ಇದು ಯಾರು? ಓಹೋ ಯಾವಾಗ ಬಂದದ್ದು? ಎಂತ ವಿಶೇಷ? ಅಪ್ಪನ ಹಾಗೆಯೇ ಮೀಸೆ ಬಿಟ್ಟದ್ದ ನೀವು. ನೋಡುವಾಗ ಮೊದಲು ಅವರನ್ನೇ ಸಣ್ಣ ಪ್ರಾಯದಲ್ಲಿ ನೋಡಿದ ಹಾಗಾಯಿತು. ಆದರೆ ಪೇಟೆಯ ಬೊಜ್ಜು ಮಾತ್ರ ನಿಮ್ಮದ್ದು ಜಾಸ್ತಿ ಅಷ್ಟೆ ಹಿಹ್ಹಿಹ್ಹಿಹ್ಹಿ.. ಇಮಾನ್ ಸೋಜರು ನಗುತ್ತಿದ್ದುದನ್ನು ಚಿಕ್ಕಪ್ಪ ತಡೆದು ಬೇರೇನೋ ಮಾತನಾಡಲು ಶುರು ಮಾಡಿಕೊಂಡರು.
ಇಮಾನ್ ಸೋಜರನ್ನು ನೋಡುವಾಗ ತುಂಬಾ ಗೌರವವೆನಿಸಿತು. ಅವರ ಅಪ್ಪ ಬಾಬು ಸೋಜರನ್ನು ನೋಡಿದ ನೆನಪಿರಲಿಲ್ಲ. ಅಪ್ಪನಿಂದ ಸುಮಾರು ೧೦ ವರ್ಷ ಹೆಚ್ಚು ಆಗಿರಬಹುದು ಇಮಾನ್ ಸೋಜರಿಗೆ. ಕುತೂಹಲದ ವಿಷಯಗಳನ್ನು ಇಮಾನ್ ಸೋಜರಲ್ಲಿ ಕೇಳಬೇಕೆಂದು ಅವರನ್ನೂ ಮನಸ್ಸಿನಲ್ಲಿ ನೋಟ್ ಮಾಡಿಕೊಂಡೆ. ಅಷ್ಟರಲ್ಲಿ ಚಿಕ್ಕಪ್ಪನ ಪಂಪಿನ ಸ್ಪಾನರೂ, ಇಬ್ಬರಿಗೆ ಎಳನೀರೂ ಯಾವ ವೇಗದಲ್ಲಿ ಬಂದಿತೆಂದು ಊಹಿಸಲಾಗಲಿಲ್ಲ. ಎಳನೀರು ಕುಡಿದು ಸೋಜರಿಗೆ ಪ್ರತಿವಂದನೆ ಹೇಳಿ ಮನೆಕಡೆ ಹೊರಟೆವು.ಒಂದು ಕಾಲವಿತ್ತು. ಊರಲ್ಲಿ ಒಂದು ಅಂಗಡಿ, ಅಲ್ಲಿ ಏನು ಮಾರಾಟಕ್ಕಿದೆಯೋ ಅದನ್ನು ಕೊಳ್ಳಬೇಕಿತ್ತು. ದಿನಾ ಬೀನ್ಸು ಆದರೂ ಸರಿಯೇ, ಆಲೂಗಡ್ಡೆಯಾದರೂ ಸರಿಯೇ.ಈಗ ಹಾಗಲ್ಲ. ಏನು ಬೇಕೋ ಅದನ್ನು ಆರಿಸಿಕೊಂಡು ತೂಕಹಾಕಿ ತರಬಹುದು.ಇದೇ ಮಾತುಗಳು ಮನುಷ್ಯರಿಗೂ ವೃತ್ತಿಗೂ ಅನ್ವಯಿಸಬಹುದು. ಆರಿಸಿಕೊಳ್ಳುವ ರೀತಿ ಈಗ ನಮ್ಮಲ್ಲಿದೆ, ಮೊದಲಿರಲಿಲ್ಲವೇನೋ? ಕಾಲ ಉತ್ತರಿಸಬೇಕು ಅಷ್ಟೆ.
