Saturday 3 August 2013

ಅಮ್ಮ ಹೇಳಿದ ಜಯನ ಕತೆ

ಬೆಂಗಳೂರಿಂದ ಮನೆಗೆ ವಾಪಸ್ಸು ಹೋಗುತ್ತಿರುವ ಖುಷಿ. ಹೆಚ್ಚಾಗಿ ಎಲ್ಲರೂ ವಾಪಸ್ಸು ಹೋಗುವುದು ಸಾಮಾನ್ಯವಾದರೂ ನಾನು ಹಾಗಲ್ಲ. ಬೆಂಗಳೂರಿಗೆ ಬಂದು ಸುಮಾರು ಒಂದು ವರುಷವೂ ಐದಾರು ತಿಂಗಳುಗಳೂ ಕಳೆದಾದ ಮೇಲೆ ಈಗ ವಾಪಸ್ಸು ಹೋಗುತ್ತಿರುವುದು. ಸಮಯ ಸಿಕ್ಕಿರಲಿಲ್ಲ ಎನ್ನುವುದಕ್ಕಿಂತ ಕೆಲಸದ ಒತ್ತಡದಿಂದ ಪ್ರತಿ ಶನಿವಾರವಾಗಲೀ ಆದಿತ್ಯವಾರವಾಗಲೀ ಊರಿಗೆ ಹೋಗುವ ಯೋಚನೆ ಬಂದರೂ ಆಗುವುದಿಲ್ಲ. ಏನೋ ಒಂದು ಸಬೂಬು ಹೇಳಿ ಮಲಗುವುದೋ ಇಲ್ಲವೇ ಸಣ್ಣ ತಿರುಗಾಟವೋ ಮಾಡುವುದನ್ನು ಬಿಟ್ಟರೆ ಊರಿಗೆ ಹೋಗುವ ದೊಡ್ಡ ಆಸೆ ಇರುತ್ತಿರಲಿಲ್ಲ.

ಊರಿನ ಆತ್ಮೀಯ ಸ್ನೇಹಿತರೆಲ್ಲಾ ಇಂದು ನೆನಪಾಗುತ್ತಿದ್ದಾರೆ, ಹೇಗಿದ್ದಾರೋ? ಸಿಕ್ಕ ಒಂದು ವಾರದ ರಜೆಯಲ್ಲಿ ಎಲ್ಲರನ್ನು ಅಲ್ಲದಿದ್ದರೂ ಸಾಧ್ಯವಾದಷ್ಟು ಜನರನ್ನ ಭೇಟಿಯಾಗಬೇಕು. ಡಿಗ್ರೀ ಮುಗಿಸಿದ ತಿಂಗಳೇ ಒಳ್ಳೆಯ ಉದ್ಯೋಗ ಸಿಕ್ಕಿದುದರಿಂದ ಬೆಂಗಳೂರಿಗೆ ಬಂದು ಬೆಂಗಳೂರಿಗನಾಗಿ ಹೋದ ನನಗೆ ಅವರ ಬಗ್ಗೆ ಇಷ್ಟು ದಿನ ನೆನಪಾಗದೇ ಇದ್ದುದಾದರೂ ಹೇಗೆ?

ಬಸ್ಸು ತಡವಾದರೂ ಘಾಟಿಯನ್ನು ಇಳಿಯುವಾಗ ಮನೆಗೆ ಬಂದಷ್ಟೇ ಖುಷಿ. ಬೆಂಗಳೂರಿನ ಚರ್ಮಕ್ಕೆ ಸಹನೀಯವಾದ ವಾತಾವರಣದಿಂದ ಮುಕ್ತಗೊಂಡ ಅನುಭವವಾಗುವುದು ಘಾಟಿ ಇಳಿದಾಗಲೇ. ವಾತಾವರಣಕ್ಕೆ ಹೊಂದಿಕೊಂಡ ೨೨ ವರ್ಷ ಅದೇಕೆ ಒಂದು ವರುಷದ ಬೆಂಗಳೂರಿನ ಹವೆಯನ್ನು ಇಷ್ಟಪಡುತ್ತದೋ?

ಊರು ಬಂತು, ಇನ್ನೆಷ್ಟು ದೂರ ಮನೆ? ಮೊದಲಿನ ಕಾಲುಹಾದಿ ಈಗ ಮಣ್ಣಿನ ರಸ್ತೆಯಾಗಿದೆ. ಅಲ್ಲೆಲ್ಲೋ ಇದ್ದ ಹೆಸರಿಡದ ದಪ್ಪನೆಯ ಮರ ಕಾಣೆಯಾಗಿ ಯಾವುದೋ ಮನೆಯಲ್ಲಿ ಬೆಂಕಿಪೆಟ್ಟಿಗೆಯೊಳಗಿರಬಹುದು. ದಿನಕ್ಕೆ ಮುನ್ನೂರರ ವ್ಯಾಪಾರ ಮಾಡುತ್ತಿದ್ದ ತಿಮ್ಮಯ್ಯನ ಅಂಗಡಿಯಲ್ಲಿ ತುಂಬ ದಾಸ್ತಾನು. ಆಹಾ..ಬೆಳವಣಿಗೆಯೇ.
----
ಅಮ್ಮಾ...
ಇಷ್ಟುದ್ದದ ಮುಖ ಅಷ್ಟಗಲವಾಗುವುದನ್ನು ಗಮನಿಸಿದೆ.
ಬಿಳಿಯಾಗಿದ್ದೀಯಲ್ಲಾ ಮಗನೇ,
ಸಿ ಆಫೀಸು.. ಅಂದರೆ ಹವಾನಿಯಂತ್ರಕ ಅಳವಡಿಸಿದ ಕೋಣೆಯಲ್ಲಿ ಕುಳಿತು ಕೆಲಸ ಮಾಡಿದ್ರೆ ಇನ್ನೇನು ಆಗುವುದು?
ಆಟ ಓಟ ಎಲ್ಲಾ ಇಲ್ಲ ಅನ್ನು,
ಹ್ಮ್..ಹಸಿವಾಗ್ತಾ ಇದೆ. ಇಲ್ಲೇ ಮಾತನಾಡೋದಾ ಅಲ್ಲ ಅಂಗಿ ಬನೀನು ಆದ್ರೂ ಬದಲಿಸಬೇಕಾ?
ಹೌದು. ನಿನಗಿಷ್ಟ ಅಂತ ಉದ್ದಿನದೋಸೆ ಮಾಡಿದ್ದೇನೆ. ಶೂ ಅಲ್ಲಿಡಬೇಡ, ನಾಯಿ ಕಚ್ಚಿಕೊಂಡು ಹೋದ್ರೆ ಮತ್ತೆ ಬರಿಗಾಲಲ್ಲಿ ನಡೆಯಬೇಕಷ್ಟೆ. ಮಾಡಿಗೆ ಸಿಕ್ಕಿಸಿಬಿಡು. ಎಂತ ವಾಸನೆ ಅದು ಕೊಳೆತ ಹಾಗೆ?
ಸಾಕ್ಸ್, ಕಾಲು ಬೆವರಿದೆ ಅದಕ್ಕೆ. ನಾನು ಕೈಕಾಲು ತೊಳೆದು ಬರ್ತೇನೆ, ಮತ್ತೆ ಕತೆ ಹೇಳು.
---
ದೋಸೆ ಸೂಪರ್ರಾಗಿದೆ ಅಮ್ಮ, ಈಗ ಸಾಕು.
ಇನ್ನೊಂದು ತಿನ್ನು. ಬಿಸಿ ಬಿಸಿ. ಅಲ್ಲೆಲ್ಲಾ ಹೋಟೆಲಿನಲ್ಲಿ ಮಾಡಿಟ್ಟದ್ದು ತಿನ್ನೋದಲ್ವ? ಆಗಾಗ ಮನೆಗಾದ್ರೂ ಬರ್ಲಿಕ್ಕಾಗುದಿಲ್ವ?
