Tuesday, 16 October 2012

ಅಪ್ಪಚ್ಚಿ ಹೇಳಿದ ಅಪ್ಪನ ಕತೆ- ಭಾಗ ೪ ( ಉರುಳಿ ಕತೆ)


ಇದೇನು ವಿಶೇಷ ಕತೆಯಾಗಲಿಲ್ಲ ನನಗೆ. ಇಂತಹ ಕತೆಗಳು ಗೆಳೆಯರ ನಡುವೆ ಎಷ್ಟೋ ನಡೆದಿದೆ. ಆದರೆ ಆ ಕಾಲಕ್ಕೆ ಅಪ್ಪನ ಧೈರ್ಯ ಮೆಚ್ಚತಕ್ಕದ್ದು. ಚಿಕ್ಕಪ್ಪ ಮನೆಗೆ ಬಂದ ಕೂಡಲೇ ಚಹಾ ಮಾಡಲು ಹೇಳಿ ಒಂದು ತಂಬಾಕುಯುಕ್ತ ಎಲೆ ಅಡಿಕೆಯನ್ನು ಏರಿಸಿದ. ಇದ್ದ ಮದುವೆ ಕಾಗದಗಳು, ಅದೇನೋ ಕರೆಯೋಲೆಗಳು ಎಲ್ಲವನ್ನೂ ನೋಡುತ್ತಾ ಕುಳಿತೆ. ಸ್ವಲ್ಪ ಸಮಯದಲ್ಲೇ ಚಹಾರಾಧನೆಯೂ ನಡೆದು ಉಭಯ ಆತ್ಮಗಳೂ ಶಾಂತಿಯನ್ನು ಹೊಂದಿ ಪುನಃ ಎಲೆ ಅಡಿಕೆಯ ತಟ್ಟೆಯನ್ನು ನೋಡತೊಡಗಿದವು. ಹಾಗೆಯೇ ತೋಟಕ್ಕೆ ಹೊರಟೆವು.
--
ನೀನು ಮದುವೆ ಕಾಗದಗಳನ್ನು ನೋಡುತ್ತಿದ್ದಾಗ ಒಂದು ಕತೆ ಹೇಳಲು ನೆನಪಿಗೆ ಬಂತು ನೋಡು. ಇದು ತುಂಬಾ ಚೆನ್ನಾಗಿರುವ ಕತೆ. ಈಗ ನೆನಪು ಮಾಡಿಕೊಂಡರೂ ಒಳ್ಳೆಯ ನಗೆ ಬರುವಂತಹದ್ದು. ಇದರಲ್ಲಿ ಕೂಡ ತುಂಬಾ ಸ್ವಾರಸ್ಯವಿದೆ. ಅಣ್ಣನಿಗೆ ಅಂದರೆ ದೊಡ್ಡಪ್ಪನಿಗೆ ಆಗಲೇ ಮದುವೆ ನಿಶ್ಚಯವಾಗಿತ್ತು. ದೊಡ್ಡಮ್ಮ ತುಂಬಾ ದೂರದ ಊರಿನವರೇನೂ ಅಲ್ಲ. ವರುಷದ ಹಿಂದೆ ಊರಿನ ದೇವರ ಜಾತ್ರೆಗೆ ಬಂದಿದ್ದ ತಂದೆಯ ಪರಿಚಯದವರ ಮಗಳು ಆಕೆ. ಒಂದೇ ಸಲಕ್ಕೆ ಎಲ್ಲಾ ತೀರ್ಮಾನವಾಗಿ ಇಂತಹ ದಿನ ಮದುವೆ ಎಂದು ನಿಶ್ಚಯವಾಗಿತ್ತು. ಏಪ್ರಿಲ್ ತಿಂಗಳಲ್ಲಿ ಮದುವೆ. ಶಾಲೆಗೆ ರಜೆ, ನಿನ್ನಪ್ಪನ ಹತ್ತನೇ ಕ್ಲಾಸು ಮುಗಿದಿತ್ತು. ಮುಂದೇನು ಎನ್ನುವ ಯೋಚನೆಯಿರಲಿಲ್ಲ. ದೊಡ್ಡಪ್ಪ ಕೃಷಿಯೇ ಮುಖ್ಯವೆಂದಿದ್ದರೂ ಕೂಡ ಆಫೀಸು ಕೆಲಸದ ಆಸೆ ಇಟ್ಟುಕೊಂಡಿದ್ದರು.

