Saturday 22 June 2013

ಕತೆ- ವಶ್ಯಾಮೃತದೇಹದ ಸುತ್ತಾ ಒಂದು ಸುತ್ತು ಬಂದ ಕೂಡಲೇ ಅಂಗಿಯ ಜೇಬಿನ ಒಳಗಿದ್ದ ಪತ್ರ ಕಂಡಿತು. ಇಂತಹಾ ಘಟನೆಗಳನ್ನು ಅದೆಷ್ಟು ಹ್ಯಾಂಡಲ್ ಮಾಡಿಲ್ಲ?. ಪ್ರತಿಯೊಬ್ಬರ ಹುಟ್ಟಿಗೆ ಕಾರಣಗಳಿರದಿದ್ದರೂ ಮರಣ ಮಾತ್ರ ಕಾರಣಸಮೇತವಾಗಿರಬೇಕು ಎನ್ನುವುದು ಪೋಲೀಸ್ ಇಲಾಖೆಯದ್ದು.

ಇನ್ನೊಬ್ಬ ಪೋಲೀಸ್ ಬಿಡಿಸಿ ತಂದ ಕಾಗದವನ್ನು ಓದುತ್ತಾ ಕ್ರಮೇಣ ಮೃತ ವ್ಯಕ್ತಿಯ ಮುಖನೋಡಿದ. ಶಾಂತ ಶವ.
~
 ಈ ಪತ್ರವನ್ನು ಯಾರು ಓದುತ್ತಿದ್ದೀರೋ ಅವರಿಗೆ ನಮಸ್ಕಾರ. ಹೆಣದ ಪತ್ರ ಓದುವುದು ನಿಮಗೆ ಕಷ್ಟವಾದೀತು, ಸಾಯುವ ಮೊದಲು ಪತ್ರ ಬರೆಯುವುದು ನನಗೆ ಸಾಧನೆ ಎಂದೂ ಹೆಮ್ಮೆಯಲ್ಲ. ಆದರೆ ಸತ್ತಿರುವುದಕ್ಕೆ ಕಾರಣ ದಾಖಲೆ ಕೊಡಬೇಕು ತಾನೆ? ಅದಕ್ಕಾಗಿ ಈ ಪತ್ರ.

ನಾನು ರಾಜೇಶ್ ಕುಮಾರ್. ರಾಜು ಎಂದರೆ ನನ್ನ ಮಿತ್ರರಿಗೆಲ್ಲಾ ಗೊತ್ತಾದೀತು. ಸಾವಿನ ಮೊದಲೂ ಇಷ್ಟು ಖುಷಿಯಿಂದ ಪತ್ರ ಬರೆಯುತ್ತೇನೆ ಎಂದು ಹೆಮ್ಮೆಗಿಂತಲೂ ಒಳಗೆ ಅನುಭವಿಸುವ ನೋವು, ಹತಾಶೆಗಳನ್ನು ಸೌಮ್ಯವಾಗಿ ಹೇಳಬೇಕು ಎನ್ನುವುದೇ ನನ್ನಾಸೆ. ಗೋವಿಂದಪುರದಲ್ಲಿ ವಿಶಾಲಾಕ್ಷಿ ಮತ್ತು ಜನಾರ್ದನ ಎನ್ನುವವರ ಮಗ ಎಂದಾದರೆ ಹಳ್ಳಿಗೂ ನನ್ನ ಹೆಸರು ಗೊತ್ತಾದೀತು. ಇದೇ ಅರಳಿಮರದಿಂದ ಒಂದು ೫ ಫರ್ಲಾಂಗು ನಡೆದರೆ ನನ್ನ ಮನೆಯೂ ಸಿಕ್ಕೀತು. ಆದರೆ ಅಲ್ಲಿ ಯಾರೂ ಇಲ್ಲದಿರುವುದರಿಂದ, ನನ್ನನ್ನು ಈ ರೀತಿ ನೋಡುವವರು ಹೊರಗಿನವರೇ ಆಗಿರುತ್ತಾರೆ.

