Wednesday 8 February 2012

ಕಥೆ-ಇಬ್ಬಂದಿಬೆಂಕಿಯೇರಿದಂತೆನಿಸಿ ಚುಮುಚುಮು ಚಳಿಯ ಕನಸು ಬಿಟ್ಟು ಎದ್ದಿದ್ದಾಯಿತು. ಎಲ್ಲಾ ಹೊಸದಾಗಿರುತ್ತದೆ ಎಂದು ದಿನಾ ಅಂದುಕೊಳ್ಳುವುದು ತಪ್ಪೇ? ಅಲ್ಲ, ಏನೂ ಬದಲಾಗುವುದಿಲ್ಲ ಎನ್ನುವ ವಾಸ್ತವ ನಿತ್ಯವೇ? ನನ್ನ ವಿಷಯ ಕೂಡಾ ಒಂದು ರೀತಿ ತಿರುವನ್ನು ಪಡೆದುಕೊಳ್ಳಬಹುದು ಎನ್ನುವ ಯೋಚನೆಯೇ ಎಷ್ಟು ಮುದ ಕೊಡುತ್ತದೆ?

ಹಗುರಾಗುತ್ತಾ ಇದ್ದೇನೆ ಎಂದುಕೊಳ್ಳುವ ಹೊತ್ತಿಗೆ ಕಾಡುತ್ತಾರೆ ನನ್ನನ್ನು ಜೊತೆಗೂಡಿ ಕೊಂಡಿರುವ ನನ್ನ ಮಂದಿ. ವ್ಯರ್ಥ , ಬೇಡ ಎನ್ನುವಂತೆ ಆದರೂ ಏಕೆ ಅವರನ್ನು ಹಚ್ಚಿಕೊಳ್ಳುತ್ತೇನೆ. ಎರಡು ಭಾವಗಳಿಗೆ, ಎರಡು ಬದಲಾವಣೆಗೆ ನಾನೇ ನೇರ ಹೊಣೆಯೇ?

ಒಬ್ಬಂಟಿತನ ಅಂದರೆ ನನ್ನ ಜೊತೆಗೆ ಯಾರೂ ಇಲ್ಲ ಅಂದುಕೊಳ್ಳುವದಲ್ಲ. ನನ್ನೊಳಗೆ ಯಾರನ್ನೂ ತಂದುಕೊಳ್ಳದಿರುವುದಾಗಿರಬೇಕು. ಅಥವಾ ಎಲ್ಲರೊಂದಿಗಿದ್ದರೂ ಬೇಕಾದವರ ಜೊತೆಗೆ ಇಲ್ಲದಿರುವುದು ! ತಾಕಲಾಟಗಳು ಹೆಚ್ಚಾಗಿದೆ..

೧.
ಇದೆಲ್ಲಾ ಮುಗಿದು ತುಂಬಾ ದಿನ ಆಗಿಲ್ಲ. ನಿನ್ನೆ ಮಗನ ಜೊತೆ ಬಂದಿದ್ದ ಹುಡುಗಿ ಹೇಳಿದ ಮಾತುಗಳು ಇನ್ನೂ ಮೆದುಳಲ್ಲೇ ತಿರುಗಾಡುತ್ತಿದೆ ಎಂದೆನಿಸಿತು. ಹಾಗೆ ಅವಳಂದಿಲ್ಲವಾದಲ್ಲಿ ಈ ಇರುವಿಕೆಗೆ ಅರ್ಥವನ್ನು ಕಲ್ಪಿಸಿಕೊಂಡು ಏನೇನೋ ಯೋಚನೆ ಮಾಡುವ ಅಗತ್ಯವಿರಲಿಲ್ಲ. ಥತ್ ಅವಳ ಹೆಸರೇನು ಎನ್ನುವುದನ್ನೂ ಮರೆತ ಮೆದುಳಿಗೆ ವಿಷಯದ ಜಿಜ್ಞಾಸೆ ಏತಕ್ಕೆ ?

ತೂಗುಹಾಕಿದ ಫೊಟೋದಲ್ಲಿರುವ ಸ್ವಲ್ಪ ಎಣ್ಣೆಕಪ್ಪಿನ ಮಗ, ಈಗ ಬೆಳೆದು ಬಿಳುಚಿದ್ದಾನೆ. ಏಸಿ ರೂಮು, ಕೈತುಂಬಾ ಸಂಬಳ, ಬಿಸಿಲನ್ನು ನೋಡದ ಮುಖ ! ಕಲ್ಲನ್ನು ನೋಡದ ಕಾಲು. ಮಗನಿಂದ ನಾನೇ ಸ್ವಲ್ಪ ಚಂದ ಅನ್ನಿಸಿದರೂ , ಹಾಗಂದುಕೊಂಡು ಏನು ಮಾಡುವುದು. ಅವನಮ್ಮ ಕೂಡ ಹಾಗೆಯೇ ತಾನೆ !
ಆ ಕೋಲುಮುಖದ ಮಗನಿಗೆ ಸರಿಯಾದ ಜೋಡಿಯನ್ನು ಹುಡುಕುವುದು ಅಸಾಧ್ಯವೇ ಅಲ್ಲವಾಗಿತ್ತು. ಆದರೆ ಮಗನದ್ದೇ ಒತ್ತಾಯ , ತಾನೇ ಹುಡುಗಿಯನ್ನು ನೋಡಿ ಇಷ್ಟಪಟ್ಟ  ಮೇಲೆ ಮದುವೆಯಾಗುತ್ತಾನಂತೆ.

