Wednesday, 9 January 2013

ಅಪ್ಪಚ್ಚಿ ಹೇಳಿದ ಅಪ್ಪನ ಕತೆ- ಭಾಗ ೭ ( ಮೊದಲ ಪ್ರೇಮದ ಕತೆ )


ಕತೆಯನ್ನು ಕೇಳಿ ಅದೇಕೋ ಬಾಬುಸೋಜರ ಮೇಲೆ ಮೊದಲಿನ ಭಾವನೆ ಹೊರಟುಹೋಯಿತು. ಅದೇಕೋ ಒಂದು ರೀತಿಯ ಮಂಕುತನವೂ ಶಾಮ ಎನ್ನುವ ವ್ಯಕ್ತಿಯ ಬಗ್ಗೆ ಇದ್ದ ಕುತೂಹಲವೂ ಹೀಗೇ ಮಾಯವಾದಂತೆ ಭಾಸವಾಗತೊಡಗಿತು. ಚಿಕ್ಕಪ್ಪ ಭಾವುಕನಾಗಿದ್ದ. ಇನ್ನು ಕತೆ ಹೇಳುವುದಿಲ್ಲವೇನೋ ಅನ್ನಿಸತೊಡಗಿತು. ಈ ಶಾಮನ ಅಂದಿನ ಪ್ರಿಯತಮೆಯನ್ನೊಮ್ಮೆ ನೋಡಿ ಮಾತನಾಡಿಸಬೇಕು ಎಂದೂ ಅನ್ನಿಸಿತು.  ಅಲ್ಲಿದ್ದ ಒಂದು ರೀತಿಯ ಅಸಹನೀಯ ಮೌನ ಮಾತ್ರ ಇನ್ನೇನೋ ಕತೆಯನ್ನು ಹೇಳುತ್ತೇನೆ ಎನ್ನುವ ಖಾತ್ರಿಯನ್ನು ಹುಟ್ಟುಹಾಕಿತ್ತು. ಅಪ್ಪಚ್ಚೀ ಎಂದೆ..ನಿಧಾನವಾಗಿ ವಾಸ್ತವವನ್ನು ಹೊಕ್ಕು, ಥತ್!! ಬಿಸಿಲು, ಎಂದರು.

ಕುಶಾಲನಗರಕ್ಕೆ ಹೋಗಿದ್ಯೇನೋ? ಅಲ್ಲಿನ ಬೆಳಗ್ಗಿನ ಚಳಿಯನ್ನು ನಾನು ಮತ್ತು ನಿನ್ನಪ್ಪ ಇಷ್ಟಪಟ್ಟಿದ್ದೆವು. ಇನ್ನೊಂದು ಚಂದದ ಕತೆ ಹೇಳುತ್ತೇನೆ ಕೇಳು. ಶಾಲೆ ಮುಗಿದ ಬೆನ್ನಲ್ಲೇ ದೊಡ್ಡಪ್ಪನ ಮದುವೆಯಾಯಿತು, ನಾವು ಮುಂದಿನ ಕಲಿಕೆ ಎನ್ನುವ ವಿಚಾರವೇ ಇರದಿದ್ದುದರಿಂದ ಹೀಗೇ ದಿನವೆಲ್ಲಾ ಕಳೆಯುತ್ತಾ ಸುಮ್ಮನಿದ್ದುದನ್ನು ನೋಡಿ ಅಪ್ಪ ನನ್ನನ್ನೂ ನಿನ್ನಪ್ಪನನ್ನೂ ಕುಶಾಲನಗರದ ಅಪ್ಪನ ಅಣ್ಣನ ಸಂಬಂಧಿಯೊಬ್ಬರ ಮನೆಗೆ ಸಾಗಹಾಕಿದರು.ನಿನಗೂ ಗೊತ್ತಿರಬಹುದು ಆ ಅಜ್ಜನನ್ನು. ಕ್ರಮೇಣ ಅವರೂ ಅವರ ತೋಟವನ್ನು ಮಾರಿ ಬೆಂಗಳೂರಿನ ಕಡೆಗೆ ನಡೆದು ಮಕ್ಕಳಿಗೆ ಮದುವೆ ಮಾಡಿ ಸ್ವಲ್ಪ ಸಮಯ ಇದ್ದು ಈಗ ಇಲ್ಲವೇನೋ! ಅವರನ್ನು ನಂತರ ನೋಡಿದ ನೆನಪೂ ಆಗುತ್ತಿಲ್ಲ. ಅದ್ಯಾವುದೋ ಊರು, ಖಂಡಿತ ಹೆಸರು ನೆನಪಿಲ್ಲ ನನಗೆ. ನಿನ್ನಪ್ಪ ಮರೆಯುವುದಿಲ್ಲ. ನಾನು ಮತ್ತೆ ನಿನ್ನಪ್ಪ ಹೋಗಿದ್ದು ತೋಟದ ಉಸ್ತುವಾರಿಗೆ ಆದರೂ ಕೂಡ ನಮ್ಮಿಬ್ಬರ ಜೀವನದ ಅತ್ಯಮೂಲ್ಯವಾದ ವರುಷಗಳಾಗಿದ್ದವು ಅವು.

