Sunday 8 April 2012

ಒಬ್ಬಂಟಿ !


ಈ ಒಂದು ದಿನ ಅಷ್ಟು ಘೋರವಾದೀತೆಂದು ಕನಸಿನಲ್ಲೂ ನೆನೆಸಿರಲಿಲ್ಲ ಮೊದಲು!. ಆದರೂ ಪುನಃ ನೋಡಿದ ಸಿನಿಮಾ ಕಥೆಯಂತೆ ಸುತ್ತಲೂ ಸುತ್ತುತ್ತಾ ಸಾಗಿ, ನನ್ನನ್ನೂ ಅದರ ಒಳಗಿನ ಪಾತ್ರವಾಗಿಸಿ ಒಮ್ಮೆಲೇ ನೀನು ಬೇರೆ ಒಂದು ಜೀವಿ, ನೋಡಿ ಅನುಭವಿಸುವುದಷ್ಟೇ ನಿನ್ನ ಪಾತ್ರ ಎಂದಾಗ. ನಾನೇ ಬಯಸಿದ ಅಥವಾ ಒಪ್ಪಿದ ಇಂತಹ ಸ್ಥಿತಿ ಯಾವತ್ತೂ ಕಾಡುವುದು ಈಗ ಒಪ್ಪದೇ ಓಡಿ ಹೋಗಬೇಕೆನಿಸುವಷ್ಟು ಯಾತನೆ.

ಮೊದಲು ಕೆಲಸದಲ್ಲಿದ್ದಾಗ ಎಂತಹ ಸ್ವಾತಂತ್ರ್ಯ. ಅಪ್ಪ ಅಮ್ಮ ಇಬ್ಬರೂ ನನ್ನ ಪರವಾಗಿಯೇ ಇದ್ದರು. ಮೊದಲ ಕೆಲಸ ಅಷ್ಟು ಆಪ್ಯಾಯಮಾನವಾಗೇನೂ ಇರಲಿಲ್ಲ. ಆದರೆ ನೆಗೆತದ ಸುಖ ಎಷ್ಟು ಹಣ ಕೊಟ್ಟಿತು. ಪುನಃ ನೆಗೆದೆ, ಹೀಗಾಗಿ ನೆನಸದ ಸುಖಗಳು ಇನ್ನೂ ಹೆಚ್ಚಾಗಿ ಸಿಗತೊಡಗಿತು. ಎರಡೋ ಮೂರು ವರ್ಷದಲ್ಲಿ ಆ ಕೆಲಸವನ್ನೂ ಬಿಟ್ಟೆ. ಇಪ್ಪತ್ತೈದು ವರ್ಷಕ್ಕೇ ಮದುವೆ. ಮದುವೆ ನಿಶ್ಚಯ ಆದ ಮರುದಿನವೇ ರಾಜೀನಾಮೆ ಪತ್ರ ಕೊಟ್ಟು ಎಂತಹ ಹೆಮ್ಮೆಯಿಂದ ಆಫೀಸು ಬಿಟ್ಟು ಬಂದೆ !

