Sunday, 14 October 2012

ಕಥೆ- ರಾಮನ ವೇಷ


ಸುತ್ತಮುತ್ತಲ ಮೂರು ನಾಲ್ಕು ಹಳ್ಳಿಗಳ ಮಧ್ಯೆ ಅದೊಂದು ಪುಟ್ಟ ಊರು. ಎಲ್ಲಾ ಹಳ್ಳಿಗಳ ಹೃದಯವದು. ಬರೀ ೩೦ ಮನೆಗಳು ಸ್ವಲ್ಪವೇ ಜಮೀನು ಹೊಂದಿರುವ ಜನರು ಒಬ್ಬರಿಗೊಬ್ಬರು ಬೆರೆತು ರಾಮಪುರವಾಗಿತ್ತು ಹಳ್ಳಿ. ಸಣ್ಣ ದೇವರ ಗುಡಿಯೊಂದು, ಎದುರೇ ಸಣ್ಣ ಕೆರೆ ಹಿಂದಿನಿಂದ ಬೆಟ್ಟದೊಂದಿಗೆ ಕಾಡು. ಆಲೋಚಿಸಿದರೆ ಸಣ್ಣಮಕ್ಕಳು ಚಿತ್ರ ಬಿಡಿಸಿದಂತೆ ತೋರುತ್ತಿತ್ತು.

ಪೇಟೆಯಲ್ಲಿ ಕೋಳಿಅಂಗಡಿ ಇಟ್ಟ ತಿಮ್ಮನ ಮನೆ ಮೊದಲ್ಗೊಂಡು ರಾಮಣ್ಣನ ಮನೆ ದಾಟಿದರೆ ಟೈಲರಣ್ಣನ ಮನೆ. ನಂತರ ಒಂದೆಕರೆಯಷ್ಟು ಮಳೆನೀರಾವರಿ ಜಮೀನು. ಅದಾಗಿ ಪುನಃ ಮನೆಗಳು. ತಿಮ್ಮನೂ ರಾಮಣ್ಣನೂ ಟೈಲರಣ್ಣನೂ ನಮಗೆ ಪ್ರಧಾನವಾದ್ದರಿಂದ ಉಳಿದವರ ಹೆಸರು ಬೇಡವೆನಿಸುತ್ತದೆ. ಅಂದಹಾಗೆ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುವ ಕೃಷ್ಣಪ್ಪನ ಮನೆಯೂ ತಿಮ್ಮನ ಮನೆಯಿಂದ ಒಂದೈದು ಫರ್ಲಾಂಗ್ ದೂರದಲ್ಲಿದೆ. ಹರಟೆಹೊಡೆಯುವುದರಲ್ಲೇ ನಿಸ್ಸೀಮನೆನಿಸಿದ ತಿಮ್ಮ ಮತ್ತೆ ಟೈಲರಣ್ಣರನ್ನು ದಿನವೂ ಭೇಟಿಯಾಗುತ್ತಾನೆ ರಾಮಣ್ಣ. ಅದೇನಕ್ಕೋ ಹಾಗಿರುವ ಸೆಳೆತ ಅವರ ಮಧ್ಯೆ ಇದೆ.
--
ಪಕ್ಕದ ಹಳ್ಳಿಯ ವಿಜೃಂಭಣೆಯ ಜಾತ್ರೆಯ ಬಗ್ಗೆ ಎಲ್ಲರೂ ಹೊಗಳಿದ್ದೇ ಹೊಗಳಿದ್ದು. ಜಾತ್ರೆಗಿಂತಲೂ ಪ್ರಧಾನವಾಗಿ ಆಕರ್ಷಿಸಿದ್ದು ಅಲ್ಲಿನ ಸಂತೆ ಮತ್ತೆ ಕಾರ್ಯಕ್ರಮಗಳು. ಊರದೇವಿಯ ಜಾತ್ರೆ ಅದೂ ಎರಡುವರ್ಷಕ್ಕೊಮ್ಮೆ ನಡೆಯುವುದು. ಇತ್ತೀಚೆಗೆ ಸರ್ಕಾರದ ಸರ್ಪಕಾವಲಿನಲ್ಲಿ ಕುರಿ ಕೋಣಗಳನ್ನು ಬಲಿ ಕೊಡದಿದ್ದರೂ ಉಳಿದೆಲ್ಲಾ ಆಧುನಿಕ ಕಾರ್ಯಕ್ರಮಗಳು ಸಾಂಗವಾಗಿ ನೆರವೇರಿ ಕಳೆದುಕೊಂಡವರು ಅಷ್ಟನ್ನೂ ಕಳೆದುಕೊಂಡರೆ ಗಳಿಸಿದವರು ಮುಂದಿನ ಎರಡು ವರ್ಷಕ್ಕೆ ಜೀವನ ಸಾಗಿಸಬಹುದು.

ನೆಮ್ಮದಿಯಿಂದ ನಿಟ್ಟುಸಿರು ಬಿಡುವ ಕಾಲಕ್ಕೇ ಜಾತ್ರೆಯಾಗಿದ್ದು ಎಲ್ಲಾ ಹಳ್ಳಿಯ ಗ್ರಾಮಸ್ಥರನ್ನು ಖುಷಿಗೊಳಿಸಿತ್ತು. ಹರಕೆಯನ್ನು ತೀರಿಸಲೆಂದು ತೆಗೆದಿಸಿದ ಅಷ್ಟೂ ಹಣವನ್ನು ಉಪಯೋಗಿಸಿ ಮೆರೆದಾಡಿದರು ಜಾತ್ರೆಯಲ್ಲಿ. ಪೇಟೆಯಲ್ಲಿರುವವರೂ ಹಳ್ಳಿಗೆ ಬಂದು ಒಂದೈದಾರು ದಿನ ವ್ಯಯಿಸಿ ಪುನಃ ಪೇಟೆಗೆ ನಡೆದರು. ಯಾವುದೋ ಸಂಭ್ರಮದ ಕನಸು ಸೂರ್ಯನ ಬೆಳಕಿನ ಕಿರಣಗಳಿಗೆ ಎಚ್ಚರವಾದ ಹಾಗೆ ಪುನಃ ಮೌನಕ್ಕೆ ಜಾರಿತು.

ಇದೆಲ್ಲಾ ಜಾತ್ರೆಯ ವ್ಯವಹಾರಗಳು ರಾಮಣ್ಣನ ತಲೆಯ ಮೂಲೆಯಲ್ಲಿ ಇದ್ದರೂ ಪ್ರಧಾನವಾಗಿ ಕುಣಿಯತೊಡಗಿದ್ದು ಆ ಯಕ್ಷಗಾನ. ಎಂತಹ ಆಟವದು? ಆ ಭೀಮ ಆ ಧುರ್ಯೋಧನ ಆ ಭಾಗವತರ ಹಾಡು ಆ ಚೆಂಡೆಯ ಅಬ್ಬರ. ಇದರ ಬಗ್ಗೆ ಪೇಪರಿನ ಮೂಲೆಯಲ್ಲೂ ಪ್ರಕಟವಾಗಿ ಮತ್ತಷ್ಟು ತುಪ್ಪ ಸುರುವಿದಂತಾಗಿತ್ತು. ಹಳ್ಳಿಯಲ್ಲಿ ಎಂತಹ ಕಲೆಯ ಬೀಜ ಅಡಗಿದೆ? ಎಂತಹ ಅಧ್ಬುತ ಪ್ರತಿಭೆಗಳಿದ್ದಾವೆ ಎಂದೆಲ್ಲಾ ಚಿತ್ರಸಮೇತ ಪತ್ರಿಕೆಯವರು ಪ್ರಕಟಿಸಿದ್ದರು. ಈ ಚರ್ಚೆ ಸುಮಾರು ದಿನದ ವರೆಗೆ ಮಿತ್ರರಲ್ಲೂ ಸಾಗಿ ಬಂದಿತ್ತು.
---
ಸೂರ್ಯ ಮುಳುಗಿದನೋ, ಕರುಗಳಿಗೆ ಮೇವಾಯಿತೋ ಗೊತ್ತಿಲ್ಲ. ರಾಮಣ್ಣಾದಿ ಮಿತ್ರರು ಹರಟಲು ಕಟ್ಟೆಗೆ ಹಾಜರು. ಯಾವುದೇ ವಿಷಯವಿದ್ದರೂ ಇಂದೇ ಚರ್ಚೆಯಾಗಿ ಮುಕ್ತಾಯವಾಗುವವರೆಗೂ ಒಂದು ಕಟ್ಟು ಬೀಡಿ, ಒಂದಷ್ಟು ಎಲೆ ಅಡಕೆ ಬಿಟ್ಟರೆ ಬೇರೆ ವಿಷಯವಿಲ್ಲ. ಇಂದಿನ ಮುಖ್ಯವಾದ ವಿಚಾರ ರಾಮಪುರದ ಜಾತ್ರೆಯಾಗಿತ್ತು. ಜಾತ್ರೆ ಹೇಗಾದರೂ ಆಗಲಿ, ಸಂತೆ ಎಷ್ಟಾದರೂ ಬರಲಿ, ಪಕ್ಕದ ಹಳ್ಳಿಯ ವೈಭವದ ಯಕ್ಷಗಾನ ಮರೆಸುವ ಆಟವೊಂದು ಇಲ್ಲಿ ಆಗಲೇ ಬೇಕು ಎನ್ನುವ ಸರ್ವಾನುಮತದ ಅಭಿಪ್ರಾಯ.

ಹೌದು. ತೀರ್ಮಾನವೇನೋ ಆಯಿತು. ಯಾವ ಪ್ರಸಂಗ ಯಾರು ಪಾತ್ರಧಾರಿಗಳು?
ಹೆಸರೂ ರಾಮಣ್ಣ, ಊರು ರಾಮಪುರವಾದ್ದರಿಂದ ರಾಮಾಯಣದ ಯಕ್ಷಗಾನವನ್ನೇ ಮಾಡುವುದು ಎಂದು ರಾಮಣ್ಣನ ಅಂಬೋಣ. ಉಳಿದ ಮಿತ್ರರು ಸಮ್ಮತಿ ಸೂಚಿಸಿದರು. ಅಂತೂ ರಾಮಾಯಣದ ಯಾವ ಭಾಗವೆನ್ನುವುದು ಸುಲಭವಾಗಿ ನಿರ್ಣಯವಾಗದೇ ಹಾಗೇ ಉಳಿದಿತ್ತು. ತೀರ್ಮಾನಿಸುವ ವಿಚಾರವನ್ನೂ ರಾಮಣ್ಣನಿಗೇ ಬಿಟ್ಟಿ ಕೈತೊಳೆದುಕೊಂಡರು.

