Friday 9 August 2013

ಅಪ್ಪಚ್ಚಿ ಹೇಳಿದ ಅಪ್ಪನ ಕತೆ- ಭಾಗ ೯ (ತಾಂಬೂಲ ಭಕ್ಷಣಂ)

ಯಕ್ಷಗಾನ ನನಗೆ ಚೆನ್ನಾಗಿತ್ತು. ಚಿಕ್ಕಪ್ಪನಿಗೆ ನೂರರಲ್ಲಿ ಒಂದು, ನನಗೆ ಬರೀ ಒಂದೇ! ಹಾಸ್ಯದ ಸನ್ನಿವೇಶಕ್ಕೆ ದೊಡ್ಡದಾಗಿ ನಕ್ಕಾಗ ವಿಚಿತ್ರವೆಂಬಂತೆ ಚಿಕ್ಕಪ್ಪ ನೋಡಿದ್ದು ಮಾತ್ರ ಹಾಸ್ಯದ ಮೇಲೆ ಸಂಶಯವನ್ನುಂಟು ಮಾಡಿತು. ಆದರೂ ಮೊದಲಿನ ಹಾಸ್ಯದ ಔಚಿತ್ಯ ಮತ್ತು ಗಂಭೀರತೆ ಈಗಿನ ಯಾವ ಕಲಾಪ್ರಕಾರದಲ್ಲೂ ಇಲ್ಲವೇನೊ. ಬೆಳಗ್ಗಿನ ಅಷ್ಟೇನೂ ಭಯಂಕರವಲ್ಲದ ಚಳಿಗೆ ಮರ್ಯಾದೆ ಕಡಿಮೆಯಾಗಬಾರದೆಂದು ತಲೆಗೆ ಒಂದು ಬಟ್ಟೆಯನ್ನು ಸುತ್ತಿ ಹೊರಟೆವು. ಮನುಷ್ಯನಿಗೆ ನಡೆಯುವಾಗ ನಿದ್ದೆ ಮಾಡಲಿಕ್ಕಾಗುವುದಿಲ್ಲ ಎನ್ನುವ ಕಾರಣದಿಂದ ನಿದ್ದೆ ಇರಲಿಲ್ಲವಷ್ಟೆ.

ಮಗನೆ, ಇದೇ ಗದ್ದೆಯಲ್ಲಿ ಮೊದಲು ಭಯಂಕರ ಯಕ್ಷಗಾನಗಳು ಆಗ್ತಿತ್ತು. ಅದೂ ಆಗಿನ ಕಲಾವಿದರು ಜೀವ ಬಿಟ್ಟು ಕುಣಿಯುತ್ತಿದ್ದರು. ಈಗಿನ ಹಾಗೆ ಸಮತಟ್ಟಿನ ನೆಲವೂ ಅಲ್ಲ, ಕುಣಿದು ಕಾಲು ಉಳುಕಿಸಿಕೊಂಡು ನಾಳಿನ ಯಕ್ಷಗಾನಕ್ಕೆ ಋಷಿಯ ಪಾತ್ರ ಮಾಡಿದ ಕಲಾವಿದರೂ ಇದ್ದಾರೆ. ಈಗ ಹಾಗೇನಿಲ್ಲ ಒಂದೋ ರಪರಪ ಐವತ್ತು ಸಲ ತಿರುಗುವುದು, ಅರ್ಥ ಹೇಳುವಾಗ ಬೆಬ್ಬೆಬೆ ಹೇಳುವುದು. ಪುಣ್ಯಕ್ಕೆ ಇಂಗ್ಲೀಷೊಂದು ಮಾತನಾಡುವುದಿಲ್ಲ ಎನ್ನುವುದು ಪುಣ್ಯ.

