Monday, 30 January 2012

ಅನುಕೂಲದ್ದು ಯಾವುದೋ ಅದೇ ಸುಖ!

ನನ್ನ ಅಪ್ಪನಿಗೆ ಒಂದು ಒಳ್ಳೆ ಅಭ್ಯಾಸ ಅಂದರೆ ಎಲೆ ಅಡಿಕೆ ಮೆಲ್ಲುವುದು!. ಪಾರಂಪರಿಕವಾಗಿ ಬಂದ ಪಾನ್ ಸಮಾಚಾರವನ್ನು ನಾನೂ ಕೆಲವೊಮ್ಮೆ ತುಟಿಕೆಂಪಾಗುವಷ್ಟು ಮೆಲ್ಲುತ್ತೇನೆ. ಬಿಡಿ ಹೇಳುವ ವಿಷಯ ಅದಲ್ಲ..

ಹಾಗೇ ನಮ್ಮೂರಲ್ಲೊಬ್ಬ. ಎಲ್ಲಾ ಅರೆಹುಚ್ಚ ಅಂದರೂ ಅವನು ತಲೆಕೆಡಿಸಿಕೊಳ್ಳದ ನಿರ್ಲಿಪ್ತ. ಹಕ್ಕಿಯಂತೆ ಸ್ವತಂತ್ರ, ಎಲ್ಲಿಯೂ ನಿಲ್ಲಲಾರ, ಮನೆಯನ್ನೂ ಕಟ್ಟಿಲ್ಲ.

ಬಸ್ಸು ಬರದ ಊರಿನ ಬಸ್ ಸ್ಟಾಂಡು ಅವನ ವಾಸಸ್ಥಾನವಾಗಿ ಸಾರ್ಥಕವಾಗಿತ್ತು. ಕಟ್ಟಿದವರಿಗೂ ಮೀಸೆ ಮೇಲೆ ಕೈ ಹೋಗುವಷ್ಟು ಅವನು ಅಲ್ಲಿರುತ್ತಿದ್ದ. ಅವನಿಗೂ ಒಳ್ಳೆಯ ಅಭ್ಯಾಸ ಅಂದರೆ ಎಲೆಅಡಿಕೆ .

ಎಲೆಯ ನಾರು ತೆಗೆದು, ಸುಣ್ಣಬಳಿದು ಅಡಿಕೆಯ ಜೊತೆ ಸ್ವಲ್ಪ ಜಗಿದು.. ಸುಣ್ಣದ ಜೊತೆ ಸ್ವಲ್ಪ ತಂಬಾಕು ಹಾಕಿ ಗಂಧರ್ವ ನಾಡಿಗೆ ಒಡೆಯನಾಗುವುದು ಯಾರಿಗೆ ಬೇಡ? ಹಾಗೆಯೇ ಅವನೂ..

ಮನೆಮನೆಗೆ ಸಂಚಾರ ಮಾಡುವ ಆತ ಊಟ, ತಿಂಡಿ ಕೊಟ್ಟಷ್ಟು ಸ್ವೀಕರಿಸುತ್ತಾನೆ. ಜಾಸ್ತಿ ಆಯಿತೆಂದು ಚೆಲ್ಲುವುದಿಲ್ಲ, ಕಡಿಮೆ ಆಯಿತೆಂದು ಕೇಳುವುದಿಲ್ಲ. ಸಂಕೋಚವಿಲ್ಲದೆ ಮನೆಯಲ್ಲಿ ಎಲೆ ಅಡಿಕೆಯ ಬಟ್ಟಲು ಕಂಡ ಕೂಡಲೇ ಖುಷಿಪಟ್ಟು ಮೆಲ್ಲುತ್ತಾನೆ.

ಇನ್ನು , ನನ್ನ ತಂದೆಯೋ, ಹೊಗೆಸೊಪ್ಪನ್ನು ತುಂಬಾ ಖುಶಿಯಿಂದ ನೋಡಿಕೊಳ್ಳುವವರು. ಮೂಸಿಯೇ ತೆಗೆದುಕೊಳ್ಳುವವರು. ಅದನ್ನ ತಂದು ಜೋಪಾನವಾಗಿ ಎರಡು ಪ್ಲಾಸ್ಟಿಕ್ ನಿಂದ ಕವರ್ ಮಾಡಿ ಇಟ್ಟುಕೊಳ್ಳುವುದು. ಒಂದೊಂದೇ ಎಳೆಯನ್ನು ತೆಗೆದು ತಲೆಗೂದಲು ನೇಯುವಂತೆ ನೆಯ್ದು ಅದನ್ನ ತಟ್ಟೆಯಲ್ಲಿಡುವವರು.

