Monday 18 August 2014

ರನ್ನನ ಗದಾಯುದ್ಧ - ನೋಟ

ಗದಾಯುದ್ಧವನ್ನು ಸಂಪೂರ್ಣ ವಾಚ್ಯ ಮಾಡುವುದು ಉದ್ದೇಶವಲ್ಲದಿದ್ದರೂ ಟ್ರೇಲರ್ ತೋರಿಸಿದ್ರೆ ಸಿನೆಮಾಕ್ಕೆ ಜನ ಬರಬಹುದೆಂಬ ಉದ್ದೇಶದಿಂದ ಕೆಲವೊಂದು ಸಾಲುಗಳನ್ನು ನನ್ನ ವ್ಯಾಪ್ತಿಯೊಳಗೆ ಅರಿಕೆ ಮಾಡಿಕೊಳ್ಳಬೇಕಿದೆ. ಕನ್ನಡ ಸಾಹಿತ್ಯದ ಈಗಿನ ಜನರು ಸಂಪೂರ್ಣರಾಗಿ ಇಂತಹ ಕಾವ್ಯಗಳಿಂದ ವಿಮುಖರಾಗಿ ತಮ್ಮ ಬರಿಮೈ ಪ್ರತಿಭೆಯನ್ನು ತೋರುತ್ತಾ ಸಾಗುವಾಗ ಇಂತಹ ಕಾವ್ಯಗಳ ಚರ್ಮ ಮತ್ತು ಚರಮ ಸೌಂದರ್ಯ ಯಾಕೆ ಬೇಕಾಗುತ್ತದೆ ಎಂದು ಓದುಗರು ತಿಳಿದುಕೊಳ್ಳುತ್ತಾ ಸಾಗಬೇಕು.

ತನ್ನ ಆಶ್ರಯದಾತನನ್ನೂ ತನಗೆ ಕವಿರತ್ನನೆಂದು ಬಿರುದು ಕೊಟ್ಟವರನ್ನೂ ನೆನೆದು ಬರೆಯುವುದು ಸಂಪ್ರದಾಯ. ಈ ಸಂಪ್ರದಾಯ ಈಗಲೂ ಚಾಲ್ತಿಯಲ್ಲಿದೆ!!. ಹೀಗೇ ರನ್ನನೂ ಒಂದು ಅತ್ಯಂತ ಉತ್ಕೃಷ್ಟವಾದ ಪದ್ಯವನ್ನು, ರೂಪಕವನ್ನು ಕೊಡುತ್ತಾನೆ ಕಂದದಲ್ಲಿ.

ಬೆಳಗುವ ಸೊಡರೊಳ್ ಸೊಡರಂ
ಬೆಳಗಿ ಪಲರ್ ಕೊಂಡು ಪೋಗೆಯುಂ ಕುಂದದೆ ಪ-
ಜ್ಜಳಿಸುವೊಲ್ ಜಗಮೆಲ್ಲಂ
ಕೊಳಲು ತವದಿತ್ತು ಮೆರೆವನಿರುವ ಬೆಡಂಗಂ!

ಉರಿಯುವ ದೀಪದಿಂದ ಇನ್ನೊಂದು ದೀಪವನ್ನು ಉರಿಸಿದರೆ ಮೊದಲಿನ ದೀಪದ ಪ್ರಕಾಶಕ್ಕೆ ಕುಂದುಂಟಾದೀತೇ? ಅಂತೆಯೇ ಇರುವಬೆಡಂಗ ಸತ್ಯಾಶ್ರಯ ಎಷ್ಟು ಕೊಟ್ಟರೂ ಆತ ಮೆರೆಯುತ್ತಾನೆ ಎನ್ನುವ ಅತ್ಯುತ್ತಮ ಪದ್ಯ ಇದು.

ಗುಣದೋಷಮಂ ನಿಕಷಮಿಟ್ಟು ನೋಡೆ ತಾವೆ ಪೇಳವೆ? ಬುಧರಿರ್ದು ನೋಳ್ಪುದು ಪುರಾತನ ನೂತನ ಕಾವ್ಯ ರೇಖೆಯಂ ಎನ್ನುವ ರನ್ನ ಮೊದಲಿಗೆ ತನ್ನ ಕಾವ್ಯವನ್ನು ವಿಮರ್ಶೆ ಮಾಡುವವರಿಗೆ ಎಂಟೆರ್ದೆಯೇ ಎಂದು ಕೇಳುತ್ತಾನೆ.
ರನ್ನನ ಹೆಮ್ಮೆಗೆ ಅವನ ಗದಾಯುದ್ಧದ ಪ್ರಾರಂಭದ ಪದ್ಯಗಳನ್ನು ಓದಿದರೆ ಸಾಕು. ಅದೆಂತಹ ಧೈರ್ಯ?

