ಸಂಜೆಗಳು ಸುಂದರವಾಗಿರುತ್ತವೆ ನಮ್ಮೂರುಗಳಲ್ಲಿ. ಬಿಸಿಲಿಗೆ ಬೆಂದ
ಚರ್ಮದ ಮೇಲೆ ಹಾಯೆಂದು ತಂಪನೆರೆಯುವ ಗಾಳಿ. ಅಲ್ಲೆಲ್ಲೋ ಏನೇನೋ ಸ್ವರಗಳು ಇಪ್ಪತ್ತೆಂಟರ ಕಪ್ಪಾದ ತಲೆಯಲ್ಲಿ
ಅಲ್ಲಲ್ಲಿ ಕಂಡುಬಂದ ಬಿಳಿಗೂದಲಿನಂತೆ ಆಪ್ಯಾಯಮಾನ. ಇಂತಹ ಸಂಜೆಗಳಲ್ಲಿ ದನಗಳನ್ನು ಕರೆಯುವುದೋ ಆಡಲು
ಹೋದ ಮಕ್ಕಳನ್ನು ಬೈಯ್ಯುವುದೋ ಮುಂತಾದ ಕಾರ್ಯಕ್ರಮಗಳಲ್ಲಿ ಮುಳುಗಿರುವ ಮನೆಯೊಡತಿಯರು, ತೋಟದ ಕೆಲಸಗಳಲ್ಲಿ
ಬಾಕಿ ಉಳಿದುದನ್ನು ಹಳಿದುಕೊಳ್ಳುತ್ತಾ ಇರುವ ಮನೆಯೊಡೆಯರು ಮುಂತಾದುವುಗಳಿಂದ ಅತ್ಯಂತ ರಮ್ಯವಾಗಿರುತ್ತದೆ.
ದೂರದ ಊರಿನ ಯೋಚನೆಯಲ್ಲಿದ್ದ ಚಿಕ್ಕಪ್ಪನನ್ನು ಪುನಃ ಕತೆಗೆ ಎಳೆಯುವುದು
ಕಷ್ಟವಾಗಿತ್ತು. ಹೇಗೂ ಸಂಜೆಯ ಸಮಯ, ಸ್ವಲ್ಪ ತಿರುಗಾಡಲು ಒಳ್ಳೇ ಸಮಯ ಎಂದುಕೊಂಡೆ. ಅಪ್ಪಚ್ಚೀ, ನಾನು
ಹೊರಡುತ್ತೇನೆ. ನಾಳೆ ಮನೆಗೆ ಬರುತ್ತೇನೆ, ಮಹೇಶ ನಾಳೆ ಬರ್ತಾನಲ್ವೇ?
ಓಹ್, ಸರಿ ಸರಿ. ಮಹೇಶ ಹ್ಮ್.. ಬರ್ತಾನೆ, ಅವನಿಗೆ ಬಸ್ಸಿನ ಟಿಕೆಟ್
ಬುಕ್ ಮಾಡಲಿಕ್ಕಾಗಲಿಲ್ಲವಂತೆ, ಬಸ್ ಸಿಕ್ಕಿದರೆ ಬರಬಹುದು. ಬೆಂಗಳೂರಿನಿಂದ ಮನೆಗೆ ಬರೋದಕ್ಕೆ ಅಮೇರಿಕದಿಂದ
ಬರುವ ಫೋಸು. ಎಂತಕ್ಕೂ ಇವತ್ತು ರಾತ್ರಿ ೯ ಘಂಟೆಗೆ ಮನೆಗೆ ಬಾ, ಮತ್ತೆ ನಾವೊಂದು ಯಕ್ಷಗಾನಕ್ಕೆ ಹೋಗುವ.
ಯಾರೂ ಇಲ್ಲ ಜೊತೆಗೆ.
ಸರಿ ಚಿಕ್ಕಪ್ಪ. ನಾನು ಮನೆಗೆ ಹೋಗಿ, ಊಟ ಮಾಡಿ ವಾಪಸ್ಸು ಬರ್ತೇನೆ.