ಅದೇನೋ ಆಕರ್ಷಣೆ, ಸ್ವ ಉದ್ಯೋಗದ ಹುಚ್ಚಿದ್ದ ಭಾವೀಪತಿಗೆ ತುಂಬು ಹೃದಯದ ಸಹಕಾರ ಕೊಡುವಂತ ಕನಸು. ಹಾಗೇ ಆಯಿತು. ಎರಡು ತಿಂಗಳ ಫೋನು ಕಥೆಗಳಲ್ಲೂ ಆಕಾಶಕ್ಕೆ ಏಣಿ ಹಾಕುವ ಕನಸುಗಳು ಕಟ್ಟಿಕೊಂಡೆ. ಮತ್ತೆ ಅದೇನೋ ಸೆಳೆತವಿತ್ತು. ಅವನ ಅವಕಾಶಗಳ ಬಗ್ಗೆ ಹಿಗ್ಗು. ಅವನ ಕನಸುಗಳ , ಸಾಧನೆಗಳ ಬಗ್ಗೆ ಹಿಗ್ಗು. ಎಷ್ಟು ನನ್ನ ಗೆಳತಿಯರ ಮುಂದೆ ಹೇಳಿಕೊಂಡಿಲ್ಲ. ಪ್ರೇಮ ಪ್ರೀತಿ ಎನ್ನುವ ಭಾವಗಳಿಗೆ ನನ್ನದೇ ಆದ ಅರ್ಥವಿರಲಿಲ್ಲ. ಆದರೂ ಅವನೊಡನೆ ಮಾತನಾಡುತ್ತಾ ಟೇರೇಸಿನ ಮೂಲೆ ಮೂಲೆಯಲ್ಲಿ ಹೆಜ್ಜೆಗುರುತುಗಳನ್ನ ಮೂಡಿಸುವುದು ಪ್ರೇಮವೆಂದೇ ನನ್ನ ಭಾವನೆ. ಅವನ ಭೇಟಿ, ಅವನೊಡನಾಟವೂ ಅದೇ ಎಂದು ಆಡುವ ಸುಖ. ಸ್ಟೆಲ್ಲಾ ಮೇರಿಯಂತೆ  ಅಥವಾ ದೊಡ್ಡಮ್ಮನ ಮಗಳಂತೆ ಪ್ರೇಮ ಪ್ರೀತಿಯನ್ನು ಪಾರ್ಕು ಬೆಂಚುಗಳ ಮೇಲೆ ಬರೆಯಿಸದಿದ್ದರೂ ಅವರ ಮುಂದೆ ನಾನು ನನ್ನವನನ್ನು ಭೇಟಿಯಾಗುತ್ತೇನೆ, ಅವನ ಫೋಟೋಗಳನ್ನ ಅಲ್ಲಿ ಇಲ್ಲಿ ಶೇರ್ ಮಾಡುತ್ತೇನೆ. ಮೊಬೈಲಿನ ವಾಲ್ ಪೇಪರಿಗೆ ಅವನ ಫೋಟೋವನ್ನೇ ಸಣ್ಣದು ಮಾಡಿ ಹಾಕುತ್ತೇನೆ..ಇದೂ ಒಂದು ಪ್ರೇಮವೇ ಆಗಿತ್ತು..ಎಲ್ಲೆಲ್ಲೂ ಕಾಣುತ್ತಿದ್ದ ಚಿಗುರು ಗಿಡಮರಗಳನ್ನು ನೋಡುವಾಗ ಆಗುವ ಆಪ್ಯಾಯಮಾನ ಭಾವ. ಎಲ್ಲೆಲ್ಲಿಯೂ ಸಂತಸವೇ ಇರುತ್ತದೆ ಎಂದುಕೊಳ್ಳುತ್ತಾ ಒಂದೊಂದೇ ಕಟ್ಟುಪಾಡುಗಳಿಗೆ ಸುಖವಾಗಿ ಜಾರತೊಡಗಿ ತುಂಬಾ ಕಾಲವೇನೂ ಆಗಲಿಲ್ಲ..