--
ಇತ್ತೀಚೆಗೆ ಹಂದಿ ಕಾಟ ಜಾಸ್ತಿ ಮಾರಾಯ. ಮೊನ್ನೆಯಿಂದ ಸುಮಾರು ನಾಲ್ಕು ಹಂದಿಗಳನ್ನಾದರೂ ಇಮಾಮ್ ಸೋಜರು ಹಿಡಿದಿರಬಹುದು. ಸೋಜರ ತೋಟ ಒಟ್ಟಲ್ಲಿ ನಮ್ಮ ತೋಟಕ್ಕೆ ಕೋಟೆಯ ಬಾಗಿಲಿದ್ದಂತೆ, ಅಲ್ಲಿಂದ ತಪ್ಪಿಸಿಕೊಂಡು ಒಳಗೆ ಬಂದರೆ ಸರ್ವನಾಶ ಮಾಡಿಯೇ ಹಿಂದೆ ಹೋಗುವುದು ಹಂದಿಗಳು. ಈಗ ಏನು ಮಾಡುವುದು? ಮನೆಗೆ ಹೋಗಿ ಒಂದು ಮುಕ್ಕಾಲು ಚಹಾ ಕುಡಿದು ಮತ್ತೆ ನೋಡೋಣ ಅಲ್ಲವೇ? ಹಾಳು ಸೆಖೆಗೆ ಎಂತ ಕೆಲಸವೂ ಬೇಡ ಮಾರಾಯ. ಈಗ ೪೩ ವರ್ಷ ನನಗೆ, ಈಗಲೇ ಸುಸ್ತು. ಆ ಇಮಾನ್ ಸೋಜರನ್ನು ನೋಡು, ಮಾತನಾಡುತ್ತಿದ್ದಂತೆ ತೆಂಗಿನಮರ ಹತ್ತಿ ಎಳನೀರು ಕೊಯ್ದು ಪುನಃ ನಗಾಡುತ್ತಾ ನಿಂತದ್ದನ್ನು ನೋಡಿದಾಗ ಮೂವತ್ತಿರಬೇಕು ಅವರ ವಯಸ್ಸು ಎನಿಸುತ್ತಿದೆ. ೫೪ ವರ್ಷ ಅವರಿಗೆ. ನಾವು ಬ್ರಾಹ್ಮಣರು ಹಾಳಾದದ್ದೇ ಹೀಗೆ ನೋಡು, ಸಣ್ಣವರಿದ್ದಾಗಲೂ ದೊಡ್ಡವರಿದ್ದಾಗಲೂ ಕೆಲಸಕ್ಕೆ ಆಳು ಕಾಳು ಎಂದುಕೊಂಡೇ ನಮ್ಮ ತೋಟಗಳನ್ನು ನಾವೇ ಹಾಳುಮಾಡಿದೆವು. ಈಗ ಇಮಾನ್ ಸೋಜರ ತೆಂಗಿನಮರದಲ್ಲಿ ಎಳನೀರು ಸಿಗುವಂತೆ ನಮ್ಮಲ್ಲಿ ಸಿಗಲಾರದು ಅಲ್ಲವೇ? ಎಂತಹ ವಿಷಾದ.
ಹಿರಿಯರು ದುಡಿಸಿಕೊಂಡು ಗಳಿಸಿದ ಮೂರು ಅಂತಸ್ಥಿನ ಮನೆ, ದೊಡ್ಡ ದೊಡ್ಡ ಒಲೆ ಬಿಟ್ಟರೆ ನಮ್ಮವರ ಹಳೇ ಮನೆಗಳಲ್ಲಿ ಏನೂ ಸಿಗಲಿಕ್ಕಿಲ್ಲ. ಇದು ಸುಮಾರು ೨೫ ವರ್ಷಗಳಿಂದ ಗಮನಿಸುತ್ತಾ ಬಂದದ್ದು ನಾನು. ಹೇಳಬಾರದು ನಾವು, ಆದರೂ ಏನು ಮಾಡುವುದು ಹೇಳಲೇ ಬೇಕು. ಸುಮಾರು ವರ್ಷ ಹಿಂದೆ, ಅಂದರೆ ಈ ಸುರಂಗದ ಕತೆಯ ಬೆನ್ನಲ್ಲೇ ಇನ್ನೊಂದು ಘಟನೆ. ಜಗ್ಗು ಇಲ್ಲದೆ ಕತೆ ಮುಂದುವರೆಯುವುದಿಲ್ಲ, ಏಕೆಂದರೆ ನಿನ್ನಪ್ಪ ಮತ್ತೆ ಜಗ್ಗು ಅಷ್ಟು ಆತ್ಮೀಯರು. ನಾವು ಶಾಲೆಯನ್ನು ಕೊನೆಯ ಬಾರಿ ನೋಡಿದ ವರ್ಷ ಅದು. ಒಂದು ಒಳ್ಳೆಯ ಒಪ್ಪಂದವಿತ್ತು ಆಗ ನಮ್ಮಲ್ಲಿ. ಜಗ್ಗು, ನಿನ್ನಪ್ಪ, ಶಾಮ ಮತ್ತೆ ನಾನು ಒಟ್ಟಾಗಿ ಶಾಲೆಗೆ ಹೋಗುತ್ತಿದ್ದೆವು. ನಿನ್ನಪ್ಪ ನನ್ನನ್ನು ಶಾಲೆಯಲ್ಲೇ ಬಿಟ್ಟು ಬೇಕಾದರೆ ಬರುತ್ತಿದ್ದ. ಆದರೆ ಜಗ್ಗು ಜೊತೆಗಿಲ್ಲದಿದ್ದರೆ ಅಂದಿನ ದಿನ ಅತ್ಯಂತ ಗೋಳು.
