Thursday 18 October 2012

ಕತೆ- ರಾಜಮ್ಮನೂ ಊರಿನ ಕೆರೆಯೂ

ಅಕ್ಕಮ್ಮಾ, ನಂಗೆ ಚಿಂತೆ ಏನೇನೂ ಇಲ್ಲ ಕಣಮ್ಮ. ಮೊದಲು ಮಗ ಬರ್ಲಿ ಪೇಟೆಯಿಂದ, ಮದ್ವೆ ಆದ್ಮೇಲೆ ಇರೋ ಎರಡೆಕ್ರೆ ಜಮೀನು ನೋಡ್ಕಂಡು ಆರಾಮಾಗಿರ್ತಾನಂತೆ. ಸೊಸೆಯಾಗೋಳಂತೂ ಮೊದಲೇ ಪರಿಚಯದೋಳಲ್ವೇ, ಸುಧಾರ್ಸ್ಕಂಡು ಹೋಗ್ತಾಳೆ. ಈ ಗೌರಿ ಹಬ್ಬ ಮುಗಿದ ಕೂಡ್ಲೇ ಮದ್ವೆ ಮಾಡಿ ಮುಗ್ಸೋದು ... ಹೀಗೇ ಸಾಗಿತ್ತು ರಾಜಮ್ಮನ ಮಾತುಗಳು.
ಸ್ವಂತ ಊರು ಬೇರೆ ಆದರೂ ಸುಮಾರು ಮೂವತ್ತೈದು ವರ್ಷಗಳಿಂದ ಈ ಮನೆ ಈ ಹೊಲ, ಒಂದಿಪ್ಪತ್ತು ತೆಂಗಿನ ಮರಗಳೊಂದಿಗೆ ಆರಾಮವಾದ ಬದುಕು ರಾಜಮ್ಮನದು.ಕುಡಿದೇ ಟ್ರಾಕ್ಟರು ಓಡಿಸುತ್ತಿದ್ದ ಗಂಡನ ಸಂಪಾದನೆಯು ಮನೆಗಿರಲಿಲ್ಲದಿದ್ದರೂ ತೋಟದ ಆದಾಯದಿಂದಲೇ ಸರಕಾರಿ ಶಾಲೆಯಲ್ಲಿ ಪಿಯುಸಿ ತನಕ ಓದಿಸಿದ್ದಳು ಮಗನನ್ನು. ಮಗನೂ ಕಾರ್ ಡ್ರೈವರು ಈಗ ಬೆಂಗಳೂರಲ್ಲಿ. ಸುಮಾರು ೧೦ ವರ್ಷಗಳಿಂದ ಅಂದರೆ ಗಂಡನ ಮರಣಾನಂತರ ಏಕಾಂಗಿ ಜೀವನ ಒಗ್ಗಿಹೋಗಿತ್ತು ರಾಜಮ್ಮಳಿಗೆ, ಇದೀಗ ಮಗನ ಮದುವೆ ಮಾಡಿಸಿ ನಂತರ ಮಗನನ್ನೂ ಸೊಸೆಯನ್ನೂ ಮನೆಯಲ್ಲಿರಿಸಬೇಕೆಂಬ ಮಹದಾಸೆ ರಾಜಮ್ಮಳಿಗೆ.

ರಾಜಮ್ಮ ಏನೇನೂ ಓದಿರಲಿಲ್ಲದಿದ್ದರೂ ಒಳ್ಳೆಯ ವ್ಯವಹಾರಸ್ಥೆ. ಅವಳೇ ನಂಬಿರುವ ದೇವರುಗಳು ಅಪಾರವಾದ ಸಮಯೋಚಿತ ಬುದ್ಧಿಶಕ್ತಿಯನ್ನ ಕೊಟ್ಟಿದ್ದರು. ಹೀಗಾಗಿ ಯಾವುದೇ ವ್ಯವಹಾರದಲ್ಲಿ ರಾಜಮ್ಮ ನಷ್ಟ ಅನುಭವಿಸುತ್ತಿರಲಿಲ್ಲ.ತನ್ನ ತರಕಾರೀ ಬೆಳೆಗಳನ್ನು ಸರಿಯಾದ ಬೆಲೆಗೆ ಮಾರಿ ಅದರಿಂದ ಬಂಡವಾಳದ ಸರಿಯಾದ ವಿನಿಯೋಗ ಮಾಡುವ ಕಲೆ ಹುಟ್ಟಿನಿಂದಲೇ ಬಂದಿರಬೇಕು ರಾಜಮ್ಮನಿಗೆ. ಸ್ವಂತ ಬೋರ್’ವೆಲ್ ಕೊರೆಸಿ ಒಳ್ಳೆಯ ನೀರು ಸಿಕ್ಕಿದಾಗಂತೂ ರಾಜಮ್ಮನನ್ನು ಎಲ್ಲರೂ ಮೆಚ್ಚಿದವರೇ. ಸ್ವಂತ ಮನೆ, ರಸ್ತೆಯ ಸಮೀಪ ಇದ್ದುದರಿಂದ ಹೆಚ್ಚಾಗಿ ಒಳ್ಳೆಯ ಸಂಪರ್ಕವಿತ್ತು.