ಸರೀ ಎರಡು ತಿಂಗಳಿಗೆ ನಿಶ್ಚೈಸಿದ ದಿನವೇ ಮದುವೆಯಾಯಿತು. ಒಂದು ಬಗೆಯ ಬೇಸರವಿದ್ದರೂ ಅದನ್ನೆಲ್ಲಾ ಕೊನೆಗೊಳಿಸುವ ಅವನ ಸಾಂಗತ್ಯಸುಖದ .ಒಂದು ಕನಸು ಇದನ್ನೆಲ್ಲ ಮರೆತು ಹಾಕಿತ್ತು. ಅದೂ ನಾನು ಮೆಚ್ಚಿ ಮದುವೆಯಾದದ್ದೋ ಮದುವೆಯಾಗಿ ಮೆಚ್ಚಿದ್ದೋ ಎನ್ನುವ ರೀತಿ. ಏನೋ ಅಡಗಿಸಿಡುವ ಹೊಸಾ ಮನೆಯ ವಾತಾವರಣ ಒಗ್ಗಿಹೋಗುವುದು ಕಷ್ಟ ಎಂದುಕೊಂಡರೂ ಮನೆಯೇ ನನಗೆ ಒಗ್ಗತೊಡಗಿತು. ಒಗ್ಗರಣೆ ಡಬ್ಬಗಳೂ ಸಲೀಸಾಗಿ ಕೈಗೆ ದೊರೆಯತೊಡಗಿತು. ಅತ್ತೆ ಮಾವನ ಬೆಂಗಳೂರಿಗೆ ಬಂದು ಉಳಿಯಲು ಇಷ್ಟ ಪಡದೇ ಇರುವುದರಿಂದ ನನಗೆ ಇಂತಹಾ ಒಗ್ಗುವಿಕೆ ಕಷ್ಟ ಆಗಲಿಲ್ಲ, ಆದರೆ ಈಗಲೂ ಹಳ್ಳಿಗೆ ಹೋದರೆ ನಾನು ಅಪರಿಚಿತಳೇ , ನನ್ನ ಮನೆ ಎಂದೆನಿಸುವುದೇ ಇಲ್ಲ..

ಮದುವೆಯಾದ ೨೫ ದಿನಕ್ಕೇ ಇವರಿಗೆ ಒಳ್ಳೆಯ ಆಫರ್ ಬಂತು. ಯಾವುದೋ ಹೆಸರು ಬಾರದ UK ಕಂಪೆನಿಯಿಂದ ಯಾವುದೋ ತಂತಾಂಶದ ಬೇಡಿಕೆ. ಕೇವಲ ಯಾರದೋ ಮೇಲಿನ ಸಿಟ್ಟಿನಿಂದ ಪ್ರಾರಂಭಿಸಿದ ಸಣ್ಣಮಟ್ಟಿನ ಇವರ ಸಂಸ್ಥೆ ಈಗ ಎಲ್ಲರೂ ಗಮನಿಸುವಂತಾಯ್ತು. ನೆರವಿಗೆ ಬಾರದ ಬ್ಯಾಂಕುಗಳು ಸಾಲ ಕೊಡಲು ಈಗ ಸಿದ್ಧರಂತೆ ! ಅದೇ ಸಂಜೆ  ನೀನೇ ಇಂತಹ ಯಶಸ್ಸಿಗೆ ಕಾರಣವೆಂಬಂತೆ ದೊಡ್ಡ ಬೊಕ್ಕೆ ಮತ್ತೆ ಒಂದು ನೆಕ್ಲೆಸ್ ನನಗೆ !. ಎಷ್ಟು ಹೆಮ್ಮೆ. ಮೊಬೈಲಿನಲ್ಲಿದ್ದ ಹೆಚ್ಚಿನವರಿಗೆ ಫೋನಾಯಿಸಿ ಈ ವಿಷಯ ಹೇಳಿದ್ದು ಎಲ್ಲವೂ ನೆನಪಲ್ಲಿದೆ,

ಮದುವೆಯಾಗಿ ಒಂದು ವರ್ಷ.ತವರು ಮನೆಗೆ ಮದುವೆಯಾದರೂ ಇದ್ದ ಹಾಗೆಯೇ ಇದ್ದೀಯಾ ಎನ್ನುವ ಗೆಳತಿಯರ ಮಾತುಗಳು ಕುಕ್ಕುತ್ತಿದೆಯೋ ಅಲ್ಲ ನನಗೆ ಹೆಮ್ಮೆ ತರುತ್ತಿದೆಯೋ ಎನ್ನುವುದನ್ನ ವಿಶ್ಲೇಷಣ ಮಾಡಲಾರೆ. ಅರ್ಥವಾಗುವುದಿಲ್ಲ. ದೊಡ್ಡಪ್ಪನ ಮಗಳು ಇನ್ನೊಂದೆರಡು ತಿಂಗಳಲ್ಲಿ ಹೊಸ ಜೀವಕ್ಕೆ ಜನ್ಮ ನೀಡುತ್ತಾಳೆ ಎನ್ನುವ ವಿಷಯವನ್ನೇ ಅಪ್ಪ ಮುಖ್ಯವಾಗಿ ಆಡಿದ್ದ ರೀತಿ ಮನೆಗೆ ಬಂದ ಮೇಲೆ ಕಾಡತೊಡಗಿತು. ಈ ವಿಷಯವಾಗಿ  ನನ್ನವರದ್ದೇನೂ ತಪ್ಪಿಲ್ಲ.. ಗೆಳತಿಯರ ಹಾಗೂ ಹೆಚ್ಚಾಗಿ, ಮದುವೆಯಾದವರ ಅಭಿಪ್ರಾಯದಂತೆ ಸಧ್ಯಕ್ಕೆ ಮಗು ಬೇಡವೆಂದು ನಾನೇ ಹೇಳಿದ್ದು, ಆತ ಒಪ್ಪಿಯೂ ಇದ್ದ. ಈಗ ಈ ದ್ವಂದ್ವವೂ ಹೆಚ್ಚಾಗ ತೊಡಗಿತು.

