Saturday 27 October 2012

ಅವಳಿಗೆ ಬರೆದ ಕೊನೆಯ ಪತ್ರ.


ನೀನಿಲ್ಲದೇ ಇದ್ದರೆ ಇರಲಾಗುವುದಿಲ್ಲ ಎನ್ನುವುದು ಆಕರ್ಷಣೆಯ ಪರಾಕಾಷ್ಟೆ ಆಗಿರಬೇಕೇನೊ. ಹಾಗನ್ನಿಸಿಲ್ಲವಲ್ಲ. ಏನೋ ಒಂದೆರಡು ಬಾರಿ ಹಾಗೆ ಹೇಳಿರಬಹುದು ಬಿಟ್ಟತೆ ಆ ಭಾವವಾಗಲೀ, ಗಟ್ಟಿಯಾಗಿ ನಂಬಿದ್ದಾಗಲಿ ಇಲ್ಲ. ತಲೆತಗ್ಗಿಸಿದ್ದ ನನ್ನ ಮುಖವನ್ನು ಎತ್ತಿ ಒಂದೆರಡು ಕ್ಷಣ ನೋಡಿ ಮಾತನಾಡಲಿಲ್ಲ. ಹಾಗೇ ಹಿಂದೆ ಸರಿದೆ ನೀನು. ಇದೆಲ್ಲವನ್ನೂ ಆಗ ನಾನು ಅನುಭವಿಸಿದ್ದೆ. ಈಗ ನೆನಪಿಸುತ್ತಿದ್ದೇನೆ..

ಅದೇನು ಸುಖವೋ ಗೊತ್ತಿಲ್ಲ. ನೆನಪಿಸುವಾಗಲೂ ನೀನಿದ್ದಂತೆ ಅನಿಸುತ್ತದೆ. ಹೆಗಲಿಗೆ ತಲೆ ಇಟ್ಟು ಮಾತನ್ನಾಡಿದಂತೆ. ಎಲ್ಲಿಂದಲೋ ಒಂದು ಕರ್ಕಶ ಕೂಗು ಬೆಚ್ಚಿಬೀಳಿಸುತ್ತದೆ. ಪುನಃ ಗಾಬರಿಯಿಂದ ಎಲ್ಲಾ ಕಡೆ ನೋಡುತ್ತೇನೆ. ಅವಳಿಲ್ಲ ಎಂದು ಪುನಃ ವಾಸ್ತವ ಜಗತ್ತಿಗೆ ಬಂದು ಸುಮ್ಮನೇ ಇದೇ ಪಾರ್ಕಿನ ಇದೇ ಬೆಂಚಿನ ಮೇಲೆ ಕುಳಿತು ಯೋಚಿಸುತ್ತೇನೆ. ಸುಮ್ಮನೇ  ಲಂಗುಲಗಾಮಿಲ್ಲದಂತೆ ಹರಿಯುವ ವಿಚಾರಗಳನ್ನು ಆಳಕ್ಕಿಳಿದು ಯೋಚನೆ ಮಾಡುವ ಮನಸ್ಸಾಗುತ್ತದೆ. ಆದರೂ ಅಲ್ಲಿಯೂ ಹಿತವಿಲ್ಲ.

ಪ್ರಯತ್ನಪೂರ್ವಕವಾಗಿ ಅಲ್ಲದಿದ್ದರೂ ನೀನು ದೊರಕುತ್ತೀ ಎಂದು ನಿನ್ನ ಹಿಂದೆ ಸುಳಿದಾಡಿದ್ದು ನನ್ನ ತಪ್ಪೇ ಅಲ್ಲ. ಏಕೆಂದರೆ ಆಗ ಸಿಗುವ ಭರವಸೆಯಿಲ್ಲದೇ ಸುಮ್ಮನೇ ತಿರುಗುತ್ತಿದ್ದೆ. ಬೇರೆಯವರಿಗೆ ಅದು ಹೇಗೆ ಕಂಡರೂ ನಾನು ನಿನ್ನನ್ನು ಮರೆತೇ ಬಿಡುತ್ತಿದ್ದೆ ಅದೇ ಸಂಜೆ. ಆ ಮಳೆಯ ದಿನ ನಿನಗೆ ಕಾಟಕೊಡುವುದಕ್ಕೆಂದೇ ನಿನ್ನ ಹಿಂದೆ ಬಂದೆ. ಮೊದಲು ನೀನು ತಿರುಗಿದಾಗಲೋ ಅಲ್ಲ ನಕ್ಕಾಗಲೋ ಅಲ್ಲಿ ನಾನಿರಬಹುದೇನೋ ಎಂದು ಕಾಯುತ್ತಿದ್ದೆ.ಯಾವಾಗ ನೀನು ಪ್ರತಿಕ್ರಿಯೆ ನೀಡಿದೆಯೋ ಆ ದಿನದಿಂದ ನಾನು ನಿನ್ನಲ್ಲಿ ನನ್ನನ್ನು ಹುಡುಕುವುದನ್ನು ಬಿಟ್ಟೆ. ಸಂಪೂರ್ಣ ನಂಬಿಕೆಯಿತ್ತು. ಯಾರೋ ಸಾಲ ಕೊಡುತ್ತಾರೆಂದರೆ ನಂಬಲಾಗುವುದಿಲ್ಲ. ಆದರೆ ನಿನ್ನ ನಗು ಮತ್ತು ನೀನಾಡಿದ ಮಾತು ಮೊದಲ ಬಾರಿಗೆ ನಂಬಿಕೆ ಎಂದರೇನು ಎಂದು ಕಲಿಸಿತ್ತು.

