Sunday, 13 November 2011

ಮಕ್ಕಳ ದಿನಾ+ಆಚರಣೆ !!

ಮೊದಲು ಮಕ್ಕಳಿಗೆ ಶುಭಾಶಯಗಳು.. ಮತ್ತೆ ದೊಡ್ಡವರಿಗೆ ಶುಭಾಶಯಗಳು.

ಮತ್ತೆ ಮಕ್ಕಳ ದಿನಾಚರಣೆ ಅಂತ ಬೇಕೇ.. ಮಕ್ಕಳಿಗೆ ದಿನಾ ಆಚರಣೆ. ಎಲ್ಲೆಂದರಲ್ಲಿ ಹಾಡುವ, ಓಡುವ, ಜಗಳವಾಡುವ, ಪ್ರೀತಿಸುವ, ಒಂದಾಗುವ, ಕಲಿಯುವ , ಬೆರೆಯುವ ಆಸಕ್ತಿ ಮತ್ತು ಸಮಯ ಸಹಾಯ ಮಕ್ಕಳಿಗಲ್ಲದೆ ಬೇರೆಯವರಿಗುಂಟೇ?

ಚಾಚಾ ನೆಹರು ಹುಟ್ಟಿದ ದಿನವನ್ನು ಮಕ್ಕಳ ದಿನ ಆಚರಿಸೋದು ಹೌದು. ಆದರೆ ನಮ್ಮ ಕನ್ನಡ ಮಕ್ಕಳು ಯಾವತ್ತೂ ನೆನಪಿಸಿಕೊಳ್ಳಬೇಕಾದ ಇಬ್ಬರು ಸಾಹಿತಿಗಳು ರಾಜರತ್ನಂ ಮತ್ತೆ ದಿನಕರ ದೇಸಾಯಿ.

ಕುಟುಕುವ ಚುಟುಕಗಳಿಂದ ಹೆಸರುವಾಸಿಯಾದ ದಿನಕರ ದೇಸಾಯಿಯವರ ಘಂಟೆಯ ನೆಂಟನೆ ಓ ಗಡಿಯಾರ ಹಾಡನ್ನು ಕೇಳದ ಮಕ್ಕಳಿರಲಿಲ್ಲ.. ಈಗ ಯೆಲ್ಲೋ ಯೆಲ್ಲೋ ಡರ್ಟಿ ಫೆಲ್ಲೋ ಎಂದೊದರಿದರೂ ಮೊದಲು ನಮಗೆ ತುಂಬಾ ಆಪ್ಯಾಯಮಾನವಾಗಿದ್ದ ಹಾಡು. ಇದೊಂದೇ ಅಲ್ಲದೆ ತುಂಬಾ ಮಕ್ಕಳ ಸಾಹಿತ್ಯವನ್ನು ಬರೆದಿದ್ದಾರೆ. ಮಕ್ಕಳ ಗೀತೆಗಳು , ಶಿಶುಕವನ ಸಂಕಲನಗಳನ್ನು ಮಕ್ಕಳಿಗೋಸ್ಕರ ಪ್ರಕಟಿಸಿದ್ದಾರೆ.
ಮಕ್ಕಳು ಕೊಳ್ಳಲು ಸಾಧ್ಯವಿಲ್ಲವಾದ್ದರಿಂದ ಅಪ್ಪ ಅಮ್ಮ ಕೊಂಡು ಮಕ್ಕಳಿಗೆ ಕೊಡಿಸಬೇಕು ಅಷ್ಟೇ..

ಕುಡುಕ ರತ್ನನಿಂದಾಗಿ ಹೆಸರುವಾಸಿಯಾದ ಇನ್ನೊಬ್ಬ ಕವಿ ರಾಜರತ್ನಂ. ರತ್ನನ ಪದಗಳು, ನಾಗನ ಪದಗಳು ಮಕ್ಕಳಿಗಲ್ಲ ಬಿಡಿ, ದೊಡ್ಡವರಿಗೂ ಒಂದೇ ಬಾರಿ ಓದಬೇಕಾದಲ್ಲಿ ಒಮ್ಮೆ ಬಾರಿಗೆ ಹೋಗಿ ಬರಬೇಕು.
ಆದರೆ ಬಣ್ಣದ ತಗಡಿನ ತುತ್ತೂರಿ, ನಮ್ಮ ಮನೆಯಲೊಂದು ಪುಟ್ಟ ಪಾಪು ಇರುವುದು.. ಇಂತಹ ಹಾಡುಗಳನ್ನೆಲ್ಲ ಎಷ್ಟು ಬಾರಿ ಆನಂದದಿಂದ ಮಕ್ಕಳು ಹಾಡುವುದನ್ನ ನೋಡಿದ್ದೇವೆ!. ತುತ್ತೂರಿ, ಕಂದನ ಕಾವ್ಯ ಎನ್ನುವಂತಹದ್ದನ್ನ ಮಕ್ಕಳಿಗಾಗಿ ಕೊಟ್ಟ ಕವಿ.

