Tuesday 15 November 2011

ವಿಶ್ವ ಸಹನಾ ದಿನಾಚರಣೆ - World tolerance Day.


ವಿಶ್ವ ತಾಳುವಿಕೆಯ ದಿನಾಚರಣೆಯಂತೆ ಇಂದು. (World tolerance day). ಹ್ಹ ಹ್ಹ, ಇದನ್ನು ಆಚರಣೆ  ಅಂತ ಪ್ರಾರಂಭ ಮಾಡಿದವನಿಗೆ ತಾಳ್ಮೆಯಿರಬೇಕು.
ತಾಳು ಅನ್ನೋದಕ್ಕೆ ಏನೆಲ್ಲಾ ಅರ್ಥ ಇದೆ. ಹೊರು , ಸೈರಿಸು, ಸಹನೆ ಎಂದೆಲ್ಲಾ ಅರ್ಥೈಸಿಕೊಳ್ಳಬಹುದು. ತಾಳಿಕೊಳ್ಳುವುದು (ತಾಳಿ ಅಂದರೆ ಮಂಗಳಸೂತ್ರ ಅಲ್ಲ!) ಅಷ್ಟು ಸುಲಭವೇ? ಭೂಮಿ ನಮ್ಮನ್ನೆಲ್ಲಾ ತಾಳಿಕೊಂಡಿದ್ದಾಳೆ ಎಂದು ಭೂಮಿಯ ಬಗ್ಗೆ ಅಭಿಮಾನ ಹೊಂದಿದ್ದೇವೆ. ಸಮಾಜವೂ ನಮ್ಮನ್ನ ತಾಳಿಕೊಂಡಿದೆ. ಈಗ ಮುಖ್ಯ ವಿಷಯಕ್ಕೆ ಬರೋಣ. ಆಚರಣೆಯ ಉದ್ದೇಶ ಏನು ?

ಈ ಆಚರಣೆ ಶುರುವಾಗಿದ್ದು ೧೯೯೫ರಲ್ಲಿ. ಮುಖ್ಯವಾಗಿ ಸಹನೆ ಎನ್ನುವ ವಸ್ತು ಚರ್ಚಿತವಾಗಿದ್ದು ಹಿಂಸೆ ಎನ್ನುವುದಕ್ಕೆ ವಿರೋಧವಾಗಿ. ಸಹನೆ ಇದ್ದರೆ ಹಿಂಸೆ ಇಲ್ಲ ಎನ್ನುವ ವಿಚಾರದಿಂದ ಈ ಸಹನೆಗೂ ಒಂದು ದಿನ ಪ್ರಾರಂಭವಾಯಿತು. ಯುನೆಸ್ಕೋದ ಪ್ರೇರಣೆಯಿಂದ ಅಮೇರಿಕಾದಲ್ಲಿ ಈ ಆಚರಣೆಗೆ ಅಡಿಗಲ್ಲು.

ಬೇರೆ ಬೇರೆ ಸಂಸ್ಕೃತಿಗಳನ್ನು ಆಚರಣೆಗಳನ್ನು ಒಪ್ಪುವುದು ಅಥವಾ ಅದರ ಪಾಡಿಗೆ ಅದನ್ನ ಬಿಡುವುದು (ಒಪ್ಪಲಾಗದಿದ್ದಲ್ಲಿ) ತುಂಬಾ ಮುಖ್ಯ. ಬೇರೆ ಬೇರೆ ಜಾತಿಗಳು, ಆಚರಣೆಗಳು, ಪದ್ಧತಿಗಳು ಎಲ್ಲವನ್ನೂ ಟೀಕಿಸುವ ಗುಣ ಇರುವ ನಮ್ಮ ಮಧ್ಯೆ ಇಂತಹ ಆಚರಣೆಗೊಂದು ಪ್ರಾಮುಖ್ಯತೆ ಕೊಡಲೇಬೇಕು. ಆಚರಣೆ ದಿನಕ್ಕೆ ಮಾತ್ರ ಸೀಮಿತವಾಗದೇ ಸಹನಾಗುಣವನ್ನು ಬೆಳೆಸಿಕೊಂಡಲ್ಲಿ ತುಂಬಾ ಸಂಘರ್ಷಗಳನ್ನ ತಪ್ಪಿಸಬಹುದು.

ತಲ್ಲಣಸಿದಿರು ಕಂಡ್ಯ ತಾಳು ಮನವೆ , ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ ,ತಾಳುವಿಕೆಗಿಂತ ಅನ್ಯ ತಪವು ಇಲ್ಲ. ಎನ್ನುವುದು ದಾಸವಾಣಿ. ಇಲ್ಲಿಯೂ ತಾಳುವಿಕೆ ಪ್ರಧಾನ.

