Showing posts with label ಈಶ್ವರ ಭಟ್. Show all posts
Showing posts with label ಈಶ್ವರ ಭಟ್. Show all posts

Wednesday, 20 August 2014

ರನ್ನನ ಗದಾಯುದ್ಧ - ನೋಟ - ಭಾಗ ೩


೯.

ದ್ರೋಣನನ್ನು ನೋಡಿ ಮುಂಬರಿದು ಬರುತ್ತಾ ಕೌರವ ರುಧಿರಸ್ರೋತದಲ್ಲಿ ಮುಳುಗಿರುವ ಅಭಿಮನ್ಯುವನ್ನು ಕಾಣುತ್ತಾನೆ. ಅಭಿಮನ್ಯುವಿನ ಸಾಹಸವನ್ನು ಕೌರವನೇ ಮೆಚ್ಚುವುದಾದರೆ ಅಭಿಮನ್ಯು ಎಷ್ಟು ದೊಡ್ಡವನು? ರನ್ನನ ವರ್ಣನೆ ನೋಡಿ.

ಅರೆಮುಗಿದಿರ್ದ ಕಣ್ಮಲರಲರ್ದ ಮೊಗಂ ಕಡಿವೋದ ಕಯ್ಯುಮಾ-
ಸುರತರಮಾಗೆ ಕರ್ಚಿದವುಡುಂ ಬೆರಸನ್ಯಶರಪ್ರಹಾರ ಜ-
ರ್ಜರಿತಶರೀರನಾಗಿ ನವಲೋಹಿತವಾರ್ಧಿಯೊಳಳ್ದು ಬಿಳ್ದನಂ
ಕುರುಪತಿ ನೋಡಿ ಕಂಡನಭಿಮನ್ಯುಕುಮಾರನಾಜಿವೀರನಂ

ಅರೆನಿಮೀಲಿತ ಕಣ್ಣುಗಳು, ಇನ್ನೂ ಅರಳಿರ್ದ ಮೊಗ, ಕತ್ತರಿಸಿಹೋದ ಕೈಗಳು, ಅವಡುಕಚ್ಚಿದವನು, ಶತ್ರುಶರಗಳಿಂದ ಜರ್ಜರಿತನಾಗಿ ಹೊಸನೆತ್ತರಿನ ಸಮುದ್ರದಲ್ಲಿ ಬಿದ್ದ ಅಭಿಮನ್ಯುಕುಮಾರನನ್ನು ಕೌರವ ನೋಡುತ್ತಾನೆ.

ದ್ರೋಣಾಚಾರ್ಯ ಮಾಡಿದಂತಹ ಪದ್ಮವ್ಯೂಹವನ್ನು ಹೊಕ್ಕು, ಶತ್ರುಗಳನ್ನು ಇಕ್ಕಿದ ನಿನ್ನಂತಹ ಗಂಡುಗಳು ಇದ್ದಾರೆಯೇ? ನಿನ್ನನ್ನು ಹೆತ್ತವಳೆ ವೀರಜನನಿ ಎಂದೆಲ್ಲಾ ಹೇಳುತ್ತಾ ಕೌರವನ ಬಾಯಿಯಿಂದ ಒಂದು ಅದ್ಭುತ ಸಾಲನ್ನು ಬರೆಯಿಸುತ್ತಾನೆ ರನ್ನ.

ಅಸಮಬಲ ಭವದ್ವಿಕ್ರಮ
ಮಸಂಭವಂ ಪೆರರ್ಗೆ ನಿನ್ನನಾನಿತಂ ಪ್ರಾ-
ರ್ಥಿಸುವೆನಭಿಮನ್ಯು ನಿಜಸಾ-
ಹಸೈಕದೇಶಾನುಮರಣಮೆಮಗಕ್ಕೆ ಗಡಾ

ನಿನ್ನಂತೆ ಸಾಹಸವನ್ನು ಮೆರೆಯುವುದು ಅಸಂಭವ. ಅದರಲ್ಲಿ ಒಂದಂಶದ ಸಾಹಸವನ್ನಾದರೂ ನಾನು ತೋರಿಸುವಂತೆ ಮಾಡು ಎಂದು ಅಭಿಮನ್ಯುವನ್ನು ಪ್ರಾರ್ಥಿಸಿ ಮುಂದುವರೆಯುತ್ತಾನೆ.

ಮುಂದೆ ಮಗನಾದ ಲಕ್ಷಣಕುಮಾರನನ್ನು ಕಂಡು ಕಣ್ಣೀರು ತುಂಬಿ,

ಜನಕಂಗೆ ಜಲಾಂಜಲಿಯಂ
ತನೂಭವಂ ಕುಡುವುದುಚಿತಮುದುಗೆಟ್ಟೀಗಳ್
ನಿನಗಾಂ ಕುಡುವಂತಾದುದೆ
ತನೂಜ ನೀಂ ಕ್ರಮವಿಪರ್ಯಯಂ ಮಾಡುವುದೇ?

ಅಪ್ಪನಿಗೆ ತಿಲೋದಕವನ್ನು ಕೊಡುವುದು ಉಚಿತವಾದ್ದು. ಆದರೆ ನಾನು ನಿನಗೆ ಕೊಡುವಂತಾಯ್ತೇ. ಕ್ರಮತಪ್ಪುವುದು ಸರಿಯೇ?

ಎಂದಲ್ಲಿ ನಿಲಲಾರದಾ ಪ್ರದೇಶದಿಂ ತಳರ್ದು ಬರೆವರೆ ಶಲ್ಯನನ್ನೂ ಶಕುನಿಯನ್ನೂ ಕಂಡು ಅವರಿಗಾಗಿಯೂ ನೋಯುತ್ತಾನೆ. ಪಶ್ಚಾತ್ತಾಪದಲ್ಲಿರುವ ಕೌರವನನ್ನು ಸಂಜಯ ಸಂತೈಸಿ ಮುಂದೆ ಕರೆದುಕೊಂಡು ಸಾಗುತ್ತಾನೆ. ಭೀಮಸೇನನ ಗದಾಘಾತದಿಂದ ನೆತ್ತರಿನ ಪ್ರವಾಹದಲ್ಲಿ ಮುಳುಗಿರುವ ಯುವರಾಜ ದುಶ್ಶಾಸನನನ್ನು ಕಾಣುತ್ತಾನೆ.

೧೦.

ಸಂಜಯ ಹೇಳುತ್ತಾನೆ " ನೆಲದಲ್ಲಿ ಉರುಳಿಸಿ ಮೈ ಪುಡಿಪುಡಿ ಮಾಡಿ, ಕೊರೆದು, ತಿಂದು, ನೆತ್ತರು ಕುಡಿದರೂ ಹಿಡಿಂಬರಿಪು ತಣಿದನಿಲ್ಲ ದುಶ್ಶಾಸನನಂ". ಕೌರವ ಇದನ್ನ ಕೇಳಿ ದುಶ್ಶಾಸನನನ್ನ ನೋಡುತ್ತಾನೆ

ನಡುವುಡಿವನ್ನಮೇರಿ ಬರಿಯೆಲ್ವುಡಿವನ್ನೆಗಮೊತ್ತಿ ಮೆಟ್ಟಿ ಮೆ-
ಯ್ಯಡಗಡಗಾಗೆ ಮುನ್ನುರಮನಿರ್ಬಗಿಯಾಗಿರೆ ಪೋಳ್ದು ನೆತ್ತರಂ
ಕುಡಿದನ ನೆತ್ತರಂ ಕುಡಿಯದನ್ನೆಗಮೆನ್ನಳಲೆಂತು ಪೋಕುಮೆಂ-
ದಡಿಗಡಿಗಳ್ತು ತನ್ನಣುಗದಮ್ಮನನೀಕ್ಷಿಸಿದಂ ಸುಯೋಧನಂ

ಸೊಂಟ ಮುರಿಯುವವರೆಗೆ ಏರಿ, ಎಲುಬುಗಳು ಪುಡಿಪುಡಿಯಾಗುವ ವರೆಗೆ ಒತ್ತಿ ಮೆಟ್ಟಿ, ಮೈ ಮಾಂಸದ ಮುದ್ದೆಯನ್ನಾಗಿ ಮಾಡಿ, ದೇಹವನ್ನ ಎರಡು ಹೋಳಾಗಿ ಸೀಳಿ ನೆತ್ತರನ್ನು ಮೊಗೆಮೊಗೆದು ಕುಡಿದವನ ನೆತ್ತರನ್ನು ಕುಡಿಯದೆ ಹೇಗೆ ಹೋಗಲಿ ಎಂದು ಅಡಿಗಡಿಗೆ ವಿಲಂಪಿಸಿ ತನ್ನ ತಮ್ಮನನ್ನು ನೋಡುತ್ತಾನೆ ಕೌರವ.