ಇವರಿಬ್ಬರನ್ನು ಮಕ್ಕಳ ದಿನಾಚರಣೆ ಪ್ರಯುಕ್ತ ನೆನಪು ಮಾಡಿಕೊಂಡಿದ್ದೇನೆ. ನಾನೂ ಮಗುವೇ ಆದ್ದರಿಂದ. .. ಮಕ್ಕಳಿಗೊಂದು ಕವಿಗಳಿಗೆರಡು ಜೈ ಹೋ...

ಮತ್ತೆ ಮಕ್ಕಳಿಗೆ ಒಂದು ಹಾಡು..

ಚಿಕ್ಕ ಚಿಕ್ಕ ಮಕ್ಕಳೆಲ್ಲ ಬನ್ನಿರೀ ಬದಿ
ಚೊಕ್ಕವಾದ ಆಟಗಳನು ಆಡಿ ಚಂದದಿ

ದೊಡ್ಡ ದೊಡ್ಡ ಚೆಂಡು ದಾಂಡು ಕೈಯ್ಯಲೇತಕೆ
ಗುಡ್ಡ ಬೆಟ್ಟ ಹತ್ತಿ ಇಳಿವ ಯಾಕೆ ನಾಚಿಕೆ ?

ಎದ್ದು ಬಿದ್ದು ನಗುವ ಸದ್ದು ಮಾಡಿರೆಲ್ಲರೂ
ಹದ್ದು ಕಾಗೆ ಗುಬ್ಬಿ ಮೊಲವ ನೋಡಿರೆಲ್ಲರೂ

ಹರಿವ ನೀರು ಬೆಳೆವ ಪೈರು ನಮ್ಮ ನಾಡಿಗೆ
ಬಿರಿವ ಮನಸು ನಮ್ಮದೆನುತ ಮರಳಿ ಗೂಡಿಗೆ.

ಶುಭಾಶಯಗಳು..

4 comments:

 1. ನಮ್ಮ ಬಾಲ್ಯದ ತರಹ ಆಡಿ, ಕುಣಿದು ಕುಪ್ಪಳಿಸುವ ಕಾಲ ಇಂದಿಲ್ಲ... ಇಂದಿನ ಮಕ್ಕಳು ಏನಿದ್ದರೂ ಟಿವಿ, ಕಂಪ್ಯೂಟರ್ ಗೇಮ್ಸ್, ಕ್ರಿಕೆಟ್ - ಇವುಗಳನ್ನು ಬಿಟ್ಟರೆ ಬೇರೆ ಪ್ರಪಂಚವೇ ಇಲ್ಲದಂತೆ ಇದ್ದಾರೆ... ನಾವು ಆಡುತ್ತಿದ್ದ ಕುಂಟ-ಬಿಲ್ಲೆ, ಚಿನ್ನಿ ದಾಂಡು, ಪಗಡೆ, ಕಲ್ಲಾಟ, ಕಣ್ಣಾ ಮುಚ್ಚಾಲೆ, ಅಡಿಗೆ ಆಟ, ಗದ್ದೆಗಳಲ್ಲಿ ಆಡುತ್ತಿದ್ದ ಮುಟ್ಟಾಟ (ಜೂಟ್), ಕಂಬ-ಕಂಬ ಆಟ, ಕೆರೆ-ದಂಡೆ, ಅವಲಕ್ಕಿ-ಪವಲಕ್ಕಿ, ರತ್ತೋ ರತ್ತೋ ರಾಯನ ಮಗಳೇ.........(ಬೆಳೆಯುತ್ತಲೇ ಹೋಗುತ್ತದೆ ಬಾಲ್ಯದ ಆಟಗಳ ಪಟ್ಟಿ !) ಇವೆಲ್ಲ ಆಟಗಳಿದ್ದವು ಎಂಬುದೇ ಇಂದಿನ ಮಕ್ಕಳಿಗೆ ಗೊತ್ತಿಲ್ಲ...! ನಮ್ಮೆಲ್ಲರ ಬಾಲ್ಯ ಬಾಲ್ಯದಂತೆಯೇ ಇತ್ತು... ಈಗಿನ ಮಕ್ಕಳು ನಮಗೇ ಬುದ್ದಿ ಹೇಳುವಷ್ಟರ ಮಟ್ಟಿಗೆ ಬೆಳೆದು ಬಿಟ್ಟಿರುತ್ತಾರೆ. ಮಕ್ಕಳ ದಿನದ ಪ್ರಯುಕ್ತ ನಮ್ಮ ಕಾಲದ ಮಕ್ಕಳಾಟವನ್ನು ನೆನಪಿಸಿದ್ದಕ್ಕೆ ಧನ್ಯವಾದ ಕಿರಣ.... :)

  ReplyDelete
 2. ಕಾವ್ಯಾ, ತುಂಬಾ ಧನ್ಯವಾದಗಳು. ಬಾಲ್ಯದ ಆಟ, ಓಟ ಎಲ್ಲವೂ ಸುಂದರ. ಸ್ವಲ್ಪ ಸೇರಿಸಿದ್ದೇನೆ ಮೊದಲು ಬರೆದಿದ್ದಕ್ಕೆ.