ನನ್ನನ್ನು ಬೇಕಾದರೆ ಇಂವ ಹೀಗೇ ಎಂದು ಗುರುತಿಸಿಬಿಡಬಹುದು, ಆದರೆ ನಿನ್ನಪ್ಪನನ್ನು ಹಾಗೆ ಅರಿಯಲಾಗುವುದಿಲ್ಲ. ಅವನ ಪ್ರೀತಿಯೂ ಅವನ ಕೋಪವೂ, ಹಠವೂ ಒಂದು ಥರ ವಿಚಿತ್ರವಾದದ್ದು ಅದು ಮಳೆಗಾಲದ ಜಲಪಾತದ ಹಾಗೆ, ಕಸವೂ ಬರಬಹುದು, ಕಲ್ಲೂ ಹಾರಬಹುದು ಹಾಗೆಯೇ ಎಲ್ಲವನ್ನೂ ತನ್ನೊಂದಿಗೆ ಕೊಚ್ಚಿಕೊಂಡು ಪ್ರವಹಿಸಲೂ ಬಹುದು. ಅಂತಹ ನಿನ್ನಪ್ಪನ ಜೊತೆ ಆ ಕಾಲಕ್ಕೆ ನಾನು ಮಾತ್ರ ಹೊಂದಿಕೊಂಡು ಇರಬಲ್ಲೆ ಎನ್ನುವ ವಿಶ್ವಾಸ ಮಾತ್ರ ನನ್ನನ್ನು ಮತ್ತೆ ನಮ್ಮ ಮನೆಯಲ್ಲಿರುವವರನ್ನು ಒಪ್ಪಿಸಿತ್ತೇನೋ..

ಹೀಗೇ ಒಂದು ಸುಂದರ ದಿನ ಬೆಳಗ್ಗೆ ನಾನು ಮತ್ತೆ ನಿನ್ನಪ್ಪ ಸಕಲೇಶಪುರಕ್ಕೆ ಹೊರಟೆವು. ಜೊತೆಗೆ ದೊಡ್ಡಪ್ಪನೂ, ದೊಡ್ಡಮ್ಮನೂ ಇದ್ದರು.ದೊಡ್ಡಪ್ಪ ಮೊದಲೇ ಮದುವೆಗೆ ಕರೆಯಲು ಹೋದದ್ದರಿಂದ ಮನೆಗೆ ಹೋಗಿ ತಲುಪುವುದು ಕಷ್ಟವಾಗಲಿಲ್ಲ. ಎರಡು ಮೂರು ದಿನ ಕಳೆದಂತೆ ಆ ದೊಡ್ಡ ಎರಡು ಮಾಳಿಗೆಯ ಮನೆಯಲ್ಲಿ ನಾವಿಬ್ಬರು ಬೇರೆ ಗ್ರಹದಿಂದ ಬಂದವರಂತೆ ಅನಿಸತೊಡಗಿತು. ದೊಡ್ಡಪ್ಪನ ಸಂಸಾರವೂ ಎರಡನೇ ದಿನದ ಸಂಜೆಯಲಿ ಮರಳಿತು.

