Showing posts with label ಕತೆ. Show all posts
Showing posts with label ಕತೆ. Show all posts

Wednesday, 9 January 2013

ಅಪ್ಪಚ್ಚಿ ಹೇಳಿದ ಅಪ್ಪನ ಕತೆ- ಭಾಗ ೭ ( ಮೊದಲ ಪ್ರೇಮದ ಕತೆ )


ಕತೆಯನ್ನು ಕೇಳಿ ಅದೇಕೋ ಬಾಬುಸೋಜರ ಮೇಲೆ ಮೊದಲಿನ ಭಾವನೆ ಹೊರಟುಹೋಯಿತು. ಅದೇಕೋ ಒಂದು ರೀತಿಯ ಮಂಕುತನವೂ ಶಾಮ ಎನ್ನುವ ವ್ಯಕ್ತಿಯ ಬಗ್ಗೆ ಇದ್ದ ಕುತೂಹಲವೂ ಹೀಗೇ ಮಾಯವಾದಂತೆ ಭಾಸವಾಗತೊಡಗಿತು. ಚಿಕ್ಕಪ್ಪ ಭಾವುಕನಾಗಿದ್ದ. ಇನ್ನು ಕತೆ ಹೇಳುವುದಿಲ್ಲವೇನೋ ಅನ್ನಿಸತೊಡಗಿತು. ಈ ಶಾಮನ ಅಂದಿನ ಪ್ರಿಯತಮೆಯನ್ನೊಮ್ಮೆ ನೋಡಿ ಮಾತನಾಡಿಸಬೇಕು ಎಂದೂ ಅನ್ನಿಸಿತು.  ಅಲ್ಲಿದ್ದ ಒಂದು ರೀತಿಯ ಅಸಹನೀಯ ಮೌನ ಮಾತ್ರ ಇನ್ನೇನೋ ಕತೆಯನ್ನು ಹೇಳುತ್ತೇನೆ ಎನ್ನುವ ಖಾತ್ರಿಯನ್ನು ಹುಟ್ಟುಹಾಕಿತ್ತು. ಅಪ್ಪಚ್ಚೀ ಎಂದೆ..ನಿಧಾನವಾಗಿ ವಾಸ್ತವವನ್ನು ಹೊಕ್ಕು, ಥತ್!! ಬಿಸಿಲು, ಎಂದರು.

ಕುಶಾಲನಗರಕ್ಕೆ ಹೋಗಿದ್ಯೇನೋ? ಅಲ್ಲಿನ ಬೆಳಗ್ಗಿನ ಚಳಿಯನ್ನು ನಾನು ಮತ್ತು ನಿನ್ನಪ್ಪ ಇಷ್ಟಪಟ್ಟಿದ್ದೆವು. ಇನ್ನೊಂದು ಚಂದದ ಕತೆ ಹೇಳುತ್ತೇನೆ ಕೇಳು. ಶಾಲೆ ಮುಗಿದ ಬೆನ್ನಲ್ಲೇ ದೊಡ್ಡಪ್ಪನ ಮದುವೆಯಾಯಿತು, ನಾವು ಮುಂದಿನ ಕಲಿಕೆ ಎನ್ನುವ ವಿಚಾರವೇ ಇರದಿದ್ದುದರಿಂದ ಹೀಗೇ ದಿನವೆಲ್ಲಾ ಕಳೆಯುತ್ತಾ ಸುಮ್ಮನಿದ್ದುದನ್ನು ನೋಡಿ ಅಪ್ಪ ನನ್ನನ್ನೂ ನಿನ್ನಪ್ಪನನ್ನೂ ಕುಶಾಲನಗರದ ಅಪ್ಪನ ಅಣ್ಣನ ಸಂಬಂಧಿಯೊಬ್ಬರ ಮನೆಗೆ ಸಾಗಹಾಕಿದರು.ನಿನಗೂ ಗೊತ್ತಿರಬಹುದು ಆ ಅಜ್ಜನನ್ನು. ಕ್ರಮೇಣ ಅವರೂ ಅವರ ತೋಟವನ್ನು ಮಾರಿ ಬೆಂಗಳೂರಿನ ಕಡೆಗೆ ನಡೆದು ಮಕ್ಕಳಿಗೆ ಮದುವೆ ಮಾಡಿ ಸ್ವಲ್ಪ ಸಮಯ ಇದ್ದು ಈಗ ಇಲ್ಲವೇನೋ! ಅವರನ್ನು ನಂತರ ನೋಡಿದ ನೆನಪೂ ಆಗುತ್ತಿಲ್ಲ. ಅದ್ಯಾವುದೋ ಊರು, ಖಂಡಿತ ಹೆಸರು ನೆನಪಿಲ್ಲ ನನಗೆ. ನಿನ್ನಪ್ಪ ಮರೆಯುವುದಿಲ್ಲ. ನಾನು ಮತ್ತೆ ನಿನ್ನಪ್ಪ ಹೋಗಿದ್ದು ತೋಟದ ಉಸ್ತುವಾರಿಗೆ ಆದರೂ ಕೂಡ ನಮ್ಮಿಬ್ಬರ ಜೀವನದ ಅತ್ಯಮೂಲ್ಯವಾದ ವರುಷಗಳಾಗಿದ್ದವು ಅವು.

ನನ್ನನ್ನು ಬೇಕಾದರೆ ಇಂವ ಹೀಗೇ ಎಂದು ಗುರುತಿಸಿಬಿಡಬಹುದು, ಆದರೆ ನಿನ್ನಪ್ಪನನ್ನು ಹಾಗೆ ಅರಿಯಲಾಗುವುದಿಲ್ಲ. ಅವನ ಪ್ರೀತಿಯೂ ಅವನ ಕೋಪವೂ, ಹಠವೂ ಒಂದು ಥರ ವಿಚಿತ್ರವಾದದ್ದು ಅದು ಮಳೆಗಾಲದ ಜಲಪಾತದ ಹಾಗೆ, ಕಸವೂ ಬರಬಹುದು, ಕಲ್ಲೂ ಹಾರಬಹುದು ಹಾಗೆಯೇ ಎಲ್ಲವನ್ನೂ ತನ್ನೊಂದಿಗೆ ಕೊಚ್ಚಿಕೊಂಡು ಪ್ರವಹಿಸಲೂ ಬಹುದು. ಅಂತಹ ನಿನ್ನಪ್ಪನ ಜೊತೆ ಆ ಕಾಲಕ್ಕೆ ನಾನು ಮಾತ್ರ ಹೊಂದಿಕೊಂಡು ಇರಬಲ್ಲೆ ಎನ್ನುವ ವಿಶ್ವಾಸ ಮಾತ್ರ ನನ್ನನ್ನು ಮತ್ತೆ ನಮ್ಮ ಮನೆಯಲ್ಲಿರುವವರನ್ನು ಒಪ್ಪಿಸಿತ್ತೇನೋ..

ಹೀಗೇ ಒಂದು ಸುಂದರ ದಿನ ಬೆಳಗ್ಗೆ ನಾನು ಮತ್ತೆ ನಿನ್ನಪ್ಪ ಸಕಲೇಶಪುರಕ್ಕೆ ಹೊರಟೆವು. ಜೊತೆಗೆ ದೊಡ್ಡಪ್ಪನೂ, ದೊಡ್ಡಮ್ಮನೂ ಇದ್ದರು.ದೊಡ್ಡಪ್ಪ ಮೊದಲೇ ಮದುವೆಗೆ ಕರೆಯಲು ಹೋದದ್ದರಿಂದ ಮನೆಗೆ ಹೋಗಿ ತಲುಪುವುದು ಕಷ್ಟವಾಗಲಿಲ್ಲ. ಎರಡು ಮೂರು ದಿನ ಕಳೆದಂತೆ ಆ ದೊಡ್ಡ ಎರಡು ಮಾಳಿಗೆಯ ಮನೆಯಲ್ಲಿ ನಾವಿಬ್ಬರು ಬೇರೆ ಗ್ರಹದಿಂದ ಬಂದವರಂತೆ ಅನಿಸತೊಡಗಿತು. ದೊಡ್ಡಪ್ಪನ ಸಂಸಾರವೂ ಎರಡನೇ ದಿನದ ಸಂಜೆಯಲಿ ಮರಳಿತು.

ಆ ಮನೆಯೋ ಅದರ ಮರಮಟ್ಟುಗಳೋ! ಈಗಲೂ ಕಣ್ಣಮುಂದೆ ಬರುವಂತಹ ಉಪ್ಪರಿಗೆ ಮೆಟ್ಟಿಲುಗಳು. ನಾನು ಮತ್ತೆ ನಿನ್ನಪ್ಪ ಅತ್ಯಂತ ಖುಷಿಯ ಹಾಗೂ ಬೇಸರದ ಜೀವನದ ಆಟಗಳಿಗೆ ಪ್ರಾರಂಭಿಸಿದ ಮನೆಯಾಗಿತ್ತು ಅದು, ಹತ್ತು ಹದಿನೈದು ದಿನ ತೋಟ ತಿರುಗುವುದೇನು, ಅಲ್ಲೇ ಹರಿಯುತ್ತಿದ್ದ ಹಳ್ಳದಲ್ಲಿ ಹಾರುವುದೇನು ಸೊಗಸಾಗಿತ್ತು. ಊರಿದಲ್ಲೆಲ್ಲಾ ಚಿಗುರು ಮೊಳೆಯುವ ಆ ಮಣ್ಣಿಗೆ ನಮ್ಮ ಯೌವ್ವನದ ಹುಚ್ಚುಗಳೂ ಖುಷಿಕೊಡುತ್ತಿತ್ತು.

ತೋಟದ ಉಸ್ತುವಾರಿಯೆಂದರೆ ಏನು? ಸುಮ್ಮನೇ ತಿರುಗುವುದು. ಅದ್ಯಾರೋ ಕಾಳುಮೆಣಸು ಕಿತ್ತಾಗ ಎಲ್ಲಿ ಗುಡ್ಡೆ ಹಾಕುವುದು ಏನು ಮಾಡಿದ್ದಾರೆ ಎಂದೆಲ್ಲಾ ಹೇಳುವುದು ಅಷ್ಟೆ. ಮತ್ತೇನೋ ಲೆಕ್ಕಾಚಾರಗಳನ್ನು ಬರೆಯುವುದು ನನಗೂ ನಿನ್ನಪ್ಪನಿಗೂ ಇದ್ದ ಕೆಲಸ. ತೋಟ ಮುಗಿದ ಮೇಲೇ ಆ ಇಳಿಜಾರು ಮುಗಿದಂತೇ ಒಂದು ಹಳ್ಳ. ಅಲ್ಲಿ ಎಂದೂ ಬತ್ತದ ನೀರು. ಸ್ವಲ್ಪ ಆಳದ ನೀರೂ ಹೌದು. ಒಳ್ಳೆಯ ಈಜುಗಾರರಾದ ನಾವು ಅಲ್ಲೂ ಈಜಾಡುವುದನ್ನು ಮರೆಯುವುದಿಲ್ಲ.

ಆ ಮನೆಗೆ ಬರುತ್ತಿದ್ದ ಇನ್ನೊಬ್ಬರನ್ನು ಕೂಡಾ ಹೇಳಬೇಕು ನಾನಿಲ್ಲಿ. ಅವರೆಂದೂ ಅಂಗಿ ಹಾಕಿದ್ದನ್ನು ನೋಡಲಿಲ್ಲ. ಒಳ್ಳೆಯ ದಪ್ಪದ ಜನಿವಾರ, ಜೊತೆಗೆ ಒಂದು ಶಾಲು ಹೊದ್ದು ದಿನಾ ಎಲೆ ಅಡಿಕೆ ತಿಂದು ಸಾಗುವ ಅವರು ಯಾವತ್ತೂ ಅಚ್ಚರಿಯಾಗಿದ್ದರು. ಶಾಂಭಟ್ಟರೆಂದೋ ರಾಂಭಟ್ಟರೆಂದೋ ಹೆಸರು. ಸ್ವಲ್ಪ ವಿಚಿತ್ರ ಮನುಷ್ಯ. ಕೆಲವುದಿನ ಒಳ್ಳೇ ಪುರಾಣದ ಕತೆಗಳನ್ನು ಹೇಳುತ್ತಾ ಕೆಲವು ಸಲ ತುಂಬಾ ಮೌನವಾಗಿರುತ್ತಾ ಇದ್ದ ಅವರು ಮುಂದೆ ಎಂದೋ ಬೀಸುವ ಬಿರುಗಾಳಿಗೆ ಸೂಚಕದಂತಿದ್ದರು.

ಅವರ ಮನೆಯೂ ಹತ್ತಿರವಿತ್ತು. ಅವರ ಮಗ ಸ್ವಲ್ಪ ಪೆದ್ದನಂತೆ. ಅವರ ಮನೆಯಿಂದಲೇ ಹಾಲು ಸರಬರಾಜು ನಾವಿದ್ದ ಮನೆಗೆ. ಮನೆಯಲ್ಲಿ ನಿನ್ನಪ್ಪನ ಆಗಿನ ಕಾಲದ ನಾಯಕಿಯೂ ಒಬ್ಬಳಿದ್ದಳು. ಅವಳ ಹೆಸರು ಶಾರದೆ. ನಿನ್ನಪ್ಪ ಎಂತಹ ಬಿಗುವಿನ, ಕೋಪದ, ಹಠದ ಮನುಷ್ಯನೋ ಅವಳಿಗೆ ನಿನ್ನಪ್ಪನನ್ನು ಕಂಡರೆ ಅದೆಲ್ಲಿಲ್ಲದ ಉತ್ಸಾಹ. ದಿನಾ ಮನೆಗೆ ಹಾಲನ್ನು ಅವಳೇ ತಂದುಕೊಡುತ್ತಿದ್ದಳು.

ಸ್ವಲ್ಪ ದಿನಗಳ ಬಳಿಕ ನಿನ್ನಪ್ಪ ಗುಟ್ಟಾಗಿ ನನ್ನಲ್ಲಿ ತುಂಬಾ ವಿಶ್ವಾಸದ ಮಾತುಗಳನ್ನಾಡಿದ. ಆ ಶಾರದೆಯ ಬಗ್ಗೆ ತನ್ನಲ್ಲಿರುವ ಎಲ್ಲಾ ಗೌರವ ಪ್ರೀತಿಗಳನ್ನೂ ಹೇಳಿಕೊಂಡ. ಹೇಗಾದರೂ ಮಾಡಿ ಅವಳನ್ನು ಮದುವೆಯಾಗಬೇಕು ಎಂದೇ ಹೇಳಿದ. ನಿನ್ನಪ್ಪನ ಆಗಿನ ನಿರ್ಧಾರ ನನಗೆ ಈಗ ನಗುತರುತ್ತದಾದರೂ ಆಗ ಅದೊಂದು ನನಗೆ ವಹಿಸಿದ್ದ ಗಂಭೀರವಾದ ಕೆಲಸ ಎಂದುಕೊಂಡೆ. ಶಾರದೆಯೂ ನಿನ್ನಪ್ಪ ಏನಂದುಕೊಂಡಿದ್ದನೋ ಹಾಗೇ ಸ್ಪಂದನೆಯನ್ನೂ ಕೊಡುತ್ತಿದ್ದಳು.

ಹಾಲು ತರಬೇಕಿದ್ದಾಗ ಆ ಬೆಳಗ್ಗಿನ ಚಳಿಯಲ್ಲೇ ನಿನ್ನಪ್ಪ ಅವಳನ್ನು ಕಾಯುತ್ತಿದ್ದ, ನಾನು ನೋಟಕನಾಗಿದ್ದೆ. ಅವಳು ಆ ನೀರಿನ ಹಳ್ಳದಲ್ಲಿ ವಸ್ತ್ರಾದಿಗಳನ್ನ ತೊಳೆಯಲು ಬರುತ್ತಿದ್ದಳು ನಿನ್ನಪ್ಪ ಈಜಿನ ವಿದ್ಯೆ ಪ್ರದರ್ಶನಕ್ಕಿಡುತ್ತಿದ್ದ. ಅವಳು ನಕ್ಕರೆ ಮೂರು ಸಲ ಮುಳುಗು ಹಾಕಿ ಖುಷಿಪಡುತ್ತಿದ್ದ. ಅಂದಿನ ಕೆಲವು ತಿಂಗಳು ಇದೇ ರೀತಿ ಜಗತ್ತನ್ನು ಮರೆತು ಅವರು ವಿಹರಿಸುತ್ತಿದ್ದರು. ಅವರ ಈ ನಾಟಕಗಳಿಗೆ ನಾನೊಬ್ಬ ಪ್ರೇಕ್ಷಕ ಎಂದು ಅತ್ತಿಗೆ ಎಂದೇ ಕರೆದು ಖುಷಿ ಪಡುತ್ತಿದ್ದೆ.

ಒಂದು ಸಂಜೆ ದಿಢೀರ್ ಎಂದು ನಿನ್ನಪ್ಪ ನನ್ನಲ್ಲಿ ಅವಳ ಬಗ್ಗೆ ಹೀನಾಯವಾಗಿ ಬೈಯ್ಯತೊಡಗಿದ. ಅವಳು ಮೋಸಗಾತಿ ಹಾಗೆ ಹೀಗೆ ಎಂದೆಲ್ಲಾ ಹೇಳಿದ. ನನಗೆ ಸ್ವಲ್ಪ ಕಷ್ಟವೆನಿಸಿತು. ಆದರೂ ನಿನ್ನಪ್ಪನ ಮಾತುಗಳು ತುಂಬಾ ಕಠಿಣವಾದ್ದರಿಂದ ಸುಮ್ಮನೇ ಇದ್ದೆ. ಅದೇ ಸಂಜೆ ಶಾರದೆಯ ಅಪ್ಪನೂ ಮನೆಯಲ್ಲಿ ಸೂಚ್ಯವಾಗಿ ಏನೋ ಹೇಳಿದಂತೆ, ಅದನ್ನು ಕೇಳಿ ಕೆರಳಿದ ನಿನ್ನಪ್ಪ ಕೋಪಗೊಂಡು ಬೈದುಬಿಟ್ಟ. ಏನು ವಿಚಾರ ಎಂದು ಅಣ್ಣನಲ್ಲಿ ಅದೇ ರಾತ್ರಿ ಕೇಳಿದೆ.

