಿತ್ತು ಕಮಲಮ್ಮಳಿಗೆ. ಎಲ್ಲೋ ಏನೋ ತಪ್ಪಿ ಹೋಗಿದೆ ಎಂದೇ ಭಾವಿಸುತ್ತಿತ್ತು ಮನಸ್ಸು. ಗಂಡ ಸತ್ತ ಮೇಲೆ ತನ್ನನ್ನೂ ಗಂಡು ದಿಕ್ಕಾಗಿ ಈ ಮನೆಗೆ ಇರುವವನು ಇವನೊಬ್ಬನೇ. ಇತ್ತೀಚೆಗೆ ಕುಡಿಯುವುದು, ಪೇಟೆ ತಿರುಗುವುದು, ಅದ್ಯಾವುದೋ ಸಂಘಗಳಂತೆ, ಜಾಥಾವಂತೆ ಇಂತಹದ್ದೆಲ್ಲಾ ನಡೆಯುತ್ತಿದ್ದು ಯಾವುದೋ ಹೊಸಾ ತಲೆನೋವು ತರಿಸುತ್ತಿತ್ತು.

ಏನಾಗಬೇಕಿತ್ತು ರಾಜಪ್ಪನಿಂದ ? ಉತ್ತರಕ್ಕಾಗಿ ೮-೧೦ ಕಣ್ಣುಗಳನ್ನ ಹುಡುಕಿದಳು..ಕಡೆಗೊಮ್ಮೆ ಸೆಕ್ರಟರಿಯ ಮುಖ ನೋಡಿದಳು. ಅದೇ ನಮ್ಮ ಊರಿನ ರಸ್ತೆಯಿದೆಯಲ್ಲಾ ಅಲ್ಲಿ ನಾವೊಂದು ಮೂರ್ತಿ ನಿಲ್ಲಿಸಬೇಕು ಅಂತ ತೀರ್ಮಾನ ಮಾಡಿದ್ದೇವೆ. ಇದಕ್ಕೆ ನಿನ್ನೆ ರಾಜಪ್ನೋರೆ ಒಂದು ಸಮಿತಿ ರಚನೆ ಮಾಡೋಣ ಅಂದಿದ್ರು. ಅದ್ಕೆ ಇವತ್ತು ಬೆಳಗ್ಗೆ ನಾವೆಲ್ಲಾ ಸೇರಿ ರಾಜಪ್ನೋರ್ನೆ ಅದ್ರ ಅಧ್ಯಕ್ಷ ಮಾಡೋದು ಅಂತ ತೀರ್ಮಾನ ಮಾಡಿದೀವಿ. ಅರ್ಜೆಂಟಾಗಿ ಮಾತಾಡ್ಬೇಕಿತ್ತು ಅದ್ಕೆ ....

ಇದ್ಯಾವುದೋ ಹೊಸಾ ತಲೆನೋವು ಎನ್ನುವಷ್ಟರಲ್ಲಿ ಅಂಗಳದ ಹಿಂದಿನಿಂದ ಸೌಂಡ ಆಯಿತು. ಬೆಳಗ್ಗಿನ ಕಾರ್ಯಕ್ರಮಗಳನ್ನು ಗಡದ್ದಾಗಿ ಮುಗಿಸಿಕೊಂಡು ಬರುತ್ತಿದ್ದ ರಾಜಪ್ಪನ ಕೈಯ್ಯ ಹಿತ್ತಾಳೆ ಚೊಂಬು ಮಿರ ಮಿರ ಎನ್ನುತ್ತಿತ್ತು,, ಏನ್ರೋ ಎಂದ..

ಒಂದು ವರ್ಷದಿಂದ ಪಾಯಿಖಾನೆ ಕಟ್ಟಿಸ್ಬೇಕು ರಾಜಪ್ಪಾ ಎನ್ನುತ್ತಿದ್ದ ಕಮಲಮ್ಮನಿಗೆ ಇನ್ನು ಮೂರ್ತಿ ಪ್ರತಿಷ್ಟಾಪನೆಯ ವರೆಗೆ ಕಾಯಬೇಕೋ ಏನೋ ? ಮನೆಗೊಂದು ಪಾಯಿಖಾನೆ ಕಟ್ಟಿಸದವರು ಊರು ಉದ್ದಾರಕ್ಕೆ ಮೂರ್ತಿ ಕಟ್ಟಿಸ್ತಾರಂತೆ ಎಂದು ಗೊಣಗುತ್ತಾ ಕಮಲಮ್ಮ ಒಳಗೆ ಹೋದಳು..

Tuesday 17 April 2012

ಹೆಂಡತಿಯೋ ಅಲ್ಲ ಪ್ರೇಯಸಿಯೋ?

ದಿನಾ ಅವಳನ್ನು ನೋಡುತ್ತಿದ್ದೆ ಅದೇ ಬಸ್ ಸ್ಟಾಪಿನಲ್ಲಿ. ಅವಳೂ ನನ್ನನ್ನ ನೋಡುತ್ತಿದ್ದಳು. ನಾನು ಬೈಕಿನಲ್ಲಿ ಬಂದು ಆ ಬಸ್ ಸ್ಟಾಪಿನ ಪಕ್ಕದ ಅಂಗಡಿಯಿಂದ ಒಂದು ಟೀ ಮತ್ತೆ ಸಿಗರೇಟು ಅವಳಿಗೆ ಕಾಣದಂತೆ ಸೇದಿ, ನನ್ನನ್ನ ಗುರುತಿಸುವಂತೆ ಆಂಗ್ಲ ಪತ್ರಿಕೆಯೊಂದನ್ನು ಕೇಳಿ ಪಡೆಯುವುದು ವಾಡಿಕೆಯಾಗಿತ್ತು !

