Tuesday 22 May 2012

ಕಥೆ ಹೇಳಲೇನೆ ನಿನಗೆ ?


ಅಡವಿ ಗಿಡ ಮರ ಕಲ್ಲುಗಳ ನೋಡಲು
ಅರಶಿನದ ಪುಡಿಯಂತೆ ತೋರುತಿದೆ ತಮ್ಮಾ ...

ಎಂತಹ ಭಾವವಾಗಿರಬೇಕು ರಾಮನದ್ದು. ಆ ಮೇಲಿನ ಮನೆಯ ಶಂಕರಣ್ಣನ ರಾಮ, ಮಂಗಳೂರಿನ ಕೇಶವನ ಲಕ್ಷ್ಮಣ ಸೂಪರಾಗಿತ್ತು... ೬ ಘಂಟೆಯಿಂದ ೧೦ ಘಂಟೆಯವರೆಗೆ ಯಕ್ಷಗಾನದ ಮೆಲುಕು ಹಾಕುತ್ತಾ ಮನೆಕಡೆ ಬಂದೆ. ಅವಳು ಹೇಳಿದ ತರಕಾರಿ ಮತ್ತೆ ಸಾಬೂನು ?

ಅಯ್ಯೋ .. ಅವಳ ನೋಟಕ್ಕೆ ಹೇಗೆ ಉತ್ತರಿಸುವುದಿನ್ನು ?