ರನ್ನ ಇಲ್ಲಿ ಒಂದು ಅತ್ಯುತ್ತಮವಾದ ಪದ್ಯ ಬರೆಯುತ್ತಾನೆ. ಪಂಚಭೂತಗಳಿಂದ ಯುಕ್ತವಾದ ಈ ಶರೀರವನ್ನು ದುಶ್ಶಾಸನನ ಪ್ರಾಣ ಹೋದ ಸಂದರ್ಭಕ್ಕೆ ಹೋಲಿಸಿ ಬರೆಯುತ್ತಾನೆ.

ನಿಜಜೀವಂ ಪರಲೋಕದೊಳ್ ನಿಜಮಹಾಮಾಂಸಂ ಪಿಶಾಚಾಸ್ಯದೊಳ್
ನಿಜರಕ್ತಂ ರಿಪುಕುಕ್ಷಿಯೊಳ್ ನಿಜಶಿರಂ ನಕ್ತಂಚರೀಹಸ್ತದೊಳ್
ನಿಜಕಾಯಂ ಕುರುಭೂಮಿಯೊಳ್ ನೆಲಸೆ ಗಾಂಧಾರೀಜ ದುರ್ಯೋಧನಾ-
ನುಜ ದುಶ್ಶಾಸನ ಭೀಮಭೀಮಗದೆಯಿಂ ಪಂಚತ್ವಮಂ ಪೊರ್ದಿದಯ್

ಜೀವ, ಮಾಂಸ, ರಕ್ತ, ತಲೆ ಮತ್ತು ಕಾಯ ಈ ಪಂಚಪ್ರಧಾನವಾದ ವಸ್ತುಗಳು ಹೇಗೆಲ್ಲಾ ಬೇರಾಯಿತು. ನಿನ್ನ ಪ್ರಾಣ ಪರಲೋಕದಲ್ಲಿ, ಮಾಂಸ ಪಿಶಾಚಿಗಳ ಹೊಟ್ಟೆಯಲ್ಲಿ, ರಕ್ತವು ಭೀಮನ ಹೊಟ್ಟೆಯಲ್ಲಿ, ತಲೆ ನಕ್ತಂಚರಿ(ಚಂಡಿಕೆಯೊ ಇನ್ನೊಂದು ದೈವವೋ ಚೆಂಡಾಟವಾಡಲು ಬಳಸಿರಬಹುದು!) ಹಸ್ತದಲ್ಲಿ, ದೇಹ ಕುರುಭೂಮಿಯಲ್ಲೂ ನೆಲಸಲು ತಮ್ಮನಾದ, ಗಾಂಧಾರಿಯ ಮಗನಾದ ದುಶ್ಶಾಸನನು ಭೀಮನ ಭೀಕರವಾದ ಗದೆಯಿಂದ ಪಂಚತ್ವವನ್ನು ಹೊಂದಿದೆ. ಪಂಚತ್ವ ಎಂದರೆ ಸಾವು ಎಂದೂ ಅರ್ಥವಿದೆಯಂತೆ.

ದುಶ್ಶಾಸನನಿಗಾಗಿ ಬಹಳ ಮರುಗುತ್ತಾನೆ ಕೌರವ. ಎಂತಹ ಸೋದರ ಸಂಬಂಧ ಅವರದ್ದು.. ಕೆಟ್ಟವರಾದರೂ ಒಳ್ಳೇ ಸೋದರರು.

ಅನುಜನ ನೆತ್ತರನ್ನು ಈಂಟಿದವನ ನೆತ್ತರನ್ನು ಜೀವಸಹಿತ ಈಂಟದೆ ಇದ್ದರೆ ದುರ್ಯೋಧನನೇ ಅಲ್ಲ ಎಂದು ಕೋಪದಿಂದ ಪ್ರತಿಜ್ಞೆ ಮಾಡಿ ಮುಂದೆ ಬರುತ್ತಾನೆ.

ಮುಂದೆ ಬಂದಾಗ ನರನ ಶರದಿಂದ ಜರ್ಜರಿತನಾಗಿ ಬಿದ್ದ ಅಂಗರಾಜ ಕರ್ಣನನ್ನು ಕಾಣುತ್ತಾನೆ.. ಸಂಜಯನು "ಗಂಡಸ್ಯೋಪರಿ ಸ್ಫೋಟಕಂ" ಎನ್ನುವಂತೆ ಅದನ್ನು ಗ್ರಹಿಸುತ್ತಾನೆ. ( ಗಾಯದ ಮೇಲೆ ಬರೆ ಎಳೆದಂತೆ ಎಂದು).

೧೧.

"ಗಂಡಸ್ಯೋಪರಿ ಸ್ಫೋಟಕಂ" ಎನ್ನುವಂತೆ ಸಂಜಯ ಭಾವಿಸಿದ ಈ ಚಿತ್ರದಲ್ಲಿ ಕರ್ಣ ಮಡಿದು ಬಿದ್ದಿದ್ದಾನೆ. ತನ್ನ ಕಾರ್ಯಕ್ಕಾಗಿ ಯುದ್ಧದಲ್ಲಿ ಪಾಲ್ಗೊಂಡು ಸತ್ತರೂ ನಗುಮೊಗದಲಿದ್ದ ಅಂಗಪತಿಯನ್ನು ನೋಡಿ ಕೌರವ ಶೋಕದಿಂದ ಉದ್ಗರಿಸುವ ಸಾಲುಗಳು ಮುಂದೆ ಬರುತ್ತದೆ.

ಅದರಲ್ಲೂ ಎಂಟು ಕಂದ ಪದ್ಯಗಳು "ಅಂಗಾಧಿಪತೀ" ಎಂದು ಕೊನೆಯಾಗುತ್ತದೆ. ಪಂಪನಂತೆಯೇ ರನ್ನನೂ ಕರ್ಣ ಮತ್ತು ಕೌರವರ ಸಂಬಂಧವನ್ನು ಬಹಳ ಚಿತ್ರಿಸಿದ್ದಾನೆ.

ನಿನ್ನ ಮಗಂ ವೃಷಸೇನಂ
ತನ್ನ ಮಗಂ ಸತ್ತನಣ್ಮಿ ಲಕ್ಷಣನುಂ ನೀ-
ನೆನ್ನ ಸಂತೈಸುವುದಾಂ
ನಿನ್ನಂ ಸಂತೈಸೆ ಬಂದೆನಂಗಾಧಿಪತೀ

ನಿನ್ನನ್ನು ಹೀಗೆ ಕಂಡುದಿಲ್ಲ, ನನ್ನ ಮೇಲೇನು ಕೋಪವೇ? ಯಾಕೆ ಮರುಮಾತುಗಳನ್ನಾಡುವುದಿಲ್ಲ, ಮರೆವೆಯೇ? ಅಲ್ಲ ಬಳಲಿಕೆಯೇ?

ನಿನ್ನ ಗೆಳೆಯ ಸುಯೋಧನನನ್ನು ನೋಡದೆ, ನೋಡಿ ಅಪ್ಪಿಕೊಳ್ಳದೆ, ವಿಚಾರಿಸದೆ, ಜೀಯಾ ದೇವಾ ಎಂದೆನ್ನದೆ ಸುಮ್ಮನೇಕುಳಿದೆ ಅಂಗಾಧಿಪತೀ?

ಆನರಿವೆಂ ಪೃಥೆಯರಿವಳ್
ದಾನವರಿಪುವರಿವನರ್ಕನರಿವಂ ದಿವ್ಯ-
ಜ್ಞಾನಿ ಸಹದೇವನರಿವಂ
ನೀನಾರ್ಗೆಂದಾರುಮರಿಯರಂಗಾಧಿಪತೀ

ನನಗೆ, ಕುಂತಿಗೆ, ಕೃಷ್ಣನಿಗೆ, ಸೂರ್ಯನಿಗೆ ಮತ್ತು ಸಹದೇವನಿಗೆ ಮಾತ್ರ ನಿನ್ನ ಹುಟ್ಟಿನ ರಹಸ್ಯ ಗೊತ್ತಿದೆ.

ಒಡವುಟ್ಟಿದನೆಂದರಿದೊಡೆ
ಕುಡುಗುಂ ರಾಜ್ಯಮನೆ ಧರ್ಮತನಯಂ ನಿನಗಾಂ
ಕುಡಲಾರ್ತೆನಿಲ್ಲ ರಾಜ್ಯ-
ಕ್ಕೊಡೆಯನನರಿಯುತ್ತುಮಿರ್ದೆನಂಗಾಧಿಪತೀ

ನಿನ್ನನ್ನು ಅಣ್ಣ ಎಂದು ತಿಳಿದೊಡನೆ ರಾಜ್ಯವನ್ನು ಧರ್ಮರಾಯ ಕೊಡುತ್ತಿದ್ದ, ನಾನು ಗೊತ್ತಿದ್ದೂ ಕೊಡಲಿಲ್ಲ ಎಂದೆಲ್ಲಾ ರೋಧಿಸುತ್ತಾನೆ ಕೌರವ.