ಮದುವೆಗೆ ಮೊದಲು ಕರೆಯೋಲೆ ಕೊಡುವುದಕ್ಕೆಂದು ನಾವು ತಿರುಗಿದ ಊರುಗಳಿಗೆ ಲೆಕ್ಕವಿಲ್ಲ. ಈಗ ಈಮೈಲು, ಫೋನು ಅಲ್ಲದೇ ಬೈಕು ಹಿಡಿದುಕೊಂಡು ಆಮಂತ್ರಣ ಕಳುಹಿಸಬಹುದು ಆದರೆ ಜನರು ಬರುವುದಿಲ್ಲ. ಹಿಂದೆ ನಾವೆಷ್ಟು ಮನೆಗೆ ಹೋಗುತ್ತೇವೋ ಅಷ್ಟು ಜನರು ಗ್ಯಾರಂಟಿಯಾಗಿ ಬರುತ್ತಿದ್ದರು.ಅದೂ ನಮ್ಮ ಮನೆ ಎಂದರೆ ಬಂದೇ ಬರುತ್ತಿದ್ದರು. ದೂರದ ಸಂಬಂಧಿಕರಿಗೆ, ಮನೆಯ ಮಿತ್ರರಿಗೆಲ್ಲಾ ನಾವು ಆಮಂತ್ರಣ ಕೊಡುವುದಿದ್ದರೆ ಹತ್ತಿರದ ನೆಂಟರಿಗೆ, ಹತ್ತಿರದ ಮನೆಯವರಿಗೆಲ್ಲಾ ದೊಡ್ಡಪ್ಪನ ಕರೆಯೋಲೆ. ಹೀಗೇ ಸಂಭ್ರಮ. ಮದುವೆ ಇದು ಎರಡನೆಯದ್ದು ನಾವು ನೋಡುತ್ತಿದ್ದದ್ದು. ಮೊದಲ ಮದುವೆ ಅಕ್ಕನ ಮದುವೆ. ಆಗ ನನಗೆ ೧೧ ಅಥವಾ ೧೨ ವಯಸ್ಸು.

ದೂರದ ಊರುಗಳಿಗೆ ಕಾಗದ ವಿತರಣೆ ಆದಂತೆ ನಮ್ಮ ಕೆಲಸಗಳು ಬೇರೆ ಆಗತೊಡಗಿದವು. ಪೇಟೆಯಿಂದ ಅಕ್ಕಿ, ಬೆಲ್ಲ, ಬೇಳೆ ಮುಂತಾದವುಗಳನ್ನ ತರುವುದು, ತರಕಾರಿ ತರುವುದು, ತೆಂಗಿನಕಾಯಿ ಸುಲಿಯುವುದು ಇದೆಲ್ಲದಕ್ಕೂ ನಾವು ಬಿದ್ದೆವು. ಚಪ್ಪರವನ್ನೂ ಹಾಕಿದ್ದಾಯಿತು. ದಾರಿಯಲ್ಲಿದ್ದ ಮುಳ್ಳು, ಬೇಡದ ಗಿಡಗಳ ಕೈ ಕಾಲು ಕತ್ತರಿಸಿದ್ದೂ ಆಯಿತು. ಮನೆಯ ಅಂಗಳದಿಂದ ತೋಟದ ತನಕವೂ ಸಗಣಿ ಸಾರಿಸಿ, ಕಸ ತರಗೆಲೆ ಬೀಳದಂತೆ ನೋಡಿಕೊಂಡೆವು. ಇದೆಲ್ಲಾ ಆದಮೇಲೆ ಮದುವೆಗೆ ಎರಡು ದಿನ ಮಾತ್ರ ಬಾಕಿ ಇದ್ದಿತು.

