Monday, 30 January 2012

ಅನುಕೂಲದ್ದು ಯಾವುದೋ ಅದೇ ಸುಖ!

ನನ್ನ ಅಪ್ಪನಿಗೆ ಒಂದು ಒಳ್ಳೆ ಅಭ್ಯಾಸ ಅಂದರೆ ಎಲೆ ಅಡಿಕೆ ಮೆಲ್ಲುವುದು!. ಪಾರಂಪರಿಕವಾಗಿ ಬಂದ ಪಾನ್ ಸಮಾಚಾರವನ್ನು ನಾನೂ ಕೆಲವೊಮ್ಮೆ ತುಟಿಕೆಂಪಾಗುವಷ್ಟು ಮೆಲ್ಲುತ್ತೇನೆ. ಬಿಡಿ ಹೇಳುವ ವಿಷಯ ಅದಲ್ಲ..

ಹಾಗೇ ನಮ್ಮೂರಲ್ಲೊಬ್ಬ. ಎಲ್ಲಾ ಅರೆಹುಚ್ಚ ಅಂದರೂ ಅವನು ತಲೆಕೆಡಿಸಿಕೊಳ್ಳದ ನಿರ್ಲಿಪ್ತ. ಹಕ್ಕಿಯಂತೆ ಸ್ವತಂತ್ರ, ಎಲ್ಲಿಯೂ ನಿಲ್ಲಲಾರ, ಮನೆಯನ್ನೂ ಕಟ್ಟಿಲ್ಲ.

ಬಸ್ಸು ಬರದ ಊರಿನ ಬಸ್ ಸ್ಟಾಂಡು ಅವನ ವಾಸಸ್ಥಾನವಾಗಿ ಸಾರ್ಥಕವಾಗಿತ್ತು. ಕಟ್ಟಿದವರಿಗೂ ಮೀಸೆ ಮೇಲೆ ಕೈ ಹೋಗುವಷ್ಟು ಅವನು ಅಲ್ಲಿರುತ್ತಿದ್ದ. ಅವನಿಗೂ ಒಳ್ಳೆಯ ಅಭ್ಯಾಸ ಅಂದರೆ ಎಲೆಅಡಿಕೆ .

ಎಲೆಯ ನಾರು ತೆಗೆದು, ಸುಣ್ಣಬಳಿದು ಅಡಿಕೆಯ ಜೊತೆ ಸ್ವಲ್ಪ ಜಗಿದು.. ಸುಣ್ಣದ ಜೊತೆ ಸ್ವಲ್ಪ ತಂಬಾಕು ಹಾಕಿ ಗಂಧರ್ವ ನಾಡಿಗೆ ಒಡೆಯನಾಗುವುದು ಯಾರಿಗೆ ಬೇಡ? ಹಾಗೆಯೇ ಅವನೂ..

ಮನೆಮನೆಗೆ ಸಂಚಾರ ಮಾಡುವ ಆತ ಊಟ, ತಿಂಡಿ ಕೊಟ್ಟಷ್ಟು ಸ್ವೀಕರಿಸುತ್ತಾನೆ. ಜಾಸ್ತಿ ಆಯಿತೆಂದು ಚೆಲ್ಲುವುದಿಲ್ಲ, ಕಡಿಮೆ ಆಯಿತೆಂದು ಕೇಳುವುದಿಲ್ಲ. ಸಂಕೋಚವಿಲ್ಲದೆ ಮನೆಯಲ್ಲಿ ಎಲೆ ಅಡಿಕೆಯ ಬಟ್ಟಲು ಕಂಡ ಕೂಡಲೇ ಖುಷಿಪಟ್ಟು ಮೆಲ್ಲುತ್ತಾನೆ.

ಇನ್ನು , ನನ್ನ ತಂದೆಯೋ, ಹೊಗೆಸೊಪ್ಪನ್ನು ತುಂಬಾ ಖುಶಿಯಿಂದ ನೋಡಿಕೊಳ್ಳುವವರು. ಮೂಸಿಯೇ ತೆಗೆದುಕೊಳ್ಳುವವರು. ಅದನ್ನ ತಂದು ಜೋಪಾನವಾಗಿ ಎರಡು ಪ್ಲಾಸ್ಟಿಕ್ ನಿಂದ ಕವರ್ ಮಾಡಿ ಇಟ್ಟುಕೊಳ್ಳುವುದು. ಒಂದೊಂದೇ ಎಳೆಯನ್ನು ತೆಗೆದು ತಲೆಗೂದಲು ನೇಯುವಂತೆ ನೆಯ್ದು ಅದನ್ನ ತಟ್ಟೆಯಲ್ಲಿಡುವವರು.

ಒಂದು ದಿನ , ನಾನಿದ್ದೆ ಮನೆಯಲ್ಲಿ.. ಅಲ್ಲೇ ಎಲ್ಲೋ ಹೊರಗೆ ಹೋಗಿದ್ದರು ಅಪ್ಪ, ಅಮ್ಮ ಮನೆಯಲ್ಲಿರಲಿಲ್ಲ. ನಮ್ಮ ಹೀರೋ ಬಂದದ್ದೇ ಸುಮ್ಮನೆ ಬಂದು ಚಾವಡಿಯಲ್ಲಿ ಕುಳಿತಿದ್ದ. ನಾನಾಗಿ ಹೋಗಿ ಅನ್ನಲಿಲ್ಲ, ಅವರೂ ಹೋಗಲಿಲ್ಲ. ಸುಮ್ಮನೆ ಕಡೆಗಣಿಸಿದೆ ನಾನೂ ಏನೋ ಓದುತ್ತಾ ಕುಳಿತಿದ್ದೆ.