ಈಗ ಎಷ್ಟು ? ೨೮ ನೇ ವರ್ಷ ನಾಡಿದ್ದು ಜುಲೈ ಬಂದರೆ ! ಅಂದರೆ ಸರಿಯಾಗಿ ಒಂದೂವರೆ ವರ್ಷ. ಬೆಳಗ್ಗೆ ಏಳುವುದು, ಏನಾದರೂ ಅಡುಗೆ ಮಾಡುವುದು..ಅವರು ಆಫೀಸಿಗೆ ಹೋದಂತೆ ಮತ್ತೆ ಸುಮ್ಮನೆ ಟೀವಿ ಕಂಪ್ಯೂಟರು ... ರಾತ್ರಿ ಅದೆಷ್ಟು ಹೊತ್ತಿಗೆ ಬರುತ್ತಾರೆ ಎನ್ನುವುದನ್ನ ಗಡಿಯಾರದ ಮುಂದೆ ಕುಳಿತು ಲೆಕ್ಕ ಹಾಕುವುದು.. ಮದುವೆಯಾದ ಹೊಸತರಲ್ಲಿ ೫ ಘಂಟೆಗೆ ಮನೆಗೆ ಬರುತ್ತಿದ್ದವರು ಈಗ ಇಲ್ಲಿಯೂ ಮೇಲೇರಿದ್ದಾರೆ. ೧೧ ಘಂಟೆಯ ಮೊದಲು ಬಂದ ಚರಿತ್ರೆಯಿಲ್ಲ ಮೂರ್ನಾಲ್ಕು ತಿಂಗಳಿಂದ..ಅದೇನೋ ಹೊಸಾ ಪ್ರಾಜೆಕ್ಟುಗಳು ಸಮಯವನ್ನು ಜಾಸ್ತಿ ಮಾಡುವುದಕ್ಕೆಂದೇ ದೊರೆಯುತ್ತದೇನೋ ?

ಏನೋ ಒಂದು ರೀತಿಯ ಮಂಕು. ಸಾಮೀಪ್ಯವಿದ್ದರೂ ಸುಖ ಸಿಗದೇ ಹೋದಂತೆ.ಮದುವೆಯಾದ ಸನ್ಯಾಸಿತನಕ್ಕೆ ಏನೆನ್ನುವುದು?. ಗಂಡಿನ ಮನಸ್ಸೇನು ಎನ್ನುವುದೇ ಅರಿವಾಗುವುದಿಲ್ಲ. ಕಡೇ ಪಕ್ಷ ನಾನು ರಜೆಯಲ್ಲಿರುವುದನ್ನೂ ಅರಿಯದಿರುವ ಇಂತಹ ಗೊತ್ತಿಲ್ಲದ ! ಸ್ಥಿತಿಗೆ ಏನೆನ್ನಬೇಕು.. ಸುಖದಿಂದ ವಂಚಿತಳಾದಾಗ ಬರುವ ಸಿಟ್ಟು ಸಾಮಾನ್ಯವಾದದ್ದಲ್ಲ. ಮದುವೆಯಾದ ಬೇರೆಯವರೆಲ್ಲಾ ಖುಷಿಯಲ್ಲಿ, ಜೊತೆ ಜೊತೆಯಾಗಿ ಸುತ್ತುವುದನ್ನ ಕಂಡಾಗ ಸಿಟ್ಟು ನೆತ್ತಿಗೇರುತ್ತದೆ.