ಆ ಮನೆಯೋ ಅದರ ಮರಮಟ್ಟುಗಳೋ! ಈಗಲೂ ಕಣ್ಣಮುಂದೆ ಬರುವಂತಹ ಉಪ್ಪರಿಗೆ ಮೆಟ್ಟಿಲುಗಳು. ನಾನು ಮತ್ತೆ ನಿನ್ನಪ್ಪ ಅತ್ಯಂತ ಖುಷಿಯ ಹಾಗೂ ಬೇಸರದ ಜೀವನದ ಆಟಗಳಿಗೆ ಪ್ರಾರಂಭಿಸಿದ ಮನೆಯಾಗಿತ್ತು ಅದು, ಹತ್ತು ಹದಿನೈದು ದಿನ ತೋಟ ತಿರುಗುವುದೇನು, ಅಲ್ಲೇ ಹರಿಯುತ್ತಿದ್ದ ಹಳ್ಳದಲ್ಲಿ ಹಾರುವುದೇನು ಸೊಗಸಾಗಿತ್ತು. ಊರಿದಲ್ಲೆಲ್ಲಾ ಚಿಗುರು ಮೊಳೆಯುವ ಆ ಮಣ್ಣಿಗೆ ನಮ್ಮ ಯೌವ್ವನದ ಹುಚ್ಚುಗಳೂ ಖುಷಿಕೊಡುತ್ತಿತ್ತು.

ತೋಟದ ಉಸ್ತುವಾರಿಯೆಂದರೆ ಏನು? ಸುಮ್ಮನೇ ತಿರುಗುವುದು. ಅದ್ಯಾರೋ ಕಾಳುಮೆಣಸು ಕಿತ್ತಾಗ ಎಲ್ಲಿ ಗುಡ್ಡೆ ಹಾಕುವುದು ಏನು ಮಾಡಿದ್ದಾರೆ ಎಂದೆಲ್ಲಾ ಹೇಳುವುದು ಅಷ್ಟೆ. ಮತ್ತೇನೋ ಲೆಕ್ಕಾಚಾರಗಳನ್ನು ಬರೆಯುವುದು ನನಗೂ ನಿನ್ನಪ್ಪನಿಗೂ ಇದ್ದ ಕೆಲಸ. ತೋಟ ಮುಗಿದ ಮೇಲೇ ಆ ಇಳಿಜಾರು ಮುಗಿದಂತೇ ಒಂದು ಹಳ್ಳ. ಅಲ್ಲಿ ಎಂದೂ ಬತ್ತದ ನೀರು. ಸ್ವಲ್ಪ ಆಳದ ನೀರೂ ಹೌದು. ಒಳ್ಳೆಯ ಈಜುಗಾರರಾದ ನಾವು ಅಲ್ಲೂ ಈಜಾಡುವುದನ್ನು ಮರೆಯುವುದಿಲ್ಲ.

ಆ ಮನೆಗೆ ಬರುತ್ತಿದ್ದ ಇನ್ನೊಬ್ಬರನ್ನು ಕೂಡಾ ಹೇಳಬೇಕು ನಾನಿಲ್ಲಿ. ಅವರೆಂದೂ ಅಂಗಿ ಹಾಕಿದ್ದನ್ನು ನೋಡಲಿಲ್ಲ. ಒಳ್ಳೆಯ ದಪ್ಪದ ಜನಿವಾರ, ಜೊತೆಗೆ ಒಂದು ಶಾಲು ಹೊದ್ದು ದಿನಾ ಎಲೆ ಅಡಿಕೆ ತಿಂದು ಸಾಗುವ ಅವರು ಯಾವತ್ತೂ ಅಚ್ಚರಿಯಾಗಿದ್ದರು. ಶಾಂಭಟ್ಟರೆಂದೋ ರಾಂಭಟ್ಟರೆಂದೋ ಹೆಸರು. ಸ್ವಲ್ಪ ವಿಚಿತ್ರ ಮನುಷ್ಯ. ಕೆಲವುದಿನ ಒಳ್ಳೇ ಪುರಾಣದ ಕತೆಗಳನ್ನು ಹೇಳುತ್ತಾ ಕೆಲವು ಸಲ ತುಂಬಾ ಮೌನವಾಗಿರುತ್ತಾ ಇದ್ದ ಅವರು ಮುಂದೆ ಎಂದೋ ಬೀಸುವ ಬಿರುಗಾಳಿಗೆ ಸೂಚಕದಂತಿದ್ದರು.