ಇನ್ನೊಂದು ಪದ್ಯದಲ್ಲಿ,

ಕೆಳೆಯಂಗಾಯ್ತು ಸುಮೋಕ್ಷಮಾಗದೆನಗಂ ಬಾಷ್ಪಾಂಬುಮೋಕ್ಷಂ ಧರಾ-
ತಳಮಂ ಕೊಟ್ಟನಿವಂ ಜಳಾಂಜಳಿಯುಮಂ ನಾ ಕೊಟ್ಟೆನಿಲ್ಲನ್ಯಮಂ-
ಡಳಮಂ ಸುಟ್ಟನಿವಂ ಪ್ರತಾಪಶಿಖಿಯಿಂದಾನೀತನಂ ಸತ್ಕ್ರಿಯಾ-
ನಳನಿಂ ಸುಟ್ಟೆನುಮಿಲ್ಲ ಮತ್ಪ್ರಿಯತಮಂ ಕರ್ಣಂಗಿದೇಂ ಕೂರ್ತೆನೋ

ಗೆಳೆಯ ಕರ್ಣನಿಗೆ ಸುಮೋಕ್ಷವಾಯ್ತು, ನಾನು ಕಣ್ಣೀರ ಮೋಕ್ಷವನ್ನೂ ಕೊಡಲಿಲ್ಲ. ನನಗಾಗಿ ಕರ್ಣ ಭೂಮಿಯನ್ನೇ ಗೆದ್ದುಕೊಟ್ಟ, ಅವನಿಗೆ ನಾನು ಎಳ್ಳುನೀರೂ ಕೊಡಲಿಲ್ಲ. ಶತ್ರುರಾಜರನ್ನು ತನ್ನ ಪ್ರತಾಪಶಿಖಿಯಿಂದ ಸುಟ್ಟ ಕರ್ಣ. ನಾನು ಅವನ ಅಂತ್ಯಸಂಸ್ಕಾರವನ್ನೂ ಮಾಡಲಿಲ್ಲ. ಎಲ್ಲವನ್ನೂ ನನಗಾಗಿ ಮಾಡಿದ ಕರ್ಣನಿಗೆ ನಾನೇನು ಮಾಡಿದೆ?

ಅದ್ಭುತವಾದ ಪದ್ಯ ಇದು. ಸಂಜಯನ ಉತ್ತರವೂ ಸಮಾಧಾನವೂ ಇನ್ನೆರಡು ಪದ್ಯದಲ್ಲಿದೆ.

ಜಲದಾನಕ್ರಿಯೆಯಂ ವಾ-
ಗ್ಜಲದಿಂ ಕೋಪಾಗ್ನಿಯಿಂದೆ ದಹನಕ್ರಿಯೆಯಂ
ಕೆಳೆಯಂಗೆ ಮಾಡಿದಯ್ ಕುರು-
ಕುಲದರ್ಪಣ ಮರೆವುದಿನ್ನಹರ್ಪತಿಸುತನಂ

ಪೆಂಡಿರ್ ಪಳಯಿಸುವಂದದೆ
ಗಂಡರ್ ಪಳಯಿಸಿದೊಡಾಯಮಂ ಛಲಮಂ ಕಯ್
ಕೊಂಡೆಸಪರಾರೊ ಕುರುಕುಲ
ಮಂಡನ ನೀನೆತ್ತಿಕೊಂಡ ಛಲಮನೆ ಮೆರೆಯಾ

ಕಣ್ಣೀರಿನಿಂದ, ಕರುಣೆಯ ಮಾತುಗಳಿಂದ, ಕೋಪಾಗ್ನಿಯಿಂದ ಗೆಳೆಯನಿಗೆ ಅಂತ್ಯಕ್ರಿಯೆಯನ್ನು ಮಾಡಿದ್ದೀಯೆ!, ಇನ್ನು ರವಿಸುತನನ್ನು ಮರೆ.

ಹೆಂಗಸರು ಹಳಹಳಿಸುವಂತೆ ಗಂಡಾದ ನೀನು ಹಳಹಳಿಸಿದರೆ ಕೆಲಸವಾಗುವುದು ಹೇಗೆ? ನಿನ್ನ ಛಲವನ್ನು ನೀನು ಮೆರೆ ಕುರುಕುಲಮಂಡನಾ!

೧೨.

ಗುರು ದೀಕ್ಷಾವಿಧಿಗಳ್ಗೆ ಮಂತ್ರಿ ಹಿತಕಾರ್ಯಾಳೋಚನಕ್ಕಾಳ್ದನು-
ರ್ವರೆಯಂ ಕಾವ ಗುಣಕ್ಕೆ ನರ್ಮಸಚಿವಂ ಕ್ರೀಡಾರಸಕ್ಕಾನೆಯಾಳ್
ಗುರುಭಾರಕ್ಕಿರಿವಾಳ್ ರಣಕ್ಕೆ ತುರಿಲಾಳ್ ಕಟ್ಟಾಯದೊಳ್ ಮೇಳದಾಳ್
ಪರಿಹಾಸಕ್ಕೆನಿಸಿರ್ದನೆಂತು ಮರೆವಂ ದುರ್ಯೋಧನಂ ಕರ್ಣನಂ

ಒಂದೊಂದು ಸಮಯದಲ್ಲಿ ಒಂದೊಂದು ರೀತಿ ನಮಗೊದಗುವ ಮಿತ್ರ ಇಲ್ಲದಿದ್ದಾಗ ಅನೇಕ ಮಂದಿಯನ್ನು ಕಳೆದುಕೊಂಡಾಗುತ್ತದೆ. ಅಂತೆಯೇ ಕರ್ಣನ ವಿಯೋಗದಿಂದ ದುರ್ಯೋಧನ ಎಷ್ಟು ಜನರನ್ನು ಕಳೆದುಕೊಂಡ ದುಃಖವನ್ನು ಅನುಭವಿಸುತ್ತಾನೆ ನೋಡಿ. ಅದನ್ನ ರನ್ನ ಬಹಳ ಸುಂದರವಾಗಿ ಈ ಪದ್ಯದಲ್ಲಿ ಹೇಳುತ್ತಾನೆ.

ದೀಕ್ಷಾವಿಧಿಗಳಿಗೆ ಗುರುವಿನಂತೆ, ಹಿತಕಾರ್ಯದ ಆಲೋಚನೆಗಳಿಗೆ ಮಂತ್ರಿಯಂತೆ, ರಾಜನಾಗಿ, ಕ್ರೀಡಾ ವಿನೋದಕ್ಕೆ ನರ್ಮ ಸಚಿವನಾಗಿ, ಆನೆಯಂತೆ ಭಾರವನ್ನೆಳೆಯುವ ಕೆಲಸಕ್ಕೆ, ಯುದ್ಧಕ್ಕೆ ಮೊದಲಿಗನಾಗಿ, ತಮಾಷೆಗೆ ವಿದೂಷಕನಂತೆ ಇದ್ದಂತಹ ಕರ್ಣನನ್ನು ದುರ್ಯೋಧನ ಹೇಗೆ ಮರೆತಾನು?

ಕರ್ಣನನ್ನು ನೆನೆದು ಕೌರವನ ಶೋಕಸಾಗರವನ್ನು ಕೋಪವೆಂಬ ಬಡಬಾಗ್ನಿ ಹೀರಿತು.

ದೇವಾ, ಭೀಷ್ಮರು ಈ ಕಡೆ ಇದ್ದಾರೆ ಎಂದು ಸಂಜಯನು ಹೇಳಲಾಗಿ, ಅಪ್ಪ ಹೇಳಿದಂತ ಮಾತುಗಳನ್ನ ಸ್ಮರಣೆ ಮಾಡಿ, ಸಂಜಯನ ಮಾತನ್ನೂ ಮೀರದೆ ಶರಶಯ್ಯೆಯೊಳಗೆ ಇರುವಂತಹ ನದೀನಂದನನ ಚರಣಾರವಿಂದವದನಂ ಗೈಯ್ಯಲೆಂದು ಗಾಂಧಾರೀನಂದನಂ ಎಯ್ದೆವಂದಂ.

~
ಇನ್ನೂ ಇದೆ.

Monday, 18 August 2014

ರನ್ನನ ಗದಾಯುದ್ಧ - ನೋಟ - ಭಾಗ ೨

೫.

ಪಡೆ ಪನ್ನೊಂದಕ್ಷೋಹಿಣಿ
ಗೊಡೆಯನೆ ಮೂರ್ಧಾಭಿಷಿಕ್ತನಯ್ ಮೂರುಂ ಬೆ-
ಳ್ಗೊಡೆಯ ನಡುವಿರ್ಪ ನೀನಿ-
ರ್ದೆಡೆಯುಮನೆಮಗರಿಯದಂತುಟಾದುದೆ ಮಗನೇ

(ನೀನ್ ಇರ್ದೆಡೆಯುಮನ್ ಎಮಗೆ ಅರಿಯದಂತುಟಾದುದೆ)
ಎಂದೆಲ್ಲಾ ಹಳಹಳಿಸಿ ಬರುತಿರ್ದ ಕೌರವನ ತಂದೆ ತಾಯಿ, ಪುರಜನರ ಬಗ್ಗೆ ಸಂಜಯನು ಸುಯೋಧನನಿಗೆ ಹೇಳುತ್ತಾನೆ.