ಬೇಡ ಬೇಡ ಎಂದು ಮನದಲ್ಲಿ ಅಂದುಕೊಂಡರೂ ಮಗನನ್ನು ಬೆಂಗಳೂರಿಗೆ ಕಳುಹಿಸಲು ಗಟ್ಟಿ ಮನಸ್ಸು ಮಾಡಿದ್ದಳು. ಈಗ ೧೦-೧೫ ಸಾವಿರ ದುಡಿಯುವ ಮಗ ಮೇಲಿನ ಮನೆಯ ಅಕ್ಕಮ್ಮನ ಮಗನಿಗಿಂತ ಹೆಚ್ಚಿನವ. ಹಾಗಾಗಿ ಅಕ್ಕಮ್ಮನೊಂದಿಗೆ ತನ್ನ ಅಂತಸ್ತನ್ನು ಕಾಯ್ದುಕೊಂಡಳು ರಾಜಮ್ಮ.
--
ಊರು ಬೆಳೆಯುತ್ತಿರಬೇಕಾದರೆ ನೀರು ಜಾಸ್ತಿ ಬೇಕಲ್ಲವೇ?. ಯಾವತ್ತೂ ನೀರಿನ ಕೊರತೆ ಇರದಿದ್ದ ಊರಿಗೆ ಇತ್ತೀಚಿನ ವರ್ಷಗಳಲ್ಲಿ ಮಳೆಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತಾ ಬಂದಿದೆ. ಸರಕಾರವೂ ೩-೪ ವರ್ಷದಿಂದ ಗಂಭೀರ ಚಿಂತನೆಗಳನ್ನು ಮಾಡಿ ಕೊನೆಗೂ ಚುನಾವಣೆಯ ಕಾಲ ಸಮೀಪಿಸಿದಾಗ ಆ ಊರಿಗೊಂದು ಕೆರೆಯನ್ನೂ ಅದರ ಕಾಮಗಾರಿಯನ್ನೂ ಶುರುಮಾಡುವ ಕಾರ್ಯಕ್ಕೆ ಗಣನೀಯ ಕೊಡುಗೆ ಕೊಡುತ್ತಾ ಬಂತು. ಇತ್ತೀಚೆಗೆ ಅಂದರೆ ಸುಮಾರು ೭-೮ ತಿಂಗಳುಗಳ ಹಿಂದೆ ಕೊನೆಗೂ ಕೆರೆಗೊಂದು ರೂಪುರೇಶೆ ಅಂದಾಜು ವಿಸ್ತೀರ್ಣ ಇತ್ಯಾದಿಗಳ ಚರ್ಚೆಯಾಗಿ ಸುಮಾರು ಎರಡು ಹೆಕ್ಟೇರ್ ಜಾಗದಲ್ಲಿ ಕೆರೆಯಾಗುವುದೆಂದು  ನಿರ್ಧಾರವಾಗಿ ಕಾರ್ಯರೂಪಕ್ಕೂ ಬಂತು. ಊರಿನ ಶಾಲೆಯಲ್ಲೇ ಕಲಿತು ಊರಿನ ಬಗ್ಗೆ ಬಹಳ ಅಭಿಮಾನವನ್ನು ಹೊಂದಿದ ನಟರಾಜಪ್ಪ ಎನ್ನುವವನೇ ಪ್ರಧಾನ ಇಂಜಿನೀಯರ್ ಆದ.