ಅವರ ಮನೆಯೂ ಹತ್ತಿರವಿತ್ತು. ಅವರ ಮಗ ಸ್ವಲ್ಪ ಪೆದ್ದನಂತೆ. ಅವರ ಮನೆಯಿಂದಲೇ ಹಾಲು ಸರಬರಾಜು ನಾವಿದ್ದ ಮನೆಗೆ. ಮನೆಯಲ್ಲಿ ನಿನ್ನಪ್ಪನ ಆಗಿನ ಕಾಲದ ನಾಯಕಿಯೂ ಒಬ್ಬಳಿದ್ದಳು. ಅವಳ ಹೆಸರು ಶಾರದೆ. ನಿನ್ನಪ್ಪ ಎಂತಹ ಬಿಗುವಿನ, ಕೋಪದ, ಹಠದ ಮನುಷ್ಯನೋ ಅವಳಿಗೆ ನಿನ್ನಪ್ಪನನ್ನು ಕಂಡರೆ ಅದೆಲ್ಲಿಲ್ಲದ ಉತ್ಸಾಹ. ದಿನಾ ಮನೆಗೆ ಹಾಲನ್ನು ಅವಳೇ ತಂದುಕೊಡುತ್ತಿದ್ದಳು.

ಸ್ವಲ್ಪ ದಿನಗಳ ಬಳಿಕ ನಿನ್ನಪ್ಪ ಗುಟ್ಟಾಗಿ ನನ್ನಲ್ಲಿ ತುಂಬಾ ವಿಶ್ವಾಸದ ಮಾತುಗಳನ್ನಾಡಿದ. ಆ ಶಾರದೆಯ ಬಗ್ಗೆ ತನ್ನಲ್ಲಿರುವ ಎಲ್ಲಾ ಗೌರವ ಪ್ರೀತಿಗಳನ್ನೂ ಹೇಳಿಕೊಂಡ. ಹೇಗಾದರೂ ಮಾಡಿ ಅವಳನ್ನು ಮದುವೆಯಾಗಬೇಕು ಎಂದೇ ಹೇಳಿದ. ನಿನ್ನಪ್ಪನ ಆಗಿನ ನಿರ್ಧಾರ ನನಗೆ ಈಗ ನಗುತರುತ್ತದಾದರೂ ಆಗ ಅದೊಂದು ನನಗೆ ವಹಿಸಿದ್ದ ಗಂಭೀರವಾದ ಕೆಲಸ ಎಂದುಕೊಂಡೆ. ಶಾರದೆಯೂ ನಿನ್ನಪ್ಪ ಏನಂದುಕೊಂಡಿದ್ದನೋ ಹಾಗೇ ಸ್ಪಂದನೆಯನ್ನೂ ಕೊಡುತ್ತಿದ್ದಳು.