ಒಂದು ದಿನ , ನಾನಿದ್ದೆ ಮನೆಯಲ್ಲಿ.. ಅಲ್ಲೇ ಎಲ್ಲೋ ಹೊರಗೆ ಹೋಗಿದ್ದರು ಅಪ್ಪ, ಅಮ್ಮ ಮನೆಯಲ್ಲಿರಲಿಲ್ಲ. ನಮ್ಮ ಹೀರೋ ಬಂದದ್ದೇ ಸುಮ್ಮನೆ ಬಂದು ಚಾವಡಿಯಲ್ಲಿ ಕುಳಿತಿದ್ದ. ನಾನಾಗಿ ಹೋಗಿ ಅನ್ನಲಿಲ್ಲ, ಅವರೂ ಹೋಗಲಿಲ್ಲ. ಸುಮ್ಮನೆ ಕಡೆಗಣಿಸಿದೆ ನಾನೂ ಏನೋ ಓದುತ್ತಾ ಕುಳಿತಿದ್ದೆ.

ಸ್ವಲ್ಪ ಹೊತ್ತಾಗಿ ಅವನು ಹೋದ, ಆದರೆ ನನ್ನ ಅಪ್ಪ ಬಂದವರೇ ಒಂದೇ ಸಮನೆ ನನ್ನನ್ನು ಬಯ್ಯಲಾರಂಭಿಸಿದರು . ಏಕೆ ಗೊತ್ತೇ?

ಅಪ್ಪನ ಕೈಚೀಲ ಎಂದೂ ಹೊರಗಿರುತ್ತದೆ, ಬೆಳಗ್ಗೆ ಬ್ಯಾಂಕಿನಿಂದ ಬಿಡಿಸಿಕೊಂಡು ಬಂದ ಒಂದು ಸಾವಿರ ರೂಪಾಯಿ ಅದರಲ್ಲಿತ್ತಂತೆ. ಆದರೆ ಆ ಸಾವಿರದ ಕಟ್ಟಿಂದ ಒಂದು ನೋಟು ಕೂಡಾ ಹೋಗಿರಲಿಲ್ಲ. ಬದಲಾಗಿ , ತಂದಿರುವ ಹೊಗೆಸೊಪ್ಪಿನ ಒಂದು ಎಳೆ ಮಾಯವಾಗಿತ್ತು...

ಯಾವುದು ಯಾರಿಗೆ ಮುಖ್ಯ ಎಂದರಿಯದೆ ಸುಮ್ಮನಿದ್ದೇನೆ.

Friday, 27 January 2012

ಓಹ್ ನನ್ನ ಅದೃಷ್ಟವೇ !

ಏನು ಮಾಡೋದು, ನನ್ನ ದಿನ ಚೆನ್ನಾಗಿಲ್ಲ ಅನ್ಬೇಕು ಅಷ್ಟೆ.. ಎಲ್ಲರಗಿಂತ ಕೆಟ್ಟದಿನ ನನ್ನದ್ದಿರಬೇಕು !

ಬೆಳಗ್ಗೆ ಬೇಗ ಎದ್ದು, ಮೀಸೆಗೆ ಕತ್ತರಿ, ಮುಖಕ್ಕೆ ಬ್ಲೇಡ್ ಹಾಕಿ ಎರಡೇ ಎರಡು ಹನಿ ಪ್ಯಾರಾಚೂಟ್ ಎಣ್ಣೆ ತಲೆಗೇರಿಸಿ ಸ್ಕೂಲ್ ಹುಡುಗನ ರೀತಿ ತಲೆಬಾಚಿ, ಬೆಳ್ಳಿಬಿಳಿಯ ಅಂಗಿಧರಿಸಿ ಹೊರಟಿದ್ದೆ .
ಅವಳ ಭೇಟಿಗೋ ?ಗೊತ್ತಿಲ್ಲ !

ಎಂತಹ ಟ್ರಾಫಿಕ್ಕು.. ರಸ್ತೆ ದಾಟಬೇಕು. ಇನ್ನೊಬ್ಬ ನನ್ನಂತೆಯೇ ಇದ್ದವನ ಜೊತೆ ರಸ್ತೆ ದಾಟುತ್ತಿದ್ದೆ. ನನಗಿಂತ ಸ್ವಲ್ಪ ಸುಂದರ ಅವನು ಪಾಪಿ.