ಒಂದೇ ಸಾಕು ದೋಸೆ, ಈಗ್ಲೇ ಐದಾರಾಯ್ತು. ಹೋಟೆಲಲ್ಲಿ ಮಾಡಿಟ್ಟದ್ದು ಕೊಡುವುದಿಲ್ಲ, ಆಗಲೇ ಮಾಡಿ ಕೊಡ್ತಾರೆ. ಮನೆಗೆ ಬರ್ಲಿಕ್ಕೆ ರಜೆ ಸಿಗ್ಬೇಕಲ್ವ? ಮನೆಗೆ ಬಂದ್ರೆ ವಾಪಸ್ಸು ಹೋಗ್ಲಿಕ್ಕೆ ಮನಸು ಬರೋದಿಲ್ಲ. ಇಲ್ಲೇ ಇರ್ಬೇಕಾ?
ಇರು ಮಾರಾಯ. ಅಪ್ಪನಿಗೆ ಇರುವ ೨೦ ಅಡಿಕೆ ಮರ ನೋಡ್ಲಿಕ್ಕಾಗುವುದಿಲ್ಲ. ಇರುವ ಒಂದು ದನ ಹಾರಿಹೋಗುವಷ್ಟು ಬಡವಾಗಿದೆ. ಸಂಜೆಯಾದ್ರೆ ಅಪ್ಪನಿಗೆ ಲೋಕದ ವಿಷಯ ಮಾತಾಡ್ಲಿಕ್ಕೆ ಪೇಟೆಗೆ ಹೋಗ್ಬೇಕು, ನಾನು ಗೋಡೆಯ ಹತ್ರ ಮಾತಾಡ್ಬೇಕಾ?
ಅದಕ್ಯಾಕೆ ತಲೆಬಿಸಿ ಮಾಡೋದು? ಒಂದು ಟೀವಿ ತರುವ.. ಹೇಗೂ ಟೈಂಪಾಸ್ ಆಗ್ತದೆ.
ಅದೊಂದು ಕಡ್ಮೆ ಇದೆ ನೋಡು. ದಿನಾ ಗುಡಿಸಿ ವರೆಸಿ ಸಾಕಾಗಿದೆ. ಇನ್ನು ಅದನ್ನೂ ತಂದು ಮಣ್ಣುತಿನ್ನಲಿಕ್ಕೆ ಇಲ್ಲಿಟ್ರೆ ಸಾಕು.
ಸರಿ, ನೀನೂ ಬೆಂಗಳೂರಿಗೆ ಬಾ.. ಇನ್ನು ಒಂದು ವರುಷ ಆದ್ರೆ ಹೇಗೂ ಸ್ವಲ್ಪ ದೊಡ್ಡ ಕೆಲಸ ಸೇರಬಹುದು. ಜಯಣ್ಣನ ಮನೆಯಲ್ಲಿ ಯಾರೂ ಇಲ್ವ? ಎಂತ ಯಾರೂ ಇಲ್ಲದ ಹಾಗೆ?
ಸರಿ. ಇನ್ನು ನಾನು ಬಂದು ಬೆಂಗಳೂರು ಒಂದು ಉದ್ದಾರ ಆಗ್ಬೇಕು ನೋಡು. ಜಯಣ್ಣನ ಕತೆ ದೊಡ್ಡದಿದೆ. ಅದನ್ನು ಹೇಳಿದ್ರೆ ಪಾತ್ರೆ ತೊಳೆಯುವ ಕೆಲಸ ಮಧ್ಯಾಹ್ನ ಆಗ್ತದೆ. ನೀನು ಸ್ವಲ್ಪ ನಿದ್ರೆ ಮಾಡು.