ಹಾಲು ತರಬೇಕಿದ್ದಾಗ ಆ ಬೆಳಗ್ಗಿನ ಚಳಿಯಲ್ಲೇ ನಿನ್ನಪ್ಪ ಅವಳನ್ನು ಕಾಯುತ್ತಿದ್ದ, ನಾನು ನೋಟಕನಾಗಿದ್ದೆ. ಅವಳು ಆ ನೀರಿನ ಹಳ್ಳದಲ್ಲಿ ವಸ್ತ್ರಾದಿಗಳನ್ನ ತೊಳೆಯಲು ಬರುತ್ತಿದ್ದಳು ನಿನ್ನಪ್ಪ ಈಜಿನ ವಿದ್ಯೆ ಪ್ರದರ್ಶನಕ್ಕಿಡುತ್ತಿದ್ದ. ಅವಳು ನಕ್ಕರೆ ಮೂರು ಸಲ ಮುಳುಗು ಹಾಕಿ ಖುಷಿಪಡುತ್ತಿದ್ದ. ಅಂದಿನ ಕೆಲವು ತಿಂಗಳು ಇದೇ ರೀತಿ ಜಗತ್ತನ್ನು ಮರೆತು ಅವರು ವಿಹರಿಸುತ್ತಿದ್ದರು. ಅವರ ಈ ನಾಟಕಗಳಿಗೆ ನಾನೊಬ್ಬ ಪ್ರೇಕ್ಷಕ ಎಂದು ಅತ್ತಿಗೆ ಎಂದೇ ಕರೆದು ಖುಷಿ ಪಡುತ್ತಿದ್ದೆ.

ಒಂದು ಸಂಜೆ ದಿಢೀರ್ ಎಂದು ನಿನ್ನಪ್ಪ ನನ್ನಲ್ಲಿ ಅವಳ ಬಗ್ಗೆ ಹೀನಾಯವಾಗಿ ಬೈಯ್ಯತೊಡಗಿದ. ಅವಳು ಮೋಸಗಾತಿ ಹಾಗೆ ಹೀಗೆ ಎಂದೆಲ್ಲಾ ಹೇಳಿದ. ನನಗೆ ಸ್ವಲ್ಪ ಕಷ್ಟವೆನಿಸಿತು. ಆದರೂ ನಿನ್ನಪ್ಪನ ಮಾತುಗಳು ತುಂಬಾ ಕಠಿಣವಾದ್ದರಿಂದ ಸುಮ್ಮನೇ ಇದ್ದೆ. ಅದೇ ಸಂಜೆ ಶಾರದೆಯ ಅಪ್ಪನೂ ಮನೆಯಲ್ಲಿ ಸೂಚ್ಯವಾಗಿ ಏನೋ ಹೇಳಿದಂತೆ, ಅದನ್ನು ಕೇಳಿ ಕೆರಳಿದ ನಿನ್ನಪ್ಪ ಕೋಪಗೊಂಡು ಬೈದುಬಿಟ್ಟ. ಏನು ವಿಚಾರ ಎಂದು ಅಣ್ಣನಲ್ಲಿ ಅದೇ ರಾತ್ರಿ ಕೇಳಿದೆ.

ಶಾರದೆಗೆ ಮೊದಲೇ ಮದುವೆ ನಿಶ್ಚಯವಾಗಿದ್ದು ಅದನ್ನು ಅವಳು ಮುಚ್ಚಿಟ್ಟಿದ್ದಳೆಂದೂ, ತಾನು ಹೀಗೆ ಅವಳ ಜೊತೆ ತಿರುಗಾಡಿದಾಗ ಕೆಲಸದವರು ಕೆಟ್ಟಮಾತುಗಳನ್ನು ಹೇಳುತ್ತಾರೆಂದೂ ನಿನ್ನಪ್ಪ ಬಹಳ ಬೇಸರದಲ್ಲೇ ಹೇಳಿಕೊಂಡ. ಇದು ನನಗೆ ಹೊಸಾವಿಷಯವಾಗಿದ್ದು ನಾನು ಕೂಡಾ ಮಾತನಾಡದೇ ಸುಮ್ಮನುಳಿದೆ.

