Saturday, 11 February 2012

ಇಬ್ಬಂದಿ - ಭಾಗ ೨


ಭಾಗ ೨.

ಯಾರು ಹಿತವರು  ನಿನಗೆ   ಈ ಮೊವರೊಳಗೆ
ನಾರಿಯೋ ? ಧಾರುಣಿಯೋ ? ಬಲುಘನದ ಸಿರಿಯೋ

ಅನ್ಯರಲಿ  ಜನಿಸಿದ್ದ ಅಂಗನೆಯ  ಕರ ತಂದು
ತನ್ನ ಮನೆಗವಳ  ಯಜಮಾನಿಯೆನಿಸಿ
ಭಿನ್ನವಿಲ್ಲದಲರ್ಧ ದೇಹವೆನಿಸುವ  ಸತಿಯು
ಕಣ್ಣಿನಲಿ  ನೋಡಲಂಜುವಳು   ಕಾಲವಶದೀ..

ಡಬ್ಬಾ ಮೊಬೈಲು. ಈ ಕಾಲದ ಹಾಡುಗಳ ಮಧ್ಯೆ ಕೆಲವು ಇಂತಹದ್ದು ಕೂಡಾ ಸೇರಿಹೋಗಿದೆ. ಕಳೆದ ಸುಮಾರು ದಿನಗಳಿಂದ ಹೀಗೇಕೆ ಆಗುತ್ತಿದೆ ? ಅಪ್ಪ ಅಮ್ಮ ಇಬ್ಬರ ಅಸ್ತಿತ್ವದ ಬಗ್ಗೆ ಇದುವರೆಗೆ ಯೋಚಿಸಿರಲಿಲ್ಲ. ಇದೀಗ ಅಪ್ಪ ಅಮ್ಮ ಎನ್ನುವ ವಿಚಾರ ತುಂಬಾ ತಲೆಕೆಡಿಸಿಕೊಳ್ಳುತ್ತಿದೆ. ಇಲ್ಲೂ ದ್ವಂದ್ವವೇ .

ಸರೀ ಎರಡು ವರ್ಷಗಳಾಯಿತು ಇವತ್ತಿಗೆ ಈ ಆಫೀಸಿನ ಬಾಗಿಲಿಗೆ ಬಂದು. ಕೆಲಸ ಏನು ಎನ್ನುವುದು ನನಗೂ ಅಗತ್ಯ ಇಲ್ಲ, ನನ್ನ ಮ್ಯಾನೇಜರ್ ಮಹಾಶಯನಿಗೂ ಬೇಡ, ಅಂತೂ ಒಳ್ಳೆಯ ಸಂಬಳ, ಜೊತೆಗಾರರು, ಕೆಲಸವೇ ಇಲ್ಲದ ಪೊಸಿಷನ್ ! ಲಾಟರಿ . ಮತ್ತೇನು ಮಾಡುವುದು ? ಹಣವೇನೋ ನದಿ ನೀರಿನಂತೆ ಇರುವಾಗ ನನ್ನ ಆಸೆಯ ಒಂದು ಬಕೀಟು ನೀರು ಮುಗಿಯುವುದೇ ಕಷ್ಟವಿತ್ತು.

ಹೆಚ್ಚಾಗಿ ಕಥೆಯ ಆರಂಭ ಎಲ್ಲಿಯದು ಎನ್ನುವುದರ ಒಳಗೆ ನಡೆದು ಹೋಗುವ ಸಂಗತಿಗಳನ್ನು ಹೇಳಲಾಗುವುದಿಲ್ಲ. ಆ ಕಲಾಕ್ಷೇತ್ರದ ಸಂಗೀತದಲ್ಲೂ ಹಾಗೆಯೇ ! ತ್ಯಾಗರಾಜರ ಕೀರ್ತನೆಗಳನ್ನು ಸುಗಮ ಸಂಗೀತದಂತೆ ಹಾಡಿದ ಆ ಹುಡುಗಿ. ಬೇಡವಿತ್ತು. ಹಠಮಾರಿ ಹೆಣ್ಣಾದರೂ ಸೆಳೆಯುವ ಗುಣ ಹುಟ್ಟಿನಿಂದಲೇ ಬಂದಿರಬೇಕು ಎಂದೆನಿಸುತ್ತದೆ. ಸುಮ್ಮನೆ ಚೆನ್ನಾಗಿತ್ತು ಅಂತ ಹೇಳಿ ಅವಳ ಅಭಿಮಾನಕ್ಕೆ ನಾನು ಪಾತ್ರನಾಗುವುದೇನಕ್ಕೆ ಎಂದೆನಿಸಿತಾದರೂ ಅವಳನ್ನು ಮಾತನಾಡಿಸದೆ ಹೋಗುವುದು ಕಷ್ಟವಿತ್ತು. ಸ್ವಲ್ಪ ಹೆದರಿಕೆ ಇತ್ತು ,ಆದರೂ ನಾನೇನು ಪ್ರಪೋಸ್ ಮಾಡುವವನಲ್ಲವಲ್ಲ!

