Thursday, 19 April 2012

ಆಭಾಸ !!


ಬೆಳಗ್ಗೆ ಏಳು ಘಂಟೆಯ ಹೊತ್ತಿರಬೇಕು. ಕಮಲಮ್ಮ ಬೆಳಗ್ಗಿನ ಅಡುಗೆಯ ಕಾರ್ಯಕಲಾಪ ಮುಗಿಸಿ ಕಣ್ಣುಜ್ಜುತ್ತಾ ಹೊರಗೆ ಬರುತ್ತಿದ್ದಂತೆಯೇ ಹತ್ತು-ಹನ್ನೆರಡು ಜನ ! ಇದೇನು ಎಂದು ಆಶ್ಚರ್ಯ ಪಡುತ್ತಿರಬೇಕೇ ಬೇಡವೇ ಎಂಬಷ್ಟು ಹೊತ್ತಿಗೆ ಸೆಕ್ರೆಟರಿಯಂತಿದ್ದವನೊಬ್ಬ ಹತ್ತರೊಳಗಿಂದ ರಾಜಪ್ಪ ಇಲ್ವೇ ? ಎಂದ .

ಹಿಂದಿನ ಇರುಳು ಮಗ ರಾಜಪ್ಪ ಮಾತಾಡದೇ ಬಂದು ಮಲಗಿದ್ದಾಗಲೇ ಯೋಚನೆ ಬಂದಿತ್ತು ಕಮಲಮ್ಮಳಿಗೆ. ಎಲ್ಲೋ ಏನೋ ತಪ್ಪಿ ಹೋಗಿದೆ ಎಂದೇ ಭಾವಿಸುತ್ತಿತ್ತು ಮನಸ್ಸು. ಗಂಡ ಸತ್ತ ಮೇಲೆ ತನ್ನನ್ನೂ ಗಂಡು ದಿಕ್ಕಾಗಿ ಈ ಮನೆಗೆ ಇರುವವನು ಇವನೊಬ್ಬನೇ. ಇತ್ತೀಚೆಗೆ ಕುಡಿಯುವುದು, ಪೇಟೆ ತಿರುಗುವುದು, ಅದ್ಯಾವುದೋ ಸಂಘಗಳಂತೆ, ಜಾಥಾವಂತೆ ಇಂತಹದ್ದೆಲ್ಲಾ ನಡೆಯುತ್ತಿದ್ದು ಯಾವುದೋ ಹೊಸಾ ತಲೆನೋವು ತರಿಸುತ್ತಿತ್ತು.

ಏನಾಗಬೇಕಿತ್ತು ರಾಜಪ್ಪನಿಂದ ? ಉತ್ತರಕ್ಕಾಗಿ ೮-೧೦ ಕಣ್ಣುಗಳನ್ನ ಹುಡುಕಿದಳು..ಕಡೆಗೊಮ್ಮೆ ಸೆಕ್ರಟರಿಯ ಮುಖ ನೋಡಿದಳು. ಅದೇ ನಮ್ಮ ಊರಿನ ರಸ್ತೆಯಿದೆಯಲ್ಲಾ ಅಲ್ಲಿ ನಾವೊಂದು ಮೂರ್ತಿ ನಿಲ್ಲಿಸಬೇಕು ಅಂತ ತೀರ್ಮಾನ ಮಾಡಿದ್ದೇವೆ. ಇದಕ್ಕೆ ನಿನ್ನೆ ರಾಜಪ್ನೋರೆ ಒಂದು ಸಮಿತಿ ರಚನೆ ಮಾಡೋಣ ಅಂದಿದ್ರು. ಅದ್ಕೆ ಇವತ್ತು ಬೆಳಗ್ಗೆ ನಾವೆಲ್ಲಾ ಸೇರಿ ರಾಜಪ್ನೋರ್ನೆ ಅದ್ರ ಅಧ್ಯಕ್ಷ ಮಾಡೋದು ಅಂತ ತೀರ್ಮಾನ ಮಾಡಿದೀವಿ. ಅರ್ಜೆಂಟಾಗಿ ಮಾತಾಡ್ಬೇಕಿತ್ತು ಅದ್ಕೆ ....

ಇದ್ಯಾವುದೋ ಹೊಸಾ ತಲೆನೋವು ಎನ್ನುವಷ್ಟರಲ್ಲಿ ಅಂಗಳದ ಹಿಂದಿನಿಂದ ಸೌಂಡ ಆಯಿತು. ಬೆಳಗ್ಗಿನ ಕಾರ್ಯಕ್ರಮಗಳನ್ನು ಗಡದ್ದಾಗಿ ಮುಗಿಸಿಕೊಂಡು ಬರುತ್ತಿದ್ದ ರಾಜಪ್ಪನ ಕೈಯ್ಯ ಹಿತ್ತಾಳೆ ಚೊಂಬು ಮಿರ ಮಿರ ಎನ್ನುತ್ತಿತ್ತು,, ಏನ್ರೋ ಎಂದ..

ಒಂದು ವರ್ಷದಿಂದ ಪಾಯಿಖಾನೆ ಕಟ್ಟಿಸ್ಬೇಕು ರಾಜಪ್ಪಾ ಎನ್ನುತ್ತಿದ್ದ ಕಮಲಮ್ಮನಿಗೆ ಇನ್ನು ಮೂರ್ತಿ ಪ್ರತಿಷ್ಟಾಪನೆಯ ವರೆಗೆ ಕಾಯಬೇಕೋ ಏನೋ ? ಮನೆಗೊಂದು ಪಾಯಿಖಾನೆ ಕಟ್ಟಿಸದವರು ಊರು ಉದ್ದಾರಕ್ಕೆ ಮೂರ್ತಿ ಕಟ್ಟಿಸ್ತಾರಂತೆ ಎಂದು ಗೊಣಗುತ್ತಾ ಕಮಲಮ್ಮ ಒಳಗೆ ಹೋದಳು..

4 comments:

  1. ಕಡಿಮೆ ಹೇಳಿ ಹೆಚ್ಚು ಅರ್ಥ ಮಾಡಿಸೋ ಬರಹಗಳು ನಿಮ್ಮದು.
    ಎಷ್ಟ್ ಅರ್ಥ ಆಯ್ತು ಅಂತ ಕೇಳಬೇಡಿ :)
    ಸ್ವರ್ಣಾ

    ReplyDelete