ಹೀಗೆಯೇ ಒಂದೆರಡು ವಾರಗಳಲ್ಲಿ ೧೦ ಬಾರಿಯಾದರೂ ಹೀಗೆ ನಾನು ನೋಡುವುದು ಅವಳು ನಗುವುದು ನಡೆದಿತ್ತು. ನನ್ನ ಕಛೇರಿಯ ಹತ್ತಿರವೇ ಅವಳನ್ನ ಒಂದು ದಿನ ನೋಡಿದೆ.

ಮರುದಿನ ಧೈರ್ಯ ಮಾಡಿ ಅವಳ ಹತ್ತಿರ ಹೋಗಿ, ಲಿಫ್ಟ್ ಕೊಡಲೇ ಅಂದೆ !
ಅವಳ ಮಾತು "ಹೆಂಡತಿಯ ಹಾಗೆಯೇ ಅಲ್ಲ ಪ್ರೇಯಸಿಯಂತೆಯೇ" ಎಂದಾಗ ಎದೆ ಢಬ್ ಎಂದಿತು !

ಆ ಸುಂದರ ಕಣ್ಣಿನ ಯಾವತ್ತೂ ನಗುತ್ತಿರುವಂತ ಅವಳು ನನ್ನ ಹೆಂಡತಿಯಾದರೆ ? ಓಹ್ ಎಂತಹ ಖುಷಿ . ಇನ್ನೂ ಸ್ವಲ್ಪ ಬೆಳ್ಳಗಿರಬೇಕಿತ್ತು ಎನ್ನಿಸುತ್ತಿದೆ ಆದರೂ ಪರವಾಗಿಲ್ಲ.
ಇಲ್ಲ ಇವಳು ಹೆಂಡತಿಯಾಗೋದು ಯಾಕೋ ಇಷ್ಟವಾಗುತ್ತಿಲ್ಲ. ಇದುವರೆಗೆ ನನ್ನ ಬಗ್ಗೆ ತಿಳಿಯದೆ ಒಂದೇ ಸಲ ಬಂದು ಹೀಗೆ ಹೇಳುವವಳನ್ನು ಹೇಗೆ ನಂಬುವುದು ? ಪ್ರೇಯಸಿಯಾಗುವುದೇ ಒಳ್ಳೆಯದು ಎನ್ನಿಸತೊಡಗಿತು. ಏನೇ ಆಗಲಿ ನಾನೂ ನನ್ನ ಮಿತ್ರರ ಜೊತೆ ಹೆಮ್ಮೆಯಿಂದ ನನಗೊಬ್ಬಳು ಪ್ರೇಯಸಿ ಎಂದು ಬೀಗಬಲ್ಲೆ . ಆದರೂ ಇನ್ನೊಮ್ಮೆ ಕೇಳಿನೋಡಬೇಕು ಎಂದೆನ್ನಿಸಿ ಕೇಳಿದೆ ..

ನೀವಂದದ್ದು ಅರ್ಥ ಆಗಿಲ್ಲ ಮೇಡಂ ಅಂದೆ !
ಅದಕ್ಕವಳು, ಓಹೋ ಹಾಗೇನೂ ತಪ್ಪು ತಿಳಿಯಬೇಡಿ ಸರ್ ! ಹೆಂಡತಿಯ ಹಾಗೆ ಎಂದರೆ ಎರಡೂ ಕಾಲುಗಳನ್ನ ಒಂದೇ ಬದಿಗೆ ಹಾಕಿ ಬೈಕಿನಲ್ಲಿ ಕೂರುವುದು, ಪ್ರೇಯಸಿ ಎಂದರೆ ಕಾಲುಗಳನ್ನ ಎರಡೂ ಬದಿಗೆ ಹಾಕಿ ಕುಳಿತುಕೊಳ್ಳುವುದು ಎಂದು.. ಹೇಗೆ ಕುಳಿತರೆ ನಿಮಗೆ ಬೈಕ್ ಓಡಿಸಲು ಅನುಕೂಲ ?

ಅವಳು ಹೆಂಡತಿಯೂ ಆಗಲಿಲ್ಲ ಪ್ರೇಯಸಿಯೂ ಆಗಲಿಲ್ಲ !

Sunday 8 April 2012

ಒಬ್ಬಂಟಿ !


ಈ ಒಂದು ದಿನ ಅಷ್ಟು ಘೋರವಾದೀತೆಂದು ಕನಸಿನಲ್ಲೂ ನೆನೆಸಿರಲಿಲ್ಲ ಮೊದಲು!. ಆದರೂ ಪುನಃ ನೋಡಿದ ಸಿನಿಮಾ ಕಥೆಯಂತೆ ಸುತ್ತಲೂ ಸುತ್ತುತ್ತಾ ಸಾಗಿ, ನನ್ನನ್ನೂ ಅದರ ಒಳಗಿನ ಪಾತ್ರವಾಗಿಸಿ ಒಮ್ಮೆಲೇ ನೀನು ಬೇರೆ ಒಂದು ಜೀವಿ, ನೋಡಿ ಅನುಭವಿಸುವುದಷ್ಟೇ ನಿನ್ನ ಪಾತ್ರ ಎಂದಾಗ. ನಾನೇ ಬಯಸಿದ ಅಥವಾ ಒಪ್ಪಿದ ಇಂತಹ ಸ್ಥಿತಿ ಯಾವತ್ತೂ ಕಾಡುವುದು ಈಗ ಒಪ್ಪದೇ ಓಡಿ ಹೋಗಬೇಕೆನಿಸುವಷ್ಟು ಯಾತನೆ.