ಹುಚ್ಚಾಟಗಳು ಅತಿಯೆನಿಸಲೇ ಇಲ್ಲ. ನಾನು ಕಾಯುತ್ತಿರಲಿಲ್ಲ ನೀನು ಹಾದಿಯಲ್ಲಿ ಬರುವುದನ್ನು ಅಥವಾ ನೀನೂ ಕಾಯುತ್ತಿರಲಿಲ್ಲ. ಆದರೆ ಸಿಗದೇ ಇದ್ದ ದಿನಗಳು ಅಪರೂಪ. ನೀನು ಮಾತನ್ನಾರಂಭಿಸಿದರೆ ನಾನು ಯಾವತ್ತೂ ಮಾತನಾಡಬೇಕೆಂದೆನಿಸಿಲ್ಲ. ಅಲ್ಲೇ ಮುಳುಗಿರುತ್ತಿದ್ದೆ. ಹೊರಗಿನ ಯಾರೋ ನಮ್ಮ ಬಗ್ಗೆ ಮಾತನಾಡುತ್ತಿದ್ದದನ್ನು ನಾನು ಗಮನಿಸಿದ್ದು ನೀನು ಇಲ್ಲದಿರುವ ದಿನಗಳಲ್ಲೇ.

ನಾನು ನಿನ್ನನ್ನು ಇಷ್ಟಪಡುತ್ತೇನೆ, ಅಥವಾ ಪ್ರೀತಿಸುತ್ತೇನೆ ಎಂದು ಯಾವತ್ತೂ ಹೇಳಿಲ್ಲವಲ್ಲ. ಅದು ಹೇಗೆ ಇಬ್ಬರಿಗೂ ತೋಚದೇ ಉಳಿಯಿತೋ ಗೊತ್ತಿಲ್ಲ. ಆದರೆ ಹೇಳದಿದ್ದರೂ ಒಳಗಿಂದೊಳಗೇ ಹೇಳಿದಂತೆ ಅಥವಾ ಒಬ್ಬನೇ ಇದ್ದಾಗ ನಾನೂ ನೀನೂ ಮಾತನಾಡಿದಂತೆ ಆ ಭಾವವನ್ನು ಅನುಭವಿಸಿದ್ದೇನೆ ಅಂದಮೇಲೆ ನೀನೂ ಹಾಗೆಯೇ ಅಂದುಕೊಂಡಿರುತ್ತೀಯ. ಕ್ರಮೇಣ ನಾವು ಒಬ್ಬರನ್ನು ಬಿಟ್ಟು ಇರಲಾರೆವು ಎನ್ನುವ ತೀರ್ಮಾನಕ್ಕೆ ಬಂದೆವೇನೋ, ನೀನು ಬಾರದೇ ಇದ್ದಲ್ಲಿ, ನಿನ್ನ ಊರಿಗೆ ಹೊರಟು ಹೋದಮೇಲೆ ಅದೇನು ಚಡಪಡಿಕೆ? ನಾನು ಊಟ ಮಾಡಿರಲಿಲ್ಲ ನಿದ್ದೆ ಮಾಡಿರಲಿಲ್ಲ ಎನ್ನುವುದಲ್ಲ. ಅದ್ಯಾವುದೂ ರುಚಿಸಿರಲಿಲ್ಲ ಎಂಬುದು ಸತ್ಯ. ಪುನಃ ಬಂದಾಗ ಅದೇನು ಸಂಭ್ರಮ. ಯಾವುದೋ ಕಿತ್ತುಹೋಗಿದ್ದ ಒಂದು ರಕ್ತದನಾಳ ಹೃದಯಕ್ಕೆ ಪುನಃ ಜೋಡಿಸಿದಂತೆ ಉಸಿರಾಟ ಸರಾಗವಾಯಿತು!