ತಲೆಯೊಳಗೆ ಹುಳವೊಂದು ಕೊರೆದಂತೆ ರಾಮಣ್ಣನಿಗೆ ದಿನವೂ ರಾಮಾಯಣ ಕಾಡತೊಡಗಿತು. ರಾಮ ಕಾಡಿಗೆ ಹೋದ,ವಾಲಿಯನ್ನು ಕೊಂದ, ಸೇತುವೆ ಕಟ್ಟಿದ, ರಾವಣನನ್ನೂ ಕೊಂದ ಪುನಃ ಅಯೋಧ್ಯೆಗೆ ಬಂದು ರಾಜ್ಯವಾಳಿದ ಎಂಬಷ್ಟು ವಿಷಯ ಸಂಪತ್ತಿನ ಹೊರತು ಜಾಸ್ತಿ ವಿಶ್ಲೇಷಣೆ ರಾಮಣ್ಣನಿಗೂ ಉಳಿದವರಿಗೂ ಇರಲಿಲ್ಲ. ಜೊತೆಗೆ ಈ ಯಕ್ಷಗಾನದಲ್ಲಿ ಏನಾದರೂ ಜಾಸ್ತಿ ಹೆಸರು ಮಾಡಬೇಕಿದ್ದರೆ ಸ್ವಲ್ಪ ಜಾಸ್ತಿ ಮಾತನಾಡಬೇಕು. ರಾಮಾಯಣವನ್ನು ಓದಲೇಬೇಕು ಎನಿಸತೊಡಗಿತು.

ಇದು ಎರಡನೇ ಸಲ ರಾಮಣ್ಣ, ಶಾಸ್ತ್ರಿಗಳ ಮನೆಗೆ ಹೋಗುತ್ತಿರುವುದು. ಮೊದಲ ಬಾರಿ, ಹೆಂಡತಿ ಮತ್ತೆ ಇವನ ನಡುವಿನ ಸಮಸ್ಯೆಯ ಬಗೆಗೊಂದು ತೀರ್ಮಾನ ಕೊಟ್ಟವರು ಇದೇ ಶಾಸ್ತ್ರಿಗಳು. ಈಗ ರಾಮಾಯಣದ ಪುಸ್ತಕವೋ ಅಲ್ಲ ಅದಕ್ಕಿಂತ ಹೆಚ್ಚಿನ ಮಾಹಿತಿಯನ್ನು ತಿಳಿಯುವುದಕ್ಕೆ ರಾಮಣ್ಣ ಬಂದಿದ್ದು. ಹಾಗೇ ಒಂದು ಪುಸ್ತಕವನ್ನೂ ತೆಗೆದುಕೊಂಡು ವಾಪಸ್ಸಾದ ರಾಮಣ್ಣ. ಆ ದಿನದಿಂದ ಶುರುವಾಗಿ ಮೂರ್ನಾಲ್ಕು ದಿನ ರಾಮಣ್ಣನ ಮನೆಯಲ್ಲಿ ರಾತ್ರಿ ಎರಡು ಘಂಟೆಯವರೆಗೂ ಬೆಳಕು ಇರುತ್ತಿತ್ತು.
---
ಅದೀಗ ಇಪ್ಪತ್ತಮೂರು ತುಂಬುತ್ತಿತ್ತು. ಸ್ವಲ್ಪ ಓದು ಶಾಲೆಯ ಮೆಟ್ಟಿಲಿನ ಲೆಕ್ಕವನ್ನು ಕಲಿಸಿತ್ತು ಅವನಿಗೆ, ಕಾಲೇಜಿನ ಮೆಟ್ಟಿಲು ಲೆಕ್ಕಕ್ಕೇ ಸಿಗಲಿಲ್ಲ. ಎರಡು ಎಕರೆ ಮಳೆಗಾಲದ ಜಮೀನಿನ ಜೊತೆಗೆ ಮನೆಯಲ್ಲಿ ತಕ್ಕಮಟ್ಟಿಗೆ ಚೆನ್ನಾಗಿದ್ದ ಹೈನುಗಾರಿಕೆ ಅವನ ಓದನ್ನು ಮೊಟಕುಗೊಳಿಸಿ ತಿರುಗಾಟಕ್ಕೆ ಉತ್ತೇಜಕವಾಗಿತ್ತು. ಬೆಂಗಳೂರಿಗೆ ಹೋಗಬೇಕು ಎನ್ನುವ ಅಚಲವಾದ ಆಸೆ ಮೊಳಕೆಯೊಡೆದು ಬೇರೂರಿ ರಾಮಣ್ಣ ಬೆಂಗಳೂರಿಗೆ ಹೊರಟ.

ಬೆಂಗಳೂರಿನ ಟ್ರೈನು ಇಳಿದದ್ದೇ ಜನರ ಮುಖ ಪರೀಕ್ಷೆಗೆ ತೊಡಗುತ್ತಿದ್ದನವನು.ಇವನು ಹೊಸಬನೆಂದು ಬೆಂಗಳೂರಿಗೆ ಹೇಗೆ ಅರಿವಾಗಬೇಕು? ತನ್ನ ಹಸಿವೆ, ತನ್ನ ಭೀಕರತೆ ಎಲ್ಲವನ್ನೂ ಮೊದಲ ದಿನವೇ ತೋರಿಸಿತ್ತು. ಎಂತವರನ್ನೂ ಮರುಳುಗೊಳಿಸುವ ಬೆಂಗಳೂರಿನ ಸೆಳೆತಕ್ಕೆ ಯಾರಾದರೇನು? ಬೆಳಗ್ಗಿನ ಚಳಿಯನ್ನು ತಾಳಲಾರದೇ ಕಾಫಿ ಕುಡಿದು, ಒಂದು ಸಿಗರೇಟನ್ನು ಗಮ್ಮೆನ್ನಿಸುತ್ತಿದ್ದಾಗ ತನ್ನನ್ನು ಯಾರೂ ಗಮನಿಸುವುದಿಲ್ಲ ಎಂದು ಬೇಗನೇ ಅರ್ಥಮಾಡಿಕೊಂಡ. ಒಂದೆರಡು ತಿಂಗಳಾಗುವಷ್ಟರಲ್ಲಿ ಹೇಗೋ ಬೆಂಗಳೂರು ಇವನಿಗೆ ಹೊಂದಿಕೊಂಡು ಬಿಟ್ಟಿತು.

ಸುಮಾರು ಐದು ತಿಂಗಳಾದಮೇಲೆ ಮನೆಗೆ ಬರುತ್ತಿರುವನನ್ನು ಮೊದಲಿನ ಉತ್ಸಾಹದಲ್ಲಿ ಹಳ್ಳಿ ಸ್ವೀಕರಿಸಲಿಲ್ಲ. ಅದೇನೋ ದೂರದ ನೆಂಟಸ್ಥಿಕೆಯವರೇನೋ ಹಳ್ಳಿಗೆ ಬಂದಂತೆ ಎನಿಸಿತು. ಅಮ್ಮನ ಪೇಲವ ಮುಖ, ಅಪ್ಪನ ಕೆಮ್ಮು ಎರಡನ್ನೂ ಬೆಂಗಳೂರಿನ ಅಮಲಿನಲ್ಲಿ ಅಲ್ಲಗಳೆದ. ಹಾಲು ಕುಡಿಯದೇ ಮಾರಿದ್ದೇ ಅಮ್ಮನ ಕೃಶ ಶರೀರಕ್ಕೆ ಕಾರಣ, ಹೆಚ್ಚು ತಿರುಗಿದ್ದೇ ಅಪ್ಪನ ಕೆಮ್ಮಿಗೆ ಕಾರಣ ಎಂದು ತನ್ನ ಸೂತ್ರಗಳನ್ನೂ ಪ್ರಯೋಗಿಸಿದ. ಹಾಗೇ ಸಮಯ ಸುಮ್ಮನಿರಲಿಲ್ಲ, ಬಂದ ಎರಡೇ ತಿಂಗಳಿನಲ್ಲಿ ಅಪ್ಪನನ್ನು ಯಾವುದೋ ಕಾಯಿಲೆಯ ರಸೀದಿ ನೀಡಿ ಇವನ ದುಡಿದ ಹಣವನ್ನು ಬೊಜ್ಜಕ್ಕೆ ಖರ್ಚು ಮಾಡಿಸಿತು.

ಸ್ವಲ್ಪ ಅನಾಥನಾದ ರಾಮಣ್ಣನಿಗೆ ಬೇರೇನೂ ತೋಚದೇ ಇದ್ದುದಕ್ಕೇ ಮದುವೆಯಾದ. ಅಮ್ಮನ ಒತ್ತಾಯಕ್ಕೆಂದು ಊರವರ ಬಳಿ ಹೇಳಿಕೊಂಡ. ಹೀಗೇ ಬಂದವಳು ಗೌರಿ. ಮೂರನೇ ಕ್ಲಾಸು ಓದಿದರೂ ದನಕರುಗಳ ಆರೈಕೆ, ಸಣ್ಣ ಪುಟ್ಟ ಕಾಯಿಲೆಗಳಿಗೆ ಸ್ವಯಂ ವೆಟರ್ನರಿ ಡಾಕ್ಟರು. ಕೆಲವೇ ತಿಂಗಳುಗಳಲ್ಲಿ ಹಳ್ಳಿಗೆ ಗೌರಕ್ಕ ಅಥವಾ ಗೌರಮ್ಮನಾಗಿ ಪ್ರಸಿದ್ಧಳೂ ಆದಳು. ಇವನ ತಿರುಗಾಟದ ಜ್ವರಕ್ಕೆ ತಕ್ಕಮಟ್ಟಿನ ಮದ್ದು ಕೊಡಬಲ್ಲಳೂ ಆದ್ದರಿಂದ ಒಂದೆರಡುವರ್ಷ ಸುಖವಾಗಿದ್ದರು ಎಂಬಲ್ಲಿಗೆ ಕತೆಯ ಪ್ರಾರಂಭ.