ನಡೆಯುತ್ತಾ ಬಂದಂತೆ ಅಪ್ಪಚ್ಚಿ ಅತ್ಯಂತ ಆಪ್ತರಾದರು. ಅವರ ಎರಡು
ಮಕ್ಕಳೂ ದೂರದಲ್ಲಿದ್ದಾರೆ. ಹಾಗಾಗಿ ಅಣ್ಣ ತಮ್ಮಂದಿರ ಮಕ್ಕಳಲ್ಲೂ ಅತ್ಯಂತ ಸಂತೋಷದಿಂದ ಬೆರೆಯುತ್ತಾರೆ.
ಹಾಗಾಗಿ ನನಗೂ ಅತ್ಯಂತ ಖುಷಿ ಅವರೊಂದಿಗೆ ಮಾತನಾಡುವುದಕ್ಕೆ.
ಮನೆಗೆ ಬರುವ ದಾರಿಯಲ್ಲಿ ಗದ್ದೆಯ ಕ್ರೀಡಾಂಗಣದಲ್ಲಿ ಕ್ರಿಕೆಟ್ ಆಟ
ನಡೆಯುತ್ತಿತ್ತು. ಇತ್ತೀಚೆಗೆ ಆಟಗಾರರು ಜಾಸ್ತಿಯಾಗಿದ್ದಾರೆ. ಸುಮಾರು ದೂರದಿಂದ ಆಟವಾಡುವುದಕ್ಕೆ
ಬರುವ ನನ್ನಂತಿರುವ ಹುಡುಗರನ್ನು ನೋಡಿ ಆಶ್ಚರ್ಯವಾಗುತ್ತಿತ್ತು. ಸುಮ್ಮನೇ ಎರಡು ರೌಂಡ್ ಓಡಿದರೆ ಸುಸ್ತಾಗುವ
ನನ್ನ ದೇಹಕ್ಕೂ, ದಿನವಿಡೀ ದೈಹಿಕ ಕೆಲಸಗಳನ್ನು ಮಾಡಿ ಆಟವಾಡಲೆಂದೇ ೨-೩ ಕಿಲೋಮೀಟರು ನಡೆದು ಬರುವ
ಅವರ ದೇಹಕ್ಕೂ ಎಷ್ಟೊಂದು ವ್ಯತ್ಯಾಸ?
ಬಿಸಿನೀರ ಸ್ನಾನವೂ ಊಟವೂ ಆದ ಕೂಡಲೇ ಹಳೇ ಟಾರ್ಚನ್ನು ಹಿಡಿದುಕೊಂಡು
ಹೊರಟೆ. ಹೇಗೊ ಚಿಕ್ಕಪ್ಪನ ಮನೆಯಿಂದ ಸರಿಯಾದ ಮಾರ್ಗವಿರುವುದರಿಂದ ಲೈಟಿಲ್ಲದಿದ್ದರೂ ಹೋಗಬಹುದಿತ್ತು. ಚಿಕ್ಕಪ್ಪನ ಮನೆ ಬರುತ್ತಲೇ ಅವರ ಮನೆಯ ಪೇಲವ ನಾಯಿ ನನ್ನನ್ನು ನೋಡಿ ಗುರ್ರ್ರ್ ಎಂದಿತು. ಕಚ್ಚಿದರೆ ಅದರ ಹಲ್ಲುಗಳೇ ಉದುರುವ ನಂಬಿಕೆ ಬಂದಿದ್ದರಿಂದ ಕ್ಯಾರೆನ್ನದೆ ಮನೆಯೊಳಕ್ಕೆ ಹೋದೆ. ಚಿಕ್ಕಪ್ಪ ಮತ್ತು ಚಿಕ್ಕಮ್ಮ ಊಟದಲ್ಲಿದ್ದರು. ಅಲ್ಲೇ ಇದ್ದ ಎಲೆ ಅಡಕೆಯನ್ನು ತಿನ್ನುತ್ತಾ ಕುಳಿತೆ.
ಸುಮಾರು ಎಂಟೂವರೆಗೆ ಹೊರಟೆವು. ಸುಮಾರು ಮೂರು ಮೈಲಿ ದೂರವಾದೀತು. ಚಿಕ್ಕಪ್ಪನ ಲೈಟು ಪುರಾತತ್ವ ಇಲಾಖೆಯವರಿಗೆ ಸೇರಿದ್ದೇನೋ ಅನ್ನುವಷ್ಟು ಹಳೆಯದು. ಈ ಮೊಬೈಲಿನ ಬೆಳಕಿನಲ್ಲೂ ನಡೆಯಬಹುದು ಆದರೆ ಅವರ ಟಾರ್ಚ್ ಲೈಟು ನಿರ್ದಿಷ್ಟಗುರಿ ಮಾತ್ರ ತೋರಿಸಿ ಮುಂದಿನ ದಾರಿ ನಿಮ್ಮ ಇಚ್ಚೆ ಎನ್ನುತ್ತಿತ್ತು.
ಮಗನೇ.. ಈಗ ಯಕ್ಷಗಾನಕ್ಕೆ ಹೊರಟಿದ್ದು ನೀನು ಬರುತ್ತಿರುವ ಗ್ಯಾರಂಟಿಯಿಂದಷ್ಟೆ. ಅಷ್ಟೇನೂ ಒಳ್ಳೆ ಭಾಗವತರಲ್ಲ, ಆದ್ರೂ ಪುಂಡುವೇಷಗಳು ಭಾರಿ ಚಂದವಿರುತ್ತವೆ. ಆದರೂ ನಿನಗೆ ಅಪರೂಪ ಅಲ್ವೇ? ಅಲ್ಲ ಅಲ್ಲ.. ಬೆಂಗಳೂರಿನಲ್ಲಿ ನಮ್ಮ ಕಲಾವಿದರು ದಪ್ಪದ ಕವರ್ ನೋಡಿದರೆ ಹುಚ್ಚೆದ್ದು ಕುಣಿಯುತ್ತಾರೆ ಅಲ್ವಾ? ಬಿಡು, ಅವರಿಗೂ ಪಾಪ ಧನಸಹಾಯ ಮಾಡುವಂತವರು ನಿಮ್ಮಂತ ಹುಡುಗರೇ, ನಮ್ಮಂತ ಹಳಬರು ಪುಕ್ಕಟೆ ಆಟ ನೋಡಿ ಬರೋದು.. ಹಹ್ಹ!
ನೋಡು ನಿನಗೆ ಹೊತ್ತು ಹೋಗುವುದಕ್ಕೆ ಇನ್ನೊಂದು ಕತೆ ಹೇಳುತ್ತೇನೆ. ಇದೂ ನಿನ್ನಪ್ಪನ ಒಂದು ಸ್ವಾರಸ್ಯ ಕತೆಯೇ. ಈಗ ನಾವು ನಡೆಯುವ ಮಾರ್ಗ ಇದೆಯಲ್ಲ, ಇದು ನಮ್ಮಪ್ಪನ ಜಾಗ. ಈಗ ನಮ್ಮದಲ್ಲವಾದರೂ ಮೊದಲು ಈ ಜಾಗದಲ್ಲೆಲ್ಲಾ ನನ್ನ ಅಣ್ಣ ತಮ್ಮಂದಿರ ಕಾಲ್ಗುರುತುಗಳಿರಬಹುದು. ಈ ದಾರಿಯ ಇನ್ನೊಂದು ಬದಿ ತೋಟವಿದೆಯಲ್ಲಾ, ಅದೆಲ್ಲಾ ನಮ್ಮದೇ ಆಗಿತ್ತು. ಯಾವುದೋ ಒಂದು ಕೋರ್ಟ್ ಕೇಸಿನಿಂದ ನಮ್ಮಿಂದ ಕೈತಪ್ಪಿತು. ಆದರೂ ಅದರಲ್ಲೇನೂ ಅವರಿಗೆ ಲಾಭವಾಗಲಿಲ್ಲವೇನೋ? ಇರಲಿ.