ಮೊದಲು ಕೆಲಸದಲ್ಲಿದ್ದಾಗ ಎಂತಹ ಸ್ವಾತಂತ್ರ್ಯ. ಅಪ್ಪ ಅಮ್ಮ ಇಬ್ಬರೂ ನನ್ನ ಪರವಾಗಿಯೇ ಇದ್ದರು. ಮೊದಲ ಕೆಲಸ ಅಷ್ಟು ಆಪ್ಯಾಯಮಾನವಾಗೇನೂ ಇರಲಿಲ್ಲ. ಆದರೆ ನೆಗೆತದ ಸುಖ ಎಷ್ಟು ಹಣ ಕೊಟ್ಟಿತು. ಪುನಃ ನೆಗೆದೆ, ಹೀಗಾಗಿ ನೆನಸದ ಸುಖಗಳು ಇನ್ನೂ ಹೆಚ್ಚಾಗಿ ಸಿಗತೊಡಗಿತು. ಎರಡೋ ಮೂರು ವರ್ಷದಲ್ಲಿ ಆ ಕೆಲಸವನ್ನೂ ಬಿಟ್ಟೆ. ಇಪ್ಪತ್ತೈದು ವರ್ಷಕ್ಕೇ ಮದುವೆ. ಮದುವೆ ನಿಶ್ಚಯ ಆದ ಮರುದಿನವೇ ರಾಜೀನಾಮೆ ಪತ್ರ ಕೊಟ್ಟು ಎಂತಹ ಹೆಮ್ಮೆಯಿಂದ ಆಫೀಸು ಬಿಟ್ಟು ಬಂದೆ !

ಅದೇನೋ ಆಕರ್ಷಣೆ, ಸ್ವ ಉದ್ಯೋಗದ ಹುಚ್ಚಿದ್ದ ಭಾವೀಪತಿಗೆ ತುಂಬು ಹೃದಯದ ಸಹಕಾರ ಕೊಡುವಂತ ಕನಸು. ಹಾಗೇ ಆಯಿತು. ಎರಡು ತಿಂಗಳ ಫೋನು ಕಥೆಗಳಲ್ಲೂ ಆಕಾಶಕ್ಕೆ ಏಣಿ ಹಾಕುವ ಕನಸುಗಳು ಕಟ್ಟಿಕೊಂಡೆ. ಮತ್ತೆ ಅದೇನೋ ಸೆಳೆತವಿತ್ತು. ಅವನ ಅವಕಾಶಗಳ ಬಗ್ಗೆ ಹಿಗ್ಗು. ಅವನ ಕನಸುಗಳ , ಸಾಧನೆಗಳ ಬಗ್ಗೆ ಹಿಗ್ಗು. ಎಷ್ಟು ನನ್ನ ಗೆಳತಿಯರ ಮುಂದೆ ಹೇಳಿಕೊಂಡಿಲ್ಲ. ಪ್ರೇಮ ಪ್ರೀತಿ ಎನ್ನುವ ಭಾವಗಳಿಗೆ ನನ್ನದೇ ಆದ ಅರ್ಥವಿರಲಿಲ್ಲ. ಆದರೂ ಅವನೊಡನೆ ಮಾತನಾಡುತ್ತಾ ಟೇರೇಸಿನ ಮೂಲೆ ಮೂಲೆಯಲ್ಲಿ ಹೆಜ್ಜೆಗುರುತುಗಳನ್ನ ಮೂಡಿಸುವುದು ಪ್ರೇಮವೆಂದೇ ನನ್ನ ಭಾವನೆ. ಅವನ ಭೇಟಿ, ಅವನೊಡನಾಟವೂ ಅದೇ ಎಂದು ಆಡುವ ಸುಖ. ಸ್ಟೆಲ್ಲಾ ಮೇರಿಯಂತೆ  ಅಥವಾ ದೊಡ್ಡಮ್ಮನ ಮಗಳಂತೆ ಪ್ರೇಮ ಪ್ರೀತಿಯನ್ನು ಪಾರ್ಕು ಬೆಂಚುಗಳ ಮೇಲೆ ಬರೆಯಿಸದಿದ್ದರೂ ಅವರ ಮುಂದೆ ನಾನು ನನ್ನವನನ್ನು ಭೇಟಿಯಾಗುತ್ತೇನೆ, ಅವನ ಫೋಟೋಗಳನ್ನ ಅಲ್ಲಿ ಇಲ್ಲಿ ಶೇರ್ ಮಾಡುತ್ತೇನೆ. ಮೊಬೈಲಿನ ವಾಲ್ ಪೇಪರಿಗೆ ಅವನ ಫೋಟೋವನ್ನೇ ಸಣ್ಣದು ಮಾಡಿ ಹಾಕುತ್ತೇನೆ..ಇದೂ ಒಂದು ಪ್ರೇಮವೇ ಆಗಿತ್ತು..ಎಲ್ಲೆಲ್ಲೂ ಕಾಣುತ್ತಿದ್ದ ಚಿಗುರು ಗಿಡಮರಗಳನ್ನು ನೋಡುವಾಗ ಆಗುವ ಆಪ್ಯಾಯಮಾನ ಭಾವ. ಎಲ್ಲೆಲ್ಲಿಯೂ ಸಂತಸವೇ ಇರುತ್ತದೆ ಎಂದುಕೊಳ್ಳುತ್ತಾ ಒಂದೊಂದೇ ಕಟ್ಟುಪಾಡುಗಳಿಗೆ ಸುಖವಾಗಿ ಜಾರತೊಡಗಿ ತುಂಬಾ ಕಾಲವೇನೂ ಆಗಲಿಲ್ಲ..