ಇದ್ದಕಿದ್ದಂತೇ ರಾಮಣ್ಣ ಬದಲಾಗುತ್ತಾ ಬಂದ. ಮದುವೆಗೂ ಮೊದಲು ಅವನ ವ್ಯಕ್ತಿತ್ವ ಹೀಗೇ ಎಂದು ಸಾಕ್ಷಾತ್ ಅಮ್ಮನಿಗೂ ಊಹಿಸುವುದಕ್ಕಾಗಿರಲಿಲ್ಲ. ಖಂಡಿತ ಕುಡುಕನಾಗುವ ಗುಣಲಕ್ಷಣ ಇರಲಿಲ್ಲ. ಒಮ್ಮೊಮ್ಮೆ ಯಾವುದೋ ಹಬ್ಬಕ್ಕೆ ಮದುವೆಗೆ ಸ್ವಲ್ಪ ಕುಡಿಯುತ್ತಿದ್ದುದು ನೀರು ಕುಡಿದಷ್ಟೇ ಸಣ್ಣ ವಿಷಯ. ಆದರೆ ದಿನಾ ಕುಡಿಯುವುದನ್ನ ಯಾಕೆ ಎಂದು ಪತ್ತೆ ಹಚ್ಚುವುದು ಸಾಧ್ಯವಾಗಲಿಲ್ಲ. ಇದು ಪ್ರಕೋಪಕ್ಕೆ ತಿರುಗತೊಡಗಿದ್ದು ಸ್ಪಷ್ಟವಾದಂತೆ ಗೌರಿ ಕಾರಣಗಳನ್ನ ಹುಡುಕತೊಡಗಿದಳು. ಮದುವೆಯಾಗಿ ಮೂರುವರ್ಷ ಸಮೀಪಿಸಿದರೂ ತಾನು ತಾಯಿಯಾಗದೇ ಇರುವ ಬಗೆಯನ್ನು ರಾಮಣ್ಣನ ಮೇಲೆ ಆರೋಪಿಸಿದ್ದಳು. ಇದು ರಾಮಣ್ಣನಿಗೆ ಅಷ್ಟು ಸುಲಭವಾಗಿ ಒಗ್ಗದೇ ಹೋಯಿತು. ರಾಮಣ್ಣನ ಅಮ್ಮ ಮೂಕ ಪ್ರೇಕ್ಷಕಿಯಾದಳು.

ಮುಂದಿನ ದಿನಗಳನ್ನ ಮನೆಯ ಮಾಡೂ ನಿರೀಕ್ಷಿಸಿರಲಿಲ್ಲ. ಎಲ್ಲವೂ ಜಟಿಲವಾಗುತ್ತಾ ಬಂತು. ಹೇಗೋ ರಾಮಣ್ಣ ಕುಡಿದು ಕುಪ್ಪಳಿಸಿ ಹನ್ನೆರಡು ಘಂಟೆಗೆ ಮನೆಯ ಅಂದಾಜಿನ ಮೇಲೆ ಬರುತ್ತಿದ್ದ. ನಂತರ ಮನೆಯಲ್ಲಿ ಮಹಾಯುದ್ಧವು ಪ್ರಾರಂಭವಾಗಿ ಬೈಗುಳ ಸಣ್ಣಪುಟ್ಟ ಹೊಡೆತದೊಂದಿಗೆ ಮುಕ್ತಾಯವಾಗುತ್ತಿತ್ತು. ದಿನವೂ ಇದನ್ನ ಸಹಿಸಿಕೊಂಡು ಅದು ಹೇಗೋ ಗೌರಮ್ಮ ಸುಮ್ಮನಿದ್ದಳು.ಒಂದು ದಿನ ಮಾತ್ರ ತುಂಬಾ ರೋಸಿಹೋಗಿ, ಅದೇನು ನಿಮ್ಮ ತಾಕತ್ತು ಕುಡಿದ ಮೇಲೆ? ಮಕ್ಕಳನ್ನು ಕೊಡುವ ತಾಕತ್ತಿಲ್ಲದವರು ಬದುಕಿದರೆಷ್ಟು ಸತ್ತರೆಷ್ಟು? ಎಂದಳು.

ಏನಾದರೂ ಸಹಿಸಿಕೊಳ್ಳಬಲ್ಲ ರಾಮಣ್ಣ ತನ್ನ ಕುಡಿತದ ಅತ್ಯಂತ ಹೆಚ್ಚಿನ ಅಮಲಿನಲ್ಲೂ ಈ ಮಾತುಗಳಿಂದ ತುಂಬಾ ಘಾಸಿಗೊಂಡನು. ಇದೇ ಮಾತುಗಳ ಪ್ರಭಾವವೋ ಏನೋ ಮತ್ತೆ ಕೆಲವು ತಿಂಗಳು ರಾಮಣ್ಣನಿಲ್ಲದ ರಾಮಣ್ಣನ ಮನೆ ಬಿಕೋ ಎನ್ನುತ್ತಿತ್ತು.

ಚೆನ್ನಾಗಿದ್ದ ರಾಮಣ್ಣ ಮಂಕಾಗುತ್ತಾ ಹೋದ. ಮಂಕಾಗುತ್ತಿದ್ದವ ಪುನಃ ಪ್ರಕಾಶಮಾನವಾಗತೊಡಗಿದ.  ಸುಮಾರು ದೂರದಲ್ಲಿರುವ ಹಳ್ಳಿಯ ವಾಸ್ತವ್ಯವನ್ನು ಗೆಳೆಯರ ಬಳಿ ಹೇಳಿಕೊಂಡ, ಹೇಗೋ ಕೆಲಸ ಮಾಡಿ ಬದುಕಿದ್ದ ರಾಮಣ್ಣ ಪುರುಷಾರ್ಥದ ಸಾಧನೆಗಾಗಿ ಯಾವುದೋ ಎರಡನೇ ಮದುವೆಯನ್ನೂ ಆದ. ಹೊಸಾ ಹೆಂಡತಿ ಗೌರಮ್ಮನಷ್ಟು ಒಳ್ಳೆಯವಳಲ್ಲದಿದ್ದರೂ ತನ್ನ ಪುರುಷಾಭಿಮಾನಕ್ಕೆ ಕಳಶವನ್ನಿಟ್ಟಳು. ತಾನು ಗರ್ಭವತಿ ಎಂದು ಮದುವೆಯಾಗಿ ಮೂರು ತಿಂಗಳಲ್ಲೇ ಸಾರಿದಳು. ಸುಮಾರು ಏಳೆಂಟು ತಿಂಗಳಾಗುವಂತೆಯೇ ಮನೆಯ ನೆನಪಾಗಿ ಪುನಃ ಹಳ್ಳಿಗೆ ಬಂದು ಬಿಕೋ ಎನ್ನುತ್ತಿದ್ದ ಮನೆಯನ್ನು ರಾತ್ರಿ ಹನ್ನೆರಡರವರೆಗೂ ಎಚ್ಚರಿಸಿದ.

ತಾನು ಹೇಗೆ ಗಂಡಸು ಎಂಬುದಕ್ಕೆ ಗೌರಮ್ಮನಿಗೆ ಪುರಾವೆಯಾಗಿ ಇನ್ನೊಂದು ಮದುವೆಯ ಕಥೆಯನ್ನೂ ಹೇಳಿದ. ಇದರಿಂದ ಮನೆಯ ಜಗಳ ಇನ್ನೂ ಹೆಚ್ಚಾಗಿ ಊರಿಗೆಲ್ಲಾ ದೊಡ್ಡ ವಿಷಯವಾಯಿತು. ಜಾಸ್ತಿಯಾದಂತೆ ಊರಿನವರೇ ಸೇರಿ ರಾಮಣ್ಣ, ತಾಯಿ ಮತ್ತೆ ಗೌರಮ್ಮನನ್ನು ಊರಿನ ಶಾಸ್ತ್ರಿಗಳ ಮನೆಗೆ ಕರೆದುಕೊಂಡುಹೋಗಿ, ಎಲ್ಲಾ ವಿಚಾರಗಳನ್ನು ನಿರ್ಣಯಿಸಿ ತೀರ್ಪು ಕೊಡಲಾಯಿತು. ಯಾವುದೇ ಕಾರಣಕ್ಕೂ ರಾಮಣ್ಣ ಹಳ್ಳಿಯನ್ನು ಬಿಟ್ಟು ಹೋಗದಂತೆ, ಯಾವುದೇ ಜಗಳ ಮಾಡದಂತೆ ರಾಮಣ್ಣನನ್ನು ಶಾಸ್ತ್ರಿಗಳೇ ಎಚ್ಚರಿಸಿ ಕಳುಹಿಸಿದ್ದರು. ಒಂದುವೇಳೆ ನಿನ್ನನ್ನು ಹುಡುಕಿ ಯಾರಾದರೂ ಬಂದಲ್ಲಿ ಪುನಃ ಮಾತನಾಡೋಣ ಎಂದು ಕೂಡಾ ಹೇಳಿದ್ದರು.
---
ಇದೇ ಬರುವ ಶನಿವಾರ ಯಕ್ಷಗಾನ. ಹಳ್ಳಿಯ ಮರ್ಯಾದೆಯನ್ನು ಜಾಸ್ತಿ ಮಾಡುವಂತಹ ವಿಷಯ ಎಂದು ಎಲ್ಲರೂ ಶಕ್ತಿಮೀರಿ ದುಡಿಯತೊಡಗಿದರು. ತಮ್ಮ ತಮ್ಮ ಪಾತ್ರಗಳಿಗೆ ಬೇಕಾದ ವಸ್ತು,ವಿಷಯಗಳ ಸಂಗ್ರಹಣೆಯಲ್ಲಿ. ರಾಮಣ್ಣನಂತೂ ತನ್ನ ದೇಹದ ಚಿಂತೆಯನ್ನೂ ಮರೆತು ಓದುತ್ತಾ ಇದ್ದ ರಾಮಾಯಣವನ್ನು. ನಾಳೆಯ ಪಾತ್ರಕ್ಕಾಗಿ ಕೊನೆಯ ಬಾರಿ ಕಣ್ತುಂಬ ರಾಮಾಯಣದ ರಾಮನನ್ನು ಕಾಣತೊಡಗಿದ ರಾಮಣ್ಣ.

ರಾಮಾಯಣ ಏನಕ್ಕೆ ರಾಮಣ್ಣನನ್ನು ಘಾಸಿಗೊಳಿಸುತ್ತಾ ಸಾಗಿತೋ? ರಾಮನ ಆದರ್ಶಗಳೇನು? ತನ್ನ ಪಾತ್ರವೇನು? ಬರಿಯ ಯಕ್ಷಗಾನದ ಪಾತ್ರಕ್ಕಾಗಿ ರಾಮನ ಮುಖವಾಡವೇ? ಅಲ್ಲ ರಾಮನಂತಹ ಒಂದು ಆದರ್ಶ ಬೇಕೇ? ಈ ಗೌರಮ್ಮ ಇನ್ನೂ ನನ್ನನ್ನು ಕ್ಷಮಿಸುತ್ತಾ ನನ್ನ ಜೊತೆ ಇರುವುದಕ್ಕೆ ಕಾರಣವೇನು? ಎರಡನೇ ಹೆಂಡತಿಯ ಮಗು ನನ್ನ ಹಾಗೇ ಇರಬಹುದೇ? ಇರಬಹುದಾದರೆ ನನ್ನನ್ನು ಹುಡುಕುವ ಪ್ರಯತ್ನ ಅವರು ಮಾಡಿರಬಹುದೇ? ಇದೆಲ್ಲಾ ರಾಮಣ್ಣನ ತಲೆಯಲ್ಲಿ ತುಂಬುತ್ತಾ ಹೋಯಿತು.