ಸುಮಾರು ನಾಲ್ಕುವರ್ಷವಾಯಿತು ನಾನು ಬೆಂಗಳೂರೆಂಬ ಮಾಯಾನಗರಿಯಲ್ಲಿ ವಾಸಿಸಲು ಪ್ರಾರಂಭಿಸಿ. ಡಿಗ್ರೀ ಮುಗಿದ ಕೂಡಲೇ ಬೆಂಗಳೂರು ಸೇರಿ ಚೆನ್ನಾಗಿರುವ ಕೆಲಸವನ್ನೇ ಆಯ್ಕೆ ಮಾಡಿ ಒಳ್ಳೆಯ ಸಂಬಳವೂ ನನಗಿತ್ತು. ಇಬ್ಬರು ಅಕ್ಕಂದಿರು ನನಗೆ, ನಾನು ಕೆಲಸದಲ್ಲಿರುವಾಗಲೇ ಅವರ ಮದುವೆಯೂ ಆಯಿತು. ತಕ್ಕಮಟ್ಟಿಗೆ ನನ್ನ ಮೇಲೆ ಎಲ್ಲರಿಗೂ ಒಳ್ಳೆಯ ಅಭಿಪ್ರಾಯವೂ ಇತ್ತು.

ನನ್ನ ಈ ಆತ್ಮಹತ್ಯೆಯ ಕಾರಣ ಶುರುವಾಗುವುದು ಎರಡು ತಿಂಗಳಿನ ಹಿಂದೆ ನಡೆದ ಘಟನೆಯಿಂದ. ಕಾಲ ಅದೆಷ್ಟು ಬೇಗ ಮಾಯವಾಗುತ್ತದೆ ಎನ್ನುವುದು ಬೋಳಿಸಿದ ಮೀಸೆಗೂ ತಿಳಿಯದು. ಗುರುತು ಪರಿಚಯವಿಲ್ಲದ ಬೆಂಗಳೂರಿನಲ್ಲಿ ಎರಡು ವರುಷಕ್ಕೇ ನಾನು ಅತ್ಯಂತ ಹೆಚ್ಚು ಜನರನ್ನು ಬಲ್ಲೆ. ಉದ್ಯೋಗಿ ಮಿತ್ರರು, ಹೊರಗಿನ ಮಿತ್ರರು ಎಂದೆಲ್ಲಾ ಗೊತ್ತಿದೆ ನನಗೆ. ಇತ್ತೀಚೆಗೆ ಒಬ್ಬರ ಪರಿಚಯವಾಗಿದ್ದು ಇದಕ್ಕೆಲ್ಲಾ ಮೂಲವಾಯಿತು.

ಅದೊಂದು ಸಂಜೆ, ವಾಕಿಂಗ್ ಹೋಗುವ ಅಭ್ಯಾಸವೆಂದಲ್ಲ, ಸುಮ್ಮನೇ ತಿರುಗುವುದು ನನಗಿಷ್ಟ. ಸುಮಾರು ಏಳು ಘಂಟೆಯಾಗುವಷ್ಟರಲ್ಲಿ ಯಾರೋ ಒಬ್ಬರು ದಿನವೂ ನೋಡುವ ಪರಿಚಿತ ಮುಖದವರು ನನ್ನ ಬಳಿಯೇ ಬಂದು ಕುಳಿತರು. ಹೆಸರು ಹೇಳುವುದಿಲ್ಲ, ಶವವನ್ನು ಹೆದರಿಸಲಾರಿರಿ ಎನ್ನುವ ಗ್ಯಾರಂಟಿಯೂ ಇದೆಮಾತನಾಡುತ್ತಾ ಊರು ಕೇರಿ ಪರಿಚಯಗಳನ್ನು ಮಾಡಿಕೊಂಡೆವು. ಆತ್ಮೀಯರಾದೆವು.


ಸುಮಾರು ೫-೬ ಬಾರಿ ಭೇಟಿಯಾದಮೇಲೆ ಅವನು ಇನ್ನೊಂದು ರಹಸ್ಯವನ್ನು ತೆರೆದಿಟ್ಟ. ಮೂಲತಃ ವೇಶ್ಯಾ ಸಂಪರ್ಕಗಳನ್ನು ಹೊಂದಿದ್ದನಾತ, ನನ್ನನ್ನು ಸಮೀಪಿಸಿದ್ದೇ ಆಕರ್ಶಿಸುವುದಕ್ಕಾಗಿ, ಅವನ ವ್ಯವಹಾರಕ್ಕಾಗಿ. ಆತ್ಮೀಯತೆ ಬೆಳೆದಂತೆ ಈ ವಿಷಯಗಳ ವರದಿ ಒಪ್ಪಿಸುತ್ತಾ ಮುಂದುವರೆದ. ಕೊನೆಗೂ ಒಂದು ದಿನ ನಾನು ಆತನ ಜಾಲಕ್ಕೆ ಬಿದ್ದೆ ಅಥವಾ ಬೀಳಿಸಲ್ಪಟ್ಟೆ.