ಅದಕ್ಕೇ ನಿನ್ನೆ ಆ ಹುಡುಗಿಯ ಪರಿಚಯ ಮಾಡಿಸಿದ. ಅವನಿಗಿಷ್ಟವಂತೆ ಅವಳು. ಅವಳಿನ್ನೂ ಮದುವೆಯ ಬಗ್ಗೆ ಯೋಚಿಸಿಲ್ಲವಂತೆ. ಕಾಮವನ್ನು ಮುಕ್ತಗೊಳಿಸಿದ್ದಾರೆ ಈ ತಲೆಮಾರಿನವರು ! . ಸಿಗರೇಟಿನ ಕಿಚ್ಚಿನ ತುಟಿ ಅವಳದ್ದು. ಸ್ಪಷ್ಟ ಮಾತು.. ನಾನೂ ಒಮ್ಮೆ ನನ್ನವಳಿಗೆ ಕೇಳಿಸೀತೇನೋ ಅಂತ ಹೆದರಿ ಮಾತಾಡಿದರೆ, ಅವಳು ಸಂಕೋಚವಿಲ್ಲದೇ ಮಾತಾಡುವ ಕಲೆ ಹೇಗೆ ಬೆಳಸಿಕೊಂಡಳು ಎಂದೇ ಯೋಚಿಸುತ್ತಿದ್ದೆ.

ನೇರವಾದ ಮಾತು ಕೆಲವೊಮ್ಮೆ ಘಾಸಿ ಮಾಡುತ್ತದೆ. ಅನುಭವವೂ ಇದೆ. ಆದರೆ ಇಂತಹ ಘಾಸಿ ?ಆ ಬೆವರು ಸುರಿಸಿಕೊಂದು ಕೆಲಸಕ್ಕಾಗಿ ಅಲೆದ ನನಗಿಂತ , ನನ್ನ ಮಗ ಗ್ರೇಟ್ ಅನ್ನಿಸಿಕೊಳ್ಳುವುದೇ .. ಅಲ್ಲ, ನನ್ನ ಅಪ್ಪನಿಂದ ನಾನು ಒಳ್ಳೆಯ ಅಪ್ಪನೆಂದೆನಿಸಿಕೊಳ್ಳುವುದೇ ? ಅರ್ಥವಾಗುತ್ತಿಲ್ಲ.

ಹಳ್ಳಿಯ ಮನೆ, ಆ ಕಾಲಕ್ಕೆ ತುಂಬಾ ಬೆಳೆದ ಹಳ್ಳಿಯದು, ನೀರು ಗಾಳಿ ಮಣ್ಣು ಎಲ್ಲಾ ಪರಿಶುದ್ದವಾಗಿದ್ದುದಕ್ಕೇ ನನ್ನಪ್ಪನಂತಹ ಮಹಾನುಭಾವ ಚೆನ್ನಾಗಿ ಬದುಕಿದ್ದ. ತಾಯಿ ತಂದೆ ನಾನು ಮತ್ತೊಬ್ಬ ತಮ್ಮ ಇಷ್ಟು ಜನರ ಮಧ್ಯೆ ಈಗಲೂ ನೆನಪಿಗೆ ಬರುವವರು ಅಪ್ಪ. ಅಮ್ಮ ಆ ಊರಿನವರ ಲೆಕ್ಕಕ್ಕೆ ನನ್ನ ಅಪ್ಪನಿಗೆ ಜೋಡಿಯೇ ಅಲ್ಲ. ತುಂಬಾ ಸುಂದರ ಮೈಕಟ್ಟು ಅಲ್ಲದಿದ್ದರೂ ಶಮ್ಮೀಕಪೂರನನ್ನು ಹೋಲುತಿದ್ದ ಅಪ್ಪನ ಫೋಟೋ ಅಮ್ಮನಿಗೆ ಅಷ್ಟು ಸರಿಯಾದ ಜೋಡಿಯಲ್ಲವೆಂದು ನನಗೂ ಅನ್ನಿಸಿತ್ತು. ಮದುವೆಯಾಗುವ ಕಾಲಕ್ಕೆ ಅಪ್ಪನಿಗೆ ಹಾಗನ್ನಿಸಿರಲೂ ಬಹುದು. ಅಜ್ಜನ ಕಾರುಬಾರು !

