Tuesday 18 September 2012

ರಂಗಮ್ಮನ ಚೌತಿ.


ರಂಗಮ್ಮ ವಾರವಿಡೀ ಕಾಂಕ್ರೀಟು ಕೆಲಸ, ಇನ್ನಿಲ್ಲದ ಕೂಲಿ ಮಾಡುತ್ತಾ ವಾರಕ್ಕೆ ೪೦೦ ರೂಪಾಯಿ ಗಳಿಸುತ್ತಾ ಹೇಗೋ ಬದುಕುತ್ತಿದ್ದಳು. ಗಂಡ ಕುಡುಕನಾದರೂ ಎರಡು ಮಕ್ಕಳನ್ನು ಕೊಟ್ಟಿದ್ದ. ಮಗಳನ್ನು ಓದಿಸುವುದಕ್ಕಾಗದೇ ಹೇಗೋ ಮದುವೆ ಮಾಡಿದ್ದಳು ರಂಗಮ್ಮ.
ಇದೀಗ ಮಗ ಕಾಲೇಜಿಗೆ ಹೋಗುತ್ತಿದ್ದಾನೆ ದೂರದ ಊರಿನ ಪೇಟೆಯಲ್ಲಿ.
ಕಾಲೇಜು ಎಂದರೆ ಸ್ಕೂಲೇ? ಅಲ್ಲವಲ್ಲ. ಮೊದಲು ಹತ್ತುರೂಪಾಯಿಯಲ್ಲಿ ಇಡೀವಾರ ಸಾಗುತ್ತಿದ್ದರೆ ಈಗ ಬಸ್ಸಿಗೆ ದಿನಕ್ಕೆ ೪೦ ರೂಪಾಯಿ ಆದರೂ ಬೇಕು.
ಮಗ ಕಾಲೇಜಿಗೆ ಸೇರಿದಂದಿನಿಂದ ರಂಗಮ್ಮನ ಮದ್ಯಾಹ್ನದ ಊಟವೂ ನಿಂತುಹೋಯಿತು. ಮಗ ಓದಲಿ ಎಂದೇ ಆದಷ್ಟು ಕಷ್ಟಪಟ್ಟು ದುಡಿಯತೊಡಗಿದಳು.

ಮಗನಿಗೆ ಆಗಾಗ ಹಿತೋಪದೇಶವೂ ನಡೆಯಿತು. ಇತ್ತೀಚೆಗೆ ಬೇಕು ಎಂದು ಹಠಮಾಡಿ ೩೦೦ ರೂಪಾಯಿ ಕೇಳಿದ. ರಂಗಮ್ಮ ಸಾಲಮಾಡಿ ಹೇಗೋ ಹೊಂದಿಸಿಕೊಟ್ಟಳು.
ಗಣೇಶನ ಹಬ್ಬವೆಂದು ಮನೆಗೆ ಮಗ ಸಣ್ಣ ಗಣೇಶನ ಮೂರುತಿ ತಂದ. ರಂಗಮ್ಮ ಮಾತನಾಡಲಿಲ್ಲ. ಕೊನೆಯ ದಿನ ಗಣೇಶನನ್ನು ಮನೆಯ ಎದುರಿನ ಬಾವಿಗೆ ವಿಸರ್ಜಿಸಿದ ಮಗ.
-
ಮುನ್ನೂರು ರೂಪಾಯಿ ಬಾವಿಯಲ್ಲಿದೆ ಎಂದು ರಂಗಮ್ಮ ಬಾವಿಗೆ ಹಾರಿದ್ದು ಮಾತ್ರ ನೆನಪು.

5 comments:

  1. ಮುನ್ನೂರು ರೂಪಾಯಿ ಬಾವಿಯಲ್ಲಿದೆ ಎಂದು ರಂಗಮ್ಮ ಬಾವಿಗೆ ಹಾರಿದ್ದು ಮಾತ್ರ ನೆನಪು.--------ಎಲ್ಲಾ ಕಥೆ ಈ ಕೊನೆಯ ಸಾಲಿನಲ್ಲಿದೆ.

    ReplyDelete
  2. ಕುಡುಕನಾದ್ರೂ ಎರಡು ಮಕ್ಕಳನ್ನು ಕೊಟ್ಟಿದ್ದಾ....ತುಂಬಾ ಚೆನ್ನಾಗಿದೆ..ಕಥೆಯನ್ನು ಇನ್ನೂವಿಸ್ತರಿಸಿದ್ದರೆ ಚೆನ್ನಿತ್ತು...

    ReplyDelete
  3. ಮನೆಯ ಪರಿಸ್ಥಿತಿ ಅರ್ಥ ಮಾಡಿಕೊಳ್ಳಲಾರದ ಮಕ್ಕಳು ಮತ್ತು ಅವರ ಸುಖಕ್ಕಾಗಿಯೇ ಬದುಕನ್ನೂ ಮುಡಿಪಿಡುವ ಹೆತ್ತವರು! ಜನ ತಿಳಿದುಕೊಳ್ಳಬೇಕಾದ ಕಿರು ಕಥೆ ಇದು. ಒಳ್ಳೆಯ ಬರಹ.

    ReplyDelete
  4. ದೃಷ್ಟಾಂತ ಕಥೆಗಳು...ನೀತಿ ಅರುವ ಹೊತ್ತಿನಲ್ಲಿಯೇ..ಕಣ್ಣಂಚನ್ನು ಒದ್ದೆ ಮಾಡುತ್ತವೆ..ಸುಂದರ..

    ReplyDelete