ಹಣದ ವ್ಯವಹಾರವೂ ಜೋರಾಯ್ತು. ಇಪ್ಪತ್ತು ಸಾವಿರದ ಮೇಲೆ ಸಂಬಳ ಎಣಿಸುತ್ತಿದ್ದ ನನಗೆ ತಿಂಗಳಿಗೆ ೩-೪ ಸಾವಿರಗಳನ್ನ ವೇಶ್ಯಾವರ್ತನೆಗೆ ಕೊಡುವುದೇನೋ ದೊಡ್ಡ ನಷ್ಟವಾಗಿರಲಿಲ್ಲ. ಕೊನೆಗೆ ನಾನೇ ಇವನ ಸಹಾಯವಿಲ್ಲದೆ ಹೋಗತೊಡಗಿದೆಇದು ಒಂದು ರೂಢಿಯಂತೆ ಆಗಿಹೋಗಿತ್ತು. ನಾನೂ ಯಾವುದೋ ಒಂದು ಅವ್ಯಕ್ತ ಸಮಾಧಾನಕ್ಕೋ ಹುಚ್ಚಿಗೋ ಹೋಗುತ್ತಿದ್ದೆ.

ಹೌದು ಅಲ್ಲ, ಆಗಿರಬೇಕು. ರೇಷ್ಮಾ ಎಂದವಳ ಹೆಸರು. ಸುಮಾರು ನನ್ನಷ್ಟೇ ಪ್ರಾಯದ ಹುಡುಗಿಯವಳು. ವೇಶ್ಯೆ ಎನ್ನುವುದಕ್ಕೆ ಮನಸ್ಸು ಬರುವುದಿಲ್ಲ. ಅದೊಂದು ಪ್ರಪಂಚ, ಎಷ್ಟೊ ಕಟುಸತ್ಯಗಳನ್ನ ಕಹಿಸತ್ಯಗಳನ್ನ ಅರಗಿಸಿಕೊಂಡು ಬದುಕುವ ನೂರಾರು ಹೆಣ್ಣುಮಕ್ಕಳನ್ನು ನಾನು ನೋಡಿದ್ದು ಅಲ್ಲಿಯೇ ಇರಬೇಕು. ಹೆಚ್ಚೇಕೆ ಗಂಡನ ಮೇಲಿನ ಪ್ರೀತಿಯಿಂದ, ಅವನನ್ನು ಬದುಕಿಸಬೇಕು ಎನ್ನುವ ಹಂಬಲದಿಂದ ಬಂದವರೂ ಇದ್ದಂತಹ ಜಾಗವದು. ಈ ರೇಷ್ಮನ ಕತೆಯಂತೂ ಬಹಳ ಬೇಸರವಾಗಿತ್ತು. ತನ್ನ ಮನೆಯ ಕಷ್ಟವೂ, ತಮ್ಮನ ಓದೂ ಎಂದೆಲ್ಲಾ ತಲೆಕೆಡಿಸಿಕೊಂಡವಳು, ಬೆಂಗಳೂರಿನ ಗಾರ್ಮೆಂಟ್ ಒಂದರಲ್ಲಿ ಉದ್ಯೋಗಿಯಾಗಿದ್ದವಳು ಎಂದೆಲ್ಲಾ ನನ್ನಲ್ಲಿ ಹೇಳಿಕೊಂಡಿದ್ದಳು.

ನಾನು ಅವಳನ್ನು ಎಷ್ಟರ ಮಟ್ಟಿಗೆ ಇಷ್ಟಪಡುತ್ತಿದ್ದೆನೆಂದರೆ ಬಾರಿ ಬಾರಿ ಅವಳ ನೆನಪಿನಲ್ಲಿ ನಾನು ಆ ವೇಶ್ಯಾಮನೆಯ ಹತ್ತಿರ ಸುಳಿಯುತ್ತಿದ್ದೆ. ಅಳುವಿನ ಕತೆ ಕೇಳಿದರೆ ನಾನು ಇನ್ನೂ ಬೇಸರವಾಗಿ ಒಂದೆರಡು ಸಾವಿರವನ್ನೂ ಕೊಟ್ಟಿದ್ದೆ. ಇಂತಹಾ ಅವಳು ಸಮಾಜದಿಂದ ದೂರಳಾಗಬಾರದು ಎಂದು ಕೂಡಾ ಬಯಸಿದ್ದೆಅವಳ ಕಣ್ಣುಗಳು, ನನ್ನೊಂದಿಗೆ ಕಳೆದ ಆ ನಿಮಿಷಗಳು, ಚಂಚಲತೆ ಇದೆಲ್ಲವೂ ಒಂದು ಅಮೋಘ ಸುಖವನ್ನು ಕೊಟ್ಟಿತ್ತು. ಅದರಿಂದ ವಿಮುಖನಾಗುವುದು ಸಾಧ್ಯವಿಲ್ಲವೆಂದೇ ನಂಬಿದ್ದೆ.