ಸಂಗೀತಕ್ಕೆ ಸೀರೆ, ಈಗ ಜೀನ್ಸು ತೊಟ್ಟು ಹೊರಗೆ ಬಂದಾಗ ಒಮ್ಮೆಗೇ ಪಿಚ್ಚೆನಿಸಿತು. ನಾನೂ ರೀಬಾಕ್ ಶೂ ಧರಿಸಿಯೇ ಸಂಗೀತ ಕೇಳಿದವನೆಂದು ಸ್ವಲ್ಪ ಸಮಾಧಾನ. ಚೆನ್ನಾಗಿತ್ತು ಹಾಡು ಎಂದೆ. ಸೋ ವಾಟ್ ಎಂದಳವಳು. ಅಂಹಕಾರವೇನೋ ಅದು , ಅಲ್ಲ ಎಂದೆನಿಸಿದ ಪ್ರಾಯವದು. ಒಂದು ಮಾತಿಗೆ ಬಳಲಿದ ನಾನು ಪುನಃ ಅವಳನ್ನು ಭೇಟಿಯಾದದ್ದು ನನ್ನ ಆಫೀಸಿನಲ್ಲೇ .

ಪ್ರತಿಯೊಂದಕ್ಕೂ ತಾಳೆ ಹಾಕಿ ನೋಡುವ ಅವಳ ಗುಣ ಅಷ್ಟಾಗಿ ಹಿಡಿಸದಿದ್ದರೂ ಇತ್ತೀಚೆಗೆ ಅವಳು ನನ್ನ ಕಡೆ ವಾಲುವ ಹಾಗೆ ತೋರುತ್ತಿದ್ದುದರಿಂದ ಸಹಿಸಿಕೊಳ್ಳುತ್ತಿದ್ದೆ. ಸರಿ ಒಂದು ತಿಂಗಳ ಹಿಂದೆ ಅವಳೇ ಎರೇಂಜ್ ಮಾಡಿದ ಟ್ರಿಪ್ಪಿಗೆ ಹೋಗುವಾಗಲೂ ಅಷ್ಟೆ, ಅವಳ ಜೊತೆಗೇ ಇದ್ದೆ. ತುಂಬಾ ಮಾತಾಡುತ್ತಾಳೆ. ಎಲ್ಲಿ ಅನ್ ರೊಮ್ಯಾಂಟಿಕ್ ಅನ್ನುತ್ತಾಳೋ ಎನ್ನುವ ಭಯದಲ್ಲಿ ನಾನು ಉದ್ದೇಶವಿಲ್ಲದೇ ಹೇಳುವ ಮಾತುಗಳಿಗೂ ಅವಳು ನಗುತ್ತಿದ್ದ ರೀತಿಗೇ ಸೋತದ್ದು ನಾನು .!

ಪ್ರೇಮದ ಪ್ರೀತಿಯ ಬಗ್ಗೆ ಎಲ್ಲಾ ನಿರ್ದಿಷ್ಟ , ಇದೇ ಅದು ಅನ್ನುವ ಅರ್ಥ ನನಗಿಲ್ಲ. ತುಟಿಗೆ ತುಟಿ ಮೈಗೆ ಮೈ ಕೂಡ ಪ್ರೇಮವೇ ನನ್ನ ಮಟ್ಟಿಗೆ. ಅವಳೂ ಹಾಗೆಯೇ.ಕಾಮದ ಹೊಳಹಲ್ಲಿ ಮಾತ್ರ ನನ್ನನ್ನು ಅವಳು ಗೆಲ್ಲಬಲ್ಲಳು ಎನ್ನುವ ವಿಲಕ್ಷಣವಾದ ಭಾವವೇ ನಾನು ಸೋಲೊಪ್ಪಿದ್ದು.  ಇಂತಹದ್ದೇ ಹೊಂದಾಣಿಕೆಗಳಿಂದ ನಾವು ಅಪ್ಪ ಅಮ್ಮನೂ ಆಗಿಬಿಡುತ್ತಿದ್ದೆವೇನೋ ?. ಇದೆಲ್ಲಾ ಅವಳನ್ನು ಹಚ್ಚಿಕೊಳ್ಳುವುದಕ್ಕೆ ಇದ್ದ ಮಾರ್ಗಗಳು ಖಂಡಿತ ಆಗಿರಲಿಲ್ಲ. ಮೊದಲು ಅವಳನ್ನು ಸೋಲಿಸುವ ನೆಪ ಮಾತ್ರ, ಈಗ ಅವಳಲ್ಲೇ ನಾನು ಸೋತದ್ದು ನನ್ನ ಗೆಲುವು ಎನ್ನುವಷ್ಟರ ಮಟ್ಟಿಗೆ ನನ್ನಲ್ಲಿದೆ.

ಅಪ್ಪನ ಭೇಟಿಯೂ ಅಗತ್ಯ ಇರಲಿಲ್ಲ ನಮಗೆ. ನನ್ನ ಮಾತಿಗೆ ಎದುರು ಮಾತನಾಡುವವರಲ್ಲ ನನ್ನ ಅಪ್ಪ. ಅಮ್ಮನಂತೂ ಅಪ್ಪನಿಂದ ಸಾಧು. ಆದರೂ ಇವಳು ಪರಿಚಯವಾಗಲಿ ಎಂದು ಮನೆಗೆ ಕರೆದುಕೊಂಡು ಹೋದದ್ದು. ಅಪ್ಪನಲ್ಲಿ ಮಾತನಾಡಿದ್ದಾಳೆ ಎಂದು ಅಪ್ಪನಿಂದಲೇ ತಿಳಿದದ್ದು. ಮಗನೇ ನಿನ್ನ ಇಷ್ಟ ಎಂದಾಗ ಸ್ವಲ್ಪ ಖೇದವಾಯಿತು. ಹಳೆಯ ಸಂಪ್ರದಾಯಗಳನ್ನು ಮೀರಿ ನಡೆದದ್ದು ತಪ್ಪೇ ಸರಿಯೇ ಅರ್ಥವಾಗಲಿಲ್ಲ.ಅಪ್ಪನಿಗೆ ಗೊತ್ತಿಲ್ಲದಂತೆ ಸಿಗರೇಟು ಎಳೆಯುವುದು, ವೀಕೆಂಡ್ ಪಾರ್ಟಿಗಳಲ್ಲಿ ತಿರುಗಾಡುವುದು ಕುಡಿಯುವುದು ಎಲ್ಲಾ ಈಗ ಸಾರ್ವಕಾಲಿಕವಾಗಿದೆ. ಪ್ರತಿಯೊಬ್ಬರೂ ಸುಳ್ಳು ಹೇಳುತ್ತಾರೆ ಮತ್ತು ಎಲ್ಲಾ ಅಪ್ಪಂದಿರಿಗೆ ಗೊತ್ತಿರುವ ಸತ್ಯವೇ ಆಗಿರಬೇಕು ! ಈ ವಿಷಯದಲ್ಲಿ ಅಪ್ಪ ಚರ್ಚೆ ಮಾಡದೇ ಇದ್ದುದಕ್ಕೆ ಕಾರಣವೂ ಗೊತ್ತಿಲ್ಲ.