ಕೆರೆಯ ಸುತ್ತಲೂ ಕಲ್ಲಿನ ಕಟ್ಟೆಯಂತೆ ಕಟ್ಟಿ ಕೆರೆಗೆ ಅಂದವನ್ನು ಕೊಡುವುದಕ್ಕೆ ನಡುಗಡ್ಡೆ. ಮುಂದೆ ಬೋಟಿಂಗ್ ಮುಂತಾದ ವ್ಯವಸ್ಥೆ ಮಾಡುವುದಕ್ಕೆ ಅನುಕೂಲವಾಗುವಂತೆ ಎಲ್ಲಾ ರೀತಿಯಿಂದಲೂ ಸುಸಜ್ಜಿತಗೊಳಿಸಲಾಯಿತು.
ಇದೆಲ್ಲಾ ವಿಶೇಷವಾಗಿ ಆನಂದ ನೀಡಿದ್ದು ರಾಜಮ್ಮನಿಗೆ ಎಂದರೆ ಆಶ್ಚರ್ಯವಾಗಲಿಕ್ಕಿಲ್ಲ. ಬೋರ್’ವೆಲ್ ನೀರು ಕ್ರಮೇಣ ಕಡಿಮೆಯಾಗುತ್ತಾ ಬಂದಿದ್ದು ರಾಜಮ್ಮನ ಗಮನಕ್ಕೆ ಬಂದಿತ್ತು. ಈ ಕೆರೆಯಾದರೆ ನೀರು ಸಮೃದ್ಧಿಯಾಗುವುದರಲ್ಲಿ ಸಂದೇಹವಿರಲಿಲ್ಲ ರಾಜಮ್ಮನಿಗೆ.

ಹಳೆ ಕೆರೆಯ ಹೊಳೆತ್ತಲಾಯಿತು. ಕಟ್ಟೆ ಕಟ್ಟಲಾಯಿತು. ಈಗ ನೀರು ಬಿಡುವುದೆಂದು ತೀರ್ಮಾನವಾಯಿತು. ಹೀಗೆ ಒಂದು ದಿನ ನದಿಯ ಕಾಲುವೆಯಿಂದ ನೀರನ್ನು ಕೆರೆಗೆ ಹರಿಸಲಾಯಿತು. ಸುಮಾರು ಎರಡು ತಿಂಗಳು ನೀರನ್ನು ಹರಿಸಿದ್ದರಿಂದ ಹಸಿದಿದ್ದ ಭೂಮಿ ಬೇಕಾದಷ್ಟನ್ನು ಕುಡಿದು ಉಳಿದಿದ್ದನ್ನು ಮೈತುಂಬಾ ಹೇರಿಕೊಂಡಳು. ನೀರು ದಿನೇ ದಿನೇ ಕೆರೆಯನ್ನು ಸಾಗರದಂತೆ ಕಾಣಿಸಲು ಪ್ರಯತ್ನಮಾಡಿತು. ಊರು ತಂಪಾಯಿತು. ಕೆರೆ ನೀರು ತುಂಬಿ ಊರಿಗೊಂದು ವಿಶಿಷ್ಟ ಮೆರುಗು ತಂದುಕೊಟ್ಟಿತು. ನಟರಾಜಪ್ಪನ ಮನೆಗೆ ಕಾರೂ ಬಂತು.
-
ದಿನವು ನಿನ್ನೆಯಂತೇ ಇದ್ದರೆ ಭೂಮಿ ಚಲನಶೀಲ ಎನ್ನುವುದು ಸುಳ್ಳಾಗುತ್ತಿತ್ತೇನೋ ಅದಕ್ಕೆಂದೇ ರಾಜಮ್ಮನ ಬೋರು ನೀರು ತುಂಬಿ ಹರಿಯತೊಡಗಿತು. ಎಲ್ಲೆಲ್ಲಿಯೂ ನೀರು. ರಾಜಮ್ಮ ಖುಷಿಯಿಂದ ಸ್ವಲ್ಪದಿನ ಊರಿನವರೊಂದಿಗೆ ಅಂತರ ಕಾಯ್ದುಕೊಂಡಳು. ಹೀಗೇ ಆಗುತ್ತದೆ ಎಂದು ಯಾವುದನ್ನೂ ಹೇಳುವ ಹಾಗಿಲ್ಲವಲ್ಲ. ಆ ದಿನ ಬೆಳಗ್ಗೆ ರಾಜಮ್ಮ ಎದ್ದು ಕಣ್ಣುಜ್ಜುತ್ತಾ ಹೊರಗೆ ಬರುತ್ತಿರಬೇಕಾದರೆ ಜಾರಿ ಬಿದ್ದಳು. ಯಾವ ಪುಣ್ಯದಿಂದಲೋ ರಾಜಮ್ಮನಿಗೆ ಏನೂ ಆಗಲಿಲ್ಲ.ಹೊರಗೆ ಬಂದಾಗ ಜಮೀನಿನಲ್ಲಿ ನೀರು ಹಾಯಿಸಿದಂತೆ ಇತ್ತು.ಅದೂ ರಾಜಮ್ಮ ಮಾಡಿದ ಕಾರ್ಯವಾಗಿರಲಿಲ್ಲ. ಆದರೆ ಮನಸ್ಸಿಗೆ ಒಂದು ಆಘಾತ!