ಅದೇನೋ, ಈ ಟೀವಿಯ ಕಾರ್ಯಕ್ರಮಗಳು ಬೇಜಾರೆನಿಸಿದಾಗ ಕಂಪ್ಯೂಟರಿನಲ್ಲಿ ಹುಡುಕುವುದು.. ಯಾರು ಯಾರೋ ಸಿಗುತ್ತಾ ಸಾಗುತ್ತಾರೆ. ದಿನಕ್ಕೊಬ್ಬರು ಹೊಸಾ ವ್ಯಕ್ತಿಗಳು. ಏನೋ ಹೊಸಾ ಕುಟುಂಬದ ಜನರಂತೆ ಬೆರೆಯುತ್ತಾ ಸಾಗುವುದು.. ಇಂಟರ್ನೆಟ್ಟಿಂದ ನನ್ನ ಸ್ವಲ್ಪ ಮನಸ್ಸಿನ ದುಗುಡ ಕಳೆಯಬಹುದಾದರೂ ದೈಹಿಕವಾದ ಸುಖದ ಒತ್ತಾಯಕ್ಕೆ ಏನು ಮಾಡುವುದು.

ಹನ್ನೊಂದೂವರೆ ! ಯಾವತ್ತಿನಿಂದ ಇವತ್ತು ಎಂಟು ನಿಮಿಷ ಲೇಟ್ !! ಊಟವಾಗಿತ್ತು ಅವರದ್ದು.. ಸ್ವಲ್ಪ ಬಿಗುವಾಗಿಯೇ ಮಾತನಾಡಿಸಿ ಅವರನ್ನ ಒಪ್ಪಿಸುವುದೇ ಉದ್ದೇಶವಾಗಿತ್ತು. ಕ್ಷಣಿಕ ಕಾಮವನ್ನು ಅಪೇಕ್ಷೆ ಪಡುವುದಲ್ಲ, ದಿನವೂ ರಮಿಸುವ, ಜೊತೆಗಿರುವ ಶೃಂಗಾರವನ್ನು ಬಯಸಬೇಕಾಗಿತ್ತು.
>>
>ನಾಳೆಯಿಂದ ಬೇಗ ಬನ್ನಿ. ಎಲ್ಲಾ ಮದುವೆಯಾದವರನ್ನ ನೋಡಿ. ಪಕ್ಕದ ಮನೆಯ ಬ್ಯಾಂಕ್ ಮ್ಯಾನೇಜರ್ ನೋಡಿ, ದಿನವೂ ೬ ಘಂಟೆಗೆ ಬರುತ್ತಾರೆ. ನೀವೇಕೆ ಹೀಗೆ?
>ಹೆಹ್ಹೆ,. ನಾನು ಈ ಪ್ರಾಜೆಕ್ಟ್ ಮುಗಿಸಿದರೆ ಇನ್ನೊಂದು ವಾರ ನಿನ್ನ ಜೊತೆ ಇಡೀ ದಿನ ಇರಬಹುದು ನೋಡು. ಪಕ್ಕದಮನೆಯವರಿಗೇನು ದೊಡ್ಡ ಧ್ಯೇಯವೇನೂ ಇಲ್ಲ.. ಯಾರೋ ಹೇಳಿದ ಕೆಲ್ಸ ಮಾಡುತ್ತಾರೆ ಅಷ್ಟೆ.
>ಅದು ಏನಿದ್ದರೂ ಸರಿ, ಮನುಷ್ಯನಿಗೆ ಒಂದು ಸಂಗಾತಿ ಇರುವುದು ಏನಕ್ಕೆ ಎಂದೂ ಮರೆತಿದ್ದೀರಿ ನೀವು !