ಅಬ್ಬಾ, ರಿಕ್ಷಾ, ಕಾರು ಓಹ್ ಓಹ್ ಸ್ಕೂಟಿ ಬೈಕು, ಬಸ್ಸು... ದಾಟಲಾಗುವುದಿಲ್ಲ ! ಎರಡು ಅಡಿ ಮುಂದೆ , ಮೂರು ಅಡಿ ಹಿಂದೆ !

ಕೊನೆಗೆ ಧೈರ್ಯ ಮಾಡಿ ಇಬ್ಬರೂ ಮುಖ ಮುಖ ನೋಡಿಕೊಂಡು ರಸ್ತೆ ದಾಟತೊಡಗಿದೆವು.

ಅದೃಷ್ಟದಾಟ ಶುರುವಾಗಿದ್ದು ಆಗಲೇ. ಎಲ್ಲಿಂದಲೋ ಬಂದ ಕಾರು ಬಂದು ಢಿಕ್ಕಿ ಹೊಡೆಯಿತು ಅವನಿಗೆ, ಆಯತಪ್ಪಿ ಬಿದ್ದ ಅವನನ್ನು ನನಗೇ ಗೊತ್ತಿಲ್ಲದ ಮಾನವೀಯತೆ ಎತ್ತಿದ್ದು,ಮತ್ತೆ ಅವನನ್ನ ಆಸ್ಪತ್ರೆಗೆ ಸೇರಿಸಿದ್ದು ಎಲ್ಲಾ ಘಂಟೆಯೊಳಗೆ ನಡೆದೇ ಹೋಯಿತು..

ನನ್ನ ಬಿಳಿ ಅಂಗಿಯ ರಕ್ತದ ಕಲೆ ಹೋಗುತ್ತಾ ಇಲ್ಲ !
ಏನನ್ನಬೇಕು ನನ್ನ ಅದೃಷ್ಟಕ್ಕೆ ?


Friday, 20 January 2012

ಈಶ್ವರ ತತ್ವ !

೧.
ನೋಡಕ್ಕೆ ಎಷ್ಟು ಒಳ್ಳೆಯವನು, ನಿಜವಾಗಿ ಹೀಗಾ ? ಯಾಕೆ ತೋರಿಕೆಗೆ ಒಳ್ಳೆತನ ? ಅಂತ ಪ್ರಶ್ನೆ ಮಾಡ್ಬೇಡಿ !!

ಸ್ನಾನದ ಮನೆ ನನ್ನ ಸ್ವಂತ , ಬೇಕಾದ ಹಾಗೆ ಇರ್ತೇನೆ,
ಹೊರಗೆ ಬಂದಾಗ ಬೇಕಾದ ದಿರಿಸು ಧರಿಸುವುದು ಸಾಮಾಜಿಕವಾದ ನನ್ನ ಧರ್ಮ!


೨.
"ಸ್ವಾತಂತ್ರ್ಯ ಹೋರಾಟಗಾರರಿಗೆ ಕಾಯ್ದಿರಿಸಿದ ಸೀಟಲ್ಲಿ ಕುಳಿತು ನಾನೇ ಹೋರಾಟಗಾರನಾದಂತೆ !!
 
ಹೋಟೆಲ್ ಲಾಡ್ಜಿನ ಹಾಸಿಗೆ ಮೇಲಿನ ತಿಗಣೆಯೂ ಹಾಗಂತೆ !!



೩.
ಓಹ್. 
ಒಬ್ಬರೇ ನಗಾಡುವವರನ್ನ ಯಾಕೆ ಅನುಮಾನದಿಂದ ನೋಡ್ತೀರಿ ಸ್ವಾಮೀ..
ಒಬ್ಬರೇ ಅಳಬಹುದಾದರೆ, ಒಬ್ಬರೇ ಯಾಕೆ ನಗಬಾರದು ?


೪.ಹೆಣ್ಣು !! ಹೆಣ್ಣೆಂದರೆ ಹೂವು ಇದ್ದ ಹಾಗೆ ! ಒಪ್ಪುತ್ತೀರಾ? ತುಂಬಾ ಕವಿಗಳು ಹೇಳಿದ್ದಾರೆ ಸ್ವಾಮಿ. ಒಂದು ವೇಳೆ "ಹೆಣ್ಣು" ಹೂವಾಗಿದ್ದರೆ ..

೧. ಒಂದು ಹೂವಿಗಿಂತ ಇನ್ನೊಂದು ಹೂವು ಸುಂದರ, ಆಕರ್ಷಣೀಯ.
೨. ಹೂವಿನ ಚಂದ ಸ್ವಲ್ಪ ದಿನ ಮಾತ್ರ . 

ಹೆಣ್ಣು ಹೂವಿನ ಹಾಗೆ !!