ಹಾಗೇನಿಲ್ಲ ಚಿಕ್ಕಪ್ಪ. ಎಷ್ಟೊ ಜನ ಕಲಿತವರು ತುಂಬಾ ಚಂದ ಮಾಡ್ತಾರೆ. ಆಗಿನ ವ್ಯವಸ್ಥೆ ಹಾಗಿತ್ತಷ್ಟೆ. ಈಗ ಹಾಗಿಲ್ಲ. ಒಳ್ಳೇ ವಿಷಯ ಸಂಪಾದನೆ ಮಾಡಿ ನಂತರ ಮಾತನಾಡುವವರು ಎಷ್ಟೋ ಕಲಾವಿದರಿದ್ದಾರಲ್ಲ. ನಿಮ್ಮ ಹಳೇ ಬಣ್ಣದವೇಷದ ಬಾಯಿಯಲ್ಲಿ ಆರ್ಭಟ ಮಾತ್ರವಿತ್ತು. ಬೇರೆ ಯಾವ ಪಾತ್ರವೂ ಮಾಡುತ್ತಿರಲಿಲ್ಲ. ಈಗಿನ ಕಾಲದಲ್ಲಿ ರಾಕ್ಷಸ ನಾಳಿನ ಇಂದ್ರನಾಗುತ್ತಾನೆ.

ಹೌದು ಮಗನೆ, ಅದು ಸರಿ. ಕಾಲಕ್ಕೆ ತಕ್ಕ ಹಾಗೆ ಕೋಲ. ಒಂದು ಎಲೆ ಅಡಕ್ಕೆ ತಿಂದು ಹೊರಡುವ. ಸ್ವಲ್ಪ ಬೆಚ್ಚಗೆ ಇರ್ತದೆ.

ಎಲೆ ಅಡಕ್ಕೆ ತಿನ್ನಲಿಕ್ಕೆ ಶುರು ಮಾಡಿದ್ದು ನಿನ್ನಪ್ಪನ ಜೊತೆಗೇ ಮಾರಾಯ. ನಮ್ಮ ಅಪ್ಪ ತಿನ್ನುತ್ತಿದ್ದರು. ಒಳ್ಳೇ ಕುಣಿಯ ಹೊಗೆಸೊಪ್ಪು. ಅದೂ ಮಂಗಳೂರಿನ ಯಾವುದೋ ಪೈ ಅಂಗಡಿಯಿಂದ ತಿಂಗಳಿಗೊಮ್ಮೆ ತರಿಸುವುದಾಗಿತ್ತು. ಹೀಗಾಗಿ ಮನೆಯಲ್ಲಿ ಹೊಗೆಸೊಪ್ಪಿನ ಸ್ಟಾಕ್ ಯಾವತ್ತೂ ಇರುತ್ತಿತ್ತು. ಬೇರೆ ಯಾರೂ ಎಲೆ ತಿನ್ನುತ್ತಿರಲಿಲ್ಲ.

ನಿನ್ನಪ್ಪ ಎಲೆ ತಿನ್ನಲು ಶುರುಮಾಡಿದ ಬಗ್ಗೆ ಒಂದು ಸಣ್ಣ ಕತೆ ಇದೆ ಮಾರಾಯ. ಆಗಿನ ಕಾಲದ ಕಬಡ್ಡಿ ಆಟದ ಒಂದು ಕತೆ ಹೇಳ್ತೇನೆ ನಿನಗೆ. ಕಬಡ್ಡಿಯ ಜೊತೆಗೆ ಮನೆಗೆ ತಲುಪಬಹುದು.

