Thursday, 11 October 2012

ಅಪ್ಪಚ್ಚಿ ಹೇಳಿದ ಅಪ್ಪನ ಕತೆ :ಭಾಗ ೧ (ಪ್ರವಾಹದ ಕತೆ)

ಇದೇನು ಅಪ್ಪಚ್ಚಿ ಎಂದರೆ? ನಮ್ ಕಡೆ ಹೀಗೇ, ಅಂದ್ರೆ ಹವ್ಯಕ ಭಾಷೆಯಲ್ಲಿ ಅಪ್ಪಚ್ಚಿ ಅಂದ್ರೆ ಚಿಕ್ಕಪ್ಪ ಎಂದು. ಈಗ ಹೇಳಲಿರುವ ಕಥೆಗಳು ಮಾತ್ರ ಇಂತಹ ಒಬ್ಬ ಅಪ್ಪಚ್ಚಿ ಹೇಳಿದ ನಮ್ಮ ನಾಯಕನ ಅಪ್ಪನ ಕಥೆ.
--
ಭಾಗ ೧.

ಅಪ್ಪಚ್ಚಿ ಹೇಳಿದ ಕಥೆ (೧೯೭೦, ಊಹಿತ ವರ್ಷ) : ಆ ಕಾಲಕ್ಕೆ ಒಂದು ಅದ್ಭುತ ಮನೆಯಾಗಿತ್ತು ಅದು. ಈಗಿನ ಊರು ಬಿಡು, ಹತ್ತಿರದ ಹತ್ತು ಹದಿನೈದು ಊರಿಗೂ ನಮ್ಮ ಮನೆತನ ಹೇಳಿದರೆ ಹೆಸರುವಾಸಿ. ಆಗ ನನಗೆ ೧೦ ನಿನ್ನ ಅಪ್ಪನಿಗೆ ೧೨ ವರ್ಷ ವಯಸ್ಸು. ತೋಡಿನಲ್ಲಿ (ಸಣ್ಣ ನದಿಗಳಿಗೆ ತೋಡು ಎಂದೇ ಕರೆಯುವುದು ನಮ್ಮ ಕಡೆ!) ಮಳೆಗಾಲದಲ್ಲಿ ತೆಂಗಿನಕಾಯಿ ಹಿಡಿಯುವುದು ಈಗ ನೆಟ್’ನಲ್ಲಿ ಹುಡುಗಿಯನ್ನ ಹುಡುಕುವುದಕ್ಕಿಂತ ಸಾಹಸದ ಕೆಲಸ. ಇದಕ್ಕೆ ನಿಯೋಜಿತವಾಗಬೇಕಿದ್ದರೆ ಮೊದಲು ಕೆರೆಯಲ್ಲಿ ಕೈಕಾಲು ಬಡಿದು ಪ್ರಾಕ್ಟೀಸು ಮಾಡಿರಬೇಕು. ಮತ್ತೆ ನಾಯಕ ಹೇಳುವ ಕೆಲಸ ಮಾತ್ರ ಮಾಡಬೇಕು. ಹೆಚ್ಚಾಗಿ ದೂರದಲ್ಲಿ ಸಾಗುವ ಕಾಯಿಯನ್ನು ಹಿಡಿಯಲು ನಾಯಕನಿಗೆ ಮಾತ್ರ ಅವಕಾಶ.
ಇಂತಹದ್ದರಲ್ಲಿ ನಿನ್ನ ಅಪ್ಪನಿಗೆ ಸಿಕ್ಕಿದ ಅವಕಾಶದ ಬಗ್ಗೆ ಆಗ ನಮಗೆಲ್ಲ ಹೆಮ್ಮೆ. ಚೆನ್ನಾಗಿ ಈಜು ಕಲಿತಿದ್ದ ನಿನ್ನ ಅಪನಿಗೆ ಇಂತಹ ಅವಕಾಶ ಸಿಕ್ಕಿತು. ಆ ದಿನ, ಜುಲೈ ಆಗಿರಬೇಕು. ಬೆಕ್ಕೂ ತನ್ನ ದೈನಂದಿನ ವಿಧಿಗಳನ್ನ ಮನೆಯ ಅಟ್ಟದಮೇಲೇ ಪೂರೈಸಿಕೊಳ್ಳುವಷ್ಟು ಮಳೆ.