ಅಪ್ಪ ಎಲ್ಲಿಯೂ ಏನನ್ನೂ ಬಿಟ್ಟುಕೊಡಲಿಲ್ಲ. ಇರುವಷ್ಟು ಅಡಕೆ, ತೆಂಗಿನಕಾಯಿಯನ್ನು ಸಂಪಾದನೆಗೆ ಮಾರ್ಗ ಮಾಡಿಕೊಂಡು, ನನ್ನನ್ನೂ ತಮ್ಮನನ್ನೂ ಓದಿಸಿ ಸೈ ಅನಿಸಿಕೊಂಡವರು. ನಮ್ಮಿಬ್ಬರನ್ನು ಓದಿಸಲೂ ಕಷ್ಟ ಪಡಲಿಲ್ಲ. ಇದ್ದ ಒಂದು ಎಕರೆಯನ್ನು ನಾನು ನನ್ನ ತಮ್ಮನಿಗೇ ಕೊಟ್ಟಾಗ, ಓದಿದ್ದು ಹೆಚ್ಚಾಯಿತು ಎಂದನ್ನಿಸಿದ್ದುಂಟು.ಆಗಿನ ನನ್ನ ವಿದ್ಯಾಭ್ಯಾಸದಲ್ಲಿ ಮತ್ತೆ ಕಲಿತ ಕಂಪ್ಯೂಟರಿನ ಕೊಡುಗೆಯೇ ಏನೋ ಪಟ್ಟಣಕ್ಕೆ ನನ್ನನ್ನ ಸೇರಿಸಿತು.

ಊರಿನವರಿಂದಲೂ ಅಪ್ಪನ ಬಗ್ಗೆ ಒಂದೇ ಒಂದು ತಕರಾರಿಲ್ಲ. ಊರಿನ ಆ ಕಾಲದ ನನ್ನಪ್ಪನ ಸಮಕಾಲೀನ ಜನರೆಲ್ಲಾ ಸ್ವಲ್ಪ ಮೋಜು ಮಸ್ತಿ ಮಾಡಿದವರೇ ಆದರೂ ಅಪ್ಪನ ನಿಲುಮೆಯಲ್ಲಿದ್ದ ಬದ್ದತೆ ನನಗೇ ಆಶ್ಚರ್ಯ. ಯಾವ ದಿಕ್ಕಿನಿಂದಲೂ ತೋಟದ ಮನೆಗೆ ಹೋಗುವಂತೆ ಪ್ರೇರೇಪಿಸದ ಅವರ ಮನಃಸ್ಥಿತಿ ಏನಾಗಿರಬಹುದು ? ಅಷ್ಟಾಗಿ ದೇವರು ದೈವ ಎಂದೆಲ್ಲಾ ತಲೆಕೆಡಿಸಿಕೊಳ್ಳದ ಅವರ ಈ ಸ್ಥೈರ್ಯ ಒಂದೇ ನನ್ನನ್ನು ಇನ್ನೂ ಕುತೂಹಲಿಯಾಗಿಸಿದೆ.

ಅಪ್ಪನ ವಯಸ್ಕಳೇ ಆದ ಅವಳು ಈಗಲೂ ಪ್ರಾಯದಲ್ಲಿದ್ದಂತೆಯೇ ಇದ್ದಾಳಂತೆ. ನನ್ನ ಮೀಸೆ ಮೂಡುವ ಕಾಲಕ್ಕೆ ಅವಳಿಗೆ ೩೦-೩೫ ವಯಸ್ಸಿರಬೇಕು. ಅವಳನ್ನು ಕರೆದು ಮಾತನಾಡಿಸುವ ಧೈರ್ಯ ಮಾಡಿದ್ದೆ. ಏನೋ ತೋಟದ ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಅವಳು, ಬರುವ ಸಮಯವನ್ನೇ ಕಾದು ಮಾತಾಡಿಸಿದ್ದೆ. ದೇಹಸುಖದ ಕಲ್ಪನೆಯಿಲ್ಲದಿದ್ದರೂ ಶಾಲೆಯಲ್ಲಿ ಸಹಪಾಠಿಗಳಿಂದ ಕೇಳಿ ಕಲಿದ ಶಬ್ಧ, ಅರ್ಥಗಳನ್ನು ಕಲ್ಪಿಸಿ ಅವಳನ್ನು ಮಾತಾಡಿಸುವ ಭಂಡ ಧೈರ್ಯ ಹೇಗೆ ಬಂತೋ. ಇತರ ಹುಡುಗರ ಮಾತುಗಳೂ ಅಂತೆಯೇ ಇತ್ತು, ಅವಳು ಯಾರಿಗೂ ಸಿಗುತ್ತಾಳೆ ಎನ್ನುವ ಕಲ್ಪನೆಯಲ್ಲೇ ಕೇಳುವ ಪ್ರಯತ್ನ ಮಾಡಿದೆ.