ನಮ್ಮೂರು ಎಂದಾದಮೇಲೆ ಹಸರುಬೇಳೆ ಪಾಯಸ ಆಗಲೇಬೇಕು. ಈ ಹಸರನ್ನು ಮೊದಲು ಚೆನ್ನಾಗಿ ಹುರಿಯಬೇಕು, ಇಲ್ಲವಾದಲ್ಲಿ ಪಾಯಸಕ್ಕೆ ಮೆರುಗು ಇಲ್ಲ, ರುಚಿಯೂ ಇಲ್ಲ. ಎಷ್ಟು ಪ್ರಮಾಣದಲ್ಲಿ ಹುರಿಯಬೇಕು? ಹೇಗೆ ಹುರಿಯಬೇಕು ಎಂಬುದೆಲ್ಲಾ ನಮ್ಮಲ್ಲಿ ಅಳತೆ ಮಾಪನಗಳಿದ್ದಾವೆ. ಈ ತಾಮ್ರದ ಉರುಳಿ ಎನ್ನುವ ಪಾತ್ರೆ ನಮ್ಮ ಮನೆಯಲ್ಲಿದ್ದ, ಈ ಹಸರುಬೇಳೆ ಹುರಿಯುವುದಕ್ಕೇ ಇದ್ದಂತಹ ಪಾತ್ರೆ. ಅಮ್ಮ ಮತ್ತೆ ಅಕ್ಕ ಇಡೀ ದಿನ ಮನೆಯಲ್ಲಿ ಹುಡುಕಾಡಿ ಕೊನೆಗೂ ಸಿಗಲಿಲ್ಲ. ಅದೇ ಸಂಜೆ ಅಪ್ಪನಲ್ಲಿ ಹೇಳಿದಾಗ, ಮೊನ್ನೆಯ ಸಮಾರಂಭಕ್ಕೆ ನಮ್ಮ ತೋಟದ ಆಚೆಮನೆಯ ಸರಸಕ್ಕ ತೆಗೆದುಕೊಂಡು ಹೋಗಿದ್ದಾರೆ ಎನ್ನುವ ನೆನಪು ಮಾಡಿಕೊಟ್ಟರು. ಈಗ ಏನು ಮಾಡುವುದು? ಆ ಪಾತ್ರೆಯಿಲ್ಲದೇ ಪಾಯಸಕ್ಕೆ ಹುರಿಯಲಾಗುವುದಿಲ್ಲ. ಪಾಯಸವಿಲ್ಲದೇ ಊಟವಿಲ್ಲ. ಊಟವಿಲ್ಲದೇ ಮದುವೆಯಿಲ್ಲ. ಕೊನೆಗೆ ನನ್ನನ್ನೂ ನಿನ್ನಪ್ಪನನ್ನೂ ಕರೆದು ಪಾತ್ರೆಯನ್ನು ತರಲು ಕಳುಹಿಸಿದರು.

ಈಗ ನಿಮಗೆಲ್ಲಾ ಕಂಪೆನಿಗಳಲ್ಲಿ ಟಾರ್ಗೆಟ್ ಕೊಡುತ್ತಾರಲ್ಲವೇ? ಹಾಗೆಯೇ ಆಗಿತ್ತು ಅದು. ನಾವು ಆ ದಿನದ ರಾತ್ರಿಯೊಳಗೆ ಆ ಪಾತ್ರೆಯನ್ನು ತರಬೇಕಿತ್ತು. ದೊಡ್ಡ ಕೆಲಸವೇ ಅಲ್ಲವೆಂದು ಹೊರಟೆವು.

ಸರಸಕ್ಕನ ಮನೆ ಎನ್ನುವುದು ದೊಡ್ಡ ಅರಮನೆಯಂತೆ. ಪಾಳು ಬಿದ್ದ ಅರಮನೆಯಂತೆ ಇದ್ದಿತ್ತು. ಈಗಲೂ ಅದರ ಗೋಡೆಗಳನ್ನು ನೋಡು. ಆಗಿನ ಕಾಲಕ್ಕೆ ದೊಡ್ಡ ಹೆಂಚಿನ ಮನೆಯದು. ಅವರ ತೋಟವೂ ಅಷ್ಟೇ ದೊಡ್ಡದು. ನಮ್ಮ ತೋಟದ ಮೂರರಷ್ಟು ಆ ಕಾಲಕ್ಕೆ ಇತ್ತು ಅವರಿಗೆ. ತೋಟ ನೋಡುವುದಕ್ಕೆ ಯಾರೂ ಇರಲಿಲ್ಲ. ಗಂಡ ಹೆಂಡತಿ ಇಬ್ಬರೇ ಆ ಮನೆಯಲ್ಲಿ ಸಧ್ಯದ ವಾಸ. ಆ ತೋಟದ ಕೆಲವು ತೆಂಗಿನ ಮರದ ಕಾಯಿಗಳಲ್ಲಿ, ಎಳನೀರಿನಲ್ಲಿ, ಪೇರಳೆ ಮರದ ಪೇರಳೆಗಳಲ್ಲಿ, ಹಲಸಿನಕಾಯಿಗಳಲ್ಲಿ ಆ ಕಾಲಕ್ಕೆ ನನ್ನ ಮತ್ತೆ ನಿನ್ನಪ್ಪನ ಹೆಸರೇ ಬರೆದಿತ್ತೇನೋ. ಹೆಚ್ಚಿನವು ನಮ್ಮ ಹೊಟ್ಟೆಯಲ್ಲೇ ಕರಿಗಿದವುಗಳು.