ಇಂತಹ ಅಮೋಘ ಮಳೆಯ ದಿನ ಜಗ್ಗು,ಶಾಮ, ಕೇಶವ, ನಾನು ಮತ್ತೆ ನಿನ್ನ ಅಪ್ಪ ಪ್ರವಾಹದಲ್ಲಿ ತೆಂಗಿನ ಕಾಯಿ ಹಿಡಿಯಲು ಹೊರಟೆವು. ನಿನ್ನಪ್ಪ ಎಲೆಅಡಿಕೆ ಜಗಿಯುತ್ತಿದ್ದರೂ ಜಗ್ಗು ಬೀಡಿ ಸೇದುತ್ತಿದ್ದರೂ ಮನೆಯಲ್ಲಿ ಯಾರಿಗೂ ಗೊತ್ತಿರಲಿಲ್ಲ. ಹಾಗಾಗಿ ನಮ್ಮಲ್ಲೇ ರಾಜಾರೋಷವಾಗಿ ಇಬ್ಬರೂ ರಾಜಿಸುತ್ತಿದ್ದರು.
--
ದೊಡ್ಡ ನದಿಯಲ್ಲವದು. ಮಳೆಗಾಲದಲ್ಲಿ ಮಾತ್ರ ಸ್ವಲ್ಪ ಭಯ ಹುಟ್ಟಿಸುತ್ತಿತ್ತು. ನಾವು ತೋಡು ಎಂದೇ ಕರೆಯುವುದು. ಈಗಿನ ಭಾಷೆಯಂತೆ ಅದನ್ನು ನದಿ ಎನ್ನುವ ಹಾಗಿಲ್ಲ. ನದಿ ಎಂದರೆ ನೇತ್ರಾವತಿ ನೋಡು.
ಆ ದಿನ ಯಾವನನ್ನು ಮಳೆಗೆ ರಾಜನನ್ನಾಗಿಸಿದ್ದಾರೋ, ಎಡೆಬಿಡದೆ ಸುರಿಯುತ್ತಿದ್ದ. ಅದೂ ಭೂಮಿಯಲ್ಲಿ ನೀರಾದ ಮೇಲೆ ಬಂದ ಮಳೆಯಾದುದರಿಂದ ಬಿದ್ದ ನೀರು ಹಾಗೆಯೇ ತೋಡು ಸೇರುತ್ತಿತ್ತು.
-
ಈಜುವುದು ಸಣ್ಣಕೆರೆಯಿಂದಾರಂಭಿಸಿದ್ದು. ಉತ್ಸಾಹ ಹೆಚ್ಚಿದಂತೆ ಕಲಿಯುವ, ಕಲಿತಂತೆ ಫಲಿತವಾಗುವ ಅನುಭವ ಈಜಿನಿಂದ ಸಿಗುವಷ್ಟು ಯಾವುದರಿಂದಲೂ ಸಿಗುವುದಿಲ್ಲವೆನಿಸುತ್ತದೆ. ಎಲ್ಲರೂ ಒಂದೇ ರೀತಿಯ ಜಲಸ್ಥಂಭ ವಿದ್ಯೆ ಕಲಿತವರು. ಹಾಗಾಗಿ ಎಲ್ಲರಲ್ಲೂ ಸಮಾನತೆಯಿತ್ತು. ಎಲ್ಲರಿಂತ ಸ್ವಲ್ಪ ಕುಳ್ಳನಾದ ಮತ್ತು ಸಣ್ಣವನಾದ ನನ್ನ ಮೇಲೆಯೇ ಕಡಿಮೆ ಹೊರೆಯಿತ್ತು. ನಿನ್ನ ಅಪ್ಪ ಮತ್ತೆ ಜಗ್ಗು ತುಂಬಾ ಉತ್ಸಾಹಿಗಳು ಮತ್ತೆ ಧೈರ್ಯ ಜಾಸ್ತಿ. ಮರದ ತುಂಡು ಕಂಡರೂ ಹಾರುತ್ತಿದ್ದರು ಹಿಡಿಯುವುದಕ್ಕೆ.