ನಿನ್ನಪ್ಪನ ಒಂದು ಕತೆ ಯಾವತ್ತೂ ಇರುತ್ತಿತ್ತು. ಕನಸಿನ ಕತೆಗಳು. ಉದಾಹರಣೆಗೆ ನಿನ್ನೆ ಭಯಂಕರ ಕನಸು ಎಂದೇ ಪ್ರಾರಂಭಿಸಿ ಪದಕ್ಕೆ ಪದ ಕಟ್ಟಿ ಕತೆಗೆ ಕತೆ ಕಟ್ಟಿ ಶಾಲೆಯವರೆಗೆ ಅದನ್ನು ಹೇಳಿಕೊಂಡು ಹೋಗುತ್ತಿದ್ದ. ಎಷ್ಟೋ ದಿನ ನಡೆಯುವ ನಾಲ್ಕು ಮೈಲು ಕತೆಯ ನಾಲ್ಕು ಮಾತಾಗುತ್ತಿತ್ತು. ಇನ್ನೂ ನೆನಪಿರುವ ಕತೆಗಳು ಇರಬೇಕು ಅಪ್ಪನಲ್ಲಿ. ಪುರಾಣದ ಕತೆಗಳನ್ನು ಯಕ್ಷಗಾನದಲ್ಲಿ ಕೇಳಿ ಅದನ್ನ ತಿರುಚಿ ಹೇಳಿ ಅದಕ್ಕೊಂದು ರಮ್ಯವೋ ವೀರವೋ ಪ್ರಧಾನವಾದ ಅಂತ್ಯ ಕೊಟ್ಟು ಶಾಲೆಯ ಪಾಠವನ್ನು ಮರೆಸುತ್ತಿದ್ದ ನಿನ್ನ ಅಪ್ಪನ ತಾಕತ್ತನ್ನು ವಿವರಿಸಲು ತುಂಬಾ ಸಮಯ ಬೇಕಾದೀತು. ಹೀಗೇ ನಮ್ಮ ಶಾಲಾದಿನಗಳು ಮುಗಿಯುತ್ತಾ ಬಂತು. ಈಗಿನಂತೆ ಪಾಸಾದರೆ ಏನು ಮಾಡೋದಪ್ಪಾ ಎಂದು ಯಾವತ್ತೂ ನಾವು ಚಿಂತೆ ಮಾಡಿರಲಿಲ್ಲ. ನಾವ್ಯಾಕೆ ನಮ್ಮ ತಂದೆತಾಯಿಗಳು ಕೂಡ. ಇಂತಹ ದಿನಗಳಲ್ಲಿ ಒಂದು ನಿರೀಕ್ಷಿಸಿರದ ಘಟನೆ ನಡೆಯಿತು.