ಸರೀ ಎರಡು ತಿಂಗಳಿಗೆ ನಿಶ್ಚೈಸಿದ ದಿನವೇ ಮದುವೆಯಾಯಿತು. ಒಂದು ಬಗೆಯ ಬೇಸರವಿದ್ದರೂ ಅದನ್ನೆಲ್ಲಾ ಕೊನೆಗೊಳಿಸುವ ಅವನ ಸಾಂಗತ್ಯಸುಖದ .ಒಂದು ಕನಸು ಇದನ್ನೆಲ್ಲ ಮರೆತು ಹಾಕಿತ್ತು. ಅದೂ ನಾನು ಮೆಚ್ಚಿ ಮದುವೆಯಾದದ್ದೋ ಮದುವೆಯಾಗಿ ಮೆಚ್ಚಿದ್ದೋ ಎನ್ನುವ ರೀತಿ. ಏನೋ ಅಡಗಿಸಿಡುವ ಹೊಸಾ ಮನೆಯ ವಾತಾವರಣ ಒಗ್ಗಿಹೋಗುವುದು ಕಷ್ಟ ಎಂದುಕೊಂಡರೂ ಮನೆಯೇ ನನಗೆ ಒಗ್ಗತೊಡಗಿತು. ಒಗ್ಗರಣೆ ಡಬ್ಬಗಳೂ ಸಲೀಸಾಗಿ ಕೈಗೆ ದೊರೆಯತೊಡಗಿತು. ಅತ್ತೆ ಮಾವನ ಬೆಂಗಳೂರಿಗೆ ಬಂದು ಉಳಿಯಲು ಇಷ್ಟ ಪಡದೇ ಇರುವುದರಿಂದ ನನಗೆ ಇಂತಹಾ ಒಗ್ಗುವಿಕೆ ಕಷ್ಟ ಆಗಲಿಲ್ಲ, ಆದರೆ ಈಗಲೂ ಹಳ್ಳಿಗೆ ಹೋದರೆ ನಾನು ಅಪರಿಚಿತಳೇ , ನನ್ನ ಮನೆ ಎಂದೆನಿಸುವುದೇ ಇಲ್ಲ..

ಮದುವೆಯಾದ ೨೫ ದಿನಕ್ಕೇ ಇವರಿಗೆ ಒಳ್ಳೆಯ ಆಫರ್ ಬಂತು. ಯಾವುದೋ ಹೆಸರು ಬಾರದ UK ಕಂಪೆನಿಯಿಂದ ಯಾವುದೋ ತಂತಾಂಶದ ಬೇಡಿಕೆ. ಕೇವಲ ಯಾರದೋ ಮೇಲಿನ ಸಿಟ್ಟಿನಿಂದ ಪ್ರಾರಂಭಿಸಿದ ಸಣ್ಣಮಟ್ಟಿನ ಇವರ ಸಂಸ್ಥೆ ಈಗ ಎಲ್ಲರೂ ಗಮನಿಸುವಂತಾಯ್ತು. ನೆರವಿಗೆ ಬಾರದ ಬ್ಯಾಂಕುಗಳು ಸಾಲ ಕೊಡಲು ಈಗ ಸಿದ್ಧರಂತೆ ! ಅದೇ ಸಂಜೆ  ನೀನೇ ಇಂತಹ ಯಶಸ್ಸಿಗೆ ಕಾರಣವೆಂಬಂತೆ ದೊಡ್ಡ ಬೊಕ್ಕೆ ಮತ್ತೆ ಒಂದು ನೆಕ್ಲೆಸ್ ನನಗೆ !. ಎಷ್ಟು ಹೆಮ್ಮೆ. ಮೊಬೈಲಿನಲ್ಲಿದ್ದ ಹೆಚ್ಚಿನವರಿಗೆ ಫೋನಾಯಿಸಿ ಈ ವಿಷಯ ಹೇಳಿದ್ದು ಎಲ್ಲವೂ ನೆನಪಲ್ಲಿದೆ,

ಮದುವೆಯಾಗಿ ಒಂದು ವರ್ಷ.ತವರು ಮನೆಗೆ ಮದುವೆಯಾದರೂ ಇದ್ದ ಹಾಗೆಯೇ ಇದ್ದೀಯಾ ಎನ್ನುವ ಗೆಳತಿಯರ ಮಾತುಗಳು ಕುಕ್ಕುತ್ತಿದೆಯೋ ಅಲ್ಲ ನನಗೆ ಹೆಮ್ಮೆ ತರುತ್ತಿದೆಯೋ ಎನ್ನುವುದನ್ನ ವಿಶ್ಲೇಷಣ ಮಾಡಲಾರೆ. ಅರ್ಥವಾಗುವುದಿಲ್ಲ. ದೊಡ್ಡಪ್ಪನ ಮಗಳು ಇನ್ನೊಂದೆರಡು ತಿಂಗಳಲ್ಲಿ ಹೊಸ ಜೀವಕ್ಕೆ ಜನ್ಮ ನೀಡುತ್ತಾಳೆ ಎನ್ನುವ ವಿಷಯವನ್ನೇ ಅಪ್ಪ ಮುಖ್ಯವಾಗಿ ಆಡಿದ್ದ ರೀತಿ ಮನೆಗೆ ಬಂದ ಮೇಲೆ ಕಾಡತೊಡಗಿತು. ಈ ವಿಷಯವಾಗಿ  ನನ್ನವರದ್ದೇನೂ ತಪ್ಪಿಲ್ಲ.. ಗೆಳತಿಯರ ಹಾಗೂ ಹೆಚ್ಚಾಗಿ, ಮದುವೆಯಾದವರ ಅಭಿಪ್ರಾಯದಂತೆ ಸಧ್ಯಕ್ಕೆ ಮಗು ಬೇಡವೆಂದು ನಾನೇ ಹೇಳಿದ್ದು, ಆತ ಒಪ್ಪಿಯೂ ಇದ್ದ. ಈಗ ಈ ದ್ವಂದ್ವವೂ ಹೆಚ್ಚಾಗ ತೊಡಗಿತು.