>ಏನದು ? ನಾನೆಂದೂ ನಿನಗೆ ಏನಾದರೂ ಅನ್ಯಾಯ .. ಇಲ್ಲ ಇಲ್ಲ.. ಸುಮ್ನೇ ಏನಾದ್ರು ಹೇಳ್ಬೇಡ ನೀನು.
>ಅದ್ಯಾಕೆ ಹಾಗೆ ಕೆಲ್ಸ , ಪ್ರತಿಷ್ಟೆ ಅಂತ ಒದ್ದಾಡ್ತೀರೋ? ಒಂದು ಸುಲಭದ ಪ್ರಶ್ನೆ ಕೇಳ್ತೀನಿ , ಉತ್ತರ ಕೊಡಿ ನೋಡೋಣ !
>?ಹುಂ
>ನೀವು ಕೊನೆಯ ಬಾರಿ ನನ್ನ ಜೊತೆ ಹಾಸಿಗೆಯಲ್ಲಿದ್ದ ದಿನ ಯಾವುದು , ಹೇಳಿ ?
>ಇದ್ಯಾಕೋ ಅತಿಯಾಯ್ತು ಕಣೆ. ಮದುವೆಯಾಗ್ಬೇಕಿದ್ರೇ ನಾನು ನನ್ನ ಉದ್ದೇಶ ಎಲ್ಲ ಹೇಳಿದ್ದೆ. ಈಗ ಸೆಕ್ಸನ್ನೇ ಮುಖ್ಯ ಅನ್ನೋ ನಿನ್ ಮಾತು ನಂಗೆ ಸರಿ ಬರ್ತಾ ಇಲ್ಲ.
>ಇಲ್ಲ, ಮುಖ್ಯ ಅಂದಿಲ್ಲ. ನಿಮಗೆ ಹೇಗೆ ಗೊತ್ತಾಗ್ಬೇಕು ಇದೆಲ್ಲ.? ನೀವು ನನ್ನನ್ನ ಚುಂಬಿಸದೇ ವರ್ಶವಾಗಿ ಹೋಯ್ತು ,
>ನೋಡೇ, ಪ್ರತಿಯೊಬ್ಬ ಯಶಸ್ವೀ ಪುರುಷನ ಹಿಂದೆ ಒಬ್ಬಳು ಸ್ತ್ರೀ ಇರ್ತಾಳಲ್ಲ ! ಆ ಸ್ತೀ ಪ್ರಧಾನವಾಗಿ ಹೆಂಡತಿಯೇ !. ಈ ಸ್ತ್ರೀ ಬಹಳ ಮುಖ್ಯವಾಗುವುದು ತನ್ನ ತ್ಯಾಗಗಳಿಂದಲೇ ,ಇದು ಈ ತ್ಯಾಗವನ್ನೂ ಬಯಸುತ್ತದೆ.

>>
ನಿನ್ನೆ ಆಡಿದ ಮಾತುಗಳನ್ನ ಇನ್ನೂ ಮೆಲುಕು ಹಾಕುತ್ತಾ ಇದ್ದೇನೆ. ಇದೊಂದು ವ್ಯವಸ್ಥೆಯೊಳಗನ್ನ ಯಾರೂ ಅರಿಯಲಾರರು. ಗೋಡೆಗಳ ಕಿವಿಯೋ ಕಾಲ್ಪನಿಕ ಕಥೆಗಳೋ , ಯಾವುದೋ ಹೆಣ್ಣಿನ ಬುದ್ದಿವಂತಿಕೆಯೋ ಈಗ ಉಪಯೋಗಕ್ಕೆ ಬರುವುದಿಲ್ಲ. ಈ ಪ್ರಾಜೆಕ್ಟ್ ಮುಗಿದಮೇಲೆಯಾದರೂ ಜೊತೆಗಿದ್ದಾರು ಎನ್ನುವ ನಂಬಿಕೆ ಅಷ್ಟನ್ನು ಉಳಿಸಿ ಕೊಂಡಿದ್ದೇನೆ..