ಶನಿವಾರ ಗೌರಮ್ಮ ತನ್ನ ಬೆಳಗ್ಗಿನ ಕೆಲಸಗಳನ್ನೆಲ್ಲಾ ಮುಗಿಸಿ ಕಸಗುಡಿಸುತ್ತಾ ರಾಮಣ್ಣನ ಕೋಣೆಯನ್ನು ಹೊಕ್ಕಿದ್ದೇ ದೊಡ್ಡದಾಗಿ ಕಿರುಚಾಡಿದಳು. ರಾಮಣ್ಣ ಏನಕ್ಕೆ ಆತ್ಮಹತ್ಯೆ ಮಾಡಿಕೊಂಡ ಎಂಬ ವಿಷಯ ಶಾಸ್ತ್ರಿಗಳೂ ಊಹಿಸದೇ ಹೋದರು.
----0-----

Friday, 12 October 2012

ಅಪ್ಪಚ್ಚಿ ಹೇಳಿದ ಅಪ್ಪನ ಕತೆ- ಭಾಗ ೨ (ಸುರಂಗದ ಕತೆ)



ನಿನ್ನೆಯ ಕತೆ ಬಹಳ ಹೊತ್ತು ಯೋಚಿಸುವಂತೆ ಮಾಡಿತು. ಕತೆಯೇನೋ ರಮ್ಯವಾಗಿತ್ತು. ಅಂತಹ ಧೈರ್ಯವಿತ್ತೇ? ಯೋಚನೆಯಿತ್ತೇ ಬಾಲ್ಯದಲ್ಲೇ? ಸಾಧ್ಯವಿಲ್ಲವೇನೋ. ಚಿಕ್ಕಪ್ಪ ನನ್ನನ್ನು ರಂಜಿಸುವುದಕ್ಕೆಂದು ಹೇಳಿದ್ದಿರಬಹುದೇ? ಇಲ್ಲ ಕಟ್ಟುಕತೆಯಾಗಿರಬಹುದೇ? ಇದೆಲ್ಲಾ ವಿಚಾರಗಳು ತಲೆಯಲ್ಲಿ ಕೊರೆಯುತ್ತಿದೆ. ನಾಳೆಯೂ ಚಿಕ್ಕಪ್ಪನಿಗೆ ಎಲ್ಲೂ ಹೋಗಲಿಕ್ಕಿರಲಿಕ್ಕಿಲ್ಲ. ಹೋಗಿ ಅವರಮನೆಯಲ್ಲೇ ಕುಳಿತು ಸುಮ್ಮನೆ ಹೀಗೇ ಮಾತನಾಡಿಸಿದರೆ ಮುಂದಿನ ಕೆಲವು ಕತೆಗಳನ್ನಾದರೂ ಹೇಳಬಹುದು. ಹೇಗಾದರೂ ಮಾಡಿ ಇನ್ನೂ ತಿಳಿದುಕೊಳ್ಳಬೇಕು. ಸಾಧ್ಯವಿದ್ದರೆ ಅಂಗಡಿಯ ಜಗ್ಗಣ್ಣನನ್ನೂ ಭೇಟಿಯಾಗಬೇಕು. ಈ ರಜೆ ಮುಗಿಯುವುದರೊಳಗೆ ಒಂದು ಅಧ್ಯಯನ ಮಾಡಿದಂತೆ ಇದನ್ನೆಲ್ಲ ಡೈರಿಯಲ್ಲಿ ಬರೆದಿಟ್ಟು ಮಲಗುತ್ತೇನೆ.
--
ಓಹ್, ಬಾ ಮಾರಾಯ. ನಿನ್ನೆ ನೀನು ಕೊಟ್ಟ ಯಕ್ಷಗಾನದ ಸೀಡಿ ನೋಡಿ ನಿದ್ದೆ ಕಡಿಮೆಯಾಯಿತು. ಈಗ ತಿಂಡಿ ಆಗಿ ಹೊರಗೆ ಬರ್ತಾ ಇದ್ದೆ. ತಿಂಡಿ ಆಯಿತೇ ನಿನ್ನದ್ದು?. ನೀನೂ ಎಲೆ ಅಡಿಕೆ ಹಾಕುತ್ತೀಯಲ್ಲಾ? ತೋಟಕ್ಕೆ ಹೋಗಿ ಅಡಕ್ಕೆ ಹೆಕ್ಕುವುದಕ್ಕಿದೆ. ಈ ಹಾಳು ಬಾವಲಿಗಳು ಎಲ್ಲಾ ತಿಂದು ಚಲ್ಲಾಪಿಲ್ಲಿ ಚೆಲ್ಲುತ್ತವೆ.ಬಾವಲಿಗಳಿಗೆ ಟ್ರೈನಿಂಗ್ ಕೊಟ್ಟು ಅಡಕೆ ಕೊಯಿಲು ಮಾಡುವುದಕ್ಕೆ ಆಗುವುದಿಲ್ಲವೇ? ಇನ್ನು ಕೊಯಿಲು ಮಾಡಬೇಕು. ಈ ಸಲ ಇಳುವರಿ ಜಾಸ್ತಿ, ರೇಟು ಕಡಿಮೆ. ಹಾಳಾದ್ದು ಕಲ್ಲಿದ್ದಾಗ ನಾಯಿ ಕಾಣುವುದಿಲ್ಲ ನಾಯಿ ಇದ್ದಾಗ ಕಲ್ಲೇ ಕೈಗೆ ಸಿಗುವುದಿಲ್ಲ. ನಿನಗೆ ಗೊತ್ತಿರಲಿಕ್ಕಿಲ್ಲ,

ಮೊದಲು ಈ ತೋಟ ಇದೆಯಲ್ಲ ಇದರ ೧೫ ಪಟ್ಟು ನಮ್ಮ ತೋಟವಿತ್ತು. ಇದೇ ಅಡಕೆ ಮರಗಳು ಆಗ ಸಣ್ಣವು. ನಾವೇ ಅಡಿಕೆ ಮರದ ಬಟ್ಟಲಿಂದ ನೀರು ಎರೆದು ಇದನ್ನೆಲ್ಲ ಬೆಳೆಸಿದ್ದು ನೋಡು. ಮುಂದೆ ಹರಿದು ಹಂಚಿಹೋದ ತೋಟಗಳನ್ನು ಬೇಲಿಯಾಚೆಯಿಂದ ನೋಡುವಾಗ ನೋವಾಗುತ್ತದೆ. ಇಮಾನ್ ಸೋಜರು ಗದ್ದೆ ಮಾಡುತ್ತಿದ್ದಾರಲ್ಲಾ ಅಲ್ಲಿವರೆಗೆ ನಮ್ಮ ತೋಟ. ನಿನ್ನಪ್ಪನೂ, ದೊಡ್ಡಪ್ಪನೂ ನಾನೂ ಸುಮಾರು ಮೂರು ಸಾಲುಗಳಿಗೆ ನೀರು ಹಾಕಬೇಕಿತ್ತು ದಿನಾ. ಇದೇ ನೀರಿನದಂಡೆ. ಮೊದಲು ಇಮಾನ್ ಸೋಜರ ಮನೆಯ ಹಿಂದೆ ಇದ್ದ ಸುರಂಗದಿಂದ ನೀರು ಬರುತ್ತಿತ್ತು. ಇಲ್ಲೂ ಒಂದು ವಿಶೇಷವಾದ ಕತೆ ಇದೆ. ನಿನಗೆ ಕೇಳಿ ಗೊತ್ತಿರಬೇಕು.!

ಹೇಳು ಚಿಕ್ಕಪ್ಪ. ಇಮಾನ್ ಸೋಜರು ಗೊತ್ತು. ಅವರ ಅಪ್ಪ ಬಾಬುವೂ ಕೇಳಿ ಗೊತ್ತು.

ಓಹೋ. ಬಾಬುವನ್ನೂ ನೆನಪಿದೆಯೇ? ಸರಿ. ಬಾ, ಹೇಗೂ ಇಮಾನ್ ಸೋಜರ ಮನೆಯಿಂದ ಪಂಪಿನ ಸ್ಪಾನರು ತರಲಿಕ್ಕಿದೆ. ಹಾಗೇ ಹೋಗಿ ಬರೋಣ. ಇದೇ ಬಾಬು ಸೋಜರಿದ್ದಾರಲ್ಲ, ಅವರು ಮೊದಲು ನಮ್ಮ ಮನೆಯಲ್ಲಿ ಕೆಲಸಕ್ಕಿದ್ದವರು. ಈಗ ಕೊಡುವಂತೆ ದಿನಕ್ಕೆ ೩೦೦, ೪೦೦ ಕೊಡುವಂತಿಲ್ಲ ಆಗ. ಹೇಳಿದ ಕೆಲಸ ಮಾಡಬೇಕಿತ್ತು, ಹಾಗೆಯೇ ಕೊಟ್ಟದ್ದನ್ನು ತೆಗೆದುಕೊಂಡು ಹೋಗಬೇಕಿತ್ತು. ಮತ್ತೆ ನಮ್ಮ ಹಿರಿಯರು ಮಾಡಿದ್ದೂ ಅದೇ, ಕೊಟ್ಟರೂ ಕೊಡದವರಂತೆ ಸಿಟ್ಟಾಗುತ್ತಾ ಇರುತ್ತಿದ್ದರು. ಕೊಡದೇ ಇದ್ದರೂ ನಾನೇನೂ ಕೊಡಲಿಲ್ಲವೆಂದು ಜಗತ್ತಿಗೆ ಸಾರುತ್ತಿದ್ದರು. ನಮ್ಮ ಅಪ್ಪ, ಅಂದರೆ ನಿಮ್ಮ ಅಜ್ಜ ಏನೂ ಕೊಡುತ್ತಿರಲಿಲ್ಲ. ಆದರೆ ಅಮ್ಮ ಕೊಡುತ್ತಿದ್ದದು ತಿಳಿದು ಸುಮ್ಮನೇ ಇದ್ದರು. ಅಂದರೆ ಚಿವುಟುವುದೂ ತೊಟ್ಟಿಲು ತೂಗುವುದೂ ಎರಡೂ ಕೆಲಸವನ್ನು ಮಾಡುತ್ತಿದ್ದರು.

ನೋಡು ಇದೇ ಈಗ ಇಮಾನ್ ಸೋಜರ ಮನೆ. ಮೊದಲ ಮಗನಿಗೆ ಮದುವೆಯಾಗಿ ಈಗ ಪೇಟೆಯಲ್ಲಿದ್ದಾನೆ. ಎರಡನೇ ಮಗ, ಹೆಂಡತಿ ಮತ್ತೆ ಸೋಜರು ಮಾತ್ರ ಇಲ್ಲಿ. ಸೋಜರು ಮನೆಯಲ್ಲಿದ್ದಂತಿಲ್ಲ, ನಾವು ತೋಟದಲ್ಲೇ ಮುಂದೆ ಹೋಗಿ ಸುರಂಗ ನೋಡಿಕೊಂಡು ಬರುವುದರೊಳಗೆ ಬಂದಾರವರು.

ನೋಡು ಈ ಈಚಲಮರದ ಗುರುತು. ಇಲ್ಲಿ ಈ ಕಲ್ಲಿಂದ ಬಗ್ಗಿ ನೋಡಿದರೆ ಗವ್ವೆನ್ನುವ ಕತ್ತಲೆ ಬಿಟ್ಟರೆ ಬೇರೇನೂ ಕಾಣಿಸುತ್ತಿರಲಿಲ್ಲ ಮೊದಲು. ಇದೇ ಜಾಗದಲ್ಲಿ ಮೊದಲು ಸಣ್ಣ ಕೆರೆ ಇತ್ತು. ಸುರಂಗದ ಶುದ್ಧ ನೀರು ಹರಿದು ಕೆರೆಯನ್ನು ಸೇರಿ ನಂತರ ನಮ್ಮ ಮನೆಯ ಎದುರಾಗಿ ಹರಿದು ತೋಡು ಸೇರುತ್ತಿತ್ತು. ಈಗ ಮಳೆಗಾಲದಲ್ಲಿ ಮಾತ್ರ ನೀರು. ಮೇಲೆ ರಬ್ಬರಿದೆ ನೋಡು ಅದಕ್ಕೇ.

ಮೊದಲು ನಾವು ಸಣ್ಣದಿದ್ದಾಗ, ದೊಡ್ಡಪ್ಪ, ನಿನ್ನಪ್ಪ, ಜಗ್ಗು, ಎಲ್ಲಾ ಇಲ್ಲಿನ ಖಾಯಂ ಸದಸ್ಯರು. ಸುರಂಗದ ತಂಪು ನೀರು ಈ ಕರಾವಳಿಯ ಬೆಚ್ಚನೆಯ ಬೆವರಿಗೆ ಒಳ್ಳೆಯ ಸಾಂತ್ವನ ಒದಗಿಸುತ್ತಿತ್ತು. ಹಾಗೆಯೇ ಆಡಿ ದಣಿದಾಗ ಇಲ್ಲಿ ಬಂದು ಕುಳಿತು ಕಲ್ಲೆಸೆದೋ ಈಜಿಯೋ ಸಮಯ ಸಾಗಹಾಕುತ್ತಿದ್ದೆವು. ಈಗಲೂ ನೆನೆದರೆ ನಗುಬರುತ್ತಿದ್ದ ವಿಷಯವೆಂದರೆ ಇದೂ ಟಿಪ್ಪು ಸುಲ್ತಾನ್ ಮಾಡಿದ ಸುರಂಗವೆಂದು. ಇಲ್ಲಿಂದ ಹೋದರೆ ಸುಮಾರು ಮೈಲು ದೂರದಲ್ಲಿ ಅದಾವುದೋ ಊರಿಗೆ ತಲುಪುತ್ತದೆ ಎಂಬ ಕತೆ. ಹ್ಹ ಹ್ಹ. ನನಗೂ ಡಿಗ್ರೀ ಮುಗಿಯುವವರೆಗೆ ಇದು ಸತ್ಯವೆಂದೇ ಇತ್ತು.

ಒಂದು ದಿನ ತುಂಬಾ ಬಿಸಿಲು. ರಜಾದಿನ ಬೇರೆ. ಬೆಳಗ್ಗಿನಿಂದ ಮದ್ಯಾಹ್ನದವರೆಗೆ ಆಟವಾಡಿ ಇದೇ ಸುರಂಗದ ಬಳಿಯಲ್ಲಿ ಆಟವಾಡುವುದಕ್ಕೆಂದು ಬಂದಿದ್ದೆವು. ಜಗ್ಗುವೂ ನಿನ್ನಪ್ಪನದೂ ಎಂದಿನಂತೆ ಕೆರೆಯಲ್ಲಿ ಈಜುವ ಪಂದ್ಯ. ನೀನೆಷ್ಟು ಸುತ್ತು ನಾನೆಷ್ಟು ಸುತ್ತು ಎಂದು ಈಜಿ ಈಜಿ ಸುಸ್ತಾದರು. ಶಾಮ ಮತ್ತೆ ಕೇಶವ ಎಂದೂ ತುಂಬಾ ಹೊತ್ತು ನಿಲ್ಲುತ್ತಿರಲಿಲ್ಲ. ಕೇಶವನಿಗಂತೂ ಮನೆ ದೂರವೆಂದು ಬೇಗನೆ ಓಡುತ್ತಿದ್ದ. ಜಗ್ಗು ನಮ್ಮ ಮನೆಯಲ್ಲೇ ಊಟ ಮಾಡಿ, ಬೇಕಾದರೆ ಮೂರು ದಿನ ಇದ್ದು ನಾಡಿದ್ದು ಹೋದರೂ ಯಾರೂ ಏನನ್ನುತ್ತಿರಲಿಲ್ಲ. ಈಗಲೂ ಹಾಗೆಯೇ ಇದ್ದಾನೆ ಬಿಡು.

ಸುಸ್ತಾದವರು ಸುಮ್ಮನಿರುವುದು ಲೋಕದ ರೂಢಿ. ಆದರೆ ಮನಸ್ಸು ಸುಸ್ತಾಗದೇ ಇದ್ದರೆ ಎಂತಹುದನ್ನೂ ದೇಹ ಮಾಡುತ್ತದೆ ಎನ್ನುವುದಕ್ಕೆ ನಮ್ಮಲ್ಲೇ ಎಷ್ಟೋ ಉದಾಹರಣೆಗಳಿರುತ್ತವೆ. ಅದೇ ಹುರುಪು ಅದೇ ಉತ್ಸಾಹದಲ್ಲಿ ಏನು ಮಾಡುವುದು ಎಂದು ಯೋಚಿಸುತ್ತಾ ಇರಬೇಕಾದರೆ ಸುರಂಗದ ಒಳಗೆ ಇರುವ ಕುತೂಹಲ ಇದೆಲ್ಲದಕ್ಕೂ ಸಾಹಸ ತೋರಿಸಲು ಮುಂದಾಯಿತು. ಜಗ್ಗು ಮತ್ತೆ ನಿನ್ನಪ್ಪ ಇದರಲ್ಲಿ ತುಂಬಾ ಮುತುವರ್ಜಿ ವಹಿಸಿದರು. ಆಗ ಬ್ಯಾಟರಿ ಇಲ್ಲ, ಬೇರೆ ಬೆಳಕಿನ ವ್ಯವಸ್ಥೆ ಇಲ್ಲ. ಸುರಂಗವೆಂದರೆ ಕತ್ತಲು, ತೋಟದ ಕತ್ತಲು ಎಲ್ಲಾ ಸೇರಿ ಸ್ವಲ್ಪ ಹೆದರಿಕೆ ಉಂಟುಮಾಡತೊಡಗಿತು.

ಏನಿದ್ದರೂ ಹೊರಗೆ ಬರಲಿ ಎಂದು ಮೊದಲು ಕಲ್ಲೆಸೆಯುವುದು. ಸುಮಾರು ಕಲ್ಲೆಸೆದಾದ ಮೇಲೆ ಸ್ವಲ್ಪ ಧೈರ್ಯ ಬಂತು. ಮೆಲ್ಲನೇ ಸುರಂಗದೊಳಕ್ಕೆ ಎರಡು ಮೂರು ಮೀಟರಿನಷ್ಟು ಒಳಗೆ ಬಂದೆವು. ನಾನು ಮುಂದೆ ಹೋಗಲಿಕ್ಕಾಗಲಿಲ್ಲ, ಅದ್ಯಾವುದೋ ಮೊನಚು ಕಲ್ಲು ತಾಗಿ ಕಾಲ್ಬೆರಳಿಗೆ ಏಟಾಗಿ ನಾನು ಪುನಃ ಹೊರಗೆ ಬಂದು ಕುಳಿತೆ. ಜಗ್ಗು ಮತ್ತೆ ನಿನ್ನಪ್ಪ ಒಳಗೆ ಹೋದರು. ಸಾಧಾರಣ ಇನ್ನೆರಡು ಅಥವಾ ಮೂರು ಮೀಟರು ಹೋಗಿರಬೇಕು ಅಷ್ಟರಲ್ಲಿ ಅದ್ಯಾವುದೋ ಕಾಡು ಹಂದಿ ಅರಚುತ್ತಾ ಹೊರಗೆ ಬಂತು. ನಾನು ಹೆದರಿ ಕೆರೆಗೆ ಹಾರಿದೆ.

ಇದಾದ ಐದಾರು ನಿಮಿಷದಲ್ಲಿ ನಿನ್ನ ಅಪ್ಪ ಜಗ್ಗುವನ್ನು ಹೇಗೋ ಹೊತ್ತುಕೊಂಡೋ ಎಳೆದುಕೊಂಡೋ ಹೊರಗೆ ಬಂದ. ಜಗ್ಗುವಿನ ಕಾಲಿನ ಮಾಂಸ ಕಿತ್ತು ಬಂದಂತಿತ್ತು. ಜೊತೆಗೇ ಮೂಗು ಒಡೆದು ನೆತ್ತರು ಬರುತ್ತಿತ್ತು. ಬಂದವನೇ ಜೋರಾಗಿ ಅಳತೊಡಗಿದೆ. ನಾನು ಓಡಿ ಹೋಗಿ ಬಾಬು ಸೋಜರನ್ನು ಕರೆದುಕೊಂಡು ಬಂದೆ.

ಬಾಬು ಸೋಜರು ಏನೂ ಹೇಳದೇ ಮನೆಗೆ ಎತ್ತಿಕೊಂಡು ನಡೆದರು. ನಾವಿಬ್ಬರೂ ಅಪರಾಧಿಗಳಂತೆ ಹಿಂದೆ. ಮತ್ತೆ ನಮ್ಮನ್ನು ಅವರೇ ಸಮಾಧಾನ ಮಾಡಿ ಜಗ್ಗುವಿನ ಕಾಲಿಗೆ ಕಟ್ಟು ಹಾಕಿ, ಕಳುಹಿಸಿದರು. ಜಗ್ಗು ಸುಮಾರು ೧೦-೧೫ ದಿನ ಅಲ್ಲಿಯೇ ಇದ್ದ. ನಂತರ ಸುಮಾರು ನಾಲ್ಕು ತಿಂಗಳ ವರೆಗೆ ಜಗ್ಗು ನಡೆದಾಡುವುದು ಸಾಧ್ಯವಾಗಲೇ ಇಲ್ಲ.