ಕೆಕ್ಕರಿಸಿಕೊಂಡೇನೂ ನೋಡಲಿಲ್ಲ ಅವಳು.  ಸಲುಗೆಯಿತ್ತೇ ಇರಲಿಲ್ಲವೇ ಗೊತ್ತಿಲ್ಲ,. ಏನೋ ? ಎಂದಳು. ಅದು ಅದು ಎಂದು ತೊದಲುತ್ತಾ. ನೀವು ತುಂಬಾ ಚಂದ ಇದ್ದೀರಿ ಎಂದೆ. ಅಷ್ಟರಲ್ಲೇ ಭಾವ ಅರ್ಥ ಮಾಡಿಕೊಂಡಂತೆ " ಈ ಸಂಜೆ ಹೊತ್ತಲ್ಲಿ ಇಲ್ಲೆಲ್ಲಾ ತಿರುಗಾಡುವುದು , ಹೀಗೆಲ್ಲಾ ಹೇಳುವುದು ಸರಿಯಲ್ಲ, ಹೋಗು ಮನೆಗೆ , ಅಪ್ಪನಲ್ಲಿ ಹೇಳುವುದಿಲ್ಲ ಬಿಡು"ಎಂದದ್ದು ಇನ್ನೂ ನೆನಪಿದೆ . ಸೋತ ಭಾವದಲ್ಲೇ ಮನೆಗೆ ಬಂದ ನನಗೆ ಆ ದಿನದಿಂದ ಅವಳು ತುಂಬಾ ಕಾಡತೊಡಗಿದಳು.

ಹತ್ತನೇ ಮುಗಿಸಿ ಪಟ್ಟಣ ಸೇರಿದ ನನಗೆ ಎರಡು ಕಂಪೆನಿಗಳಲ್ಲಿ ಕೆಲಸ ಸಿಕ್ಕಿದ್ದು ನನ್ನ ಪುಣ್ಯ. ಬೆಳಗ್ಗೆ ೭ ಘಂಟೆಯಿಂದ ಮಧ್ಯಾಹ್ನ ೫ ಘಂಟೆಯವರೆಗೆ ದುಡಿದು,ಇನ್ನೊಂದು ಕಡೆ ೪ ಘಂಟೆಗಳ ಕೆಲಸ ಮಾಡುತ್ತಿದ್ದೆ.. ಅದೇನೋ ಮೊದಲ ವರ್ಷ ಮನೆಗೇ ಹೋಗಲಾಗಲಿಲ್ಲ. ಬರೀ ಕೆಲಸದಲ್ಲಿ ಮುಳುಗಿದ್ದ ನನಗೆ ಅಮ್ಮನಿಗೆ ಜ್ವರ ಬಂದ ಮೇಲೆ ಮನೆಗೆ ಹೋಗುವಂತಾಯಿತು. ಒಳ್ಳೆ ಸಂಪಾದನೆಯಿದ್ದ ನಾನು ಊರಿಗೆ ಹೋಗುತ್ತಿರುವಾಗ ಮೊದಲ ಚಿತ್ರದಲ್ಲೇ ಕಂಡ ಅವಳು.

ಅಮ್ಮನ ಜ್ವರ ಸ್ವಲ್ಪ ಹದಕ್ಕೆ ಬಂದಿದ್ದರಿಂದ ಮೂರನೇ ದಿನ ಮನೆಯಿಂದ ಹೊರಗೆ ಹೊರಟೆ. ತೋಟಕ್ಕೆ ಒಂದು ಸುತ್ತು ಬಂದು ದಾರಿಯಲ್ಲಿ ಒಬ್ಬನೇ ನಿಂತಿರಬೇಕಾದರೆ ಅವಳನ್ನು ನೋಡಿ ಏನೋ ಅವ್ಯಕ್ತ ಖುಷಿ. ಆದರೆ ಜೊತೆಯಲ್ಲೇ ಇದ್ದ ಅಪ್ಪನಿಂದ ಕಸಿವಿಸಿ. ನೋಡಿ ನಕ್ಕವಳು ಮುಂದೆ ಸರಿದಾಗ ವಿಚಿತ್ರ ಕಲ್ಪನೆಗಳು.

ಮರುದಿನವೂ ಅಂತೆಯೇ, ಅವಳಲ್ಲಿ ಮಾತನಾಡಬೇಕು ಎಂದೆನಿಸಿತು. ಅಪ್ಪನಿರದಿದ್ದ ಸಮಯದಲ್ಲಿ ಮಾತನಾಡಿದೆ. ಈಗ ನಾನೂ ದೊಡ್ಡವನಾಗಿದ್ದೇನೆ ಅಂದೆ. ಈ ಮನಸ್ಸನ್ನು ಹೇಗೆ ಅರ್ಥ ಮಾಡಿಕೊಳ್ಳುವ ಕಲೆ ಬಂದಿರುತ್ತದೋ ಗೊತ್ತಿಲ್ಲ, ನನ್ನಿಂದ ಮುನ್ನೂರು ರೂಪಾಯಿ ಅಪೇಕ್ಷಿಸಿದ ಅವಳು ನೇರವಾಗಿ ಹೇಳಿದಳು. ನಿನ್ನ ವಯಸ್ಸಿನಲ್ಲಿ ಎಲ್ಲರಿಗೂ ಸಹಜ, ಆದರೆ ನಿನ್ನಪ್ಪನಂತೆ ಬದುಕು. ನಾನೇ ಒಪ್ಪಿಕೊಂಡ ಸಂದರ್ಭದಲ್ಲೂ ಒಪ್ಪದ ನಿನ್ನ ಅಪ್ಪನ ಬಗ್ಗೆ ಅತಿಯಾದ ಗೌರವವಿದೆ. ಈ ಹಣವನ್ನು ನಾನು ನಿನ್ನ ಅಮ್ಮನಿಗೆ ತಲುಪಿಸುತ್ತೇನೆ.