ಈ ತೋಟಕ್ಕೆ ಗೊಬ್ಬರ ಹಾಕಿದ ದಿನ ಅಂದು. ನಿನ್ನಪ್ಪ ಒಳ್ಳೇ ಧೃಡಕಾಯ. ಗೊಬ್ಬರದ ಪುಟ್ಟಿ ಇದೆಯಲ್ಲ, ಅದೆಲ್ಲಾ ಈಗ ಹೊರುವುದಲ್ಲ. ಸುಮಾರು ಎಂಭತ್ತರಿಂದ ನೂರು ಕೆಜಿಯಷ್ಟು ಭಾರವಿತ್ತು. ಮೆಟ್ಟಿ ತುಂಬಿದರೆ ಸುಲಭದಲ್ಲಿ ತಲೆಯಲ್ಲಿಡುವುದು ಅಸಾಧ್ಯ. ಇಂತಹ ಪುಟ್ಟಿಯನ್ನು ಅತ್ಯಂತ ಸಲೀಸಾಗಿ ಹೊತ್ತುಕೊಂಡು ಹೋಗುತ್ತಿದ್ದ. ನಾನು ಅದನ್ನು ಎತ್ತಿ ತಲೆಯಮೇಲಿಡಲು ಸಹಾಯ ಮಾಡುತ್ತಿದ್ದೆನಷ್ಟೆ.
ತೋಟದ ಪಕ್ಕದ ಮನೆ ಅಂದರೆ ನಿನ್ನ ಫ್ರೆಂಡಿದ್ದಾನಲ್ಲ ಪ್ರಶಾಂತ, ಅವರ ದೊಡ್ಡಪ್ಪನ ಮನೆಯಾಗಿತ್ತು. ದೂಮಪ್ಪ ಮೂಲ್ಯ ಎಂದು ಅವರ ಹೆಸರು, ನೀನು ನೋಡಿರಬಹುದೇನೊ? ಇಲ್ಲ, ನಿನ್ನಪ್ಪನಿಗೆ ಮದುವೆಯಾಗುವ ಸಮಯ ಅವರು ಪುತ್ತೂರಿನ ಮಗಳ ಮನೆಗೆ ಹೋಗಿ ಅಲ್ಲೇ ಇದ್ದರು.
ಎರಡೋ ಮೂರೋ ವರುಷದಲ್ಲಿ ಅವರ ಅಳಿಯನೇ ಕೊಲೆ ಮಾಡಿದನಂತೆ, ಪೇಪರಿನಲ್ಲೆಲ್ಲಾ ಬಂದಿತ್ತು. ಏನಿದ್ದರೇನು? ಏನಾದರೇನು? ಮನುಷ್ಯರ ಬಾಳು ಹೀಗೇ ಎನ್ನುವುದಕ್ಕುಂಟೆ!
ಈ ದೂಮಪ್ಪ ಮೂಲ್ಯ ಅತ್ಯಂತ ದೊಡ್ಡ ಕೋಳಿ ಸ್ಪೆಷಲಿಸ್ಟು. ಆಗಿನ ಕಾಲದ ಕೋಳಿಕಟ್ಟದಲ್ಲೆಲ್ಲಾ ದೂಮಪ್ಪ ಮೂಲ್ಯರ ಕೋಳಿಗಳೇ ಗೆಲ್ಲುವುದು ಸಾಮಾನ್ಯ. ಆಗಿನ ಕಾಲಕ್ಕೇ ೮೦-೧೦೦ ರೂಪಾಯಿಗಳಿಗೆ ದೂಮಪ್ಪ ಮೂಲ್ಯರ ಕೋಳಿಗಳು ಮಾರಲ್ಪಡುತ್ತಿದ್ದವು. ಮನೆಯಲ್ಲಿ ದೊಡ್ಡ ಕೋಳಿಗೂಡು, ಹಾಗೇ ೪೦-೫೦ ಕೋಳಿಗಳು ಯಾವತ್ತೂ ಹಾಡುತ್ತಾ ಇರುತ್ತಿದ್ದವು.