ಆರಾತೀಯಕವೀಶ್ವರ
ರಾರುಂ ಮುನ್ನಾರ್ತರಿಲ್ಲ ವಾಗ್ದೇವಿಯ ಭಂ-
ಡಾರದ ಮುದ್ರೆಯನೊಡೆದಂ
ಸಾರಸ್ವತವೆನಿಪ ಕವಿತೆಯೊಳ್ ಕವಿರತ್ನಂ.

ರತ್ನಪರೀಕ್ಷನಾಂ ಕೃತಿ
ರತ್ನಪರೀಕ್ಷಕನೆನೆಂದು ಫಣಿಪತಿಯ ಫಣಾ-
ರತ್ನಮಮಂ ರನ್ನನ ಕೃತಿ-
ರತ್ನಮುಮಂ ಪೇಳ್ ಪರೀಕ್ಷಿಪಂಗೆಂಟೆರ್ದೆಯೇ?

ಮಹಾಭಾರತ ಕತೆಯ ಒಳಹೊಕ್ಕು, ಈ ಕತೆಯೆಲ್ಲವನ್ನೂ ಗದಾಯುದ್ಧದೊಳಗೆ ಸಿಂಹಾವಲೋಕನ ಕ್ರಮದಿಂದ ಮುಂದೆ ಹೇಳುತ್ತಾ ಸಾಗುತ್ತಾನೆ ಕವಿರತ್ನ.
೨.
ಎರಡನೇ ಆಶ್ವಾಸಕ್ಕೆ ಹೆಸರು ಭೀಮಸೇನಪ್ರತಿಜ್ಞೆಯೆಂದು. ಮೊದಲ ಪದ್ಯದಲ್ಲೇ ಭೀಮನ ಕಾರ್ಯಗಳ ಬಗ್ಗೆ ಅತ್ಯಂತ ಸುಂದರವಾಗಿ ಹೇಳಿಬಿಡುತ್ತಾನೆ ರನ್ನ. ಈ ಭಾಗದ ಕೆಲವೊಂದನ್ನು ನಿನ್ನೆ ಹಂಚಿಕೊಂಡದ್ದಾಗಿದೆ.
ದ್ರೌಪದಿ ಮತ್ತು ಭೀಮಸೇನರ ಸಂವಾದವು ಇದರಲ್ಲಿದೆ. ಧರ್ಮರಾಯ ಇನ್ನೂ ಸಂಧಾನಕ್ಕೆ ಮುಂದಾದಾನು ಎನ್ನುವ ಸಂಶಯದೊಂದಿಗೆ ಬಂದ ದ್ರೌಪದಿ ಭೀಮನಲ್ಲಿ ಹೇಳುವ ಒಂದು ಮಾತು

ಸಮವಾಯಮಹಿತರೊಳ್ ಸಂ-
ಧಿಮಾಡಿ ಯಮಸೂನು ಪೇಳೆ ವನವಾಸವೆ ದಲ್
ನಿಮಗೆ ಶರಣೆನಗಮಂದ
ಗ್ನಿಮುಖದೆ ಪುಡ್ಡಿದುದರಿಂದೆ ಶರಣಗ್ನಿಮುಖಂ

ಒಂದುವೇಳೆ ಧರ್ಮರಾಯ ಸಂಧಿಯನ್ನು ಮಾಡಿಕೊಂಡರೆ ನೀವುಗಳು ವನವಾಸವನ್ನು ಅನುಭವಿಸಿ, ಅಗ್ನಿಮುಖದಿಂದ ಹುಟ್ಟಿದ ನಾನು ಅಗ್ನಿಯನ್ನೇ ಪ್ರವೇಶಮಾಡುವೆನು ಎನ್ನುವ ಮಾತು.