ಹೇಳಿದಂತೆ ಮಳೆಯ ಪ್ರವಾಹ ಎಲ್ಲರ ತೋಟವನ್ನೂ ಹೊಕ್ಕು ಬೇಕಾದುದನ್ನು ತನ್ನ ಹೊಟ್ಟೆಗಿಳಿಸಿ ಬೇಡದುದನ್ನು ತೋಟಗಳಲ್ಲಿಯೇ ಬಿಟ್ಟು ಬರುತ್ತಿತ್ತು. ಶಂಕರಜ್ಜನ ತೋಟದೆದುರು ನಾವೆಲ್ಲಾ ಸೇರಿದೆವು. ದಿನಾ ನೀರು ನೋಡುತ್ತಿದ್ದಂತೆ ಇರಲಿಲ್ಲ ಅಂದು. ಈಗಿನ ವರೆಗೂ ನಾನು ಆದಿನ ಕಂಡಂತ ಪ್ರವಾಹ ನೋಡಿಲ್ಲ. ಮಳೆ ಮುಂದುವರೆದಂತೆ ಕ್ರಮೇಣ ತಿಳಿಯಾಗಬೇಕಿತ್ತು ನೀರು. ಇದು ಕಣ್ಣನ್ ದೇವನ್ ಚಹಾದಂತೆ ಮತ್ತಷ್ಟು ರಂಗಿನೊಂದಿಗೆ ಮತ್ತೇರಿಸುತ್ತಿತ್ತು.

ತೆಂಗಿನಮರವೇ ಬರುವ ಪ್ರವಾಹದಲ್ಲಿ ತೆಂಗಿನಕಾಯಿ ಬಾರದೇ? ಸುಮಾರು ೧೦-೧೨ ತೆಂಗಿನಕಾಯಿಗಳಾಗಿತ್ತು ಹಿಡಿದದ್ದು. ನೀರು ಹೆಚ್ಚುತ್ತಿತ್ತು. ಭಯವೂ ಹೆಚ್ಚುತ್ತಿತ್ತಿ. ನಿನ್ನಪ್ಪನಿಗೂ ಜಗ್ಗುವಿಗೂ ಉತ್ಸಾಹ ಅತಿಯಾಗುತ್ತಿತ್ತು. ಕಾಯುತ್ತಿದ್ದರು ಪ್ರವಾಹಕ್ಕೆ ಜಿಗಿಯಲು. ಅದೇ ಸಮಯಕ್ಕೆ ಎರಡು ತೆಂಗಿನಕಾಯಿಗಳು ಬಂತು. ಇಬ್ಬರೂ ಜಿಗಿದರು ಪ್ರವಾಹಕ್ಕೆ. ಒಂದು ಕ್ಷಣದಲ್ಲಿ ಏನಾಯಿತು ಎಂದು ತಿಳಿಯುವಷ್ಟರಲ್ಲಿ ಇಬ್ಬರೂ ತುಂಬಾ ದೂರದಲ್ಲಿ ಪ್ರವಾಹದಲ್ಲಿ ತೇಲಿ ಸಾಗುತ್ತಿದ್ದರು. ಜಗ್ಗುವೂ ನಿನ್ನಪ್ಪನೂ ನಮ್ಮೆಲ್ಲರ ಕಣ್ಣಿಂದ ಮರೆಯಾದರು.

ನಾವು ಸುಮಾರು ಎರಡು ಗಂಟೆಗಳ ಕಾಲ ನೀರು ನೋಡುತ್ತಾ ಅವರನ್ನು ಕಾದು ಕುಳಿತೆವು. ಸಂಜೆಯಾದರೂ ಇವರಿಬ್ಬರ ಪತ್ತೆ ಇರಲಿಲ್ಲ. ಪ್ರವಾಹದಲ್ಲಿ ಈಜಿಕೊಂಡು ಮೇಲೆ ಬರುವುದು ಸಾಧ್ಯವಿಲ್ಲ. ಬದಿಯಲ್ಲೇ ನಡೆದುಕೊಂಡು ಬರಬೇಕು. ಏನು ಮಾಡುವುದು ಎಂದು ತಿಳಿಯದೆ ಸುಮ್ಮನೇ ಇದ್ದೆವು. ಮನೆಯಿಂದ ಕೇಶವನ ಅಪ್ಪ ನಮ್ಮನ್ನು ಹುಡುಕಿಕೊಂಡು ಬಂದರು. ಮುಚ್ಚಿಡಲಾಗದೇ ಹೇಳಿದೆವು. ನಮ್ಮೆಲ್ಲರ ಮನೆಯವರೆಗೆ ಸುದ್ಧಿ ಹೋಯಿತು. ಜಗ್ಗುವಿನ ಅಮ್ಮನ ಗೋಳಾಟವಂತೂ ನೋಡುವಂತದ್ದಲ್ಲ. ಒಬ್ಬನೇ ಮಗ ಬೇರೆ. ನನ್ನನ್ನು ಹೊರತು ಪಡಿಸಿ ಎಲ್ಲರಿಗೂ ಏಟುಗಳು ಬೇರೆ ಸಿಕ್ಕಿ ಮಳೆಯ ಚಳಿಯು ಮರೆತೇ ಹೋಗಿತ್ತು.