ಇದೇಕೆ ಹೀಗೆ, ನೆಲವು ಬೆವರಿದಂತೆ ನೆಲದ ಮೇಲೆಲ್ಲಾ ನೀರು ಎಂದು ತಿಳಿಯುವುದಕ್ಕೆ ರಾಜಮ್ಮನಿಗೆ ಅಕ್ಕಮ್ಮನ ಸಹಾಯವೇ ಬೇಕಾಯಿತು. ಮನೆಯು ಕೆರೆಯ ಬದಿಯ ರಸ್ತೆಯ ಕೆಳಗಿದ್ದುದರಿಂದ ಕೆರೆಯ ನೀರೇ ಅದು ಎಂದು ಅಕ್ಕಮ್ಮ ಹೇಳಿದ್ದು ರಾಜಮ್ಮನ ಹೊಟ್ಟೆಯನ್ನು ತಲುಪಿ ನೋವಿನ ಬೆಂಕಿಯನ್ನು ಹುಟ್ಟುಹಾಕಿತು. ಮನೆಯಲ್ಲೆಲ್ಲಾ ನೀರಿನ ಸಣ್ಣ ಸಣ್ಣ ಹನಿಗಳನ್ನು ಒರೆಸಿ ಒರೆಸಿ ಸಾಕಾಗುತ್ತಿತ್ತು ರಾಜಮ್ಮನಿಗೆ, ನೀರು ತಂಪೆನಿಸುತ್ತಿರಲಿಲ್ಲ.

ಮಗ ಬೆಂಗಳೂರಿನಿಂದ ಬಂದಮೇಲೆ ಮನೆಯನ್ನು ಸೂಕ್ಷ್ಮವಾಗಿ ಗಮನಿಸತೊಡಗಿದ. ಕೆರೆಯ ನೀರಿನ ಮಟ್ಟವು ಮನೆಯ ಗೋಡೆಯ ಎತ್ತರವಿರುವುದನ್ನು ಗಮನಿಸಿ ಮನೆ ಅಂಜಿಕೆಯಾಗತೊಡಗಿತು. ರಾಜಮ್ಮ ಅದೇ ಕಾಲಕ್ಕೆ ಮಗನ ಮದುವೆಯ ವಿಚಾರವನ್ನೂ ಎತ್ತಿದ್ದರಿಂದ ಗೊಂದಲಕ್ಕೆ ಬಿದ್ದ ಮಗ. ಒಪ್ಪಿದ. ಕೊನೆಗೆ ಹುಡುಗಿ ಮತ್ತವರ ಸಂಬಂಧಿಕರು ಮನೆಗೆ ಬಂದು ಹೋದರು. ಹೋಗುವಾಗ ಮಗನ ಬಳಿ ಏನೋ ಹೇಳಿದ್ದು, ಮಗನ ಮುಖ ಕಪ್ಪಿಟ್ಟಿದ್ದು ಗಮನಿಸಿದ್ದಳು ರಾಜಮ್ಮ.

ಅದೇ ದಿನ ರಾಜಮ್ಮನಿಗೆ ಹೃದಯಾಘಾತವಾಗುವುದು ಪ್ರಕೃತಿಗೆ ವಿರೋಧವಿತ್ತೇನೋ, ಹಾಗಾಗಲಿಲ್ಲ. ಸೊಸೆಯೆಂದೇ ಅಂದುಕೊಂಡಿದ್ದ ಹುಡುಗಿ ಈ ಮನೆಗೆ ಬರುವುದಿಲ್ಲವೆನ್ನುವ ಮಾತಿಗಿಂತ ಮಗ ಹೇಳಿದ ಮಾತು ಇನ್ನೂ ಕಠೋರವಾಗಿತ್ತು. ಎರಡೆಕರೆ ಜಮೀನು ಮತ್ತೆ ಮನೆಯನ್ನು ಮಾರಿ ಬೇರೆ ಕಡೆ ಹೋಗೋಣ ಎಂದು ಹೇಳಿದ್ದ ಮಗ. ಕಾರಣ ಜಮೀನು ನೀರಿನಿಂದ ಕೊಳೆತಂತಾಗಿ ಮುಂದೆ ಬೆಳೆಯಾಗಲೀ ಕಳೆಯೂ ಬೆಳೆಯುವುದು ಸಾಧ್ಯವಿಲ್ಲ ಎನ್ನುವುದೇ ಆಗಿತ್ತು. ಯಾವುದೋ ದಿನ ನೀರಿನ ಅಂಶದಿಂದ ಮಣ್ಣಿನ ಗೋಡೆ ಬೀಳುವುದು ಖಚಿತವೆಂದೂ ಮಗನ ವಾದ. ಆ ರಾತ್ರಿ ಮಗ ಸ್ನೇಹಿತನ ಮನೆಗೆ ಹೊರಟ. ಅಲ್ಲಿಂದ ಬೆಂಗಳೂರಿಗಂತೆ!