ಈಗ ಎಷ್ಟು ? ೨೮ ನೇ ವರ್ಷ ನಾಡಿದ್ದು ಜುಲೈ ಬಂದರೆ ! ಅಂದರೆ ಸರಿಯಾಗಿ ಒಂದೂವರೆ ವರ್ಷ. ಬೆಳಗ್ಗೆ ಏಳುವುದು, ಏನಾದರೂ ಅಡುಗೆ ಮಾಡುವುದು..ಅವರು ಆಫೀಸಿಗೆ ಹೋದಂತೆ ಮತ್ತೆ ಸುಮ್ಮನೆ ಟೀವಿ ಕಂಪ್ಯೂಟರು ... ರಾತ್ರಿ ಅದೆಷ್ಟು ಹೊತ್ತಿಗೆ ಬರುತ್ತಾರೆ ಎನ್ನುವುದನ್ನ ಗಡಿಯಾರದ ಮುಂದೆ ಕುಳಿತು ಲೆಕ್ಕ ಹಾಕುವುದು.. ಮದುವೆಯಾದ ಹೊಸತರಲ್ಲಿ ೫ ಘಂಟೆಗೆ ಮನೆಗೆ ಬರುತ್ತಿದ್ದವರು ಈಗ ಇಲ್ಲಿಯೂ ಮೇಲೇರಿದ್ದಾರೆ. ೧೧ ಘಂಟೆಯ ಮೊದಲು ಬಂದ ಚರಿತ್ರೆಯಿಲ್ಲ ಮೂರ್ನಾಲ್ಕು ತಿಂಗಳಿಂದ..ಅದೇನೋ ಹೊಸಾ ಪ್ರಾಜೆಕ್ಟುಗಳು ಸಮಯವನ್ನು ಜಾಸ್ತಿ ಮಾಡುವುದಕ್ಕೆಂದೇ ದೊರೆಯುತ್ತದೇನೋ ?

ಏನೋ ಒಂದು ರೀತಿಯ ಮಂಕು. ಸಾಮೀಪ್ಯವಿದ್ದರೂ ಸುಖ ಸಿಗದೇ ಹೋದಂತೆ.ಮದುವೆಯಾದ ಸನ್ಯಾಸಿತನಕ್ಕೆ ಏನೆನ್ನುವುದು?. ಗಂಡಿನ ಮನಸ್ಸೇನು ಎನ್ನುವುದೇ ಅರಿವಾಗುವುದಿಲ್ಲ. ಕಡೇ ಪಕ್ಷ ನಾನು ರಜೆಯಲ್ಲಿರುವುದನ್ನೂ ಅರಿಯದಿರುವ ಇಂತಹ ಗೊತ್ತಿಲ್ಲದ ! ಸ್ಥಿತಿಗೆ ಏನೆನ್ನಬೇಕು.. ಸುಖದಿಂದ ವಂಚಿತಳಾದಾಗ ಬರುವ ಸಿಟ್ಟು ಸಾಮಾನ್ಯವಾದದ್ದಲ್ಲ. ಮದುವೆಯಾದ ಬೇರೆಯವರೆಲ್ಲಾ ಖುಷಿಯಲ್ಲಿ, ಜೊತೆ ಜೊತೆಯಾಗಿ ಸುತ್ತುವುದನ್ನ ಕಂಡಾಗ ಸಿಟ್ಟು ನೆತ್ತಿಗೇರುತ್ತದೆ.

ಅದೇನೋ, ಈ ಟೀವಿಯ ಕಾರ್ಯಕ್ರಮಗಳು ಬೇಜಾರೆನಿಸಿದಾಗ ಕಂಪ್ಯೂಟರಿನಲ್ಲಿ ಹುಡುಕುವುದು.. ಯಾರು ಯಾರೋ ಸಿಗುತ್ತಾ ಸಾಗುತ್ತಾರೆ. ದಿನಕ್ಕೊಬ್ಬರು ಹೊಸಾ ವ್ಯಕ್ತಿಗಳು. ಏನೋ ಹೊಸಾ ಕುಟುಂಬದ ಜನರಂತೆ ಬೆರೆಯುತ್ತಾ ಸಾಗುವುದು.. ಇಂಟರ್ನೆಟ್ಟಿಂದ ನನ್ನ ಸ್ವಲ್ಪ ಮನಸ್ಸಿನ ದುಗುಡ ಕಳೆಯಬಹುದಾದರೂ ದೈಹಿಕವಾದ ಸುಖದ ಒತ್ತಾಯಕ್ಕೆ ಏನು ಮಾಡುವುದು.