ಸುಮಾರು ಕಾಲದಿಂದ ಕಬಡ್ಡಿ ಆಟ ಆಡುತ್ತಿದ್ದೆವು ನಾವು. ಶಾಲೆಯ ದಿನಗಳಿಂದಲೂ ನಿನ್ನಪ್ಪ, ಜಗ್ಗು ಎಲ್ಲರೂ ಒಳ್ಳೆಯ ಕಬಡ್ಡಿ ಆಟಗಾರರು. ನಾನು ಜೊತೆಗೆ ಎಷ್ಟೊ ಆಟಗಳಿಗೆ ಹೋಗಿದ್ದೇನೆ. ನೂರಿನ್ನೂರು ರೂಪಾಯಿಗಳ ಬಹುಮಾನಕ್ಕಿಂತಲೂ ಪ್ರತಿಷ್ಟೆಯ ಆಟವಾಗಿತ್ತು ಕೆಲ ವರ್ಷಗಳಿಗೆ. ಅದೊಂದು ದಿನ ಆನೆಕಲ್ಲಿನ ಶಾಲೆಯ ಮೈದಾನದಲ್ಲಿ ಕಬಡ್ಡಿ ಪಂದ್ಯ. ಸುಮಾರು ಆಟಗಾರರು ಬಂದಿದ್ದರು. ಜಗ್ಗುವಿನ ಟೀಮಿನಲ್ಲಿ ನಾನೂ ಸೇರಿಕೊಂಡಿದ್ದೆ. ಹೀಗೆ ನಾನೂ ನಿನ್ನಪ್ಪನೂ ಬೆಳಗ್ಗೆ ಏಳು ಘಂಟೆಗೆ ಮನೆಯಿಂದ ಹೊರಟು ಜಗ್ಗು ಮತ್ತೆ ಉಳಿದವರ ಜೊತೆ ಹೇಗೂ ಆನೆಕಲ್ಲಿನ ಶಾಲೆಗೆ ತಲುಪಿದೆವು.

ಕಬಡ್ಡಿಗೆ ಹೆಸರು ಕೊಟ್ಟು ಆಡಿಯೂ ಆಯಿತು. ಎಲ್ಲರಿಂದ ಬಲಾಢ್ಯ ಮತ್ತು ಚುರುಕಿನ ಆಟಗಾರರಿದ್ದುದರಿಂದ ಮತ್ತು ಹೆಚ್ಚಿನ ಅಭ್ಯಾಸವಿದ್ದುದರಿಂದ ಎರಡೋ ಮೂರೋ ಪಂದ್ಯ ಗೆದ್ದೆವು. ಮತ್ತೆ ನಮ್ಮ ಆಟ ಇದ್ದುದು ಮಧ್ಯಾಹ್ನದ ಮೇಲೆಯೇ. ಊಟ ಮಾಡುವುದಕ್ಕೆಂದು ಅಲ್ಲಿಯೇ ಹೊಳೆಯ ಹತ್ತಿರ ಇದ್ದ ಹೋಟೆಲ್ ಬಳಿ ಬಂದು ಏನನ್ನೋ ತಿಂದು ಇನ್ನೂ ತುಂಬಾ ಸಮಯವಿದ್ದುದರಿಂದ ಹೊಳೆಯಲ್ಲಿ ಈಜಾಡಿ ಆಟದ ತರಚುಗಾಯಗಳ ನೋವನ್ನು ಅನುಭವಿಸಿದೆವು.

ನಂತರ ಏನೂ ಕೆಲಸವಿರಲಿಲ್ಲವಾದ್ದರಿಂದ ಅಲ್ಲಿ ಬಸ್ ಸ್ಟಾಂಡ್ ಎಂದು ಕರೆಯಲ್ಪಡುವ ಜೋಪಡಿಯ ಒಳಗೆ ಹಾಕಿದ್ದ ಕರೆಂಟ್ ಕಂಬದ ಬೆಂಚಿನಲ್ಲಿ ಕುಳಿತು ಮಾತನಾಡುತ್ತಿದ್ದೆವು. ಜಗ್ಗುವೋ ಅಲ್ಲ ಇನ್ನೊಬ್ಬನಾರೋ ಎಲೆ ಅಡಿಕೆ ತಂದು ತಿನ್ನತೊಡಗಿದರು. ನಿನ್ನಪ್ಪ ಸುಮ್ಮನಿರಲಾರದೆ ಮನೆಯಲ್ಲಿರುವ ತಾಂಬೂಲದ ಪೆಟ್ಟಿಗೆ, ತೆಂಗಿನ ಮರಕ್ಕೆ ಹಬ್ಬಿದ ಎಲೆಬಳ್ಳಿ ಮುಂತಾದುವುಗಳ ಬಗ್ಗೆ ಕೊಚ್ಚಿಕೊಳ್ಳುತ್ತಾ ಕೊನೆಗೆ ಹೊಗೆಸೊಪ್ಪಿನ ವಿಷಯ ಬಂತು. ನಮ್ಮ ಮನೆಯ ಹೊಗೆಸೊಪ್ಪು ಒಂದು ಸಣ್ಣ ತುಂಡು ಸಾಕು, ಇದೆಲ್ಲ ಎಂತದ್ದು? ಲೆಕ್ಕಕ್ಕೆ ಇಲ್ಲ ಎನ್ನುವ ಮಾತುಗಳನ್ನೂ ಸೇರಿಸಿ ಬಿಟ್ಟ.

