Sunday 18 August 2013

ಕತೆಯಾದವಳು

ರೇಣುಕ ಎಂದಿನಂತೆ ಇಂದೂ ಕೂಡ ತನ್ನ ನಿತ್ಯಕಾಯಕವೆಂಬಂತೆ ಅರೆ ಆವಳಿಕೆಯ ಜೊತೆಗೇ ಬಂದಳು. ಬಂದವಳೇ ಮನೆಯ ಎದುರಿನ ಕಾರ್ಪೆಟ್ಟನ್ನು ಮುಟ್ಟಿ ನಮಸ್ಕರಿಸುವ ರೀತಿ ಎರಡೂ ಕೈಗಳಿಂದ ಎತ್ತಿ ಹೊರಗೆ ಎಸೆದು, ಕಾಲಿಂಗ್ ಬೆಲ್ಲಿಗೊಮ್ಮೆ ಕುಟುಕಿದಳು. ಬಾಗಿಲನ್ನು ತೆರೆದವಳು ರೂಪ. ಎಂದಿನಂತೆ ತಾನು ಈಗ ಹೊರಡುತ್ತೇನೆ, ನೀನು ಬರೋದು ಇಷ್ಟು ತಡವಾದರೆ ಹೇಗೆ ರೇಣುಕಾ? ಇವತ್ತೂ ಮೀಟಿಂಗ್ ಇದೆ. ಇನ್ನು ಅರ್ಧ ಘಂಟೆಯಲ್ಲಿ ನಾನು ಹೊರಡಬೇಕು.. ಎಂದೆಲ್ಲಾ ಗುಣುಗುಣಿಸಿ ತಾನು ಅದ್ಯಾವುದೋ ರೂಮ್ ಸೇರಿಕೊಂಡಳು.
ರೇಣುಕನ ಎಂದಿನ ಕೆಲಸ ಪ್ರಾರಂಭವಾಯಿತು. ಮೊದಲು ಅಡುಗೆಕೋಣೆ, ಪಾತ್ರೆಗಳಿಗೆ ಒಂದಿಷ್ಟು ನೀರೆರಚಿ, ಉಳಿದ ಕಸಗಳನ್ನೆಲ್ಲಾ ತುಂಬಿಸಿ, ಸ್ವಲ್ಪ ಓರಣ ಮಾಡಿ ಕಸ ಹೊಡೆದು, ಪಾತ್ರೆ ತೊಳೆದು, ಬಟ್ಟೆಯನ್ನು ಮೆಶೀನಿಗೆ ತುರುಕಿ ತನಗಾಗಿ ಕಾಯ್ದಿರಿಸಿದ ಟೋಮೇಟೋ ಬಾತನ್ನು ಸವಿದು ಸುಮ್ಮನೇ ಕುಳಿತಳು ರೇಣುಕ.ದೈನಂದಿನ ವರದಿಯಾಗುತ್ತದೆ ಇದೆಲ್ಲಾ ರೂಪಾ ಮತ್ತೆ ರೇಣುಕಳ ಮಧ್ಯೆ. ಅಂದಹಾಗೆ ಈ ಮನೆಯಲ್ಲಿ ಬಂದುಹೋಗುವ ಒಂದು ಜೀವ ರೇಣುಕನದು, ಬಂದು ಉಳಿಯುವ ಜೀವಗಳು ರೂಪಾ ಮತ್ತು ಜಯಂತನದು.
-೧-
ಸ್ವಂತ ಮನೆಯಲ್ಲವದು ರೇಣುಕನದು, ಸುಮಾರು ಮೂರು ವರ್ಷಗಳಿಂದ ರೂಪಾಳ ತಂದೆಯವರು ಕೊಡಿಸಿದ ಬಾಡಿಗೆ ಮನೆ. ಅಂದರೆ ಮದುವೆಯಾದ ಸಮಯದಲ್ಲಿ ರೇಣುಕ ಮತ್ತು ವೆಂಕಟೇಶ್ ಇಬ್ಬರೂ ಬಂದು ಕೇಳಿದ್ದಕ್ಕೆ ಆ ಮನೆಯನ್ನು ತಿಂಗಳಿನ ಬಾಡಿಗೆಗೆ ಗೊತ್ತು ಮಾಡಿದರು. ತಾವು ಮಗನ ಮನೆಗೆ ಹೊರಟು ಹೋದರು. ತದನಂತರ ಆ ಮನೆಯನ್ನು ತನ್ನ ಮಗಳಿಗೇ ಕೊಟ್ಟು ಜೊತೆಗೆ ಇನ್ನೊಂದು ಮನೆಯನ್ನೂ ಅಲ್ಲಿಯೇ ಕಟ್ಟಿಸಿ ಅದರಲ್ಲಿ ರೇಣುಕನಿಗೆ ವಾಸವಾಗಿರಲು ಹೇಳಿದರು. ಹೀಗೆ ರೂಪಾ ಮತ್ತೆ ಜಯಂತ್ ದಂಪತಿಗಳಿಗೆ ರೇಣುಕ ಮತ್ತು ವೆಂಕಟೇಶ್ ದಂಪತಿಗಳು ನೆರೆಮನೆಯವರಾಗಿದ್ದರು.  ಇದೆಲ್ಲಾ ಹೀಗೇ ಮುಂದುವರೆದರೆ ಕತೆಯಾಗುತ್ತಿರಲಿಲ್ಲ. ಕಾಲದ ಹೊಡೆತದಲ್ಲಿ ಇವತ್ತಿನ ಸ್ಥಿತಿಗೆ ತಲುಪುವುದಕ್ಕೆ ಅದೇನೋ ನಾಟಕಗಳು, ಭಾವಗಳೆಲ್ಲಾ ಹರಿದಾಡತೊಡಗಿತು,.
ರೇಣುಕ ಇದೇ ಊರಿನವಳಲ್ಲ. ವೆಂಕಟೇಶ್ ಮೊದಲು ಕಾರ್ ಡ್ರೈವರಾಗಿದ್ದವನು ಯಾವುದೋ ಕಾರಣಕ್ಕೆ ತಿಪಟೂರಿಗೆ ಬಂದಿದ್ದ. ಸುಮಾರು ೨ ತಿಂಗಳುಗಳ ಕಾಲ ತಿಪಟೂರಿನಲ್ಲೇ ತಾನು ಕೆಲಸ ಮಾಡಬೇಕಾಗಿತ್ತು. ಹೀಗೆ ಉಳಿದುಕೊಂಡಿದ್ದ ನೆರೆಮನೆಯ ಹುಡುಗಿ ೨೦-೨೧ರ ರೇಣುಕಳ ಜೊತೆ ಅನುರಾಗವಾಗಿ ಅವಳನ್ನು ಮದುವೆಯಾಗುತ್ತೇನೆಂದು ಕೇಳಿದ. ಜಾತಿಯ ಪಟ್ಟುಗಳಿಗೆ, ಪೆಟ್ಟುಗಳಿಗೆ ಇವರ ಪ್ರೇಮವೊಂದು ನಗಣ್ಯವೆನಿಸಿದ್ದಕ್ಕೇ ಒಂದು ರಾತ್ರಿ ಇಬ್ಬರೂ ಊರಿನಿಂದ ಹೊರಬಂದರು. ವೆಂಕಟೇಶ್ ತಾನು ಒಳ್ಳೆಯ ಡ್ರೈವರನೆಂದು ಹೆಸರು ಪಡೆದಿದ್ದ. ರೂಪಾಳ ತಂದೆ ಸುಮಾರು ವರ್ಷಗಳಿಂದ ತನ್ನ ಜೊತೆಯಿದ್ದ ವೆಂಕಟೇಶನನ್ನು ಬಲ್ಲವರಾದ್ದರಿಂದ ಅವನ ಸಂಸಾರಕ್ಕೆ ಮುಂದೆ ಹೇಳಿಕೊಳ್ಳುವ ನಷ್ಟವಾಗಲಿಲ್ಲ ಅತ್ತೆ ಮನೆಯೆಂಬ ಸಂಬಂಧ ಹೊರತುಪಡಿಸಿ.
ಎರಡು ವರ್ಷ ಸುಖದ ಸಂಸಾರ. ವೆಂಕಟೇಶ್ ಚೆನ್ನಾಗಿ ದುಡಿಯುತ್ತಿದ್ದ, ಹಿತಮಿತದ ಖರ್ಚು, ಯಾವ ನೋವನ್ನೂ ಕೊಡಲಿಲ್ಲ ರೇಣುಕನಿಗೆ. ಎರಡು ವರ್ಷ ಹೀಗೇ ಸಾಗಿತು. ಒಂದು ದಿನ ಮಾತ್ರ ರೇಣುಕನಿಗೆ ತುಂಬಾ ದುರ್ದಿನವಾಗಿ ಪರಿಣಮಿಸಿತು. ವೆಂಕಟೇಶ್ ಕಾರಿನ ಅಪಘಾತಕ್ಕೆ ಸಿಲುಕಿ ಒಂದೆರಡು ದಿನ ಜೀವನ್ಮರಣ ಹೋರಾಟ ನಡೆಸಿ ಕೊನೆಗೂ ರೇಣುಕನಿಗೆ ಸಿಗದ ಯಾವುದೋ ದೂರದ ಊರಿನ ಪ್ರಯಾಣಕ್ಕೆ ಸಿದ್ಧನಾಗಿ ಹೊರಟುಹೋಗಿದ್ದ. ಹಠಾತ್ ತಿರುವಿನಲ್ಲಿ ರೇಣುಕ ಒಬ್ಬಳೇ ಸಿಕ್ಕಿ ವಿಲಿವಿಲಿ ಒದ್ದಾಡಿ ಕೊನೆಗೂ ಸಾವಿನ ಆಟದ ಮುಂದೆ ಸೋತು ಏನು ಮಾಡುವುದೆಂದು ತಿಳಿಯದೇ ಹಾಗೇ ಇದ್ದಳು ಹಲವು ದಿನ.
ಇತ್ತ ಕಡೆ ರೂಪಾ ಮತ್ತು ಜಯಂತರದ್ದು ಅನ್ಯೋನ್ಯ ದಾಂಪತ್ಯ. ಸುಮಾರು ತಡವಾಗಿ ಮದುವೆಯಾಗಿದ್ದ ರೂಪಾ ಮತ್ತು ಜಯಂತ್ ತಾವು ವೃತ್ತಿಯಲ್ಲಿ ಔನ್ನತ್ಯಕ್ಕೇರಿದವರು. ಸುಮಾರು ಮೂವತ್ತೈದರ ಆಸುಪಾಸಿನ ರೂಪಾ ಮತ್ತು ಎರಡೋ ಮೂರೋ ವರ್ಷ ದೊಡ್ಡವನಾದ ಜಯಂತ್ ತಮ್ಮ ಓದಿಗೆ ಸಂಬಂಧಪಟ್ಟ ನೌಕರಿ ಹಿಡಿದು, ಮದುವೆಯಾಗುವುದಿಲ್ಲ ಎಂದುಕೊಳ್ಳುತ್ತಲೇ ಮದುವೆಯಾದವರು. ಮಾರ್ಕೆಟಿಂಗ್ ಹೆಡ್ ಎಂಬ ದೊಡ್ಡ ಐದಂಕೆಯ ಸಂಬಳದ ಜಯಂತ್ ನೋಡುವುದಕ್ಕೂ ಹಾಗೆಯೇ ಬಹಳ ಶಿಸ್ತಿನ ಸಿಪಾಯಿ. ಅನಾಥನಾಗದಂತೆ ಸಾಕಿದ ಚಿಕ್ಕಮ್ಮ ಮದುವೆಯಾದ ವರ್ಷವೇ ತೀರಿಕೊಂಡ ಕಾರಣ ರೂಪಾಳಿಗೆ ಸಂಪೂರ್ಣವಾಗಿ ಆವರಿಸಿಕೊಂಡ.
ರೂಪಾಳೂ ಅಷ್ಟೆ, ತಾನಾಯಿತು ಎಂದಿದ್ದವಳು ತನ್ನ ಅಣ್ಣನ ಮದುವೆಯಾಗುತ್ತಲೇ ಮನಸ್ಸು ಬದಲಾಯಿಸಿ ಮದುವೆಯಾಗುತ್ತೇನೆಂದಿದ್ದು ಖುಷಿ ಕೊಟ್ಟಿತ್ತು ಅವಳ ಅಪ್ಪನಿಗೆ. ಹಾಗೇ ಯೋಗ್ಯನೆಂದು ಜಯಂತನನ್ನು ಹುಡುಕಿ ಮದುವೆ ಮಾಡಿಸಿದ್ದರು. ಮದುವೆಯಾದ ಮೇಲೆ ಮನೆಯನ್ನೂ ಅವಳ ಹೆಸರಿಗೆ ಮಾಡಿಕೊಟ್ಟು ವಿದೇಶಕ್ಕೆ ಹೊರಟುಹೋದ ಮೇಲೆ ಅವಳಿಗೂ ತವರೆಂದಿಲ್ಲ, ಬೇರೆ ನೆಂಟಸ್ತಿಕೆಯೂ ಬೇಕಿಲ್ಲವಾಯಿತು.
ಮದುವೆಯಾಯಿತು, ಮಕ್ಕಳಾಗಬೇಡವೇ? ಆ ಯೋಚನೆಯಲ್ಲಿದ್ದ ರೂಪಾಳಿಗೆ ಮೊದಲ ಮಗು ಹೊಟ್ಟೆಯಲ್ಲೇ ಸಾವನ್ನಪ್ಪಿತು. ತನ್ನ ಎಲ್ಲಾ ಅವಕಾಶಗಳನ್ನು ಕಳೆದುಕೊಂಡಂತೆ ಎನಿಸಿದ್ದು ಡಾಕ್ಟರರ ಹೇಳಿಕೆಯ ಮೇಲೆ. ಇನ್ನು ಮಗುವಿನ ಯೋಚನೆಯನ್ನು ಮಾಡುವ ಹಾಗಿಲ್ಲ ಎನ್ನುವ ಡಾಕ್ಟರರ ಮಾತು ರೂಪಾಳ ಮನಸ್ಸಿನ ಆಳದಲ್ಲಿ ಕುಳಿತು ಕಾಡತೊಡಗಿತು. ತನ್ನ ವಯಸ್ಸು ಇನ್ನು ಮಗುವನ್ನು ಕೊಡಲು ಸಾಧ್ಯವಿಲ್ಲವೆಂದೂ, ಗರ್ಭಕ್ಕೆ ಆ ಚೈತನ್ಯ ಇಲ್ಲವೆಂದಲ್ಲವೆಂದೂ ಖಡಾಖಂಡಿತವಾಗಿ ತಿಳಿದ ಮೇಲೆ ತುಂಬಾ ಖಿನ್ನಳಾದಳು ಅವಳು. ದಿನೇ ದಿನೇ ಕಾಡತೊಡಗಿತು ಈ ವಿಷಯ.
ಜಯಂತನೂ ಇದಕ್ಕೆ ಹೊರತಲ್ಲ. ತಾನು ಎಲ್ಲವನ್ನೂ ಕಂಡುಕೊಂಡ ರೂಪಾಳಲ್ಲಿ ಈಗ ತುಂಬಾ ಕನಿಕರಗೊಂಡ. ಇತ್ತ ಕೆಲಸದ ಕಡೆ ಕೂಡಾ ಗಮನವಿಡಲಾರ, ಇದೊಂದು ರೀತಿಯ ದುಗುಡ ಇಡೀ ಮನೆಯನ್ನಾವರಿಸಿತ್ತು.
ರೂಪಾಳ ನೋವು ಮತ್ತು ರೇಣುಕಾಳ ನೋವು ಎರಡೂ ಭಿನ್ನವಾಗಿದ್ದರೂ ಅವರನ್ನು ಒಳ್ಳೆಯ ಸ್ನೇಹಿತೆಯರನ್ನಾಗಿಸಿದ್ದು ಈ ನೋವುಗಳೇ. ಮೊದಲು ಕೆಲಸಕ್ಕೆಂದು ಬಂದ ರೇಣುಕಾಳಲ್ಲಿ ತಾನು ನೋಡಿದ್ದು ನೋವಿನ ಕರಾಳ ಮುಖವೆಂದು ಗೊತ್ತಾದೊಡನೇ ತುಂಬಾ ಹತ್ತಿರವಾಗಿದ್ದಳು ರೂಪ.
ಒಬ್ಬಂಟಿಯಾಗಿದ್ದು ಅಸಹ್ಯವಾದ ಬದುಕು ಎಂದು ಬದುಕನ್ನೇ ದ್ವೇಷಿಸುವ ರೇಣುಕಳಿಗೆ ರೂಪಾ ಮತ್ತು ಜಯಂತ್ ದಂಪತಿ ಇನ್ನೊಂದು ರೀತಿಯ ತನ್ನಂತಿರುವ ಪ್ರಾಣಿಗಳು ಎಂದೆನಿಸಿ ಅವರನ್ನು ಸಮೀಪಿಸಿಕೊಂಡಳು.
-೨-
ಇಂತಹದ್ದೊಂದು ತಿರುವನ್ನು ತಾನು ಬಯಸಿರಲಿಲ್ಲ ಎಂದುಕೊಳ್ಳುತ್ತಾ ಜಯಂತ್ ತನ್ನ ಮನದ ಕೋಣೆಯಲ್ಲಿ ತಾನೇ ವಿಶ್ರಾಂತಿಯಲ್ಲಿದ್ದಾಗ ಅವನನ್ನು ಹೆಚ್ಚು ಕಾಡಿದ್ದು ರೂಪ. ಅದೇನೋ ಇತ್ತೀಚೆಗೆ ಸ್ವಲ್ಪ ಅಸಡ್ಡೆಯಂತೆ ವರ್ತಿಸುತ್ತಾಳೆ ಎಂದೆನಿಸಿ ಒಂದು ತಿಂಗಳಿನಿಂದ ಅವಳನ್ನು ಹತ್ತಿರದಿಂದ ನೋಡಿದ. ರೂಪಾಳಿಗೆ ಮಗುವಿನ ಅದಮ್ಯ ಬಯಕೆ. ತಾನು ಸಶಕ್ತ ಹೌದಾದರೂ ಅವಳಲ್ಲ ಎಂದು ಅವಳಿಗೂ ತಿಳಿದಿದೆ.  ಮತ್ತೆ ಅದು ಯಾಕೆ ಹೀಗೆ ಹಠ ಮಾಡುತ್ತಾಳೆ ಎಂದು ತುಂಬಾ ಯೋಚನೆಯಲ್ಲಿದ್ದ.
ಒಂದು ದಿನ ರೂಪಾಳ ಮಾತು ಈತನನ್ನು ಇಂಚಿಂಚಾಗಿ ಚುಚ್ಚಿದಂತೆ ಭಾಸವಾಯಿತು. ಯಾವುದೇ ಕಾರಣಕ್ಕೂ ಇಂತಹ ಸಂಬಂಧವನ್ನು ಒಪ್ಪವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದರೂ ಸಾಯುವ ಮಾತುಗಳನ್ನಾಡಿ ಒಪ್ಪಿಸಿದ್ದಳು ರೂಪ. ಯಾವುದಾದರೂ ಅನಾಥಾಶ್ರಮದ ಮಗುವನ್ನು ಪಡೆಯಬಯಸಿದ ತನ್ನ ನಿಲುವನ್ನು ಅವಳು ಸ್ವಾಗತಿಸದೇ ತನ್ನ ಮತ್ತು ರೇಣುಕಳ ಸಂಬಂಧದಿಂದ ಮಗುವಾಗಲಿ ಎಂದು ಬಯಸಿದ್ದಳು. ಹೇಗೆ ಒಪ್ಪುವುದು? ದೊಡ್ಡ ದ್ರೋಹವೆಂಬಂತೆ ವಿಷಾದವಾಗಿ ಸುಮಾರು ದಿನ ಯೋಚಿಸಿ ಕೊನೆಗೆ ಸರಿ ಎಂದ ಜಯಂತನ ಕಣ್ಣುಗಳಲ್ಲಿ ಯಾವುದೇ ಮಿಂಚುಗಳಿರಲಿಲ್ಲ ಬದಲಾಗಿ ರೂಪಾ ಯಾವುದೋ ಒಂದು ರೀತಿಯ ವಿಚಿತ್ರ ಸಮಾಧಾನಗೊಂಡವಳಂತಿದ್ದಳು.
ತಾನು ಹೇಗೋ ಜಯಂತನನ್ನು ಒಪ್ಪಿಸಿದೆ. ಆದರೆ ರೇಣುಕಳನ್ನು ಒಪ್ಪಿಸಿಕೊಳ್ಳುವ ಬಗೆ ಹೇಗೆ? ಅಂತರಂಗದ ಮಾತುಗಳನ್ನ ಸ್ನೇಹಿತೆಯಲ್ಲಿ ಆಡಬಹುದೇನೋ ಎನ್ನುತ್ತಾ ಅವಳು ತುಂಬಾ ಯೋಚನೆ ಮಾಡಿ ಒಂದು ದಿನ ಏಕಾಂತದಲ್ಲೇ ರೇಣುಕಳಲ್ಲಿ ಹೇಳಿದಳು. ಮೊದಲಿಗೆ ಹೌಹಾರಿದ ರೇಣುಕ ಕ್ರಮೇಣ ತನ್ನ ಪ್ರಾಣವೇ ಜೊತೆಯಲ್ಲಿ ಇರದಿದ್ದ ಮೇಲೆ ಈ ದೇಹದಿಂದ ಇನ್ನೊಬ್ಬರಿಗೆ ತಾಯಿಯಾಗುವುದು ಎಂದೇ ತಿಳಿದು ಒಪ್ಪಿದಳು. ಇದೂ ಕೂಡಾ ರೂಪಾಳ ಪಾಲಿಗೆ ಒದಗಿದ ಅತ್ಯಂತ ಖುಷಿಯ ವಿಚಾರವಾಗಿತ್ತು.
ಸ್ವಲ್ಪ ಸಮಯವಾದ ಮೇಲೆ ಹೇಗೋ ಇಬ್ಬರನ್ನೂ ಒಪ್ಪಿಸಿ ತಾನು ಅವರ ಕೂಡುವಿಕೆಗೆ ಸಮಯವನ್ನೂ ಕೊಟ್ಟು ಅಳುತ್ತಾ ಕುಳಿತುಬಿಟ್ಟಳು. ಯಾವುದೇ ಭಾವವಿಲ್ಲದ ಕೇವಲ ಕೀಲಿಕೈಕೊಟ್ಟರೆ ತಿರುಗುವಂತಹ ಬೊಂಬೆಯಂತೆ ಸುಮಾರು ದಿನ ಮೌನವಾಗಿದ್ದಳು ರೂಪ. ಜಯಂತನೂ ತಾನಾಯಿತು ತನ್ನ ಪಾಡಾಯಿತು ಎನ್ನುತ್ತಾ ಸೋತ ಸೇನೆಯ ನಾಯಕನಂತೆ ಇದ್ದ. ರೇಣುಕಾ ಗೆಲುವಾದಳು, ನಗುತಿದ್ದಳು ಕೆಲವು ದಿನ. ಕೆಲವು ದಿನ ಹುಚ್ಚಿಯಾದಂತಿದ್ದಳು.
ರೇಣುಕಾಳ ಹೊಟ್ಟೆಯಲ್ಲಿ ತನ್ನ ಮಗುವೇ ಹುಟ್ಟಲಿದೆ ಎಂದು ರೂಪಾ ಅತ್ಯಂತ ವಿಶ್ವಾಸವಾಗಿ ನಂಬಿ ಅವಳನ್ನು ಕಾಯುತ್ತಿದ್ದಳು.
-೩-
ತಿಂಗಳುಗಳು ಸವೆದು ಹೋದಂತೆಲ್ಲಾ ರೇಣುಕಾ ಮೈತುಂಬಿಕೊಂಡು ಹೆರಿಗೆಗೆ ಕಾಯುವ ಪ್ರಕೃತಿಯಾದಳು. ರೂಪಾ ಆಶ್ಚರ್ಯದಿಂದ ಅವಳನ್ನು ಗಮನಿಸುತ್ತಾ ಇದ್ದಳು. ಹೀಗೇ ರೇಣುಕಾಳಿಗೆ ತನ್ನ ಗಂಡನ ನೆನಪು ಹೆಚ್ಚಾಗಿ ಹರಿಯತೊಡಗಿತು. ಮಗುವಿನ ಗುದ್ದಾಟ ಹಿತವಾದಂತೆ, ಗಂಡ ಮನದೊಳಗೆ ಇರಿದಂತೆ ಭಾಸವಾಯಿತು. ಇದು ನಿನ್ನದೇ ಮಗು, ನೀನೇ ಅಮ್ಮಾ ಎಂದು ಕರೆದಂತೆ ಭಾಸವಾಗುತ್ತಿತ್ತು. ಸುಮಾರು ೫-೬ ತಿಂಗಳ ಮಗು ಹೊಟ್ಟೆಯಲ್ಲಿ ತನ್ನ ಮೈಯ್ಯ ಮನಸ್ಸಿನ ವಿಪರೀತ ಬದಲಾವಣೆಗಳಿಗೆ ಕಾರಣವಾಗುತ್ತಾ ಹೋಯಿತು.
ಈ ಮಗುವನ್ನು ಹೆತ್ತು ಕೊಟ್ಟರೆ ನಾನು ಪುನಃ ಒಬ್ಬಂಟಿಯಾಗುತ್ತೇನೆ ಎನ್ನುವ ಭಾವ ಕ್ರಮೇಣ ಹೆದರಿಕೆಯಾಗುತ್ತಾ ಸಾಗತೊಡಗಿತು. ಅದು ನಿಮಿಷ ನಿಮಿಷಕ್ಕೂ ತನ್ನ ಘೋರತೆಯನ್ನು ಹೆಚ್ಚಿಸತೊಡಗಿತು. ಇಲ್ಲ ಯಾವ ಕಾರಣಕ್ಕೂ ಈ ಮಗುವನ್ನು ಯಾರಿಗೂ ಕೊಡಲಾರೆ ಎನ್ನುವ ಗಟ್ಟಿಯ ನಿರ್ಧಾರಕ್ಕೆ ಬಂದಂತೆ ರೂಪಾ ಮತ್ತು ಜಯಂತರ ಮುಖ ಇನ್ನೊಂದು ರೀತಿ ಕಾಡಿದಂತೆ ಬೇಡಿದಂತೆ ಅನ್ನಿಸತೊಡಗಿತು. ಏನು ಮಾಡುವುದು ಈ ಘಟನೆಗಳಿಗೆ? ಮೊದಲಿನ ವಿಶ್ವಾಸವೂ ಅವರ ಪ್ರೀತಿಯೂ ಇಂದು ಖಂಡಿತ ದೊಡ್ಡದು ಅನ್ನಿಸುತ್ತಿಲ್ಲ. ಕೇವಲ ಕೆಲವು ತಿಂಗಳುಗಳಲ್ಲಿ ಆದ ಮಾರ್ಪಾಡು ಇದು. ಪ್ರತಿಯೊಂದು ಜೀವಕ್ಕೂ ಒಂದು ದೀರ್ಘವಾದ ನೋವು ಎಂದಿರಬೇಕೇನೋ? ಆ ನೋವನ್ನು ವಿಶ್ಲೇಷಿಸುತ್ತಾ ಸಾಗುವಾಗ ಸಣ್ಣ ನಲಿವುಗಳೆಲ್ಲ ಗೌಣ. ಅದೇ ಬೆಳಗು ಅದೇ ಮನೆಯ ಕತೆಗಳು ಎಂದುಕೊಳ್ಳುತ್ತಲೇ ಜೀವನವನ್ನು ಒಂದೊಂದು ಹೆಜ್ಜೆಯೂರಿ ಸಾಗುವುದು ಮಾನವನಿಗೆ ಅರಿವಾಗದೇ ಸಾಗುವ ಒಂದು ಪ್ರಕ್ರಿಯೆ. ಈ ಪ್ರಕ್ರಿಯೆಯೊಳಗೆ ಇದೊಂದು ನಡೆದ ಘಟನೆ. ಯಾವ ಜಗತ್ತಿಗೂ ಗೊತ್ತಾಗಲಾರದು ಎಂದುಕೊಂಡಳು.
ಇಂದೇ ಕೊನೆಯ ಬಾರಿಯಾಗಬೇಕು. ಹೇಗಾದರೂ ಒಂದು ಖಡಕ್ ಎಂಬಂತೆ ಉತ್ತರಕೊಟ್ಟು ತೀರ್ಮಾನವಾಗಬೇಕು. ಇದುವರೆಗೆ ನಡೆದ ಘಟನೆಗಳನ್ನು ಯಾರಲ್ಲಿಯೂ ಹೇಳಿಕೊಳ್ಳುವಂತಿಲ್ಲವಾದರೂ ಮುಂದೆ ಹೇಗಿರಬೇಕು. ತನಗೆ ಸಾಧ್ಯವಿಲ್ಲ ಎಂದುಕೊಂಡಳು.
ಆ ದಿನದ ಕೆಲಸ ಮುಗಿಸಿ ಮನೆಗೆ ಬಂದು ಬಾಗಿಲು ಹಾಕಿಕೊಂಡು ಸುಮಾರು ಬಾರಿ ಹೇಳಿದಂತೆ ಒಲಿಸಿದಂತೆ ಅಭಿನಯಿಸಿದಳು ರೇಣುಕ. ಏಕಪಾತ್ರಾಭಿನಯದ ರೂಪಾ ಮತ್ತು ಜಯಂತನ ಪಾತ್ರಗಳು ತನ್ನನ್ನು ಸೋಲಿಸುತ್ತಿದೆ ಎಂದೆನಿಸತೊಡಗಿತು. ಇದ್ದ ಹಣವನ್ನೆಲ್ಲಾ ಒಟ್ಟುಗೂಡಿಸಿ ತಾನು ಯಾವುದೋ ಊರಿಗೆ ತೆರಳುತ್ತೇನೆ ಎಂದು ನಿರ್ಣಯಿಸಿ ಮನೆಯಿಂದ ಹೊರಗೆ ಬಂದಳು.
ಮನೆಯನ್ನು ನೋಡಿ, ರೂಪಾ ಜಯಂತರ ಮುಖಗಳನ್ನು ಕಣ್ಣಮುಂದೆ ತಂದು, ಸುಖವಾಗಿರಲಿ ಎಂದು ಎದೆದುಂಬಿ ಹಾರೈಸಿ ಸೂರ್ಯನ ಚಲನೆಯಂತೆ ನೇರ ಹೊರಟಳು ರೈಲುತಾಣಕ್ಕೆ. ಬೀಳ್ಕೊಡಲು ಸ್ನೇಹ, ಪ್ರೇಮ, ನಿಷ್ಕಳಂಕ ಬದುಕಿನ ಓಟ ಜೊತೆಯಲ್ಲಿತ್ತು.


೦೯-೦೧-೨೦೧೩
(ಈ ಕತೆ ಪಂಜು ಮ್ಯಾಗಝಿನ್ ನಲ್ಲಿ ಪ್ರಕಟವಾಗಿತ್ತು.. ಲಿಂಕ್ :http://www.panjumagazine.com/?p=89 )

5 comments:

  1. ಅಮ್ಮಂದಿರೆಲ್ಲಾ ಹೀಗೆ ಅನಿಸುತ್ತದೆ... ಕರುಳಕುಡಿಯನ್ನು ಅದಮ್ಯವಾಗಿ ಪ್ರೀತಿಸುವವರು ಇವರೆಲ್ಲಾ...

    ಚಂದದ ಕಥೆ...

    ReplyDelete
  2. ಚೆಂದಿದ್ದೋ ಕಿಣ್ಣ.. ಆದರೆ ಅಂತ್ಯ ಅನಿರೀಕ್ಷಿತವಾಗಿತ್ತು.. ಇನ್ನೂ ಇದ್ದು ಅಂದ್ಕತ ಇದ್ದಿದ್ದಿ.. :-(

    ReplyDelete
  3. Houdu mugdidde gotaydille & Anirekshita antya... But nice... :)

    ReplyDelete
  4. ಲಾಯಕಾಯಿದು ಕಿರಣಾ

    ReplyDelete
  5. ಲಾಯಕಾಯಿದು ಕಿರಣಾ

    ReplyDelete