ಹನ್ನೊಂದೂವರೆ ! ಯಾವತ್ತಿನಿಂದ ಇವತ್ತು ಎಂಟು ನಿಮಿಷ ಲೇಟ್ !! ಊಟವಾಗಿತ್ತು ಅವರದ್ದು.. ಸ್ವಲ್ಪ ಬಿಗುವಾಗಿಯೇ ಮಾತನಾಡಿಸಿ ಅವರನ್ನ ಒಪ್ಪಿಸುವುದೇ ಉದ್ದೇಶವಾಗಿತ್ತು. ಕ್ಷಣಿಕ ಕಾಮವನ್ನು ಅಪೇಕ್ಷೆ ಪಡುವುದಲ್ಲ, ದಿನವೂ ರಮಿಸುವ, ಜೊತೆಗಿರುವ ಶೃಂಗಾರವನ್ನು ಬಯಸಬೇಕಾಗಿತ್ತು.
>>
>ನಾಳೆಯಿಂದ ಬೇಗ ಬನ್ನಿ. ಎಲ್ಲಾ ಮದುವೆಯಾದವರನ್ನ ನೋಡಿ. ಪಕ್ಕದ ಮನೆಯ ಬ್ಯಾಂಕ್ ಮ್ಯಾನೇಜರ್ ನೋಡಿ, ದಿನವೂ ೬ ಘಂಟೆಗೆ ಬರುತ್ತಾರೆ. ನೀವೇಕೆ ಹೀಗೆ?
>ಹೆಹ್ಹೆ,. ನಾನು ಈ ಪ್ರಾಜೆಕ್ಟ್ ಮುಗಿಸಿದರೆ ಇನ್ನೊಂದು ವಾರ ನಿನ್ನ ಜೊತೆ ಇಡೀ ದಿನ ಇರಬಹುದು ನೋಡು. ಪಕ್ಕದಮನೆಯವರಿಗೇನು ದೊಡ್ಡ ಧ್ಯೇಯವೇನೂ ಇಲ್ಲ.. ಯಾರೋ ಹೇಳಿದ ಕೆಲ್ಸ ಮಾಡುತ್ತಾರೆ ಅಷ್ಟೆ.
>ಅದು ಏನಿದ್ದರೂ ಸರಿ, ಮನುಷ್ಯನಿಗೆ ಒಂದು ಸಂಗಾತಿ ಇರುವುದು ಏನಕ್ಕೆ ಎಂದೂ ಮರೆತಿದ್ದೀರಿ ನೀವು !
>ಏನದು ? ನಾನೆಂದೂ ನಿನಗೆ ಏನಾದರೂ ಅನ್ಯಾಯ .. ಇಲ್ಲ ಇಲ್ಲ.. ಸುಮ್ನೇ ಏನಾದ್ರು ಹೇಳ್ಬೇಡ ನೀನು.
>ಅದ್ಯಾಕೆ ಹಾಗೆ ಕೆಲ್ಸ , ಪ್ರತಿಷ್ಟೆ ಅಂತ ಒದ್ದಾಡ್ತೀರೋ? ಒಂದು ಸುಲಭದ ಪ್ರಶ್ನೆ ಕೇಳ್ತೀನಿ , ಉತ್ತರ ಕೊಡಿ ನೋಡೋಣ !
>?ಹುಂ
>ನೀವು ಕೊನೆಯ ಬಾರಿ ನನ್ನ ಜೊತೆ ಹಾಸಿಗೆಯಲ್ಲಿದ್ದ ದಿನ ಯಾವುದು , ಹೇಳಿ ?
>ಇದ್ಯಾಕೋ ಅತಿಯಾಯ್ತು ಕಣೆ. ಮದುವೆಯಾಗ್ಬೇಕಿದ್ರೇ ನಾನು ನನ್ನ ಉದ್ದೇಶ ಎಲ್ಲ ಹೇಳಿದ್ದೆ. ಈಗ ಸೆಕ್ಸನ್ನೇ ಮುಖ್ಯ ಅನ್ನೋ ನಿನ್ ಮಾತು ನಂಗೆ ಸರಿ ಬರ್ತಾ ಇಲ್ಲ.
>ಇಲ್ಲ, ಮುಖ್ಯ ಅಂದಿಲ್ಲ. ನಿಮಗೆ ಹೇಗೆ ಗೊತ್ತಾಗ್ಬೇಕು ಇದೆಲ್ಲ.? ನೀವು ನನ್ನನ್ನ ಚುಂಬಿಸದೇ ವರ್ಶವಾಗಿ ಹೋಯ್ತು ,
>ನೋಡೇ, ಪ್ರತಿಯೊಬ್ಬ ಯಶಸ್ವೀ ಪುರುಷನ ಹಿಂದೆ ಒಬ್ಬಳು ಸ್ತ್ರೀ ಇರ್ತಾಳಲ್ಲ ! ಆ ಸ್ತೀ ಪ್ರಧಾನವಾಗಿ ಹೆಂಡತಿಯೇ !. ಈ ಸ್ತ್ರೀ ಬಹಳ ಮುಖ್ಯವಾಗುವುದು ತನ್ನ ತ್ಯಾಗಗಳಿಂದಲೇ ,ಇದು ಈ ತ್ಯಾಗವನ್ನೂ ಬಯಸುತ್ತದೆ.