ಭೀಮನ ಉತ್ತರವೂ ಆಶ್ವಾಸನೆಯೂ ಅತ್ಯಂತ ಸೊಗಸಾಗಿದೆ ಈ ಭಾಗದಲ್ಲಿ. ಅದರಲ್ಲೂ ಈ ಸಾಲು!

ಕುರುಕುಲಶೋಣಿತಪಾದಪದ್ಮತಳಂ ತಳೋ-
ದರಿಗೆ ವೃಕೋದರನಾಗಿಪಂ ಕಚಬಂಧ ಬಂ-
ಧುರತೆಯನಾತನ ಪೂಣ್ದ ಪೂಣ್ಕೆ ಶಿಳಾತಳಾ-
ಕ್ಷರಮೆನಿಸಿರ್ಪ ಜನೋಕ್ತಿಯಂ ಪುಸಿಮಾಳ್ಪನೇ?

ಕೊನೆಗೆ ಬಂದ ವಿದೂಷಕನೊಬ್ಬ ನೂರನ್ನು ಕೊಂದವನಿಗೆ ಇವನೊಬ್ಬನ್ಯಾವ ಲೆಕ್ಕ ಎನ್ನುತ್ತಾ ದ್ರೌಪದಿಯ ಮೊಗವನ್ನು ನೋಡಿ,

ಕುರುಕುಲಮಂ ನುಂಗಿದೆಯಿ
ನ್ನರೆಬರುಮಂ ನುಂಗಲಿರ್ದೆ ಕುರುಪತಿಯುಮುನಿ-
ನ್ನೆರಡನೆಯ ಹಿಡಿಂಬೆಯನೆ-
ಮ್ಮರಸಂ ರಕ್ಕಸಿಯನೆಲ್ಲಿ ತಂದನೋ ನಿನ್ನಂ

(ಓ ದ್ರೌಪದೀ, ಕುರುಕುಲವನ್ನೇ ನುಂಗಿದೆ, ಇನ್ನು ಕುರುಪತಿಯನ್ನೂ ನುಂಗಲಿರುವ ಎರಡನೆಯ ಹಿಡಿಂಬೆಯನ್ನು ನಮ್ಮ ಅರಸ ಭೀಮಸೇನ ಅದೆಲ್ಲಿಂದ ತಂದನೋ?)

ಹೇಳಲು, ಅಳುತ್ತ ಬಂದಿದ್ದ ದ್ರೌಪದಿ ನಸುನಗುತ್ತಾ ತನ್ನ ಅಂತಃಪುರಕ್ಕೆ ಸಾಗಿದಳು.
---
ಅತ್ತಲಾ ಕುರುರಾಯ!


ಛಲದಂಕಮಲ್ಲನುಂ ಸಕಲಭೋಗಲಕ್ಷ್ಮೀಪತಿಯುಂ ಅಭಿಮಾನಧನನುಂ ಎನಿಸಿದ ಸುಯೋಧನಂ ಚಿಂತಾಕ್ರಾಂತನಾಗಿ ಮುಂದೆಬರುತ್ತಾ ಇರುವಂತಹ ಈ ಭಾಗ ಸಂಜಯವಚನಂ ಎಂದು ಹೇಳಿದ್ದಾನೆ ರನ್ನ. ಈ ಭಾಗದಲ್ಲಿ ಕೆಲವು ಅತ್ಯುನ್ನತ ಕಂದಪದ್ಯಗಳೂ ವೃತ್ತಗಳೂ ಇದೆ.

ಅಸುಹೃತ್ಸೇನೆಗೆ ಸಾಲ್ವನೊರ್ವನೆ ಗಡಂ ರುದ್ರಾವತಾರಂ ಗಡಂ
ನೊಸಲೊಳ್ ಕಣ್ ಗಡಮೆಂದು ನಚ್ಚಿ ಪೊರೆದಂ ತಾನಕ್ಕೆ ತಮ್ಮಮ್ಮನ-
ಕ್ಕಿಸಲಂಬಂ ತಿರುವಾಯ್ಗೆ ತಂದರಿವರೇ ತಮ್ಮಿರ್ವರುಂ ಕಯ್ದುವಂ
ಬಿಸುಟರ್ ಜೋಳದ ಪಾಳಿಯಂ ಬಗೆದರಿಲ್ಲಾ ದ್ರೌಣಿಯಂ ದ್ರೋಣನುಂ

ಅನ್ನದ ಋಣವನ್ನು ದ್ರೋಣನೂ ದ್ರೋಣಿಯೂ ಮರೆತರು ಎಂದು ನಿರಾಶೆಯಿಂದ ಬೈಯ್ಯುತ್ತಾ ಇನ್ನೊಂದು ಪದ್ಯವನ್ನು ಸುಯೋಧನನ ಬಾಯಿಯಿಂದ ಹೇಳಿಸುತ್ತಾನೆ ರನ್ನ.