--
ಸುಮಾರು - ತಿಂಗಳಾಯ್ತು ಜಯನನ್ನು ನೋಡಿ, ಚೆನ್ನಾಗಿದ್ದಾರಂತೆ. ಅದು ಸುಮಾರು ಹಳೆಯ ಕತೆ. ಬಹುಶಃ ಜನರೆಲ್ಲಾ ಮರೆತಿದ್ದಾರೋ ಏನೊ. ಕೆಳಗೆ ನದಿಯ ಆಚೆ ಗೊತ್ತಿದೆಯಲ್ಲಾ ನಿನಗೆ? ರುಕ್ಕಯ್ಯ ಗೊತ್ತಿದೆಯಲ್ಲ?
ಹ್ಮ್.. ರುಕ್ಕಯ್ಯನ ಮಗಳು ಕುಮುದ ನನ್ನ ಕ್ಲಾಸು. ಏನಾಯ್ತು?
ಸುಮಾರು ಏಳೆಂಟು ತಿಂಗಳ ಹಿಂದಿನ ವಿಷಯ ಇದು. ರುಕ್ಕಯ್ಯನಿಗೂ ಜಯನಿಗೂ ಒಳ್ಳೆ ದೋಸ್ತಿ. ಜಯನಿಗೆ ನಿನ್ನಷ್ಟೇ ಪ್ರಾಯ, ಒಂದೆರಡು ವರ್ಷ ಜಾಸ್ತಿ ಅಲ್ವ? ನೀನು ಕಾಲೇಜಿಗೆ ಹೋಗುವಾಗ ಅವನು ಮೇಸ್ತ್ರಿ ಕೆಲಸಕ್ಕೆ ಹೋಗುತ್ತಿದ್ದ. ಮತ್ತೇನೋ ಪಂಚಾಯತು ಕಾಂಟ್ರಾಕ್ಟು ಅಂತ ತಿರುಗಾಡಿದ. ಒಳ್ಳೆ ಹಣಮಾಡಿದ. ನಾನು ಮೊದಲು ಮೊಬೈಲು ನೋಡಿದ್ದು ಅವನ ಕೈಯ್ಯಲ್ಲೇ ಅಲ್ವ? ಮನೆ ಕಟ್ಟಿಸಿದ. ಅಪ್ಪ ತೀರಿಕೊಂಡ ಕೂಡಲೇ ಇಡೀ ಜಾಗದಲ್ಲಿ ಬುಲ್ಡೋಜರ್ ತರಿಸಿ ಚಂದ ಮಾಡಿ ಅಡಿಕೆ ಮರ ನೆಟ್ಟ.ಒಳ್ಳೆ ಕೆಲಸಗಾರ.
ಇದೆಲ್ಲಾ ನನಗೂ ಗೊತ್ತು. ನಾನಿರುವಾಗಲೇ ಇದನ್ನೆಲ್ಲಾ ಮಾಡಿದ್ದು ಅವನು. ಅವನ ತಂಗಿ ಮದುವೆಯ ಒಂದು ವಾರದ ನಂತರ ನಾನು ಬೆಂಗಳೂರಿಗೆ ಹೋದದ್ದು. ಅಲ್ಲಿಂದ ಮುಂದುವರೆಸು ಕತೆ.
ಹೌದು. ತಂಗಿ ಮದುವೆಯಾದ ಮೇಲೆ ಜವಾಬ್ದಾರಿ ಕಡಿಮೆಯಾದಂತೆ ಅನ್ನಿಸಿತೋ ಏನೋ? ಅವನಮ್ಮ ದಿನಾ ಮನೆಗೆ ಬಂದು ಅಳುತ್ತಾ ಕೂತಿರುತ್ತಿದ್ದರು. ದಿನಾ ಕುಡೀತಿದ್ದ, ಇಸ್ಪೀಟಾಡಿ ಮನೆಗೆ ಬರೋದಕ್ಕೆ ಹನ್ನೆರಡು ಘಂಟೆಯಾಗುತ್ತಿತ್ತು. ಕಾಲಕ್ಕೆ ರುಕ್ಕಯ್ಯ ಅವನ ಜೋಡಿ. ಅವನಿಗಾದ್ರು ಬುದ್ದಿ ಬೇಡ್ವ? ನಿನ್ನಪ್ಪನಿಗಿಂತ ದೊಡ್ಡ ವಯಸ್ಸಿನಲ್ಲಿ.