ಸರಸಕ್ಕ ತುಂಬಾ ಪಾಪದವರು. ತುಂಬಾ ಪ್ರೀತಿ ನಮ್ಮ ಮೇಲೆ. ಕರೆದು, ಉಂಡೆಗಳನ್ನೋ, ಬೆಳಗ್ಗಿನ ತಿಂಡಿಗಳನ್ನೋ ನಮಗೆ ಕೊಡದಿದ್ದರೆ ಸಮಾಧಾನವಿಲ್ಲ ಅವರಿಗೆ. ಸಧ್ಯದಲ್ಲೇ ಮಗಳ ಮಗನಿಗಾಗಿ ಏನೋ ಪೂಜೆ ಮಾಡಿಸಿದ್ದರು ಮನೆಯಲ್ಲಿ. ಆ ಪೂಜೆಯ ಊಟಕ್ಕಾಗಿ ಪಾತ್ರೆಯನ್ನು ತೆಗೆದುಕೊಂಡು ಹೋಗಿದ್ದರು. ಈಗ ನಮ್ಮ ಉದ್ದೇಶ ಆ ಪಾತ್ರೆಯನ್ನು ಕೇಳಿ ಪುನಃ ತರುವುದಾಗಿತ್ತು.

ಸುಮಾರು ಆರೂ ಮುಕ್ಕಾಲಿಗೆ ಅವರ ಮನೆಗೆ ಬಂದರೆ ಆಶ್ಚರ್ಯ ಕಾದಿತ್ತು. ಮನೆಗೆ ದೊಡ್ಡ ಬೀಗ ನಮ್ಮನ್ನು ಅಣಕಿಸಿ, ಈ ಕೆಲಸವೂ ಸುಲಭವಲ್ಲ ಮಕ್ಕಳೇ ಎಂದಿತು.  ಮನೆಯಲ್ಲಿ ಯಾರೂ ಇಲ್ಲದಂತೆ ಇಬ್ಬರೂ ಬೇರೆ ಊರಿಗೇ ಹೋಗಿರಬೇಕು ಎನಿಸಿತು. ಪುನಃ ಮನೆಗೆ ಹೋಗಿ ನಮ್ಮ ದಿಗ್ವಿಜಯದಲ್ಲಿ ಸೋಲಾಯಿತು ಎನ್ನಲು ನಮಗೆ ಸಾಧ್ಯವಿರಲಿಲ್ಲವೇನೋ? ಆಗ ನಿನ್ನಪ್ಪನಿಗೆ ಪ್ರಳಯಾಂತಕ ಉಪಾಯ ಬಂತು. ಆ ಮನೆಯ ಹಿಂದಿನಿಂದ ಒಂದು ಮಣ್ಣಿನ ದಿಬ್ಬವಿತ್ತು. ಅಲ್ಲಿಂದ ಎರಡು ಕೋಲುಗಳನ್ನಿಟ್ಟು ಮನೆಯ ಮಾಡನ್ನೇರುವುದು. ಮಾಡಿನ ಹಂಚುಗಳನ್ನು ತೆಗೆದು ಒಳಗಿಳಿಯುವುದು. ಇಳಿದ ಮೇಲೆ ಪಾತ್ರೆಯನ್ನು ಹುಡುಕಿ ಕಿಟಕಿಯ ಮೂಲಕ ಹೊರಗೆ ಕೊಡುವುದು. ನಂತರ ಪುನಃ ಬಂದ ದಾರಿಯಲ್ಲಿಯೇ ವಾಪಸ್ಸು ಬರುವುದು ಈ ಪ್ಲಾನಾಗಿತ್ತು.