ಈಯಲಿರಿಯಲ್ ಶರಣ್ಬುಗೆ
ಕಾಯಲ್ ಕ್ಷತ್ರಿಯರೆ ಬಲ್ಲರಾ ಬ್ರಹ್ಮಣ್ಯರ್
ಭೋಯೆನಲುಂ ಬಲ್ಲರ್ ಕೊಲೆ
ಧೋಯೆನಲುಂ ಬಲ್ಲರರಿಯಲವರೆತ್ತಲರಿವರ್!

ಈಯಲು ಅರ್ಥಾತ್ ಕೊಡಲು, ಇರಿಯಲ್ ಅರ್ಥಾತ್ ಯುದ್ಧಕ್ಕೆ, ಶರಣಾದವರನ್ನು ಕಾಯಲು ಕ್ಷತ್ರಿಯರೆ ಬಲ್ಲರು. ಬ್ರಾಹ್ಮಣರು ಓ ಅಯ್ಯಯ್ಯೋ ಎನಲಷ್ಟೇ, ಎಂದು ದ್ರೋಣನನ್ನು ಮೂದಲಿಸುತ್ತಾನೆ.

ಕರವಾಳಂ ಮಸೆವಂತಿರೆ
ಮರವಾಳಂ ಮಸೆಯೆ ಕೂರಿತಕ್ಕುಮೆ ಕಲಿಯಂ
ಪೊರೆದೊಡೆ ಕೂರ್ಪಂ ತೋರ್ಪಂ-
ತಿರೆ ತೋರ್ಕುಮೆ ಪಂದೆ ಪತಿಗೆ ಸಂಗರದೆಡೆಯೊಳ್

ಅಹಹ.. ಕಬ್ಬಿಣದ ಕತ್ತಿಯನ್ನು ಮಸೆಯುವಂತೆ ಮರದ ಕತ್ತಿಯನ್ನು ಎಷ್ಟು ಮಸೆದರೇನು? ಹರಿತವಾದೀತೇ? ಹೇಡಿಗಳನ್ನು ಬೆಳೆಸಿದರೆ ಸಂಗ್ರಾಮಕ್ಕೆ ಉಪಯೋಗ ಬಂದೀತೇ?

ಮುಂದೆ ಸಂಜಯನ ಜೊತೆಗೆ ಮಾತನ್ನಾಡುತ್ತಾ ಹಳೆಯ ಕತೆಗಳನ್ನು ಕುರುಕ್ಷೇತ್ರದ ಮೊದಲಿನ ಯುದ್ಧದ ಮಾತುಗಳನ್ನೂ ಆಡುತ್ತಾನೆ ಸುಯೋಧನ. ಮುಂದುವರೆದು ಭೀಮ, ಅರ್ಜುನ ಧರ್ಮರಾಯ ನಕುಲ ಸಹದೇವರನ್ನು ಛೇಡಿಸುತ್ತಾ ಕೆಲವು ಪದ್ಯಗಳಿವೆ. ಅವೆಲ್ಲಾ ಬಹಳ ಸೊಗಸಾದ ರನ್ನನ ರಚನೆಗಳು. ಧರ್ಮರಾಜನನ್ನು ಹೊಗಳಿದ ಸಂಜಯನ ಮಾತಿಗೆ ಕಿಡಿಯಾದ ಕೌರವ

ಸ್ಥಿರಸತ್ಯವ್ರತಿಯೆಂದು ಧರ್ಮರುಚಿಯೆಂದಾ ಧರ್ಮಪುತ್ರಂ ದಯಾ-
ಪರನೆಂದೆಲ್ಲರ ಪೇಳ್ದ ಮಾತು ಪುಸಿಯಾಯ್ತೀ ಕಾರ್ಮುಕಾಚಾರ್ಯನಂ
ಗುರುವಂ ಬ್ರಾಹ್ಮಣನಂ ತೊದಳ್ನುಡಿದು ಕೊಂದಾಗಳ್ ಮೃಷಾಪಾತಕಂ
ಪರಮೆಂಬೀ ನುಡಿಯಿಂ ಪೃಥಾಪ್ರಿಯಸುತಂ ಪಾಪಕ್ಕೆ ಪಕ್ಕಾಗನೇ?