ಮಳೆಯ ಕಾರಣಕ್ಕೆ ಮರುದಿನ ಶಾಲೆಗೆ ರಜೆ. ಎಲ್ಲಾ ಸಂಬಂಧಿಕರು ಜಗ್ಗು ಮತ್ತು ನಿನ್ನ ಅಪ್ಪನ ಅನ್ವೇಷಣೆಯಲ್ಲಿ ತೊಡಗಿದ್ದರು. ಮರುದಿನ ಮಧ್ಯಾಹ್ನವಾಗಿತ್ತು. ಜಗ್ಗು ಮತ್ತೆ ನಿನ್ನಪ್ಪ ಇದ್ದಕ್ಕಿದ್ದಂತೇ ಮನೆಯಲ್ಲಿ ಪ್ರತ್ಯಕ್ಷವಾಗಿದ್ದರು ಅದೂ ೨೦-೨೫ ತೆಂಗಿನಕಾಯಿಗಳೊಂದಿಗೆ. ಎಲ್ಲರಿಗೂ ಸಂತೋಷವೂ ರೋಷವೂ ಒಟ್ಟಿಗೇ ಬಂದಿತ್ತು. ಕ್ರಮೇಣ ಹುಡುಕುತ್ತಿದ್ದವರಿಗೆ ಸುದ್ಧಿ ಸಂಚಾರವಾಗಿ ಎಲ್ಲರೂ ಮನೆಯ ಕಡೆ ಬಂದರು. ಏನೇ ತೀರ್ಮಾನವಾದರೂ ನಮ್ಮ ಹಳೆಯ ಮನೆಯಲ್ಲೇ ತಾನೇ?. ಇಬ್ಬರಿಗೂ ಮೊದಲು ಬಿದ್ದಿದ್ದು ಏಟು. ನಾವು ಮೊದಲು ಖುಷಿಪಟ್ಟರೂ ಕೊನೆಗೆ ನಮಗೇ ಏಟು ಬಿದ್ದಂತೆ ಅನಿಸುತ್ತಿತ್ತು. ಅದೆಲ್ಲಾ ಆದ ಮೇಲೆ ಕತೆಯನ್ನು ಕೇಳತೊಡಗಿದರು.

ಪ್ರವಾಹದಲ್ಲಿ ಬಿದ್ದ ಇಬ್ಬರೂ ಬದಿಗೆ ಬರಲಾಗದೆ ಸುಮ್ಮನೆ ತೇಲುತ್ತಾ ಹೋದರು. ಮುಂದೆ ಹೋದಂತೆ ಒಂದು ಕಡೆ ಕವಲೊಡೆಯುತ್ತದೆ ತೋಡು. ಅಲ್ಲಿ ಮಧ್ಯದಲ್ಲಿ ನಡುಗಡ್ಡೆಯ ಮೇಲೆ ಎಸೆದಂತೆ ಇಬ್ಬರನ್ನೂ ನೀರು ಬಿಟ್ಟು ಮುಂದುವರೆಯಿತು. ಆಗ ಸುಮಾರು ಸಂಜೆಯಾಗಿತ್ತಂತೆ. ಮುಳ್ಳು ಜಿಗ್ಗುಗಳಿಂದ ಕೂಡಿದ ಆ ಜಾಗದಲ್ಲಿ ಇಬ್ಬರೂ ಉಳಿದುಬಿಟ್ಟರು. ಎರಡೂ ಬದಿಗೆ ಪ್ರವಾಹವಿರುವುದರಿಂದ ಹೊರಗೆ ಬರುವುದು ಅಸಾಧ್ಯವಾದ ಮಾತಾಗಿತ್ತು. ಹಾಗೆಯೇ ನೀರಿನ ಮೇಲೆ ಸಣ್ಣ ಭಯವೂ ಉಂಟಾಗಿತ್ತು ಇಬ್ಬರಿಗೂ.