೫.
ಸ್ವಲ್ಪ ಮಾತಾಡಿದರೆ ದೊಡ್ಡ ವಿದ್ವಾಂಸ ಅಲ್ಲ . 


ಏಕೆಂದರೆ ಕಿವಿಯೊಳಗೆ ಸೋಪಿನ ನೊರೆ ಇದ್ದ ಮಾತ್ರಕ್ಕೆ ಸ್ನಾನ ಮಾಡಿದ್ದಾನೆ ಅಂತ ನಿರ್ಧರಿಸೋಕ್ಕೆ ಆಗತ್ತಾ?

Thursday, 1 December 2011

ಅಡುಗೆ ಮತ್ತು ಪ್ರೀತಿ!!

ಗಂಡ ಓಫಿಸಿಂದ ಬರುತ್ತಿದ್ದಂತೇ ಮೊದಲೇ ಗಟ್ಟಿಮಾಡಿಕೊಂಡಂತಹ ಮಾತುಗಳ ಮಳೆ !
ಏನ್ರೀ ಇಷ್ಟು ಲೇಟು? ನಾನೂ ನಿಮ್ಮಷ್ಟೇ ಕೆಲಸ ಮಾಡಿ ಬಂದೋಳು!
ಇಲ್ಲ, ಇವತ್ತು ತಿಂಗಳಿನ ಕೊನೆ ಅಲ್ವೇ ? ಮೀಟಿಂಗ್ ಇತ್ತು.
ಏನು ಮೀಟಿಂಗ್? ನಂಗೂ ಇತ್ತು. ಸ್ವಲ್ಪ ತಡ ಆದ್ರೂ ೮ ಘಂಟೆಗೆ ಮನೆಗೆ ಬಂದೆ.. ಈಗ ಎಷ್ಟಾಯ್ತು ಸಮಯ ಗೊತ್ತಾ ನಿಮಗೆ?
ಆಯ್ತು ಕಣೇ, ಮುಂದೆ ಹೀಗಾಗೊಲ್ಲ. ಅಡುಗೆ ಏನಾದ್ರೂ ಮಾಡಿದೀಯಾ?
ಅಂದ್ರೆ? ಮೊನ್ನೆ ನೀವೆ ಹೇಳಿದ್ದಲ್ವಾ?
ಏನು?
ಇವತ್ತಿನ ದಿನ ನಿಮ್ದು. ಇವತ್ತು ಅಡುಗೆ ನಿಮ್ಮ ಕೆಲಸ. ಅದ್ಕೇ ನಾನೇನೂ ಮಾಡಿಲ್ಲ..ತುಂಬಾ ಹಸಿವಾಗ್ತಾ ಇದೆ.
ಲೇಟಾಗತ್ತೆ ಅಂತ ಮೆಸೇಜ್ ಮಾಡಿದ್ರೂ ನೀ ಹೀಗೆ ಮಾಡ್ಬಾರ್ದಿತ್ತು.
ಮೆಸೇಜಾ? ನಾ ನೋಡ್ಲಿಲ್ಲ.. ಈಗ ಏನ್ ಮಾಡ್ತೀರಿ?
ಪರವಾಗಿಲ್ಲ . ನಾನೇ ಅಡುಗೆ ಮಾಡ್ತೀನಿ. ಏನು ಮಾಡ್ಲಿ?
ಏನಾದ್ರೂ ಮಾಡಿ. ಪಲಾವ್ ವಾಂಗಿಬಾತ್ ಅನ್ನ ಸಾಂಬಾರ್ ಯಾವುದಾದ್ರೂ??

ಮೆಲ್ಲ ಬದುಕಿದೆ ಅನ್ನುತ್ತಾ ಗಂಡ ಅಡುಗೆಕೋಣೆಗೆ ಹೋದ..
ಇನ್ನೇನು ಪಲಾವಿಗೆ ಬೀನ್ಸು ಹಚ್ಚಬೇಕು, ಹಿಂದೆಯೇ ಹೆಂಡತಿ!
ತಪ್ಪಾಯ್ತೆನುವಂತೆ ಹಚ್ಚತೊಡಗಿದ. ಜೊತೆಗೆ ಒಂದು ಬೆರಳಿಗೆ ಏಟು ಮಾಡಿಕೊಂಡ!

ಅಂದು ಅಡುಗೆಗಿಂತ ಪ್ರೀತಿಯೇ ಮುಖ್ಯವಾಯಿತು ಇಬ್ಬರಿಗೂ. ಗಂಡನ ಕೈಯ್ಯನ್ನು ಹಿಡಿದುಕೊಂಡು ನಿದ್ದೆಹೋದಳವಳು.

Tuesday, 15 November 2011

ವಿಶ್ವ ಸಹನಾ ದಿನಾಚರಣೆ - World tolerance Day.


ವಿಶ್ವ ತಾಳುವಿಕೆಯ ದಿನಾಚರಣೆಯಂತೆ ಇಂದು. (World tolerance day). ಹ್ಹ ಹ್ಹ, ಇದನ್ನು ಆಚರಣೆ  ಅಂತ ಪ್ರಾರಂಭ ಮಾಡಿದವನಿಗೆ ತಾಳ್ಮೆಯಿರಬೇಕು.
ತಾಳು ಅನ್ನೋದಕ್ಕೆ ಏನೆಲ್ಲಾ ಅರ್ಥ ಇದೆ. ಹೊರು , ಸೈರಿಸು, ಸಹನೆ ಎಂದೆಲ್ಲಾ ಅರ್ಥೈಸಿಕೊಳ್ಳಬಹುದು. ತಾಳಿಕೊಳ್ಳುವುದು (ತಾಳಿ ಅಂದರೆ ಮಂಗಳಸೂತ್ರ ಅಲ್ಲ!) ಅಷ್ಟು ಸುಲಭವೇ? ಭೂಮಿ ನಮ್ಮನ್ನೆಲ್ಲಾ ತಾಳಿಕೊಂಡಿದ್ದಾಳೆ ಎಂದು ಭೂಮಿಯ ಬಗ್ಗೆ ಅಭಿಮಾನ ಹೊಂದಿದ್ದೇವೆ. ಸಮಾಜವೂ ನಮ್ಮನ್ನ ತಾಳಿಕೊಂಡಿದೆ. ಈಗ ಮುಖ್ಯ ವಿಷಯಕ್ಕೆ ಬರೋಣ. ಆಚರಣೆಯ ಉದ್ದೇಶ ಏನು ?

ಈ ಆಚರಣೆ ಶುರುವಾಗಿದ್ದು ೧೯೯೫ರಲ್ಲಿ. ಮುಖ್ಯವಾಗಿ ಸಹನೆ ಎನ್ನುವ ವಸ್ತು ಚರ್ಚಿತವಾಗಿದ್ದು ಹಿಂಸೆ ಎನ್ನುವುದಕ್ಕೆ ವಿರೋಧವಾಗಿ. ಸಹನೆ ಇದ್ದರೆ ಹಿಂಸೆ ಇಲ್ಲ ಎನ್ನುವ ವಿಚಾರದಿಂದ ಈ ಸಹನೆಗೂ ಒಂದು ದಿನ ಪ್ರಾರಂಭವಾಯಿತು. ಯುನೆಸ್ಕೋದ ಪ್ರೇರಣೆಯಿಂದ ಅಮೇರಿಕಾದಲ್ಲಿ ಈ ಆಚರಣೆಗೆ ಅಡಿಗಲ್ಲು.

ಬೇರೆ ಬೇರೆ ಸಂಸ್ಕೃತಿಗಳನ್ನು ಆಚರಣೆಗಳನ್ನು ಒಪ್ಪುವುದು ಅಥವಾ ಅದರ ಪಾಡಿಗೆ ಅದನ್ನ ಬಿಡುವುದು (ಒಪ್ಪಲಾಗದಿದ್ದಲ್ಲಿ) ತುಂಬಾ ಮುಖ್ಯ. ಬೇರೆ ಬೇರೆ ಜಾತಿಗಳು, ಆಚರಣೆಗಳು, ಪದ್ಧತಿಗಳು ಎಲ್ಲವನ್ನೂ ಟೀಕಿಸುವ ಗುಣ ಇರುವ ನಮ್ಮ ಮಧ್ಯೆ ಇಂತಹ ಆಚರಣೆಗೊಂದು ಪ್ರಾಮುಖ್ಯತೆ ಕೊಡಲೇಬೇಕು. ಆಚರಣೆ ದಿನಕ್ಕೆ ಮಾತ್ರ ಸೀಮಿತವಾಗದೇ ಸಹನಾಗುಣವನ್ನು ಬೆಳೆಸಿಕೊಂಡಲ್ಲಿ ತುಂಬಾ ಸಂಘರ್ಷಗಳನ್ನ ತಪ್ಪಿಸಬಹುದು.

ತಲ್ಲಣಸಿದಿರು ಕಂಡ್ಯ ತಾಳು ಮನವೆ , ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ ,ತಾಳುವಿಕೆಗಿಂತ ಅನ್ಯ ತಪವು ಇಲ್ಲ. ಎನ್ನುವುದು ದಾಸವಾಣಿ. ಇಲ್ಲಿಯೂ ತಾಳುವಿಕೆ ಪ್ರಧಾನ.