ಮತ್ತೆ ಭೀಮನಿಗೆ,

ವನಿತೆಯ ಕೇಶಮಂ ಸಭೆಯೊಳೆನ್ನನುಜಂ ತೆಗೆವಲ್ಲಿ ಗಂಡನಾ-
ಗನೆ ಭಗದತ್ತನಾನೆ ಅರಿಯೆಲ್ವುಡಿವನ್ನೆಗಮೊತ್ತೆ ಗಂಡನಾ-
ಗನೆ ಕೊಲಲೊಲ್ಲದಂಗಪತಿ ಬಿಲ್ಗೊಳೆ ಕೋದೆರವಲ್ಲಿ ಗಂಡನಾ-
ಗನೆ ಕುರುಬಾಲಸಂಹರಣಮಾತ್ರದೆ ಮಾರುತಿ ಗಂಡನಾದನೇ?

ರನ್ನನ ಕಾವ್ಯದ ಶಕ್ತಿ ಇಲ್ಲಿ ಗಮನಿಸಬೇಕಾದ್ದು. ಮೊದಲಿನ ಕೆಲವು ಕತೆಗಳನ್ನು ಹೇಳುತ್ತಾ ಕೊನೆಗೆ ಕುರುಬಾಲಸಂಹರಣಮಾತ್ರದೆ ಮಾರುತಿ ಗಂಡನಾದನೆ ಎನ್ನುವಾಗ ಭೀಮನಿಂದ ದುಶ್ಶಾಸನ ಬಹಳ ಸಣ್ಣವನೆಂದು ನೋಡಿಕೊಂಡಿದ್ದಾನೆ. ಅದು ಬೇರೆ ಭೀಮನಿಗೆ ಮಾರುತಿ ಎಂದೂ ಕರೆದಿದ್ದಾನೆ. ಬಹಳ ಸುಂದರವಾದ ಪದ್ಯ.

ಇನ್ನೊಂದು ಪದ್ಯದಲ್ಲಿ ಆಂಜನೇಯನನ್ನೂ ಜರೆಯುವ ಕೌರವ "ಕಪಿಗೆ ಚಪಲತೆ ಸಹಜಂ" ಎನ್ನುತ್ತಾಮೆ ರನ್ನ.

ಸಂಜಯವಚನಂ ಎನ್ನುವ ಆಶ್ವಾಸದಲ್ಲಿ ಇನ್ನೂ ತುಂಬಾ ಚೆನ್ನಾಗಿರುವ ಪದ್ಯಗಳಿವೆ. ನಾಳೆಗೆ ಮುಂದುವರಿಕೆ.


ಈ ಭಾಗದಲ್ಲಿ(ಸಂಜಯವಚನಂ) ದುರ್ಯೋಧನ ಕೃಷ್ಣನನ್ನೂ ಮೂದಲಿಸುತ್ತಾನೆ. ಸಂಜಯನು ಬಲರಾಮ ಬರಲಿ, ಅಶ್ವತ್ಥಾಮ ಬರಲಿ ಕೃಪ ಕೃತವರ್ಮರು ಬರಲಿ, ಅವರಲ್ಲೊಬ್ಬರಿಗೆ ಸೇನಾಧಿಪತ್ಯವನ್ನು ಕೊಟ್ಟು ಯುದ್ಧ ಮುಂದುವರೆಸು ಎಂದಾಗ

ತ್ರಿದಶನದೀಸುತಂನಿಂ ತೀ-
ರದ ಕಜ್ಜಂ ಮುನ್ನ ಕಳಶಸಂಭವನಿಂ ತೀ-
ರದ ಕಜ್ಜಮಿನಜನಿಂ ತೀರ-
ರದ ಕಜ್ಜಂ ದ್ರೋಣಪುತ್ರನಿಂ ತೀರ್ದಪುದೇ