ಅರಿಭೂಪಾಲರನಿಕ್ಕಿ ಗೆಲ್ದೊಸಗೆಯಿಂ ತೂರ್ಯಸ್ವನಂ ಪೊಣ್ಮೆ ಸೋ-
ದರರುಂ ಮಕ್ಕಳುಮಾಪ್ತರುಂ ಬೆರಸು ಬಂದಾನಂದದಿಂ ಕಾಣ್ಬೆನೆಂ-
ದಿರಲಿಂತಾಯ್ತು ವಿಧಾತ್ರ ಮದ್ಗುರುಗಳಂ ದುಃಖಾತ್ಮರಂ ಶೋಕತ೦
ತ್ಪರರಂ ಮೆಯ್ಯೊಳೆ ಬೀಳುವಶ್ರುಮುಖರಂ ಕಾಣ್ಬಂತುಟಂ ಮಾಡಿದಯ್

ಕಂದ ನಿಜಾನುಜರೆಲ್ಲಿದ-
ರೆಂದೆನ್ನಂ ಜನನಿ ಬಂದು ಬೆಸಗೊಂಡೊಡದೇ-
ನೆಂದು ಮರುಮಾತುಗೊಡುವೆಂ
ಕೊಂದರ್ ಕೌಂತೇಯರೆಂದು ಬಿನ್ನೈಸುವೆನೋ

ಅತ್ಯಂತ ಸೊಗಸಾಗಿ ಹೇಳಲಾದ ಪದ್ಯಗಳಲ್ಲಿ ಕೌರವನ ದಯನೀಯ ಸ್ಥಿತಿಯ ಬಗ್ಗೆ ಕನಿಕರವಾಗುತ್ತದೆ.
"ಓಂದುವೇಳೆ ಅಮ್ಮ ಬಂದು, ಕಂದಾ ನಿನ್ನ ಅನುಜರು ಎಲ್ಲಿದ್ದಾರೆ ಎಂದು ಕೇಳಿದರೆ ಏನೆಂದು ಉತ್ತರ ಕೊಡಲಿ? ಕುಂತಿಯ ಮಕ್ಕಳು ಕೊಂದರೆಂದು ಬಿನ್ನವಿಸಲೇ?" ( ಒಬ್ಬ ತಾಯಿಯ ಮಕ್ಕಳನ್ನು ಇನ್ನೊಬ್ಬ ತಾಯಿಯ ಮಕ್ಕಳು ಕೊಂದರು ಎನ್ನುವಾಗ ಉಂಟಾಗುವ ಭಾವ ಭಿನ್ನ! ಅಬ್ಬಬ್ಬ ಕವಿರನ್ನ!)

ಶೋಕವು ಹೆಚ್ಚಾಗಿ ಫಣಿರಾಜಪತಾಕನು ಕಣ್ಣೀರಿನಿಂದ ತೋಯ್ದು, ಹಾ ದುಶ್ಶಾಸನಾ, ಹಾ ಕರ್ಣಾ ಎನ್ನುತ್ತಾ ಮೂರ್ಛೆ ಹೋಗುತ್ತಾನೆ.
ಸಂಜಯವಚನಂ ಎನ್ನುವ ಆಶ್ವಾಸ ಇಲ್ಲಿಗೆ ಮುಗಿಯಿತು. ಮುಂದೆ ಧೃತರಾಷ್ಟ್ರವಚನಂ!

೬.

ಮೂರ್ಛೆ ಬಿದ್ದಿರುವ ಕೌರವನಿಗೆ ಉಪಚಾರ ಮಾಡುತ್ತಿರುವುದನ್ನು ಪರಿಜನರು ಕಂಡು ಅದನ್ನು ಗಾಂಧಾರಿಗೆ ತಿಳಿಸುತ್ತಾರೆ. ಇಲ್ಲಿಂದ ಮುಂದಿನ ಕೆಲವು ಪದ್ಯಗಳು ಅತ್ಯಂತ ಕರುಣಾಪೂರಿತವಾಗಿದೆ. ಕೆಟ್ಟವನಾದ ಕೌರವನ ಬಗೆಗೂ ಅನುಕಂಪ ಬರುವಂತೆ ಚಿತ್ರಿಸುತ್ತಾನೆ ರನ್ನ.

ಗಾಂಧಾರಿಯ ಮಾತು-

ಎಮಗಂಧಯಷ್ಟಿಯಾಗಿ-
ರ್ದೆ ಮಗನೆ ನೀನುಳ್ಳೊಡೆಯೆಲ್ಲರೊಳರೆಂದೀ ನೀ-
ನ್ನುಮನಿರಿಸದೆ ಕುರುವಂಶಾ-
ನಿಮಿತ್ತರಿಪು ಪಾಶಪಾಣಿ ಸವಿನೋಡಿದನೇ

(ಅಂಧಯಷ್ಟಿ= ಊರುಗೋಲು, ನಮಗೆ ಊರುಗೋಲಾಗಿದ್ದೆ ಮಗನೆ, ನೀನೊಬ್ಬ ಉಳಿದರೂ ಎಲ್ಲರೂ ಇದ್ದಾರೆ ಎಂದುಕೊಳ್ಳುತ್ತಿದ್ದೆವು, ನಿನ್ನನ್ನೂ ಇರಿಸದಂತೆ ಆ ನಿಮಿತ್ತರಿಪು ಪಾಶಪಾಣಿ (ಯಮ) ಸವಿನೋಡಿದನೇ?).

ಮಡಿದೀ ದುಶ್ಶಾಸನನೇಂ
ನುಡಿಯಿಸುವನೊ ಕುರುನರೇಂದ್ರ ದುರ್ಮರ್ಷಣನೇಂ
ನುಡಿಯಿಸುವನೊ ದುಷ್ಕರ್ಣಂ
ನುಡಿಯಿಸುವನೊ ನೀನುಮುಸಿರದಿರ್ಪುದೆ ಮಗನೇ!

ಎಂದು ಗಾಂಧಾರಿ ಅಳುತ್ತಿರಲು, ತಂದೆ ಧೃತರಾಷ್ಟ್ರ ತನ್ನ ಮಗನ ಕಾಲ ಮೇಲೆ ಬಿದ್ದು ಹಾ! ಕುರುಕುಲಚೂಡಾಮಣಿ, ಹಾ ಕುರುಕುಲಚಕ್ರವರ್ತಿ ಎಂದು ರೋಧಿಸುತ್ತಾನೆ. ತನ್ನ ತಂದೆತಾಯಿಗಳ ಈ ರೋಧನೆಗೆ ಪುನಃ ಮೂರ್ಛೆ ತಪ್ಪುತ್ತಾನೆ ಕೌರವ.

ಮೂರ್ಛೆ ತಿಳಿದೆದ್ದು ಲಜ್ಜೆಯಿಂದ ಅವರ ಕಾಲಿಗೆ ನಮಸ್ಕರಿಸಲು, ಅಪ್ಪಿಕೊಂಡು, ಆಶೀರ್ವದಿಸಿ ಧೃತರಾಷ್ಟ್ರ ಕೆಲವು ಮಾತುಗಳನ್ನು ಹೇಳುತ್ತಾನೆ.

ರನ್ನ ಎಂತಹ ಕರುಣೆಯಿಂದ ಈ ಪದ್ಯಗಳನ್ನು ತುಂಬುತ್ತಾನೆಂದರೆ, ಒಂದು ಪದ್ಯದಲ್ಲಿ " ಧರ್ಮರಾಜ ಒಳ್ಳೆಯದನ್ನೇ ಮಾಡುತ್ತಾನೆ, ಈಗಲೂ ಕಾಲ ಮಿಂಚಿಲ್ಲ, ಸಂಧಿಯನ್ನು ಮಾಡಿಕೋ. ಸಂಧಿಗೆ ಸಂಜಯನನ್ನು ಕಳಿಸುತ್ತೇನೆ. ಭೀಮನ ವೈರ, ತಮ್ಮಂದಿರ ಸ್ನೇಹಿತರ ಸಾವನ್ನು ಮರೆತು ಇನ್ನಾದರೂ ಪಾಂಡವರಿಗೆ ಅರ್ಧರಾಜ್ಯವನ್ನು ಕೊಡು ಎಂದು ಕಾಲಿಗೆ ಬಿದ್ದು ಬೇಡುತ್ತಾನೆ"

ಯಾವ ಮಾತಿಗೂ ಕೇಳದ ಕೌರವ ತನ್ನದೇ ಮೊದಲಿನ ಮಾತುಗಳಿಗೆ ಜೋತು ಬೀಳುತ್ತಾನೆ.