ತ್ರಿಶಂಕುವಿನ ಕಥೆ ಗೊತ್ತೇ? ೯೯ ಯಾಗಗಳನ್ನು ಮಾಡಿದ ಆತ ಸಶರೀರನಾಗಿ ಸ್ವರ್ಗವನ್ನು ಸೇರುವ ಮಹತ್ವಾಕಾಂಕ್ಷೆ ಹೊಂದಿದ್ದ. ೧೦೦ನೇ ಯಾಗವನ್ನು ನಡೆಸಲು ವಶಿಷ್ಠರನ್ನು ಕಾಣಲು ಹೋದಾಗ ವಶಿಷ್ಠರಿರಲಿಲ್ಲ ಅಲ್ಲಿ. ವಶಿಷ್ಠರಂತೆಯೇ ಸಮರ್ಥರಾದ ವಶಿಷ್ಠರ ಮಕ್ಕಳು (ವಾಶಿಷ್ಠರು) ಇವನ ಯಾಗದ ಆಸೆಗೆ "ನಿನಗೆ ಯೋಗವಿಲ್ಲ " ಎಂದರು. ಕುಪಿತಗೊಂಡ ತ್ರಿಶಂಕು ಅವರನ್ನ ಹೀಯಾಳಿಸಿದ. ಕಡೆಗೆ ಚಾಂಡಾಲತ್ವದ ಶಾಪವನ್ನು ಪಡೆದ. ಮುಂದೆ ವಿಶ್ವಾಮಿತ್ರರ ಸಹಾಯದಿಂದ ವಿಚಿತ್ರಸ್ವರ್ಗವನ್ನೇನೋ ಪಡೆದ. ಒಂದುವೇಳೆ ಸಹನೆಯಿಂದ ಇರುತ್ತಿದ್ದರೆ ತ್ರಿಶಂಕು ?

ಪುರಾಣದಲ್ಲಿ, ವಾಸ್ತವದಲ್ಲಿ ಇಂತಹಾ ಎಷ್ಟೋ ಉದಾಹರಣೆಗಳನ್ನು ಕೊಡಬಹುದು. ಯಾರೋ ಹೇಳಿ, ಏನೋ ಓದಿ ಸಹನೆ ಬರುವಂತದ್ದಲ್ಲ. ಅವರವರ ಚಿಂತನೆಯಿಂದಲೇ ಬರಬೇಕು ಅಲ್ಲವೇ.. ಏನಂತೀರಿ.

ಇಷ್ಟನ್ನು ಓದಿದ ನಿಮ್ಮ ಸಹನೆಯನ್ನು ಇನ್ನು ಪರೀಕ್ಷಿಸುವುದಿಲ್ಲ.. :) :) ಶುಭಾಶಯಗಳು..

Sunday, 13 November 2011

ಮಕ್ಕಳ ದಿನಾ+ಆಚರಣೆ !!

ಮೊದಲು ಮಕ್ಕಳಿಗೆ ಶುಭಾಶಯಗಳು.. ಮತ್ತೆ ದೊಡ್ಡವರಿಗೆ ಶುಭಾಶಯಗಳು.

ಮತ್ತೆ ಮಕ್ಕಳ ದಿನಾಚರಣೆ ಅಂತ ಬೇಕೇ.. ಮಕ್ಕಳಿಗೆ ದಿನಾ ಆಚರಣೆ. ಎಲ್ಲೆಂದರಲ್ಲಿ ಹಾಡುವ, ಓಡುವ, ಜಗಳವಾಡುವ, ಪ್ರೀತಿಸುವ, ಒಂದಾಗುವ, ಕಲಿಯುವ , ಬೆರೆಯುವ ಆಸಕ್ತಿ ಮತ್ತು ಸಮಯ ಸಹಾಯ ಮಕ್ಕಳಿಗಲ್ಲದೆ ಬೇರೆಯವರಿಗುಂಟೇ?

ಚಾಚಾ ನೆಹರು ಹುಟ್ಟಿದ ದಿನವನ್ನು ಮಕ್ಕಳ ದಿನ ಆಚರಿಸೋದು ಹೌದು. ಆದರೆ ನಮ್ಮ ಕನ್ನಡ ಮಕ್ಕಳು ಯಾವತ್ತೂ ನೆನಪಿಸಿಕೊಳ್ಳಬೇಕಾದ ಇಬ್ಬರು ಸಾಹಿತಿಗಳು ರಾಜರತ್ನಂ ಮತ್ತೆ ದಿನಕರ ದೇಸಾಯಿ.

ಕುಟುಕುವ ಚುಟುಕಗಳಿಂದ ಹೆಸರುವಾಸಿಯಾದ ದಿನಕರ ದೇಸಾಯಿಯವರ ಘಂಟೆಯ ನೆಂಟನೆ ಓ ಗಡಿಯಾರ ಹಾಡನ್ನು ಕೇಳದ ಮಕ್ಕಳಿರಲಿಲ್ಲ.. ಈಗ ಯೆಲ್ಲೋ ಯೆಲ್ಲೋ ಡರ್ಟಿ ಫೆಲ್ಲೋ ಎಂದೊದರಿದರೂ ಮೊದಲು ನಮಗೆ ತುಂಬಾ ಆಪ್ಯಾಯಮಾನವಾಗಿದ್ದ ಹಾಡು. ಇದೊಂದೇ ಅಲ್ಲದೆ ತುಂಬಾ ಮಕ್ಕಳ ಸಾಹಿತ್ಯವನ್ನು ಬರೆದಿದ್ದಾರೆ. ಮಕ್ಕಳ ಗೀತೆಗಳು , ಶಿಶುಕವನ ಸಂಕಲನಗಳನ್ನು ಮಕ್ಕಳಿಗೋಸ್ಕರ ಪ್ರಕಟಿಸಿದ್ದಾರೆ.
ಮಕ್ಕಳು ಕೊಳ್ಳಲು ಸಾಧ್ಯವಿಲ್ಲವಾದ್ದರಿಂದ ಅಪ್ಪ ಅಮ್ಮ ಕೊಂಡು ಮಕ್ಕಳಿಗೆ ಕೊಡಿಸಬೇಕು ಅಷ್ಟೇ..

ಕುಡುಕ ರತ್ನನಿಂದಾಗಿ ಹೆಸರುವಾಸಿಯಾದ ಇನ್ನೊಬ್ಬ ಕವಿ ರಾಜರತ್ನಂ. ರತ್ನನ ಪದಗಳು, ನಾಗನ ಪದಗಳು ಮಕ್ಕಳಿಗಲ್ಲ ಬಿಡಿ, ದೊಡ್ಡವರಿಗೂ ಒಂದೇ ಬಾರಿ ಓದಬೇಕಾದಲ್ಲಿ ಒಮ್ಮೆ ಬಾರಿಗೆ ಹೋಗಿ ಬರಬೇಕು.
ಆದರೆ ಬಣ್ಣದ ತಗಡಿನ ತುತ್ತೂರಿ, ನಮ್ಮ ಮನೆಯಲೊಂದು ಪುಟ್ಟ ಪಾಪು ಇರುವುದು.. ಇಂತಹ ಹಾಡುಗಳನ್ನೆಲ್ಲ ಎಷ್ಟು ಬಾರಿ ಆನಂದದಿಂದ ಮಕ್ಕಳು ಹಾಡುವುದನ್ನ ನೋಡಿದ್ದೇವೆ!. ತುತ್ತೂರಿ, ಕಂದನ ಕಾವ್ಯ ಎನ್ನುವಂತಹದ್ದನ್ನ ಮಕ್ಕಳಿಗಾಗಿ ಕೊಟ್ಟ ಕವಿ.

ಇವರಿಬ್ಬರನ್ನು ಮಕ್ಕಳ ದಿನಾಚರಣೆ ಪ್ರಯುಕ್ತ ನೆನಪು ಮಾಡಿಕೊಂಡಿದ್ದೇನೆ. ನಾನೂ ಮಗುವೇ ಆದ್ದರಿಂದ. .. ಮಕ್ಕಳಿಗೊಂದು ಕವಿಗಳಿಗೆರಡು ಜೈ ಹೋ...

ಮತ್ತೆ ಮಕ್ಕಳಿಗೆ ಒಂದು ಹಾಡು..

ಚಿಕ್ಕ ಚಿಕ್ಕ ಮಕ್ಕಳೆಲ್ಲ ಬನ್ನಿರೀ ಬದಿ
ಚೊಕ್ಕವಾದ ಆಟಗಳನು ಆಡಿ ಚಂದದಿ

ದೊಡ್ಡ ದೊಡ್ಡ ಚೆಂಡು ದಾಂಡು ಕೈಯ್ಯಲೇತಕೆ
ಗುಡ್ಡ ಬೆಟ್ಟ ಹತ್ತಿ ಇಳಿವ ಯಾಕೆ ನಾಚಿಕೆ ?