ರಾತ್ರಿಯಿಡೀ ಹೇಗೋ ಅಲ್ಲಿಯೇ ಕಳೆದರು ಇಬ್ಬರೂ. ನೀರು ಕ್ರಮೇಣ ಕಡಿಮೆಯಾಗುತ್ತಿತ್ತು ಬೆಳಗ್ಗೆ. ಅದೇ ಸಮಯಕ್ಕೆ ಇಬ್ಬರಿಗೂ ಇನ್ನೊಂದು ಆಲೋಚನೆ ಬಂತು. ನಮ್ಮನ್ನೇ ಎಸೆದು ಹೋದ ನೀರು ಎಷ್ಟು ತೆಂಗಿನಕಾಯಿ ಇಲ್ಲಿ ಎಸೆದಿರಬಹುದೆಂದು? ಆ ರೀತಿ ಕಾರ್ಯಪ್ರವೃತ್ತರಾದ ಇವರು ಅಲ್ಲಿಂದ ತೆಂಗಿನ ಕಾಯಿಗಳನ್ನು ಆರಿಸಿಕೊಂಡು ಅದನ್ನು ಅಲ್ಲೆಲ್ಲೋ ಸಿಕ್ಕಿದ ಬಟ್ಟೆಯನ್ನು ಗಂಟುಗಳನ್ನಾಗಿ ಮಾಡಿ ತೆಗೆದುಕೊಂಡು ಮದ್ಯಾಹ್ನದ ಹೊತ್ತಿಗೆ ಮನೆ ತಲುಪಿದ್ದರು. ಇದಕ್ಕೆ ಪ್ರಶಸ್ತಿಯನ್ನು ಕೊಡಬೇಕಿತ್ತು ಅಲ್ಲವೇ? ಏಟು ಸಿಕ್ಕಿತು.

೧೧/೧೦/೨೦೧೨

19 comments:

 1. ಹಹ, ಸೂಪರು ಕಿರಣ,ನಿರೂಪಣೆ ಚಂದ ಆಯ್ದು :) ಈ ತರಹದ ಅನುಭವ (ನಾ ನೋಡಿದ್ದು) ನನ್ನ ಸ್ನೇಹಿತನದ್ದು ಇದ್ದು, ಈಜಾಟ ಕಲಿಯುವವರ ಪ್ರಕರಣ.ಬಾಲ್ಯದ ನೆನಪುಗಳ ನೆನಪಾಯಿತು

  ReplyDelete
 2. ಚೆನ್ನಾಗಿದೆ ಕಿರಣ ಭಟ್ರೇ....:-)
  ನಿಜವಾಗಿಯೂ ತುಂಬು ಪ್ರವಾಹದಲ್ಲಿ ಹಾರಿ ತೆಂಗಿನಕಾಯಿ ಹಿಡಿಯುವುದು ಅದ್ಭುತ ಸಾಹಸವೇ ಸರಿ. ಜೀವವನ್ನು ಪಣಕ್ಕಿಟ್ಟು ಮಾಡುವ ಕೆಲಸ.ಯಾಕೆಂದರೆ ಪ್ರವಾಹದಲ್ಲಿ ಬರುವುದು ಬರಿಯ ತೆಂಗಿನಕಾಯಿ ಮಾತ್ರ ಅಲ್ಲವಲ್ಲ...ಮರದ ದಿಮ್ಮಿಯೂ ಬರಬಹುದು....ಜೀವಜಂತುಗಳೂ ಬರಬಹುದು.....ನಮಗೆ ಮೇಲ್ನೋಟಕ್ಕೆ ಕಾಣುವುದು ನೀರಿನ ಮೇಲ್ಮೈಯಲ್ಲಿ ತೇಲಿಬರುವ ವಸ್ತುಗಳು ಮಾತ್ರ ....ಅಡಿಯಲ್ಲಿ ಏನೇನು ಬರುತ್ತೋ.....!!!