ಶಾರದೆಗೆ ಮೊದಲೇ ಮದುವೆ ನಿಶ್ಚಯವಾಗಿದ್ದು ಅದನ್ನು ಅವಳು ಮುಚ್ಚಿಟ್ಟಿದ್ದಳೆಂದೂ, ತಾನು ಹೀಗೆ ಅವಳ ಜೊತೆ ತಿರುಗಾಡಿದಾಗ ಕೆಲಸದವರು ಕೆಟ್ಟಮಾತುಗಳನ್ನು ಹೇಳುತ್ತಾರೆಂದೂ ನಿನ್ನಪ್ಪ ಬಹಳ ಬೇಸರದಲ್ಲೇ ಹೇಳಿಕೊಂಡ. ಇದು ನನಗೆ ಹೊಸಾವಿಷಯವಾಗಿದ್ದು ನಾನು ಕೂಡಾ ಮಾತನಾಡದೇ ಸುಮ್ಮನುಳಿದೆ.

ಮರುದಿನ ನಿನ್ನಪ್ಪ ತುಂಬಾ ಶಾಂತನಾಗಿದ್ದ. ತುಂಬಾ ಉಮೇದಿನಿಂದ ಎಲ್ಲಾ ಕೆಲಸಗಳನ್ನೂ ಮಾಡತೊಡಗಿದೆ. ಈಗಲೂ ನಿನ್ನಪ್ಪ ಹಾಗೆಯೇ, ಸಿಟ್ಟಾಗುತ್ತಾರೆ, ಅಳುತ್ತಾರೆ ಹಾಗೆಯೇ ವಾಸ್ತವಕ್ಕೆ ಬಂದುಮುಟ್ಟುತ್ತಾರೆ. ಆ ನಿಷ್ಕಳಂಕದ ಪ್ರೇಮವನ್ನು ಒಂದೆರಡು ಕ್ಷಣ ಕಣ್ಣೀರಿನ ನೀರಿನಲ್ಲಿ ತೊಳೆದು ತುಂಬಾ ಬದಲಾಗಿ ನಿನ್ನಪ್ಪನಿದ್ದ. ಮತ್ತೊಂದು ದಿನ ಅವಳಿಗೆ ಮದುವೆಯಾಯಿತೆಂದೂ, ಮದುವೆಯಾದವನು ಮನೆಬಿಟ್ಟು ಹೋದನೆಂದೂ ಅವಳು ಪುನಃ ತವರು ಮನೆ ಸೇರಿದ್ದಾಳೆಂದೂ ಸುದ್ಧಿಗಳು ದೊರಕುತ್ತಿತ್ತು.

ನಿನ್ನಪ್ಪ ಮಾತ್ರ ನಿರ್ಲಿಪ್ತನಾಗಿ ಸುಮ್ಮನಿದ್ದ. ಈ ಸುದ್ಧಿಗಳು ಬಂದು ಸುಮಾರು ೧೦-೧೫ ದಿನದೊಳಗೆ ನಾವೂ ಆ ವಿಚಿತ್ರ ಜೀವನವನ್ನು ಕೊಟ್ಟ ಊರನ್ನು ಬಿಟ್ಟು ಪುನಃ ಮನೆಗೆ ಬಂದೆವು. ಮೊದಲಿದ್ದ ಹಾಗೇ ಮುಂದಿನ ದಿನಗಳು ಊರಿನಲ್ಲಿ..

Thursday, 18 October 2012

ಕತೆ- ರಾಜಮ್ಮನೂ ಊರಿನ ಕೆರೆಯೂ

ಅಕ್ಕಮ್ಮಾ, ನಂಗೆ ಚಿಂತೆ ಏನೇನೂ ಇಲ್ಲ ಕಣಮ್ಮ. ಮೊದಲು ಮಗ ಬರ್ಲಿ ಪೇಟೆಯಿಂದ, ಮದ್ವೆ ಆದ್ಮೇಲೆ ಇರೋ ಎರಡೆಕ್ರೆ ಜಮೀನು ನೋಡ್ಕಂಡು ಆರಾಮಾಗಿರ್ತಾನಂತೆ. ಸೊಸೆಯಾಗೋಳಂತೂ ಮೊದಲೇ ಪರಿಚಯದೋಳಲ್ವೇ, ಸುಧಾರ್ಸ್ಕಂಡು ಹೋಗ್ತಾಳೆ. ಈ ಗೌರಿ ಹಬ್ಬ ಮುಗಿದ ಕೂಡ್ಲೇ ಮದ್ವೆ ಮಾಡಿ ಮುಗ್ಸೋದು ... ಹೀಗೇ ಸಾಗಿತ್ತು ರಾಜಮ್ಮನ ಮಾತುಗಳು.
ಸ್ವಂತ ಊರು ಬೇರೆ ಆದರೂ ಸುಮಾರು ಮೂವತ್ತೈದು ವರ್ಷಗಳಿಂದ ಈ ಮನೆ ಈ ಹೊಲ, ಒಂದಿಪ್ಪತ್ತು ತೆಂಗಿನ ಮರಗಳೊಂದಿಗೆ ಆರಾಮವಾದ ಬದುಕು ರಾಜಮ್ಮನದು.ಕುಡಿದೇ ಟ್ರಾಕ್ಟರು ಓಡಿಸುತ್ತಿದ್ದ ಗಂಡನ ಸಂಪಾದನೆಯು ಮನೆಗಿರಲಿಲ್ಲದಿದ್ದರೂ ತೋಟದ ಆದಾಯದಿಂದಲೇ ಸರಕಾರಿ ಶಾಲೆಯಲ್ಲಿ ಪಿಯುಸಿ ತನಕ ಓದಿಸಿದ್ದಳು ಮಗನನ್ನು. ಮಗನೂ ಕಾರ್ ಡ್ರೈವರು ಈಗ ಬೆಂಗಳೂರಲ್ಲಿ. ಸುಮಾರು ೧೦ ವರ್ಷಗಳಿಂದ ಅಂದರೆ ಗಂಡನ ಮರಣಾನಂತರ ಏಕಾಂಗಿ ಜೀವನ ಒಗ್ಗಿಹೋಗಿತ್ತು ರಾಜಮ್ಮಳಿಗೆ, ಇದೀಗ ಮಗನ ಮದುವೆ ಮಾಡಿಸಿ ನಂತರ ಮಗನನ್ನೂ ಸೊಸೆಯನ್ನೂ ಮನೆಯಲ್ಲಿರಿಸಬೇಕೆಂಬ ಮಹದಾಸೆ ರಾಜಮ್ಮಳಿಗೆ.

ರಾಜಮ್ಮ ಏನೇನೂ ಓದಿರಲಿಲ್ಲದಿದ್ದರೂ ಒಳ್ಳೆಯ ವ್ಯವಹಾರಸ್ಥೆ. ಅವಳೇ ನಂಬಿರುವ ದೇವರುಗಳು ಅಪಾರವಾದ ಸಮಯೋಚಿತ ಬುದ್ಧಿಶಕ್ತಿಯನ್ನ ಕೊಟ್ಟಿದ್ದರು. ಹೀಗಾಗಿ ಯಾವುದೇ ವ್ಯವಹಾರದಲ್ಲಿ ರಾಜಮ್ಮ ನಷ್ಟ ಅನುಭವಿಸುತ್ತಿರಲಿಲ್ಲ.ತನ್ನ ತರಕಾರೀ ಬೆಳೆಗಳನ್ನು ಸರಿಯಾದ ಬೆಲೆಗೆ ಮಾರಿ ಅದರಿಂದ ಬಂಡವಾಳದ ಸರಿಯಾದ ವಿನಿಯೋಗ ಮಾಡುವ ಕಲೆ ಹುಟ್ಟಿನಿಂದಲೇ ಬಂದಿರಬೇಕು ರಾಜಮ್ಮನಿಗೆ. ಸ್ವಂತ ಬೋರ್’ವೆಲ್ ಕೊರೆಸಿ ಒಳ್ಳೆಯ ನೀರು ಸಿಕ್ಕಿದಾಗಂತೂ ರಾಜಮ್ಮನನ್ನು ಎಲ್ಲರೂ ಮೆಚ್ಚಿದವರೇ. ಸ್ವಂತ ಮನೆ, ರಸ್ತೆಯ ಸಮೀಪ ಇದ್ದುದರಿಂದ ಹೆಚ್ಚಾಗಿ ಒಳ್ಳೆಯ ಸಂಪರ್ಕವಿತ್ತು.

ಬೇಡ ಬೇಡ ಎಂದು ಮನದಲ್ಲಿ ಅಂದುಕೊಂಡರೂ ಮಗನನ್ನು ಬೆಂಗಳೂರಿಗೆ ಕಳುಹಿಸಲು ಗಟ್ಟಿ ಮನಸ್ಸು ಮಾಡಿದ್ದಳು. ಈಗ ೧೦-೧೫ ಸಾವಿರ ದುಡಿಯುವ ಮಗ ಮೇಲಿನ ಮನೆಯ ಅಕ್ಕಮ್ಮನ ಮಗನಿಗಿಂತ ಹೆಚ್ಚಿನವ. ಹಾಗಾಗಿ ಅಕ್ಕಮ್ಮನೊಂದಿಗೆ ತನ್ನ ಅಂತಸ್ತನ್ನು ಕಾಯ್ದುಕೊಂಡಳು ರಾಜಮ್ಮ.
--
ಊರು ಬೆಳೆಯುತ್ತಿರಬೇಕಾದರೆ ನೀರು ಜಾಸ್ತಿ ಬೇಕಲ್ಲವೇ?. ಯಾವತ್ತೂ ನೀರಿನ ಕೊರತೆ ಇರದಿದ್ದ ಊರಿಗೆ ಇತ್ತೀಚಿನ ವರ್ಷಗಳಲ್ಲಿ ಮಳೆಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತಾ ಬಂದಿದೆ. ಸರಕಾರವೂ ೩-೪ ವರ್ಷದಿಂದ ಗಂಭೀರ ಚಿಂತನೆಗಳನ್ನು ಮಾಡಿ ಕೊನೆಗೂ ಚುನಾವಣೆಯ ಕಾಲ ಸಮೀಪಿಸಿದಾಗ ಆ ಊರಿಗೊಂದು ಕೆರೆಯನ್ನೂ ಅದರ ಕಾಮಗಾರಿಯನ್ನೂ ಶುರುಮಾಡುವ ಕಾರ್ಯಕ್ಕೆ ಗಣನೀಯ ಕೊಡುಗೆ ಕೊಡುತ್ತಾ ಬಂತು. ಇತ್ತೀಚೆಗೆ ಅಂದರೆ ಸುಮಾರು ೭-೮ ತಿಂಗಳುಗಳ ಹಿಂದೆ ಕೊನೆಗೂ ಕೆರೆಗೊಂದು ರೂಪುರೇಶೆ ಅಂದಾಜು ವಿಸ್ತೀರ್ಣ ಇತ್ಯಾದಿಗಳ ಚರ್ಚೆಯಾಗಿ ಸುಮಾರು ಎರಡು ಹೆಕ್ಟೇರ್ ಜಾಗದಲ್ಲಿ ಕೆರೆಯಾಗುವುದೆಂದು  ನಿರ್ಧಾರವಾಗಿ ಕಾರ್ಯರೂಪಕ್ಕೂ ಬಂತು. ಊರಿನ ಶಾಲೆಯಲ್ಲೇ ಕಲಿತು ಊರಿನ ಬಗ್ಗೆ ಬಹಳ ಅಭಿಮಾನವನ್ನು ಹೊಂದಿದ ನಟರಾಜಪ್ಪ ಎನ್ನುವವನೇ ಪ್ರಧಾನ ಇಂಜಿನೀಯರ್ ಆದ.

ಕೆರೆಯ ಸುತ್ತಲೂ ಕಲ್ಲಿನ ಕಟ್ಟೆಯಂತೆ ಕಟ್ಟಿ ಕೆರೆಗೆ ಅಂದವನ್ನು ಕೊಡುವುದಕ್ಕೆ ನಡುಗಡ್ಡೆ. ಮುಂದೆ ಬೋಟಿಂಗ್ ಮುಂತಾದ ವ್ಯವಸ್ಥೆ ಮಾಡುವುದಕ್ಕೆ ಅನುಕೂಲವಾಗುವಂತೆ ಎಲ್ಲಾ ರೀತಿಯಿಂದಲೂ ಸುಸಜ್ಜಿತಗೊಳಿಸಲಾಯಿತು.
ಇದೆಲ್ಲಾ ವಿಶೇಷವಾಗಿ ಆನಂದ ನೀಡಿದ್ದು ರಾಜಮ್ಮನಿಗೆ ಎಂದರೆ ಆಶ್ಚರ್ಯವಾಗಲಿಕ್ಕಿಲ್ಲ. ಬೋರ್’ವೆಲ್ ನೀರು ಕ್ರಮೇಣ ಕಡಿಮೆಯಾಗುತ್ತಾ ಬಂದಿದ್ದು ರಾಜಮ್ಮನ ಗಮನಕ್ಕೆ ಬಂದಿತ್ತು. ಈ ಕೆರೆಯಾದರೆ ನೀರು ಸಮೃದ್ಧಿಯಾಗುವುದರಲ್ಲಿ ಸಂದೇಹವಿರಲಿಲ್ಲ ರಾಜಮ್ಮನಿಗೆ.

ಹಳೆ ಕೆರೆಯ ಹೊಳೆತ್ತಲಾಯಿತು. ಕಟ್ಟೆ ಕಟ್ಟಲಾಯಿತು. ಈಗ ನೀರು ಬಿಡುವುದೆಂದು ತೀರ್ಮಾನವಾಯಿತು. ಹೀಗೆ ಒಂದು ದಿನ ನದಿಯ ಕಾಲುವೆಯಿಂದ ನೀರನ್ನು ಕೆರೆಗೆ ಹರಿಸಲಾಯಿತು. ಸುಮಾರು ಎರಡು ತಿಂಗಳು ನೀರನ್ನು ಹರಿಸಿದ್ದರಿಂದ ಹಸಿದಿದ್ದ ಭೂಮಿ ಬೇಕಾದಷ್ಟನ್ನು ಕುಡಿದು ಉಳಿದಿದ್ದನ್ನು ಮೈತುಂಬಾ ಹೇರಿಕೊಂಡಳು. ನೀರು ದಿನೇ ದಿನೇ ಕೆರೆಯನ್ನು ಸಾಗರದಂತೆ ಕಾಣಿಸಲು ಪ್ರಯತ್ನಮಾಡಿತು. ಊರು ತಂಪಾಯಿತು. ಕೆರೆ ನೀರು ತುಂಬಿ ಊರಿಗೊಂದು ವಿಶಿಷ್ಟ ಮೆರುಗು ತಂದುಕೊಟ್ಟಿತು. ನಟರಾಜಪ್ಪನ ಮನೆಗೆ ಕಾರೂ ಬಂತು.
-
ದಿನವು ನಿನ್ನೆಯಂತೇ ಇದ್ದರೆ ಭೂಮಿ ಚಲನಶೀಲ ಎನ್ನುವುದು ಸುಳ್ಳಾಗುತ್ತಿತ್ತೇನೋ ಅದಕ್ಕೆಂದೇ ರಾಜಮ್ಮನ ಬೋರು ನೀರು ತುಂಬಿ ಹರಿಯತೊಡಗಿತು. ಎಲ್ಲೆಲ್ಲಿಯೂ ನೀರು. ರಾಜಮ್ಮ ಖುಷಿಯಿಂದ ಸ್ವಲ್ಪದಿನ ಊರಿನವರೊಂದಿಗೆ ಅಂತರ ಕಾಯ್ದುಕೊಂಡಳು. ಹೀಗೇ ಆಗುತ್ತದೆ ಎಂದು ಯಾವುದನ್ನೂ ಹೇಳುವ ಹಾಗಿಲ್ಲವಲ್ಲ. ಆ ದಿನ ಬೆಳಗ್ಗೆ ರಾಜಮ್ಮ ಎದ್ದು ಕಣ್ಣುಜ್ಜುತ್ತಾ ಹೊರಗೆ ಬರುತ್ತಿರಬೇಕಾದರೆ ಜಾರಿ ಬಿದ್ದಳು. ಯಾವ ಪುಣ್ಯದಿಂದಲೋ ರಾಜಮ್ಮನಿಗೆ ಏನೂ ಆಗಲಿಲ್ಲ.ಹೊರಗೆ ಬಂದಾಗ ಜಮೀನಿನಲ್ಲಿ ನೀರು ಹಾಯಿಸಿದಂತೆ ಇತ್ತು.ಅದೂ ರಾಜಮ್ಮ ಮಾಡಿದ ಕಾರ್ಯವಾಗಿರಲಿಲ್ಲ. ಆದರೆ ಮನಸ್ಸಿಗೆ ಒಂದು ಆಘಾತ!

ಇದೇಕೆ ಹೀಗೆ, ನೆಲವು ಬೆವರಿದಂತೆ ನೆಲದ ಮೇಲೆಲ್ಲಾ ನೀರು ಎಂದು ತಿಳಿಯುವುದಕ್ಕೆ ರಾಜಮ್ಮನಿಗೆ ಅಕ್ಕಮ್ಮನ ಸಹಾಯವೇ ಬೇಕಾಯಿತು. ಮನೆಯು ಕೆರೆಯ ಬದಿಯ ರಸ್ತೆಯ ಕೆಳಗಿದ್ದುದರಿಂದ ಕೆರೆಯ ನೀರೇ ಅದು ಎಂದು ಅಕ್ಕಮ್ಮ ಹೇಳಿದ್ದು ರಾಜಮ್ಮನ ಹೊಟ್ಟೆಯನ್ನು ತಲುಪಿ ನೋವಿನ ಬೆಂಕಿಯನ್ನು ಹುಟ್ಟುಹಾಕಿತು. ಮನೆಯಲ್ಲೆಲ್ಲಾ ನೀರಿನ ಸಣ್ಣ ಸಣ್ಣ ಹನಿಗಳನ್ನು ಒರೆಸಿ ಒರೆಸಿ ಸಾಕಾಗುತ್ತಿತ್ತು ರಾಜಮ್ಮನಿಗೆ, ನೀರು ತಂಪೆನಿಸುತ್ತಿರಲಿಲ್ಲ.