ಅವಳೂ ಹಾಗೆಯೆ, ನನಗೆ ಆಗಾಗ ಕರೆ ಮಾಡುತ್ತಿದ್ದಳುಫೋನ್ ಮೂಲಕ ಎಷ್ಟೊಂದು ಹರಟುತ್ತಿದ್ದೆವೆಂದರೆ ಅವಳಿಗೆ ನನ್ನನ್ನು ಬಿಟ್ಟು ಇರುವುದಕ್ಕಾಗುವುದಿಲ್ಲವೆಂಬಷ್ಟು, ನನಗೂ. ಕೊನೆಗೊಂದು ದಿನ ಅವಳು ನನ್ನನ್ನು ನೋಡಲೇ ಬೇಕು ಎನ್ನುವಂತೆ ಹೇಳಿದಳು. ನಾನು ಆಫೀಸಿಗೆ ಅರ್ಧ ದಿನ ರಜೆಯನ್ನು ಹಾಕಿ ಅವಸರವಾಗಿ ಅವಳು ತಿಳಿಸಿದ ಜಾಗಕ್ಕೆ ಬಂದೆ. ನನ್ನ ಸಂಪರ್ಕವಾದ ಮೇಲೆ ಅವಳು ಯಾರನ್ನೂ ಇಷ್ಟಪಡುವುದಿಲ್ಲ. ನನ್ನನ್ನೇ ಇಷ್ಟಪಡುತ್ತಾಳೆ ಎಂಬೆಲ್ಲಾ ಮಾತುಗಳನ್ನು ಕೇಳಿ ಹೆಮ್ಮೆ ಪಟ್ಟೆ. ಆ ವೃತ್ತಿಗೆ ಅವಳು ಇನ್ನು ಹೋಗುವುದಿಲ್ಲ. ಊರಿಗೆ ಹೋಗುತ್ತೇನೆ ಎಂದು ಹೇಳಿ ನನ್ನಿಂದ ಒಂದೆರಡು ಸಾವಿರ ರೂಪಾಯಿ ಬೇಡಿದ್ದಳು. ನಾನು ಹಣವನ್ನು ಕೊಟ್ಟೆ, ಅವಳನ್ನು ಬೀಳ್ಕೊಟ್ಟೆ.

ಮತ್ತೆರಡು ದಿನ ದೂರವಾಣಿ ಸಂಪರ್ಕವೇನೋ ಇತ್ತು. ಆದರೆ ಅದೂ ಒಂದು ದಿನ ಮುಗಿದು ಹೋಯಿತು. ಎಷ್ಟು ಪ್ರಯತ್ನಿಸಿದರೂ ಅವಳ ನಂಬರ್ ಸಿಗಲಿಲ್ಲ. ಅವಳನ್ನು ಭೇಟಿಯಾಗಲೇ ಬೇಕು, ಮಾತನಾಡಲೇ ಬೇಕು ಎನ್ನುವ ಉತ್ಕಟ ಆಸೆ ಪ್ರಬಲವಾಗಿತ್ತು.

ಇತ್ತ ನನ್ನ ಅಪ್ಪ ಅಮ್ಮನಿಂದ ನನಗೊಂದು ಹುಡುಗಿಯನ್ನು ಹುಡುಕುವ ವ್ಯವಸ್ಥೆಯೂ ನಡೆದಿತ್ತು. ಆ ನೆಪದಲ್ಲಿ ೩-೪ ದಿನ ರಜೆ ಹಾಕಿ ಮನೆಗೆ ಹೊರಟೆ. ಮನೆಗೆ ಬಂದು ಅವಳ ಊರಿನ ಕಡೆಗೆ ಹೊರಟೆ.