(ಬಿಡಿಸಿ ಓದುವುದು ಹೇಗೆ ಎಂದು ಕೆಲವರು ಕೇಳಿದ್ದರು, ಹಳೆಗನ್ನಡಕಾವ್ಯವನ್ನು ಬಸ್ಸಿನಲ್ಲೋ ರೈಲಿನಲ್ಲೋ ಓದುವುದಕ್ಕಾಗುವುದಿಲ್ಲ. ಸ್ವಲ್ಪ ಗಟ್ಟಿಯಾಗಿ ಓದಿಕೊಂಡರೆ ತಾನಾಗಿ ಒಲಿಯುತ್ತದೆ ಹಳೆಗನ್ನಡ. ಉದಾಹರಣೆಗೆ : ತ್ರಿದಶನದೀ ಸುತನಿಂ ತೀರದ ಕಜ್ಜಂ, ಕಳಶಸಂಭವನಿಂ ತೀರದ ಕಜ್ಜಂ, ಇನಜನಿಂ ತೀರದ ಕಜ್ಜಂ ದ್ರೋಣಪುತ್ರನಿಂ ತೀರ್ದಪುದೇ". ಅರ್ಥವಾಗದೇ?)

ಗಾಂಗೇಯನಿಂದ, ದ್ರೋಣನಿಂದ, ಕರ್ಣನಿಂದ ಆಗದ ಕಾರ್ಯ ದ್ರೋಣನ ಮಗನಾದ ಅಶ್ವತ್ಥಾಮನಿಂದ ಸಾಧ್ಯವಾದೀತೇ ಎಂದು ದುರ್ಯೋಧನ ಕೇಳ್ತಾನೆ. ಹಾಗೇ ಹಲಿಯಂ ರಣಕೇಳಿಕುತೂಹಲಿಯು ಆದಂತಹ ಬಲರಾಮ ತೀರ್ಥಯಾತ್ರೆಗೆ ಹೋಗಿದ್ದಾನೆ, ಇನ್ನು ಬಾರನು ಮತ್ತು ಹಗೆ ಮಡಿಯುವುದಾದರೆ ಕರ್ಣನಿಗೆ, ದುಶ್ಶಾಸನನಿಗೆ ಇಲ್ಲವಾದಲ್ಲಿ ನನಗೆ, ಉಳಿದವರಿಗಲ್ಲ ಎನ್ನುತ್ತಾನೆ.

ಈ ಕಂದ ಪದ್ಯಗಳ ಸೂಗಸು ಓದಿಯೇ ತಿಳಿಯಬೇಕು. ಶೂನ್ಯಂ ಶೂನ್ಯಂ ಎನ್ನುವ ಪಂಪನ ಹಾಗೇ ರನ್ನನ ಶೂನ್ಯಂ ಕಂದ ಪದ್ಯ.

ಎನಗೆ ಮನಮಿಂದು ಶೂನ್ಯಂ
ಮನೆ ಶೂನ್ಯಂ ಬೀಡು ಶೂನ್ಯಮಾದುದು ಸಕಲಾ
ವನಿ ಶೂನ್ಯಮಾಯ್ತು ದುಶ್ಶಾ-
ಸನನಿಲ್ಲದೆ ಕರ್ಣನಿಲ್ಲದಾನೆಂತಿರ್ಪೆಂ!

ಈ ರೀತಿಯೆಲ್ಲಾ ಶೋಕಿಸುತ್ತಿರುವಾಗ ಚಾರರು ಹೇಳಿದಂತಹ ಮಾತುಗಳನ್ನು ಕೇಳಿ ಗಾಂಧಾರಿಯೂ ಧೃತರಾಷ್ಟ್ರನೂ ಆ ರಣಕ್ಷೇತ್ರಕ್ಕೆ ಕೌರವನನ್ನು ಹುಡುಕಿ ಬರುತ್ತಾರೆ.

~
ಇನ್ನೂ ಇದೆ.

1 comment:

  1. ಗಧಾಯುದ್ಧ ಪರಿಚಯ ಮಾಲೆ ಉಪಯುಕ್ತವಾಗಿದೆ.
    ಮತ್ತೆ ತಾವು ಬ್ಲಾಗಿಗೆ ಹಿಂದಿರಿಗಿದ್ದು ಸಂತಸದ ಸಂಗತಿ.

    ReplyDelete