>>
ನಿನ್ನೆ ಆಡಿದ ಮಾತುಗಳನ್ನ ಇನ್ನೂ ಮೆಲುಕು ಹಾಕುತ್ತಾ ಇದ್ದೇನೆ. ಇದೊಂದು ವ್ಯವಸ್ಥೆಯೊಳಗನ್ನ ಯಾರೂ ಅರಿಯಲಾರರು. ಗೋಡೆಗಳ ಕಿವಿಯೋ ಕಾಲ್ಪನಿಕ ಕಥೆಗಳೋ , ಯಾವುದೋ ಹೆಣ್ಣಿನ ಬುದ್ದಿವಂತಿಕೆಯೋ ಈಗ ಉಪಯೋಗಕ್ಕೆ ಬರುವುದಿಲ್ಲ. ಈ ಪ್ರಾಜೆಕ್ಟ್ ಮುಗಿದಮೇಲೆಯಾದರೂ ಜೊತೆಗಿದ್ದಾರು ಎನ್ನುವ ನಂಬಿಕೆ ಅಷ್ಟನ್ನು ಉಳಿಸಿ ಕೊಂಡಿದ್ದೇನೆ..

Monday 2 April 2012

ಈಗಿನ ಅಡುಗೆ !!


ಹೊಸ ರುಚಿ :- ( ಹೆಚ್ಚಾಗಿ ಇದೇ ಅಡುಗೆ ಎಲ್ಲರ ಮನೆಯಲ್ಲಿ ಚಾಲ್ತಿಯಲ್ಲಿದೆ )

ಬೇಕಾಗುವ ಸಾಮಗ್ರಿಗಳು :- ಯಾವುದಾದರೂ ತರಕಾರಿ, ಮೆಣಸು, ಕೊತ್ತಂಬರಿ ಇತ್ಯಾದಿ ಸಾಂಬಾರ ಪದಾರ್ಥ ಗಳು, ಸಾಂಬಾರ ಪುಡಿ (ಎಂ ಟಿ ಆರ್ ,ಶಕ್ತಿ , ಆಚಿ ಯಾವುದಾದರೂ ಒಂದು), ಉಪ್ಪು, ಎಣ್ಣೆ, ಪಾತ್ರೆಗಳು, ತೆಂಗಿನಕಾಯಿ..

ಮೊದಲು ತರಕಾರಿಯನ್ನು ಬೇಕಾದ ಹಾಗೆ ಕತ್ತರಿಸಿಕೊಂಡು, ಅದನ್ನ ಒಂದು ಪಾತ್ರೆಯಲ್ಲಿ ಹಾಕಿ ನೀರು ಸೇರಿಸಿ, ಬೇಯಲು ಇಡಿ. ಬೇಯುವ ಸಮಯದಲ್ಲಿ ನಿಮಗಿಷ್ಟವಾದ ಪುಸ್ತಕಗಳನ್ನು ಓದಬಹುದಾಗಿದೆ.
(ಉದಾಹರಣೆಗೆ :- ಶ್ರೀಘ್ರವಾಗಿ ಬೇಯುವ ತರಕಾರಿ ಆದಲ್ಲಿ ರಮ್ಯ ಕವನಗಳನ್ನು, ಹಾಸ್ಯಲೇಖನ ಓದಿ, ಅದೇ ತುಂಬಾ ತಡವಾಗುತ್ತದೆ ಎಂದಾದರೆ ನೀಳ್ಗತೆ, ನವ್ಯ ಕವನಗಳನ್ನ ಓದಿ- ಹೀಗಾದರೂ ಸಾಹಿತ್ಯ ಉಳಿಯಲಿ ).

ಈಗ ತರಕಾರಿ ಬೆಂದಿದೆ. ಬೆಂದ ತರಕಾರಿಗೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಕುದಿಯಲು ಬಿಡಿ. ಇನ್ನೊಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ, ಸಾಂಬಾರ ಪದಾರ್ಥಗಳನ್ನ ಹುರಿಯಿರಿ. ಹುರಿದ ಪದಾರ್ಥಗಳನ್ನ ತೆಂಗಿನಕಾಯಿ ತುರಿಯ ಜೊತೆ ಸೇರಿಸಿ ರುಬ್ಬಿ. ಅಗತ್ಯಕ್ಕೆ ಸ್ವಲ್ಪ ಹುಳಿಯನ್ನೂ ಹಾಕಿ.

ನಂತರ ಈ ಮಸಾಲೆಯನ್ನು ಬೇಯುತ್ತಿರುವ ತರಕಾರಿಯ ಜೊತೆಗೆ ಸೇರಿಸಿ. ( ಪುನಹ ಕುದಿಸುತ್ತಿರಬೇಕಾದರೆ ಮೂರು ನಾಲ್ಕು ಹನಿಗವನ ಓದಬಹುದು. )

ಈಗ ಸಾಂಬಾರ್ ತಯಾರಾಗಿದೆ. ಇದಕ್ಕೆ ಒಂದು ಸ್ಪೂನಿನಷ್ಟು ಯಾವುದಾದರೂ (ಮೇಲೆ ತಿಳಿಸಿದ) ಸಾಂಬಾರ್ ಪುಡಿಯನ್ನು ಸೇರಿಸಿಬಿಡಿ. ಇನ್ನೂ ಘಮಘಮಿಸುತ್ತದೆ.