ಮಗ ಬೆಂಗಳೂರಿನಿಂದ ಬಂದಮೇಲೆ ಮನೆಯನ್ನು ಸೂಕ್ಷ್ಮವಾಗಿ ಗಮನಿಸತೊಡಗಿದ. ಕೆರೆಯ ನೀರಿನ ಮಟ್ಟವು ಮನೆಯ ಗೋಡೆಯ ಎತ್ತರವಿರುವುದನ್ನು ಗಮನಿಸಿ ಮನೆ ಅಂಜಿಕೆಯಾಗತೊಡಗಿತು. ರಾಜಮ್ಮ ಅದೇ ಕಾಲಕ್ಕೆ ಮಗನ ಮದುವೆಯ ವಿಚಾರವನ್ನೂ ಎತ್ತಿದ್ದರಿಂದ ಗೊಂದಲಕ್ಕೆ ಬಿದ್ದ ಮಗ. ಒಪ್ಪಿದ. ಕೊನೆಗೆ ಹುಡುಗಿ ಮತ್ತವರ ಸಂಬಂಧಿಕರು ಮನೆಗೆ ಬಂದು ಹೋದರು. ಹೋಗುವಾಗ ಮಗನ ಬಳಿ ಏನೋ ಹೇಳಿದ್ದು, ಮಗನ ಮುಖ ಕಪ್ಪಿಟ್ಟಿದ್ದು ಗಮನಿಸಿದ್ದಳು ರಾಜಮ್ಮ.

ಅದೇ ದಿನ ರಾಜಮ್ಮನಿಗೆ ಹೃದಯಾಘಾತವಾಗುವುದು ಪ್ರಕೃತಿಗೆ ವಿರೋಧವಿತ್ತೇನೋ, ಹಾಗಾಗಲಿಲ್ಲ. ಸೊಸೆಯೆಂದೇ ಅಂದುಕೊಂಡಿದ್ದ ಹುಡುಗಿ ಈ ಮನೆಗೆ ಬರುವುದಿಲ್ಲವೆನ್ನುವ ಮಾತಿಗಿಂತ ಮಗ ಹೇಳಿದ ಮಾತು ಇನ್ನೂ ಕಠೋರವಾಗಿತ್ತು. ಎರಡೆಕರೆ ಜಮೀನು ಮತ್ತೆ ಮನೆಯನ್ನು ಮಾರಿ ಬೇರೆ ಕಡೆ ಹೋಗೋಣ ಎಂದು ಹೇಳಿದ್ದ ಮಗ. ಕಾರಣ ಜಮೀನು ನೀರಿನಿಂದ ಕೊಳೆತಂತಾಗಿ ಮುಂದೆ ಬೆಳೆಯಾಗಲೀ ಕಳೆಯೂ ಬೆಳೆಯುವುದು ಸಾಧ್ಯವಿಲ್ಲ ಎನ್ನುವುದೇ ಆಗಿತ್ತು. ಯಾವುದೋ ದಿನ ನೀರಿನ ಅಂಶದಿಂದ ಮಣ್ಣಿನ ಗೋಡೆ ಬೀಳುವುದು ಖಚಿತವೆಂದೂ ಮಗನ ವಾದ. ಆ ರಾತ್ರಿ ಮಗ ಸ್ನೇಹಿತನ ಮನೆಗೆ ಹೊರಟ. ಅಲ್ಲಿಂದ ಬೆಂಗಳೂರಿಗಂತೆ!

ತಾನು ೧೦-೧೨ ವರ್ಷಗಳಿಂದ ಕಷ್ಟಪಟ್ಟು ಬೆಳೆಸಿದ ತೋಟ, ಮನೆ, ಅದಕ್ಕಿದ್ದ ಬೆಲೆ ಇದೆಲ್ಲವನ್ನೂ ಒಂದು ಸಣ್ಣ ಕಾಲದಲ್ಲಿ ನೀರಿನ ಗುಳ್ಳೆಯಂತೆ ಮಾಡಿದ ಶಕ್ತಿಯನ್ನು ಮನಸಾರೆ ಶಪಿಸಿದಳು. ಸಾಧ್ಯವೇ ಇರಲಿಲ್ಲ. ಈ ಮನೆ ಈ ಜಮೀನು ಬಿಟ್ಟು ತಾನು ಎಲ್ಲಿಯೂ ಬದುಕುವುದು ಸಾಧ್ಯವೇ ಇಲ್ಲ. ಈ ವಿಷಯ ನಿಚ್ಚಳವಾಗುತ್ತಾ ರಾಜಮ್ಮನ ಮನಸ್ಸಿನಲ್ಲಿ ಮುಂದಿನ ಕ್ರಿಯೆಯ ಸ್ಪಷ್ಟ ಚಿತ್ರಣ ಮೂಡತೊಡಗಿತು.

ಅದೇ ಕೆರೆಯ ಸುತ್ತಲೂ ನಡೆದುಕೊಂಡು ಬಂದಳು ರಾಜಮ್ಮ. ಕಾಲುವೆಯ ಗೇಟುಗಳ ಬಳಿ ಕಟ್ಟಿದ ಕಟ್ಟೆಯನ್ನು ಗುದ್ದಲಿಯಿಂದ ಕೊಚ್ಚಲಾರಂಭಿಸಿದಳು. ಅಂದಿನ ರಾಜಮ್ಮನ ರಾಕ್ಷಸ ಶಕ್ತಿಗೆ ಕೆರೆಯ ಕಟ್ಟೆ ಸಣ್ಣದಾಗುತ್ತಾ ಬಂತು, ನೀರಿನ ಒತ್ತಡಕ್ಕೂ ರಾಜಮ್ಮನ ಕೆಲಸಕ್ಕೂ ನೀರು ಪ್ರವಾಹದಂತೆ ಕಟ್ಟೆಯನ್ನು ಒಡೆದು ಪ್ರವಹಿಸಿತು. ಆ ಪ್ರವಾಹದಲ್ಲಿ ರಾಜಮ್ಮನ ಗುದ್ದಲಿ ತೇಲಿಹೋಯಿತು, ರಾಜಮ್ಮನೂ ಕೊಚ್ಚಿಹೋದಳು.
-
ಸರಕಾರದ ಕಾಮಗಾರಿ ಕಳಪೆಯೆಂದೂ, ಕೆರೆಯ ಕಟ್ಟೆಯೊಡೆದು ತರಕಾರಿ ಮಾರುವ ರಾಜಮ್ಮಳ ಜೀವಾಪಹರಣವಾಯಿತೆಂದೂ ಪೇಪರುಗಳಲ್ಲಿ ಬಂತು. ಪರಿಹಾರವಾಗಿ ಸಿಕ್ಕಿದ ಲಕ್ಷರೂಪಾಯಿಗಳನ್ನು ರಾಜಮ್ಮನ ಹೆಸರಿನಿಂದ ಮಗ ತೆಗೆದುಕೊಂಡು ಬೆಂಗಳೂರು ನಗರದಲ್ಲು ಲೀಸ್ ಮನೆ ಪಡೆದುಕೊಂಡು ಮದುವೆಯಾಗಿ ಸುಖವಾಗಿದ್ದಾನೆ. ಈ ಬಾರಿ ಇನ್ನೂ ಹೆಚ್ಚಿನ ತಂತ್ರಜ್ಞಾನದ ಮೂಲಕ ಕೆರೆಗೆ ಕಟ್ಟೆ ಕಟ್ಟಲಾಗುವುದೆಂದೂ ಪತ್ರಮುಖೇನ ಸಚಿವರು ತಿಳಿಸಿದ್ದಾರೆ..

Tuesday, 16 October 2012

ಅಪ್ಪಚ್ಚಿ ಹೇಳಿದ ಅಪ್ಪನ ಕತೆ- ಭಾಗ ೪ ( ಉರುಳಿ ಕತೆ)


ಇದೇನು ವಿಶೇಷ ಕತೆಯಾಗಲಿಲ್ಲ ನನಗೆ. ಇಂತಹ ಕತೆಗಳು ಗೆಳೆಯರ ನಡುವೆ ಎಷ್ಟೋ ನಡೆದಿದೆ. ಆದರೆ ಆ ಕಾಲಕ್ಕೆ ಅಪ್ಪನ ಧೈರ್ಯ ಮೆಚ್ಚತಕ್ಕದ್ದು. ಚಿಕ್ಕಪ್ಪ ಮನೆಗೆ ಬಂದ ಕೂಡಲೇ ಚಹಾ ಮಾಡಲು ಹೇಳಿ ಒಂದು ತಂಬಾಕುಯುಕ್ತ ಎಲೆ ಅಡಿಕೆಯನ್ನು ಏರಿಸಿದ. ಇದ್ದ ಮದುವೆ ಕಾಗದಗಳು, ಅದೇನೋ ಕರೆಯೋಲೆಗಳು ಎಲ್ಲವನ್ನೂ ನೋಡುತ್ತಾ ಕುಳಿತೆ. ಸ್ವಲ್ಪ ಸಮಯದಲ್ಲೇ ಚಹಾರಾಧನೆಯೂ ನಡೆದು ಉಭಯ ಆತ್ಮಗಳೂ ಶಾಂತಿಯನ್ನು ಹೊಂದಿ ಪುನಃ ಎಲೆ ಅಡಿಕೆಯ ತಟ್ಟೆಯನ್ನು ನೋಡತೊಡಗಿದವು. ಹಾಗೆಯೇ ತೋಟಕ್ಕೆ ಹೊರಟೆವು.
--
ನೀನು ಮದುವೆ ಕಾಗದಗಳನ್ನು ನೋಡುತ್ತಿದ್ದಾಗ ಒಂದು ಕತೆ ಹೇಳಲು ನೆನಪಿಗೆ ಬಂತು ನೋಡು. ಇದು ತುಂಬಾ ಚೆನ್ನಾಗಿರುವ ಕತೆ. ಈಗ ನೆನಪು ಮಾಡಿಕೊಂಡರೂ ಒಳ್ಳೆಯ ನಗೆ ಬರುವಂತಹದ್ದು. ಇದರಲ್ಲಿ ಕೂಡ ತುಂಬಾ ಸ್ವಾರಸ್ಯವಿದೆ. ಅಣ್ಣನಿಗೆ ಅಂದರೆ ದೊಡ್ಡಪ್ಪನಿಗೆ ಆಗಲೇ ಮದುವೆ ನಿಶ್ಚಯವಾಗಿತ್ತು. ದೊಡ್ಡಮ್ಮ ತುಂಬಾ ದೂರದ ಊರಿನವರೇನೂ ಅಲ್ಲ. ವರುಷದ ಹಿಂದೆ ಊರಿನ ದೇವರ ಜಾತ್ರೆಗೆ ಬಂದಿದ್ದ ತಂದೆಯ ಪರಿಚಯದವರ ಮಗಳು ಆಕೆ. ಒಂದೇ ಸಲಕ್ಕೆ ಎಲ್ಲಾ ತೀರ್ಮಾನವಾಗಿ ಇಂತಹ ದಿನ ಮದುವೆ ಎಂದು ನಿಶ್ಚಯವಾಗಿತ್ತು. ಏಪ್ರಿಲ್ ತಿಂಗಳಲ್ಲಿ ಮದುವೆ. ಶಾಲೆಗೆ ರಜೆ, ನಿನ್ನಪ್ಪನ ಹತ್ತನೇ ಕ್ಲಾಸು ಮುಗಿದಿತ್ತು. ಮುಂದೇನು ಎನ್ನುವ ಯೋಚನೆಯಿರಲಿಲ್ಲ. ದೊಡ್ಡಪ್ಪ ಕೃಷಿಯೇ ಮುಖ್ಯವೆಂದಿದ್ದರೂ ಕೂಡ ಆಫೀಸು ಕೆಲಸದ ಆಸೆ ಇಟ್ಟುಕೊಂಡಿದ್ದರು.

ಮದುವೆಗೆ ಮೊದಲು ಕರೆಯೋಲೆ ಕೊಡುವುದಕ್ಕೆಂದು ನಾವು ತಿರುಗಿದ ಊರುಗಳಿಗೆ ಲೆಕ್ಕವಿಲ್ಲ. ಈಗ ಈಮೈಲು, ಫೋನು ಅಲ್ಲದೇ ಬೈಕು ಹಿಡಿದುಕೊಂಡು ಆಮಂತ್ರಣ ಕಳುಹಿಸಬಹುದು ಆದರೆ ಜನರು ಬರುವುದಿಲ್ಲ. ಹಿಂದೆ ನಾವೆಷ್ಟು ಮನೆಗೆ ಹೋಗುತ್ತೇವೋ ಅಷ್ಟು ಜನರು ಗ್ಯಾರಂಟಿಯಾಗಿ ಬರುತ್ತಿದ್ದರು.ಅದೂ ನಮ್ಮ ಮನೆ ಎಂದರೆ ಬಂದೇ ಬರುತ್ತಿದ್ದರು. ದೂರದ ಸಂಬಂಧಿಕರಿಗೆ, ಮನೆಯ ಮಿತ್ರರಿಗೆಲ್ಲಾ ನಾವು ಆಮಂತ್ರಣ ಕೊಡುವುದಿದ್ದರೆ ಹತ್ತಿರದ ನೆಂಟರಿಗೆ, ಹತ್ತಿರದ ಮನೆಯವರಿಗೆಲ್ಲಾ ದೊಡ್ಡಪ್ಪನ ಕರೆಯೋಲೆ. ಹೀಗೇ ಸಂಭ್ರಮ. ಮದುವೆ ಇದು ಎರಡನೆಯದ್ದು ನಾವು ನೋಡುತ್ತಿದ್ದದ್ದು. ಮೊದಲ ಮದುವೆ ಅಕ್ಕನ ಮದುವೆ. ಆಗ ನನಗೆ ೧೧ ಅಥವಾ ೧೨ ವಯಸ್ಸು.

ದೂರದ ಊರುಗಳಿಗೆ ಕಾಗದ ವಿತರಣೆ ಆದಂತೆ ನಮ್ಮ ಕೆಲಸಗಳು ಬೇರೆ ಆಗತೊಡಗಿದವು. ಪೇಟೆಯಿಂದ ಅಕ್ಕಿ, ಬೆಲ್ಲ, ಬೇಳೆ ಮುಂತಾದವುಗಳನ್ನ ತರುವುದು, ತರಕಾರಿ ತರುವುದು, ತೆಂಗಿನಕಾಯಿ ಸುಲಿಯುವುದು ಇದೆಲ್ಲದಕ್ಕೂ ನಾವು ಬಿದ್ದೆವು. ಚಪ್ಪರವನ್ನೂ ಹಾಕಿದ್ದಾಯಿತು. ದಾರಿಯಲ್ಲಿದ್ದ ಮುಳ್ಳು, ಬೇಡದ ಗಿಡಗಳ ಕೈ ಕಾಲು ಕತ್ತರಿಸಿದ್ದೂ ಆಯಿತು. ಮನೆಯ ಅಂಗಳದಿಂದ ತೋಟದ ತನಕವೂ ಸಗಣಿ ಸಾರಿಸಿ, ಕಸ ತರಗೆಲೆ ಬೀಳದಂತೆ ನೋಡಿಕೊಂಡೆವು. ಇದೆಲ್ಲಾ ಆದಮೇಲೆ ಮದುವೆಗೆ ಎರಡು ದಿನ ಮಾತ್ರ ಬಾಕಿ ಇದ್ದಿತು.

ನಮ್ಮೂರು ಎಂದಾದಮೇಲೆ ಹಸರುಬೇಳೆ ಪಾಯಸ ಆಗಲೇಬೇಕು. ಈ ಹಸರನ್ನು ಮೊದಲು ಚೆನ್ನಾಗಿ ಹುರಿಯಬೇಕು, ಇಲ್ಲವಾದಲ್ಲಿ ಪಾಯಸಕ್ಕೆ ಮೆರುಗು ಇಲ್ಲ, ರುಚಿಯೂ ಇಲ್ಲ. ಎಷ್ಟು ಪ್ರಮಾಣದಲ್ಲಿ ಹುರಿಯಬೇಕು? ಹೇಗೆ ಹುರಿಯಬೇಕು ಎಂಬುದೆಲ್ಲಾ ನಮ್ಮಲ್ಲಿ ಅಳತೆ ಮಾಪನಗಳಿದ್ದಾವೆ. ಈ ತಾಮ್ರದ ಉರುಳಿ ಎನ್ನುವ ಪಾತ್ರೆ ನಮ್ಮ ಮನೆಯಲ್ಲಿದ್ದ, ಈ ಹಸರುಬೇಳೆ ಹುರಿಯುವುದಕ್ಕೇ ಇದ್ದಂತಹ ಪಾತ್ರೆ. ಅಮ್ಮ ಮತ್ತೆ ಅಕ್ಕ ಇಡೀ ದಿನ ಮನೆಯಲ್ಲಿ ಹುಡುಕಾಡಿ ಕೊನೆಗೂ ಸಿಗಲಿಲ್ಲ. ಅದೇ ಸಂಜೆ ಅಪ್ಪನಲ್ಲಿ ಹೇಳಿದಾಗ, ಮೊನ್ನೆಯ ಸಮಾರಂಭಕ್ಕೆ ನಮ್ಮ ತೋಟದ ಆಚೆಮನೆಯ ಸರಸಕ್ಕ ತೆಗೆದುಕೊಂಡು ಹೋಗಿದ್ದಾರೆ ಎನ್ನುವ ನೆನಪು ಮಾಡಿಕೊಟ್ಟರು. ಈಗ ಏನು ಮಾಡುವುದು? ಆ ಪಾತ್ರೆಯಿಲ್ಲದೇ ಪಾಯಸಕ್ಕೆ ಹುರಿಯಲಾಗುವುದಿಲ್ಲ. ಪಾಯಸವಿಲ್ಲದೇ ಊಟವಿಲ್ಲ. ಊಟವಿಲ್ಲದೇ ಮದುವೆಯಿಲ್ಲ. ಕೊನೆಗೆ ನನ್ನನ್ನೂ ನಿನ್ನಪ್ಪನನ್ನೂ ಕರೆದು ಪಾತ್ರೆಯನ್ನು ತರಲು ಕಳುಹಿಸಿದರು.