ಭಟ್ರೆ, ನೀವು ತಿಂದಿದ್ದೀರಾ? ಸುಮ್ಮನೆ ಬಡಾಯಿ ಕೊಚ್ಚುವುದೇನು ಬೇಡ. ತಾಕತ್ತಿದ್ದರೆ ಒಮ್ಮೆ ಎಲೆಅಡಿಕೆ ಹಾಕಿ ನೋಡಿ ಹೊಗೆಸೊಪ್ಪಿನ ಸಹಿತ ಎಂದನೊಬ್ಬ. ನಿನ್ನಪ್ಪನ ದೊಡ್ಡ ಮರ್ಯಾದೆ ಅಲ್ಲೆಲ್ಲೋ ಹರಾಜಾದಂತನಿಸಿತೇನೋ, ಒಮ್ಮೆಲೆ ಓಹೋ, ನೋಡು ನನ್ನ ತಾಕತ್ತು ಎಂದು ಅರ್ಧ ಬೆರಳಿನಷ್ಟುದ್ದದ ಹೊಗೆಸೊಪ್ಪಿನ ಸಹಿತ ಎಲೆ ಅಡಿಕೆ ಜಗಿದ. ಅದೇನಾಯಿತೋ ಏನೋ ನಿನ್ನಪ್ಪ ಕೆಂಪು ಕೆಂಪಗಾದ. ಮುಖದಲ್ಲಿ ಬೆವರು ಧಾರಾಕಾರ ಶುರುವಾಯಿತು. ವಾಂತಿ ಬಂದಂತೆ ವ್ಯಾಕ್ ಎಂದ. ಕಣ್ಣುಗಳನ್ನ ಗಿರ ಗಿರ ತಿರುಗಿಸಿದ.

ನಮಗೆ ಮೊದಲು ಮೋಜೆನ್ನಿಸಿದರೂ ಕ್ರಮೇಣ ನಿನ್ನಪ್ಪ ಜೋಪಡಿಗೆರಗಿ ಕುಸಿದು ಕುಳಿತ. ಆಗ ಹೆದರಿಕೆ ಶುರುವಾಗತೊಡಗಿತು ನಮಗೆ. ಹೋಟೆಲಿನಿಂದ ಮಜ್ಜಿಗೆ ನೀರು ತಂದು ಕುಡಿಸಿದೆವು, ಸರಿ ಹೋಗಲಿಲ್ಲ. ಯಾರೋ ಬಸ್ ಸ್ಟಾಂಡಿಗೆ ಬಂದವರು, ಸ್ವಲ್ಪ ಮಲಗಲಿ, ಎಲ್ಲಾ ಸರಿ ಹೋಗುತ್ತದೆ, ತಲೆಗೆ ಏರಿರಬೇಕು ಹೊಗೆಸೊಪ್ಪು ಎಂದರು.

ಇದಾದ ಸ್ವಲ್ಪ ಹೊತ್ತಿನಲ್ಲೇ ನಮ್ಮ ಕಬಡ್ಡಿ ಆಟವೂ ಇದ್ದಿತ್ತು. ನಿನ್ನಪ್ಪನಿಲ್ಲದೇ ಆಡಿದೆವು. ಒಂದು ಪಂದ್ಯ ಗೆದ್ದರೂ, ನಂತರದ ಪಂದ್ಯದಲ್ಲಿ ಸೋತೆವು. ಅಷ್ಟಾಗುವಾಗ ಸಂಜೆಯಗಿತ್ತು. ನಿನ್ನಪ್ಪನ ನೆನಪೇ ಇರಲಿಲ್ಲ ನಮಗೆ. ಪಂದ್ಯ ಮುಗಿದ ಕೂಡಲೇ ಬಸ್ ಸ್ಟಾಂಡಿಗೆ ಬಂದು ನೋಡಿದರೆ ನಿನ್ನಪ್ಪ ಸುಖನಿದ್ರೆಯಲ್ಲೇ ಇದ್ದ. ಎಬ್ಬಿಸಿದರೂ ಏಳಲಿಲ್ಲ.

