Tuesday, 15 November 2011

ವಿಶ್ವ ಸಹನಾ ದಿನಾಚರಣೆ - World tolerance Day.


ವಿಶ್ವ ತಾಳುವಿಕೆಯ ದಿನಾಚರಣೆಯಂತೆ ಇಂದು. (World tolerance day). ಹ್ಹ ಹ್ಹ, ಇದನ್ನು ಆಚರಣೆ  ಅಂತ ಪ್ರಾರಂಭ ಮಾಡಿದವನಿಗೆ ತಾಳ್ಮೆಯಿರಬೇಕು.
ತಾಳು ಅನ್ನೋದಕ್ಕೆ ಏನೆಲ್ಲಾ ಅರ್ಥ ಇದೆ. ಹೊರು , ಸೈರಿಸು, ಸಹನೆ ಎಂದೆಲ್ಲಾ ಅರ್ಥೈಸಿಕೊಳ್ಳಬಹುದು. ತಾಳಿಕೊಳ್ಳುವುದು (ತಾಳಿ ಅಂದರೆ ಮಂಗಳಸೂತ್ರ ಅಲ್ಲ!) ಅಷ್ಟು ಸುಲಭವೇ? ಭೂಮಿ ನಮ್ಮನ್ನೆಲ್ಲಾ ತಾಳಿಕೊಂಡಿದ್ದಾಳೆ ಎಂದು ಭೂಮಿಯ ಬಗ್ಗೆ ಅಭಿಮಾನ ಹೊಂದಿದ್ದೇವೆ. ಸಮಾಜವೂ ನಮ್ಮನ್ನ ತಾಳಿಕೊಂಡಿದೆ. ಈಗ ಮುಖ್ಯ ವಿಷಯಕ್ಕೆ ಬರೋಣ. ಆಚರಣೆಯ ಉದ್ದೇಶ ಏನು ?

ಈ ಆಚರಣೆ ಶುರುವಾಗಿದ್ದು ೧೯೯೫ರಲ್ಲಿ. ಮುಖ್ಯವಾಗಿ ಸಹನೆ ಎನ್ನುವ ವಸ್ತು ಚರ್ಚಿತವಾಗಿದ್ದು ಹಿಂಸೆ ಎನ್ನುವುದಕ್ಕೆ ವಿರೋಧವಾಗಿ. ಸಹನೆ ಇದ್ದರೆ ಹಿಂಸೆ ಇಲ್ಲ ಎನ್ನುವ ವಿಚಾರದಿಂದ ಈ ಸಹನೆಗೂ ಒಂದು ದಿನ ಪ್ರಾರಂಭವಾಯಿತು. ಯುನೆಸ್ಕೋದ ಪ್ರೇರಣೆಯಿಂದ ಅಮೇರಿಕಾದಲ್ಲಿ ಈ ಆಚರಣೆಗೆ ಅಡಿಗಲ್ಲು.

ಬೇರೆ ಬೇರೆ ಸಂಸ್ಕೃತಿಗಳನ್ನು ಆಚರಣೆಗಳನ್ನು ಒಪ್ಪುವುದು ಅಥವಾ ಅದರ ಪಾಡಿಗೆ ಅದನ್ನ ಬಿಡುವುದು (ಒಪ್ಪಲಾಗದಿದ್ದಲ್ಲಿ) ತುಂಬಾ ಮುಖ್ಯ. ಬೇರೆ ಬೇರೆ ಜಾತಿಗಳು, ಆಚರಣೆಗಳು, ಪದ್ಧತಿಗಳು ಎಲ್ಲವನ್ನೂ ಟೀಕಿಸುವ ಗುಣ ಇರುವ ನಮ್ಮ ಮಧ್ಯೆ ಇಂತಹ ಆಚರಣೆಗೊಂದು ಪ್ರಾಮುಖ್ಯತೆ ಕೊಡಲೇಬೇಕು. ಆಚರಣೆ ದಿನಕ್ಕೆ ಮಾತ್ರ ಸೀಮಿತವಾಗದೇ ಸಹನಾಗುಣವನ್ನು ಬೆಳೆಸಿಕೊಂಡಲ್ಲಿ ತುಂಬಾ ಸಂಘರ್ಷಗಳನ್ನ ತಪ್ಪಿಸಬಹುದು.

ತಲ್ಲಣಸಿದಿರು ಕಂಡ್ಯ ತಾಳು ಮನವೆ , ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ ,ತಾಳುವಿಕೆಗಿಂತ ಅನ್ಯ ತಪವು ಇಲ್ಲ. ಎನ್ನುವುದು ದಾಸವಾಣಿ. ಇಲ್ಲಿಯೂ ತಾಳುವಿಕೆ ಪ್ರಧಾನ.

ತ್ರಿಶಂಕುವಿನ ಕಥೆ ಗೊತ್ತೇ? ೯೯ ಯಾಗಗಳನ್ನು ಮಾಡಿದ ಆತ ಸಶರೀರನಾಗಿ ಸ್ವರ್ಗವನ್ನು ಸೇರುವ ಮಹತ್ವಾಕಾಂಕ್ಷೆ ಹೊಂದಿದ್ದ. ೧೦೦ನೇ ಯಾಗವನ್ನು ನಡೆಸಲು ವಶಿಷ್ಠರನ್ನು ಕಾಣಲು ಹೋದಾಗ ವಶಿಷ್ಠರಿರಲಿಲ್ಲ ಅಲ್ಲಿ. ವಶಿಷ್ಠರಂತೆಯೇ ಸಮರ್ಥರಾದ ವಶಿಷ್ಠರ ಮಕ್ಕಳು (ವಾಶಿಷ್ಠರು) ಇವನ ಯಾಗದ ಆಸೆಗೆ "ನಿನಗೆ ಯೋಗವಿಲ್ಲ " ಎಂದರು. ಕುಪಿತಗೊಂಡ ತ್ರಿಶಂಕು ಅವರನ್ನ ಹೀಯಾಳಿಸಿದ. ಕಡೆಗೆ ಚಾಂಡಾಲತ್ವದ ಶಾಪವನ್ನು ಪಡೆದ. ಮುಂದೆ ವಿಶ್ವಾಮಿತ್ರರ ಸಹಾಯದಿಂದ ವಿಚಿತ್ರಸ್ವರ್ಗವನ್ನೇನೋ ಪಡೆದ. ಒಂದುವೇಳೆ ಸಹನೆಯಿಂದ ಇರುತ್ತಿದ್ದರೆ ತ್ರಿಶಂಕು ?

ಪುರಾಣದಲ್ಲಿ, ವಾಸ್ತವದಲ್ಲಿ ಇಂತಹಾ ಎಷ್ಟೋ ಉದಾಹರಣೆಗಳನ್ನು ಕೊಡಬಹುದು. ಯಾರೋ ಹೇಳಿ, ಏನೋ ಓದಿ ಸಹನೆ ಬರುವಂತದ್ದಲ್ಲ. ಅವರವರ ಚಿಂತನೆಯಿಂದಲೇ ಬರಬೇಕು ಅಲ್ಲವೇ.. ಏನಂತೀರಿ.

ಇಷ್ಟನ್ನು ಓದಿದ ನಿಮ್ಮ ಸಹನೆಯನ್ನು ಇನ್ನು ಪರೀಕ್ಷಿಸುವುದಿಲ್ಲ.. :) :) ಶುಭಾಶಯಗಳು..

Sunday, 13 November 2011

ಮಕ್ಕಳ ದಿನಾ+ಆಚರಣೆ !!

ಮೊದಲು ಮಕ್ಕಳಿಗೆ ಶುಭಾಶಯಗಳು.. ಮತ್ತೆ ದೊಡ್ಡವರಿಗೆ ಶುಭಾಶಯಗಳು.

ಮತ್ತೆ ಮಕ್ಕಳ ದಿನಾಚರಣೆ ಅಂತ ಬೇಕೇ.. ಮಕ್ಕಳಿಗೆ ದಿನಾ ಆಚರಣೆ. ಎಲ್ಲೆಂದರಲ್ಲಿ ಹಾಡುವ, ಓಡುವ, ಜಗಳವಾಡುವ, ಪ್ರೀತಿಸುವ, ಒಂದಾಗುವ, ಕಲಿಯುವ , ಬೆರೆಯುವ ಆಸಕ್ತಿ ಮತ್ತು ಸಮಯ ಸಹಾಯ ಮಕ್ಕಳಿಗಲ್ಲದೆ ಬೇರೆಯವರಿಗುಂಟೇ?

ಚಾಚಾ ನೆಹರು ಹುಟ್ಟಿದ ದಿನವನ್ನು ಮಕ್ಕಳ ದಿನ ಆಚರಿಸೋದು ಹೌದು. ಆದರೆ ನಮ್ಮ ಕನ್ನಡ ಮಕ್ಕಳು ಯಾವತ್ತೂ ನೆನಪಿಸಿಕೊಳ್ಳಬೇಕಾದ ಇಬ್ಬರು ಸಾಹಿತಿಗಳು ರಾಜರತ್ನಂ ಮತ್ತೆ ದಿನಕರ ದೇಸಾಯಿ.

ಕುಟುಕುವ ಚುಟುಕಗಳಿಂದ ಹೆಸರುವಾಸಿಯಾದ ದಿನಕರ ದೇಸಾಯಿಯವರ ಘಂಟೆಯ ನೆಂಟನೆ ಓ ಗಡಿಯಾರ ಹಾಡನ್ನು ಕೇಳದ ಮಕ್ಕಳಿರಲಿಲ್ಲ.. ಈಗ ಯೆಲ್ಲೋ ಯೆಲ್ಲೋ ಡರ್ಟಿ ಫೆಲ್ಲೋ ಎಂದೊದರಿದರೂ ಮೊದಲು ನಮಗೆ ತುಂಬಾ ಆಪ್ಯಾಯಮಾನವಾಗಿದ್ದ ಹಾಡು. ಇದೊಂದೇ ಅಲ್ಲದೆ ತುಂಬಾ ಮಕ್ಕಳ ಸಾಹಿತ್ಯವನ್ನು ಬರೆದಿದ್ದಾರೆ. ಮಕ್ಕಳ ಗೀತೆಗಳು , ಶಿಶುಕವನ ಸಂಕಲನಗಳನ್ನು ಮಕ್ಕಳಿಗೋಸ್ಕರ ಪ್ರಕಟಿಸಿದ್ದಾರೆ.
ಮಕ್ಕಳು ಕೊಳ್ಳಲು ಸಾಧ್ಯವಿಲ್ಲವಾದ್ದರಿಂದ ಅಪ್ಪ ಅಮ್ಮ ಕೊಂಡು ಮಕ್ಕಳಿಗೆ ಕೊಡಿಸಬೇಕು ಅಷ್ಟೇ..

ಕುಡುಕ ರತ್ನನಿಂದಾಗಿ ಹೆಸರುವಾಸಿಯಾದ ಇನ್ನೊಬ್ಬ ಕವಿ ರಾಜರತ್ನಂ. ರತ್ನನ ಪದಗಳು, ನಾಗನ ಪದಗಳು ಮಕ್ಕಳಿಗಲ್ಲ ಬಿಡಿ, ದೊಡ್ಡವರಿಗೂ ಒಂದೇ ಬಾರಿ ಓದಬೇಕಾದಲ್ಲಿ ಒಮ್ಮೆ ಬಾರಿಗೆ ಹೋಗಿ ಬರಬೇಕು.
ಆದರೆ ಬಣ್ಣದ ತಗಡಿನ ತುತ್ತೂರಿ, ನಮ್ಮ ಮನೆಯಲೊಂದು ಪುಟ್ಟ ಪಾಪು ಇರುವುದು.. ಇಂತಹ ಹಾಡುಗಳನ್ನೆಲ್ಲ ಎಷ್ಟು ಬಾರಿ ಆನಂದದಿಂದ ಮಕ್ಕಳು ಹಾಡುವುದನ್ನ ನೋಡಿದ್ದೇವೆ!. ತುತ್ತೂರಿ, ಕಂದನ ಕಾವ್ಯ ಎನ್ನುವಂತಹದ್ದನ್ನ ಮಕ್ಕಳಿಗಾಗಿ ಕೊಟ್ಟ ಕವಿ.

ಇವರಿಬ್ಬರನ್ನು ಮಕ್ಕಳ ದಿನಾಚರಣೆ ಪ್ರಯುಕ್ತ ನೆನಪು ಮಾಡಿಕೊಂಡಿದ್ದೇನೆ. ನಾನೂ ಮಗುವೇ ಆದ್ದರಿಂದ. .. ಮಕ್ಕಳಿಗೊಂದು ಕವಿಗಳಿಗೆರಡು ಜೈ ಹೋ...

ಮತ್ತೆ ಮಕ್ಕಳಿಗೆ ಒಂದು ಹಾಡು..

ಚಿಕ್ಕ ಚಿಕ್ಕ ಮಕ್ಕಳೆಲ್ಲ ಬನ್ನಿರೀ ಬದಿ
ಚೊಕ್ಕವಾದ ಆಟಗಳನು ಆಡಿ ಚಂದದಿ

ದೊಡ್ಡ ದೊಡ್ಡ ಚೆಂಡು ದಾಂಡು ಕೈಯ್ಯಲೇತಕೆ
ಗುಡ್ಡ ಬೆಟ್ಟ ಹತ್ತಿ ಇಳಿವ ಯಾಕೆ ನಾಚಿಕೆ ?

ಎದ್ದು ಬಿದ್ದು ನಗುವ ಸದ್ದು ಮಾಡಿರೆಲ್ಲರೂ
ಹದ್ದು ಕಾಗೆ ಗುಬ್ಬಿ ಮೊಲವ ನೋಡಿರೆಲ್ಲರೂ

ಹರಿವ ನೀರು ಬೆಳೆವ ಪೈರು ನಮ್ಮ ನಾಡಿಗೆ
ಬಿರಿವ ಮನಸು ನಮ್ಮದೆನುತ ಮರಳಿ ಗೂಡಿಗೆ.

ಶುಭಾಶಯಗಳು..

Monday, 7 November 2011

ಗೋಪ ಗೃಹಿಣೀ ನ್ಯಾಯ


ಹತ್ಪಾ ನೃಪಂ ಪತಿಮವಾಪ್ಯ ಭುಜಂಗದಷ್ಟಂ
ದೇಶಾಂತರೇ ವಿಧಿವಷಾತ್ ಗಣಿಕಾಸ್ಮಿ ಜಾತಾ
ಪುತ್ರಂ ಸ್ವಕಂ ಸಮಧಿಗಮ್ಯ ಚಿತಾಂ ಪ್ರವಿಷ್ಟಾ
ಶೋಚಾಮಿ ಗೋಪಗೃಹಿಣೀ ಕಥಮದ್ಯ ತಕ್ರಂ

ಅವಳು ರಾಜನ ಮಡದಿಯಾಗಿ ಸುಖವಾಗಿದ್ದಳು.  ಆದರೂ ಅವಳು ಬೇರೆ ಒಬ್ಬ ಗೆಳೆಯನಲ್ಲಿ ಮನಸ್ಸನ್ನು ಹೊಂದಿದ್ದಳು . ರಾಜನಿಗೆ ವಿಷವನ್ನಿಕ್ಕಿ ಗೆಳೆಯನ ಜೊತೆ ಓಡಿ ಹೋದಳು. ಗೆಳೆಯ ಹಾವಿನ ಕಡಿತಕ್ಕೊಳಗಾಗಿ ಮೃತನಾದನು. ಬೇರೆ ಗತಿಯಿಲ್ಲದೆ ಹೆಂಗಸು ವೇಶ್ಯಾವೃತ್ತಿಯನ್ನ ಕೈಗೊಂಡಳು.

ಈಡಿಪಸ್ಸಿನಂತೆ , ತಾನೇ ಹಡೆದ ಮಗ ಅಕಸ್ಮತ್ತಾಗಿ ಅವಳನ್ನು ಕೂಡಿದನು.ಅನಂತರ ತಾಯಿ ಮಕ್ಕಳೆಂದು ಅರಿತೊಡನೆ , ಪ್ರಾಯಶ್ಚಿತ್ತಾಕ್ಕಾಗಿ ಚಿತೆಯಲ್ಲಿ ಮಲಗಿ ಬೆಂಕಿ ಹಚ್ಚಿಕೊಂಡರು.
ರಾಜಪುತ್ರ ಸುಟ್ಟುಹೋದ, ಇವಳೋ ಅಲ್ಲಿಂದಲೂ ಓಡಿದಳು. ಸುಟ್ಟ ಗಾಯಗಳಿಂದ ನೊಂದ ಇವಳನ್ನು ಒಬ್ಬ ಗೊಲ್ಲ
ಉಪಚರಿಸಿದನು. ಅವನನ್ನೇ ಇವಳು ಮದುವೆಯಾದಳು.

ಕೆಲಸದಂತೆ ಮಜ್ಜಿಗೆ ಮಾರಲು ಪೇಟೆಗೆ ಒಯ್ಯುತ್ತಿರುವಾಗ , ಮಡಿಕೆ ಉರುಳಿಬಿದ್ದು ಮಜ್ಜಿಗೆ ಭೂಮಿ ಪಾಲಾಯಿತು.

ತನ್ನ ಕೆಟ್ಟನಡವಳಿಕೆಗಳಿಂದ ಮಜ್ಜಿಗೆ ಹಾಳಾಯಿತು ಎಂದು ಎಂದು ಅವಳು ಪಶ್ಚಾತ್ತಾಪ ಪಟ್ಟಳಂತೆ.
ಇದನ್ನು "ನ್ಯಾಯ"ದಲ್ಲಿ ಗೋಪ ಗೃಹಿಣೀ ನ್ಯಾಯ ಎನ್ನುತ್ತಾರೆ. ಅಧ್ಬುತ ಕಥೆ ಅಲ್ಲವೇ ?

Tuesday, 25 October 2011

ದೀಪಾವಳಿಯ ಮಾತು ಕಥೆ.


ಮಾತು ಮುಖ್ಯ ಯಾಕೆ ಗೊತ್ತೇ? ಮಾತೇ ಮುತ್ತು.. ಮಾತು ಮನೆ ಕೆಡಿಸಿತು ..

ಭಾರತಾಂಬೆ ನಮ್ಮ "ಮಾತೆ " ನಿನ್ನ ಜೀವಕಿಂತ ಮೇಲು ಹೇಳುವವರೂ ಇದ್ದಾರಲ್ಲಾ.. .. ವಾಗ್ಭೂಷಣಂ ಭೂಷಣಂ.. ಮಾತು ಚೆನ್ನಾಗಿರಲಿ.. ಇಷ್ಟವಾಗಲಿ ..

ಕೇಯೂರಾಣಿ ನ ಭೂಷಯಂತಿ ಪುರುಷಂ ಹಾರಾ ನ ಚಂದ್ರೋಜ್ವಲಾ
ನ ಸ್ನಾನಂ ನ ವಿಲೇಪನಂ ನ ಕುಸುಮಂ ನಾಲಂಕೃತಾ ಮೂರ್ಧಜಾಃ
ವಾಣ್ಯೇಕ್ಯಾ ಸಮಲಂಕರೋತಿ ಪುರುಷಂ ಯಾ ಸಂಸ್ಕೃತಾಧಾರ್ಯತೇ
ಕ್ಷೀಯಂತೇ ಖಲು ಭೂಷಣಾನಿ ಸತತಂ ವಾಗ್ಭೂಷಣಂ ಭೂಷಣಮ್ ... ..

ಮಾತು ಮಾತು ಮಥಿಸಿ ಬಂದ ನಾದದ ನವನೀತ..

ವಾದೇ ವಾದೇ ಜಾಯತೇ ತತ್ವಭೋಧಃ.. ಮಾತು ಅನುಭವಕ್ಕೆ, ವಾದಕ್ಕೆ (ವಾದದಲ್ಲಿ ವಿಧಗಳಿವೆ) ಮತ್ತೆ ಸ್ವಾಧ್ಯಾಯಕ್ಕೆ ಉಪಯೋಗ ಆಗಬೇಕು...

ವಾದಲ್ಲಿ ಮೂರು ವಿಧ ಇದೆ.
೧. ವಾದ - ಈ ಚರ್ಚೆಯ ಉದ್ದೇಶ ಸೋಲು ಗೆಲುವಿಂದ ಮುಖ್ಯವಾಗಿ ಸತ್ಯದ ಆವಿಷ್ಕಾರ.
೨. ಜಲ್ಪ- ಇದರಲ್ಲಿ ಗೆಲುವೇ ಪ್ರಧಾನ. ಪ್ರತಿಪಾದಿಸಿದ ವಿಷಯ ಸುಳ್ಳಾದರೂ ಸರಿ.
೩. ವಿತಂಡ - ಇದು ಪ್ರಧಾನ ವಾದದ ವಿಷಯ ಬಿಟ್ಟು ಬೇರೆ ವಿಷಯದ ಬಗ್ಗೆ ಚರ್ಚೆ ಮಾಡುವುದು... ..

ವಾದ ಒಳ್ಳೆದಿರಲಿ, ಸತ್ಯವಾಗಿರಲಿ .. ...

ಮಾತಾಡದಿದ್ದರೂ ಸಮಸ್ಯೆಯೇ ಮಾರಾಯರೆ, ಹಿಂದೆ ದಕ್ಷಯಾಗದ ಸಮಯಲ್ಲಿ ಶಿವ ಮಾತಾಡದ್ದಕ್ಕೆ,

ಸರಸಿಜಾಸನನೆಂದ ನುಡಿಗೆ ನಾ ಮರುಳಾಗಿ
ತರಳೆಯನು ಕೊಟ್ಟೆ ನಿರರ್ಥ
ಪರಿಕಿಸಲು ಕೋಡಗನ ಕೈಯ್ಯ ಮಾಲೆಯ
ತೆರನಾದುದಕಟೆನ್ನ ಬದುಕು.

ಹೇಳಿ ದಕ್ಷ ಯಾಗ ಮಾಡಿಸಿ, ಕೊನೆಗೆ ವೀರಭಧ್ರನಿಂದ ಹತನಾಗುವ ಹಾಗಾಯಿತನ್ನೆ...ಇಷ್ಟಕ್ಕೂ ಕಾರಣ ಶಿವ ಮಾತನಾಡದಿದ್ದುದೇ ಅಲ್ವಾ ?

ನುಡಿದರೆ ಮುತ್ತಿನ ಹಾರದಂತಿರಬೇಕು
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು
ನುಡಿದರೆ ಸ್ಫಟಿಕದ ಸಲಾಕೆಯಂತಿರಬೇಕು
ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು
ನುಡಿಯೊಳಗಾನು ನೆಡೆಯದಿದ್ದರೆ ಮೆಚ್ಚ ನಮ್ಮ ಕೂಡಲಸಂಗಮದೇವ

ಇದು ಬಸವಣ್ಣನ ವಚನ.. ಮಾತು ಎಷ್ಟು ಇಂಪಾರ್ಟೆಂಟು ಅಲ್ವಾ.. ಜಸ್ಟ್ ಮಾತ್ ಮಾತಲ್ಲಿ

ಮತ್ತೆ ಮಾತು ! ಮಾತುಗಳಲ್ಲಿ ಎಷ್ಟು ವಿಧ ನೋಡಿ ! ಬಿರುಮಾತು, ಪಿಸುಮಾತು, ಗಾಳಿಮಾತು ... ಬಿರುಬಿಸಿಲಿನಲ್ಲಿಯೂ ನಲ್ಲೆಯ ಪಿಸುಮಾತು ತಂಗಾಳಿಯಾದೀತು !! ಮತ್ತೆ ಇನ್ನೊಂದಿದೆ ಮಾತು ಕೊಡುವುದು..ಮಾತು ಕೊಟ್ಟು ಸಿಕ್ಕಿಬೀಳುವುದಿದೆ, ಸಿಕ್ಕಿಬಿದ್ದಮೇಲೆ ಮಾತುಕೊಡುವುದೂ ಇದೆ..

ಮಾತಿನಿಂ ನಗೆ ನುಡಿಯು ಮಾತಿನಿಂ ಹಗೆಹೊಲೆಯು
ಮಾತಿನಿಂ ಸರ್ವಸಂಪದವು ಜಗಕೆ
ಮಾತೆ ಮಾಣಿಕವು ಸರ್ವಜ್ಞ ... ಅಂತ ಸರ್ವಜ್ಞನೂ ಒಂದು ಮಾತು ಹೇಳಿದ್ದಾನೆ .

ಚನ್ನವೀರ ಕಣವಿ ಅನ್ನುವ ಅಮೋಘ ಸಾಹಿತಿ ಕನ್ನಡಕ್ಕೆ ಒಳ್ಳೆ ಕೊಡುಗೆ ನೀಡಿದ್ದಾರೆ... ಸಾಹಿತ್ಯಲೋಕದಲ್ಲಿ ಅವರದ್ದೇ ಆದ ವಿಶೇಷ ಸ್ಥಾನ ಇರುವ ಕವಿ ಅವರು ..ಅವರ ಒಂದು ಕವನದ ಸಾಲು ಹೀಗಿದೆ ...

ನಾವು ಆಡುವ ಮಾತು ಹೀಗಿರಲಿ ಗೆಳೆಯ
ಮೃದುವಚನ ಮೂಲೋಕ ಗೆಲ್ಲುವುದು ತಿಳಿಯ
ಮೌನ ಮೊಗ್ಗೆಯನೊಡೆದು ಮಾತರಳಿ ಬರಲಿ
ಮೂರು ಗಳಿಗೆಯ ಬಾಳು ಮಗಮಗಿಸುತಿರಲಿ.... ಹೇಗಿದೆ ಮಾತು ?

 ಚಾಣಕ್ಯನ ಬಗ್ಗೆ ಕೇಳದವರ್ಯಾರು ? ತನ್ನ ನೀತಿಯ ಭೋಧೆಗಳಿಂದಲೇ ಹೆಸರುವಾಸಿ. ಅವನೂ ಮಾತಿನ ಬಗ್ಗೆ ಮಾತಿನ ನೀತಿ ಹೇಳಿದ್ದಾನೆ .. ಇಂತಿದೆ ಅದು..
ಪ್ರಿಯ ವಾಕ್ಯ ಪ್ರದಾನೇನ ಸರ್ವೇ ಪಷ್ಯಂತಿ ಜಂತವಃ ತಸ್ಮಾತ್ ತದೇವ ವಕ್ತವ್ಯಂ ವಚನೇ ಕಾ ದರಿದ್ರತಾ . (ಪ್ರಿಯವಾಕ್ಯಗಳನ್ನು ಮಾತನಾಡುವುದರಿಂದ ಎಲ್ಲರೂ ಚೆನ್ನಾಗಿರುತ್ತಾರೆ, ಆದ್ದರಿಂದ ಅದನ್ನೇ ಮಾತಾಡು , ಶಬ್ಧಗಳಿಗೆ ದಾರಿದ್ರ್ಯವಿದೆಯೇ?

ಎಲ್ಲರಿಗೂ ದೀಪಾವಳಿಯ ಶುಭಾಶಯ.. ಹೋಗಿ ಹೋಗಿ ಇಲ್ಲಿ ಶುಭಾಶಯ ಹೇಳ್ತೀರಲ್ಲಾ ಅಂತ ಸಿಟ್ಟು ಮಾಡ್ಕೋಬೇಡಿ.. ಒಂದು ವಿಷಯ ಹೇಳ್ತೀನಿ.. ಜಾಸ್ತಿ ಮಾತಾಡುವವರಿಗೆ , ಬಡಾಯಿ ಕೊಚ್ಚುವವರಿಗೆ "ಪಟಾಕಿ " ಅಂತಲೂ ಅನ್ವರ್ಥ ನಾಮ ಇದೆ . ಈ ದೀಪಾವಳಿಯನ್ನು ಮನಸ್ಸುತುಂಬಿ ಬಾಯಿ ಪಟಾಕಿಯಿಂದ ಆಚರಿಸಿ.. ..ಮತ್ತೊಮ್ಮೆ ಶುಭಾಶಯಗಳು ..

Tuesday, 27 September 2011

ಒಂದು ಪ್ರಮೇಯದ ಕಥೆ - ತಪ್ಪಾಗಿ ಓದದಿರಿ ಪ್ರೇಮಕಥೆಯೆಂದು !


ಪ್ರಮೇಯ : ಮೂರು ಮತ್ತೆ ಒಂದರ ಬೆಲೆ ಸಮವಾಗಿದೆ.
ಸಾಧನೆ :- ಇವತ್ತು ಬಸ್ಸಲ್ಲಿ ತುಂಬಾ ರಶ್ಶು ! ನನಗೆ ಸೀಟು ಸಿಕ್ಕಿತ್ತು. ಪಕ್ಕದಲ್ಲಿ ಕೂತವನೊಬ್ಬ ಅಲ್ಲೆ ಹತ್ತಿರದ ನಿಲ್ದಾಣದಲ್ಲಿಳಿಯಬೇಕಿತ್ತು. ಐದು ರೂಪಾಯಿ ಕೊಟ್ಟ ನಿರ್ವಾಹಕನಿಗೆ. ನಾಲ್ಕು ರೂಪಾಯಿ ಟಿಕೇಟ್ ಆದ್ದರಿಂದ ಇಬ್ಬರೂ ಲಾಭ ಮಾಡಿಕೊಂಡರು. ನಿರ್ವಾಹಕ ಟಿಕೇಟ್ ಕೊಡದೆ ಎರಡು ರೂಪಾಯಿ ವಾಪಸ್ಸು ಮಾಡಿದ.
ನಿರ್ವಾಹಕನಿಗೆ ಟಿಕೇಟ್ ಕೊಡದೆ ಆದ ಲಾಭ = ೩ ರೂಪಾಯಿ !
ಪ್ರಯಾಣಿಕನಿಗೆ ಆದ ಲಾಭ = ೧ ರೂಪಾಯಿ.

ನಿಲ್ದಾಣದಲ್ಲಿ ಇಳಿಯುವ ಮೊದಲೇ ಬಂದ ಪರೀಕ್ಷಕರು ತಪಾಸಣೆ ಮಾಡಿದರು.
ಟಿಕೇಟ್ ಕೊಡದ ನಿರ್ವಾಹಕನಿಗೆ ಹಾಕಿದ ದಂಡ = ೫೦೦ ರೂಪಾಯಿ
ಪ್ರಯಾಣಿಕನಿಗೆ ಹಾಕಿದ ದಂಡ = ೫೦೦ ರೂಪಾಯಿ.

ಆದ್ದರಿಂದ ಮೂರು ಮತ್ತು ಒಂದರ ಬೆಲೆ ಸಮವಾಗಿರುತ್ತದೆ .

Sunday, 25 September 2011

ತರಕಾರಿಯಮ್ಮ !!


ತುಂಬಾ ದುಸ್ತರವಾದ ಬದುಕಾಗಿತ್ತು ಅವರದ್ದು. ತಾಯಿ ಬೀದಿಬೀದಿಯಲ್ಲಿ ತರಕಾರಿ ಮಾರಿ ಹೇಗೋ ಮಗನನ್ನು ಏಳನೇ ಓದಿಸಿದ್ದಳು. ಮುಂದೆ ಮಗನೂ ತರಕಾರಿ ಮಾರತೊಡಗಿದ.
ತಾನು ತರಕಾರಿ ಮಾರುವ ಬೀದಿಯಲ್ಲೇ ಒಂದು ಅಂಗಡಿ ನೋಡಿ ಬಟ್ಟೆಬರೆ ವ್ಯಾಪಾರ ತೊಡಗಿಸಿದ ಮಗ. ಅಂಗಡಿ ಮುಂದೆ ತರಕಾರಿ ಮಾರತೊಡಗಿದಳು ತಾಯಿ.