ಆ ಊರಿನಲ್ಲಿ ಅವಳನ್ನು ಹುಡುಕುವುದು ಸಾಮಾನ್ಯ ಕೆಲಸವಾಗಿರಲಿಲ್ಲ. ಅದಲ್ಲದೇ ಅಲ್ಲಿಯೇ ಇದ್ದಾಳೆ ಎನ್ನುವ ವಿಶ್ವಾಸದ ಕೊರತೆ ಇದ್ದರೂ ಮನಸ್ಸು ಸಿಗುತ್ತಾಳೆ ಎನ್ನುತ್ತಿತ್ತು. ಇದರಿಂದ ನಿರಾಶೆಗೊಳಗಾಗದೇ ಹುಡುಕುತ್ತಾ ಸಾಗಿದೆ. ಮಧ್ಯಾಹ್ನದ ಸಮಯದಲ್ಲಿ ನನ್ನದೇ ತಲೆಗೆ ಹೊಳೆದ ಆಲೋಚನೆಯಲ್ಲಿ ಅಲ್ಲಿದ್ದ ಒಬ್ಬ ಹಿರಿಯರಿಗೆ ನನ್ನ ಮೊಬೈಲಿನಲ್ಲಿದ್ದ ಅವಳ ಫೋಟೋ ತೋರಿ ಹೇಳಿದೆ, ಇವರು ಎಲ್ಲಿರುತ್ತಾರೆ ಎಂದು.

ಆ ಹಿರಿಯರು ನನ್ನನ್ನು ಗಮನಿಸಿ ಕರೆದುಕೊಂಡೇ ನಡೆದರು. ಅದು ಒಂದು ಸಣ್ಣ ಮನೆ, ಹೊಕ್ಕು ನೋಡಿದರೆ ವಯಸ್ಸಾದ ಇಬ್ಬರು ಅಜ್ಜ ಅಜ್ಜಿ ಮತ್ತೆ ಒಂದು ಮಗು ಆಟವಾಡುತ್ತಾ ಇತ್ತು. ನಾನು ಹುಡುಕುವ ರೇಷ್ಮಾ ಇಲ್ಲಿದ್ದಾಳೆ ಎನ್ನುವ ಕಲ್ಪನೆಯನ್ನೂ ಮಾಡಲಾಗಲಿಲ್ಲ.

ಸೀಮಾ, ಯಾರೋ ಬಂದಿದ್ದಾರೆ ನೋಡು ಎನ್ನುತ್ತಾ ಹಿರಿಯರು ಅವರ ಕೆಲಸವಾಯಿತು ಎಂದು ಹೊರಟು ಹೋದರು. ಇದ್ಯಾರು ಸೀಮಾ ಎಂದು ಯೋಚಿಸುತ್ತಿದ್ದಾಗಲೇ ರೇಷ್ಮಾ ಬಂದಳು. ಆಹ್, ಅವಳೇ ಇವಳು? ಆ ನೋಟದಲ್ಲಿ ಪ್ರಶ್ನಾರ್ಥಕ ಚಿಹ್ನೆ ಇತ್ತು. ಹೇಗೆ ಸಾಧ್ಯ? ರೇಷ್ಮಾ ಎಂದೆ. ಯಾರು ರೇಷ್ಮಾ ಎಂದಳು?

ನಾನು ನಿನ್ನ ರಾಜು, ಎಂದೆ. ಅದಕ್ಕವಳು ಕೋಪಗೊಂಡಳು. ನಿಂದಿಸಿದಳು ನನ್ನನ್ನು. ನಾನೂ ವ್ಯಗ್ರಗೊಂಡೆ, ನಿನ್ನನ್ನು ಇಷ್ಟಪಟ್ಟು, ಆ ವೃತ್ತಿಯಿಂದ ಬೇಡ ಎನ್ನುವಂತೆ ಮಾಡಿದವನೇ ನಾನು ಎನ್ನುತ್ತಿದ್ದಾಗಲೇ ನನಗೆ ಹೊಡೆದೇಬಿಟ್ಟಳುಅಜ್ಜ ಅಜ್ಜಿಯರೂ ಅವಳ ಜೊತೆ ಸೇರಿ ಮೂದಲಿಸತೊಡಗಿದರು. ನಾನು ಇನ್ನೇನಾಗುತ್ತೋ ಎಂದು ಹೆದರಿ ಮನೆಯ ಹೊರಗೆ ಬಂದೆ.