ಕೇಶವ ಸಾದಾ ಮನುಷ್ಯನಾಗಿದ್ದರೂ ಸ್ವಲ್ಪ ನಮ್ಮಿಂದ ದೂರವಿದ್ದ. ಏಕೆಂದರೆ ನಮ್ಮೆಲ್ಲರಿಂದ ೩-೪ ವರ್ಷಕ್ಕೆ ದೊಡ್ಡವನಾಗಿದ್ದುದು ಒಂದು ಕಾರಣವಾದರೆ ಇನ್ನೊಂದು ಕಾರಣ ಒಂದು ಹುಡುಗಿ. ಹೆಸರು ಏನೆಂದು ಮರೆತುಹೋಗಿದೆ ಈಗ. ನೋಡೋದಿಕ್ಕೆ ಸಾಧಾರಣ ಚಂದವಿದ್ದಳು ಮತ್ತೆ ಆಗ ನಮಗೆಲ್ಲ ಚಂದದ ವಿಶ್ಲೇಷಣೆ ತಿಳಿದಿರಲಿಲ್ಲವೇನೋ. ಆದರೆ ಭಾರೀ ಚುರುಕಿನ ಹುಡುಗಿ ಅದು. ಸುಲಭವಾಗಿ ಹೇಳುವುದೇ ಆದರೆ ಕೇಶವನಂತಹನಿಗೆ ದೇವರು ಸೃಷ್ಟಿಸಿದ ಸರಿಯಾದ ಜೋಡಿ. ಈ ಹುಡುಗಿ ಅದೇನು ಮೋಡಿ ಮಾಡಿದ್ದಳೋ ಏನೋ, ನಮ್ಮೊಂದಿಗೆ ಹತ್ತು ವರುಷ ಮಾತನಾಡಿದಷ್ಟಕ್ಕಿಂತ ಹೆಚ್ಚು ಒಂದೇ ದಿನ ಮಾತನಾಡುತ್ತಿದ್ದ. ಅವಳೂ ಹಾಗೆ ನಮ್ಮೊಂದಿಗೆ ತುಂಬಾ ಸಂಕೋಚವಿಲ್ಲದೇ ಅಣ್ಣ ಅಣ್ಣ ಎಂದಿರುತ್ತಿದ್ದಳು. ಹತ್ತನೇಯಲ್ಲಿರುವಾಗ ಶಾಲೆಗೆ ಎಂದು ಕೇಶವನಿದ್ದರೆ ಬೀಡಿ ಕೊಡುವುದಕ್ಕೆಂದು ಅವಳು ಬರುತ್ತಿದ್ದುದು ಕೂಡಾ ದೈವ ಲೀಲೆಯ ಒಂದು ಅಂಶವೆಂದು ಕೇಶವನ ಮಟ್ಟಿಗೆ ಸತ್ಯ.
ಇಷ್ಟು ಹೇಳದೇ ಇದ್ದರೆ ನಿನ್ನಪ್ಪನ ಸಾಹಸಕ್ಕೆ ಸಾಥ್ ನೀಡಿದಂತಾಗುವುದಿಲ್ಲ ಮಗನೆ. ಒಂದು ದಿನ ಇದ್ದಕ್ಕಿದ್ದಂತೇ ನಿನ್ನಪ್ಪ ಕತೆ ಹೇಳತೊಡಗಿದ. ಆಗ ಕೇಶವನಿರಲಿಲ್ಲವೆಂದೋ ಏನೋ, ನಿನ್ನಪ್ಪ ಹೇಳುತ್ತಿದ್ದುದು ಕೇಶವನ ಕತೆಯೇ ಆಗಿತ್ತು. ಕೇಶವ ಆ ಹುಡುಗಿಯನ್ನು ಮದುವೆಯಾಗುತ್ತಾನಂತೆ. ಆದರೆ ಹುಡುಗಿಯ ಮನೆಯಲ್ಲೂ ಕೇಶವನ ಮನೆಯಲ್ಲೂ ಇದಕ್ಕೆ ವಿರೋಧವಿದೆ. ಏನಾದರೂ ಮಾಡಿ ಮದುವೆಯಾದರೆ ಸಾಕು. ಕೊನೆಗೆ ಎಲ್ಲವೂ ಸರಿಯಾಗುತ್ತದೆ ಎಂದು ಕೇಶವನ ವಿಶ್ವಾಸ. ಹೇಗೆ ಮದುವೆಯಾಗುವುದು? ಊರನ್ನು ಬಿಟ್ಟು ಓಡಿ ಹೋದರೆ ಹೇಗೆ ಬದುಕುವುದು ಎಂಬಿತ್ಯಾದಿ ವಿಚಾರಗಳಿದ್ದ ಕತೆಯಾಗಿತ್ತು. ವಾಸ್ತವದಲ್ಲಿ ಏನಾಗಿತ್ತೋ ಅದೇ ಕತೆಯನ್ನು ನಿನ್ನಪ್ಪ ಹೇಳಿದ್ದು ಹೇಗೆ ಎಂಬುದು ನಿಜವಾಗಿಯೂ ಆಶ್ಚರ್ಯದ ವಿಚಾರ, ಅಥವಾ ಕಾಕತಾಳೀಯವೋ?