ಆಂ ಮಗನೆನಾಗೆ ಧರ್ಮಜ-
ನೇಂ ಮಗನಲ್ಲನೆ ಬಳಿಕ್ಕೆ ನೀಮುಂ ತಾಮುಂ
ನಿಮ್ಮೊಳ್ ನೇರ್ಪಡುಗಿಡದೆ ಸು-
ಖಂ ಮುನ್ನಿನ ತೆರದೆ ಬಾಳ್ವುದಾಂ ಬೆಸಕೆಯ್ವೆಂ

ಬಿಡಿಮೆನ್ನನೆಂದು ಮುಂದಿ-
ರ್ದಡಿಗೆರಗಿದ ಮಗನನಪ್ಪಿಕೊಂಡಶ್ರುಜಲಂ
ಗುಡುಗುಡುನೆ ಸುರಿಯೆ ನಾಲಗೆ
ತಡತಡವರೆ ನುಡಿದನಂಧನೃಪನಾ ನೃಪನಂ

ನೀನು ಎಂತುಂ ಎಮ್ಮ ಪೇಳ್ವುದಂ ಕಯ್ಕೊಳ್ಳದೆ ಛಲಮನೆ ಕಯ್ಕೊಂಡು ಪಾಂಡುನಂದನರೊಳ್ ಕಾದಿದಲ್ಲದೆ ಸಂಧಿಯನೊಡಂಬಡೆಯಪ್ಪಿನಂ ನೀನೆಮಗಿನಿತನ್ ಒಳ್ಳಿಕಯ್ಯಲ್ವೇಳ್ವುದು

ನೆಗಳ್ವ ಕಜ್ಜಮಾವುದುಮ್?

ನಿಮ್ಮಜ್ಜನೊಳ್ ಆಲೋಚಿಸಿ ನೆಗಳ್ವುದು, ಅಲ್ಲಿಗೆ ಬಿಜಯಂಗೆಯ್ವುದು!

ನಾವು ಹೇಳಿದಂತೆ ಕೇಳದೆ ನೀನು ನಿನ್ನ ಛಲವೆಂದು ಮುಂದುವರೆಯುತ್ತಿದ್ದೀಯ. ನೀನೊಂದು ಕೆಲಸಮಾಡು, ಅದೇನೆಂದರೆ ನಿನ್ನಜ್ಜ ಭೀಷ್ಮನನ್ನು ನೋಡುವುದು. ಅದಕ್ಕೆ ಸಮ್ಮತಿಸಿ ಕೌರವ ತನ್ನ ಜೊತೆಗಾರ ಸಂಜಯನೊಂದಿಗೆ ಭೀಷ್ಮನಲ್ಲಿರುವಲ್ಲಿಗೆ ತೆರಳುತ್ತಾನೆ.

೭.

ದುರ್ಯೋಧನವಿಲಾಪಂ ಎನ್ನುವ ಆಶ್ವಾಸವು ಈವರೆಗೆ ನೋಡಿದ ಭಾಗಗಳಿಂದ ಬಹಳ ಸುಂದರವಾಗಿರುವಂತಹದ್ದು. ನನಗೆ ಬಹಳ ಇಷ್ಟವಾದ್ದು. ಅತ್ಯುತ್ತಮವೆನ್ನುವಂತೆ ಬಹಳ ನಾಟಕೀಯವಾಗಿ ಬರೆದಿದ್ದಾನೆ ರನ್ನ. ( ಈ ಭಾಗಗಳನ್ನು ರಂಗದಲ್ಲಿ ಅತ್ಯಂತ ಸುಂದರವಾಗಿ ಅಭಿನಯಿಸಬಹುದು ಎನ್ನುವ ಅರ್ಥದಲ್ಲಿ.,)

ಭೀಕರವಾದ ಯುದ್ಧದಿಂದ ಮಸಣವಾದ ರಣಾಂಗಣದಲ್ಲಿ ಕುರುಪತಿ ಮೆಲ್ಲಮೆಲ್ಲನೆ ಬರುತ್ತಿದ್ದಾನೆ. ಅತ್ಯಂತ ಸೊಗಸಾದ ಒಂದು ಪದ್ಯ ಇಲ್ಲಿದೆ.

ಹಲಚಕ್ರಾಂಕುಶರೇಖಾ
ವಿಲಸಿತಪದತಳಕೆ ಮಾಡೆ ಪುನರುಕ್ತತೆಯಂ
ಹಲಚಕ್ರಾಂಕುಶ ಕುರುಕುಲ
ತಿಲಕಂ ಕುಸಿಕುಸಿದು ಮೆಲ್ಲನೆ ನಡೆದಂ.

ರಾಜರ ಪಾದಗಳಲ್ಲಿ ಇರಬಹುದು ಎನ್ನುವಂತಹ ನೇಗಿಲು,ಚಕ್ರ, ಅಂಕುಶ ರೇಖೆಗಳು ಕೌರವನ ಪಾದದಲ್ಲಿದೆ. ಹಾಗೇ ರಣರಂಗದಲ್ಲಿ ಬಿದ್ದಿರುವಂತಹ ಸೈನಿಕರ ಆಯುಧಗಳು ಆ ಕಾಲಿನಲ್ಲಿ ಮತ್ತೆ ಈ ಆಯುಧಗಳ ರೇಖೆಯನ್ನು ಮೂಡಿಸುತ್ತಿದೆ. ಒಬ್ಬ ರಾಜನ ಅವಸ್ಥೆಯನ್ನು ಈ ಪದ್ಯ ಎಷ್ಟು ಸರಳ ಸುಂದರವಾಗಿ ಹೇಳುತ್ತಿದೆ ನೋಡಿ.

ಸಂಜಯ ನೋವಿನಲ್ಲಿ "ನಿಮ್ಮ ಕೋಮಲ ಪಾದ, ವಿರೋಧಿಗಳಮಂಡಳಿಕಮೌಳಿವಿಘಟ್ಟಿತ ಪಾದ ಪೀಠ ಇಂದು ಬಾಣ, ಕತ್ತಿ, ಪರಿಘ ಮುಂತಾದ ಆಯುಧಗಳು ಬಿದ್ದಿರುವ ಈ ಸಂಗ್ರಾಮ ಭೂಮಿಯಲ್ಲಿ ನಡೆಯಬೇಕಾಯಿತೇ" ಎಂದಾಗ

ತನುಜಾನುಜರ ವಿಯೋಗದ
ಮನಃಕ್ಷತಂ ನೋಯಿಸಲ್ಕೆ ನೆರೆಯವು ಸಮರಾ-
ವನಿಯೊಳುಡಿದಿರ್ದ ಕಯ್ದುಗ-
ಳಿನಿಸುಂ ನೋಯಿಕುಮೆ ವಜ್ರಮನನಪ್ಪೆನ್ನಂ

(ಮಕ್ಕಳ, ಸೋದರರ ಸಾವಿನಿಂದ ಉಂಟಾದ ನೋವನ್ನೇ ಲೆಕ್ಕಿಸುತ್ತಿಲ್ಲ, ಮತ್ತೆ ಈ ಜುಜುಬಿ ಆಯುಧಗಳು ನನ್ನನ್ನು ನೋಯಿಸುವುದೇ?)

ಹೀಗೆ ಆ ಯುದ್ಧಭೂಮಿಯಲ್ಲಿ ಮುಂದೆ ಬರುತ್ತಿರಬೇಕಾದರೆ...... ಮರುಳ್ಗಳ್!

೮.

ಗುರುವಿನ ನೆತ್ತರನ್ನು ಕುಡಿವೊಡೆ ಅದು ಸಾಧುವಲ್ಲ, ದ್ವಿಜರಕ್ತ!, ದುಶ್ಶಾಸನನ ನೆತ್ತರು ಭೀಮನೇ ಕುಡಿದ, ಭೀಷ್ಮನ ನೆತ್ತರನ್ನು ಕುಡಿಯಲು ಅವನಿನ್ನೂ ಸತ್ತಿಲ್ಲ, ಕೌರವಾ, ನಿನ್ನ ನೆತ್ತರನ್ನೇ ಕುಡಿಯಬೇಕೆಂದಿದ್ದೇವೆ ಬಾ ಬಾ ಎಂದೆನುತ್ತಿತ್ತು ಒಂದು ಪಿಶಾಚಿ.

ಅದನ್ನು ಕೇಳುತ್ತ ಮುಂದುವರೆದು ಬರುತ್ತಿರಲು, ಯಾವುದೋ ಶವದ ಮೆದುಳಿನ ಮೇಲಿಟ್ಟು ಜಾರಿ ಬೀಳುವಂತಾಗುತ್ತಾನೆ ಕೌರವ. ಅಯ್ಯೋ, ಜಾಗ್ರತೆ ಕಾಲು ತೊಡೆ ಮುರಿದೀತು ಎನ್ನುತ್ತಾ ಸಂಜಯ ಅವನನ್ನು ಮೇಲಕ್ಕೆತ್ತುತ್ತಾನೆ. ಆಗ ಒಂದು ಪಿಶಾಚಿ "ಭೀಮಕೋಪದಲ್ಲಿ ನಿನಗೆ ಊರುಭಂಗಭಯಮಾಗದೆ ಪೋಕುಮೆ ಕೌರವೇಶ್ವರಾ" ಎಂದು ಅಣಕಿಸುತ್ತದೆ.