ಮರುದಿನ ನಿನ್ನಪ್ಪ ತುಂಬಾ ಶಾಂತನಾಗಿದ್ದ. ತುಂಬಾ ಉಮೇದಿನಿಂದ ಎಲ್ಲಾ ಕೆಲಸಗಳನ್ನೂ ಮಾಡತೊಡಗಿದೆ. ಈಗಲೂ ನಿನ್ನಪ್ಪ ಹಾಗೆಯೇ, ಸಿಟ್ಟಾಗುತ್ತಾರೆ, ಅಳುತ್ತಾರೆ ಹಾಗೆಯೇ ವಾಸ್ತವಕ್ಕೆ ಬಂದುಮುಟ್ಟುತ್ತಾರೆ. ಆ ನಿಷ್ಕಳಂಕದ ಪ್ರೇಮವನ್ನು ಒಂದೆರಡು ಕ್ಷಣ ಕಣ್ಣೀರಿನ ನೀರಿನಲ್ಲಿ ತೊಳೆದು ತುಂಬಾ ಬದಲಾಗಿ ನಿನ್ನಪ್ಪನಿದ್ದ. ಮತ್ತೊಂದು ದಿನ ಅವಳಿಗೆ ಮದುವೆಯಾಯಿತೆಂದೂ, ಮದುವೆಯಾದವನು ಮನೆಬಿಟ್ಟು ಹೋದನೆಂದೂ ಅವಳು ಪುನಃ ತವರು ಮನೆ ಸೇರಿದ್ದಾಳೆಂದೂ ಸುದ್ಧಿಗಳು ದೊರಕುತ್ತಿತ್ತು.

ನಿನ್ನಪ್ಪ ಮಾತ್ರ ನಿರ್ಲಿಪ್ತನಾಗಿ ಸುಮ್ಮನಿದ್ದ. ಈ ಸುದ್ಧಿಗಳು ಬಂದು ಸುಮಾರು ೧೦-೧೫ ದಿನದೊಳಗೆ ನಾವೂ ಆ ವಿಚಿತ್ರ ಜೀವನವನ್ನು ಕೊಟ್ಟ ಊರನ್ನು ಬಿಟ್ಟು ಪುನಃ ಮನೆಗೆ ಬಂದೆವು. ಮೊದಲಿದ್ದ ಹಾಗೇ ಮುಂದಿನ ದಿನಗಳು ಊರಿನಲ್ಲಿ..

Sunday, 6 January 2013

ರಾಮಣ್ಣನ ದೋಸೆ ಹೋಟೆಲ್ ಮಹಿಮೆ.