ಒಂದು ಸಂಜೆ ಏನೋ ಆತಂಕ ಮತ್ತು ಭಯದೊಂದಿಗೆ ಕೇಶವ ನಮ್ಮನ್ನು ಸೇರಿಕೊಂಡ. ಕೇಶವ ನಮ್ಮಲ್ಲಿ ದೊಡ್ಡವನು ವಯಸ್ಸಿನಲ್ಲಿ. ಆತಂಕಕ್ಕೆ ಕಾರಣವೇನೆಂದರೆ ಅವನು ಮೆಚ್ಚಿದ ಹುಡುಗಿಗೆ ಮನೆಯಲ್ಲಿ ಬೇರೆ ಹುಡುಗನನ್ನು ನಿಶ್ಚೈಸುವ ವಿಚಾರ. ಕೇಶವ ಬದುಕುವುದು ಸಾಧ್ಯವೇ ಇಲ್ಲ ಎಂದೆಲ್ಲಾ ಹೇಳಿದ್ದ ಆಗ. ನಮ್ಮಂತ ಹುಡುಗರಿಗೆ ಅಸಾಧ್ಯವಾದ ಮದುವೆ ಮಾಡಿಸುವ ವಿಚಾರ ಅವನಿಗೂ ಅರಿವಿತ್ತೇನೋ? ಅದಕ್ಕೇ ಇಬ್ಬರೂ ಓಡಿಹೋಗುವ ಮಾತನ್ನೇ ಹೇಳಿದರು. ನಾಳೆ ಒಂದೇ ದಿನ ಬಾಕಿ ಇರುವುದು. ಇಂತಹ ವಿಚಾರಗಳಿಗೆ ಆಗಿನ ಮೆದುಳುಗಳಿಗೆ ೧೦ ನಿಮಿಷ ಸಾಕಿತ್ತು. ನಿನ್ನಪ್ಪ ಏನೋ ಮೌನದಲ್ಲೇ ಲೆಕ್ಕಾಚಾರ ಹಾಕಿ, ಓ ಕೇಶವಾ ನಾವು ನೋಡಿಕೊಳ್ಳುತ್ತೇವೆ ಎಂದು ಆಶ್ವಾಸನೆ ಕೊಟ್ಟು ಬಿಟ್ಟ. ಮತ್ತೆ ಏನೋ ಕಿವಿಯಲ್ಲಿ ಉಸುರಿದ.
ಶಾಲೆಗೆ ಹೋಗುವಾಗ ನಮ್ಮಲ್ಲಿ ಹಣದ ವಿಷಯ ಬಹಳ ಅಪರೂಪ. ಹಣವೇನು ಎಂದೇ ನಮಗೆ ಗೊತ್ತಾಗಿದ್ದು ಈ ಕೇಶವನ ವಿಷಯದಲ್ಲಿ. ನಿನ್ನಪ್ಪ ಅದು ಹೇಗೋ ೧೦ ರೂಪಾಯಿಗಳನ್ನು ತಂದಿದ್ದ. ಕೇಶವನಲ್ಲಿ ಸ್ವಲ್ಪ ಹಣವಿತ್ತು. ಇದಾಗಿ ಶಾಲೆ ಮುಗಿದ ಸಂಜೆ, ಕೇಶವನೂ ಅವಳೂ ಭೇಟಿಯಾಗಿ ಏನೋ ಚರ್ಚಿಸಿದರು. ಕೊನೆಗೆ ಇಬ್ಬರೂ ಜೊತೆಗೇ ಬಂದರು. ನಿನ್ನಪ್ಪ ಅದೇನೋ ಧೈರ್ಯದ ಮಾತುಗಳನ್ನು ಹೇಳಿದ. ಎಲ್ಲಿಗೆ ಹೋಗುವುದೆಂದು ಅರಿವಿಲ್ಲ. ಈಗಿನಂತೆ ಆಗ ಸಂಚಾರಕ್ಕೆ ವ್ಯವಸ್ಥೆ ಇಲ್ಲ. ಅದಲ್ಲದೇ ರಾತ್ರಿಯೇ ಹೊರಡಬೇಕು. ಒಂದೇ ಎರಡೇ? ಜಗ್ಗುವಿಗೆ ಕಾಲುನೋವು, ದೂರ ಬರಲಾರ. ಕೊನೆಗೆ ನಾನೂ ನಿನ್ನಪ್ಪನೂ ಇಬ್ಬರೇ ಜೊತೆಯಲ್ಲಿ ಕೇಶವ ಮತ್ತೆ ಆ ಹುಡುಗಿಯ ಜೊತೆ ಹೊರಟೆವು.