ಹೀಗೇ ಕಾಲವು ನಡೆಯುತ್ತಿತ್ತು. ಸಖ್ಯವೂ ಹಾಗೆಯೇ. ನಾವು ಕುಳಿತ, ಮಾತನಾಡಿದ, ನೆಗೆಯಾಡಿದ ಸ್ಥಳಗಳಲ್ಲಿ ನಿನ್ನೆಯ ತರಗೆಲೆಗಳೂ ಹೇರಳ, ನಿನ್ನೆಯ ಹೂಗಳೂ ಬೇಕಾದಷ್ಟು. ನಾವು ಕಾಯುತ್ತಿದ್ದುದಕ್ಕೆ ಸಾಕ್ಷಿಯೋ ಎಂಬಂತೆ ದಿನವೂ ಆ ಬೆಂಚು ನಮಗಾಗಿಯೇ ಕಾಯುತ್ತಿತ್ತೇನೋ. ನಾವು ಹೀಗೆಯೇ ಇದ್ದೆವು. ದಿನಕ್ಕೂ ಹೊಸ ಜಗತ್ತಿನ ಸಖಿ ಸಖರಂತೆ.

ದಿನ ಸರಿದಂತೆಯೂ ಒಂದು ರೀತಿಯ ಗಟ್ಟಿತನ ನಿನ್ನಲ್ಲಿ ಕಾಡತೊಡಗಿತು. ಅದೇನು ಎಂದು ನಾನು ಇಣುಕುವಷ್ಟರಲ್ಲಿ ನೀನೇ ಅದನ್ನು ಹೇಳಿದಂತೆ. ನಾನು ನೀನು ಸುಮಾರು ಸಲ ಮಾತನಾಡಿದರೂ ನಮ್ಮ ಮಧ್ಯೆ ಬೇರೆ ಬೇರೆ ಎನ್ನುವ ಭಾವವಿರಲಿಲ್ಲ. ಆ ದಿನ ಹಾಗೆ ಅನ್ನಿಸಲಿಲ್ಲ. ಎಲ್ಲಿಯೋ ಹೋಗಬೇಕು, ದೇಹದ ಯಾವುದೋ ಅಂಗವನ್ನು ತೆಗೆಯಬೇಕು ಎನ್ನುವಷ್ಟರಲ್ಲಿ ಘಾಸಿಯಾಯಿತು ನನಗೆ. ಮಾತು ಬರಲಿಲ್ಲ.

ನಿನ್ನ ಊರಿಗೆ ಬಂದು ನಿನ್ನ ಜೊತೆ ಇರುವ ಬಗ್ಗೆ ಯೋಚನೆ ಮಾಡಿದರೂ ನಿನ್ನಲ್ಲಿ ಹೇಳದೇ ಇರುವ ಬಗ್ಗೆ ಗೊಂದಲ. ನಿನಗೂ ಹಾಗೆಯೇ ಇರಬೇಕು. ನಾನೇ ಹೇಳಬೇಕಿತ್ತು. ಆಗಲಿಲ್ಲ. ನನ್ನ ಐಡೆಂಟಿಟಿಯೋ ಅಹಂಕಾರವೋ ನನ್ನಲ್ಲಿ ಮಾತನಾಡಲು ಆಗಲೇ ಇಲ್ಲ. ಆ ದಿನದ ಸಂಜೆಯೂ ನೀನು ಸಿಕ್ಕಿದೆ. ಗುಲಾಬಿ ಬಣ್ಣದ ದಿರಿಸಿನಲ್ಲಿ. ಕೈಯ್ಯಲ್ಲೊಂದು ಬ್ಯಾಗ್. ಕೆಲವೊಮ್ಮೆ ಸೂರ್ಯ ಮುಳುಗಿದಾಗಲೂ ಇದೇ ಬಣ್ಣ ಕಾಣುತ್ತದೆ. ನಾನು ಆ ಸೂರ್ಯ ಮುಳುಗುತ್ತಿರುವುದನ್ನೇ ದಿಟ್ಟಿಸಿದೆ. ಕ್ರಮೇಣ ಗುಲಾಬಿ ಕೆಂಪಾಯಿತು, ಕೆಂಪು ಕಪ್ಪಾಯಿತು. ನೀನು ಹೊರಟು ಹೋದೆ.

