Thursday 24 May 2012

ಅಯ್ಯೋ ಪೆಟ್ರೋಲೂಊ...


ಅರೆ ಇದೇನಿದು.. ಬಂದು ತುಂಬಾ ಸಮಯವಾಗಿಲ್ಲ. ಸುಸ್ತೋ ಸುಸ್ತು.
ಲೇ ಇವಳೇ ಒಂದು ಗ್ಲಾಸು ನೀರು ಕೊಡು! ನೀರನ್ನ ಸರೀ ನೋಡಿದರೆ ಪೆಟ್ರೋಲ್ ನೋಡಿದಂತೆನಿಸುತ್ತದೆ. ಆಹಾ.. ಪೆಟ್ರೋಲು ! ಹೌದೇ ಹೌದು , ಇದೇ ಪೆಟ್ರೋಲು.
ಎಲ್ಲಿಂದ ತಂದೆ ಈ ನೀರನ್ನ?
ನಮ್ಮ ಬೋರ್ ನೀರೇ ಅದು ?
ನೀರಲ್ಲ ಇದು. ಪೆಟ್ರೋಲ್ ಕಣೇ.. ಶ್ ! ಯಾರಿಗೂ ಹೇಳಬಾರದು ಇದನ್ನ.
---
ಎಂತಹಾ ಆಶ್ಚರ್ಯ, ಸುಮಾರು ನಲ್ವತ್ತು ಸಾವಿರ ಖರ್ಚು ಮಾಡಿ ಕೊರೆಸಿದ್ದ ಬೋರ್ ವೆಲ್ ಈಗ ಸಾರ್ಥಕ.. ಸ್ವಿಚ್ ಒತ್ತಿದರೆ ಸಾಕು ಶುದ್ದ ಪೆಟ್ರೋಲ್ ಬರುವುದು..
ದಿನಕ್ಕೆ ೧೦ ಲೀಟರ್ ಮಾತ್ರ ತೆಗೆದರೆ ಸಾಕಪ್ಪಾ.. ನನಗೆ ಅತಿ ಆಸೆ ಇಲ್ಲ. ಸ್ವಲ್ಪವೇ ಬಳಸಬೇಕು, ಯಾರಿಗೂ ತಿಳಿಯದಂತೆ.
ಹುಂ, ಇನ್ನೇನು ಮಳೆ ಬರುವ ಹಾಗಿದೆ. ಚಾವಡಿಯ ಹೆಂಚಿನ ಮಾಡು ರಿಪೇರಿ ಮಾಡಲು ಒಂದು ಮೂವತ್ತು ಲೀಟರ್ ಪೆಟ್ರೋಲ್ ಸಾಕಾಗಬಹುದು. ಮಗಳ ಮದುವೆಗೆ ಒಂದು ಸಾವಿರ ಲೀಟರ್ ಬೇಕಾದೀತು. ದಿನಸಿ ಅಂಗಡಿಯ ಸಾಲದ ಬಾಕಿ ತೀರಿಸಲು ಒಂದಿನ್ನೂರು ಲೀಟರು ಪೆಟ್ರೋಲು. ಅವಳು ಅಡವಿಟ್ತ ಚಿನ್ನವನ್ನು ಬಿಡಿಸಬೇಕು ಅದಕ್ಕೊಂದು ನೂರೈವತ್ತು ಲೀಟರ್ !!
ಮರೆತೇ ಬಿಟ್ಟಿದ್ದೆ, ಮಗನ ಅಡ್ಮಿಶನ್ ಗೆ ಎಷ್ಟು ಲೀಟರ್ ಪೆಟ್ರೋಲ್ ಬೇಕಾದೀತು ? ಕೇಳಬೇಕು..

ಪೆಟ್ರೋಲ್ ಮುಗಿಯಲಾರದು ಅಲ್ವೇ ? ಮುಗಿದೇ ಹೋದರೆ ? ಅಯ್ಯೋ, ಬೋರ್ ವೆಲ್ ಬದಿಯಲ್ಲಿ ಬೆಂಕಿ ಉರಿಸದಂತೆ ಹೇಳಬೇಕು.. ಲೇ ಇವಳೇ ?
ಏನ್ರೀ ...
ಬೋರ್ ವೆಲ್ ಬಳಿ ಇರುವ ಕಸದ ರಾಶಿಗೆ ಬೆಂಕಿ ಹಾಕಬೇಡ್ವೇ !
ನಿಮ್ ಬೋರ್ ವೆಲ್ ಗೆ ಬೆಂಕಿಬಿತ್ತು !
ಅಯ್ಯೋ ಪೆಟ್ರೋಲೂಊಊ..
ನಿಮಗೇನ್ರಿ ಆಗಿದೆ, ಸಂಜೆ ಹೊತ್ತಲ್ಲೇ ಮಲಗಿ ಕನಸು ಕಾಣ್ತಾ ಇದ್ದೀರಲ್ಲಾ ?