ಅತೀವವಾದ ದುಃಖವಾಯಿತು. ಪಟ್ತಣಕ್ಕೆ ಮರಳಿದ ಕೂಡಲೇ ಎಲ್ಲೆಂದರಲ್ಲಿ ತಿರುಗಾಡಿದೆ. ನನ್ನ ಸಹನೌಕರನ ಜೊತೆಗೆ ವೇಶ್ಯೆಯೊಂದಿಗೂ ಇದ್ದು ಬಂದೆ. ಅವಳಿಗಿಂತ ನಾನೇ ಹೆಚ್ಚು ಎನ್ನುವ ರೀತಿ ವಾರಕ್ಕೊಮ್ಮೆ ಅತ್ತ ಸುಳಿಯುತ್ತಿದ್ದೆ. ಅದೇನೋ ಗೊತ್ತಿಲ್ಲ, ತಪ್ಪು ಮಾಡುತ್ತಿದ್ದೇನೆ ಅಥವಾ ಇದು ಸರಿಯಲ್ಲ ಎನ್ನುವುದನ್ನೂ ಚಿಂತಿಸಲಿಲ್ಲ.

ಮತ್ತೊಂದು ವರ್ಷಕ್ಕೆ ಮದುವೆ. ಅಲ್ಲೇ ಪಕ್ಕದ ಊರಿನ ಸಿರಿವಂತ ಮಾವ. ಹೆದರಿ ತಾಳಿ ಕಟ್ಟಿದ್ದ ನೆನಪು. ಅವಳೂ ಅಷ್ಟೆ , ತಾನಾಯಿತು ತನ್ನ ಪಾಡಾಯಿತು ಎಂಬ ಹಾಗೆ. ಮಾವನಿಂದ ತಾನು ಒಳ್ಳೆಯ ಫ್ಯಾಕ್ಟರಿ ಮಾಡಿ, ದೊಡ್ಡ ವ್ಯಕ್ತಿ ಎನ್ನಿಸಿಕೊಂಡೆ. ಊರಿಗೂ ದೂರವಾಗಿ ಇಷ್ಟು ವರ್ಷ ನೆಮ್ಮದಿಯಿಂದ ಬದುಕಿದ್ದ ನನಗೆ ಈ ಪ್ತಶ್ನೆ ತುಂಬಾ ಮಾರ್ಮಿಕವಾಗಿ ನಾಟಿತ್ತು .

ನನ್ನ ಅಪ್ಪನನ್ನು ಕೂಡಾ ನೋಡದೇ ಮದುವೆಯಾಗಿದ್ದ ನನ್ನ ಅಮ್ಮ. ಹುಡುಗಿ ನೋಡಿ ಮದುವೆಯಾದ ನಾನು ಇಬ್ಬರೂ ಈ ಕಾಲಕ್ಕಲ್ಲ ಎನಿಸಿಬಿಟ್ಟಿದೆ.  ಬದುಕು ಎಂಬುದು ಲೈಂಗಿಕತೆಯನ್ನೇ ಮೀರಿ ತಪಸ್ಸಿನಂತೆ ಕಳೆದಿದ್ದರು ಅಪ್ಪ. ನಾನಂತೂ ಅದರ ವಿವಿಧ ಮಜಲುಗಳನ್ನ ನೋಡಿ, ಯಾವುದಕ್ಕೂ ಸಿಲುಕದೆ ಉಳಿದುಬಿಟ್ಟೆ. ಈಗ ಮಗನ ಸರದಿ. ಎಂತಹ ಮುಕ್ತತೆ. ಹೇಗೆ ಇರಲಿ ಲೈಂಗಿಕವಾಗಿ ಸದೃಢನೆನಿಸಿಕೊಳ್ಳುವುದೇ ಮದುವೆಯ ಮುಖ್ಯತೆಯೇ ?

ನೋಡಿ ಅಂಕಲ್, ನಿಮ್ಮ ಮಗ ರೊಮ್ಯಾನ್ಸ್ ನಲ್ಲೇ ಸ್ವಲ್ಪ ವೀಕು. ಇನ್ನೊಂದೆರಡು ಡೇಟ್ ಗೆ ಹೋಗಿ ಬಂದಮೇಲೆ ಮದುವೆಯ ವಿಚಾರ ಎಂದ ಆ ಹುಡುಗಿಯೇ ನನ್ನ ಸೊಸೆಯೇ ?