ನಮಸ್ಕಾರ,
ಹುಂ.. ಹೇಳಿ!
ಅದೇ, ಆ ಮೇಲಿನ ಮನೆಯ ಮಾಬಲಣ್ಣನ ಮನೆಗೆ ಹೋಗ್ಬೇಕಿತ್ತು. ಹೇಗೆ ಹೋಗೋದು ಇಲ್ಲಿಂದ.
ಇನ್ನು ಎರಡು ಮೂರು ಮೈಲಿ ಆಗ್ತದೆ ಮಾರಾಯ್ರೇ.. ರಿಕ್ಷದಲ್ಲಿ ಹೋಗಿ.
ರಿಕ್ಷಾ ಬೇಡ, ನಡ್ಕೊಂಡೇ ಹೋಗ್ಬೇಕು ನಂಗೆ. ನೀವು ದಾರಿ ಹೇಳಿ.
ದಾರಿ ಹೇಳ್ಬೋದು, ಆದ್ರೆ ಕಂಡಾಬಟ್ಟೆ ಉದ್ದ, ಅಡ್ಡ ರಸ್ತೆ ಉಂಟಲ್ಲಾ, ನಿಮಗೆ ಗೊತ್ತಾಗ್ಬೋದಾ?
ಹೆಹ್ಹೆ, ನಾನು ಬೆಂಗಳೂರಲ್ಲೇ ತಿರುಗಾಡಿದ್ದೇನೆ, ಅದೂ ಇಲ್ಲಿ ಏನು ಮಹಾ? ನೀವು ಹೇಳಿ ನಾನು ಬರೆದುಕೊಂಡಾದ್ರೂ ಹೋಗ್ತೇನೆ.
ಸರಿ, ಮೊದಾಲು ಸೀದ ಹೋಗಿ, ಭಗವತಿ ಗುಡಿ ಬರ್ತದೆ, ಅಲ್ಲಿ ಎಡಕ್ಕೆ ತಿರುಗಿ. ಅಲ್ಲಿಂದ ಒಂದನೇಯದ್ದಲ್ಲ ಎರಡನೇ ರಸ್ತೆಯಲ್ಲಿ ಹೋಗಿ.
ಹುಂ, ಮತ್ತೆ,
ಎರಡನೇ ರಸ್ತೆ ಮುಗಿಯುವ ಮೊದಲು ಒಂದು ಸಣ್ಣ ದಾರಿ ಬರ್ತದೆ. ಅದರ ಕೊನೆಗೆ ಒಂದು ಹೋಟೆಲ್ ಇದೆ. ನಮ್ಮ ರಾಮಣ್ಣನ ದೋಸೆಯ ಹೋಟೆಲು, ದೋಸೆ ತಿಂದು ಹೋಗಿ.
ದೋಸೆಯಾ? ಯಾಕೆ? ನಂಗೆ ದಾರಿ ಹೇಳಿ. ಹಸಿವಾಗ್ತಾ ಇಲ್ಲ.
ಸರಿ, ಹೋಟೆಲಿಂದ ವಾಪಸ್ ಬರುವಾಗ ಎಡಬದಿಗೆ ಹೋಗುವ ದಾರಿಯಲ್ಲೇ ತಿರುಗಿ ಆ ದಾರಿಯಲ್ಲೇ ಮುಂದೆ ಹೋದರೆ ಒಂದು ಏರುಮಾರ್ಗ ಇದೆ. ಅಲ್ಲಿಂದ ಒಂದೆರಡು ಫರ್ಲಾಂಗ್ ಕಾಡುದಾರಿಯಲ್ಲಿ ನಡೆದರೆ ಅದೇ ಮಾಬಲಣ್ಣನ ಮನೆ. ಆದ್ರೂ ದೋಸೆ ತಿಂದೇ ಹೋಗಿ, ದೋಸೆ ತಿಂದ್ರೆ ಮಾತ್ರ ದಾರಿ ಸಿಗಬಹುದು ನಿಮಗೆ.
ಸರಿ, ಧನ್ಯವಾದ. ದೋಸೆ ಇನ್ನೊಮ್ಮೆ ಬಂದಾಗ ತಿನ್ನುತ್ತೇನೆ.

----
ದಾರಿ ತಪ್ಪಿತು ನಿಜವಾಗಿಯೂ. ಎಲಾ ದೋಸೆಯ ಮಹಿಮೆಯೇ, ಪುನಃ ವಾಪಸ್ ಬಂದು ದೋಸೆ ತಿಂದು ಮೊದಲು ಹೇಳಿದಂತೇ ನಡೆದರೆ ಮಾಬಲಣ್ಣನ ಮನೆಗೆ ಹೋದೆ. ಪರಮಾಶ್ಚರ್ಯವಾದರೂ ತಲೆಯಲ್ಲಿ ಹುಳ ಬಿಟ್ಟಂತೆ.
--
ತಪ್ಪಿದ್ದು : ನೇರವಾಗಿ ಬಂದಾಗ ರಾಮಣ್ಣನ ಹೋಟೆಲ್ ಕಂಡಿತು. ನಾನು ಬಲಬದಿಗೆ ಹೋಗಬೇಕಿತ್ತು ಮೊದಲೇ, ನನಗೆ ದಾರಿ ಹೇಳಿಕೊಟ್ಟ ದೇವರು ರಾಮಣ್ಣನ ಹೋಟೆಲಿನಿಂದ ಬರುವಾಗ ಎಡಬದಿಗೆ ಹೋಗಲು ಹೇಳಿದ್ದ. ದೋಸೆ ಬೇಡವೆಂದ ನಾನು ಸೋತಿದ್ದು ಕೇವಲ ಎಡ-ಬಲದ ವಿಚಾರದಲ್ಲಾಗಿತ್ತು..

ಈ ಕತೆ ಯಾರಲ್ಲೂ ಹೇಳಿಲ್ಲ ಇನ್ನೂ!!