  ReplyDelete
 3. ತುಂಬ ದಿನಗಳ ನಂತರ ಕ್ರೀಸಿಗೆ ಬಂದು ಮೊದಲ ಹೊಡೆತಕ್ಕೆ ಸಿಕ್ಸರ್ ಎತ್ತುವ ತಾಕತ್ತು ಭಟ್ಟರದು.

  ಕಾಲ ಘಟ್ಟದ ಪರಿಸರ ನಿರೂಪಣೆಯು ಚೆನ್ನಾಗಿದೆ.

  ದಕ್ಷಿಣ ಕನ್ನಡಿಗರ ಅಮಿತ ಪ್ರೀತಿ ನೋಡಿ, ಅವರಿಗೆ ನದಿ ಎಂದರೆ ನೇತ್ರಾವತಿಯೇ ಮಿಕ್ಕೆಲ್ಲ ಬರೀ ತೋಡುಗಳು!

  ಅವರಿಬ್ಬರ 'Cast away' ಕಥನ ರೋಚಕ.

  ಇಲ್ಲಿ ಬೆಂಗಳೂರಲ್ಲಿ ಸುಖ ಜೀವನ ನಡೆಸುವ ನಮಗೆ ಇಂತಹ ಹಳ್ಳಿಯ ತ್ರಾಸಗಳ ಪರಿಚಯ ಮಾಡಿಕೊಟ್ಟ ನಿಮಗೆ ಧನ್ಯವಾದ.

  ReplyDelete
 4. ಈಶ್ವರ ಕಿರಣ ಭಟ್ಟರೆ, ಬಾಲ್ಯಕ್ಕೆ ಮತ್ತೆ ಹೋಗಿ ಬ೦ದ೦ತಾಯಿತು.ನಿಮ್ಮ ಲೇಖನದ ಶಬ್ದಗಳು ಬರೀ ಶಬ್ದಗಳಲ್ಲ.ದ್ರುಶ್ಯ ರೂಪಕಗಳು.ಕ್ರುಶಿ ಹೀಗೆಯೇ ಮು೦ದುವರಿಯಲಿ

  ReplyDelete
 5. ಚಂದ ಉಂಟು ಮಾರಾಯ್ರೆ :)

  ReplyDelete
 6. ಚಂದದ ಕಥೆ .
  "ಬೆಕ್ಕೂ ತನ್ನ ದೈನಂದಿನ ವಿಧಿಗಳನ್ನ ಮನೆಯ ಅಟ್ಟದಮೇಲೇ ಪೂರೈಸಿಕೊಳ್ಳುವಷ್ಟು ಮಳೆ". ಈ ವಾಕ್ಯವೇ ಸಾಕು ಮಳೆಗಾಲದ ತೀವ್ರತೆಯನ್ನು ಅರ್ಥ ಮಾಡಿಕೊಳ್ಳಲು ..
  ಸಾಹಸಗಾಥೆಯು ತುಂಬಾ ಚೆನ್ನಾಗಿದೆ , ಬೇಗ ಬರಲಿ ಭಾಗ 2

  ReplyDelete
 7. ಹಾ ಹಾ ಹಾ.... ಜೀವ ಬಿಟ್ರು ತೆಂಗಿನ ಕಾಯಿ ಬಿಡ .. ಹೇಳಿ ಅದನು ಹಿಡಕ ಬಂದಿದ್ದು ಸಾಕಪ...!! ಈಗ ಓದಕರೆ ನಗು ಬತ್ತು... ಅವಾಗ ಅವ್ರ ಪರಿಸ್ಥಿತಿ ಹೆಂಗ್ ಆಗಿಕ್ಕು.... !!

  ReplyDelete
 8. ಕಣ್ಣಿಗೆ ಕಟ್ಟಿದಂತೆ ಸುಂದರವಾದ ನಿರೂಪಣೆ.
  ಊಟದ ನಡುವೆ ರುಚಿಕಟ್ಟಿಸುವ ಪಲ್ಯದಂತೆ,ಕಥೆಯ ಮಧ್ಯೆ-ಮಧ್ಯೆ ಅನುಭವದ ಸಾಲುಗಳು.
  ಭಾಗ ೨ ಇನ್ನೂ ಸುಂದರವಾಗಿ ಮೂಡಿಬರಲಿ.
  ಶುಭಹಾರೈಕೆ.