ಈ ಭಾಗವನ್ನು ಓದಿಯೇ ಸುಖಿಸಬೇಕು. ಈ ಮರುಳ್ಗಳ ಮಾತಿನಲ್ಲಿ ಹುರುಳಿಲ್ಲ ಎಂದು ಕೌರವ ಎನ್ನುತ್ತಿರುವಾಗ ಅರಗಿನ ಮನೆಯಿಂದಲಾಗಿ, ವಿಷದ ಲಡ್ಡುಗೆಗಳನ್ನು ಕೊಟ್ಟು ಕೊಲ್ಲಲು ಯತ್ನಿಸಿ ಭೀಮನ ವೈರವನ್ನು ಗಳಿಸಿದ ನೀನು ಮರುಳನೋ? ಅಲ್ಲ, ಎಲ್ಲರೊಂದಾಗಿ ಇರುವಂತಹ ನಾವು ಮರುಳ್ಗಳೋ ಎಂದು ಕೇಳಿತು ಪಿಶಾಚಿ. ಮತ್ತೆ ಕೌರವನಿಗೆ ಸವಾಲಾಗಿ,

ನುಡಿಯದೆ ಪೋಗಲೀಯೆನೆಲೆ ಪೋದೊಡೆ ಧೂರ್ಜಟಿಯಾಣೆ ಮೀರೆ ಪೋ-
ದೊಡೆ ಕಲಿಭೀಮನಾಣೆಯೆನೆ ಧೂರ್ಜಟಿಯಾಣೆಗೆ ನಿಂದು ಭೀಮನೆಂ-
ದೊಡೆ ಮುಳಿದಟ್ಟಿ ಕುಟ್ಟಲರಸಂ ಗದೆಯಂ ಕೊಳೆ ಭೂತಕೋಟಿಯುಂ
ಬಡಿಗೊಳೆ ಸಂಜಯಂ ನಯದೆ ಬಗ್ಗಿಸಿದಂ ಫಣಿರಾಜಕೇತುವಂ

ಈ ಮರುಳ್ಗಳಾಟವೆಲ್ಲವೂ ಕೌರವನ ಮನದಲ್ಲಿ ಆದಂತದ್ದು ಎನ್ನುವಂತೆ ರನ್ನ ಬರೆಯುತ್ತಾನೆ. ಎಷ್ಟು ಅಮೋಘವಾಗಿದೆ ನೋಡಿ ಚಿತ್ರ.

ಸತ್ತವರನ್ನು ನೋಡುವುದಿಲ್ಲ, ನೇರವಾಗಿ ನನ್ನನ್ನು ಭೀಷ್ಮನಿದ್ದಲ್ಲಿ ತಲುಪಿಸು ಎಂದು ಸಂಜಯನಿಗೆ ಹೇಳಿ ಮುಂದೆ ಬರುತ್ತಾನೆ ಕೌರವ. ಹೇಗೆಂದರೆ

ಇಭಶೈಲಂಗಳನೇರಿಯೇರಿ, ರುಧಿರಸ್ರೋತಂಗಳಂ ದಾಂಟಿ ದಾಂಟಿ, ಭದೋರ್ನೀಲತಾಪ್ರತಾನ ವಿಪಿನವ್ರಾತಂಗಳೊಳ್ ಸಿಲ್ಕಿ ಸಿಲ್ಕಿ ಮುಂದುವರೆಯುತ್ತಾ ಬಾಣಗಳಿಂದ ಹೊಡೆಯಲ್ಪಟ್ಟು ಪ್ರಾಣವಿಲ್ಲದ ಬಿದ್ದಿರುವ ದ್ರೋಣಾಚಾರ್ಯನನ್ನು ಕಾಣುತ್ತಾನೆ.

ನಿಮ್ಮ ಬಿಲ್ಗಾರಿಕೆಗೆ ಅರ್ಜುನನೇನು? ಆ ಪಿನಾಕಪಾಣಿಯೇ ಬಂದರೂ ಸಮನಲ್ಲ. ಆದರೆ ಇದೇನಾಯ್ತು? ಕರ್ಮವಶದಿಂದಲೋ ಅಥವಾ ನಿಮ್ಮ ಉಪೇಕ್ಷೆಯಿಂದಲೋ ಮರಣಹೊಂದುವಂತಾಯ್ತಲ್ಲ.

ಶರಸಂದೋಹಮನನ್ಯಸೈನ್ಯದೊಡಲೊಳ್ ಬಿಲ್ಬಲ್ಮೆಯಂ ತನ್ನ ಶಿ-
ಷ್ಯರ ಮೈಯ್ಯೊಳ್ ನಿಜಕೀರ್ತಿಯಂ ನಿಖಿಳದಿಕ್ಚಕ್ರಂಗಳೊಳ್ ಚಿತ್ತಮಂ
ಹರಪಾದಾಂಬುಜಯುಗ್ಮದೊಳ್ ನಿರುಸಿದಂ ಚಾಪಾಗಮಾಚಾರ್ಯರೊಳ್
ದೊರೆಯಾರೆಂಬಿನಮಣ್ಮಿ ಸತ್ತಳವಿದೇಂ ದ್ರೋಣಂಗೆ ಮೆಯ್ವೆತ್ತುದೋ

ನಿಮ್ಮ ಬಾಣಗಳೆಲ್ಲ ಶತ್ರುಸೈನ್ಯದ ಒಡಲಿನಲ್ಲಿದೆ, ನಿಮ್ಮ ವಿದ್ಯೆಯೆಲ್ಲವೂ ಶಿಷ್ಯರಲ್ಲಿದೆ. ಕೀರ್ತಿಯು ದಿಕ್ಕುದಿಕ್ಕಿನಲ್ಲಿದೆ, ಮನಸ್ಸು ಹರಪಾದಾಂಬುಜದಲ್ಲಿದೆ.
ಬಿಲ್ವಿದ್ಯೆಯ ಆಚಾರ್ಯನನ್ನು ನೆನೆದು ಕೌರವ ಅಳಲುತ್ತಾನೆ. ಹಿಂದೊಮ್ಮೆ ಬಹಳವಾಗಿ ದ್ರೋಣನನ್ನು ನಿಂದಿಸಿದ್ದ ಕೌರವ ಶವಶರೀರದ ಮುಂದೆ ಹೀಗೆಲ್ಲ ಕೊರಗುವುದನ್ನು ನೋಡಿದರೆ ಕರುಣೆ ಉಕ್ಕದುಳಿದೀತೇ?

ದ್ರೋಣನಿಗೆ ಮೂರುಸುತ್ತು ಬಂದು ಮುಂದುವರೆಯುತ್ತಾ ಕೌರವ...

~
ಇನ್ನೂ ಇದೆ.

Friday, 9 August 2013

ಅಪ್ಪಚ್ಚಿ ಹೇಳಿದ ಅಪ್ಪನ ಕತೆ- ಭಾಗ ೯ (ತಾಂಬೂಲ ಭಕ್ಷಣಂ)

ಯಕ್ಷಗಾನ ನನಗೆ ಚೆನ್ನಾಗಿತ್ತು. ಚಿಕ್ಕಪ್ಪನಿಗೆ ನೂರರಲ್ಲಿ ಒಂದು, ನನಗೆ ಬರೀ ಒಂದೇ! ಹಾಸ್ಯದ ಸನ್ನಿವೇಶಕ್ಕೆ ದೊಡ್ಡದಾಗಿ ನಕ್ಕಾಗ ವಿಚಿತ್ರವೆಂಬಂತೆ ಚಿಕ್ಕಪ್ಪ ನೋಡಿದ್ದು ಮಾತ್ರ ಹಾಸ್ಯದ ಮೇಲೆ ಸಂಶಯವನ್ನುಂಟು ಮಾಡಿತು. ಆದರೂ ಮೊದಲಿನ ಹಾಸ್ಯದ ಔಚಿತ್ಯ ಮತ್ತು ಗಂಭೀರತೆ ಈಗಿನ ಯಾವ ಕಲಾಪ್ರಕಾರದಲ್ಲೂ ಇಲ್ಲವೇನೊ. ಬೆಳಗ್ಗಿನ ಅಷ್ಟೇನೂ ಭಯಂಕರವಲ್ಲದ ಚಳಿಗೆ ಮರ್ಯಾದೆ ಕಡಿಮೆಯಾಗಬಾರದೆಂದು ತಲೆಗೆ ಒಂದು ಬಟ್ಟೆಯನ್ನು ಸುತ್ತಿ ಹೊರಟೆವು. ಮನುಷ್ಯನಿಗೆ ನಡೆಯುವಾಗ ನಿದ್ದೆ ಮಾಡಲಿಕ್ಕಾಗುವುದಿಲ್ಲ ಎನ್ನುವ ಕಾರಣದಿಂದ ನಿದ್ದೆ ಇರಲಿಲ್ಲವಷ್ಟೆ.