ಕೊನೆಗೆ ನಿನ್ನಪ್ಪನೇ ಒಳಗಾದ ಕತೆ ಹೇಳಿದ. ಒಳಗೆ ಹೋದಂತೆ ಕತ್ತಲೂ ಬೆಳಕಾಗುತ್ತದಂತೆ. ಹಾಗೆಯೇ ಹೊರಗೆ ಅಸಾಧ್ಯವಾಗಿದ್ದ ಸುರಂಗ ಒಳಸರಿದಂತೆ ಸ್ವಲ್ಪ ಸುಲಭವೆನಿಸಿತು. ಸುರಂಗದ ಬಾಯಿ ಇಷ್ಟೇ ಇದ್ದರೂ ಒಳಗೆ ಸ್ವಲ್ಪ ವಿಶಾಲವಂತೆ. ಮುಂದುವರೆಯುತ್ತಿದ್ದಂತೆ ಎಲೆಬಾವಲಿ ಇತ್ಯಾದಿ ಓಡಿಸಿ, ಕೆಸರಿನ ಕಾಲುಗಳನ್ನೆತ್ತೆತ್ತಿ ಸಾಗುತ್ತಾ ತಿಳಿಯದೇ ನಿನ್ನಪ್ಪ ಹಂದಿಯ ಸಂಸಾರದ ಮೇಲೆ ಕಾಲಿಟ್ಟರಂತೆ. ಅದೆಲ್ಲಿತ್ತೋ ಏನೋ, ದೊಡ್ಡ ಕೋರೆ ಹಲ್ಲಿನ ಹಂದಿಯೊಂದು ಓಡಿಬಂದು ಜಗ್ಗುವಿಗೆ ಹೊಡೆಯಿತಂತೆ. ಆ ಘಳಿಗೆ ಏನುಮಾಡುವುದೆಂದು ತೋಚದ ನಿನ್ನಪ್ಪ ಯಾವುದೋ ಕೈಗೆ ಸಿಕ್ಕ ಕಲ್ಲನ್ನೇ ಹಂದಿಗೆ ಹೊಡೆದ. ಹಂದಿಗೆ ಏಟಾಗಿ ಅದು ಓಡಿ ಹೊರಗೆ ಬಂತು. ನಿನ್ನಪ್ಪ ಬಿದ್ದ ಜಗ್ಗುವನ್ನೆತ್ತಿಕೊಂಡು ಬಂದ.

ಜಗ್ಗುವಿಗೆ ಹಂದಿಯ ಏಟೆಂದು ಯಾರಿಗೂ ಗೊತ್ತಾಗದಂತೆ ಕಟ್ಟು ಕಟ್ಟಿದ ಮಹಾನುಭಾವ ಬಾಬು. ಇವತ್ತಿನವರೆಗೂ ಗುಟ್ಟಾಗಿಟ್ಟು ಈಗ ನಿನ್ನಲ್ಲಿ ಹೇಳಿದೆ. ಜಗ್ಗುವಿನಂಗಡಿಗೆ ಹೋಗಿ ಹೇಳಿಬಿಡಬೇಡ ಮತ್ತೆ. ಇಮಾನ್ ಸೋಜರು ಬಂದಿರಬೇಕು ಈಗ, ಹೋಗೋಣ ನಡೆ.

೧೨-೧೦-೧೨

Thursday, 11 October 2012

ಅಪ್ಪಚ್ಚಿ ಹೇಳಿದ ಅಪ್ಪನ ಕತೆ :ಭಾಗ ೧ (ಪ್ರವಾಹದ ಕತೆ)

ಇದೇನು ಅಪ್ಪಚ್ಚಿ ಎಂದರೆ? ನಮ್ ಕಡೆ ಹೀಗೇ, ಅಂದ್ರೆ ಹವ್ಯಕ ಭಾಷೆಯಲ್ಲಿ ಅಪ್ಪಚ್ಚಿ ಅಂದ್ರೆ ಚಿಕ್ಕಪ್ಪ ಎಂದು. ಈಗ ಹೇಳಲಿರುವ ಕಥೆಗಳು ಮಾತ್ರ ಇಂತಹ ಒಬ್ಬ ಅಪ್ಪಚ್ಚಿ ಹೇಳಿದ ನಮ್ಮ ನಾಯಕನ ಅಪ್ಪನ ಕಥೆ.
--
ಭಾಗ ೧.

ಅಪ್ಪಚ್ಚಿ ಹೇಳಿದ ಕಥೆ (೧೯೭೦, ಊಹಿತ ವರ್ಷ) : ಆ ಕಾಲಕ್ಕೆ ಒಂದು ಅದ್ಭುತ ಮನೆಯಾಗಿತ್ತು ಅದು. ಈಗಿನ ಊರು ಬಿಡು, ಹತ್ತಿರದ ಹತ್ತು ಹದಿನೈದು ಊರಿಗೂ ನಮ್ಮ ಮನೆತನ ಹೇಳಿದರೆ ಹೆಸರುವಾಸಿ. ಆಗ ನನಗೆ ೧೦ ನಿನ್ನ ಅಪ್ಪನಿಗೆ ೧೨ ವರ್ಷ ವಯಸ್ಸು. ತೋಡಿನಲ್ಲಿ (ಸಣ್ಣ ನದಿಗಳಿಗೆ ತೋಡು ಎಂದೇ ಕರೆಯುವುದು ನಮ್ಮ ಕಡೆ!) ಮಳೆಗಾಲದಲ್ಲಿ ತೆಂಗಿನಕಾಯಿ ಹಿಡಿಯುವುದು ಈಗ ನೆಟ್’ನಲ್ಲಿ ಹುಡುಗಿಯನ್ನ ಹುಡುಕುವುದಕ್ಕಿಂತ ಸಾಹಸದ ಕೆಲಸ. ಇದಕ್ಕೆ ನಿಯೋಜಿತವಾಗಬೇಕಿದ್ದರೆ ಮೊದಲು ಕೆರೆಯಲ್ಲಿ ಕೈಕಾಲು ಬಡಿದು ಪ್ರಾಕ್ಟೀಸು ಮಾಡಿರಬೇಕು. ಮತ್ತೆ ನಾಯಕ ಹೇಳುವ ಕೆಲಸ ಮಾತ್ರ ಮಾಡಬೇಕು. ಹೆಚ್ಚಾಗಿ ದೂರದಲ್ಲಿ ಸಾಗುವ ಕಾಯಿಯನ್ನು ಹಿಡಿಯಲು ನಾಯಕನಿಗೆ ಮಾತ್ರ ಅವಕಾಶ.
ಇಂತಹದ್ದರಲ್ಲಿ ನಿನ್ನ ಅಪ್ಪನಿಗೆ ಸಿಕ್ಕಿದ ಅವಕಾಶದ ಬಗ್ಗೆ ಆಗ ನಮಗೆಲ್ಲ ಹೆಮ್ಮೆ. ಚೆನ್ನಾಗಿ ಈಜು ಕಲಿತಿದ್ದ ನಿನ್ನ ಅಪನಿಗೆ ಇಂತಹ ಅವಕಾಶ ಸಿಕ್ಕಿತು. ಆ ದಿನ, ಜುಲೈ ಆಗಿರಬೇಕು. ಬೆಕ್ಕೂ ತನ್ನ ದೈನಂದಿನ ವಿಧಿಗಳನ್ನ ಮನೆಯ ಅಟ್ಟದಮೇಲೇ ಪೂರೈಸಿಕೊಳ್ಳುವಷ್ಟು ಮಳೆ.

ಇಂತಹ ಅಮೋಘ ಮಳೆಯ ದಿನ ಜಗ್ಗು,ಶಾಮ, ಕೇಶವ, ನಾನು ಮತ್ತೆ ನಿನ್ನ ಅಪ್ಪ ಪ್ರವಾಹದಲ್ಲಿ ತೆಂಗಿನ ಕಾಯಿ ಹಿಡಿಯಲು ಹೊರಟೆವು. ನಿನ್ನಪ್ಪ ಎಲೆಅಡಿಕೆ ಜಗಿಯುತ್ತಿದ್ದರೂ ಜಗ್ಗು ಬೀಡಿ ಸೇದುತ್ತಿದ್ದರೂ ಮನೆಯಲ್ಲಿ ಯಾರಿಗೂ ಗೊತ್ತಿರಲಿಲ್ಲ. ಹಾಗಾಗಿ ನಮ್ಮಲ್ಲೇ ರಾಜಾರೋಷವಾಗಿ ಇಬ್ಬರೂ ರಾಜಿಸುತ್ತಿದ್ದರು.
--
ದೊಡ್ಡ ನದಿಯಲ್ಲವದು. ಮಳೆಗಾಲದಲ್ಲಿ ಮಾತ್ರ ಸ್ವಲ್ಪ ಭಯ ಹುಟ್ಟಿಸುತ್ತಿತ್ತು. ನಾವು ತೋಡು ಎಂದೇ ಕರೆಯುವುದು. ಈಗಿನ ಭಾಷೆಯಂತೆ ಅದನ್ನು ನದಿ ಎನ್ನುವ ಹಾಗಿಲ್ಲ. ನದಿ ಎಂದರೆ ನೇತ್ರಾವತಿ ನೋಡು.
ಆ ದಿನ ಯಾವನನ್ನು ಮಳೆಗೆ ರಾಜನನ್ನಾಗಿಸಿದ್ದಾರೋ, ಎಡೆಬಿಡದೆ ಸುರಿಯುತ್ತಿದ್ದ. ಅದೂ ಭೂಮಿಯಲ್ಲಿ ನೀರಾದ ಮೇಲೆ ಬಂದ ಮಳೆಯಾದುದರಿಂದ ಬಿದ್ದ ನೀರು ಹಾಗೆಯೇ ತೋಡು ಸೇರುತ್ತಿತ್ತು.
-
ಈಜುವುದು ಸಣ್ಣಕೆರೆಯಿಂದಾರಂಭಿಸಿದ್ದು. ಉತ್ಸಾಹ ಹೆಚ್ಚಿದಂತೆ ಕಲಿಯುವ, ಕಲಿತಂತೆ ಫಲಿತವಾಗುವ ಅನುಭವ ಈಜಿನಿಂದ ಸಿಗುವಷ್ಟು ಯಾವುದರಿಂದಲೂ ಸಿಗುವುದಿಲ್ಲವೆನಿಸುತ್ತದೆ. ಎಲ್ಲರೂ ಒಂದೇ ರೀತಿಯ ಜಲಸ್ಥಂಭ ವಿದ್ಯೆ ಕಲಿತವರು. ಹಾಗಾಗಿ ಎಲ್ಲರಲ್ಲೂ ಸಮಾನತೆಯಿತ್ತು. ಎಲ್ಲರಿಂತ ಸ್ವಲ್ಪ ಕುಳ್ಳನಾದ ಮತ್ತು ಸಣ್ಣವನಾದ ನನ್ನ ಮೇಲೆಯೇ ಕಡಿಮೆ ಹೊರೆಯಿತ್ತು. ನಿನ್ನ ಅಪ್ಪ ಮತ್ತೆ ಜಗ್ಗು ತುಂಬಾ ಉತ್ಸಾಹಿಗಳು ಮತ್ತೆ ಧೈರ್ಯ ಜಾಸ್ತಿ. ಮರದ ತುಂಡು ಕಂಡರೂ ಹಾರುತ್ತಿದ್ದರು ಹಿಡಿಯುವುದಕ್ಕೆ.