ದೇಶ ಬೆಳೆದ ಮೇಲೆ ವೇಷ ಬದಲದಿರುವುದೇ?. ಅಂಗಡಿಗೆ ಜೀನ್ಸು, ಸ್ಕರ್ಟು ಬರತೊಡಗಿತು. ಮಗ ಕೂಲಿಂಗ್ ಗ್ಲಾಸ್ ಧರಿಸಿ ಗಲ್ಲದ ಮೇಲೆ ಕೂರತೊಡಗಿದ.
ಸಮಸ್ಯೆ ಎಂದರೆ ಅಂಗಡಿ ಮುಂದೆ ತರಕಾರಿ ಮಾಡುವ 'ಹೆಂಗಸ'ನ್ನು ಕಂಡರಾಗುವುದಿಲ್ಲ. ವ್ಯಾಪಾರಕ್ಕೆ ನಷ್ಟವಂತೆ !

Thursday, 15 September 2011

ಚಂದಿರನ ನಗು !


ನಿನ್ನೆ ರಾತ್ರಿ ಆಗಸದಲ್ಲಿ ಚಂದ್ರ ಜೋರಾಗಿ ನಗುತ್ತಿದ್ದ. ಕಾರಣ ಕೇಳಿದೆ. ಅವನ ಕಥೆ ಚೆನ್ನಾಗಿತ್ತು , ನಿಮಗೆ ಹೇಳಬೇಡವೇ ?
"ನಿನ್ನೆ ಆ ಬಡಾವಣೆಯ ಎರಡನೇ ಮನೆ ಇದೆಯಲ್ಲ, ಅಲ್ಲಿ ಒಂದು ಪುಟ್ಟ ಪಾಪುವಿದೆ. ನಿನ್ನೆ ಊಟವನ್ನೇ ಮಾಡದ್ದಕ್ಕೆ ಆ ಪಾಪುವಿನ ಅಮ್ಮ ಟೇರೆಸ್ ಮೇಲಿಂದ ನನ್ನನ್ನು ತೋರಿಸಿ ತಿನ್ನಿಸುವ ಪ್ರಯತ್ನ ಮಾಡುತ್ತಿದ್ದಳು. ಆದರೂ ಪಾಪು ತಿನ್ನಲೇ ಇಲ್ಲ. ನೀನು ತಿನ್ನದಿದ್ದರೆ ಚಂದಮಾಮಂಗೆ ಊಟ ಕೊಡುತ್ತೇನೆ ಅಂದರೂ ಆ ಪಾಪು ಊಟವನ್ನೊಪ್ಪಲೇ ಇಲ್ಲ. "
ಅದಕ್ಯಾಕೆ ನಗು ಚಂದಿರಾ ?
ಅಲ್ಲ, ಮಗುವಿಗೆ ಆಶೆ ಬರಿಸಲು ಅಮ್ಮ ಆ ಊಟವನ್ನು ಒಂದೊಂದೇ ಮುದ್ದೆ ಕಟ್ಟಿ ನನ್ನೆಡೆಗೆ ಎಸೆದಳು. ನನಗೋ ತಿನ್ನಲಾಗುವುದಿಲ್ಲ, ಬಿಡು ನನ್ನ ವರೆಗೆ ತಲುಪುವುದೇ ಇಲ್ಲ !
ನನಗೆ ಇನ್ನೂ ಆಶ್ಚರ್ಯ, ನಗುವುದ್ಯಾಕೆ ಹೇಳು ಚಂದಿರಾ ?
ಆ ಅನ್ನದ ಉಂಡೆಗಳು ಎಸೆದಿದ್ದು ನನಗಾದರೂ ಬಿದ್ದಿದ್ದು ಕೆಳಗಿನ ಗುಡಿಸಿಲಿಗೆ, ಅಲ್ಲಿಯೂ ಒಂದು ಸಣ್ಣ ಪಾಪು ಇತ್ತು. ಅಮ್ಮ ಊಟ ಕೊಡದ್ದಕ್ಕೆ ಚಂದಮಾಮ ಊಟ ಕೊಟ್ಟ ಎಂದೇ ನನ್ನನ್ನು ನೋಡಿ, ಹೆಕ್ಕಿ ಹೆಕ್ಕಿ ತಿಂದ ಮಗುವಿನ ನಗು ನನ್ನಲ್ಲಿ !!!

೧೫-೦೯-೨೦೧೧