ಮಗನೆ, ಇದೇ ಗದ್ದೆಯಲ್ಲಿ ಮೊದಲು ಭಯಂಕರ ಯಕ್ಷಗಾನಗಳು ಆಗ್ತಿತ್ತು. ಅದೂ ಆಗಿನ ಕಲಾವಿದರು ಜೀವ ಬಿಟ್ಟು ಕುಣಿಯುತ್ತಿದ್ದರು. ಈಗಿನ ಹಾಗೆ ಸಮತಟ್ಟಿನ ನೆಲವೂ ಅಲ್ಲ, ಕುಣಿದು ಕಾಲು ಉಳುಕಿಸಿಕೊಂಡು ನಾಳಿನ ಯಕ್ಷಗಾನಕ್ಕೆ ಋಷಿಯ ಪಾತ್ರ ಮಾಡಿದ ಕಲಾವಿದರೂ ಇದ್ದಾರೆ. ಈಗ ಹಾಗೇನಿಲ್ಲ ಒಂದೋ ರಪರಪ ಐವತ್ತು ಸಲ ತಿರುಗುವುದು, ಅರ್ಥ ಹೇಳುವಾಗ ಬೆಬ್ಬೆಬೆ ಹೇಳುವುದು. ಪುಣ್ಯಕ್ಕೆ ಇಂಗ್ಲೀಷೊಂದು ಮಾತನಾಡುವುದಿಲ್ಲ ಎನ್ನುವುದು ಪುಣ್ಯ.

ಹಾಗೇನಿಲ್ಲ ಚಿಕ್ಕಪ್ಪ. ಎಷ್ಟೊ ಜನ ಕಲಿತವರು ತುಂಬಾ ಚಂದ ಮಾಡ್ತಾರೆ. ಆಗಿನ ವ್ಯವಸ್ಥೆ ಹಾಗಿತ್ತಷ್ಟೆ. ಈಗ ಹಾಗಿಲ್ಲ. ಒಳ್ಳೇ ವಿಷಯ ಸಂಪಾದನೆ ಮಾಡಿ ನಂತರ ಮಾತನಾಡುವವರು ಎಷ್ಟೋ ಕಲಾವಿದರಿದ್ದಾರಲ್ಲ. ನಿಮ್ಮ ಹಳೇ ಬಣ್ಣದವೇಷದ ಬಾಯಿಯಲ್ಲಿ ಆರ್ಭಟ ಮಾತ್ರವಿತ್ತು. ಬೇರೆ ಯಾವ ಪಾತ್ರವೂ ಮಾಡುತ್ತಿರಲಿಲ್ಲ. ಈಗಿನ ಕಾಲದಲ್ಲಿ ರಾಕ್ಷಸ ನಾಳಿನ ಇಂದ್ರನಾಗುತ್ತಾನೆ.

ಹೌದು ಮಗನೆ, ಅದು ಸರಿ. ಕಾಲಕ್ಕೆ ತಕ್ಕ ಹಾಗೆ ಕೋಲ. ಒಂದು ಎಲೆ ಅಡಕ್ಕೆ ತಿಂದು ಹೊರಡುವ. ಸ್ವಲ್ಪ ಬೆಚ್ಚಗೆ ಇರ್ತದೆ.

ಎಲೆ ಅಡಕ್ಕೆ ತಿನ್ನಲಿಕ್ಕೆ ಶುರು ಮಾಡಿದ್ದು ನಿನ್ನಪ್ಪನ ಜೊತೆಗೇ ಮಾರಾಯ. ನಮ್ಮ ಅಪ್ಪ ತಿನ್ನುತ್ತಿದ್ದರು. ಒಳ್ಳೇ ಕುಣಿಯ ಹೊಗೆಸೊಪ್ಪು. ಅದೂ ಮಂಗಳೂರಿನ ಯಾವುದೋ ಪೈ ಅಂಗಡಿಯಿಂದ ತಿಂಗಳಿಗೊಮ್ಮೆ ತರಿಸುವುದಾಗಿತ್ತು. ಹೀಗಾಗಿ ಮನೆಯಲ್ಲಿ ಹೊಗೆಸೊಪ್ಪಿನ ಸ್ಟಾಕ್ ಯಾವತ್ತೂ ಇರುತ್ತಿತ್ತು. ಬೇರೆ ಯಾರೂ ಎಲೆ ತಿನ್ನುತ್ತಿರಲಿಲ್ಲ.

ನಿನ್ನಪ್ಪ ಎಲೆ ತಿನ್ನಲು ಶುರುಮಾಡಿದ ಬಗ್ಗೆ ಒಂದು ಸಣ್ಣ ಕತೆ ಇದೆ ಮಾರಾಯ. ಆಗಿನ ಕಾಲದ ಕಬಡ್ಡಿ ಆಟದ ಒಂದು ಕತೆ ಹೇಳ್ತೇನೆ ನಿನಗೆ. ಕಬಡ್ಡಿಯ ಜೊತೆಗೆ ಮನೆಗೆ ತಲುಪಬಹುದು.

ಸುಮಾರು ಕಾಲದಿಂದ ಕಬಡ್ಡಿ ಆಟ ಆಡುತ್ತಿದ್ದೆವು ನಾವು. ಶಾಲೆಯ ದಿನಗಳಿಂದಲೂ ನಿನ್ನಪ್ಪ, ಜಗ್ಗು ಎಲ್ಲರೂ ಒಳ್ಳೆಯ ಕಬಡ್ಡಿ ಆಟಗಾರರು. ನಾನು ಜೊತೆಗೆ ಎಷ್ಟೊ ಆಟಗಳಿಗೆ ಹೋಗಿದ್ದೇನೆ. ನೂರಿನ್ನೂರು ರೂಪಾಯಿಗಳ ಬಹುಮಾನಕ್ಕಿಂತಲೂ ಪ್ರತಿಷ್ಟೆಯ ಆಟವಾಗಿತ್ತು ಕೆಲ ವರ್ಷಗಳಿಗೆ. ಅದೊಂದು ದಿನ ಆನೆಕಲ್ಲಿನ ಶಾಲೆಯ ಮೈದಾನದಲ್ಲಿ ಕಬಡ್ಡಿ ಪಂದ್ಯ. ಸುಮಾರು ಆಟಗಾರರು ಬಂದಿದ್ದರು. ಜಗ್ಗುವಿನ ಟೀಮಿನಲ್ಲಿ ನಾನೂ ಸೇರಿಕೊಂಡಿದ್ದೆ. ಹೀಗೆ ನಾನೂ ನಿನ್ನಪ್ಪನೂ ಬೆಳಗ್ಗೆ ಏಳು ಘಂಟೆಗೆ ಮನೆಯಿಂದ ಹೊರಟು ಜಗ್ಗು ಮತ್ತೆ ಉಳಿದವರ ಜೊತೆ ಹೇಗೂ ಆನೆಕಲ್ಲಿನ ಶಾಲೆಗೆ ತಲುಪಿದೆವು.

ಕಬಡ್ಡಿಗೆ ಹೆಸರು ಕೊಟ್ಟು ಆಡಿಯೂ ಆಯಿತು. ಎಲ್ಲರಿಂದ ಬಲಾಢ್ಯ ಮತ್ತು ಚುರುಕಿನ ಆಟಗಾರರಿದ್ದುದರಿಂದ ಮತ್ತು ಹೆಚ್ಚಿನ ಅಭ್ಯಾಸವಿದ್ದುದರಿಂದ ಎರಡೋ ಮೂರೋ ಪಂದ್ಯ ಗೆದ್ದೆವು. ಮತ್ತೆ ನಮ್ಮ ಆಟ ಇದ್ದುದು ಮಧ್ಯಾಹ್ನದ ಮೇಲೆಯೇ. ಊಟ ಮಾಡುವುದಕ್ಕೆಂದು ಅಲ್ಲಿಯೇ ಹೊಳೆಯ ಹತ್ತಿರ ಇದ್ದ ಹೋಟೆಲ್ ಬಳಿ ಬಂದು ಏನನ್ನೋ ತಿಂದು ಇನ್ನೂ ತುಂಬಾ ಸಮಯವಿದ್ದುದರಿಂದ ಹೊಳೆಯಲ್ಲಿ ಈಜಾಡಿ ಆಟದ ತರಚುಗಾಯಗಳ ನೋವನ್ನು ಅನುಭವಿಸಿದೆವು.