ನಾನು ಸುಮ್ಮನುಳಿದೆ. ನಿನ್ನಪ್ಪ ಹೇಳಿದರೆ ಮುಗಿಯಿತು. ನಾನು ಆಗುವುದಿಲ್ಲ ಎಂದರೆ ಒಬ್ಬನೇ ಹೋಗಿಯಾದರೂ ಪಾತ್ರೆ ತರುವುದು ಖಚಿತ. ಈಗಲೂ ಅಷ್ಟೆ. ಮೊಂಡು ಎಂದರೆ ಮೊಂಡು. ಬಿಡು. ಹೀಗೇ ಮೊದಲ ಪ್ರಯತ್ನ ಫಲಕಾರಿಯಾಯಿತು. ನಿನ್ನಪ್ಪ ತುಂಬಾ ಮುತುವರ್ಜಿಯಿಂದ ಮನೆಯ ಮಾಡನ್ನೇರಿ ಹಂಚನ್ನು ತೆಗೆದು ಒಳಗಿಳಿದ. ಆಗ ಮನೆಯ ಹೊರಗಿನಿಂದ ಬೀಗ ತೆಗೆದ ಸದ್ದಾಯಿತು.

ಕ್ಷಣಕ್ಕೆ ಕಳವಳಗೊಂಡರೂ ಸಾವರಿಸಿ ನಾನು ಮನೆಯ ಎದುರಿಗೆ ಓಡಿದೆ. ಸರಸಕ್ಕ ನನ್ನನ್ನು ಕಂಡ ಕೂಡಲೇ ಏನಾಯ್ತೋ, ಈ ಹೊತ್ತಲ್ಲಿ ಎಲ್ಲಿಗೆ ತಿರುಗಾಟ ಎಂದರು. ನಾನು ಕೂಡಲೇ ಉರುಳಿ ಬೇಕಾಗಿತ್ತು. ಮನೆಯಲ್ಲಿ ಅಮ್ಮ ಕಳುಹಿಸಿದ್ದಾರೆ ಎಂದೆ. ಸರಸಕ್ಕ ಕೂಡಲೇ ತನ್ನಿಂದ ದೊಡ್ಡ ತಪ್ಪಾಗಿದೆ ಎಂದುಕೊಳ್ಳುತ್ತಾ ಅಡುಗೆಕೋಣೆಗೆ ಹೋಗಿ, ಉರುಳಿ ತೆಗೆದುಕೊಂಡು ಬಂದು ಕೈಯ್ಯಲ್ಲಿ ಕೊಟ್ಟರು. ಹಾಗೆಯೇ ಒಳಗೆ ಇದ್ದ ಬಾಳೆಹಣ್ಣುಗಳನ್ನೂ ಕೊಟ್ಟು ಗಂಡನಲ್ಲಿ ನನ್ನನ್ನು ನಮ್ಮ ತೋಟದ ವರೆಗೆ ಬಿಟ್ಟು ಬರಲು ಕಳುಹಿಸಿದರು.

ನಾನು ಮಾತನಾಡುವುದಕ್ಕೆ ಅವಕಾಶವೇ ಕೊಡಲಿಲ್ಲ. ನನ್ನನ್ನು ತೋಟದವರೆಗೆ ಬಿಟ್ಟು ಸರಸಕ್ಕನ ಗಂಡ ಹೋದರು. ನಾನು ಮನೆಗೆ ಬಂದು ಉರುಳಿಯನ್ನು ಕೊಟ್ಟೆ. ಉರುಳಿ ನೋಡಿದ ಖುಷಿಯಿಂದ ಏನೂ ಕೇಳಲಿಲ್ಲ. ಅಣ್ಣ ಅಲ್ಲೆಲ್ಲೋ ಹೊರಗಿದ್ದಾನೆ ಎಂದು ನಾನು ತೋಟದ ದಾರಿಯಲ್ಲಿ ಪುನಃ ಬಂದೆ. ಆ ದಿನ ಸುಮಾರು ಎರಡು ಘಂಟೆ ಬಿಟ್ಟು ನಿನ್ನಪ್ಪ ಮನೆಗೆ ಬಂದ. ಯಾರೂ ಏನೂ ಕೇಳಲಿಲ್ಲವಾದರೂ ನಾನು ಹೇಗೆ ಬಂದೆ ಎಂದು ಕೇಳಲೇ ಬೇಕಿತ್ತು.