ಈಗ ನಿಮಗೆಲ್ಲಾ ಕಂಪೆನಿಗಳಲ್ಲಿ ಟಾರ್ಗೆಟ್ ಕೊಡುತ್ತಾರಲ್ಲವೇ? ಹಾಗೆಯೇ ಆಗಿತ್ತು ಅದು. ನಾವು ಆ ದಿನದ ರಾತ್ರಿಯೊಳಗೆ ಆ ಪಾತ್ರೆಯನ್ನು ತರಬೇಕಿತ್ತು. ದೊಡ್ಡ ಕೆಲಸವೇ ಅಲ್ಲವೆಂದು ಹೊರಟೆವು.

ಸರಸಕ್ಕನ ಮನೆ ಎನ್ನುವುದು ದೊಡ್ಡ ಅರಮನೆಯಂತೆ. ಪಾಳು ಬಿದ್ದ ಅರಮನೆಯಂತೆ ಇದ್ದಿತ್ತು. ಈಗಲೂ ಅದರ ಗೋಡೆಗಳನ್ನು ನೋಡು. ಆಗಿನ ಕಾಲಕ್ಕೆ ದೊಡ್ಡ ಹೆಂಚಿನ ಮನೆಯದು. ಅವರ ತೋಟವೂ ಅಷ್ಟೇ ದೊಡ್ಡದು. ನಮ್ಮ ತೋಟದ ಮೂರರಷ್ಟು ಆ ಕಾಲಕ್ಕೆ ಇತ್ತು ಅವರಿಗೆ. ತೋಟ ನೋಡುವುದಕ್ಕೆ ಯಾರೂ ಇರಲಿಲ್ಲ. ಗಂಡ ಹೆಂಡತಿ ಇಬ್ಬರೇ ಆ ಮನೆಯಲ್ಲಿ ಸಧ್ಯದ ವಾಸ. ಆ ತೋಟದ ಕೆಲವು ತೆಂಗಿನ ಮರದ ಕಾಯಿಗಳಲ್ಲಿ, ಎಳನೀರಿನಲ್ಲಿ, ಪೇರಳೆ ಮರದ ಪೇರಳೆಗಳಲ್ಲಿ, ಹಲಸಿನಕಾಯಿಗಳಲ್ಲಿ ಆ ಕಾಲಕ್ಕೆ ನನ್ನ ಮತ್ತೆ ನಿನ್ನಪ್ಪನ ಹೆಸರೇ ಬರೆದಿತ್ತೇನೋ. ಹೆಚ್ಚಿನವು ನಮ್ಮ ಹೊಟ್ಟೆಯಲ್ಲೇ ಕರಿಗಿದವುಗಳು.

ಸರಸಕ್ಕ ತುಂಬಾ ಪಾಪದವರು. ತುಂಬಾ ಪ್ರೀತಿ ನಮ್ಮ ಮೇಲೆ. ಕರೆದು, ಉಂಡೆಗಳನ್ನೋ, ಬೆಳಗ್ಗಿನ ತಿಂಡಿಗಳನ್ನೋ ನಮಗೆ ಕೊಡದಿದ್ದರೆ ಸಮಾಧಾನವಿಲ್ಲ ಅವರಿಗೆ. ಸಧ್ಯದಲ್ಲೇ ಮಗಳ ಮಗನಿಗಾಗಿ ಏನೋ ಪೂಜೆ ಮಾಡಿಸಿದ್ದರು ಮನೆಯಲ್ಲಿ. ಆ ಪೂಜೆಯ ಊಟಕ್ಕಾಗಿ ಪಾತ್ರೆಯನ್ನು ತೆಗೆದುಕೊಂಡು ಹೋಗಿದ್ದರು. ಈಗ ನಮ್ಮ ಉದ್ದೇಶ ಆ ಪಾತ್ರೆಯನ್ನು ಕೇಳಿ ಪುನಃ ತರುವುದಾಗಿತ್ತು.

ಸುಮಾರು ಆರೂ ಮುಕ್ಕಾಲಿಗೆ ಅವರ ಮನೆಗೆ ಬಂದರೆ ಆಶ್ಚರ್ಯ ಕಾದಿತ್ತು. ಮನೆಗೆ ದೊಡ್ಡ ಬೀಗ ನಮ್ಮನ್ನು ಅಣಕಿಸಿ, ಈ ಕೆಲಸವೂ ಸುಲಭವಲ್ಲ ಮಕ್ಕಳೇ ಎಂದಿತು.  ಮನೆಯಲ್ಲಿ ಯಾರೂ ಇಲ್ಲದಂತೆ ಇಬ್ಬರೂ ಬೇರೆ ಊರಿಗೇ ಹೋಗಿರಬೇಕು ಎನಿಸಿತು. ಪುನಃ ಮನೆಗೆ ಹೋಗಿ ನಮ್ಮ ದಿಗ್ವಿಜಯದಲ್ಲಿ ಸೋಲಾಯಿತು ಎನ್ನಲು ನಮಗೆ ಸಾಧ್ಯವಿರಲಿಲ್ಲವೇನೋ? ಆಗ ನಿನ್ನಪ್ಪನಿಗೆ ಪ್ರಳಯಾಂತಕ ಉಪಾಯ ಬಂತು. ಆ ಮನೆಯ ಹಿಂದಿನಿಂದ ಒಂದು ಮಣ್ಣಿನ ದಿಬ್ಬವಿತ್ತು. ಅಲ್ಲಿಂದ ಎರಡು ಕೋಲುಗಳನ್ನಿಟ್ಟು ಮನೆಯ ಮಾಡನ್ನೇರುವುದು. ಮಾಡಿನ ಹಂಚುಗಳನ್ನು ತೆಗೆದು ಒಳಗಿಳಿಯುವುದು. ಇಳಿದ ಮೇಲೆ ಪಾತ್ರೆಯನ್ನು ಹುಡುಕಿ ಕಿಟಕಿಯ ಮೂಲಕ ಹೊರಗೆ ಕೊಡುವುದು. ನಂತರ ಪುನಃ ಬಂದ ದಾರಿಯಲ್ಲಿಯೇ ವಾಪಸ್ಸು ಬರುವುದು ಈ ಪ್ಲಾನಾಗಿತ್ತು.

ನಾನು ಸುಮ್ಮನುಳಿದೆ. ನಿನ್ನಪ್ಪ ಹೇಳಿದರೆ ಮುಗಿಯಿತು. ನಾನು ಆಗುವುದಿಲ್ಲ ಎಂದರೆ ಒಬ್ಬನೇ ಹೋಗಿಯಾದರೂ ಪಾತ್ರೆ ತರುವುದು ಖಚಿತ. ಈಗಲೂ ಅಷ್ಟೆ. ಮೊಂಡು ಎಂದರೆ ಮೊಂಡು. ಬಿಡು. ಹೀಗೇ ಮೊದಲ ಪ್ರಯತ್ನ ಫಲಕಾರಿಯಾಯಿತು. ನಿನ್ನಪ್ಪ ತುಂಬಾ ಮುತುವರ್ಜಿಯಿಂದ ಮನೆಯ ಮಾಡನ್ನೇರಿ ಹಂಚನ್ನು ತೆಗೆದು ಒಳಗಿಳಿದ. ಆಗ ಮನೆಯ ಹೊರಗಿನಿಂದ ಬೀಗ ತೆಗೆದ ಸದ್ದಾಯಿತು.

ಕ್ಷಣಕ್ಕೆ ಕಳವಳಗೊಂಡರೂ ಸಾವರಿಸಿ ನಾನು ಮನೆಯ ಎದುರಿಗೆ ಓಡಿದೆ. ಸರಸಕ್ಕ ನನ್ನನ್ನು ಕಂಡ ಕೂಡಲೇ ಏನಾಯ್ತೋ, ಈ ಹೊತ್ತಲ್ಲಿ ಎಲ್ಲಿಗೆ ತಿರುಗಾಟ ಎಂದರು. ನಾನು ಕೂಡಲೇ ಉರುಳಿ ಬೇಕಾಗಿತ್ತು. ಮನೆಯಲ್ಲಿ ಅಮ್ಮ ಕಳುಹಿಸಿದ್ದಾರೆ ಎಂದೆ. ಸರಸಕ್ಕ ಕೂಡಲೇ ತನ್ನಿಂದ ದೊಡ್ಡ ತಪ್ಪಾಗಿದೆ ಎಂದುಕೊಳ್ಳುತ್ತಾ ಅಡುಗೆಕೋಣೆಗೆ ಹೋಗಿ, ಉರುಳಿ ತೆಗೆದುಕೊಂಡು ಬಂದು ಕೈಯ್ಯಲ್ಲಿ ಕೊಟ್ಟರು. ಹಾಗೆಯೇ ಒಳಗೆ ಇದ್ದ ಬಾಳೆಹಣ್ಣುಗಳನ್ನೂ ಕೊಟ್ಟು ಗಂಡನಲ್ಲಿ ನನ್ನನ್ನು ನಮ್ಮ ತೋಟದ ವರೆಗೆ ಬಿಟ್ಟು ಬರಲು ಕಳುಹಿಸಿದರು.

ನಾನು ಮಾತನಾಡುವುದಕ್ಕೆ ಅವಕಾಶವೇ ಕೊಡಲಿಲ್ಲ. ನನ್ನನ್ನು ತೋಟದವರೆಗೆ ಬಿಟ್ಟು ಸರಸಕ್ಕನ ಗಂಡ ಹೋದರು. ನಾನು ಮನೆಗೆ ಬಂದು ಉರುಳಿಯನ್ನು ಕೊಟ್ಟೆ. ಉರುಳಿ ನೋಡಿದ ಖುಷಿಯಿಂದ ಏನೂ ಕೇಳಲಿಲ್ಲ. ಅಣ್ಣ ಅಲ್ಲೆಲ್ಲೋ ಹೊರಗಿದ್ದಾನೆ ಎಂದು ನಾನು ತೋಟದ ದಾರಿಯಲ್ಲಿ ಪುನಃ ಬಂದೆ. ಆ ದಿನ ಸುಮಾರು ಎರಡು ಘಂಟೆ ಬಿಟ್ಟು ನಿನ್ನಪ್ಪ ಮನೆಗೆ ಬಂದ. ಯಾರೂ ಏನೂ ಕೇಳಲಿಲ್ಲವಾದರೂ ನಾನು ಹೇಗೆ ಬಂದೆ ಎಂದು ಕೇಳಲೇ ಬೇಕಿತ್ತು.

ಅಪ್ಪ ಒಳಕ್ಕಿಳಿದ ಕೂಡಲೇ ಸರಸಕ್ಕ ಬಂದುದರಿಂದ ನಾನು ಮನೆಯ ಎದುರಿಗೆ ಬಂದೆ. ಅದೇ ಸಮಯಕ್ಕೆ ಅಪ್ಪ ಮನೆಯ ಅಟ್ಟದಿಂದ ಮೆಲ್ಲನಿಳಿದು ಅಡುಗೆಯ ಕೋಣೆಯ ಪಕ್ಕದ ದಾಸ್ತಾನು ಕೋಣೆಗೆ ಬಂದು ನಿಂತಿದ್ದ. ಈಗಿನ ಹಾಗೆ ಕರೆಂಟಾಗಲೀ, ಬೆಳಕಾಗಲೀ ಅಷ್ಟು ಇಲ್ಲದುದರಿಂದ ಅಪ್ಪನನ್ನು ಕಂಡುಹಿಡಿಯುವುದು ಸಾಧ್ಯವಿಲ್ಲ. ಸರಸಕ್ಕನ ಅಡುಗೆಯಾಗಿ, ಊಟವಾಗಿ ನಂತರ ಹೊರಗಡೆ ಹೋದ ಸಂದರ್ಭ ನೋಡಿ, ನಿನ್ನಪ್ಪ ಅಡುಗೆಕೋಣೆಯ ಬಾಗಿಲಿಂದ ಹೊರಬಿದ್ದಿದ್ದ. ಅದೂ ಕಾಣದ ರಾತ್ರಿಯಲ್ಲಿ ತೋಟದ ಹೊಂಡಗಳಲ್ಲಿ ಬಿದ್ದೆದ್ದು ಬರುವಷ್ಟರಲ್ಲಿ ಸುಮಾರು ಹೊತ್ತಾಗಿತ್ತು. ಆದರೂ ಯಾರಿಗೂ ತಿಳಿಯಲಿಲ್ಲ.

ಮರುದಿನ ನಮ್ಮ ಅಪ್ಪ ಹೇಳುತ್ತಿದ್ದರು. ನಿನ್ನೆ ರಾತ್ರಿ ಯಾರೋ ಸರಸಕ್ಕನ ಮನೆಗೆ ಕಳ್ಳರು ಬಂದಿದ್ದಾರೆ. ಪುಣ್ಯಕ್ಕೆ ಏನೂ ತೆಗೆದುಕೊಳ್ಳಲಾಗಲಿಲ್ಲ. ಪುಣ್ಯಕ್ಕೆ ಸರಸಕ್ಕ ಚಿನ್ನವೆಲ್ಲಾ ಬ್ಯಾಂಕಿನಲ್ಲಿಟ್ಟಿದ್ದು ಒಳ್ಳೆದಾಯಿತು ಎಂದು. ನಾವೇ ಇದಕ್ಕೆಲ್ಲ ಕಾರಣ ಎಂದು ಯಾರಿಗೂ ಗೊತ್ತಿಲ್ಲ ಬಿಡು.

(ಉರುಳಿ: ಬಾಣಲೆಯಾಕಾರದ ಒಂದು ಪಾತ್ರೆ. ತಾಮ್ರದ್ದು).

Sunday, 14 October 2012

ಕಥೆ- ರಾಮನ ವೇಷ


ಸುತ್ತಮುತ್ತಲ ಮೂರು ನಾಲ್ಕು ಹಳ್ಳಿಗಳ ಮಧ್ಯೆ ಅದೊಂದು ಪುಟ್ಟ ಊರು. ಎಲ್ಲಾ ಹಳ್ಳಿಗಳ ಹೃದಯವದು. ಬರೀ ೩೦ ಮನೆಗಳು ಸ್ವಲ್ಪವೇ ಜಮೀನು ಹೊಂದಿರುವ ಜನರು ಒಬ್ಬರಿಗೊಬ್ಬರು ಬೆರೆತು ರಾಮಪುರವಾಗಿತ್ತು ಹಳ್ಳಿ. ಸಣ್ಣ ದೇವರ ಗುಡಿಯೊಂದು, ಎದುರೇ ಸಣ್ಣ ಕೆರೆ ಹಿಂದಿನಿಂದ ಬೆಟ್ಟದೊಂದಿಗೆ ಕಾಡು. ಆಲೋಚಿಸಿದರೆ ಸಣ್ಣಮಕ್ಕಳು ಚಿತ್ರ ಬಿಡಿಸಿದಂತೆ ತೋರುತ್ತಿತ್ತು.

ಪೇಟೆಯಲ್ಲಿ ಕೋಳಿಅಂಗಡಿ ಇಟ್ಟ ತಿಮ್ಮನ ಮನೆ ಮೊದಲ್ಗೊಂಡು ರಾಮಣ್ಣನ ಮನೆ ದಾಟಿದರೆ ಟೈಲರಣ್ಣನ ಮನೆ. ನಂತರ ಒಂದೆಕರೆಯಷ್ಟು ಮಳೆನೀರಾವರಿ ಜಮೀನು. ಅದಾಗಿ ಪುನಃ ಮನೆಗಳು. ತಿಮ್ಮನೂ ರಾಮಣ್ಣನೂ ಟೈಲರಣ್ಣನೂ ನಮಗೆ ಪ್ರಧಾನವಾದ್ದರಿಂದ ಉಳಿದವರ ಹೆಸರು ಬೇಡವೆನಿಸುತ್ತದೆ. ಅಂದಹಾಗೆ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುವ ಕೃಷ್ಣಪ್ಪನ ಮನೆಯೂ ತಿಮ್ಮನ ಮನೆಯಿಂದ ಒಂದೈದು ಫರ್ಲಾಂಗ್ ದೂರದಲ್ಲಿದೆ. ಹರಟೆಹೊಡೆಯುವುದರಲ್ಲೇ ನಿಸ್ಸೀಮನೆನಿಸಿದ ತಿಮ್ಮ ಮತ್ತೆ ಟೈಲರಣ್ಣರನ್ನು ದಿನವೂ ಭೇಟಿಯಾಗುತ್ತಾನೆ ರಾಮಣ್ಣ. ಅದೇನಕ್ಕೋ ಹಾಗಿರುವ ಸೆಳೆತ ಅವರ ಮಧ್ಯೆ ಇದೆ.
--
ಪಕ್ಕದ ಹಳ್ಳಿಯ ವಿಜೃಂಭಣೆಯ ಜಾತ್ರೆಯ ಬಗ್ಗೆ ಎಲ್ಲರೂ ಹೊಗಳಿದ್ದೇ ಹೊಗಳಿದ್ದು. ಜಾತ್ರೆಗಿಂತಲೂ ಪ್ರಧಾನವಾಗಿ ಆಕರ್ಷಿಸಿದ್ದು ಅಲ್ಲಿನ ಸಂತೆ ಮತ್ತೆ ಕಾರ್ಯಕ್ರಮಗಳು. ಊರದೇವಿಯ ಜಾತ್ರೆ ಅದೂ ಎರಡುವರ್ಷಕ್ಕೊಮ್ಮೆ ನಡೆಯುವುದು. ಇತ್ತೀಚೆಗೆ ಸರ್ಕಾರದ ಸರ್ಪಕಾವಲಿನಲ್ಲಿ ಕುರಿ ಕೋಣಗಳನ್ನು ಬಲಿ ಕೊಡದಿದ್ದರೂ ಉಳಿದೆಲ್ಲಾ ಆಧುನಿಕ ಕಾರ್ಯಕ್ರಮಗಳು ಸಾಂಗವಾಗಿ ನೆರವೇರಿ ಕಳೆದುಕೊಂಡವರು ಅಷ್ಟನ್ನೂ ಕಳೆದುಕೊಂಡರೆ ಗಳಿಸಿದವರು ಮುಂದಿನ ಎರಡು ವರ್ಷಕ್ಕೆ ಜೀವನ ಸಾಗಿಸಬಹುದು.