32 comments:

 1. ಹ್ಹೆ ಹ್ಹೆ ..ಸ್ತ್ರೀವಾದಿ ಕಿಣ್ಣಣ್ಣ. ಒಳ್ಳೆ ನಿರೂಪಣೆ

  ReplyDelete
  Replies
  1. ಅಲ್ಲದೋ ಗುಂಡ, ಬೇಕಾದಷ್ಟು ಕತ್ತರಿ ಪ್ರಯೋಗ ಮಾಡಿ.. ಹೀಂಗೆ ಬರ್ದಾಕಿದ್ದೆ.. ಧವಾ :)

   Delete
 2. ಹಮ್...!! ನೋ ಕಾಮೆಂಟ್ಸ್..!! ಇಷ್ಟ ಆತು....

  ReplyDelete
 3. ಹಮ್.. ಪರಕಾಯ ಪ್ರವೇಶ! ನಿರೂಪಣೆ ಚೆನ್ನಾಗಿದ್ದು!

  ReplyDelete
  Replies
  1. ತುಂಬಾ ಧನ್ಯವಾದ ಪೂರ್ಣಕ್ಕ :)

   Delete
 4. ಒಳ್ಳೆಯ ಮತ್ತು ಸಮರ್ಥ ಪರಕಾಯ ಪ್ರವೇಶ ಕಿರಣ್... ನಿಜಕ್ಕೂ ಇದೊಂದು ಬಹು ಸೂಕ್ಷ್ಮ ಘಟ್ಟ ಮದುವೆಯಾದ ೩-೬ ವರ್ಷದ ಮಧ್ಯದ್ದು... ಹೆಣ್ಣಿನ ಏಕಾಂತ ಕಿತ್ತು ತಿನ್ನಲು ಪ್ರಾರಂಭಿಸುತ್ತೆ ಏಕೆಂದರೆ ಗಂಡು ಆಗ ತನ್ನ ನೆಲೆಯನ್ನ ಇನ್ನೂ ಗಟ್ಟಿಯಾಗಿ ಬೇರೂರಿಸಲು ಪ್ರಯತ್ನಿಸುವ ಘಟ್ಟ... ಜೊತೆಗೆ ನೆರೆ ಕೆರೆ, ಸಂಬಂಧಿಕರು ಯಾಕೆ ಇನ್ನೂ ಮಕ್ಕಳಾಗಲಿಲ್ವಾ ?? ಎನ್ನುವ ಕುಹಕ...ಬಹಳ ಚನ್ನಾಗಿ ಬರೆದಿದ್ದೀರಿ,,..

  ReplyDelete
  Replies
  1. ಧನ್ಯವಾದಗಳು ಆಜಾದ್ ಸರ್ :)

   Delete
 5. ಕಿರಣ್, ಮೆಚ್ಚಿದೆ. ಹೆಣ್ಣು ಹೃದಯದ ಚಿತ್ರಣ ಚೆನ್ನಾಗಿ ಮೂಡಿದೆ ಕತೆಯಲ್ಲಿ!

  ReplyDelete
  Replies
  1. ಧನ್ಯವಾದ ಶೀಲಕ್ಕಾ :)

   Delete
 6. kinnanna cholo baradde :) :D melinavvu helidange no coments :)

  ReplyDelete
 7. ಅನುರಾಧ.9 April 2012 at 10:02

  ಕಿರಣ, ಕತೆಯನ್ನು ಊಹೆಗೂ ನಿಲುಕದಂತೆ ಹೆಣೆವಲ್ಲಿ ಯಶಸ್ವಿಯಾಯ್ದೆ...ಹೆಣ್ಣಿನ ಮನಸ್ಸಿನ ಒಳಹೊಕ್ಕು ನೋಡಿದ್ದು ಆಶ್ಚರ್ಯ ಅನಿಸಿದ್ರೂ ಕತೆ ಸೊಗಸಾಗಿ ಬೈಂದು...

  ReplyDelete
 8. ಧನ್ಯವಾದ ಅನ್ಸತ್ತೆ :) :)

  ReplyDelete
 9. ನಗರದ ಹಲ ಕುಟುಂಬಗಳ ಒಳ ಮನೆಯ ಸದ್ದೇ ಕೇಳಿಸದ ಕಥೆ ಇದು.