ನಂತರ ಏನೂ ಕೆಲಸವಿರಲಿಲ್ಲವಾದ್ದರಿಂದ ಅಲ್ಲಿ ಬಸ್ ಸ್ಟಾಂಡ್ ಎಂದು ಕರೆಯಲ್ಪಡುವ ಜೋಪಡಿಯ ಒಳಗೆ ಹಾಕಿದ್ದ ಕರೆಂಟ್ ಕಂಬದ ಬೆಂಚಿನಲ್ಲಿ ಕುಳಿತು ಮಾತನಾಡುತ್ತಿದ್ದೆವು. ಜಗ್ಗುವೋ ಅಲ್ಲ ಇನ್ನೊಬ್ಬನಾರೋ ಎಲೆ ಅಡಿಕೆ ತಂದು ತಿನ್ನತೊಡಗಿದರು. ನಿನ್ನಪ್ಪ ಸುಮ್ಮನಿರಲಾರದೆ ಮನೆಯಲ್ಲಿರುವ ತಾಂಬೂಲದ ಪೆಟ್ಟಿಗೆ, ತೆಂಗಿನ ಮರಕ್ಕೆ ಹಬ್ಬಿದ ಎಲೆಬಳ್ಳಿ ಮುಂತಾದುವುಗಳ ಬಗ್ಗೆ ಕೊಚ್ಚಿಕೊಳ್ಳುತ್ತಾ ಕೊನೆಗೆ ಹೊಗೆಸೊಪ್ಪಿನ ವಿಷಯ ಬಂತು. ನಮ್ಮ ಮನೆಯ ಹೊಗೆಸೊಪ್ಪು ಒಂದು ಸಣ್ಣ ತುಂಡು ಸಾಕು, ಇದೆಲ್ಲ ಎಂತದ್ದು? ಲೆಕ್ಕಕ್ಕೆ ಇಲ್ಲ ಎನ್ನುವ ಮಾತುಗಳನ್ನೂ ಸೇರಿಸಿ ಬಿಟ್ಟ.

ಭಟ್ರೆ, ನೀವು ತಿಂದಿದ್ದೀರಾ? ಸುಮ್ಮನೆ ಬಡಾಯಿ ಕೊಚ್ಚುವುದೇನು ಬೇಡ. ತಾಕತ್ತಿದ್ದರೆ ಒಮ್ಮೆ ಎಲೆಅಡಿಕೆ ಹಾಕಿ ನೋಡಿ ಹೊಗೆಸೊಪ್ಪಿನ ಸಹಿತ ಎಂದನೊಬ್ಬ. ನಿನ್ನಪ್ಪನ ದೊಡ್ಡ ಮರ್ಯಾದೆ ಅಲ್ಲೆಲ್ಲೋ ಹರಾಜಾದಂತನಿಸಿತೇನೋ, ಒಮ್ಮೆಲೆ ಓಹೋ, ನೋಡು ನನ್ನ ತಾಕತ್ತು ಎಂದು ಅರ್ಧ ಬೆರಳಿನಷ್ಟುದ್ದದ ಹೊಗೆಸೊಪ್ಪಿನ ಸಹಿತ ಎಲೆ ಅಡಿಕೆ ಜಗಿದ. ಅದೇನಾಯಿತೋ ಏನೋ ನಿನ್ನಪ್ಪ ಕೆಂಪು ಕೆಂಪಗಾದ. ಮುಖದಲ್ಲಿ ಬೆವರು ಧಾರಾಕಾರ ಶುರುವಾಯಿತು. ವಾಂತಿ ಬಂದಂತೆ ವ್ಯಾಕ್ ಎಂದ. ಕಣ್ಣುಗಳನ್ನ ಗಿರ ಗಿರ ತಿರುಗಿಸಿದ.

ನಮಗೆ ಮೊದಲು ಮೋಜೆನ್ನಿಸಿದರೂ ಕ್ರಮೇಣ ನಿನ್ನಪ್ಪ ಜೋಪಡಿಗೆರಗಿ ಕುಸಿದು ಕುಳಿತ. ಆಗ ಹೆದರಿಕೆ ಶುರುವಾಗತೊಡಗಿತು ನಮಗೆ. ಹೋಟೆಲಿನಿಂದ ಮಜ್ಜಿಗೆ ನೀರು ತಂದು ಕುಡಿಸಿದೆವು, ಸರಿ ಹೋಗಲಿಲ್ಲ. ಯಾರೋ ಬಸ್ ಸ್ಟಾಂಡಿಗೆ ಬಂದವರು, ಸ್ವಲ್ಪ ಮಲಗಲಿ, ಎಲ್ಲಾ ಸರಿ ಹೋಗುತ್ತದೆ, ತಲೆಗೆ ಏರಿರಬೇಕು ಹೊಗೆಸೊಪ್ಪು ಎಂದರು.

ಇದಾದ ಸ್ವಲ್ಪ ಹೊತ್ತಿನಲ್ಲೇ ನಮ್ಮ ಕಬಡ್ಡಿ ಆಟವೂ ಇದ್ದಿತ್ತು. ನಿನ್ನಪ್ಪನಿಲ್ಲದೇ ಆಡಿದೆವು. ಒಂದು ಪಂದ್ಯ ಗೆದ್ದರೂ, ನಂತರದ ಪಂದ್ಯದಲ್ಲಿ ಸೋತೆವು. ಅಷ್ಟಾಗುವಾಗ ಸಂಜೆಯಗಿತ್ತು. ನಿನ್ನಪ್ಪನ ನೆನಪೇ ಇರಲಿಲ್ಲ ನಮಗೆ. ಪಂದ್ಯ ಮುಗಿದ ಕೂಡಲೇ ಬಸ್ ಸ್ಟಾಂಡಿಗೆ ಬಂದು ನೋಡಿದರೆ ನಿನ್ನಪ್ಪ ಸುಖನಿದ್ರೆಯಲ್ಲೇ ಇದ್ದ. ಎಬ್ಬಿಸಿದರೂ ಏಳಲಿಲ್ಲ.

ನಮ್ಮ ಟೀಮಿನ ಎಲ್ಲರೂ ಹೊರಟು ಹೋದರು. ನಾನು ಮತ್ತು ಜಗ್ಗ ಮಾತ್ರ ಉಳಿದವರು. ಕೊನೆಗೆ ನೀರು ತಂದು ಮುಖಕ್ಕೆ ಹಾಕಿ, ಇನ್ಯಾರೋ ಹೇಳಿದ ತೆಂಗಿನ ಎಣ್ಣೆ ತಲೆಗೆ ಹಾಕಿ ಮತ್ತೊಂದು ಘಂಟೆಯ ನಂತರ ಅಲ್ಲಿಂದ ನಿನ್ನಪ್ಪನ ಜೊತೆಗೂಡಿ ಮನೆಗೆ ಹೊರಟೆವು.

ಇದಾಗಿ ಸುಮಾರು ದಿನಗಳು ನಿನ್ನಪ್ಪ ಇದರ ಬಗ್ಗೆ ಮಾತನಾಡುತ್ತಿರಲಿಲ್ಲ. ಕೊನೆಗೆ ಒಂದೊಂದು ಸಲ ಎಲೆ ಅಡಿಕೆ ಪ್ರಾರಂಭಿಸಿದವರು ಯಕ್ಷಗಾನ, ಬೇರೆ ಕಡೆಯ ಮದುವೆಗಳು ಎಂದೆಲ್ಲಾ ತಿನ್ನತೊಡಗಿದರು. ನಂತರ ಅದನ್ನು ಅಭ್ಯಾಸ ಮಾಡಿಕೊಂಡರು.

ಈಗಲೂ ಅರ್ಧ ಬೆರಳಿನಷ್ಟು ಹೊಗೆಸೊಪ್ಪಿಲ್ಲದಿದ್ದರೆ ಅವರಿಗೆ ತಿಂದದ್ದು ಸಮಾಧಾನ ಇಲ್ಲ. ಅದೂ ಸುಮ್ಮನೇ ತಿಂದು ಉಗುಳುವುದಲ್ಲ. ಆ ಚಂದವೇ ಬೇರೆ. ಅದೊಂದು ಕಲೆಯೋ ಏನೋ? ಹಹ್ಹ..

ಎಲ್ಲಿದ್ದೇವೆ ಈಗ? ಹ್ಮ್.. ಇವತ್ತು ತೋಟದ ಕೆಲಸಕ್ಕೆ ಕೆಲಸದವರು ಬರ್ತಾರೆ. ಇನ್ನು ಮನೆಗೆ ಹೋಗಿ ಒಂದು ಸ್ವಲ್ಪ ಮಲಗಿ, ಚಾಯ ಕುಡಿದು ತೋಟಕ್ಕೆ ಹೋಗಬೇಕು.

ಹೌದಾ, ಕಷ್ಟ. ಈಗ ಜನವೂ ಸಿಗುವುದಿಲ್ಲ ಅಲ್ವ? ಸರಿ ಚಿಕ್ಕಪ್ಪ.. ನಾನು ಮತ್ತೆ ಬರ್ತೇನೆ. ಈಗ ನಾನು ಚಂದ ನಿದ್ದೆ ಮಾಡ್ಬೇಕು. ಮೊದಲೆಲ್ಲಾ ಯಕ್ಷಗಾನ ನೋಡಿದ ಮೇಲೆ ಮಲಗಿದರೆ ಪಾತ್ರಗಳು ಬಂದು ನಿದ್ದೆಯಲ್ಲಿ ಕುಣಿಯುತ್ತಿದ್ದವು. ಈಗ ಕುಣೀತದಾ ನೋಡ್ಬೇಕು..