ಸ್ವಲ್ಪ ಹೊತ್ತಾಗಿ ಅವನು ಹೋದ, ಆದರೆ ನನ್ನ ಅಪ್ಪ ಬಂದವರೇ ಒಂದೇ ಸಮನೆ ನನ್ನನ್ನು ಬಯ್ಯಲಾರಂಭಿಸಿದರು . ಏಕೆ ಗೊತ್ತೇ?

ಅಪ್ಪನ ಕೈಚೀಲ ಎಂದೂ ಹೊರಗಿರುತ್ತದೆ, ಬೆಳಗ್ಗೆ ಬ್ಯಾಂಕಿನಿಂದ ಬಿಡಿಸಿಕೊಂಡು ಬಂದ ಒಂದು ಸಾವಿರ ರೂಪಾಯಿ ಅದರಲ್ಲಿತ್ತಂತೆ. ಆದರೆ ಆ ಸಾವಿರದ ಕಟ್ಟಿಂದ ಒಂದು ನೋಟು ಕೂಡಾ ಹೋಗಿರಲಿಲ್ಲ. ಬದಲಾಗಿ , ತಂದಿರುವ ಹೊಗೆಸೊಪ್ಪಿನ ಒಂದು ಎಳೆ ಮಾಯವಾಗಿತ್ತು...

ಯಾವುದು ಯಾರಿಗೆ ಮುಖ್ಯ ಎಂದರಿಯದೆ ಸುಮ್ಮನಿದ್ದೇನೆ.

9 comments:

 1. nice ನನ್ನ ಅಪ್ಪ ಕೂಡ ಇದೆರಿತಿ ಪಾನ್ ಹಾಕುತ್ತಾರೆ ...
  ಮೊನ್ನೆ ಮೊನ್ನೆ ಕಣ್ಣು ಆಪರೇಶನ್ ಅದಾಗ .....
  ನೋವು ಜೊತೆಗೆ ಕೆಲವು ದಿನ ಕೊತಕ್ಕೆ ಹೋಗದಿದ್ದರೂ ಬೇಜಾರಿಲ್ಲ
  ಇ ಪಾನ್ ಹಾಕದ್ದೆ ಎಪ್ಪದು ಕಷ್ಟ ನೋಡು ಅಂತಿದ್ದರು ....

  ha hahaa

  ReplyDelete
 2. ಆಹಾ.. ಹೌದು ಸವಿಯ ಬಲ್ಲವರೆ ಬಲ್ಲ.. ಧನ್ಯವಾದಗಳು.

  ReplyDelete
 3. ಯಾವುದು ಯಾರಿಗೆ ಮುಖ್ಯ ಅನ್ನುವುದು ಅವರವರ ಆಗಿನ ಅವಶ್ಯಕತೆಗಳ ಮೇಲೆ ಅವಲಂಭಿಸಿರುತ್ತದೆ ಅಲ್ವೇ?

  ಎಳೆ ಪಾಪುವಿಗೆ ನಾಣ್ಯದಲ್ಲಿ ಇರುವ ಸುಖ ನೂರರ ನೋಟಲ್ಲೂ ಇರುವುದಿಲ್ಲ.

  ಹೊಗೆ ಸೊಪ್ಪಿನ ಎಳೆ ಮಾಯವಾದಾಗ ನೊಂದುಕೊಂಡು ಕೂಗಾಡಿದ ಅಪ್ಪ, ಆ ಕ್ಷಣಕ್ಕೆ ದುಡ್ಡನ್ನೂ ಗಮನಿಸಿರಲಿಲ್ಲ ಇದು ವಾಸ್ತವ.

  ಮತ್ತೊಂದು ಒಳ್ಳೆಯ ಬರಹ.

  ReplyDelete
 4. good one ಕಿಣ್ಣಣ್ಣ... ಪುಟ್ಟ ಪುಟ್ಟ ಕಥೇನ ತುಂಬಾ ಚಂದ ಬರೀತೆ... :)
  ಅಪ್ಪನಂತೆಯೇ ಅವನಿಗೂ ದುಡ್ಡಿಗಿಂತ ಹೊಗೆಸೊಪ್ಪೆ ಮುಖ್ಯ...!

  ReplyDelete
 5. ಒಂದು ಕಗ್ಗ ನೆಂಪಿಗೆ ಬಂತು ಕಿಣ್ಣಣ್ಣ
  ಮೌನದೊಳೊ ಮಾತಿನೊಳೊ ಹಾಸ್ಯದೊಳೊ ಹಾಡಿನೊಳೊ|
  ಮಾನವಂ ಪ್ರಣಯದೊಳೊ ವೀರ ವಿಜಯದೊಳೋ||
  ಏನೊ ಎಂತೋ ಸಮಾಧನಗಳನರಸುತಿಹ|
  ನಾನಂದವಾತ್ಮಗುಣ- ಮಂಕುತಿಮ್ಮ||


  ಒಳ್ಳೆ ಕಥೆ :)

  ReplyDelete
 6. ನೀವು ಬರೆದದ್ದು ಮತ್ತು ಬರೆದ ರೀತಿ ಎರಡೂ ಚೆನ್ನಾಗಿದೆ.
  ಸ್ವರ್ಣಾ

  ReplyDelete
 7. ವಿಷಯ ವಸ್ತು ಮತ್ತು ಪ್ರಸ್ತಾವನೆ ಎರಡೂ ಅದ್ಭುತ.. ಶುಭವಾಗಲಿ :)

  ReplyDelete
 8. hari kannadaprabha12 January 2013 at 12:37

  Ele manavaru...

  ReplyDelete