ತುಂಬಾ ದೂರ ಹೋಗಲಿಲ್ಲ. ಒಂದು ಡಬ್ಬಾ ಬಸ್ಸು ನೆನಪಿದೆಯೇ ನಿನಗೆ? ಈಗ ರಸ್ತೆಯಿದೆ ಶಾಲೆಯಿಂದಲೇ, ಆದರೆ ಮೊದಲು ಇರಲಿಲ್ಲ. ಹಾಗೆ ನಾವು ಅವರ ಜೊತೆ ನಡೆದಿದ್ದನ್ನ ನೀನು ಕಲ್ಪಿಸಲಾರೆ. ನಾನು ಆ ದಿನ ತುಂಬಾ ನಡೆಯುವ ಸ್ಥಿತಿಯಲ್ಲಿರಲಿಲ್ಲ. ಜ್ವರವೋ ಏನೋ ಬಂದಿತ್ತು. ಆದರೆ ಒಬ್ಬನೇ ಮನೆಗೂ ಬರಲಾರೆ, ಬಂದರೆ ಅಣ್ಣನೆಲ್ಲಿ ಎಂದು ಕೇಳಿದರೆ ಉತ್ತರವನ್ನೂ ಕೊಡುವ ಹಾಗಿಲ್ಲವಲ್ಲ. ಅದಕ್ಕಾಗಿ ಜೊತೆಗೆ ನಡೆಯತೊಡಗಿದೆ. ಅಂದ ಹಾಗೆ ಬೆಳಗ್ಗಿನ ಜಾವ ೫.೩೦ರ ಸುಮಾರಿಗೆ ಆ ಬಸ್ಸು ಬರುತ್ತಿತ್ತು. ಈಗಿನಂತೆ ಆಗ ರಾತ್ರಿ ಯಾವುದೇ ವಾಹನವಿರಲಿಲ್ಲ. ಒಂದೆರಡು ಲಾರಿಗಳು ಇಡೀ ರಾತ್ರಿಯಲ್ಲಿ ಕಂಡರೆ ಅದೇ ಹೆಚ್ಚು. ಈ ದಿನಗಳಲ್ಲಿ ಇಂತಹ ಕಪ್ಪಿನ ರಾತ್ರಿ ನಾವು ನಾಲ್ಕು ಜನ ಕಳೆದ ಒಂದೊಂದು ನಿಮಿಷವೂ ಈಗ ಊಹೆಗೂ ನಿಲುಕದ್ದು.
ನಡೆದು ಬಂದು ಗೋಳಿ ಮರದ ಬುಡದಲ್ಲಿ ಕುಳಿತೆವು. ಈ ಗೋಳಿ ಮರ ಅಥವಾ ಆಲದ ಮರ ಅನಭಿಷಿಕ್ತ ಬಸ್’ಸ್ಟಾಂಡು ಆಗಿನ ಕಾಲದಲ್ಲಿ. ಈಗ ಮರವೂ ಇಲ್ಲ ಬೇರೂ ಇಲ್ಲ. ಸುಮಾರು ೭ ಘಂಟೆಯಾಗಿರಬಹುದೇನೋ, ನಮ್ಮನ್ನು ಅಷ್ಟಾಗಿ ಯಾರೂ ಗಮನಿಸಿರಲಿಲ್ಲ. ಅಷ್ಟಾಗಿ ನಾನು ಸಣ್ಣವನಾದ್ದರಿಂದ ಎರಡು ಬೇರೆ ಬೇರೆ ತಂಡದಂತೆ ಕಾಣುತ್ತಿದ್ದೆವೇನೋ? ಅಂದಾಜು ೧೧ ಘಂಟೆ ಅನ್ನ ಆಹಾರ ಇಲ್ಲದೆ ಅಲ್ಲಿ ಕಾಯುವ ಸ್ಥಿತಿ ನಮ್ಮದೆಂದು ನನಗೆ ಊಹೆಯೂ ಇರಲಿಲ್ಲ. ಆದರೆ ನಿನ್ನಪ್ಪ ಅದಕ್ಕೆಲ್ಲ ಸಿದ್ಧನಾಗಿದ್ದಂತೆ ಕಾಣುತ್ತಿದ್ದ.