ತ್ರಿಶಂಕುವಿನ ಕಥೆ ಗೊತ್ತೇ? ೯೯ ಯಾಗಗಳನ್ನು ಮಾಡಿದ ಆತ ಸಶರೀರನಾಗಿ ಸ್ವರ್ಗವನ್ನು ಸೇರುವ ಮಹತ್ವಾಕಾಂಕ್ಷೆ ಹೊಂದಿದ್ದ. ೧೦೦ನೇ ಯಾಗವನ್ನು ನಡೆಸಲು ವಶಿಷ್ಠರನ್ನು ಕಾಣಲು ಹೋದಾಗ ವಶಿಷ್ಠರಿರಲಿಲ್ಲ ಅಲ್ಲಿ. ವಶಿಷ್ಠರಂತೆಯೇ ಸಮರ್ಥರಾದ ವಶಿಷ್ಠರ ಮಕ್ಕಳು (ವಾಶಿಷ್ಠರು) ಇವನ ಯಾಗದ ಆಸೆಗೆ "ನಿನಗೆ ಯೋಗವಿಲ್ಲ " ಎಂದರು. ಕುಪಿತಗೊಂಡ ತ್ರಿಶಂಕು ಅವರನ್ನ ಹೀಯಾಳಿಸಿದ. ಕಡೆಗೆ ಚಾಂಡಾಲತ್ವದ ಶಾಪವನ್ನು ಪಡೆದ. ಮುಂದೆ ವಿಶ್ವಾಮಿತ್ರರ ಸಹಾಯದಿಂದ ವಿಚಿತ್ರಸ್ವರ್ಗವನ್ನೇನೋ ಪಡೆದ. ಒಂದುವೇಳೆ ಸಹನೆಯಿಂದ ಇರುತ್ತಿದ್ದರೆ ತ್ರಿಶಂಕು ?

ಪುರಾಣದಲ್ಲಿ, ವಾಸ್ತವದಲ್ಲಿ ಇಂತಹಾ ಎಷ್ಟೋ ಉದಾಹರಣೆಗಳನ್ನು ಕೊಡಬಹುದು. ಯಾರೋ ಹೇಳಿ, ಏನೋ ಓದಿ ಸಹನೆ ಬರುವಂತದ್ದಲ್ಲ. ಅವರವರ ಚಿಂತನೆಯಿಂದಲೇ ಬರಬೇಕು ಅಲ್ಲವೇ.. ಏನಂತೀರಿ.

ಇಷ್ಟನ್ನು ಓದಿದ ನಿಮ್ಮ ಸಹನೆಯನ್ನು ಇನ್ನು ಪರೀಕ್ಷಿಸುವುದಿಲ್ಲ.. :) :) ಶುಭಾಶಯಗಳು..

5 comments:

  1. ಇಷ್ಟವಾಗುವುದನ್ನು ಓದುವುದಕ್ಕೆ ತಾಳ್ಮೆ ಬೇಕಾಗಿಲ್ಲ ಭಟ್ಟರೇ..
    ನೀವು ಬರೆದಿರುವುದು ಹಾಗೆ ಓದಿಸಿಕ್ಕೊಂಡು ಹೋಗುತ್ತದೆ ನೋಡಿ...

    ಹೊಸ ಹೊಸ ದಿನಾಚರಣೆಗಳಿಂದಾಗಿ ವರ್ಷದ ಎಲ್ಲ ದಿನಗಳು ದಿನಾಚರಣೆಗಳೇ ಆಗದಿದ್ದರೆ ಸದ್ಯ ಅಷ್ಟೇ ಸಾಕು..

    ReplyDelete
  2. ಚೆನ್ನಾಗಿದೆ ಕಿರಣಣ್ಣ.. ತಾಳ್ಮೆ, ಮೌನಗಳನ್ನು, ಅದರಲ್ಲೇ ಮಾತಾಡುವುದನ್ನು.. ತಣ್ಣಗಿದ್ದೇ ತೊಡಗಿಕೊಳ್ಳುವುದನ್ನು ನಿಮ್ಮಿಂದ ಕಲಿಯಬೇಕಾಗಿದೆ.. ಒಳ್ಳೆಯ ಂಆಹಿತಿ, ಬರಹಕ್ಕೆ ವಂದನೆಗಳು :-)

    ReplyDelete
  3. ತಾಳ್ಮೆಗೆ ಒಳ್ಳೆಯ ಉದಾಹರಣೆ ನೀನೇ ಕಿರಣ..ನೀನು ಇಸ್ಟೆಲ್ಲಾ ತಾಳ್ಮೆ ಬಗ್ಗೆ ತಿಳಿದುಕೊಂಡದ್ದು ನೋಡಿ ಖುಶಿಯಾತು...

    ReplyDelete
  4. ತುಂಬಾ ಧನ್ಯವಾದಗಳು.

    ReplyDelete
  5. ಕಿರಣ...ತ್ರಿಶಂಕು ಮುಂದಿನ ಇಂದ್ರಪದವಿಯ ಅಧಿಪತಿ ಅಲ್ದನಾ ??.ಅವಂಗೆ ಸಹನೆ ಇದ್ದಿದ್ರೆ ., ಬರೀ ಸ್ವರ್ಗ ಸಿಕ್ತಿತ್ತು.ಈಗ ನೋಡು ಸಶರೀರ ಇಂದ್ರ :)

    ReplyDelete