ಗೊಬ್ಬರ ತೋಟಕ್ಕಿಳಿಸಿದ ಮೇಲೆ ಒಂದೆರಡು ದಿನಗಳಲ್ಲಿ ಅಡಕೆ ಮರದ ಬುಡಕ್ಕೆ ಹಾಕುವುದು ಸಾಮಾನ್ಯ. ಹಾಗೆಯೇ ನಾನು,
ನಿನ್ನಪ್ಪ, ಅಣ್ಣ ಮತ್ತೆ ಕೆಲಸದವರು ಸೇರಿಕೊಂಡು ಗೊಬ್ಬರದ ಕೆಲಸ ಮಾಡುತ್ತಿದ್ದೆವು.
ದೂಮಪ್ಪ ಮೂಲ್ಯರ ಎಲ್ಲಾ ಕೋಳಿಗಳು ಹಬ್ಬದ ಊಟಕ್ಕೆ ಬಂದಂತೆ ಕುಟುಂಬ ಸಮೇತರಾಗಿ ಬಂದು ಗೊಬ್ಬರದೊಳಗಡಗಿರುವ ರಾಶಿ ರಾಶಿ ಹುಳಗಳನ್ನು ತಿನ್ನತೊಡಗಿದವು. ನಾನು ಸುಮ್ಮನಿದ್ದೆ,
ಆದರೆ ನಿನ್ನಪ್ಪ ಸುಮ್ಮನಿರಲಿಲ್ಲ. ಕೋಳಿಗಳು ತಿನ್ನುವುದಷ್ಟನ್ನೇ ಮಾಡದೆ ಗೊಬ್ಬರವನ್ನು ಕೆದಕಿ ಕೆದಕಿ ಹಾಳು ಮಾಡುತ್ತಿದ್ದವು.
ಕೆದಕದೆ ತಿನ್ನುವುದು ಹೇಗೆ ಅಲ್ವೇ?
ನಿನ್ನಪ್ಪ ಹುಶ್ ಎಂದ,
ಹೋಯ್ ಎಂದ.
ಆದರೆ ಅದನ್ನೆಲ್ಲ ಲೆಕ್ಕಿಸುತ್ತಿರಲಿಲ್ಲ ಕೋಳಿಗಳು.
ನಿನ್ನಪ್ಪನಿಗೆ ಅದೇನನ್ನಿಸಿತೋ ಏನೋ, ಸಣ್ಣ ಕಲ್ಲನ್ನೆತ್ತಿ ಕೋಳಿಗಳ ಗುಂಪಿಗೆಸೆದ.
ಇರುವುದರಲ್ಲಿ ದೊಡ್ಡ ಹುಂಜವೊಂದು ಧೊಪ್ಪನೆ ಉರುಳಿತು.
ಉಳಿದ ಕೋಳಿಗಳೆಲ್ಲಾ ಕೊಕ್ಕೊಕ್ಕೊ ಎನ್ನುತ್ತಾ ಚಲ್ಲಾಪಿಲ್ಲಿಯಾದವು. ದೊಡ್ಡ ಹುಂಜವೊಂದು ಸತ್ತು ಬಿದ್ದಿತ್ತು.
ನಿನ್ನಪ್ಪ ಕೋಳಿಯ ಬಳಿಗೆ ಹೋಗಿ ನೋಡಿದ,
ಎಲ್ಲಿಗೂ ಗಾಯವಾಗಿರಲಿಲ್ಲ ಮತ್ತು ಎಸೆದ ಕಲ್ಲು ಕೂಡ ಬಹಳ ಸಣ್ಣದು.