ತಾನು ೧೦-೧೨ ವರ್ಷಗಳಿಂದ ಕಷ್ಟಪಟ್ಟು ಬೆಳೆಸಿದ ತೋಟ, ಮನೆ, ಅದಕ್ಕಿದ್ದ ಬೆಲೆ ಇದೆಲ್ಲವನ್ನೂ ಒಂದು ಸಣ್ಣ ಕಾಲದಲ್ಲಿ ನೀರಿನ ಗುಳ್ಳೆಯಂತೆ ಮಾಡಿದ ಶಕ್ತಿಯನ್ನು ಮನಸಾರೆ ಶಪಿಸಿದಳು. ಸಾಧ್ಯವೇ ಇರಲಿಲ್ಲ. ಈ ಮನೆ ಈ ಜಮೀನು ಬಿಟ್ಟು ತಾನು ಎಲ್ಲಿಯೂ ಬದುಕುವುದು ಸಾಧ್ಯವೇ ಇಲ್ಲ. ಈ ವಿಷಯ ನಿಚ್ಚಳವಾಗುತ್ತಾ ರಾಜಮ್ಮನ ಮನಸ್ಸಿನಲ್ಲಿ ಮುಂದಿನ ಕ್ರಿಯೆಯ ಸ್ಪಷ್ಟ ಚಿತ್ರಣ ಮೂಡತೊಡಗಿತು.

ಅದೇ ಕೆರೆಯ ಸುತ್ತಲೂ ನಡೆದುಕೊಂಡು ಬಂದಳು ರಾಜಮ್ಮ. ಕಾಲುವೆಯ ಗೇಟುಗಳ ಬಳಿ ಕಟ್ಟಿದ ಕಟ್ಟೆಯನ್ನು ಗುದ್ದಲಿಯಿಂದ ಕೊಚ್ಚಲಾರಂಭಿಸಿದಳು. ಅಂದಿನ ರಾಜಮ್ಮನ ರಾಕ್ಷಸ ಶಕ್ತಿಗೆ ಕೆರೆಯ ಕಟ್ಟೆ ಸಣ್ಣದಾಗುತ್ತಾ ಬಂತು, ನೀರಿನ ಒತ್ತಡಕ್ಕೂ ರಾಜಮ್ಮನ ಕೆಲಸಕ್ಕೂ ನೀರು ಪ್ರವಾಹದಂತೆ ಕಟ್ಟೆಯನ್ನು ಒಡೆದು ಪ್ರವಹಿಸಿತು. ಆ ಪ್ರವಾಹದಲ್ಲಿ ರಾಜಮ್ಮನ ಗುದ್ದಲಿ ತೇಲಿಹೋಯಿತು, ರಾಜಮ್ಮನೂ ಕೊಚ್ಚಿಹೋದಳು.
-
ಸರಕಾರದ ಕಾಮಗಾರಿ ಕಳಪೆಯೆಂದೂ, ಕೆರೆಯ ಕಟ್ಟೆಯೊಡೆದು ತರಕಾರಿ ಮಾರುವ ರಾಜಮ್ಮಳ ಜೀವಾಪಹರಣವಾಯಿತೆಂದೂ ಪೇಪರುಗಳಲ್ಲಿ ಬಂತು. ಪರಿಹಾರವಾಗಿ ಸಿಕ್ಕಿದ ಲಕ್ಷರೂಪಾಯಿಗಳನ್ನು ರಾಜಮ್ಮನ ಹೆಸರಿನಿಂದ ಮಗ ತೆಗೆದುಕೊಂಡು ಬೆಂಗಳೂರು ನಗರದಲ್ಲು ಲೀಸ್ ಮನೆ ಪಡೆದುಕೊಂಡು ಮದುವೆಯಾಗಿ ಸುಖವಾಗಿದ್ದಾನೆ. ಈ ಬಾರಿ ಇನ್ನೂ ಹೆಚ್ಚಿನ ತಂತ್ರಜ್ಞಾನದ ಮೂಲಕ ಕೆರೆಗೆ ಕಟ್ಟೆ ಕಟ್ಟಲಾಗುವುದೆಂದೂ ಪತ್ರಮುಖೇನ ಸಚಿವರು ತಿಳಿಸಿದ್ದಾರೆ..