ಅದು ಅವರವರ ಇಷ್ಟ ಅಲ್ವೇನಮ್ಮಾ? ಅದರಲ್ಲಿ ನಾನು ನೀನು ಏನು ಹೇಳ್ಳಿಕ್ಕುಂಟು?
ಅದು ಸರಿಯೇ. ಹೀಗೆ ಜಯನನ್ನು ರುಕ್ಕಯ್ಯ ತುಂಬಾ ಹಚ್ಚಿಕೊಂಡ. ರುಕ್ಕಯ್ಯನ ಮನೆಗೂ ಸಲೀಸಾಗಿ ಹೋಗಿ ಬರತೊಡಗಿದ. ಕುಮುದನಿಗಾದ್ರು ಬುದ್ಧಿ ಬೇಡ್ವಾ? ಅವಳಿಗೆ ಮದುವೆ ನಿಶ್ಚಯವಾಗಿತ್ತು. ಆದರೂ ಜಯನನ್ನು ಇಷ್ಟಪಡ್ತಿದ್ಳಂತೆ. ಇನ್ನು ನಿನ್ನದೇನಾದರೂ ಇಂತ ಏರ್ಪಾಡು ಉಂಟಾ ಹೇಗೆ?
ಅಯ್ಯ. ಹೋಗಿ ಹೋಗಿ ನನಗೆ ಯಾರಾದ್ರು ಸಿಗ್ತಾರ? ಮುಸುಡಿಗೆ?
ಮಗನೆ, ಅದು ಬಿಡು. ಹುಡುಗಿಯರಿಗೆ ಇಷ್ಟ ಆಗ್ಲಿಕ್ಕೆ ಮುಸುಡು ಬೇಡ. ಅದೊಂದು ಸಮಯದಲ್ಲಿ ಅವರಿಗೆ ಹಾಗನ್ನಿಸಿದರೆ ಸಾಕು, ಮತ್ತೆ ಯಾವ ಸಾಹಸಕ್ಕೂ ಅವರು ತಯಾರು. ನೀವೇ ಎಮ್ಮೆತಮ್ಮಣ್ಣಗಳು.. ಅರ್ಥವಾಗುವ ಬದಲು ಬೆಪ್ಪುತಕ್ಕಡಿಗಳ ಹಾಗೆ ಇರ್ತೀರಿ.
ಅದು ಬಿಡಮ್ಮ. ನಾನೇನಾದ್ರು ಅಂಥ ಏರ್ಪಾಡು ಮಾಡಿದ್ರೆ ಹೇಳ್ತೇನೆ.. ನೀನೇ ಅಪ್ಪನಲ್ಲಿ ಹೇಳು. ಈಗ ಕತೆ ಮುಂದುವರೀಲಿ.
ಹಾಗೆ ಜಯ ಹೋಗಿ ಅವಳ ತಲೆಯಲ್ಲಿ ಕೂತು, ಅವಳು ಮದುವೆಯಾದ್ರೆ ಜಯನನ್ನೇ ಎನ್ನುವ ಒಂದು ರಾಗ ಶುರುಮಾಡಿದಳು. ಪೆದ್ದು ರುಕ್ಕಯ್ಯನಿಗೆ ಗೊತ್ತಾಗ್ಲೇ ಇಲ್ಲ ತುಂಬಾ ಸಮಯ. ಜಯನೂ ಸುಮ್ಮನೇ ಇದ್ದ. ಪೇಟೆಗೆ ಹೋದಾಗ ಭೇಟಿಯಾಗುವುದು, ಎಲ್ಲೆಲ್ಲೋ ತಿರುಗುವುದೆಲ್ಲಾ ಮತ್ತೆ ಕ್ರಮೇಣ ಗೊತ್ತಾಯಿತು ಜನರಿಗೆ.