Tuesday 22 May 2012

ಕಥೆ ಹೇಳಲೇನೆ ನಿನಗೆ ?


ಅಡವಿ ಗಿಡ ಮರ ಕಲ್ಲುಗಳ ನೋಡಲು
ಅರಶಿನದ ಪುಡಿಯಂತೆ ತೋರುತಿದೆ ತಮ್ಮಾ ...

ಎಂತಹ ಭಾವವಾಗಿರಬೇಕು ರಾಮನದ್ದು. ಆ ಮೇಲಿನ ಮನೆಯ ಶಂಕರಣ್ಣನ ರಾಮ, ಮಂಗಳೂರಿನ ಕೇಶವನ ಲಕ್ಷ್ಮಣ ಸೂಪರಾಗಿತ್ತು... ೬ ಘಂಟೆಯಿಂದ ೧೦ ಘಂಟೆಯವರೆಗೆ ಯಕ್ಷಗಾನದ ಮೆಲುಕು ಹಾಕುತ್ತಾ ಮನೆಕಡೆ ಬಂದೆ. ಅವಳು ಹೇಳಿದ ತರಕಾರಿ ಮತ್ತೆ ಸಾಬೂನು ?

ಅಯ್ಯೋ .. ಅವಳ ನೋಟಕ್ಕೆ ಹೇಗೆ ಉತ್ತರಿಸುವುದಿನ್ನು ?