ಹೇಗೆ ಸತ್ತಿತೆಂದೇ ಗೊತ್ತಾಗಲಿಲ್ಲ ಅವನಿಗೆ.
ಯಾರಿಗೂ ಗೊತ್ತಾಗಲಿಲ್ಲ ಕೋಳಿ ಕೊಂದ ಈ ಘಟನೆ.
ಆದರೂ ದೂಮಪ್ಪ ಮೂಲ್ಯರ ಬೈಗುಳವೋ ಅದರಿಂದ ಉಂಟಾಗುವ ಅಪ್ಪನ ಬೈಗುಳವೋ ಕೇಳುವುದಕ್ಕೆ ಸಿದ್ಧವಿರದ ನಾವುಗಳು ಆ ಕೋಳಿಯನ್ನು ಮೆಲ್ಲನೆ ಎತ್ತಿಕೊಂಡು ಹೋಗಿ ತೋಟದ ಅಂಚಿನಲ್ಲಿದ್ದ ಮರದ ಕೆಳಗೆಸೆದು ವಾಪಸ್ಸು ಬಂದು ಕೆಲಸದಲ್ಲಿ ಮುಳುಗಿದೆವು. ಮಧ್ಯಾಹ್ನದ ವರೆಗೆ ಮಾತ್ರ ಸಾಧ್ಯವಿದ್ದ ಗೊಬ್ಬರದ ಕೆಲಸ ಮುಗಿಸಿ ಮನೆಗೆ ಬಂದು ಊಟ ಮುಗಿಸಿ ನಾನೂ ನಿನ್ನಪ್ಪನೂ ಕೋಳಿ ಏನಾಗಿದೆ ಎಂದು ತಿಳಿಯಲು ಮೆಲ್ಲನೆ ತೋಟದ ಮೂಲೆಗೆ ಹೋದೆವು.
ನಾವು ಹೋಗುವ ಮೊದಲೇ ಅಲ್ಲಿ ಎರಡು ಮೂರು ಜನರಿದ್ದರು.
ನಾವು ಏನೂ ತಿಳಿಯದವರಂತೆ ಏನಾಯಿತು ಎಂದು ಕೇಳಿದೆವು.
ದೂಮಪ್ಪ ಮೂಲ್ಯರು ಮ್ಲಾನವದನರಾಗಿ,
ಯಾವುದೋ ವಿಷದ ಹಾವೋ ಹಲ್ಲಿಯೋ ತಿಂದಿರಬೇಕು ಕೋಳಿ. ಇದ್ದ ಹಾಗೇ ಸತ್ತಿರಬೇಕು.
ಅಯ್ಯೋ ಏನು ಮಾಡೋದು ಅಣ್ಣೆರೆ,
ಪದವಿನ ಕೋಳಿಕಟ್ಟಕ್ಕೆ ಬೇಕು ಎಂದು ತಯಾರು ಮಾಡಿದ ಕೋಳಿ ಅಣ್ಣೆರೆ.
ಅನ್ಯಾಯವಾಗಿ ಹೋಯ್ತಲ್ಲ.
ತಿನ್ನಲೂ ಆಗಲ್ಲ,
ಕಟ್ಟಕ್ಕೂ ಬರಲಿಲ್ಲ.
ಎಂದೆಲ್ಲಾ ಹೇಳುತ್ತಾ ತುಂಬಾ ಬೇಸರದಲ್ಲಿದ್ದರು.
ನಾವು ಇನ್ನಲ್ಲಿದ್ದು ಏನು ಮಾತನಾಡುವುದೆಂದು ತೋಚದೆ ಅಲ್ಲಿಂದ ಹೊರಟೆವು.
ಸಂಜೆ ಆಡಲು ಹೋಗುತ್ತಿದ್ದಾಗ ರಾಮ ಮೂಲ್ಯರು ಸಿಕ್ಕಿದರು.