ಮತ್ತೆ?
ಇದೆಲ್ಲಾ ಕ್ರಮೇಣ ನಡೆಯುತ್ತಾ ಇದ್ದ ಹಾಗೆ ರುಕ್ಕಯ್ಯನಿಗೆ ಯಾವುದೋ ಹಣದ ವಿಷಯದಲ್ಲಿ ಜಯನ ಜೊತೆಗೆ ಜಗಳವಾಯಿತು. ಇದರಿಂದ ರುಕ್ಕಯ್ಯ ಮತ್ತೆ ಜಯ ಬೇರೆ ಬೇರೆಯಾದರು. ಇದು ಜಯ ಮತ್ತೆ ಕುಮುದನ ಮಧ್ಯೆ ದೊಡ್ಡ ಗೋಡೆಯಾಯಿತು.
ಅಮ್ಮಾ.. ನಿನ್ನ ಧಾರಾವಾಹಿ ಕತೆ ಒಂದು ಸಲ ಮುಗಿಸು. ನಂಗೇನೋ ನೀನೇ ತಯಾರಿಸಿದ ಕತೆಯ ತರಹ ಕಾಣ್ತಿದೆ.
ಹೌದು ಮಗನೆ, ಈಗೆಲ್ಲಾ ಹಾಗೆ ಅಲ್ವ? ನಿಜವಾದ ಕತೆಗಳು ಯಾವತ್ತೂ ರೋಚಕ ಅಂತ್ಯ ಕಾಣಬೇಕಾಗಿಲ್ಲವಲ್ಲ!. ಹೀಗೆ ಕುಮುದನ ಮದುವೆಗೆ ಇನ್ನೇನು ಒಂದುವಾರ ಇದೆ ಅನ್ನುವಷ್ಟರಲ್ಲಿ ಕುಮುದಳ ಒತ್ತಾಯದ ಮೇರೆಗೆ ಜಯ ಕುಮುದಳನ್ನು ಕರೆದುಕೊಂಡು ಮಂಗ್ಳೂರಿಗೋ ಪುತ್ತೂರಿಗೋ ಓಡಿ ಹೋದ. ಇದು ಮರುದಿನ ಊರೆಲ್ಲಾ ತುಂಬಾ ದೊಡ್ಡ ಸುದ್ಧಿಯಾಯ್ತು.
ಮತ್ತೆ?
ಮದುವೆಗೆ ಎಲ್ಲ ಸಿದ್ಧಮಾಡಿದ್ದ ರುಕ್ಕಯ್ಯ ಕುಸಿದು ಆಸ್ಪತ್ರೆ ಸೇರಿದ. ಒಂದು ವಾರದಲ್ಲಿ ಪುನಃ ಮನೆಗೆ ಬಂದನಂತೆ. ಬಂದಮೇಲೆ ದೊಡ್ಡ ಕತ್ತಿ ತೆಗೆದುಕೊಂಡು ಬಂದು ಜಯನ ಮನೆಯ ಹತ್ತಿರ ಬಂದು ಕಾಯುತ್ತಾ ಕುಳಿತಿದ್ದನಂತೆ.
ಆಮೇಲೆ?
ಸುಮಾರು ಇನ್ನೊಂದು ವಾರ ಆಗಿರಬಹುದು. ಜಯ ಮನೆಗೆ ಬಂದ. ಬಂದು ಅಮ್ಮನನ್ನೂ ಮತ್ತೆ ಕೆಲವು ವಸ್ತುಗಳನ್ನೂ ತೆಗೆದುಕೊಂಡು ವಾಪಸ್ಸು ಹೋದನು. ಮನೆಗೆ ಬಂದು ಅಮ್ಮನೂ ಜಯನೂ ಬರ್ತೇನೆ. ಯಾವತ್ತಾದರೂ ಎಲ್ಲಿಯಾದರೂ ಸಿಗುವ. ಕುಮುದ ಚೆನ್ನಾಗಿದ್ದಾಳೆ. ನಾನಿನ್ನು ಹೊಸ ಜೀವನ ಶುರು ಮಾಡ್ತೇನೆ ಎಂದೆಲ್ಲಾ ಹೇಳಿ ಹೋದ.