ಮನೆಯ ಬಾಗಿಲನ್ನು ಹದವಾಗಿ ಬಡಿದೆ. ಎಚ್ಚರವಿದ್ದಳೇ ? ಹುಂ, ಬನ್ನಿ .. ಬಂದೆ.. ಮಾತಿಲ್ಲ.
ಯಾಕೆ ಮಾರಾಯ್ತೀ ಮುಖ ಗಂಟು ಹಾಕ್ಕೊಂಡಿದೀಯಾ ?
ಏನ್ರೀ ನೀವು ? ತುಂಬಾ ಏಕಾಂಗಿಯಾಗಿ ಬೇಸರದಿಂದ ಇದೀನಿ ಅನ್ನೋ ಜ್ಞಾನಾನೆ ಇಲ್ವಲ್ಲಾ ನಿಮಗೆ ,
ಅವಳು ಬೈದರೂ ಸಹಿಸಿಕೊಳ್ಳಬಹುದು, ಈ ನೋವಿನ ರೀತಿ ಮುಖಮಾಡುವುದನ್ನು ನೋಡಲಾಗುವುದಿಲ್ಲ ನನಗೆ. ಈಗ ಏನು ಮಾಡುವುದು ಹೇಳಿ ?
--
ಹಾಗಾದ್ರೆ ಇವತ್ತು ಒಂದು ಕಥೆ ಹೇಳ್ತೇನೆ ಕೇಳು
>ಹುಂ, ಆವತ್ತು, ನೀವು ನಮ್ಮ ಮನೆಗೆ (ತವರು ಮನೆಗೆ) ಬಂದಾಗ ಹೇಳಿದ ಕಥೆಯೇ ಆದರೆ ಬೇಡ.
>ಅದಲ್ಲ, ಇದು ಹೊಸಾ ಕಥೆ, ನೀನು ಕೇಳಿರದ ಕಥೆ, ನಾನು ಹೇಳಿರದ ಕಥೆ.
>ಅದೇನು ಕಥೆಯೋ ನಿಮ್ಮದು? ಬಸ್ಸಿನಲ್ಲಿ ನಿಮ್ಮನ್ನು ನೋಡಿ ನಕ್ಕ ಕಾಲೇಜು ಹುಡುಗಿಯ ಕಥೆಯಂತೆ ಕಟ್ಟಿದ ಕಥೆ ಅಲ್ವಲ್ಲ ?
>ಅಯ್ಯೋ ಅದು ಕಟ್ಟುಕಥೆಯಲ್ಲ ಮಾರಾಯ್ತಿ, ಅವಳು ಇವತ್ತೂ ಒಂದು ಸ್ಮೈಲ್ ಕೊಟ್ತಳು ನಿಜವಾಗಿಯೂ.. ಆ ಕಥೆ ಅಲ್ಲ !
>ಓಹೋ, ಎದುರುಗಡೆ ಮನೆಯ ಶಾರದಮ್ಮನ ಕಥೆಯಾ? ಇಲ್ನೋಡಿ, ಅವರ ಮಗನ ಇದೇ ಮೊದಲ ಸಲ ಕಾಗದ ಬರೆದಿದ್ದಾನಂತೆ. ಅಲ್ಲ, ಈ ಮಕ್ಕಳನ್ನ ಆಶ್ರಮದಲ್ಲಿ ಬಿಟ್ಟು ಅದೇನು ಮಾಡ್ತಾರೋ ?
>ಶಾರದಮ್ಮನ ಕಥೆ ಅಲ್ಲ, ಮಕ್ಕಳೆಂದಾಗ ನೆನಪಾಯ್ತು.. ಇವತ್ತು ನನ್ನ ಮ್ಯಾನೇಜರ್ ಕೇಳಿದ್ರು, ನಿಮಗೆಷ್ಟು ಮಕ್ಕಳು ಅಂತ, ಉತ್ತರ ಹೇಳಲಿಲ್ಲ ನಾನು !
>ಪುನಃ ಅದೇ ವಿಷಯಕ್ಕೆ ಬಂದ್ರಿ !
> ಇಲ್ಲ , ಸುದ್ದಿ ಹೇಳಿದೆ ಅಷ್ಟೆ.
> ಸರಿ, ಮತ್ತೆ ಯಾವ ಕಥೆ? ಯಕ್ಷಗಾನ ನೋಡ್ಕೊಂಡು ಬಂದ್ರಿ ಅಲ್ವಾ ? ಅದೇ ಗಣಪತಿ ದೇವಸ್ಥಾನದ ಕಥೆಯಾ ?
>ಉಹುಂ, ಅಲ್ಲ, ದೇವರ ಕಥೆಯಲ್ಲ. ಯಕ್ಷಗಾನ ಚೆನ್ನಾಗಿತ್ತು. ನಿನ್ನ ತಮ್ಮನೂ ತಮ್ಮನ ಹೆಂಡತಿಯೂ ಬಂದಿದ್ರು. ವಿಚಾರಿಸಿದ್ರು ನಿನ್ನನ್ನ. ಯಾಕೆ ಬರಲಿಲ್ಲ ಅಂತ ಕೇಳಿದ್ರು ?
>ಅವರಿಗೆ ಸುಮ್ಮನೆ ಕೇಳುವುದೊಂದು ಚಟ, ಹಾಗೆಲ್ಲಾ ನನ್ನನ್ನ ನೋಡಬೇಕೆನಿಸಿದರೆ ಮನೆಗೇ ಬರಬಹುದಿತ್ತಲ್ಲ. ಹಳೆಯದನ್ನು ಎಲ್ಲಿ ಮರೆಯಬೇಕು ? ನೀವು ಸುಳ್ಳು ಹೇಳಿದರೆ ನಿಮ್ಮ ಕಣ್ಣು ಸತ್ಯ ಹೇಳುತ್ತದಲ್ಲಾ ?
>ಸರಿ ಬಿಡು, ಅವರ ಹಿರಿಮೆ ಅವರಿಗಾಯ್ತು, ನಮ್ಮ ಬದುಕು ನಮಗೆ.
> ಯಾವ ಕಥೆ ರೀ ?
>ಯಾರು ಕಥೆ ಹೇಳಿದ್ದು ?
> ಸರಿ ಹೋಯ್ತು, ಘಂಟೆ ಹನ್ನೆರಡಾಯ್ತು. ಊಟ ಮಾಡಿಲ್ಲ ಇನ್ನೂ, ತರಕಾರಿ ಮತ್ತೆ ಸೋಪು ನಾನೇ ತರ್ತೇನೆ, ಬನ್ನಿ ಊಟಕ್ಕೆ..
> ಹೀಗೇ ಗದರುತ್ತಾ, ನಗ್ತಾ ಇದ್ರೆ ಇನ್ನು ಯಾರ ಕಥೆ ಬೇಕೇ .. ನಮ್ಮದೇ ಕಾದಂಬರಿ ಅಲ್ವೇನೆ ?