ಅಪ್ಪ ಒಳಕ್ಕಿಳಿದ ಕೂಡಲೇ ಸರಸಕ್ಕ ಬಂದುದರಿಂದ ನಾನು ಮನೆಯ ಎದುರಿಗೆ ಬಂದೆ. ಅದೇ ಸಮಯಕ್ಕೆ ಅಪ್ಪ ಮನೆಯ ಅಟ್ಟದಿಂದ ಮೆಲ್ಲನಿಳಿದು ಅಡುಗೆಯ ಕೋಣೆಯ ಪಕ್ಕದ ದಾಸ್ತಾನು ಕೋಣೆಗೆ ಬಂದು ನಿಂತಿದ್ದ. ಈಗಿನ ಹಾಗೆ ಕರೆಂಟಾಗಲೀ, ಬೆಳಕಾಗಲೀ ಅಷ್ಟು ಇಲ್ಲದುದರಿಂದ ಅಪ್ಪನನ್ನು ಕಂಡುಹಿಡಿಯುವುದು ಸಾಧ್ಯವಿಲ್ಲ. ಸರಸಕ್ಕನ ಅಡುಗೆಯಾಗಿ, ಊಟವಾಗಿ ನಂತರ ಹೊರಗಡೆ ಹೋದ ಸಂದರ್ಭ ನೋಡಿ, ನಿನ್ನಪ್ಪ ಅಡುಗೆಕೋಣೆಯ ಬಾಗಿಲಿಂದ ಹೊರಬಿದ್ದಿದ್ದ. ಅದೂ ಕಾಣದ ರಾತ್ರಿಯಲ್ಲಿ ತೋಟದ ಹೊಂಡಗಳಲ್ಲಿ ಬಿದ್ದೆದ್ದು ಬರುವಷ್ಟರಲ್ಲಿ ಸುಮಾರು ಹೊತ್ತಾಗಿತ್ತು. ಆದರೂ ಯಾರಿಗೂ ತಿಳಿಯಲಿಲ್ಲ.

ಮರುದಿನ ನಮ್ಮ ಅಪ್ಪ ಹೇಳುತ್ತಿದ್ದರು. ನಿನ್ನೆ ರಾತ್ರಿ ಯಾರೋ ಸರಸಕ್ಕನ ಮನೆಗೆ ಕಳ್ಳರು ಬಂದಿದ್ದಾರೆ. ಪುಣ್ಯಕ್ಕೆ ಏನೂ ತೆಗೆದುಕೊಳ್ಳಲಾಗಲಿಲ್ಲ. ಪುಣ್ಯಕ್ಕೆ ಸರಸಕ್ಕ ಚಿನ್ನವೆಲ್ಲಾ ಬ್ಯಾಂಕಿನಲ್ಲಿಟ್ಟಿದ್ದು ಒಳ್ಳೆದಾಯಿತು ಎಂದು. ನಾವೇ ಇದಕ್ಕೆಲ್ಲ ಕಾರಣ ಎಂದು ಯಾರಿಗೂ ಗೊತ್ತಿಲ್ಲ ಬಿಡು.

(ಉರುಳಿ: ಬಾಣಲೆಯಾಕಾರದ ಒಂದು ಪಾತ್ರೆ. ತಾಮ್ರದ್ದು).

4 comments:

 1. ಎಲ್ಲಾ ಶಾರ್ಟ್ ಕತೆ ಬರೀತಿದ್ದವಂಗೆ ಇವತ್ತೆಂತೋ ವಿಪರೀತ ಹುಮ್ಮಸ್ಸು ? !
  ಎಂತ ಕತೆ ಮತೆ ? :-)
  ಚೆನ್ನಾಗಿದ್ದು :-)

  ReplyDelete
 2. ಹಹ್ಹಾ.. ಮಸ್ತ್! :-) ಎಲ್ಲ ಚಿಕ್ಕಪ್ಪ ಹೇಳಿದ ಕಥೆ ಅಂತ ಹೇಳಿ ನಿನ್ನ ಆತ್ಮಕಥೆ ಬರೀತಾ ಇದ್ಯ ಎಂತದೋ?

  ReplyDelete
 3. ಹರೀಶಣ್ಣ ಹೇಳಿದ್ ಪಾಯಿಂಟ್ ಹೌದನಾ ಕಿಣ್ಣಾ ? :ಫ್

  ReplyDelete
 4. ha ha ha ha.... sooper... hange harige ondu vote... :P

  ReplyDelete