ಹೇಳಿದಂತೆ ಮಳೆಯ ಪ್ರವಾಹ ಎಲ್ಲರ ತೋಟವನ್ನೂ ಹೊಕ್ಕು ಬೇಕಾದುದನ್ನು ತನ್ನ ಹೊಟ್ಟೆಗಿಳಿಸಿ ಬೇಡದುದನ್ನು ತೋಟಗಳಲ್ಲಿಯೇ ಬಿಟ್ಟು ಬರುತ್ತಿತ್ತು. ಶಂಕರಜ್ಜನ ತೋಟದೆದುರು ನಾವೆಲ್ಲಾ ಸೇರಿದೆವು. ದಿನಾ ನೀರು ನೋಡುತ್ತಿದ್ದಂತೆ ಇರಲಿಲ್ಲ ಅಂದು. ಈಗಿನ ವರೆಗೂ ನಾನು ಆದಿನ ಕಂಡಂತ ಪ್ರವಾಹ ನೋಡಿಲ್ಲ. ಮಳೆ ಮುಂದುವರೆದಂತೆ ಕ್ರಮೇಣ ತಿಳಿಯಾಗಬೇಕಿತ್ತು ನೀರು. ಇದು ಕಣ್ಣನ್ ದೇವನ್ ಚಹಾದಂತೆ ಮತ್ತಷ್ಟು ರಂಗಿನೊಂದಿಗೆ ಮತ್ತೇರಿಸುತ್ತಿತ್ತು.

ತೆಂಗಿನಮರವೇ ಬರುವ ಪ್ರವಾಹದಲ್ಲಿ ತೆಂಗಿನಕಾಯಿ ಬಾರದೇ? ಸುಮಾರು ೧೦-೧೨ ತೆಂಗಿನಕಾಯಿಗಳಾಗಿತ್ತು ಹಿಡಿದದ್ದು. ನೀರು ಹೆಚ್ಚುತ್ತಿತ್ತು. ಭಯವೂ ಹೆಚ್ಚುತ್ತಿತ್ತಿ. ನಿನ್ನಪ್ಪನಿಗೂ ಜಗ್ಗುವಿಗೂ ಉತ್ಸಾಹ ಅತಿಯಾಗುತ್ತಿತ್ತು. ಕಾಯುತ್ತಿದ್ದರು ಪ್ರವಾಹಕ್ಕೆ ಜಿಗಿಯಲು. ಅದೇ ಸಮಯಕ್ಕೆ ಎರಡು ತೆಂಗಿನಕಾಯಿಗಳು ಬಂತು. ಇಬ್ಬರೂ ಜಿಗಿದರು ಪ್ರವಾಹಕ್ಕೆ. ಒಂದು ಕ್ಷಣದಲ್ಲಿ ಏನಾಯಿತು ಎಂದು ತಿಳಿಯುವಷ್ಟರಲ್ಲಿ ಇಬ್ಬರೂ ತುಂಬಾ ದೂರದಲ್ಲಿ ಪ್ರವಾಹದಲ್ಲಿ ತೇಲಿ ಸಾಗುತ್ತಿದ್ದರು. ಜಗ್ಗುವೂ ನಿನ್ನಪ್ಪನೂ ನಮ್ಮೆಲ್ಲರ ಕಣ್ಣಿಂದ ಮರೆಯಾದರು.

ನಾವು ಸುಮಾರು ಎರಡು ಗಂಟೆಗಳ ಕಾಲ ನೀರು ನೋಡುತ್ತಾ ಅವರನ್ನು ಕಾದು ಕುಳಿತೆವು. ಸಂಜೆಯಾದರೂ ಇವರಿಬ್ಬರ ಪತ್ತೆ ಇರಲಿಲ್ಲ. ಪ್ರವಾಹದಲ್ಲಿ ಈಜಿಕೊಂಡು ಮೇಲೆ ಬರುವುದು ಸಾಧ್ಯವಿಲ್ಲ. ಬದಿಯಲ್ಲೇ ನಡೆದುಕೊಂಡು ಬರಬೇಕು. ಏನು ಮಾಡುವುದು ಎಂದು ತಿಳಿಯದೆ ಸುಮ್ಮನೇ ಇದ್ದೆವು. ಮನೆಯಿಂದ ಕೇಶವನ ಅಪ್ಪ ನಮ್ಮನ್ನು ಹುಡುಕಿಕೊಂಡು ಬಂದರು. ಮುಚ್ಚಿಡಲಾಗದೇ ಹೇಳಿದೆವು. ನಮ್ಮೆಲ್ಲರ ಮನೆಯವರೆಗೆ ಸುದ್ಧಿ ಹೋಯಿತು. ಜಗ್ಗುವಿನ ಅಮ್ಮನ ಗೋಳಾಟವಂತೂ ನೋಡುವಂತದ್ದಲ್ಲ. ಒಬ್ಬನೇ ಮಗ ಬೇರೆ. ನನ್ನನ್ನು ಹೊರತು ಪಡಿಸಿ ಎಲ್ಲರಿಗೂ ಏಟುಗಳು ಬೇರೆ ಸಿಕ್ಕಿ ಮಳೆಯ ಚಳಿಯು ಮರೆತೇ ಹೋಗಿತ್ತು.

ಮಳೆಯ ಕಾರಣಕ್ಕೆ ಮರುದಿನ ಶಾಲೆಗೆ ರಜೆ. ಎಲ್ಲಾ ಸಂಬಂಧಿಕರು ಜಗ್ಗು ಮತ್ತು ನಿನ್ನ ಅಪ್ಪನ ಅನ್ವೇಷಣೆಯಲ್ಲಿ ತೊಡಗಿದ್ದರು. ಮರುದಿನ ಮಧ್ಯಾಹ್ನವಾಗಿತ್ತು. ಜಗ್ಗು ಮತ್ತೆ ನಿನ್ನಪ್ಪ ಇದ್ದಕ್ಕಿದ್ದಂತೇ ಮನೆಯಲ್ಲಿ ಪ್ರತ್ಯಕ್ಷವಾಗಿದ್ದರು ಅದೂ ೨೦-೨೫ ತೆಂಗಿನಕಾಯಿಗಳೊಂದಿಗೆ. ಎಲ್ಲರಿಗೂ ಸಂತೋಷವೂ ರೋಷವೂ ಒಟ್ಟಿಗೇ ಬಂದಿತ್ತು. ಕ್ರಮೇಣ ಹುಡುಕುತ್ತಿದ್ದವರಿಗೆ ಸುದ್ಧಿ ಸಂಚಾರವಾಗಿ ಎಲ್ಲರೂ ಮನೆಯ ಕಡೆ ಬಂದರು. ಏನೇ ತೀರ್ಮಾನವಾದರೂ ನಮ್ಮ ಹಳೆಯ ಮನೆಯಲ್ಲೇ ತಾನೇ?. ಇಬ್ಬರಿಗೂ ಮೊದಲು ಬಿದ್ದಿದ್ದು ಏಟು. ನಾವು ಮೊದಲು ಖುಷಿಪಟ್ಟರೂ ಕೊನೆಗೆ ನಮಗೇ ಏಟು ಬಿದ್ದಂತೆ ಅನಿಸುತ್ತಿತ್ತು. ಅದೆಲ್ಲಾ ಆದ ಮೇಲೆ ಕತೆಯನ್ನು ಕೇಳತೊಡಗಿದರು.

ಪ್ರವಾಹದಲ್ಲಿ ಬಿದ್ದ ಇಬ್ಬರೂ ಬದಿಗೆ ಬರಲಾಗದೆ ಸುಮ್ಮನೆ ತೇಲುತ್ತಾ ಹೋದರು. ಮುಂದೆ ಹೋದಂತೆ ಒಂದು ಕಡೆ ಕವಲೊಡೆಯುತ್ತದೆ ತೋಡು. ಅಲ್ಲಿ ಮಧ್ಯದಲ್ಲಿ ನಡುಗಡ್ಡೆಯ ಮೇಲೆ ಎಸೆದಂತೆ ಇಬ್ಬರನ್ನೂ ನೀರು ಬಿಟ್ಟು ಮುಂದುವರೆಯಿತು. ಆಗ ಸುಮಾರು ಸಂಜೆಯಾಗಿತ್ತಂತೆ. ಮುಳ್ಳು ಜಿಗ್ಗುಗಳಿಂದ ಕೂಡಿದ ಆ ಜಾಗದಲ್ಲಿ ಇಬ್ಬರೂ ಉಳಿದುಬಿಟ್ಟರು. ಎರಡೂ ಬದಿಗೆ ಪ್ರವಾಹವಿರುವುದರಿಂದ ಹೊರಗೆ ಬರುವುದು ಅಸಾಧ್ಯವಾದ ಮಾತಾಗಿತ್ತು. ಹಾಗೆಯೇ ನೀರಿನ ಮೇಲೆ ಸಣ್ಣ ಭಯವೂ ಉಂಟಾಗಿತ್ತು ಇಬ್ಬರಿಗೂ.