ನೆಮ್ಮದಿಯಿಂದ ನಿಟ್ಟುಸಿರು ಬಿಡುವ ಕಾಲಕ್ಕೇ ಜಾತ್ರೆಯಾಗಿದ್ದು ಎಲ್ಲಾ ಹಳ್ಳಿಯ ಗ್ರಾಮಸ್ಥರನ್ನು ಖುಷಿಗೊಳಿಸಿತ್ತು. ಹರಕೆಯನ್ನು ತೀರಿಸಲೆಂದು ತೆಗೆದಿಸಿದ ಅಷ್ಟೂ ಹಣವನ್ನು ಉಪಯೋಗಿಸಿ ಮೆರೆದಾಡಿದರು ಜಾತ್ರೆಯಲ್ಲಿ. ಪೇಟೆಯಲ್ಲಿರುವವರೂ ಹಳ್ಳಿಗೆ ಬಂದು ಒಂದೈದಾರು ದಿನ ವ್ಯಯಿಸಿ ಪುನಃ ಪೇಟೆಗೆ ನಡೆದರು. ಯಾವುದೋ ಸಂಭ್ರಮದ ಕನಸು ಸೂರ್ಯನ ಬೆಳಕಿನ ಕಿರಣಗಳಿಗೆ ಎಚ್ಚರವಾದ ಹಾಗೆ ಪುನಃ ಮೌನಕ್ಕೆ ಜಾರಿತು.

ಇದೆಲ್ಲಾ ಜಾತ್ರೆಯ ವ್ಯವಹಾರಗಳು ರಾಮಣ್ಣನ ತಲೆಯ ಮೂಲೆಯಲ್ಲಿ ಇದ್ದರೂ ಪ್ರಧಾನವಾಗಿ ಕುಣಿಯತೊಡಗಿದ್ದು ಆ ಯಕ್ಷಗಾನ. ಎಂತಹ ಆಟವದು? ಆ ಭೀಮ ಆ ಧುರ್ಯೋಧನ ಆ ಭಾಗವತರ ಹಾಡು ಆ ಚೆಂಡೆಯ ಅಬ್ಬರ. ಇದರ ಬಗ್ಗೆ ಪೇಪರಿನ ಮೂಲೆಯಲ್ಲೂ ಪ್ರಕಟವಾಗಿ ಮತ್ತಷ್ಟು ತುಪ್ಪ ಸುರುವಿದಂತಾಗಿತ್ತು. ಹಳ್ಳಿಯಲ್ಲಿ ಎಂತಹ ಕಲೆಯ ಬೀಜ ಅಡಗಿದೆ? ಎಂತಹ ಅಧ್ಬುತ ಪ್ರತಿಭೆಗಳಿದ್ದಾವೆ ಎಂದೆಲ್ಲಾ ಚಿತ್ರಸಮೇತ ಪತ್ರಿಕೆಯವರು ಪ್ರಕಟಿಸಿದ್ದರು. ಈ ಚರ್ಚೆ ಸುಮಾರು ದಿನದ ವರೆಗೆ ಮಿತ್ರರಲ್ಲೂ ಸಾಗಿ ಬಂದಿತ್ತು.
---
ಸೂರ್ಯ ಮುಳುಗಿದನೋ, ಕರುಗಳಿಗೆ ಮೇವಾಯಿತೋ ಗೊತ್ತಿಲ್ಲ. ರಾಮಣ್ಣಾದಿ ಮಿತ್ರರು ಹರಟಲು ಕಟ್ಟೆಗೆ ಹಾಜರು. ಯಾವುದೇ ವಿಷಯವಿದ್ದರೂ ಇಂದೇ ಚರ್ಚೆಯಾಗಿ ಮುಕ್ತಾಯವಾಗುವವರೆಗೂ ಒಂದು ಕಟ್ಟು ಬೀಡಿ, ಒಂದಷ್ಟು ಎಲೆ ಅಡಕೆ ಬಿಟ್ಟರೆ ಬೇರೆ ವಿಷಯವಿಲ್ಲ. ಇಂದಿನ ಮುಖ್ಯವಾದ ವಿಚಾರ ರಾಮಪುರದ ಜಾತ್ರೆಯಾಗಿತ್ತು. ಜಾತ್ರೆ ಹೇಗಾದರೂ ಆಗಲಿ, ಸಂತೆ ಎಷ್ಟಾದರೂ ಬರಲಿ, ಪಕ್ಕದ ಹಳ್ಳಿಯ ವೈಭವದ ಯಕ್ಷಗಾನ ಮರೆಸುವ ಆಟವೊಂದು ಇಲ್ಲಿ ಆಗಲೇ ಬೇಕು ಎನ್ನುವ ಸರ್ವಾನುಮತದ ಅಭಿಪ್ರಾಯ.

ಹೌದು. ತೀರ್ಮಾನವೇನೋ ಆಯಿತು. ಯಾವ ಪ್ರಸಂಗ ಯಾರು ಪಾತ್ರಧಾರಿಗಳು?
ಹೆಸರೂ ರಾಮಣ್ಣ, ಊರು ರಾಮಪುರವಾದ್ದರಿಂದ ರಾಮಾಯಣದ ಯಕ್ಷಗಾನವನ್ನೇ ಮಾಡುವುದು ಎಂದು ರಾಮಣ್ಣನ ಅಂಬೋಣ. ಉಳಿದ ಮಿತ್ರರು ಸಮ್ಮತಿ ಸೂಚಿಸಿದರು. ಅಂತೂ ರಾಮಾಯಣದ ಯಾವ ಭಾಗವೆನ್ನುವುದು ಸುಲಭವಾಗಿ ನಿರ್ಣಯವಾಗದೇ ಹಾಗೇ ಉಳಿದಿತ್ತು. ತೀರ್ಮಾನಿಸುವ ವಿಚಾರವನ್ನೂ ರಾಮಣ್ಣನಿಗೇ ಬಿಟ್ಟಿ ಕೈತೊಳೆದುಕೊಂಡರು.

ತಲೆಯೊಳಗೆ ಹುಳವೊಂದು ಕೊರೆದಂತೆ ರಾಮಣ್ಣನಿಗೆ ದಿನವೂ ರಾಮಾಯಣ ಕಾಡತೊಡಗಿತು. ರಾಮ ಕಾಡಿಗೆ ಹೋದ,ವಾಲಿಯನ್ನು ಕೊಂದ, ಸೇತುವೆ ಕಟ್ಟಿದ, ರಾವಣನನ್ನೂ ಕೊಂದ ಪುನಃ ಅಯೋಧ್ಯೆಗೆ ಬಂದು ರಾಜ್ಯವಾಳಿದ ಎಂಬಷ್ಟು ವಿಷಯ ಸಂಪತ್ತಿನ ಹೊರತು ಜಾಸ್ತಿ ವಿಶ್ಲೇಷಣೆ ರಾಮಣ್ಣನಿಗೂ ಉಳಿದವರಿಗೂ ಇರಲಿಲ್ಲ. ಜೊತೆಗೆ ಈ ಯಕ್ಷಗಾನದಲ್ಲಿ ಏನಾದರೂ ಜಾಸ್ತಿ ಹೆಸರು ಮಾಡಬೇಕಿದ್ದರೆ ಸ್ವಲ್ಪ ಜಾಸ್ತಿ ಮಾತನಾಡಬೇಕು. ರಾಮಾಯಣವನ್ನು ಓದಲೇಬೇಕು ಎನಿಸತೊಡಗಿತು.

ಇದು ಎರಡನೇ ಸಲ ರಾಮಣ್ಣ, ಶಾಸ್ತ್ರಿಗಳ ಮನೆಗೆ ಹೋಗುತ್ತಿರುವುದು. ಮೊದಲ ಬಾರಿ, ಹೆಂಡತಿ ಮತ್ತೆ ಇವನ ನಡುವಿನ ಸಮಸ್ಯೆಯ ಬಗೆಗೊಂದು ತೀರ್ಮಾನ ಕೊಟ್ಟವರು ಇದೇ ಶಾಸ್ತ್ರಿಗಳು. ಈಗ ರಾಮಾಯಣದ ಪುಸ್ತಕವೋ ಅಲ್ಲ ಅದಕ್ಕಿಂತ ಹೆಚ್ಚಿನ ಮಾಹಿತಿಯನ್ನು ತಿಳಿಯುವುದಕ್ಕೆ ರಾಮಣ್ಣ ಬಂದಿದ್ದು. ಹಾಗೇ ಒಂದು ಪುಸ್ತಕವನ್ನೂ ತೆಗೆದುಕೊಂಡು ವಾಪಸ್ಸಾದ ರಾಮಣ್ಣ. ಆ ದಿನದಿಂದ ಶುರುವಾಗಿ ಮೂರ್ನಾಲ್ಕು ದಿನ ರಾಮಣ್ಣನ ಮನೆಯಲ್ಲಿ ರಾತ್ರಿ ಎರಡು ಘಂಟೆಯವರೆಗೂ ಬೆಳಕು ಇರುತ್ತಿತ್ತು.
---
ಅದೀಗ ಇಪ್ಪತ್ತಮೂರು ತುಂಬುತ್ತಿತ್ತು. ಸ್ವಲ್ಪ ಓದು ಶಾಲೆಯ ಮೆಟ್ಟಿಲಿನ ಲೆಕ್ಕವನ್ನು ಕಲಿಸಿತ್ತು ಅವನಿಗೆ, ಕಾಲೇಜಿನ ಮೆಟ್ಟಿಲು ಲೆಕ್ಕಕ್ಕೇ ಸಿಗಲಿಲ್ಲ. ಎರಡು ಎಕರೆ ಮಳೆಗಾಲದ ಜಮೀನಿನ ಜೊತೆಗೆ ಮನೆಯಲ್ಲಿ ತಕ್ಕಮಟ್ಟಿಗೆ ಚೆನ್ನಾಗಿದ್ದ ಹೈನುಗಾರಿಕೆ ಅವನ ಓದನ್ನು ಮೊಟಕುಗೊಳಿಸಿ ತಿರುಗಾಟಕ್ಕೆ ಉತ್ತೇಜಕವಾಗಿತ್ತು. ಬೆಂಗಳೂರಿಗೆ ಹೋಗಬೇಕು ಎನ್ನುವ ಅಚಲವಾದ ಆಸೆ ಮೊಳಕೆಯೊಡೆದು ಬೇರೂರಿ ರಾಮಣ್ಣ ಬೆಂಗಳೂರಿಗೆ ಹೊರಟ.

ಬೆಂಗಳೂರಿನ ಟ್ರೈನು ಇಳಿದದ್ದೇ ಜನರ ಮುಖ ಪರೀಕ್ಷೆಗೆ ತೊಡಗುತ್ತಿದ್ದನವನು.ಇವನು ಹೊಸಬನೆಂದು ಬೆಂಗಳೂರಿಗೆ ಹೇಗೆ ಅರಿವಾಗಬೇಕು? ತನ್ನ ಹಸಿವೆ, ತನ್ನ ಭೀಕರತೆ ಎಲ್ಲವನ್ನೂ ಮೊದಲ ದಿನವೇ ತೋರಿಸಿತ್ತು. ಎಂತವರನ್ನೂ ಮರುಳುಗೊಳಿಸುವ ಬೆಂಗಳೂರಿನ ಸೆಳೆತಕ್ಕೆ ಯಾರಾದರೇನು? ಬೆಳಗ್ಗಿನ ಚಳಿಯನ್ನು ತಾಳಲಾರದೇ ಕಾಫಿ ಕುಡಿದು, ಒಂದು ಸಿಗರೇಟನ್ನು ಗಮ್ಮೆನ್ನಿಸುತ್ತಿದ್ದಾಗ ತನ್ನನ್ನು ಯಾರೂ ಗಮನಿಸುವುದಿಲ್ಲ ಎಂದು ಬೇಗನೇ ಅರ್ಥಮಾಡಿಕೊಂಡ. ಒಂದೆರಡು ತಿಂಗಳಾಗುವಷ್ಟರಲ್ಲಿ ಹೇಗೋ ಬೆಂಗಳೂರು ಇವನಿಗೆ ಹೊಂದಿಕೊಂಡು ಬಿಟ್ಟಿತು.

ಸುಮಾರು ಐದು ತಿಂಗಳಾದಮೇಲೆ ಮನೆಗೆ ಬರುತ್ತಿರುವನನ್ನು ಮೊದಲಿನ ಉತ್ಸಾಹದಲ್ಲಿ ಹಳ್ಳಿ ಸ್ವೀಕರಿಸಲಿಲ್ಲ. ಅದೇನೋ ದೂರದ ನೆಂಟಸ್ಥಿಕೆಯವರೇನೋ ಹಳ್ಳಿಗೆ ಬಂದಂತೆ ಎನಿಸಿತು. ಅಮ್ಮನ ಪೇಲವ ಮುಖ, ಅಪ್ಪನ ಕೆಮ್ಮು ಎರಡನ್ನೂ ಬೆಂಗಳೂರಿನ ಅಮಲಿನಲ್ಲಿ ಅಲ್ಲಗಳೆದ. ಹಾಲು ಕುಡಿಯದೇ ಮಾರಿದ್ದೇ ಅಮ್ಮನ ಕೃಶ ಶರೀರಕ್ಕೆ ಕಾರಣ, ಹೆಚ್ಚು ತಿರುಗಿದ್ದೇ ಅಪ್ಪನ ಕೆಮ್ಮಿಗೆ ಕಾರಣ ಎಂದು ತನ್ನ ಸೂತ್ರಗಳನ್ನೂ ಪ್ರಯೋಗಿಸಿದ. ಹಾಗೇ ಸಮಯ ಸುಮ್ಮನಿರಲಿಲ್ಲ, ಬಂದ ಎರಡೇ ತಿಂಗಳಿನಲ್ಲಿ ಅಪ್ಪನನ್ನು ಯಾವುದೋ ಕಾಯಿಲೆಯ ರಸೀದಿ ನೀಡಿ ಇವನ ದುಡಿದ ಹಣವನ್ನು ಬೊಜ್ಜಕ್ಕೆ ಖರ್ಚು ಮಾಡಿಸಿತು.

ಸ್ವಲ್ಪ ಅನಾಥನಾದ ರಾಮಣ್ಣನಿಗೆ ಬೇರೇನೂ ತೋಚದೇ ಇದ್ದುದಕ್ಕೇ ಮದುವೆಯಾದ. ಅಮ್ಮನ ಒತ್ತಾಯಕ್ಕೆಂದು ಊರವರ ಬಳಿ ಹೇಳಿಕೊಂಡ. ಹೀಗೇ ಬಂದವಳು ಗೌರಿ. ಮೂರನೇ ಕ್ಲಾಸು ಓದಿದರೂ ದನಕರುಗಳ ಆರೈಕೆ, ಸಣ್ಣ ಪುಟ್ಟ ಕಾಯಿಲೆಗಳಿಗೆ ಸ್ವಯಂ ವೆಟರ್ನರಿ ಡಾಕ್ಟರು. ಕೆಲವೇ ತಿಂಗಳುಗಳಲ್ಲಿ ಹಳ್ಳಿಗೆ ಗೌರಕ್ಕ ಅಥವಾ ಗೌರಮ್ಮನಾಗಿ ಪ್ರಸಿದ್ಧಳೂ ಆದಳು. ಇವನ ತಿರುಗಾಟದ ಜ್ವರಕ್ಕೆ ತಕ್ಕಮಟ್ಟಿನ ಮದ್ದು ಕೊಡಬಲ್ಲಳೂ ಆದ್ದರಿಂದ ಒಂದೆರಡುವರ್ಷ ಸುಖವಾಗಿದ್ದರು ಎಂಬಲ್ಲಿಗೆ ಕತೆಯ ಪ್ರಾರಂಭ.