ಆವತ್ತಿನ ವಿಶೇಷ ಏನು ಎನ್ನುವ ಸಾಮಾನ್ಯ ಪ್ರಶ್ನೆಗೆ ರಾಮ ಮೂಲ್ಯರು ಕೋಳಿಯ ವಿಷಯವನ್ನೇ ಹೇಳಿದರು. " ಆ ದೂಮಪ್ಪ ಮೂಲ್ಯನ ಕೋಳಿ,
ಒಳ್ಳೇ ಹುಂಜ..
ಯಾರೋ ಬೇಕೆಂದೇ ಕೊಂದಿರಬೇಕು"
ಹೌದೇ?
ಆದರೆ ನಾನು ಕೋಳಿಯನ್ನು ನೋಡಿದ್ದೇನೆ. ಗಾಯವೂ ಇಲ್ಲ ಏನೂ ಇರಲಿಲ್ಲ.
ಹ್ಮ್.
ನಾನೂ ನೋಡಿದೆ ಆಗ.
ಆದರೆ ಹೇಳಲು ಹೋಗಿಲ್ಲ.
ಕೋಳಿಯ ಕಿವಿಯ ಹತ್ತಿರ ಸಣ್ಣ ಏಟು ಬಿದ್ದಂತಿತ್ತು.
ಮರ್ಮಸ್ಥಾನಕ್ಕೇ ಅಕ್ಕಿಯ ಏಟು ಬಿದ್ದರೂ ಸಾಯುತ್ತದೆ ಕೋಳಿ. ಹಾಗೇ ಯಾರೋ ಕಲ್ಲೆಸೆದು ಕೊಂದಿರಬೇಕು. ನಾನೂ ಸಣ್ಣ ಇರಬೇಕಾದರೆ ಒಂದು ಕೋಳಿಗೆ ಕಲ್ಲೆಸೆದು ಕೊಂದಿದ್ದೆ, ನೋಡಿದರೆ ಎಲ್ಲೂ ಗಾಯವಿಲ್ಲ.
ಆಗ ನನ್ನಜ್ಜ ಹೇಳಿದ್ದರು ಇದೇ ಮಾತನ್ನ,
ಆದರೂ ಇದನ್ನು ಹೇಳುವ ಹಾಗಿಲ್ಲ.
ಒಂದುವೇಳೆ ನನ್ನ ಊಹೆ ತಪ್ಪಾಗಿ ವಿಷವೇನಾದರೂ ತಿಂದು ಸತ್ತಿದ್ದರೆ, ಆ ಕೋಳಿಯನ್ನು ಅವರೇನಾದರೂ ತಿಂದಿದ್ದರೆ ಸಮಸ್ಯೆಯಾಗುತ್ತಿತ್ತು. ಹಾಗೇ ಸುಮ್ಮನೆ ಬಂದೆ.
ಇದನ್ನು ಕೇಳಿ ಒಂದು ರೀತಿ ಸಮಾಧಾನವಾದರೂ ಈ ಕೋಳಿಗಳನ್ನು ನೋಡುವಾಗೆಲ್ಲಾ ಈ ಕೊಲೆಯ ನೆನಪಾಗುತ್ತದೆ.
ಅದೋ ಅದೋ ಒಂದು ಚಾಯ ಕುಡಿದು ಚೌಕಿ ಹತ್ರಕ್ಕೆ ಹೋಗಿ ಬರುವ ಆಗದೋ?
ಆಗಲಿ ಆಗಲಿ..
ಬಣ್ಣ ಹಚ್ಚುವ ಒಂದೆರಡು ಫೋಟೋಗಳನ್ನು ತೆಗೆಯಬೇಕು.
ಚೆನ್ನಾಗಿದೆ ಭಟ್ರೇ.. ಇಷ್ಟ ಆಯ್ತು.. :)
ReplyDeleteಅಂದ ಹಾಗೆ ಕೋಳಿಯ ಮರ್ಮ ಸ್ಥಾನ ಕಿವಿಯ ಹತ್ರ ಇರತ್ಯೇ ಅನ್ನೋ ಅನುಮಾನ ಶುರು ಆಯ್ತು.. ;)