  ಪ್ರತಿಕ್ರಿಯೆಗೆ ಧನ್ಯವಾದಗಳು.

  ReplyDelete
 3. ಚೆನ್ನಾಗಿ ಬರದ್ದೆ ಕಿಣ್ಣಣ್ಣ.. ಈಗಿನ ಹುಡ್ರಿಗೆ ಗೋಲಿ, ಚಿನ್ನಿದಾಂಡು, ಬುಗುರಿ ಇದೆಲ್ಲಾ ಗೊತ್ತೇ ಇಲ್ಲೆ. ಗೋಲಿ ಆಡದು ಬಡವ್ರು. ಚಿನ್ನಿದಾಂಡು ಆಡಿದ್ರೆ ಕಣ್ಣು ಹೋಗ್ತು. ಬುಗುರಿ ಆಡಿದ್ರೆ ನೆಲ ಹಾಳಾಗ್ತು ಈ ತರ ಪಿಳ್ಳೆ ನೆವ ಹೇಳೋ ಅಪ್ಪ ಅಮ್ಮಂದಿಕ್ಕನೂ ಮಕ್ಕಳು ಇದನ್ನೆಲ್ಲಾ ಮರ್ಯಕ್ಕೆ ಕಾರಣ.. ಬರೀ ಮಕ್ಕಳೊಂದೇ ಅಲ್ಲ.. ಮತ್ತೆ ರತ್ನನ ಪದಗಳು, ಚುಟುಕು ಬ್ರಹ್ಮ ದಿನಕರ ದೇಸಾಯಿ ಇಂತದ್ದೆಲ್ಲಾ ಈ ಹುಡ್ರಿಗೆ ಓದಕ್ಕೆ ಆಗ್ತಾ ಇಲ್ಯೋ ಗೊತ್ತಿಲ್ಲೆ. ಆ ತರ ಹೋಮ್ವಕ್ರು ಗೋಳು. ಇಡೀ ದಿನ ಟೀವಿ, ಇತ್ತೀತ್ಲಗೆ ನೆಟ್ಟು.. ನಾನು ಅದರ ವಿರೋಧಿ ಅಂತಲ್ಲ.. ಎಲ್ಲದೂ ಇರ್ಲಿ. ಆದ್ರೆ ಏನೋ ಆಗಕ್ಕೆ ಹೋಗಿ ನಮ್ಮತನ ಕಳ್ಕಳದು ಬ್ಯಾಡ ಅಂತ ನನ್ನ ಅನಿಸಿಕೆ.. ಸಕಾಲಿಕ ಮಾಹಿತಿ. ಒಳ್ಳೇ ಲೇಖನ :-)

  ಇನ್ನೊಂದು ಕೇಳಕ್ಕಿತ್ತು.. ಎಷ್ಟು ಬ್ಲಾಗಿದ್ದೋ ನಿಂದು.. ಈಗ್ಲೇ ೨ ಅನುಸರಿಸ್ತಾ ಇದ್ದಿ.. ಇದು ಮೂರನೇದು ಅಂತ ಕಾಣುಸ್ತು :-) :-) ಅಲ್ಲ, ಬೇಜಾರು ಮಾಡ್ಕ್ಯಳಡ.. ಸುಮ್ನೆ ಹೇಳ್ದಿ.. ನೀ ಎಷ್ಟು ಬರದ್ರೂ ಓದಕ್ಕೆ ಬೇಜಾರು ಆಗ್ತಲ್ಲೆ ತಗ :-) ಓದಕ್ಕೆ ರೆಡೀ ಇರ್ತ್ಯ.. ಆದ್ರೆ ಸ್ವಲ್ಪ ಲೇಟಾಗ್ತು ಕೆಲೋ ಸಲ ಅಷ್ಟೇ :-)

  ReplyDelete
 4. ಪ್ರಶಸ್ತಿ, ಇಪ್ಪದೇ ಎರಡು ಬ್ಲಾಗು ಮಾರಾಯ. ಒಂದು ಭಾವಕಿರಣ ಇನ್ನೊಂದು ಈಶ್ವರತತ್ವ .. ಕವನ ಮಾತ್ರ ಅದ್ರಲ್ಲಿ .

  ReplyDelete