20 comments:

 1. ಒಳ್ಳೇ ಕಥೆ.. ಈ ಕಾಲಕ್ಕೆ ತಕ್ಕ ವಸ್ತು.. ಚೆನ್ನಾಗಿ ಬರದ್ದೆ ಕಿಣ್ಣಾ :-)

  ReplyDelete
 2. ತಲೆದೂಗಿಸುವ ಪದಗಳ, ತರ್ಕಗಳ ಮತ್ತು ಮತ್ತೆ ಮತ್ತೆ ಓದಿಸುವ ತಾಕತ್ತು ಉಳ್ಳವರು ನೀವು. ಒಂದು ವಾಕ್ಯದ ಆಲೋಚನೆಗೆ, ಇನ್ನೊಂದು ವಾಕ್ಯಗಳು ಬಲೆ ಹೆಣೆಯುವ ಕಲೆ ಕೆಲವರಿಗೆ ಮಾತ್ರ ವರದಾನ. ಅದು ಆ ದೇವರು ನಿಮ್ಮ ಬೆರಳಿಗೆ ಅದ್ದಿದ್ದಾರೆ. ಅದನ್ನು ಜೋಪಾನ ಮಾಡಿ ಕಾಪಾಡಿ. ನಿಮಗೆ ದೇವರು ಒಳ್ಳೆಯದು ಮಾಡಲಿ.ಕನ್ನಡದ ಶ್ರೇಷ್ಠ ಸಾಹಿತ್ಯದ ಭಂಡಾರಕ್ಕೆ ನಿಮ್ಮ ಪದಗಳು ಶೀಘ್ರ ಕೊಡುಗೆ ನೀಡಲಿ ಅಂತ ಹಾರೈಸುತ್ತೇನೆ.

  ReplyDelete
 3. ಬಹುಷಃ ಈ ದಂಧ್ವ ಮುಂದಿನ ಪೀಳಿಗೆಗೆ ಇರಲಾರದೇನೋ .. ಅಥವ ಇದರಿಂದಾಗಿ ಮುಂದಿನ ಪೀಳಿಗೆಯೇ ಇರಲಾರದೇನೋ.. ??? soooooper like Kinna :)

  ReplyDelete
 4. ದ್ವಂದ್ವ .....ಬದುಕಿನ ದ್ವಂದ್ವ....ಹಳೆಯದನ್ನ ಬಿಟ್ಟು ಕೊಡಲಾಗದೆ ಹೊಸದ ತೆಕ್ಕೆಗೆ ತೆಗೆದು ಕೊಳ್ಳಲು ಸಾಧ್ಯವಾಗದ ಒಂದು ಗೆನೆರತಿಒನ್ ಕತೆ...ಆದ್ರೆ ಮದುವೆ ಅಂದ್ರೆ ,ಪ್ರೀತಿ ಅಂದ್ರೆ ಲೈಂಗಿಕತೆ ಒಂದೇ ಅಲ್ಲ ಅನ್ನೋದು ಅರಿವಿಗೆ ಬಂದ್ರೆ ಬದುಕು ಚೆಂದ ಅಲ್ವ... ಚಿತ್ರಣ ಚೆಂದ ಇದೆ ಕಿರಣ....

  ReplyDelete
 5. ಅವಳಿಗಿಂತ ನಾನೇ ಹೆಚ್ಚು ಎನ್ನುವ ರೀತಿ ವಾರಕ್ಕೊಮ್ಮೆ ಅತ್ತ ಸುಳಿಯುತ್ತಿದ್ದೆ. ಸೂಪರ್ ಲೈನ್ ...!! ನಿರೂಪಕನ ಮನಸ್ಸಿಗೆ ಯಾಕಿಷ್ಟು ದ್ವಂದ್ವ ಎಂದು ಅರ್ಥವಾಗುವುದು ಕಟ್ಟ ಕಡೆಯ ಲೈನ್ ಓದಿದ ಮೇಲೆಯೇ...! generation ಗೆ ತಕ್ಕ ಕಥಾ ವಸ್ತು... ಇಂಥ ಸೊಸೆಯರನ್ನು ನಾವೆಲ್ಲಾ ಒಪ್ಪಿಕೊಳ್ಳಬೇಕಾದ ಅನಿವಾರ್ಯತೆ ಬಹಳ ದೂರವಿಲ್ಲ.....

  ReplyDelete
 6. ಕಿರಣ ಭಟ್ರೇ,ನನಗೆ ಕೊಂಚ starting trouble ಅನಿಸಿದ್ದನ್ನು ಬಿಟ್ಟರೆ ನಿಮ್ಮ ಮೊದಲ ಪ್ರಯತ್ನ ಚೆನ್ನಾಗಿಯೇ ಆರಂಭಗೊಂಡಿದೆ.
  ತರೆಮಾರಿನ ದ್ವಂದ್ವ -ಎಲ್ಲಾ ಕಾಲಕ್ಕೂ ಇರುವಂಥದ್ದೇ ಅಂತ ಅನಿಸುತ್ತದೆ.ಪ್ರಶ್ನೆಗಳು,ಅವಶ್ಯಕತೆಗಳು ಬದಲಾಗಬಹುದು;ದ್ವಂದ್ವಗಳಲ್ಲ!
  ಬರಹಗಳು ಇನ್ನಷ್ಟು ಬರಲಿ.. :-)

  ReplyDelete
 7. ಈಶ್ವರ...