ಇದು ಸಾಹಸವಲ್ಲ. ಕ್ರೌರ್ಯವೂ ಅಲ್ಲ. ಅವಳು ಬದಲಾಗಿದ್ದಾಳೆ. ತನ್ನ ಸ್ವಾರ್ಥವನ್ನು ತೀರಿಸಿಕೊಂಡು, ತಾನು ಸಂಸಾರವನ್ನು ನಡೆಸುತ್ತಿದ್ದಾಳೆ ಈಗ. ಮದುವೆಯಾಗಿದೆ ಅವಳಿಗೆ. ಎಲ್ಲವನ್ನೂ ಮುಚ್ಚಿಟ್ಟು ನನ್ನ ಜೊತೆ ಮೋಸದಿಂದ ವ್ಯವಹರಿಸಿದ್ದಾಳೆ. ಇದೆಲ್ಲಾ ವ್ಯರ್ಥ ಎಂದು ಸಿಕ್ಕಾಪಟ್ಟೆ ನೊಂದುಕೊಂಡೆ.

ನಿನ್ನೆ ಮನೆಗೆ ಬಂದೆ. ಮನೆಯಲ್ಲಿ ಅಪ್ಪ ಅಮ್ಮ ನಾಡಿದ್ದು ದಿನ ಅಂದರೆ ನೀವು ನನ್ನ ಶವ ನೋಡುವ ದಿನ ನನ್ನ ಮನೆಗೆ ಹುಡುಗಿಯ ಕಡೆಯವರನ್ನು ಬರಲು ಹೇಳಿದ್ದಾರೆ. ನನಗೆ ಕಲ್ಪಿಸಲಾಗುವುದಿಲ್ಲ. ನಾನು ಮಾಡಿದ್ದು ತಪ್ಪೂ ಅಲ್ಲ ಸರಿಯೂ ಅಲ್ಲ ಎನ್ನುವುದು ಭೀಕರವಾಗಿ ಕೊರೆಯುತ್ತಿದೆ. ಅಪ್ಪ ಅಮ್ಮನನ್ನು ಅಕ್ಕನ ಮನೆಗೆ ಕಳುಹಿಸಿದ್ದೇನೆ. ನಾಡಿದ್ದು ಬೆಳಗ್ಗೆ ಅಕ್ಕ ಭಾವ, ಅಪ್ಪ ಅಮ್ಮ ಕಾರಿನಲ್ಲಿ ಬರುತ್ತಾರೆ. ಅವರಿಗೆ ಇಂತಹ ಬೇಸರವಾಗಬಾರದು ಎಂದುಕೊಂಡರೂ ನನಗೆ ದಾರಿ ಉಳಿದಿಲ್ಲ. ಎಲ್ಲೋ ದೂರ ಹೋಗಿ ಬದುಕುವುದಕ್ಕೆ ಚೈತನ್ಯವೂ ಇಲ್ಲ. ಕೊನೆಗಾಣಿಸುತ್ತೇನೆ ಬದುಕು.


ದಯವಿಟ್ಟು ಈ ಸಾವನ್ನು ಹೇಗಾದರೂ ಮಾಡಿ ಆತ್ಮಹತ್ಯೆ ಎನ್ನದಿರಿ. ವಿಮೆಯ ದುಡ್ಡಾದರೂ ಅಪ್ಪ ಅಮ್ಮನಿಗೆ ಸಿಗಲಿ. ಆಗುವುದಿಲ್ಲ ಅಲ್ಲವೇ? ಹಾಗೆಯೇ ಇನ್ನೊಂದು ಮನವಿ ಇದೆ. ನನ್ನ ಸಾವನ್ನು ಟೀವಿಯಲ್ಲಿ ಪತ್ರಿಕೆಯಲ್ಲಿ ಎಲ್ಲಿಯೂ ಪ್ರಸಾರ ಮಾಡಬೇಡಿ. ನೂರು ಜನಕ್ಕೆ ರಂಜಕವಾದರೂ ನನ್ನ ಬಂಧುಗಳಿಗೆ ಹೇಗನ್ನಿಸೀತು.. ನನ್ನ ಊರಿಗೆ, ಅಮ್ಮನಿಗೆ, ಅಪ್ಪನಿಗೆ, ರೇಷ್ಮಳಿಗೆ ಹಾಗೂ ನನ್ನನ್ನೇ ತಿನ್ನಬಯಸುವ ಈ ವಿಶಾಲ ಆಲದ ಮರಕ್ಕೆ ನನ್ನ ಜೀವದ ಅರ್ಪಣೆ.