10 comments:

  1. ಹ್ಮ್.. Narration ಚೆನ್ನಾಗಿದ್ದು.. Expected ending :)

    ReplyDelete
  2. ಚೆನ್ನಾಗಿದ್ದು.. :-) :-(

    ReplyDelete
  3. This comment has been removed by the author.

    ReplyDelete
    Replies
    1. ಬದಲಾವಣೆಯನ್ನು ಸ್ವಾಗತಿಸುವ ಹಳ್ಳಿಗರಿಗೆ ಬೆನ್ನಲ್ಲೇ ಕಾದಿರುವ ಭಯಂಕರತೆಯ ಒಂದು ಸಚಿತ್ರ ವರದಿ ಈ ಕಥನ.

      ನಿರೂಪಣಾ ಶೈಲಿಯಲ್ಲೂ ಮತ್ತು ಕಥನ ಹೂರಣದಲ್ಲೂ ಮಿಂಚಿದ್ದೀರಿ.

      Delete
  4. ನೆಲದೊಳಗೆ ಬೇರು ಬಿಟ್ಟುಕೊಂಡ ಜೀವಕ್ಕೆ ಟ್ರಾನ್ಸ್ ಪ್ಲಾಂಟ್ ಮಾಡುವದು ಕಷ್ಟ.ಈ ರಾಜಮ್ಮನಿಗೂ,ನಮ್ಮೂರಿನ ಹಳೆಯ ಜೀವಗಳಿಗೂ ಅಷ್ಟೇನೂ ವ್ಯತ್ಯಾಸವಿಲ್ಲ.
    ಭಟ್ರೇ,ನೀವು ಈ ಥರ ಚಿಕ್ಕ,ಚೊಕ್ಕ ಕತೆಗಳನ್ನು ಬರೆಯುವದನ್ನು ದಯವಿಟ್ಟು ಮುಂದುವರೆಸಿ.
    -RJ

    ReplyDelete
  5. ಚೆನ್ನಾಗಿದೆ.. ಈಗಿನ ಪಟ್ಟಣ ಜೀವನದಲ್ಲಿ ಎಲ್ಲ ಪ್ರಯೋಗಶೀಲ. ಇಂದಿರುವುದು ನಾಳೆಯಿಲ್ಲ. ಹಳ್ಳಿಯ ಆ ಭಾವನಾತ್ಮಕ ಜೀವನ, ಪ್ರತಿಯೊಂದು ಜೀವ, ನಿರ್ಜೀವ ವಸ್ತುಗಳ ಜೊತೆ ಬೆಳೆಸಿಕೊಳ್ಳುವ ಬಾಂಧವ್ಯ, ಪ್ರೀತಿ
    ಜೀವನಕ್ಕೆ ಒಂದು ಅರ್ಥ ಕೊಡುವಂಥವು. ನಾ. ಡಿಸೋಜರವರ 'ದ್ವೀಪ' ಕಾದಂಬರಿ ನೆನಪಾಯಿತು.

    ReplyDelete
  6. ಒಳ್ಳೆಯ ಕಥೆ ಈಶ್ವರಣ್ಣ... ನೆಲದ ನಂಟನ್ನು ಬಿಡದ ಜೀವ ಪರಿಪರಿಯಾಗಿ ಪರಿತಪಿಸಿ ಹವಣಿಸಿದೆ. ಎಲ್ಲೋ ಒಂದು ಕಡೆ ತಾಯಿ ಮಮತೆಯೂ ಕೆಲಸ ಮಾಡಿತು ಎನಿಸುತ್ತದೆ. ಚೆನ್ನಾಗಿದೆ ಕಥೆ.. ನಿರೂಪಣೆ ಓದಿಸಿಕೊಂಡು ಹೋಗುತ್ತದೆ...

    ReplyDelete