ಬಸವನಹುಳ ನೋಡಿದಂತೆಲ್ಲಾ ನಿನ್ನ ನೆನಪಾಗುತ್ತದೆ ಎಂದರೆ ಏನೆನ್ನಬೇಕು. ಅದೂ ಕೂಡ ಹಾಗೆಯೇ, ತಾನು ಹೋದೆ ಎಂದು ತನ್ನ ಗುರುತು ಬಿಟ್ಟು ಮುಂದೆ ಸಾಗುತ್ತದೆ. ನೀನೂ ಹಾಗೆಯೇ, ಹೋದಮೇಲಿನ ಗುರುತು ನಿಚ್ಚಳವಾಗಿ ಮೂಡಿದೆ ನನ್ನಲ್ಲಿ. ನಾನು ಬದಲಾದೆ. ನನ್ನಲ್ಲಿ ನಿನ್ನನ್ನು ಅಗಲಿ ಇರುವಂತಹ ಒಂದು ಶಕ್ತಿ ಇಲ್ಲ. ನೀನು ನನ್ನೊಳಗೆ ಇರುತ್ತೀ ಹಾಗೆ ಹೀಗೆ ಎಂದೆಲ್ಲಾತತ್ವಜ್ಞಾನದ ಮಾತುಗಳನ್ನಾಡಲು ಆಗಲಾರದು ನನಗೆ. ನೀನು ಹೀಗೇ ಇರಬೇಕು, ನಾನೂ ಹೀಗೆಯೇ ಇರಬೇಕು.

ಈ ಪತ್ರ ಎಲ್ಲಿಗೆ ಕಳುಹಿಸಬೇಕು ಎಂದು ಇನ್ನೂ ಗೊಂದಲದಲ್ಲಿರುವ ನಿನ್ನ ಮಿತ್ರ.

ನಿನ್ನ ನೆನಪುಗಳೆಲ್ಲ ನನಗೆ ಗೌಣ
ಎಂದಾಗ ಕೋಪಿಸಬೇಡ,
ಲೆಕ್ಕಿಸದಿದ್ದಾಗಲೇ
ನೋವು ವಿಪರೀತ ಕಣಾ!

5 comments:

  1. ಕೊಡಲಿಕ್ಕಾಗದ ಪತ್ರಗಳನ್ನು ಈವಾಗ ಬರೆಯುತ್ತೆವೆ. ಹೇಳಿಲಾಕ್ಕಾಗದ್ದನ್ನು ಈವಾಗ ಹೇಳುತ್ತೆವೆ. ಎದುರಿಗೆ ಬಂದಾಗ ಬರೆ ಜಗಳ. ಮೊದ ಮೊದಲು ಪ್ರೀತಿಸುತ್ತಿಯೂ ಇಲ್ಲವೊ ಎಂದು, ಪ್ರೀತಿ ಗಟ್ಟಿಯಾದ ತಕ್ಷಣ ಅನುಮಾನಗಳು,ಪರಿಹಾರಗಳು, ನಂತರ ಅಗಲಿಇರಲಾರದಷ್ಟು ಪ್ರೀತಿ. ಕೈಬೆರಳು ಕತ್ತರಿಸಿಕೋಂಡು ದಪ್ಪ ದಪ್ಪ ಅಕ್ಷರಗಳಲ್ಲಿ ನೆತ್ತರಿನಲ್ಲಿ ಬರೆದ ಪ್ರೇಮಪತ್ರಗಳೇನು,ಮಳೆ ಬಿಸಿಲು,ಚಳಿ ಲೆಕ್ಕವಿಲ್ಲ. ಹೊದದ್ದಷ್ಟೇ ನೆನಪು.

    ಯಾಕೆ ಇಂತಾವೆಲ್ಲ ಬರೆದು ನಮ್ಮ ಹೊಟ್ಟೇ ಉರಿಸ್ತೀರಿ ಮಾರಾಯ್ರೆ.

    ReplyDelete
  2. ಈಶ್ವರ...ಚಂದದ ಬರಹ .. :))

    ReplyDelete
  3. ಕಿಣ್ಣ ಚಂದದ ಸಾಲುಗಳು.... ಬೇಗನೆ ಕಳಿಸುವ ವಿಳಾಸ ಸಿಗಲಿ.... :)

    ReplyDelete
  4. ಒಂದು ಕ್ಷಣ ಪ್ರತಿ ಸಾಲುಗಳು ನನ್ನ ಕಣ್ಣ ಮುಂದೆ ಬಂದವು ಮತ್ತು ಹಿತಾನುಭವ ನೀಡಿದವು! ಚೆನ್ನಾಗಿದೆ

    ReplyDelete
  5. Ultimate lines.

    Ashwath Hegde

    ReplyDelete