ನಮ್ಮ ಟೀಮಿನ ಎಲ್ಲರೂ ಹೊರಟು ಹೋದರು. ನಾನು ಮತ್ತು ಜಗ್ಗ ಮಾತ್ರ ಉಳಿದವರು. ಕೊನೆಗೆ ನೀರು ತಂದು ಮುಖಕ್ಕೆ ಹಾಕಿ, ಇನ್ಯಾರೋ ಹೇಳಿದ ತೆಂಗಿನ ಎಣ್ಣೆ ತಲೆಗೆ ಹಾಕಿ ಮತ್ತೊಂದು ಘಂಟೆಯ ನಂತರ ಅಲ್ಲಿಂದ ನಿನ್ನಪ್ಪನ ಜೊತೆಗೂಡಿ ಮನೆಗೆ ಹೊರಟೆವು.

ಇದಾಗಿ ಸುಮಾರು ದಿನಗಳು ನಿನ್ನಪ್ಪ ಇದರ ಬಗ್ಗೆ ಮಾತನಾಡುತ್ತಿರಲಿಲ್ಲ. ಕೊನೆಗೆ ಒಂದೊಂದು ಸಲ ಎಲೆ ಅಡಿಕೆ ಪ್ರಾರಂಭಿಸಿದವರು ಯಕ್ಷಗಾನ, ಬೇರೆ ಕಡೆಯ ಮದುವೆಗಳು ಎಂದೆಲ್ಲಾ ತಿನ್ನತೊಡಗಿದರು. ನಂತರ ಅದನ್ನು ಅಭ್ಯಾಸ ಮಾಡಿಕೊಂಡರು.

ಈಗಲೂ ಅರ್ಧ ಬೆರಳಿನಷ್ಟು ಹೊಗೆಸೊಪ್ಪಿಲ್ಲದಿದ್ದರೆ ಅವರಿಗೆ ತಿಂದದ್ದು ಸಮಾಧಾನ ಇಲ್ಲ. ಅದೂ ಸುಮ್ಮನೇ ತಿಂದು ಉಗುಳುವುದಲ್ಲ. ಚಂದವೇ ಬೇರೆ. ಅದೊಂದು ಕಲೆಯೋ ಏನೋ? ಹಹ್ಹ..

ಎಲ್ಲಿದ್ದೇವೆ ಈಗ? ಹ್ಮ್.. ಇವತ್ತು ತೋಟದ ಕೆಲಸಕ್ಕೆ ಕೆಲಸದವರು ಬರ್ತಾರೆ. ಇನ್ನು ಮನೆಗೆ ಹೋಗಿ ಒಂದು ಸ್ವಲ್ಪ ಮಲಗಿ, ಚಾಯ ಕುಡಿದು ತೋಟಕ್ಕೆ ಹೋಗಬೇಕು.

ಹೌದಾ, ಕಷ್ಟ. ಈಗ ಜನವೂ ಸಿಗುವುದಿಲ್ಲ ಅಲ್ವ? ಸರಿ ಚಿಕ್ಕಪ್ಪ.. ನಾನು ಮತ್ತೆ ಬರ್ತೇನೆ. ಈಗ ನಾನು ಚಂದ ನಿದ್ದೆ ಮಾಡ್ಬೇಕು. ಮೊದಲೆಲ್ಲಾ ಯಕ್ಷಗಾನ ನೋಡಿದ ಮೇಲೆ ಮಲಗಿದರೆ ಪಾತ್ರಗಳು ಬಂದು ನಿದ್ದೆಯಲ್ಲಿ ಕುಣಿಯುತ್ತಿದ್ದವು. ಈಗ ಕುಣೀತದಾ ನೋಡ್ಬೇಕು..

1 comment: