Sunday, 1 April 2012

ಹತ್ತಿರವೋ ದೂರವೋ !


ಹೀಗೇ ಬಸ್ಸು, ಅಲ್ಲಲ್ಲೇ ನಿಲ್ದಾಣ, ಹತ್ತಿ ಇಳಿಯುವ ಪ್ರಯಾಣಿಕರು.. ೧೨೦ ಕಿಲೋಮೀಟರ್ ಬಂದರೂ ಇನ್ನೂ ಆಯಾಸವಾಗದೇ ಕುಳಿತುಕೊಂಡು ಇಳಿದು ಹತ್ತುವ ಪ್ರಯಾಣಿಕರನ್ನೇ ನೋಡುವುದು ಬಹು ದೊಡ್ಡ ಟೈಂ ಪಾಸು !

ಓಹ್, ಬಸ್ಸು ಖಾಲಿಯಾದಂತಾಯಿತು.. ಹೆಚ್ಚಿನವರು ಇಳಿದರು. ಎಂತಾ ಹೊಟ್ಟೆಯ ಹಸಿವು ? ಇಲ್ಲೆಲ್ಲಾದರೂ ನಿಲ್ಲಿಸಿದರೆ ಇಳಿದು ಹೋಟೆಲ್ಗೆ ಹೋಗಿ ಬರಬೇಕೆನಿಸಿತು. ಬಸ್ಸು ಇನ್ನಷ್ಟು ಪ್ರಯಾಣಿಕರನ್ನು ತುಂಬಿಸಿಕೊಂಡು ಹೊರಟಿತು.

ಆ ಬಿಳಿಯ ಚೂಡಿದಾರದ ಚಂದದ ಹುಡುಗಿ , ನಗುತ್ತಾ ಬಸ್ಸೇರಿದ ಅವಳ ನಗುವನ್ನೆಲ್ಲಾ ಒಂದು ಬುಟ್ಟಿಯೊಳಗೆ ತುಂಬಿ ಮನೆಯಲ್ಲಿಡಬೇಕೆನ್ನುವಷ್ಟು ಆತುರವಿತ್ತು ಸಾಮೀಪ್ಯಕ್ಕೆ. ಬಸ್ಸಿನ ಚಲನೆಗನುಗುಣವಾಗಿ ಬಾಗುವ ಅವಳು ಬಳ್ಳಿಯೇ ಇರಬೇಕು.. ಆ ಹುಡುಗಿ ಮುಂದೆ ಮುಂದೆ ಬಂದು  ನನ್ನ ಪಕ್ಕ ಕುಳಿತರೆಷ್ಟು ಚಂದ ಎಂದು ಯೋಚಿಸುವದರೊಳಗೆ ನನ್ನ ಪಕ್ಕ ಕುಳಿತ ಈ ಹುಡುಗಿ !

ನಗು ಇರದ ಬಿಗು ಮುಖದ ಇವಳನ್ನು ನೋಡುವುದೇ ಸುಮ್ಮನೆ ಎಂದೆನಿಸಿದರೂ ,ಹಸಿವೆಯನ್ನು ಮಾಯ ಮಾಡಿಸುವ ಇವಳ ಸಾಮೀಪ್ಯ ! ಈ ಸೆಳತಕ್ಕೆ ಬೀಳುವುದು ಎಷ್ಟು ಸುಲಭ ? ಆಗಾಗ ನನ್ನನ್ನೇ ನೋಡುತ್ತಿರುವಂತೆ ನಾನಂದುಕೊಂಡಾಗ ಆಗುವ ವಿಲಕ್ಷಣ ಸಂತೋಷ .ಅವಳು ಓದಿದಂತೆ ನಾನು ಓದದಂತೆ ಕಣ್ಣುಮುಚ್ಚಾಲೆಯಂತೆ ಆ ಪಯಣ ಮುಂದುವರೆಯುತ್ತಾ ಇತ್ತು . ಎಲ್ಲಾ ಸಿನೆಮಾದ ಕೊನೆಯಂತೆ ಅವಳೂ ನಂತರದ ನಿಲ್ದಾಣದಲ್ಲಿ ಇಳಿಯುವಂತೆ ಭಾಸವಾಯಿತು.. ಇಳಿದೂ ಹೋದಳು. ಹೋಗುವಾಗೊಮ್ಮೆ ನನ್ನನ್ನ ನೋಡಿದಂತೆ ಭಾಸವಾಯಿತು, ನೋಡಲಿಲ್ಲ ಅವಳು !

ಪುನಃ ಹುಡುಕತೊಡಗಿದೆ ಆ ಬಿಳಿಯ ಚೂಡಿದಾರದ ಹುಡುಗಿಯನ್ನು ! ಎಲ್ಲಿದ್ದಾಳೆ ?

ಹತ್ತಿರವಿರುವ ಕಣಗಿಲೆ ಹೂವು ದೂರದ ಚಿನ್ನದ ತಾವರೆಗಿಂತ ಸೊಗಸು !!

2 comments:

  1. ಅಚಾನಕ್ ಸಹಾವಾಸಗಳು ಕೊಡುವ ಝಲಕ್ಕೇ ಅಂತದು.

    ಆಕೆಯ ಇರುವಿಕೆ ಮತ್ತು ಮರೆಯಾಗುವಿಕೆ ನಂತರ ಉಳಿದು ಹೋದ ಆಕೆಯ ಅಪೂರ್ಣ ಚಿತ್ರಣವೇ ಸದಾ ನೆನಪಿನಲ್ಲಿ ಉಳಿಯುವ ಪುಳಕ!

    ನನ್ನ ಬ್ಲಾಗಿಗೂ ಸ್ವಾಗತ.

    ReplyDelete