ಇದ್ದಕಿದ್ದಂತೇ ರಾಮಣ್ಣ ಬದಲಾಗುತ್ತಾ ಬಂದ. ಮದುವೆಗೂ ಮೊದಲು ಅವನ ವ್ಯಕ್ತಿತ್ವ ಹೀಗೇ ಎಂದು ಸಾಕ್ಷಾತ್ ಅಮ್ಮನಿಗೂ ಊಹಿಸುವುದಕ್ಕಾಗಿರಲಿಲ್ಲ. ಖಂಡಿತ ಕುಡುಕನಾಗುವ ಗುಣಲಕ್ಷಣ ಇರಲಿಲ್ಲ. ಒಮ್ಮೊಮ್ಮೆ ಯಾವುದೋ ಹಬ್ಬಕ್ಕೆ ಮದುವೆಗೆ ಸ್ವಲ್ಪ ಕುಡಿಯುತ್ತಿದ್ದುದು ನೀರು ಕುಡಿದಷ್ಟೇ ಸಣ್ಣ ವಿಷಯ. ಆದರೆ ದಿನಾ ಕುಡಿಯುವುದನ್ನ ಯಾಕೆ ಎಂದು ಪತ್ತೆ ಹಚ್ಚುವುದು ಸಾಧ್ಯವಾಗಲಿಲ್ಲ. ಇದು ಪ್ರಕೋಪಕ್ಕೆ ತಿರುಗತೊಡಗಿದ್ದು ಸ್ಪಷ್ಟವಾದಂತೆ ಗೌರಿ ಕಾರಣಗಳನ್ನ ಹುಡುಕತೊಡಗಿದಳು. ಮದುವೆಯಾಗಿ ಮೂರುವರ್ಷ ಸಮೀಪಿಸಿದರೂ ತಾನು ತಾಯಿಯಾಗದೇ ಇರುವ ಬಗೆಯನ್ನು ರಾಮಣ್ಣನ ಮೇಲೆ ಆರೋಪಿಸಿದ್ದಳು. ಇದು ರಾಮಣ್ಣನಿಗೆ ಅಷ್ಟು ಸುಲಭವಾಗಿ ಒಗ್ಗದೇ ಹೋಯಿತು. ರಾಮಣ್ಣನ ಅಮ್ಮ ಮೂಕ ಪ್ರೇಕ್ಷಕಿಯಾದಳು.

ಮುಂದಿನ ದಿನಗಳನ್ನ ಮನೆಯ ಮಾಡೂ ನಿರೀಕ್ಷಿಸಿರಲಿಲ್ಲ. ಎಲ್ಲವೂ ಜಟಿಲವಾಗುತ್ತಾ ಬಂತು. ಹೇಗೋ ರಾಮಣ್ಣ ಕುಡಿದು ಕುಪ್ಪಳಿಸಿ ಹನ್ನೆರಡು ಘಂಟೆಗೆ ಮನೆಯ ಅಂದಾಜಿನ ಮೇಲೆ ಬರುತ್ತಿದ್ದ. ನಂತರ ಮನೆಯಲ್ಲಿ ಮಹಾಯುದ್ಧವು ಪ್ರಾರಂಭವಾಗಿ ಬೈಗುಳ ಸಣ್ಣಪುಟ್ಟ ಹೊಡೆತದೊಂದಿಗೆ ಮುಕ್ತಾಯವಾಗುತ್ತಿತ್ತು. ದಿನವೂ ಇದನ್ನ ಸಹಿಸಿಕೊಂಡು ಅದು ಹೇಗೋ ಗೌರಮ್ಮ ಸುಮ್ಮನಿದ್ದಳು.ಒಂದು ದಿನ ಮಾತ್ರ ತುಂಬಾ ರೋಸಿಹೋಗಿ, ಅದೇನು ನಿಮ್ಮ ತಾಕತ್ತು ಕುಡಿದ ಮೇಲೆ? ಮಕ್ಕಳನ್ನು ಕೊಡುವ ತಾಕತ್ತಿಲ್ಲದವರು ಬದುಕಿದರೆಷ್ಟು ಸತ್ತರೆಷ್ಟು? ಎಂದಳು.

ಏನಾದರೂ ಸಹಿಸಿಕೊಳ್ಳಬಲ್ಲ ರಾಮಣ್ಣ ತನ್ನ ಕುಡಿತದ ಅತ್ಯಂತ ಹೆಚ್ಚಿನ ಅಮಲಿನಲ್ಲೂ ಈ ಮಾತುಗಳಿಂದ ತುಂಬಾ ಘಾಸಿಗೊಂಡನು. ಇದೇ ಮಾತುಗಳ ಪ್ರಭಾವವೋ ಏನೋ ಮತ್ತೆ ಕೆಲವು ತಿಂಗಳು ರಾಮಣ್ಣನಿಲ್ಲದ ರಾಮಣ್ಣನ ಮನೆ ಬಿಕೋ ಎನ್ನುತ್ತಿತ್ತು.

ಚೆನ್ನಾಗಿದ್ದ ರಾಮಣ್ಣ ಮಂಕಾಗುತ್ತಾ ಹೋದ. ಮಂಕಾಗುತ್ತಿದ್ದವ ಪುನಃ ಪ್ರಕಾಶಮಾನವಾಗತೊಡಗಿದ.  ಸುಮಾರು ದೂರದಲ್ಲಿರುವ ಹಳ್ಳಿಯ ವಾಸ್ತವ್ಯವನ್ನು ಗೆಳೆಯರ ಬಳಿ ಹೇಳಿಕೊಂಡ, ಹೇಗೋ ಕೆಲಸ ಮಾಡಿ ಬದುಕಿದ್ದ ರಾಮಣ್ಣ ಪುರುಷಾರ್ಥದ ಸಾಧನೆಗಾಗಿ ಯಾವುದೋ ಎರಡನೇ ಮದುವೆಯನ್ನೂ ಆದ. ಹೊಸಾ ಹೆಂಡತಿ ಗೌರಮ್ಮನಷ್ಟು ಒಳ್ಳೆಯವಳಲ್ಲದಿದ್ದರೂ ತನ್ನ ಪುರುಷಾಭಿಮಾನಕ್ಕೆ ಕಳಶವನ್ನಿಟ್ಟಳು. ತಾನು ಗರ್ಭವತಿ ಎಂದು ಮದುವೆಯಾಗಿ ಮೂರು ತಿಂಗಳಲ್ಲೇ ಸಾರಿದಳು. ಸುಮಾರು ಏಳೆಂಟು ತಿಂಗಳಾಗುವಂತೆಯೇ ಮನೆಯ ನೆನಪಾಗಿ ಪುನಃ ಹಳ್ಳಿಗೆ ಬಂದು ಬಿಕೋ ಎನ್ನುತ್ತಿದ್ದ ಮನೆಯನ್ನು ರಾತ್ರಿ ಹನ್ನೆರಡರವರೆಗೂ ಎಚ್ಚರಿಸಿದ.

ತಾನು ಹೇಗೆ ಗಂಡಸು ಎಂಬುದಕ್ಕೆ ಗೌರಮ್ಮನಿಗೆ ಪುರಾವೆಯಾಗಿ ಇನ್ನೊಂದು ಮದುವೆಯ ಕಥೆಯನ್ನೂ ಹೇಳಿದ. ಇದರಿಂದ ಮನೆಯ ಜಗಳ ಇನ್ನೂ ಹೆಚ್ಚಾಗಿ ಊರಿಗೆಲ್ಲಾ ದೊಡ್ಡ ವಿಷಯವಾಯಿತು. ಜಾಸ್ತಿಯಾದಂತೆ ಊರಿನವರೇ ಸೇರಿ ರಾಮಣ್ಣ, ತಾಯಿ ಮತ್ತೆ ಗೌರಮ್ಮನನ್ನು ಊರಿನ ಶಾಸ್ತ್ರಿಗಳ ಮನೆಗೆ ಕರೆದುಕೊಂಡುಹೋಗಿ, ಎಲ್ಲಾ ವಿಚಾರಗಳನ್ನು ನಿರ್ಣಯಿಸಿ ತೀರ್ಪು ಕೊಡಲಾಯಿತು. ಯಾವುದೇ ಕಾರಣಕ್ಕೂ ರಾಮಣ್ಣ ಹಳ್ಳಿಯನ್ನು ಬಿಟ್ಟು ಹೋಗದಂತೆ, ಯಾವುದೇ ಜಗಳ ಮಾಡದಂತೆ ರಾಮಣ್ಣನನ್ನು ಶಾಸ್ತ್ರಿಗಳೇ ಎಚ್ಚರಿಸಿ ಕಳುಹಿಸಿದ್ದರು. ಒಂದುವೇಳೆ ನಿನ್ನನ್ನು ಹುಡುಕಿ ಯಾರಾದರೂ ಬಂದಲ್ಲಿ ಪುನಃ ಮಾತನಾಡೋಣ ಎಂದು ಕೂಡಾ ಹೇಳಿದ್ದರು.
---
ಇದೇ ಬರುವ ಶನಿವಾರ ಯಕ್ಷಗಾನ. ಹಳ್ಳಿಯ ಮರ್ಯಾದೆಯನ್ನು ಜಾಸ್ತಿ ಮಾಡುವಂತಹ ವಿಷಯ ಎಂದು ಎಲ್ಲರೂ ಶಕ್ತಿಮೀರಿ ದುಡಿಯತೊಡಗಿದರು. ತಮ್ಮ ತಮ್ಮ ಪಾತ್ರಗಳಿಗೆ ಬೇಕಾದ ವಸ್ತು,ವಿಷಯಗಳ ಸಂಗ್ರಹಣೆಯಲ್ಲಿ. ರಾಮಣ್ಣನಂತೂ ತನ್ನ ದೇಹದ ಚಿಂತೆಯನ್ನೂ ಮರೆತು ಓದುತ್ತಾ ಇದ್ದ ರಾಮಾಯಣವನ್ನು. ನಾಳೆಯ ಪಾತ್ರಕ್ಕಾಗಿ ಕೊನೆಯ ಬಾರಿ ಕಣ್ತುಂಬ ರಾಮಾಯಣದ ರಾಮನನ್ನು ಕಾಣತೊಡಗಿದ ರಾಮಣ್ಣ.

ರಾಮಾಯಣ ಏನಕ್ಕೆ ರಾಮಣ್ಣನನ್ನು ಘಾಸಿಗೊಳಿಸುತ್ತಾ ಸಾಗಿತೋ? ರಾಮನ ಆದರ್ಶಗಳೇನು? ತನ್ನ ಪಾತ್ರವೇನು? ಬರಿಯ ಯಕ್ಷಗಾನದ ಪಾತ್ರಕ್ಕಾಗಿ ರಾಮನ ಮುಖವಾಡವೇ? ಅಲ್ಲ ರಾಮನಂತಹ ಒಂದು ಆದರ್ಶ ಬೇಕೇ? ಈ ಗೌರಮ್ಮ ಇನ್ನೂ ನನ್ನನ್ನು ಕ್ಷಮಿಸುತ್ತಾ ನನ್ನ ಜೊತೆ ಇರುವುದಕ್ಕೆ ಕಾರಣವೇನು? ಎರಡನೇ ಹೆಂಡತಿಯ ಮಗು ನನ್ನ ಹಾಗೇ ಇರಬಹುದೇ? ಇರಬಹುದಾದರೆ ನನ್ನನ್ನು ಹುಡುಕುವ ಪ್ರಯತ್ನ ಅವರು ಮಾಡಿರಬಹುದೇ? ಇದೆಲ್ಲಾ ರಾಮಣ್ಣನ ತಲೆಯಲ್ಲಿ ತುಂಬುತ್ತಾ ಹೋಯಿತು.

ಶನಿವಾರ ಗೌರಮ್ಮ ತನ್ನ ಬೆಳಗ್ಗಿನ ಕೆಲಸಗಳನ್ನೆಲ್ಲಾ ಮುಗಿಸಿ ಕಸಗುಡಿಸುತ್ತಾ ರಾಮಣ್ಣನ ಕೋಣೆಯನ್ನು ಹೊಕ್ಕಿದ್ದೇ ದೊಡ್ಡದಾಗಿ ಕಿರುಚಾಡಿದಳು. ರಾಮಣ್ಣ ಏನಕ್ಕೆ ಆತ್ಮಹತ್ಯೆ ಮಾಡಿಕೊಂಡ ಎಂಬ ವಿಷಯ ಶಾಸ್ತ್ರಿಗಳೂ ಊಹಿಸದೇ ಹೋದರು.
----0-----

Friday, 12 October 2012

ಅಪ್ಪಚ್ಚಿ ಹೇಳಿದ ಅಪ್ಪನ ಕತೆ- ಭಾಗ ೨ (ಸುರಂಗದ ಕತೆ)



ನಿನ್ನೆಯ ಕತೆ ಬಹಳ ಹೊತ್ತು ಯೋಚಿಸುವಂತೆ ಮಾಡಿತು. ಕತೆಯೇನೋ ರಮ್ಯವಾಗಿತ್ತು. ಅಂತಹ ಧೈರ್ಯವಿತ್ತೇ? ಯೋಚನೆಯಿತ್ತೇ ಬಾಲ್ಯದಲ್ಲೇ? ಸಾಧ್ಯವಿಲ್ಲವೇನೋ. ಚಿಕ್ಕಪ್ಪ ನನ್ನನ್ನು ರಂಜಿಸುವುದಕ್ಕೆಂದು ಹೇಳಿದ್ದಿರಬಹುದೇ? ಇಲ್ಲ ಕಟ್ಟುಕತೆಯಾಗಿರಬಹುದೇ? ಇದೆಲ್ಲಾ ವಿಚಾರಗಳು ತಲೆಯಲ್ಲಿ ಕೊರೆಯುತ್ತಿದೆ. ನಾಳೆಯೂ ಚಿಕ್ಕಪ್ಪನಿಗೆ ಎಲ್ಲೂ ಹೋಗಲಿಕ್ಕಿರಲಿಕ್ಕಿಲ್ಲ. ಹೋಗಿ ಅವರಮನೆಯಲ್ಲೇ ಕುಳಿತು ಸುಮ್ಮನೆ ಹೀಗೇ ಮಾತನಾಡಿಸಿದರೆ ಮುಂದಿನ ಕೆಲವು ಕತೆಗಳನ್ನಾದರೂ ಹೇಳಬಹುದು. ಹೇಗಾದರೂ ಮಾಡಿ ಇನ್ನೂ ತಿಳಿದುಕೊಳ್ಳಬೇಕು. ಸಾಧ್ಯವಿದ್ದರೆ ಅಂಗಡಿಯ ಜಗ್ಗಣ್ಣನನ್ನೂ ಭೇಟಿಯಾಗಬೇಕು. ಈ ರಜೆ ಮುಗಿಯುವುದರೊಳಗೆ ಒಂದು ಅಧ್ಯಯನ ಮಾಡಿದಂತೆ ಇದನ್ನೆಲ್ಲ ಡೈರಿಯಲ್ಲಿ ಬರೆದಿಟ್ಟು ಮಲಗುತ್ತೇನೆ.
--
ಓಹ್, ಬಾ ಮಾರಾಯ. ನಿನ್ನೆ ನೀನು ಕೊಟ್ಟ ಯಕ್ಷಗಾನದ ಸೀಡಿ ನೋಡಿ ನಿದ್ದೆ ಕಡಿಮೆಯಾಯಿತು. ಈಗ ತಿಂಡಿ ಆಗಿ ಹೊರಗೆ ಬರ್ತಾ ಇದ್ದೆ. ತಿಂಡಿ ಆಯಿತೇ ನಿನ್ನದ್ದು?. ನೀನೂ ಎಲೆ ಅಡಿಕೆ ಹಾಕುತ್ತೀಯಲ್ಲಾ? ತೋಟಕ್ಕೆ ಹೋಗಿ ಅಡಕ್ಕೆ ಹೆಕ್ಕುವುದಕ್ಕಿದೆ. ಈ ಹಾಳು ಬಾವಲಿಗಳು ಎಲ್ಲಾ ತಿಂದು ಚಲ್ಲಾಪಿಲ್ಲಿ ಚೆಲ್ಲುತ್ತವೆ.ಬಾವಲಿಗಳಿಗೆ ಟ್ರೈನಿಂಗ್ ಕೊಟ್ಟು ಅಡಕೆ ಕೊಯಿಲು ಮಾಡುವುದಕ್ಕೆ ಆಗುವುದಿಲ್ಲವೇ? ಇನ್ನು ಕೊಯಿಲು ಮಾಡಬೇಕು. ಈ ಸಲ ಇಳುವರಿ ಜಾಸ್ತಿ, ರೇಟು ಕಡಿಮೆ. ಹಾಳಾದ್ದು ಕಲ್ಲಿದ್ದಾಗ ನಾಯಿ ಕಾಣುವುದಿಲ್ಲ ನಾಯಿ ಇದ್ದಾಗ ಕಲ್ಲೇ ಕೈಗೆ ಸಿಗುವುದಿಲ್ಲ. ನಿನಗೆ ಗೊತ್ತಿರಲಿಕ್ಕಿಲ್ಲ,

ಮೊದಲು ಈ ತೋಟ ಇದೆಯಲ್ಲ ಇದರ ೧೫ ಪಟ್ಟು ನಮ್ಮ ತೋಟವಿತ್ತು. ಇದೇ ಅಡಕೆ ಮರಗಳು ಆಗ ಸಣ್ಣವು. ನಾವೇ ಅಡಿಕೆ ಮರದ ಬಟ್ಟಲಿಂದ ನೀರು ಎರೆದು ಇದನ್ನೆಲ್ಲ ಬೆಳೆಸಿದ್ದು ನೋಡು. ಮುಂದೆ ಹರಿದು ಹಂಚಿಹೋದ ತೋಟಗಳನ್ನು ಬೇಲಿಯಾಚೆಯಿಂದ ನೋಡುವಾಗ ನೋವಾಗುತ್ತದೆ. ಇಮಾನ್ ಸೋಜರು ಗದ್ದೆ ಮಾಡುತ್ತಿದ್ದಾರಲ್ಲಾ ಅಲ್ಲಿವರೆಗೆ ನಮ್ಮ ತೋಟ. ನಿನ್ನಪ್ಪನೂ, ದೊಡ್ಡಪ್ಪನೂ ನಾನೂ ಸುಮಾರು ಮೂರು ಸಾಲುಗಳಿಗೆ ನೀರು ಹಾಕಬೇಕಿತ್ತು ದಿನಾ. ಇದೇ ನೀರಿನದಂಡೆ. ಮೊದಲು ಇಮಾನ್ ಸೋಜರ ಮನೆಯ ಹಿಂದೆ ಇದ್ದ ಸುರಂಗದಿಂದ ನೀರು ಬರುತ್ತಿತ್ತು. ಇಲ್ಲೂ ಒಂದು ವಿಶೇಷವಾದ ಕತೆ ಇದೆ. ನಿನಗೆ ಕೇಳಿ ಗೊತ್ತಿರಬೇಕು.!