ಎದ್ದು ಬಿದ್ದು ನಗುವ ಸದ್ದು ಮಾಡಿರೆಲ್ಲರೂ
ಹದ್ದು ಕಾಗೆ ಗುಬ್ಬಿ ಮೊಲವ ನೋಡಿರೆಲ್ಲರೂ

ಹರಿವ ನೀರು ಬೆಳೆವ ಪೈರು ನಮ್ಮ ನಾಡಿಗೆ
ಬಿರಿವ ಮನಸು ನಮ್ಮದೆನುತ ಮರಳಿ ಗೂಡಿಗೆ.

ಶುಭಾಶಯಗಳು..

Monday, 7 November 2011

ಗೋಪ ಗೃಹಿಣೀ ನ್ಯಾಯ


ಹತ್ಪಾ ನೃಪಂ ಪತಿಮವಾಪ್ಯ ಭುಜಂಗದಷ್ಟಂ
ದೇಶಾಂತರೇ ವಿಧಿವಷಾತ್ ಗಣಿಕಾಸ್ಮಿ ಜಾತಾ
ಪುತ್ರಂ ಸ್ವಕಂ ಸಮಧಿಗಮ್ಯ ಚಿತಾಂ ಪ್ರವಿಷ್ಟಾ
ಶೋಚಾಮಿ ಗೋಪಗೃಹಿಣೀ ಕಥಮದ್ಯ ತಕ್ರಂ

ಅವಳು ರಾಜನ ಮಡದಿಯಾಗಿ ಸುಖವಾಗಿದ್ದಳು.  ಆದರೂ ಅವಳು ಬೇರೆ ಒಬ್ಬ ಗೆಳೆಯನಲ್ಲಿ ಮನಸ್ಸನ್ನು ಹೊಂದಿದ್ದಳು . ರಾಜನಿಗೆ ವಿಷವನ್ನಿಕ್ಕಿ ಗೆಳೆಯನ ಜೊತೆ ಓಡಿ ಹೋದಳು. ಗೆಳೆಯ ಹಾವಿನ ಕಡಿತಕ್ಕೊಳಗಾಗಿ ಮೃತನಾದನು. ಬೇರೆ ಗತಿಯಿಲ್ಲದೆ ಹೆಂಗಸು ವೇಶ್ಯಾವೃತ್ತಿಯನ್ನ ಕೈಗೊಂಡಳು.

ಈಡಿಪಸ್ಸಿನಂತೆ , ತಾನೇ ಹಡೆದ ಮಗ ಅಕಸ್ಮತ್ತಾಗಿ ಅವಳನ್ನು ಕೂಡಿದನು.ಅನಂತರ ತಾಯಿ ಮಕ್ಕಳೆಂದು ಅರಿತೊಡನೆ , ಪ್ರಾಯಶ್ಚಿತ್ತಾಕ್ಕಾಗಿ ಚಿತೆಯಲ್ಲಿ ಮಲಗಿ ಬೆಂಕಿ ಹಚ್ಚಿಕೊಂಡರು.
ರಾಜಪುತ್ರ ಸುಟ್ಟುಹೋದ, ಇವಳೋ ಅಲ್ಲಿಂದಲೂ ಓಡಿದಳು. ಸುಟ್ಟ ಗಾಯಗಳಿಂದ ನೊಂದ ಇವಳನ್ನು ಒಬ್ಬ ಗೊಲ್ಲ
ಉಪಚರಿಸಿದನು. ಅವನನ್ನೇ ಇವಳು ಮದುವೆಯಾದಳು.

ಕೆಲಸದಂತೆ ಮಜ್ಜಿಗೆ ಮಾರಲು ಪೇಟೆಗೆ ಒಯ್ಯುತ್ತಿರುವಾಗ , ಮಡಿಕೆ ಉರುಳಿಬಿದ್ದು ಮಜ್ಜಿಗೆ ಭೂಮಿ ಪಾಲಾಯಿತು.

ತನ್ನ ಕೆಟ್ಟನಡವಳಿಕೆಗಳಿಂದ ಮಜ್ಜಿಗೆ ಹಾಳಾಯಿತು ಎಂದು ಎಂದು ಅವಳು ಪಶ್ಚಾತ್ತಾಪ ಪಟ್ಟಳಂತೆ.
ಇದನ್ನು "ನ್ಯಾಯ"ದಲ್ಲಿ ಗೋಪ ಗೃಹಿಣೀ ನ್ಯಾಯ ಎನ್ನುತ್ತಾರೆ. ಅಧ್ಬುತ ಕಥೆ ಅಲ್ಲವೇ ?