  ಕಥಾವಸ್ತು ಸಕತ್ತಾಗಿದೆ...
  ಕೊನೆಯವರೆಗೂ ಓದಿಸಿಕೊಂಡು ಹೋಗುತ್ತದೆ..

  ಗಂಭೀರ,ಪ್ರಬುದ್ಧ ಶೈಲಿ ನಿಮಗೆ ಸಹಜವಾಗಿ ಸಿದ್ಧಿಸಿದೆ..

  ಇನ್ನಷ್ಟು ಕಥೆಗಳ ನಿರೀಕ್ಷೆ ನಮಗೆಲ್ಲ ಇದೆ...

  ಬರೆಯಿರಿ..
  ಅಭಿನಂದನೆಗಳು ಸೊಗಸಾದ ಕಥೆಗೆ...!

  ReplyDelete
 8. ಈಶ್ವರ್ ಸರ್...ನಿರೂಪಣೆ ಮತ್ತು ಕಥಾ ವಸ್ತು ಎರಡೂ ಇಷ್ಟವಾದವು... ಮೊಬೈಲ್ ಎನ್ನುವುದನ್ನು ತಮ್ಮ ಮೊದಲ ಗಳಿಕೆಯ ನಂತರವೇ ಹೇಗೋ ಕೊಂಡ ಮನಸ್ಥಿತಿಯ-ಅರ್ಥಸ್ಥಿತಿಯ ತಲೆಮಾರು ಮತ್ತು ಕಲರ್ ಮೊಬೈಲ್ ಒಂದು ಆಟದ ವಸ್ತುವಾಗಿ ಉಪಯೋಗಿಸಿದ ತಲೆಮಾರುಗಳ ನಡುವಿನ ನವಿರಾದ ಅಗಾಧ ವಸ್ತುಸ್ಥಿತಿ ಅಂತರವನ್ನು ಚನ್ನಾಗಿ ಬಣ್ಣಿಸಿದ್ದೀರಿ. ಮುಂದಿವರೆಸಿ ನಿಮ್ಮಲ್ಲಿರುವ ಇನ್ನೊಂದು ಸೃಜನಶಾಖೆಯ ಈ ಬೆಳವಣಿಗೆ ... ಕಥೆಗಾರ ಹೀಗೇ ಹುಟ್ಟೋದು...ಶುಭವಾಗಲಿ

  ReplyDelete
 9. simply superb!! looking froward for the rest hidden themes :)

  ReplyDelete
 10. ಮೂರು ತಲೆಮಾರಿನ ಮಾನವ ಸಂಬಂಧಗಳನ್ನು ವಿಶ್ಲೇಷಿಸುತ್ತಾ ಸಾಗಿದ ಕಥೆಯು ಮಾನವನ ವಿಭಿನ್ನ ಮನಸ್ಸುಗಳನ್ನೂ ತೆರೆದಿಟ್ಟಿತು.

  ReplyDelete
  Replies
  1. ಹೌದು, ತಲೆಮಾರಿನಿಂದ ತಲೆಮಾರಿಗೆ.. ಆಗುವ ಬದಲಾವಣೆಗಳು..

   Delete
 11. ನಿಮ್ಮ ಸೂಕ್ಷ್ಮ ಸಂವೇದನಾ ಶಕ್ತಿ, ಜಾಣ್ಮೆ, ಭಾಷ ಪಾಂಡಿತ್ಯ ಬೆರಗುಗೊಳಿಸುವಂಥದ್ದು ... ಆಧುನಿಕ ಕನ್ನಡ ಸಾಹಿತ್ಯಕ್ಕೆ ನೀವೊಬ್ಬ ಅನರ್ಘ್ಯ ರತ್ನ :)