ಹೇಳು ಚಿಕ್ಕಪ್ಪ. ಇಮಾನ್ ಸೋಜರು ಗೊತ್ತು. ಅವರ ಅಪ್ಪ ಬಾಬುವೂ ಕೇಳಿ ಗೊತ್ತು.

ಓಹೋ. ಬಾಬುವನ್ನೂ ನೆನಪಿದೆಯೇ? ಸರಿ. ಬಾ, ಹೇಗೂ ಇಮಾನ್ ಸೋಜರ ಮನೆಯಿಂದ ಪಂಪಿನ ಸ್ಪಾನರು ತರಲಿಕ್ಕಿದೆ. ಹಾಗೇ ಹೋಗಿ ಬರೋಣ. ಇದೇ ಬಾಬು ಸೋಜರಿದ್ದಾರಲ್ಲ, ಅವರು ಮೊದಲು ನಮ್ಮ ಮನೆಯಲ್ಲಿ ಕೆಲಸಕ್ಕಿದ್ದವರು. ಈಗ ಕೊಡುವಂತೆ ದಿನಕ್ಕೆ ೩೦೦, ೪೦೦ ಕೊಡುವಂತಿಲ್ಲ ಆಗ. ಹೇಳಿದ ಕೆಲಸ ಮಾಡಬೇಕಿತ್ತು, ಹಾಗೆಯೇ ಕೊಟ್ಟದ್ದನ್ನು ತೆಗೆದುಕೊಂಡು ಹೋಗಬೇಕಿತ್ತು. ಮತ್ತೆ ನಮ್ಮ ಹಿರಿಯರು ಮಾಡಿದ್ದೂ ಅದೇ, ಕೊಟ್ಟರೂ ಕೊಡದವರಂತೆ ಸಿಟ್ಟಾಗುತ್ತಾ ಇರುತ್ತಿದ್ದರು. ಕೊಡದೇ ಇದ್ದರೂ ನಾನೇನೂ ಕೊಡಲಿಲ್ಲವೆಂದು ಜಗತ್ತಿಗೆ ಸಾರುತ್ತಿದ್ದರು. ನಮ್ಮ ಅಪ್ಪ, ಅಂದರೆ ನಿಮ್ಮ ಅಜ್ಜ ಏನೂ ಕೊಡುತ್ತಿರಲಿಲ್ಲ. ಆದರೆ ಅಮ್ಮ ಕೊಡುತ್ತಿದ್ದದು ತಿಳಿದು ಸುಮ್ಮನೇ ಇದ್ದರು. ಅಂದರೆ ಚಿವುಟುವುದೂ ತೊಟ್ಟಿಲು ತೂಗುವುದೂ ಎರಡೂ ಕೆಲಸವನ್ನು ಮಾಡುತ್ತಿದ್ದರು.

ನೋಡು ಇದೇ ಈಗ ಇಮಾನ್ ಸೋಜರ ಮನೆ. ಮೊದಲ ಮಗನಿಗೆ ಮದುವೆಯಾಗಿ ಈಗ ಪೇಟೆಯಲ್ಲಿದ್ದಾನೆ. ಎರಡನೇ ಮಗ, ಹೆಂಡತಿ ಮತ್ತೆ ಸೋಜರು ಮಾತ್ರ ಇಲ್ಲಿ. ಸೋಜರು ಮನೆಯಲ್ಲಿದ್ದಂತಿಲ್ಲ, ನಾವು ತೋಟದಲ್ಲೇ ಮುಂದೆ ಹೋಗಿ ಸುರಂಗ ನೋಡಿಕೊಂಡು ಬರುವುದರೊಳಗೆ ಬಂದಾರವರು.

ನೋಡು ಈ ಈಚಲಮರದ ಗುರುತು. ಇಲ್ಲಿ ಈ ಕಲ್ಲಿಂದ ಬಗ್ಗಿ ನೋಡಿದರೆ ಗವ್ವೆನ್ನುವ ಕತ್ತಲೆ ಬಿಟ್ಟರೆ ಬೇರೇನೂ ಕಾಣಿಸುತ್ತಿರಲಿಲ್ಲ ಮೊದಲು. ಇದೇ ಜಾಗದಲ್ಲಿ ಮೊದಲು ಸಣ್ಣ ಕೆರೆ ಇತ್ತು. ಸುರಂಗದ ಶುದ್ಧ ನೀರು ಹರಿದು ಕೆರೆಯನ್ನು ಸೇರಿ ನಂತರ ನಮ್ಮ ಮನೆಯ ಎದುರಾಗಿ ಹರಿದು ತೋಡು ಸೇರುತ್ತಿತ್ತು. ಈಗ ಮಳೆಗಾಲದಲ್ಲಿ ಮಾತ್ರ ನೀರು. ಮೇಲೆ ರಬ್ಬರಿದೆ ನೋಡು ಅದಕ್ಕೇ.

ಮೊದಲು ನಾವು ಸಣ್ಣದಿದ್ದಾಗ, ದೊಡ್ಡಪ್ಪ, ನಿನ್ನಪ್ಪ, ಜಗ್ಗು, ಎಲ್ಲಾ ಇಲ್ಲಿನ ಖಾಯಂ ಸದಸ್ಯರು. ಸುರಂಗದ ತಂಪು ನೀರು ಈ ಕರಾವಳಿಯ ಬೆಚ್ಚನೆಯ ಬೆವರಿಗೆ ಒಳ್ಳೆಯ ಸಾಂತ್ವನ ಒದಗಿಸುತ್ತಿತ್ತು. ಹಾಗೆಯೇ ಆಡಿ ದಣಿದಾಗ ಇಲ್ಲಿ ಬಂದು ಕುಳಿತು ಕಲ್ಲೆಸೆದೋ ಈಜಿಯೋ ಸಮಯ ಸಾಗಹಾಕುತ್ತಿದ್ದೆವು. ಈಗಲೂ ನೆನೆದರೆ ನಗುಬರುತ್ತಿದ್ದ ವಿಷಯವೆಂದರೆ ಇದೂ ಟಿಪ್ಪು ಸುಲ್ತಾನ್ ಮಾಡಿದ ಸುರಂಗವೆಂದು. ಇಲ್ಲಿಂದ ಹೋದರೆ ಸುಮಾರು ಮೈಲು ದೂರದಲ್ಲಿ ಅದಾವುದೋ ಊರಿಗೆ ತಲುಪುತ್ತದೆ ಎಂಬ ಕತೆ. ಹ್ಹ ಹ್ಹ. ನನಗೂ ಡಿಗ್ರೀ ಮುಗಿಯುವವರೆಗೆ ಇದು ಸತ್ಯವೆಂದೇ ಇತ್ತು.

ಒಂದು ದಿನ ತುಂಬಾ ಬಿಸಿಲು. ರಜಾದಿನ ಬೇರೆ. ಬೆಳಗ್ಗಿನಿಂದ ಮದ್ಯಾಹ್ನದವರೆಗೆ ಆಟವಾಡಿ ಇದೇ ಸುರಂಗದ ಬಳಿಯಲ್ಲಿ ಆಟವಾಡುವುದಕ್ಕೆಂದು ಬಂದಿದ್ದೆವು. ಜಗ್ಗುವೂ ನಿನ್ನಪ್ಪನದೂ ಎಂದಿನಂತೆ ಕೆರೆಯಲ್ಲಿ ಈಜುವ ಪಂದ್ಯ. ನೀನೆಷ್ಟು ಸುತ್ತು ನಾನೆಷ್ಟು ಸುತ್ತು ಎಂದು ಈಜಿ ಈಜಿ ಸುಸ್ತಾದರು. ಶಾಮ ಮತ್ತೆ ಕೇಶವ ಎಂದೂ ತುಂಬಾ ಹೊತ್ತು ನಿಲ್ಲುತ್ತಿರಲಿಲ್ಲ. ಕೇಶವನಿಗಂತೂ ಮನೆ ದೂರವೆಂದು ಬೇಗನೆ ಓಡುತ್ತಿದ್ದ. ಜಗ್ಗು ನಮ್ಮ ಮನೆಯಲ್ಲೇ ಊಟ ಮಾಡಿ, ಬೇಕಾದರೆ ಮೂರು ದಿನ ಇದ್ದು ನಾಡಿದ್ದು ಹೋದರೂ ಯಾರೂ ಏನನ್ನುತ್ತಿರಲಿಲ್ಲ. ಈಗಲೂ ಹಾಗೆಯೇ ಇದ್ದಾನೆ ಬಿಡು.

ಸುಸ್ತಾದವರು ಸುಮ್ಮನಿರುವುದು ಲೋಕದ ರೂಢಿ. ಆದರೆ ಮನಸ್ಸು ಸುಸ್ತಾಗದೇ ಇದ್ದರೆ ಎಂತಹುದನ್ನೂ ದೇಹ ಮಾಡುತ್ತದೆ ಎನ್ನುವುದಕ್ಕೆ ನಮ್ಮಲ್ಲೇ ಎಷ್ಟೋ ಉದಾಹರಣೆಗಳಿರುತ್ತವೆ. ಅದೇ ಹುರುಪು ಅದೇ ಉತ್ಸಾಹದಲ್ಲಿ ಏನು ಮಾಡುವುದು ಎಂದು ಯೋಚಿಸುತ್ತಾ ಇರಬೇಕಾದರೆ ಸುರಂಗದ ಒಳಗೆ ಇರುವ ಕುತೂಹಲ ಇದೆಲ್ಲದಕ್ಕೂ ಸಾಹಸ ತೋರಿಸಲು ಮುಂದಾಯಿತು. ಜಗ್ಗು ಮತ್ತೆ ನಿನ್ನಪ್ಪ ಇದರಲ್ಲಿ ತುಂಬಾ ಮುತುವರ್ಜಿ ವಹಿಸಿದರು. ಆಗ ಬ್ಯಾಟರಿ ಇಲ್ಲ, ಬೇರೆ ಬೆಳಕಿನ ವ್ಯವಸ್ಥೆ ಇಲ್ಲ. ಸುರಂಗವೆಂದರೆ ಕತ್ತಲು, ತೋಟದ ಕತ್ತಲು ಎಲ್ಲಾ ಸೇರಿ ಸ್ವಲ್ಪ ಹೆದರಿಕೆ ಉಂಟುಮಾಡತೊಡಗಿತು.

ಏನಿದ್ದರೂ ಹೊರಗೆ ಬರಲಿ ಎಂದು ಮೊದಲು ಕಲ್ಲೆಸೆಯುವುದು. ಸುಮಾರು ಕಲ್ಲೆಸೆದಾದ ಮೇಲೆ ಸ್ವಲ್ಪ ಧೈರ್ಯ ಬಂತು. ಮೆಲ್ಲನೇ ಸುರಂಗದೊಳಕ್ಕೆ ಎರಡು ಮೂರು ಮೀಟರಿನಷ್ಟು ಒಳಗೆ ಬಂದೆವು. ನಾನು ಮುಂದೆ ಹೋಗಲಿಕ್ಕಾಗಲಿಲ್ಲ, ಅದ್ಯಾವುದೋ ಮೊನಚು ಕಲ್ಲು ತಾಗಿ ಕಾಲ್ಬೆರಳಿಗೆ ಏಟಾಗಿ ನಾನು ಪುನಃ ಹೊರಗೆ ಬಂದು ಕುಳಿತೆ. ಜಗ್ಗು ಮತ್ತೆ ನಿನ್ನಪ್ಪ ಒಳಗೆ ಹೋದರು. ಸಾಧಾರಣ ಇನ್ನೆರಡು ಅಥವಾ ಮೂರು ಮೀಟರು ಹೋಗಿರಬೇಕು ಅಷ್ಟರಲ್ಲಿ ಅದ್ಯಾವುದೋ ಕಾಡು ಹಂದಿ ಅರಚುತ್ತಾ ಹೊರಗೆ ಬಂತು. ನಾನು ಹೆದರಿ ಕೆರೆಗೆ ಹಾರಿದೆ.

ಇದಾದ ಐದಾರು ನಿಮಿಷದಲ್ಲಿ ನಿನ್ನ ಅಪ್ಪ ಜಗ್ಗುವನ್ನು ಹೇಗೋ ಹೊತ್ತುಕೊಂಡೋ ಎಳೆದುಕೊಂಡೋ ಹೊರಗೆ ಬಂದ. ಜಗ್ಗುವಿನ ಕಾಲಿನ ಮಾಂಸ ಕಿತ್ತು ಬಂದಂತಿತ್ತು. ಜೊತೆಗೇ ಮೂಗು ಒಡೆದು ನೆತ್ತರು ಬರುತ್ತಿತ್ತು. ಬಂದವನೇ ಜೋರಾಗಿ ಅಳತೊಡಗಿದೆ. ನಾನು ಓಡಿ ಹೋಗಿ ಬಾಬು ಸೋಜರನ್ನು ಕರೆದುಕೊಂಡು ಬಂದೆ.

ಬಾಬು ಸೋಜರು ಏನೂ ಹೇಳದೇ ಮನೆಗೆ ಎತ್ತಿಕೊಂಡು ನಡೆದರು. ನಾವಿಬ್ಬರೂ ಅಪರಾಧಿಗಳಂತೆ ಹಿಂದೆ. ಮತ್ತೆ ನಮ್ಮನ್ನು ಅವರೇ ಸಮಾಧಾನ ಮಾಡಿ ಜಗ್ಗುವಿನ ಕಾಲಿಗೆ ಕಟ್ಟು ಹಾಕಿ, ಕಳುಹಿಸಿದರು. ಜಗ್ಗು ಸುಮಾರು ೧೦-೧೫ ದಿನ ಅಲ್ಲಿಯೇ ಇದ್ದ. ನಂತರ ಸುಮಾರು ನಾಲ್ಕು ತಿಂಗಳ ವರೆಗೆ ಜಗ್ಗು ನಡೆದಾಡುವುದು ಸಾಧ್ಯವಾಗಲೇ ಇಲ್ಲ.

ಕೊನೆಗೆ ನಿನ್ನಪ್ಪನೇ ಒಳಗಾದ ಕತೆ ಹೇಳಿದ. ಒಳಗೆ ಹೋದಂತೆ ಕತ್ತಲೂ ಬೆಳಕಾಗುತ್ತದಂತೆ. ಹಾಗೆಯೇ ಹೊರಗೆ ಅಸಾಧ್ಯವಾಗಿದ್ದ ಸುರಂಗ ಒಳಸರಿದಂತೆ ಸ್ವಲ್ಪ ಸುಲಭವೆನಿಸಿತು. ಸುರಂಗದ ಬಾಯಿ ಇಷ್ಟೇ ಇದ್ದರೂ ಒಳಗೆ ಸ್ವಲ್ಪ ವಿಶಾಲವಂತೆ. ಮುಂದುವರೆಯುತ್ತಿದ್ದಂತೆ ಎಲೆಬಾವಲಿ ಇತ್ಯಾದಿ ಓಡಿಸಿ, ಕೆಸರಿನ ಕಾಲುಗಳನ್ನೆತ್ತೆತ್ತಿ ಸಾಗುತ್ತಾ ತಿಳಿಯದೇ ನಿನ್ನಪ್ಪ ಹಂದಿಯ ಸಂಸಾರದ ಮೇಲೆ ಕಾಲಿಟ್ಟರಂತೆ. ಅದೆಲ್ಲಿತ್ತೋ ಏನೋ, ದೊಡ್ಡ ಕೋರೆ ಹಲ್ಲಿನ ಹಂದಿಯೊಂದು ಓಡಿಬಂದು ಜಗ್ಗುವಿಗೆ ಹೊಡೆಯಿತಂತೆ. ಆ ಘಳಿಗೆ ಏನುಮಾಡುವುದೆಂದು ತೋಚದ ನಿನ್ನಪ್ಪ ಯಾವುದೋ ಕೈಗೆ ಸಿಕ್ಕ ಕಲ್ಲನ್ನೇ ಹಂದಿಗೆ ಹೊಡೆದ. ಹಂದಿಗೆ ಏಟಾಗಿ ಅದು ಓಡಿ ಹೊರಗೆ ಬಂತು. ನಿನ್ನಪ್ಪ ಬಿದ್ದ ಜಗ್ಗುವನ್ನೆತ್ತಿಕೊಂಡು ಬಂದ.

ಜಗ್ಗುವಿಗೆ ಹಂದಿಯ ಏಟೆಂದು ಯಾರಿಗೂ ಗೊತ್ತಾಗದಂತೆ ಕಟ್ಟು ಕಟ್ಟಿದ ಮಹಾನುಭಾವ ಬಾಬು. ಇವತ್ತಿನವರೆಗೂ ಗುಟ್ಟಾಗಿಟ್ಟು ಈಗ ನಿನ್ನಲ್ಲಿ ಹೇಳಿದೆ. ಜಗ್ಗುವಿನಂಗಡಿಗೆ ಹೋಗಿ ಹೇಳಿಬಿಡಬೇಡ ಮತ್ತೆ. ಇಮಾನ್ ಸೋಜರು ಬಂದಿರಬೇಕು ಈಗ, ಹೋಗೋಣ ನಡೆ.

೧೨-೧೦-೧೨

Thursday, 11 October 2012

ಅಪ್ಪಚ್ಚಿ ಹೇಳಿದ ಅಪ್ಪನ ಕತೆ :ಭಾಗ ೧ (ಪ್ರವಾಹದ ಕತೆ)

ಇದೇನು ಅಪ್ಪಚ್ಚಿ ಎಂದರೆ? ನಮ್ ಕಡೆ ಹೀಗೇ, ಅಂದ್ರೆ ಹವ್ಯಕ ಭಾಷೆಯಲ್ಲಿ ಅಪ್ಪಚ್ಚಿ ಅಂದ್ರೆ ಚಿಕ್ಕಪ್ಪ ಎಂದು. ಈಗ ಹೇಳಲಿರುವ ಕಥೆಗಳು ಮಾತ್ರ ಇಂತಹ ಒಬ್ಬ ಅಪ್ಪಚ್ಚಿ ಹೇಳಿದ ನಮ್ಮ ನಾಯಕನ ಅಪ್ಪನ ಕಥೆ.
--
ಭಾಗ ೧.