ಓಹೋ.. ಹೀಗೆಲ್ಲಾ ಆಯ್ತಾ?
ಹೌದು. ಇದು ಗೊತ್ತಾದ ರುಕ್ಕಯ್ಯ ರಾತ್ರಿ ಪುನಃ ಕತ್ತಿ ಹಿಡಿದುಕೊಂಡು ಬಂದ. ಮನೆಯ ಹಂಚುಗಳಿಗೆಲ್ಲಾ ಕಲ್ಲೆಸೆದು, ನಮ್ಮ ಮನೆಗೂ ಬಂದು ಜಯ ಎಲ್ಲಿದ್ದಾನೆ ಎಂದು ಕೇಳಿದ. ನನಗ್ಗೊತ್ತಿಲ್ಲ ಅಂದೆ. ಒಂದು ಗ್ಲಾಸು ನೀರು ಕುಡಿದು ಹೊರಟುಹೋದ.
ಇಷ್ಟೆಲ್ಲಾ ಆಯ್ತಾ? ಇದೆಲ್ಲಾ ಯಾಕೆ ನಂಗೆ ಹೇಳ್ಳಿಲ್ಲ ಫೋನಲ್ಲಿ?
ನೀನು ಮಾತಾಡುವ ಮೂರು ನಿಮಿಷಕ್ಕೆ ಕತೆ ಹೇಳಲಿಕ್ಕಾಗತ್ತಾ ಮಗನೇ?
ಸರಿ. ನನಗೆ ಸೀರೆ ಸೆಲೆಕ್ಟ್ ಮಾಡಲಿಕ್ಕೆ ಬರಲಿಲ್ವೇನೋ? ನೀಲಿ ಸೀರೆ ನಿನಗೆ. ಅಪ್ಪನಿಗೆ ಪಂಚೆ ಅಲ್ಲಿಂದ ತರುವುದೇನಕ್ಕೆ ಅಲ್ವಾ? ಅಂಗಿ ತಂದಿದ್ದೇನೆ.
ಎಂತಕೆ ಸೀರೆ, ಇರಲಿ. ಸಲದ ಜಾತ್ರೆಗಾದರೂ ಇದನ್ನು ಹಾಕಿಕೊಂಡು ರೈಸಬಹುದು..ಈಗ ಎಂತ ಬರೀ ಚಾಯ ಸಾಕಾ ನಿನಗೆ?
ಹ್ಮ್. ಕೊಡು. ಒಂದು ರೌಂಡ್ ತಿರುಗಿ ಬರ್ತೇನೆ ಮತ್ತೆ.
---

ಅದ್ಯಾಕೋ ಸಂಜೆಗತ್ತಲೆಯಲ್ಲಿ ಜಯಣ್ಣನ ಮನೆಯ ಹತ್ತಿರ ಹೋದೆ. ಯಾರೋ ಜಗಲಿಯಲ್ಲಿ ಕುಳಿತಂತೆ ಕಂಡಿತು? ಲೈಟು ಮುಖಕ್ಕೆ ಹಿಡಿದೆ. ಕತ್ತಿ ಹಿಡಿದುಕೊಂಡು ಎದ್ದು ಬಂತು ದೇಹ ಜೊತೆಗೆ ನೂರಿನ್ನೂರು ಬರೆಯಲಾಗದ ಪದಗಳು. ಓಡಿ ಅಲ್ಲಿಂದ ಮನೆ ಸೇರಿದೆ.

1 comment:

  1. Madalu appachhi, eevaga amma, nale nimage inyaru kathe helutttaro?! Anyways, nice one... Thanks

    ReplyDelete