ಮನೆಯ ಬಾಗಿಲನ್ನು ಹದವಾಗಿ ಬಡಿದೆ. ಎಚ್ಚರವಿದ್ದಳೇ ? ಹುಂ, ಬನ್ನಿ .. ಬಂದೆ.. ಮಾತಿಲ್ಲ.
ಯಾಕೆ ಮಾರಾಯ್ತೀ ಮುಖ ಗಂಟು ಹಾಕ್ಕೊಂಡಿದೀಯಾ ?
ಏನ್ರೀ ನೀವು ? ತುಂಬಾ ಏಕಾಂಗಿಯಾಗಿ ಬೇಸರದಿಂದ ಇದೀನಿ ಅನ್ನೋ ಜ್ಞಾನಾನೆ ಇಲ್ವಲ್ಲಾ ನಿಮಗೆ ,
ಅವಳು ಬೈದರೂ ಸಹಿಸಿಕೊಳ್ಳಬಹುದು, ಈ ನೋವಿನ ರೀತಿ ಮುಖಮಾಡುವುದನ್ನು ನೋಡಲಾಗುವುದಿಲ್ಲ ನನಗೆ. ಈಗ ಏನು ಮಾಡುವುದು ಹೇಳಿ ?
--
ಹಾಗಾದ್ರೆ ಇವತ್ತು ಒಂದು ಕಥೆ ಹೇಳ್ತೇನೆ ಕೇಳು
>ಹುಂ, ಆವತ್ತು, ನೀವು ನಮ್ಮ ಮನೆಗೆ (ತವರು ಮನೆಗೆ) ಬಂದಾಗ ಹೇಳಿದ ಕಥೆಯೇ ಆದರೆ ಬೇಡ.
>ಅದಲ್ಲ, ಇದು ಹೊಸಾ ಕಥೆ, ನೀನು ಕೇಳಿರದ ಕಥೆ, ನಾನು ಹೇಳಿರದ ಕಥೆ.
>ಅದೇನು ಕಥೆಯೋ ನಿಮ್ಮದು? ಬಸ್ಸಿನಲ್ಲಿ ನಿಮ್ಮನ್ನು ನೋಡಿ ನಕ್ಕ ಕಾಲೇಜು ಹುಡುಗಿಯ ಕಥೆಯಂತೆ ಕಟ್ಟಿದ ಕಥೆ ಅಲ್ವಲ್ಲ ?
>ಅಯ್ಯೋ ಅದು ಕಟ್ಟುಕಥೆಯಲ್ಲ ಮಾರಾಯ್ತಿ, ಅವಳು ಇವತ್ತೂ ಒಂದು ಸ್ಮೈಲ್ ಕೊಟ್ತಳು ನಿಜವಾಗಿಯೂ.. ಆ ಕಥೆ ಅಲ್ಲ !
>ಓಹೋ, ಎದುರುಗಡೆ ಮನೆಯ ಶಾರದಮ್ಮನ ಕಥೆಯಾ? ಇಲ್ನೋಡಿ, ಅವರ ಮಗನ ಇದೇ ಮೊದಲ ಸಲ ಕಾಗದ ಬರೆದಿದ್ದಾನಂತೆ. ಅಲ್ಲ, ಈ ಮಕ್ಕಳನ್ನ ಆಶ್ರಮದಲ್ಲಿ ಬಿಟ್ಟು ಅದೇನು ಮಾಡ್ತಾರೋ ?
>ಶಾರದಮ್ಮನ ಕಥೆ ಅಲ್ಲ, ಮಕ್ಕಳೆಂದಾಗ ನೆನಪಾಯ್ತು.. ಇವತ್ತು ನನ್ನ ಮ್ಯಾನೇಜರ್ ಕೇಳಿದ್ರು, ನಿಮಗೆಷ್ಟು ಮಕ್ಕಳು ಅಂತ, ಉತ್ತರ ಹೇಳಲಿಲ್ಲ ನಾನು !
>ಪುನಃ ಅದೇ ವಿಷಯಕ್ಕೆ ಬಂದ್ರಿ !
> ಇಲ್ಲ , ಸುದ್ದಿ ಹೇಳಿದೆ ಅಷ್ಟೆ.
> ಸರಿ, ಮತ್ತೆ ಯಾವ ಕಥೆ? ಯಕ್ಷಗಾನ ನೋಡ್ಕೊಂಡು ಬಂದ್ರಿ ಅಲ್ವಾ ? ಅದೇ ಗಣಪತಿ ದೇವಸ್ಥಾನದ ಕಥೆಯಾ ?
>ಉಹುಂ, ಅಲ್ಲ, ದೇವರ ಕಥೆಯಲ್ಲ. ಯಕ್ಷಗಾನ ಚೆನ್ನಾಗಿತ್ತು. ನಿನ್ನ ತಮ್ಮನೂ ತಮ್ಮನ ಹೆಂಡತಿಯೂ ಬಂದಿದ್ರು. ವಿಚಾರಿಸಿದ್ರು ನಿನ್ನನ್ನ. ಯಾಕೆ ಬರಲಿಲ್ಲ ಅಂತ ಕೇಳಿದ್ರು ?
>ಅವರಿಗೆ ಸುಮ್ಮನೆ ಕೇಳುವುದೊಂದು ಚಟ, ಹಾಗೆಲ್ಲಾ ನನ್ನನ್ನ ನೋಡಬೇಕೆನಿಸಿದರೆ ಮನೆಗೇ ಬರಬಹುದಿತ್ತಲ್ಲ. ಹಳೆಯದನ್ನು ಎಲ್ಲಿ ಮರೆಯಬೇಕು ? ನೀವು ಸುಳ್ಳು ಹೇಳಿದರೆ ನಿಮ್ಮ ಕಣ್ಣು ಸತ್ಯ ಹೇಳುತ್ತದಲ್ಲಾ ?
>ಸರಿ ಬಿಡು, ಅವರ ಹಿರಿಮೆ ಅವರಿಗಾಯ್ತು, ನಮ್ಮ ಬದುಕು ನಮಗೆ.
> ಯಾವ ಕಥೆ ರೀ ?
>ಯಾರು ಕಥೆ ಹೇಳಿದ್ದು ?
> ಸರಿ ಹೋಯ್ತು, ಘಂಟೆ ಹನ್ನೆರಡಾಯ್ತು. ಊಟ ಮಾಡಿಲ್ಲ ಇನ್ನೂ, ತರಕಾರಿ ಮತ್ತೆ ಸೋಪು ನಾನೇ ತರ್ತೇನೆ, ಬನ್ನಿ ಊಟಕ್ಕೆ..
> ಹೀಗೇ ಗದರುತ್ತಾ, ನಗ್ತಾ ಇದ್ರೆ ಇನ್ನು ಯಾರ ಕಥೆ ಬೇಕೇ .. ನಮ್ಮದೇ ಕಾದಂಬರಿ ಅಲ್ವೇನೆ ?

10 comments:

  1. ಹೀಗೇ ಗದರುತ್ತಾ, ನಗ್ತಾ ಇದ್ರೆ ಇನ್ನು ಯಾರ ಕಥೆ ಬೇಕೇ .. ನಮ್ಮದೇ ಕಾದಂಬರಿ ಅಲ್ವೇನೆ ?