  ಇಲ್ಲಿ ಆಕೆ ಕೆಲಸ ಬಿಟ್ಟಿದು ತಪ್ಪೇ ಅಥವ ಅವನು ಲೇಟಾಗಿ ಬರುವುದೂ ತಪ್ಪೇ ನಿರ್ದರಿಸಲಾರದ ಸ್ಥಿತಿ!

  ಭಟ್ಟರೇ, ನೀವು ನಿಮ್ಮ ಕವಿಯೆಯಲ್ಲಿ ಹೇಗೋ ಹಾಗೆ ಕಥನದಲ್ಲೂ ಸಿಕ್ಕುಗಳನ್ನು ಸೃಷ್ಟಿಸಿ ನಮ್ಮ ಪರಿಕಲ್ಪನೆಯ ಯೋಚನಾ ಲಹರಿಗೆ ಬಿಟ್ಟು ಬಿಡುತ್ತೀರಿ. ಭೇಷ್!

  ಇದೇ ನಿಮ್ಮ ಶಕ್ತಿ ಸಹ...

  ReplyDelete
  Replies
  1. ಹೌದು ಬದರಿ ಸರ್, ಧನ್ಯವಾದಗಳು :)

   Delete
 10. chanda baradde kirana... maneyalli iruva ella hendatiyara manassinoLahokku baradange aydu. realy nice......

  ReplyDelete
 11. ಪಿಕ್ನಿಕ್ಕಲ್ಲಿ ನೀ ಹೇಳ್ದಾಗೇ ಇದರ ಬಗ್ಗೆ ಕುತೂಹಲ ಮೂಡಿತ್ತು.. ಮಸ್ತಾಗಿ ಬರದ್ದೆ :)

  ReplyDelete
  Replies
  1. ಧನ್ಯವಾದ ಹರಿ :) ಇನ್ನೂ ಕೆಲವು ಎಡಿಟ್ ಮಾಡಿದ್ದೆ.. :)

   Delete
 12. supero kinnakka allalla kinnanna !! :-)

  ReplyDelete
 13. sikkapatte ishta aatu..... aadre isht chandagi hennin mansu ninge henge arta aatu gottajille.....

  ReplyDelete
 14. ಕಥೆಯ ಮುಕ್ತಾಯ ಅತಿವೇಗವನ್ನು ಪಡೆದು ಕೊಡೀದ್ದು ಯಾಕೋ ಸ್ವಾನುಭವದ ಕೊರತೆಯಿರಬಹುದೆನ್ನಿಸುತ್ತಿದೆ.

  ReplyDelete
  Replies
  1. ಹೌದು ರಾಮಣ್ಣ. ಸ್ವಾನುಭವದ ಕೊರತೆ ಇದ್ದು . ನಿಂಗಳ ಪ್ರತಿಕ್ರಿಯೆಗೆ ಆಭಾರಿ.

   Delete
 15. ಚೆನ್ನಾಗಿದೆ ಕಥೆ ಕಿಟ್ಟಣ್ಣ.... :)

  ಮತ್ತೆ ಒಂದು ಸಾಲು ಇರಲಾ..?!
  ಇದು ಕಥೆಯಲ್ಲ ಜೀವನ...!!

  ReplyDelete
 16. ಕಿರಣ್ ಭಟ್ ಅವರೇ,
  ಕಥೆ ಮೇಲ್ನೋಟಕ್ಕೆ ಕಾಲ್ಪನಿಕ ಎಂದು ಅನ್ನಿಸಿದರೂ,ಇದು ಎಷ್ಟೋ ಜನರ ಜೀವನದಲ್ಲಿ ನಡೆಯುತ್ತಿರುವ ನಿತ್ಯದ ವಾಸ್ತವ.ಕಥೆಯ ನಿರೂಪಣೆ/ವಿಶ್ಲೇಷಣೆ ಚೆನ್ನಾಗಿದೆ.
  ಶುಭಮಸ್ತು

  ReplyDelete