  ReplyDelete
 12. ತಲೆಮಾರಿನ ಸ್ಥಿತಿ-ಗತಿ, ಯೋಚನೆಯ ಬಂಗಿಯ ಸುಂದರ ಚಿತ್ರಣ

  ReplyDelete
 13. ಕಿರಣಣ್ಣ, ಕಥೆ-ನಿರೂಪಣೆ ಚೆನ್ನಾಗಿದೆ :)
  ನಿಮ್ಮ ಈ ಮೊದಲ ಪ್ರಯತ್ನ ಮೊದಲ ಪ್ರೀತಿಯಂತೆ ! ..ಪ್ರೀತಿಯಲ್ಲಿ ಅನುಭವ ಬೇಕೇ? ಪ್ರತಿಯೊಬ್ಬನ ಹೊಸ ಪ್ರೀತಿಯೂ ಒಂದು ಹೊಸ ಹಾದಿಯಲ್ಲಿ ಪಯಣ ! ಪ್ರತಿಯೊಬ್ಬರೂ ಪಯಣಿಸುವ ಹಾದಿ ಅದು,ಆದರೆ ಪ್ರತಿಯೊಬ್ಬರಿಗೂ ಹೊಸತು .. ಅದು ಅದ್ಭುತ ಅನುಭವ. ಪ್ರತಿಯೊಂದು ಪ್ರೀತಿಯ ಕಥೆಯೂ ರೋಚಕ..ರೋಮಾಂಚಕ.
  ಬರವಣಿಗೆಯೂ ಹಾಗೆಯೇ..ಅವೇ ಅಕ್ಷರಗಳು, ಭಾವನೆಗಳು... ಆದರೆ ಪ್ರತಿಯೊಬ್ಬರೂ ಅವುಗಳನ್ನು ಜೋಡಿಸುವ ರೀತಿಯೇ ಅದನ್ನು ವಿಶೇಷವಾಗಿಸುವುದು.. !!
  ದಿನಹೋದಂತೆ ಪ್ರೀತಿಯ ಅರ್ಥ,ಭಾವ ಗಟ್ಟಿಯಾಗುತ್ತದೆ, ಮನಸ್ಸು ಪಕ್ವವಾಗುತ್ತದೆ.. ಅದೇ ರೀತಿ ಬರವಣಿಗೆಯೂ.... ಅಕ್ಷರಗಳ ಮೇಲಿನ ಹಿಡಿತ, ಭಾವನೆಗಳನ್ನು ಸಾಲುಗಳಾಗಿಸುವ ಹಾದಿಯಲ್ಲಿ ಹೊಸ ಪ್ರಯತ್ನಗಳು ನಿಮ್ಮಿಂದ ನಿರಂತ ಆಗಲಿ, ಶುಭ ಹಾರೈಕೆಗಳು :)
  ಬರವಣಿಗೆಯಲ್ಲಿ ಇಲ್ಲದ ಅನುಭವದೊಂದಿಗೆ ಇಲ್ಲಿ ಹೆಚ್ಚು ಮಾತಾಡುವುದು ಸೂಕ್ತವಲ್ಲ. ನಿಮ್ಮ ಪ್ರತೀ ಪ್ರಯತ್ನದಲ್ಲಿ ಯಶಸ್ಸು ನಿಮ್ಮದಾಗಲಿ :)

  ReplyDelete
 14. ನಿಮ್ಮ ಬರವಣಿಗೆಯ ಶೈಲಿ ಸೂಪರ್ ..

  ReplyDelete
 15. ಕಾಲ ಬದಲಾದ೦ತೆ ಸೌಕರ್ಯ ಸ್ವಾತ೦ತ್ರ್ಯದ ಇತಿ-ಮಿತಿಗಳು ಬದಲಾಗಲಡಿಗು. ಮೌಲ್ಯಗಳು ಬದಲಾವಣೆಯ ವೇಗಕ್ಕೆ ಮರೆಯಾದ೦ತೆ ಕಾಣಿಸಬಹುದೇನೋ. ಬದಲಾಗಿರುವುದು ಬಹುಷ: ಸುಳ್ಳು. ಬಿಸಿ ದೇಹವೂ ಹೇಳಿತ್ತು ಬದಲಾದ ಕಾಲದಲ್ಲಿ " ಹೀಗೆಲ್ಲಾ--- ಸರಿಯಲ್ಲ". ಉತ್ತಮ ಬರಗಾಲ!

  ReplyDelete
 16. ಒಳ್ಳೆಯ ಕಥೆ ..ನಿರೂಪಣೆ ಸೂಪರ್ .. ಚೆನ್ನಾಗಿ ಓದಿಸಿಕೊಂಡು ಹೋಗುತ್ತದೆ . ಈಗಿನ ಕಾಲಕ್ಕೆ ಹೇಳಿ ಮಾಡಿಸಿದಂತಿದೆ ಕಥಾವಸ್ತು ...

  ReplyDelete
 17. ಚೆನ್ನಾಗಿದೆ ಸರ್
  ನಮ್ಮ ಹಿಂದಿನ ತಲೆಮಾರು ನಮ್ಮಣ್ಣ ನೋಡಿ
  ಹೀಗೇ ಆತಂಕಗೊಂದಿರಬಹುದೇ?
  ಸ್ವರ್ಣಾ

  ReplyDelete
 18. kathe chennagide..

  ReplyDelete
 19. tumba chennagide kathe.

  "ಒಬ್ಬಂಟಿತನ ಅಂದರೆ ನನ್ನ ಜೊತೆಗೆ ಯಾರೂ ಇಲ್ಲ ಅಂದುಕೊಳ್ಳುವದಲ್ಲ. ನನ್ನೊಳಗೆ ಯಾರನ್ನೂ ತಂದುಕೊಳ್ಳದಿರುವುದಾಗಿರಬೇಕು. ಅಥವಾ ಎಲ್ಲರೊಂದಿಗಿದ್ದರೂ ಬೇಕಾದವರ ಜೊತೆಗೆ ಇಲ್ಲದಿರುವುದು"


  ee salugantoo tumbaa hidisidavu .

  ReplyDelete