ರಾತ್ರಿಯಿಡೀ ಹೇಗೋ ಅಲ್ಲಿಯೇ ಕಳೆದರು ಇಬ್ಬರೂ. ನೀರು ಕ್ರಮೇಣ ಕಡಿಮೆಯಾಗುತ್ತಿತ್ತು ಬೆಳಗ್ಗೆ. ಅದೇ ಸಮಯಕ್ಕೆ ಇಬ್ಬರಿಗೂ ಇನ್ನೊಂದು ಆಲೋಚನೆ ಬಂತು. ನಮ್ಮನ್ನೇ ಎಸೆದು ಹೋದ ನೀರು ಎಷ್ಟು ತೆಂಗಿನಕಾಯಿ ಇಲ್ಲಿ ಎಸೆದಿರಬಹುದೆಂದು? ಆ ರೀತಿ ಕಾರ್ಯಪ್ರವೃತ್ತರಾದ ಇವರು ಅಲ್ಲಿಂದ ತೆಂಗಿನ ಕಾಯಿಗಳನ್ನು ಆರಿಸಿಕೊಂಡು ಅದನ್ನು ಅಲ್ಲೆಲ್ಲೋ ಸಿಕ್ಕಿದ ಬಟ್ಟೆಯನ್ನು ಗಂಟುಗಳನ್ನಾಗಿ ಮಾಡಿ ತೆಗೆದುಕೊಂಡು ಮದ್ಯಾಹ್ನದ ಹೊತ್ತಿಗೆ ಮನೆ ತಲುಪಿದ್ದರು. ಇದಕ್ಕೆ ಪ್ರಶಸ್ತಿಯನ್ನು ಕೊಡಬೇಕಿತ್ತು ಅಲ್ಲವೇ? ಏಟು ಸಿಕ್ಕಿತು.

೧೧/೧೦/೨೦೧೨

Tuesday, 18 September 2012

ಎರಡು ಮಾತುಗಳು.


ಎರಡು ಮಾತುಗಳು.
೧.
ಅವಳು ಹಾಗೆಯೇ
ಉಳಿದ ಲಿಪ್’ಸ್ಟಿಕ್ಕನ್ನ ಸೀಟಿಗೊರೆಸಿದಳು.
ಸಣ್ಣ ಪೋರ ಮಗು,
ಸೀಟಿನಿಂದ ತೆಗೆದು ಮುಖಕ್ಕೆ ಹಚ್ಚಿಕೊಂಡ!
ಅವಳು ಪುಟ್ಟನ ಮುಖವನ್ನು ಶಾಲಿನಿಂದ ಒರೆಸಿದಳು."

೨.
ಇನ್ನೂ ಹನ್ನೆರಡರ ಪೋರ
ಹೋಟೆಲೊಂದರಲ್ಲಿ
"ಇಲ್ಲಿ ಬಾಲ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗುವುದಿಲ್ಲ" ಎಂಬ
ಬೋರ್ಡಿಗೆ
ಮೊಳೆ ಹೊಡೆಯುತ್ತಿದ್ದ.
ನಾನು ನೋಡಿದೆ.
ಹೋಟೆಲ್ ಮಾಲೀಕನೂ ನೋಡುತ್ತಿದ್ದ."

ರಂಗಮ್ಮನ ಚೌತಿ.


ರಂಗಮ್ಮ ವಾರವಿಡೀ ಕಾಂಕ್ರೀಟು ಕೆಲಸ, ಇನ್ನಿಲ್ಲದ ಕೂಲಿ ಮಾಡುತ್ತಾ ವಾರಕ್ಕೆ ೪೦೦ ರೂಪಾಯಿ ಗಳಿಸುತ್ತಾ ಹೇಗೋ ಬದುಕುತ್ತಿದ್ದಳು. ಗಂಡ ಕುಡುಕನಾದರೂ ಎರಡು ಮಕ್ಕಳನ್ನು ಕೊಟ್ಟಿದ್ದ. ಮಗಳನ್ನು ಓದಿಸುವುದಕ್ಕಾಗದೇ ಹೇಗೋ ಮದುವೆ ಮಾಡಿದ್ದಳು ರಂಗಮ್ಮ.
ಇದೀಗ ಮಗ ಕಾಲೇಜಿಗೆ ಹೋಗುತ್ತಿದ್ದಾನೆ ದೂರದ ಊರಿನ ಪೇಟೆಯಲ್ಲಿ.
ಕಾಲೇಜು ಎಂದರೆ ಸ್ಕೂಲೇ? ಅಲ್ಲವಲ್ಲ. ಮೊದಲು ಹತ್ತುರೂಪಾಯಿಯಲ್ಲಿ ಇಡೀವಾರ ಸಾಗುತ್ತಿದ್ದರೆ ಈಗ ಬಸ್ಸಿಗೆ ದಿನಕ್ಕೆ ೪೦ ರೂಪಾಯಿ ಆದರೂ ಬೇಕು.
ಮಗ ಕಾಲೇಜಿಗೆ ಸೇರಿದಂದಿನಿಂದ ರಂಗಮ್ಮನ ಮದ್ಯಾಹ್ನದ ಊಟವೂ ನಿಂತುಹೋಯಿತು. ಮಗ ಓದಲಿ ಎಂದೇ ಆದಷ್ಟು ಕಷ್ಟಪಟ್ಟು ದುಡಿಯತೊಡಗಿದಳು.

ಮಗನಿಗೆ ಆಗಾಗ ಹಿತೋಪದೇಶವೂ ನಡೆಯಿತು. ಇತ್ತೀಚೆಗೆ ಬೇಕು ಎಂದು ಹಠಮಾಡಿ ೩೦೦ ರೂಪಾಯಿ ಕೇಳಿದ. ರಂಗಮ್ಮ ಸಾಲಮಾಡಿ ಹೇಗೋ ಹೊಂದಿಸಿಕೊಟ್ಟಳು.
ಗಣೇಶನ ಹಬ್ಬವೆಂದು ಮನೆಗೆ ಮಗ ಸಣ್ಣ ಗಣೇಶನ ಮೂರುತಿ ತಂದ. ರಂಗಮ್ಮ ಮಾತನಾಡಲಿಲ್ಲ. ಕೊನೆಯ ದಿನ ಗಣೇಶನನ್ನು ಮನೆಯ ಎದುರಿನ ಬಾವಿಗೆ ವಿಸರ್ಜಿಸಿದ ಮಗ.
-
ಮುನ್ನೂರು ರೂಪಾಯಿ ಬಾವಿಯಲ್ಲಿದೆ ಎಂದು ರಂಗಮ್ಮ ಬಾವಿಗೆ ಹಾರಿದ್ದು ಮಾತ್ರ ನೆನಪು.

Sunday, 16 September 2012

Airtel’ಗೆ ಆಫರ್ ಕೊಟ್ಟ!

ಟ್ರೀಂ ಟ್ರೀಂ..
ಹಲೋ..
Welcome to airtel ಈಗ ನಿಮ್ಮ ನೆಚ್ಚಿನ ಹಾಡುಗಳು ನಿಮ್ಮ ಮೊಬೈಲ್’ನಲ್ಲಿ. ಹೆಚ್ಚಿನ ವಿವರಗಳಿಗಾಗಿ ಒಂದನ್ನು ಒತ್ತಿರಿ.
ಥತ್..(Call ಕಟ್ ಮಾಡಿದ)
----
ಹೆಲೋ Airtel Customer Careಗೆ ಸ್ವಾಗತ, ನನ್ನಿಂದ ಏನು ಸಹಾಯ ಬೇಕು ನಿಮಗೆ.
ನಮಸ್ತೇ ಮೇಡಂ, ನಿಮಗೆ ಗೋಣಿಚೀಲ ಬೇಕೆ?
ಏನು ಸರ್, ಗೊತ್ತಾಗಿಲ್ಲ.
ಅದೇ ಗೋಣಿಚೀಲ ಬೇಕೆ, ಪ್ಲಾಸ್ಟಿಕ್ಕಿಂದೂ ಇದೆ, ಸೆಣಬಿಂದೂ ಇದೆ.
ಸರ್ ನೀವು ತಪ್ಪಾಗಿ ಕರೆ ಮಾಡಿರಬೇಕು.
ಇಲ್ಲ ಮೇಡಂ, ಇದು ನಮ್ಮ ಆಫರ್. ಬೆಳಗ್ಗಿಂದ ಹತ್ತು ಸಲ ನೀವು ಆಫರ್ ಕೊಡ್ತೀರ, ಒಂದು ಸಲ ನನ್ ಆಫರ್ ತಗೋಳಿ.

Monday, 10 September 2012

ಟಿಪ್ಪರ್ ಮತ್ತೆ ಕಾರು!


ರಂಗಪ್ಪ ಎಂದಿನಂತೆ ಗದ್ದೆ ಕೆಲಸ ಮುಗಿಸಿ ಟಿಲ್ಲರ್ ಏರಿ ಮನೆ ಕಡೆ ಹೊರಟಿದ್ದ. ಹೈವೇ ಬದಿಗಿದ್ದ ಮನೆಯ ಹತ್ತಿರ ಬಂದ. ವಿದೇಶೀ ಕಾರೊಂದು ೧೦೦ ಕಿಲೋಮೀಟರ್ ವೇಗದಲ್ಲಿ ಬಂದು ಟಿಲ್ಲರ್’ಗೆ ಹೊಡೆದು ಪಲ್ಟಿಯಾಯಿತು.
ಟಿಲ್ಲರ್ ಹಾಗೇ ಇತ್ತು! ಕಾರು ಮಗುಚಿ ಬಿತ್ತು. ಕಾರಿನೊಳಗಿಂದ ಆರ್ತನಾದ ಮುಗಿಲುಮುಟ್ಟಿತ್ತು. ಅದೆಲ್ಲಿಂದ ಬಂದರೋ ಏನೋ ನೂರಿನ್ನೂರು ಜನ ಬಂದು ಕಾರಿನ ಫೋಟೋ, ಒಳಗಿದ್ದವರನ್ನ ಹೊರಗೆಳೆಯುವುದು ಎಲ್ಲಾ ಪ್ರಾರಂಭವಾಯಿತು. ಏನೂ ಆಗಿರಲಿಲ್ಲ ಜನರಿಗೆ.
ಕ್ರಮೇಣ ಕಾರಿನ ಗ್ಲಾಸು ಒಡೆದದ್ದು, ಮತ್ತಿತರ ಅಂಗಾಂಗ ಊನಗೊಂಡಿತ್ತು ಕಾಣತೊಡಗಿತು.
ಹೀಗೇ ಚರ್ಚೆ ಸಾಗುತ್ತಾ, ಕಾರಿನ ಅಂದಾಜು ನಷ್ಟವೇನು? ಕಾರು ಯಾವ ಕಂಪೆನಿಯದ್ದು? ಎಷ್ಟು ಬೆಲೆಬಾಳಬಹುದು ಎಂದೆಲ್ಲಾ ಚರ್ಚೆಯಾಗತೊಡಗಿತು.
-
ಯಾವುದೋ ಮೂಲೆಯಲ್ಲಿ ಟಿಲ್ಲರ್ ಪಕ್ಕ ಉಸಿರಾಡದೇ ಮಲಗಿದ್ದ ರಂಗಪ್ಪನಿಗೆ ಇದ್ಯಾವುದೂ ತಿಳಿದಿರಲಿಲ್ಲ.