ಅಪ್ಪಚ್ಚಿ ಹೇಳಿದ ಕಥೆ (೧೯೭೦, ಊಹಿತ ವರ್ಷ) : ಆ ಕಾಲಕ್ಕೆ ಒಂದು ಅದ್ಭುತ ಮನೆಯಾಗಿತ್ತು ಅದು. ಈಗಿನ ಊರು ಬಿಡು, ಹತ್ತಿರದ ಹತ್ತು ಹದಿನೈದು ಊರಿಗೂ ನಮ್ಮ ಮನೆತನ ಹೇಳಿದರೆ ಹೆಸರುವಾಸಿ. ಆಗ ನನಗೆ ೧೦ ನಿನ್ನ ಅಪ್ಪನಿಗೆ ೧೨ ವರ್ಷ ವಯಸ್ಸು. ತೋಡಿನಲ್ಲಿ (ಸಣ್ಣ ನದಿಗಳಿಗೆ ತೋಡು ಎಂದೇ ಕರೆಯುವುದು ನಮ್ಮ ಕಡೆ!) ಮಳೆಗಾಲದಲ್ಲಿ ತೆಂಗಿನಕಾಯಿ ಹಿಡಿಯುವುದು ಈಗ ನೆಟ್’ನಲ್ಲಿ ಹುಡುಗಿಯನ್ನ ಹುಡುಕುವುದಕ್ಕಿಂತ ಸಾಹಸದ ಕೆಲಸ. ಇದಕ್ಕೆ ನಿಯೋಜಿತವಾಗಬೇಕಿದ್ದರೆ ಮೊದಲು ಕೆರೆಯಲ್ಲಿ ಕೈಕಾಲು ಬಡಿದು ಪ್ರಾಕ್ಟೀಸು ಮಾಡಿರಬೇಕು. ಮತ್ತೆ ನಾಯಕ ಹೇಳುವ ಕೆಲಸ ಮಾತ್ರ ಮಾಡಬೇಕು. ಹೆಚ್ಚಾಗಿ ದೂರದಲ್ಲಿ ಸಾಗುವ ಕಾಯಿಯನ್ನು ಹಿಡಿಯಲು ನಾಯಕನಿಗೆ ಮಾತ್ರ ಅವಕಾಶ.
ಇಂತಹದ್ದರಲ್ಲಿ ನಿನ್ನ ಅಪ್ಪನಿಗೆ ಸಿಕ್ಕಿದ ಅವಕಾಶದ ಬಗ್ಗೆ ಆಗ ನಮಗೆಲ್ಲ ಹೆಮ್ಮೆ. ಚೆನ್ನಾಗಿ ಈಜು ಕಲಿತಿದ್ದ ನಿನ್ನ ಅಪನಿಗೆ ಇಂತಹ ಅವಕಾಶ ಸಿಕ್ಕಿತು. ಆ ದಿನ, ಜುಲೈ ಆಗಿರಬೇಕು. ಬೆಕ್ಕೂ ತನ್ನ ದೈನಂದಿನ ವಿಧಿಗಳನ್ನ ಮನೆಯ ಅಟ್ಟದಮೇಲೇ ಪೂರೈಸಿಕೊಳ್ಳುವಷ್ಟು ಮಳೆ.

ಇಂತಹ ಅಮೋಘ ಮಳೆಯ ದಿನ ಜಗ್ಗು,ಶಾಮ, ಕೇಶವ, ನಾನು ಮತ್ತೆ ನಿನ್ನ ಅಪ್ಪ ಪ್ರವಾಹದಲ್ಲಿ ತೆಂಗಿನ ಕಾಯಿ ಹಿಡಿಯಲು ಹೊರಟೆವು. ನಿನ್ನಪ್ಪ ಎಲೆಅಡಿಕೆ ಜಗಿಯುತ್ತಿದ್ದರೂ ಜಗ್ಗು ಬೀಡಿ ಸೇದುತ್ತಿದ್ದರೂ ಮನೆಯಲ್ಲಿ ಯಾರಿಗೂ ಗೊತ್ತಿರಲಿಲ್ಲ. ಹಾಗಾಗಿ ನಮ್ಮಲ್ಲೇ ರಾಜಾರೋಷವಾಗಿ ಇಬ್ಬರೂ ರಾಜಿಸುತ್ತಿದ್ದರು.
--
ದೊಡ್ಡ ನದಿಯಲ್ಲವದು. ಮಳೆಗಾಲದಲ್ಲಿ ಮಾತ್ರ ಸ್ವಲ್ಪ ಭಯ ಹುಟ್ಟಿಸುತ್ತಿತ್ತು. ನಾವು ತೋಡು ಎಂದೇ ಕರೆಯುವುದು. ಈಗಿನ ಭಾಷೆಯಂತೆ ಅದನ್ನು ನದಿ ಎನ್ನುವ ಹಾಗಿಲ್ಲ. ನದಿ ಎಂದರೆ ನೇತ್ರಾವತಿ ನೋಡು.
ಆ ದಿನ ಯಾವನನ್ನು ಮಳೆಗೆ ರಾಜನನ್ನಾಗಿಸಿದ್ದಾರೋ, ಎಡೆಬಿಡದೆ ಸುರಿಯುತ್ತಿದ್ದ. ಅದೂ ಭೂಮಿಯಲ್ಲಿ ನೀರಾದ ಮೇಲೆ ಬಂದ ಮಳೆಯಾದುದರಿಂದ ಬಿದ್ದ ನೀರು ಹಾಗೆಯೇ ತೋಡು ಸೇರುತ್ತಿತ್ತು.
-
ಈಜುವುದು ಸಣ್ಣಕೆರೆಯಿಂದಾರಂಭಿಸಿದ್ದು. ಉತ್ಸಾಹ ಹೆಚ್ಚಿದಂತೆ ಕಲಿಯುವ, ಕಲಿತಂತೆ ಫಲಿತವಾಗುವ ಅನುಭವ ಈಜಿನಿಂದ ಸಿಗುವಷ್ಟು ಯಾವುದರಿಂದಲೂ ಸಿಗುವುದಿಲ್ಲವೆನಿಸುತ್ತದೆ. ಎಲ್ಲರೂ ಒಂದೇ ರೀತಿಯ ಜಲಸ್ಥಂಭ ವಿದ್ಯೆ ಕಲಿತವರು. ಹಾಗಾಗಿ ಎಲ್ಲರಲ್ಲೂ ಸಮಾನತೆಯಿತ್ತು. ಎಲ್ಲರಿಂತ ಸ್ವಲ್ಪ ಕುಳ್ಳನಾದ ಮತ್ತು ಸಣ್ಣವನಾದ ನನ್ನ ಮೇಲೆಯೇ ಕಡಿಮೆ ಹೊರೆಯಿತ್ತು. ನಿನ್ನ ಅಪ್ಪ ಮತ್ತೆ ಜಗ್ಗು ತುಂಬಾ ಉತ್ಸಾಹಿಗಳು ಮತ್ತೆ ಧೈರ್ಯ ಜಾಸ್ತಿ. ಮರದ ತುಂಡು ಕಂಡರೂ ಹಾರುತ್ತಿದ್ದರು ಹಿಡಿಯುವುದಕ್ಕೆ.

ಹೇಳಿದಂತೆ ಮಳೆಯ ಪ್ರವಾಹ ಎಲ್ಲರ ತೋಟವನ್ನೂ ಹೊಕ್ಕು ಬೇಕಾದುದನ್ನು ತನ್ನ ಹೊಟ್ಟೆಗಿಳಿಸಿ ಬೇಡದುದನ್ನು ತೋಟಗಳಲ್ಲಿಯೇ ಬಿಟ್ಟು ಬರುತ್ತಿತ್ತು. ಶಂಕರಜ್ಜನ ತೋಟದೆದುರು ನಾವೆಲ್ಲಾ ಸೇರಿದೆವು. ದಿನಾ ನೀರು ನೋಡುತ್ತಿದ್ದಂತೆ ಇರಲಿಲ್ಲ ಅಂದು. ಈಗಿನ ವರೆಗೂ ನಾನು ಆದಿನ ಕಂಡಂತ ಪ್ರವಾಹ ನೋಡಿಲ್ಲ. ಮಳೆ ಮುಂದುವರೆದಂತೆ ಕ್ರಮೇಣ ತಿಳಿಯಾಗಬೇಕಿತ್ತು ನೀರು. ಇದು ಕಣ್ಣನ್ ದೇವನ್ ಚಹಾದಂತೆ ಮತ್ತಷ್ಟು ರಂಗಿನೊಂದಿಗೆ ಮತ್ತೇರಿಸುತ್ತಿತ್ತು.

ತೆಂಗಿನಮರವೇ ಬರುವ ಪ್ರವಾಹದಲ್ಲಿ ತೆಂಗಿನಕಾಯಿ ಬಾರದೇ? ಸುಮಾರು ೧೦-೧೨ ತೆಂಗಿನಕಾಯಿಗಳಾಗಿತ್ತು ಹಿಡಿದದ್ದು. ನೀರು ಹೆಚ್ಚುತ್ತಿತ್ತು. ಭಯವೂ ಹೆಚ್ಚುತ್ತಿತ್ತಿ. ನಿನ್ನಪ್ಪನಿಗೂ ಜಗ್ಗುವಿಗೂ ಉತ್ಸಾಹ ಅತಿಯಾಗುತ್ತಿತ್ತು. ಕಾಯುತ್ತಿದ್ದರು ಪ್ರವಾಹಕ್ಕೆ ಜಿಗಿಯಲು. ಅದೇ ಸಮಯಕ್ಕೆ ಎರಡು ತೆಂಗಿನಕಾಯಿಗಳು ಬಂತು. ಇಬ್ಬರೂ ಜಿಗಿದರು ಪ್ರವಾಹಕ್ಕೆ. ಒಂದು ಕ್ಷಣದಲ್ಲಿ ಏನಾಯಿತು ಎಂದು ತಿಳಿಯುವಷ್ಟರಲ್ಲಿ ಇಬ್ಬರೂ ತುಂಬಾ ದೂರದಲ್ಲಿ ಪ್ರವಾಹದಲ್ಲಿ ತೇಲಿ ಸಾಗುತ್ತಿದ್ದರು. ಜಗ್ಗುವೂ ನಿನ್ನಪ್ಪನೂ ನಮ್ಮೆಲ್ಲರ ಕಣ್ಣಿಂದ ಮರೆಯಾದರು.

ನಾವು ಸುಮಾರು ಎರಡು ಗಂಟೆಗಳ ಕಾಲ ನೀರು ನೋಡುತ್ತಾ ಅವರನ್ನು ಕಾದು ಕುಳಿತೆವು. ಸಂಜೆಯಾದರೂ ಇವರಿಬ್ಬರ ಪತ್ತೆ ಇರಲಿಲ್ಲ. ಪ್ರವಾಹದಲ್ಲಿ ಈಜಿಕೊಂಡು ಮೇಲೆ ಬರುವುದು ಸಾಧ್ಯವಿಲ್ಲ. ಬದಿಯಲ್ಲೇ ನಡೆದುಕೊಂಡು ಬರಬೇಕು. ಏನು ಮಾಡುವುದು ಎಂದು ತಿಳಿಯದೆ ಸುಮ್ಮನೇ ಇದ್ದೆವು. ಮನೆಯಿಂದ ಕೇಶವನ ಅಪ್ಪ ನಮ್ಮನ್ನು ಹುಡುಕಿಕೊಂಡು ಬಂದರು. ಮುಚ್ಚಿಡಲಾಗದೇ ಹೇಳಿದೆವು. ನಮ್ಮೆಲ್ಲರ ಮನೆಯವರೆಗೆ ಸುದ್ಧಿ ಹೋಯಿತು. ಜಗ್ಗುವಿನ ಅಮ್ಮನ ಗೋಳಾಟವಂತೂ ನೋಡುವಂತದ್ದಲ್ಲ. ಒಬ್ಬನೇ ಮಗ ಬೇರೆ. ನನ್ನನ್ನು ಹೊರತು ಪಡಿಸಿ ಎಲ್ಲರಿಗೂ ಏಟುಗಳು ಬೇರೆ ಸಿಕ್ಕಿ ಮಳೆಯ ಚಳಿಯು ಮರೆತೇ ಹೋಗಿತ್ತು.

ಮಳೆಯ ಕಾರಣಕ್ಕೆ ಮರುದಿನ ಶಾಲೆಗೆ ರಜೆ. ಎಲ್ಲಾ ಸಂಬಂಧಿಕರು ಜಗ್ಗು ಮತ್ತು ನಿನ್ನ ಅಪ್ಪನ ಅನ್ವೇಷಣೆಯಲ್ಲಿ ತೊಡಗಿದ್ದರು. ಮರುದಿನ ಮಧ್ಯಾಹ್ನವಾಗಿತ್ತು. ಜಗ್ಗು ಮತ್ತೆ ನಿನ್ನಪ್ಪ ಇದ್ದಕ್ಕಿದ್ದಂತೇ ಮನೆಯಲ್ಲಿ ಪ್ರತ್ಯಕ್ಷವಾಗಿದ್ದರು ಅದೂ ೨೦-೨೫ ತೆಂಗಿನಕಾಯಿಗಳೊಂದಿಗೆ. ಎಲ್ಲರಿಗೂ ಸಂತೋಷವೂ ರೋಷವೂ ಒಟ್ಟಿಗೇ ಬಂದಿತ್ತು. ಕ್ರಮೇಣ ಹುಡುಕುತ್ತಿದ್ದವರಿಗೆ ಸುದ್ಧಿ ಸಂಚಾರವಾಗಿ ಎಲ್ಲರೂ ಮನೆಯ ಕಡೆ ಬಂದರು. ಏನೇ ತೀರ್ಮಾನವಾದರೂ ನಮ್ಮ ಹಳೆಯ ಮನೆಯಲ್ಲೇ ತಾನೇ?. ಇಬ್ಬರಿಗೂ ಮೊದಲು ಬಿದ್ದಿದ್ದು ಏಟು. ನಾವು ಮೊದಲು ಖುಷಿಪಟ್ಟರೂ ಕೊನೆಗೆ ನಮಗೇ ಏಟು ಬಿದ್ದಂತೆ ಅನಿಸುತ್ತಿತ್ತು. ಅದೆಲ್ಲಾ ಆದ ಮೇಲೆ ಕತೆಯನ್ನು ಕೇಳತೊಡಗಿದರು.

ಪ್ರವಾಹದಲ್ಲಿ ಬಿದ್ದ ಇಬ್ಬರೂ ಬದಿಗೆ ಬರಲಾಗದೆ ಸುಮ್ಮನೆ ತೇಲುತ್ತಾ ಹೋದರು. ಮುಂದೆ ಹೋದಂತೆ ಒಂದು ಕಡೆ ಕವಲೊಡೆಯುತ್ತದೆ ತೋಡು. ಅಲ್ಲಿ ಮಧ್ಯದಲ್ಲಿ ನಡುಗಡ್ಡೆಯ ಮೇಲೆ ಎಸೆದಂತೆ ಇಬ್ಬರನ್ನೂ ನೀರು ಬಿಟ್ಟು ಮುಂದುವರೆಯಿತು. ಆಗ ಸುಮಾರು ಸಂಜೆಯಾಗಿತ್ತಂತೆ. ಮುಳ್ಳು ಜಿಗ್ಗುಗಳಿಂದ ಕೂಡಿದ ಆ ಜಾಗದಲ್ಲಿ ಇಬ್ಬರೂ ಉಳಿದುಬಿಟ್ಟರು. ಎರಡೂ ಬದಿಗೆ ಪ್ರವಾಹವಿರುವುದರಿಂದ ಹೊರಗೆ ಬರುವುದು ಅಸಾಧ್ಯವಾದ ಮಾತಾಗಿತ್ತು. ಹಾಗೆಯೇ ನೀರಿನ ಮೇಲೆ ಸಣ್ಣ ಭಯವೂ ಉಂಟಾಗಿತ್ತು ಇಬ್ಬರಿಗೂ.

ರಾತ್ರಿಯಿಡೀ ಹೇಗೋ ಅಲ್ಲಿಯೇ ಕಳೆದರು ಇಬ್ಬರೂ. ನೀರು ಕ್ರಮೇಣ ಕಡಿಮೆಯಾಗುತ್ತಿತ್ತು ಬೆಳಗ್ಗೆ. ಅದೇ ಸಮಯಕ್ಕೆ ಇಬ್ಬರಿಗೂ ಇನ್ನೊಂದು ಆಲೋಚನೆ ಬಂತು. ನಮ್ಮನ್ನೇ ಎಸೆದು ಹೋದ ನೀರು ಎಷ್ಟು ತೆಂಗಿನಕಾಯಿ ಇಲ್ಲಿ ಎಸೆದಿರಬಹುದೆಂದು? ಆ ರೀತಿ ಕಾರ್ಯಪ್ರವೃತ್ತರಾದ ಇವರು ಅಲ್ಲಿಂದ ತೆಂಗಿನ ಕಾಯಿಗಳನ್ನು ಆರಿಸಿಕೊಂಡು ಅದನ್ನು ಅಲ್ಲೆಲ್ಲೋ ಸಿಕ್ಕಿದ ಬಟ್ಟೆಯನ್ನು ಗಂಟುಗಳನ್ನಾಗಿ ಮಾಡಿ ತೆಗೆದುಕೊಂಡು ಮದ್ಯಾಹ್ನದ ಹೊತ್ತಿಗೆ ಮನೆ ತಲುಪಿದ್ದರು. ಇದಕ್ಕೆ ಪ್ರಶಸ್ತಿಯನ್ನು ಕೊಡಬೇಕಿತ್ತು ಅಲ್ಲವೇ? ಏಟು ಸಿಕ್ಕಿತು.

೧೧/೧೦/೨೦೧೨