ಕೇಶವ ಮತ್ತೆ ಆ ಹುಡುಗಿ ಒಂದು ಮಾತು ಆಡಿರಲಿಲ್ಲ. ಆಡಿದ್ದರೂ ಒಂದೂ ನೆನಪಿಲ್ಲ. ಅವಳು ಆಗಾಗ ಅಳುತ್ತಿದ್ದಳು. ಆಗಾಗ ವಾಪಸ್ಸು ಹೋಗುವ ಮಾತನ್ನಾಡುತ್ತಿದ್ದಳು. ಮತ್ತೆ ಅದೇ ಮಳೆಗಾಲದ ನದಿಯ ನೆನಪನ್ನ ತರುತ್ತಿದ್ದಳು. ಪ್ರೇಮ ಉಕ್ಕುವ ರಭಸ, ಹರಿಯುವ ಚೇಸ್ಟೆ, ಬೆಳೆಯುವ ರೀತಿ ಆ ಸಮಯದಲ್ಲಿ ಹೊಳೆಯುವ ಆಲೋಚನೆಗಳೋ .. ಇದೆಲ್ಲ ಜೀವನವನ್ನು ನೆನಪಿನಲ್ಲಿಡಲು ಸಹಕಾರಿಯಾಗುತ್ತದೆ. ಸುಮಾರು ಹೊತ್ತು ಸುಮ್ಮನೇ ಕುಳಿತೆವು. ಆಗ ಸಮಯ ಎಷ್ಟೆಂದು ನಮಗೆ ಹೇಳಲು ಅರಿವೂ ಇಲ್ಲ, ಸಾಧನಗಳೂ ಇಲ್ಲ. ಸುಮಾರು ಮಧ್ಯರಾತ್ರಿಯ ಹೊತ್ತಿರಬೇಕು, ನಾನು ಜ್ವರದಿಂದ ಕಂಪಿಸತೊಡಗಿದೆ. ಅಲ್ಲಿಯೇ ಕುಸಿದಂತೆ ಬಿದ್ದೆ. ಏನು ಮಾಡುವುದೆಂದು ತಿಳಿಯದಾದ ಅಣ್ಣ ಗಾಳಿ ಹಾಕಿದ. ಎಲ್ಲಿಂದಲೋ ನೀರನ್ನು ತಂದು ಕುಡಿಸಿದ. ಮಂಜಿನ ಹನಿ ಬೀಳದಂತೆ ಮರದ ಬುಡದಲ್ಲಿ ಮಲಗಿಸಿದ ನನ್ನನ್ನು.
ಕೇಶವನೂ, ಆ ಹುಡುಗಿಯೂ ಬಸ್ಸನ್ನೇರಿದರಂತೆ. ಅಣ್ಣ ತನ್ನಲ್ಲಿರುವ ಹಣವನ್ನೂ ಜೊತೆಗೆ ಕೊಟ್ಟನಂತೆ. ಜ್ವರದಿಂದ ಬಿದ್ದಿದ್ದ ನನ್ನನ್ನು ಎತ್ತಿಕೊಂಡು ಪುನಃ ಶಾಲೆಗೆ ಬಂದ. ಶಾಲೆಗೆ ಮೊದಲು ಬಂದ ಮೇಷ್ಟರ ಬಳಿ ಜ್ವರವಿದ್ದುದನ್ನು ವಿವರಿಸಿ ಹೇಗೋ ಆಸ್ಪತ್ರೆಗೆ ಸಾಗಿಸಿದ ನನ್ನನ್ನು. ಆಗ ನಮ್ಮ ಅಪ್ಪನೂ ಶಾಲೆಗೆ ಬಂದಿದ್ದರು. ಅವರೂ ಆಸ್ಪತ್ರೆಗೆ ಬಂದರು.