ಮುಖ್ಯವಾದ ಸೂಚನೆ :-೧. ಸಾಂಬಾರ್ ಪೌಡರ್ ಗಳನ್ನ ಕಿಚನ್ನಿನಲ್ಲಿ ಯಾರೂ ಕಾಣದಂತೆ ಅಡಗಿಸಿಡಬೇಕು. ಅದನ್ನ ಸೇರಿಸುವಾಗ ಯಾರೂ ಇರದಂತೆ ಎಚ್ಚರವಹಿಸಿ. ೨. ಬೇರೆ ಬೇರೆ ಸಾಂಬಾರ್ ಪುಡಿಗಳನ್ನು ಉಪಯೋಗಿಸಿ. ರುಚಿ ವ್ಯತ್ಯಾಸವಾಗುತ್ತಾ ಇದ್ದರೆ ಅನುಮಾನ ಬರಲಾರದು.

Sunday 1 April 2012

ಹತ್ತಿರವೋ ದೂರವೋ !


ಹೀಗೇ ಬಸ್ಸು, ಅಲ್ಲಲ್ಲೇ ನಿಲ್ದಾಣ, ಹತ್ತಿ ಇಳಿಯುವ ಪ್ರಯಾಣಿಕರು.. ೧೨೦ ಕಿಲೋಮೀಟರ್ ಬಂದರೂ ಇನ್ನೂ ಆಯಾಸವಾಗದೇ ಕುಳಿತುಕೊಂಡು ಇಳಿದು ಹತ್ತುವ ಪ್ರಯಾಣಿಕರನ್ನೇ ನೋಡುವುದು ಬಹು ದೊಡ್ಡ ಟೈಂ ಪಾಸು !

ಓಹ್, ಬಸ್ಸು ಖಾಲಿಯಾದಂತಾಯಿತು.. ಹೆಚ್ಚಿನವರು ಇಳಿದರು. ಎಂತಾ ಹೊಟ್ಟೆಯ ಹಸಿವು ? ಇಲ್ಲೆಲ್ಲಾದರೂ ನಿಲ್ಲಿಸಿದರೆ ಇಳಿದು ಹೋಟೆಲ್ಗೆ ಹೋಗಿ ಬರಬೇಕೆನಿಸಿತು. ಬಸ್ಸು ಇನ್ನಷ್ಟು ಪ್ರಯಾಣಿಕರನ್ನು ತುಂಬಿಸಿಕೊಂಡು ಹೊರಟಿತು.

ಆ ಬಿಳಿಯ ಚೂಡಿದಾರದ ಚಂದದ ಹುಡುಗಿ , ನಗುತ್ತಾ ಬಸ್ಸೇರಿದ ಅವಳ ನಗುವನ್ನೆಲ್ಲಾ ಒಂದು ಬುಟ್ಟಿಯೊಳಗೆ ತುಂಬಿ ಮನೆಯಲ್ಲಿಡಬೇಕೆನ್ನುವಷ್ಟು ಆತುರವಿತ್ತು ಸಾಮೀಪ್ಯಕ್ಕೆ. ಬಸ್ಸಿನ ಚಲನೆಗನುಗುಣವಾಗಿ ಬಾಗುವ ಅವಳು ಬಳ್ಳಿಯೇ ಇರಬೇಕು.. ಆ ಹುಡುಗಿ ಮುಂದೆ ಮುಂದೆ ಬಂದು  ನನ್ನ ಪಕ್ಕ ಕುಳಿತರೆಷ್ಟು ಚಂದ ಎಂದು ಯೋಚಿಸುವದರೊಳಗೆ ನನ್ನ ಪಕ್ಕ ಕುಳಿತ ಈ ಹುಡುಗಿ !

ನಗು ಇರದ ಬಿಗು ಮುಖದ ಇವಳನ್ನು ನೋಡುವುದೇ ಸುಮ್ಮನೆ ಎಂದೆನಿಸಿದರೂ ,ಹಸಿವೆಯನ್ನು ಮಾಯ ಮಾಡಿಸುವ ಇವಳ ಸಾಮೀಪ್ಯ ! ಈ ಸೆಳತಕ್ಕೆ ಬೀಳುವುದು ಎಷ್ಟು ಸುಲಭ ? ಆಗಾಗ ನನ್ನನ್ನೇ ನೋಡುತ್ತಿರುವಂತೆ ನಾನಂದುಕೊಂಡಾಗ ಆಗುವ ವಿಲಕ್ಷಣ ಸಂತೋಷ .ಅವಳು ಓದಿದಂತೆ ನಾನು ಓದದಂತೆ ಕಣ್ಣುಮುಚ್ಚಾಲೆಯಂತೆ ಆ ಪಯಣ ಮುಂದುವರೆಯುತ್ತಾ ಇತ್ತು . ಎಲ್ಲಾ ಸಿನೆಮಾದ ಕೊನೆಯಂತೆ ಅವಳೂ ನಂತರದ ನಿಲ್ದಾಣದಲ್ಲಿ ಇಳಿಯುವಂತೆ ಭಾಸವಾಯಿತು.. ಇಳಿದೂ ಹೋದಳು. ಹೋಗುವಾಗೊಮ್ಮೆ ನನ್ನನ್ನ ನೋಡಿದಂತೆ ಭಾಸವಾಯಿತು, ನೋಡಲಿಲ್ಲ ಅವಳು !

ಪುನಃ ಹುಡುಕತೊಡಗಿದೆ ಆ ಬಿಳಿಯ ಚೂಡಿದಾರದ ಹುಡುಗಿಯನ್ನು ! ಎಲ್ಲಿದ್ದಾಳೆ ?

ಹತ್ತಿರವಿರುವ ಕಣಗಿಲೆ ಹೂವು ದೂರದ ಚಿನ್ನದ ತಾವರೆಗಿಂತ ಸೊಗಸು !!