    Nice one :))

    ReplyDelete
  2. ತಡವಾಗಿ ಬಂದು ಹೇಳಿದ ಪದಾರ್ಥಗಳನ್ನು ಮರೆತು ಬರುವ ನನ್ನಂತಹ ಮರೆವಿನ ಗಂಡಂದಿರು ಹೆಂಡತಿಯನ್ನು ಓಲೈಸಲು ಕಟ್ಟುವ ಸಾವಿರ ಕಥೆಗಳ ಕಥಾ ಸರಸ್ಸಾಗರದಂತಿದೆ, ಈ ಬರಹ.

    ಅಮೋಘ ಕಥನ ಶೈಲಿ.

    ReplyDelete
  3. ನಮ್ಮ ನಮ್ಮ ಕಥೆಯೂ ಹೀಗೆ... ಅದು ಇದು ಹೇಳಿ ಮರೆತಿದ್ದನ್ನು ಮರೆಸಿ ಒಲಿಸಿಕೊಂಡದ್ದು ಚೆನ್ನಾಗಿದೆ.... :)

    ReplyDelete
  4. :) :) ಕಥೆ ಹೇಳುತ್ತೇನೆ ಎನ್ನುತ್ತಲೇ ಕಥೆ ಕಟ್ಟಿ ಅವಳಿಂದ ಪಾರಾಗಿದ್ದು ಚೆನ್ನಾಗಿದೆ.. ಪ್ರೀತಿಯ ಗದರುವಿಕೆ, ನಗುವಿದ್ದರೆ , ನಗು ನಗುತ್ತಿದ್ದರೆ ಬಾಳು ನಿಜಕ್ಕೂ ಒಲವ ಕಾದಂಬರಿಯೇ..
    ಅಜ್ಜಿ ಹೇಳುತ್ತಿದ್ದ "ಕಥೆ ಕಥೆ ಕಾರಣ ".. ನೆನಪಾಯಿತು. :)

    ReplyDelete
  5. ಕಾಂತನಿಲ್ಲದ ವೇಳೆ ಕಾಡಿದ ಏಕಾಂತ, ಕೋಪವೆಲ್ಲಾ ಅವನು ಎದುರು ಬಂದು ಇಲ್ಲದ ಕಥೆ ಹೇಳುತ್ತಾ ಸುತ್ತಲೂ ಸುತ್ತುವಾಗ ಹುಸಿಗೋಪಕ್ಕೆ ತಿರುಗಿ, ತುಟಿಯಂಚಿನ ನಗೆಯಾಗಿ ಅವನ ಕೆನ್ನೆಯ ಗುಳಿಯಲ್ಲಿ ಅಡಗಿ ಮಾಯವಾಗಿ ಬಿಡುತ್ತದೆ....! :) ಏನಂತೀರ ಕಿಣ್ಣ...?! ;)

    ReplyDelete
  6. ಕಥೆ, ಕಥೆ ಕಾರಣ , ಮುತ್ತಿನ ತೋರಣ :-)
    ಕಥೆ ಹೇಳ್ಲಾ ಅಂತ ಕಥೆ ಕಟ್ಟಿಯೇ ಕತೆ ಮುಗ್ಸಿಬಿಡೋದಾ ಕಿಣ್ಣಣ್ಣ? :-)
    ಒಂಥರಾ Different ಆಗೈತೆ :-)

    ReplyDelete
  7. ನಿಮ್ಮ ಕಥಾನಾಯಕನಿಗೆ ಬೆಣ್ಣೆ ಹಚ್ಚುವುದು ಚೆನಾಗಿ ಗೊತ್ತಿದೆ :)
    ಇಶ್ಟ ಆತು :)

    ReplyDelete
  8. kirana ista atu chenagiddu.....

    ReplyDelete
  9. ಕಿಣ್ಣಾ ಈಗಲೆ ಬೆಣ್ಣೆ ಹಚ್ಚುಲೆ ಪ್ರಾಕ್ಟಿಸ್ ಮಾಡ್ತಾ ಇಪ್ಪದಾ ಮಾಣಿ..:))ಲಾಯಿಕಿದ್ದು

    ReplyDelete