ಆ ದಿನ ಸುಮಾರು ಮಧ್ಯಾಹ್ನದ ವೇಳೆಗೆ ನನಗೆ ಎಚ್ಚರವಾಯಿತು. ನಾನೆಲ್ಲಿ ಬಾಯಿ ಬಿಡುತ್ತೇನೋ ಎಂದು ಹೆದರಿದ್ದ ನಿನ್ನಪ್ಪ, ನನ್ನ ಬಳಿಯೇ ಇದ್ದ. ಕೊನೆಗೆ ಅದಕ್ಕೂ ಒಂದು ಕತೆಯನ್ನು ಹೇಳಿದ. ನಿನ್ನೆ ಶಾಲೆಯಿಂದ ಬರಬೇಕಿದ್ದರೆ ನಾನು ಬಿದ್ದೆನೆಂದೂ, ಆ ಬೀಳುವಿಕೆಯಿಂದ ಜ್ವರ ಬಂದೀತೆಂದೂ, ಮನೆಯ ತನಕ ಕರೆತರಲು ಆಗಲಿಲ್ಲವೆಂದೂ, ರಾತ್ರಿಯಿಡೀ ಶಾಲೆಯಲ್ಲೇ ಇದ್ದೆನೆಂದೂ ಹೇಳಿ ನಂಬಿಸಿದ ಅಪ್ಪನನ್ನು. ಮತ್ತೆ ಕೇಶವನ ವಿಚಾರವು ಯಾರ ಬಾಯಿಯಲ್ಲಿಯೂ ಇಲ್ಲದೇ ಇದ್ದುದರಿಂದ ನಮ್ಮ ಹೆದರಿಕೆ ಸ್ವಲ್ಪ ಕಡಿಮೆಯಾಯಿತು.
ಇದಾಗಿ ಸ್ವಲ್ಪ ಹೊತ್ತಿನಲ್ಲೇ ಕೇಶವನೂ ಬಂದ ಎಂದಾಗ ನಮಗಾದ ಆಶ್ಚರ್ಯಕ್ಕೆ ಪಾರವಿಲ್ಲ. ಬಸ್ಸಿಗೇರಿದ್ದ ಕೇಶವನನ್ನೂ ಅವನ ಹುಡುಗಿಯನ್ನೂ ಯಾರೋ ಬಸ್ಸಿನಿಂದ ಇಳಿಸಿದರಂತೆ. ಕೊನೆಗೆ ಕೇಶವ ಆ ಹುಡುಗಿಯ ಜೊತೆಗೇ ಹುಡುಗಿಯ ಮನೆಗೆ ಹೋದನಂತೆ, ಹುಡುಗಿಯ ತಂದೆ ಎಷ್ಟು ಬೈದರೂ ಕೇಶವ ಲೆಕ್ಕಿಸದೆ ನನಗೆ ಈ ಹುಡುಗಿ ಫಿಕ್ಸ್’ಡ್ ಎಂದನಂತೆ. ಇಂತಹ ಘಟನೆಯಾದ ಮೇಲೆ ಬೇರೆ ಮದುವೆ ಆಲೋಚನೆ ಸರಿ ಬರುವುದಿಲ್ಲವೆಂದ ಮನೆಯಲ್ಲಿದ್ದ ಬೇರೆ ನೆಂಟರ ಮಾತುಗಳಿಗೆ ಬೆಲೆಕೊಟ್ಟು ಕೇಶವನಿಗೇ ಮದುವೆ ಮಾಡಿಕೊಡುವ ತೀರ್ಮಾನವಾಯಿತೆಂದೂ ಹೇಳಿದ. ಹೀಗೆ ಕೇಶವ ನಮ್ಮನ್ನು ಬಿಟ್ಟು ಸಂಸಾರಿಯಾದ ಕೇವಲ ಕೆಲವೇ ತಿಂಗಳುಗಳಲ್ಲಿ.
ಒಟ್ಟಿನಲ್ಲಿ ನಿನ್ನಪ್ಪನ ಈ ಸಾಹಸ ಹೇಗೋ ಕೇಶವನಿಗೆ ಒಳ್ಳೆಯದನ್ನೇ ಮಾಡಿತು. ಈಗಲೂ ಅವರು ಚೆನ್ನಾಗಿದ್ದಾರೆ. ನಿನ್ನಪ್ಪನೂ ಈ ಸಾಹಸದಿಂದ ಹೆಸರುವಾಸಿಯಾಗದೇ ನಮ್ಮಲ್ಲೇ ಹೀರೋ ಆಗಿ ಇದ್ದಾನೆ. ಕೇಶವನೋ ಸಣ್ಣ ಅಡಕೆ ತೋಟ, ಜೊತೆಗೆರಡೋ ಮೂರೋ ದನಗಳನ್ನು ಹೊಂದಿದ್ದಾನೆ. ಒಳ್ಳೆ ಸಂಸಾರ. ಈಗಲೂ ನಿನ್ನಪ್ಪ ಆ ದಾರಿಯಲ್ಲಿ ಹೋದರೆ ಕಾಲು ಹಿಡಿದು ಆಶೀರ್ವಾದ ಪಡೆದೇ ಗೌರವಿಸುತ್ತಾನೆ.