  ReplyDelete
 9. ಚಲೋ ಬರೆದ್ದಿ ಕಿಣ್ಣಣ್ಣ.. ಮುಂದುವರಿದ ಭಾಗ ಬೇಗ ಬರಲಿ.. :)

  ReplyDelete
 10. ಆಹಾ...
  ಬೇಸಿಗೆಯ ಕಾದ ಭೂಮಿಗೆ ಬಿದ್ದ ಹೊಸ ಮಳೆಯಿಂದ ಎದ್ದ ಮಣ್ಣಿನ ವಾಸನೆ ಮೂಗಿಗೆ ಬಡಿದ ಅನುಭವವಾತು. ಕಿರಣ...


  ReplyDelete
 11. ಕಿಣ್ಣ... ನಮ್ ಊರಿನ ಪರಿಸರ ನೆನಪಾಯ್ತು ನಿನ್ ಕಥೆ ಓದಿ.... ಕಥೆ ಚೊಲೊ ಇದ್ದು :-)

  ReplyDelete
 12. ಒಂಥರಾ ಅರ್ಭಾಟದ ಮಳೇಲಿ ನೆಂದು ಒದ್ದೆ ಮುದ್ದೆ ಆದ ಅನುಭವ ಆತು ಕಿರಣ ! ಇಂಥಾ ಮಳೆಗಾಲ ಕಂಡು ಎಷ್ಟೋ ವರ್ಷಾಗೊತು !! ಚಂದ ಬರದ್ದೆ !

  ReplyDelete
 13. ಚೆ೦ದ ಇತ್ತು ಮಾರಾಯ್ರೇ............

  ReplyDelete
 14. this is a captivating story with attractive location, context, imagery and flow, that has been beautifully narrated. excellent work, enjoyed reading it.

  ReplyDelete
 15. "ಪ್ರವಾಹದಲ್ಲಿ ಬಿದ್ದ ಇಬ್ಬರೂ ಬದಿಗೆ ಬರಲಾಗದೆ ಸುಮ್ಮನೆ ತೇಲುತ್ತಾ ಹೋದರು. ಮುಂದೆ ಹೋದಂತೆ ಒಂದು ಕಡೆ ಕವಲೊಡೆಯುತ್ತದೆ ತೋಡು. ಅಲ್ಲಿ ಮಧ್ಯದಲ್ಲಿ ನಡುಗಡ್ಡೆಯ ಮೇಲೆ ಎಸೆದಂತೆ ಇಬ್ಬರನ್ನೂ ನೀರು ಬಿಟ್ಟು ಮುಂದುವರೆಯಿತು." ಈ ಭಾಗ ಓದುತ್ತಿದ್ದಂತೆ ನನಗೆ ನನ್ನ ಅಜ್ಜಿ ಮನೆ ನೆನಪಾಯ್ತು. ಸಟ್ವಾಳ್ ಬರೆ ಮನೆಯಲ್ಲಿ ನಮ್ಮ ಅಜ್ಜಿ ಇದ್ದಾಗ, ಅವರ ಕೊನೆಯ ದಿನಗಳಲ್ಲಿ (ನನಗಾಗ ೫ ವರ್ಷ) ಅಮ್ಮ ಅಜ್ಜಿಯನ್ನು ನೋಡಿಕೊಳ್ಳುಲು ಹೋಗಿದ್ದಾಗ ನಾನೂ ತಂಗಿ ಅಲ್ಲಿದ್ದೆವು. ಮಳೆಗಾಲದಲ್ಲಿ ಬರುತ್ತಿದ್ದ ತೆಂಗಿನ ಕಾಯಿ ಹೆಕ್ಕಿಕೊಳ್ಳಲು ಅಲ್ಲೊಬ್ಬರು ದೋಣಿ ತರುತ್ತಿದ್ದರು. ನಾವೆಲ್ಲ ದೋಣಿಯನ್ನೇ ನೋಡುತ್ತಾ ನಿಲ್ಲುತ್ತಿದ್ದೆವು...!!!

  ReplyDelete
 16. thumba chennagide.... :) excellent niroopane..

  ReplyDelete