ನಿನ್ನೆ ಕೂಡಾ ಅವಳು ಹೀಗೆಯೇ ಹೇಳಿದ್ದಳು. ಅವಳ ಮನೆಯಲ್ಲಿ ಮದುವೆಗೆ ನಿರ್ಬಂಧವಿದೆ. ತುಂಬಾ ಕಲಿತ ವರ್ಗ ಅವರದ್ದು. ಅವಳ ಅಪ್ಪ ಅಮ್ಮನನ್ನು ಕೂಡಾ ಭೇಟಿಯಾಗಿದ್ದೇನೆ. ನನ್ನ ಅಪ್ಪ ಅಮ್ಮನಂತೆಯೇ ಅವಳನ್ನು ಪ್ರತಿನಿಧಿಸುತ್ತಾರೆ ಎಂದೆನಿಸಿತು. ಬೇಗ ಮದುವೆಯಾಗುವುದಕ್ಕೆ ನನ್ನದೇನೂ ಅಭ್ಯಂತರವಿಲ್ಲ, ಆದರೆ ಅವಳ ನಿರ್ಧಾರ ಸರಿ ಎನ್ನಿಸುವುದಿಲ್ಲ.

ಪ್ರತಿಯೊಂದು ಬೀಜವೂ ಹಕ್ಕಿಯೂ ತನ್ನ ಮರದಲ್ಲೇ ಅಥವಾ ಗೂಡಲ್ಲೇ ಇರುವುದಿಲ್ಲ. ಮನುಷ್ಯನಾದವನು ತಾನು ಇನ್ನೊಂದು ಜೋಡಿಗೆ ಅಂಟಿಕೊಂಡು, ಜೊತೆಗಿದ್ದುಕೊಂಡು ಬಾಳುವುದು ಅವಳ ಕಣ್ಣಿಗೆ ವಿಪರೀತವಾಗಿದೆ. ಈಗೀಗ ನನಗೂ. ನಾನೀಗ ಹಿಂದಿನಿಂದ ಬಂದ ಆಚಾರ ಅಥವಾ ವ್ಯವಸ್ಥೆಗೆ ವಿಮುಖತೆಯನ್ನ ಹೇಗೆ ವ್ಯಕ್ತ ಪಡಿಸಲಿ? ಇಡೀ ಸಂಬಂಧಗಳನ್ನು ಕಳಚಿ ಹೋಗಬೇಕೆನ್ನುವ ಅವಳ ಮಾತು ಅತಾರ್ಕಿಕವಾಗಿ ಕಂಡರೂ ಅದರಲ್ಲೇನೋ ಇದೆ ಎನ್ನುವುದು ಸ್ಪಷ್ಟ. ಸಾಕುವ ಹೊಣೆಗಾಗಿ ಈ ಮಾತನ್ನವಳು ಖಂಡಿತಾ ಆಡಲಿಲ್ಲ ಎಂದೆನಿಸುತ್ತದೆ.

ಇವತ್ತು ಖಂಡಿತಾ ಅವಳಲ್ಲಿ ಈ ಮಾತಿನ ಬಗ್ಗೆ ಕೇಳಬೇಕು. ಇದೆಲ್ಲಾ ಒಂದು ಬಗೆಯ ಸೋಲೇ ಆಗಿರಬೇಕು. ನಿರ್ದಿಷ್ಟವಾದ ಒಂದು ನಕಾಶೆ ಇಲ್ಲದೆ ಜೀವನವನ್ನು ರೂಪಿಸುವುದು ಹೇಗೆ? ಬರೀ ಲೈಂಗಿಕತೆಯ ನೋಟದಿಂದ ಅವಳನ್ನು ಸೇರಿದ್ದೆನೇ ? ಒಂದು ವೇಳೆ ಆ ಭಾವಸ್ರಾವ ಕಡಿಮೆಯಾದಾಗ ಅವಳಲ್ಲಿ ನನ್ನ ಮೋಹ ತೀರಬಹುದೇ ? ಪುನಃ ಏನೋ ಬೇಕು ಎನ್ನುವ ಅಭಿಲಾಷೆಗೆ ಮಿತಿ ?

ಅವಳಲ್ಲಿ ಕೇಳುವ ಮೊದಲು ಅಪ್ಪನಲ್ಲಿ ಮನಬಿಚ್ಚಿ ಮಾತನಾಡಬೇಕು...

5 comments:

 1. ಇಬ್ಬಂದಿಯ ೨ನೆಯ ಭಾಗವೂ ಹಲ ಕೋನಗಳಿಂದ ಹುಡುಗಿಯನ್ನು ವಿಶ್ಲೇಷಿಸುತ್ತಾ, ಹುಡುಗನ ಇಬ್ಬಂದಿಯನ್ನು ಬಿಡಿಸಿಟ್ಟಿತು.

  ಈ ನಾಲ್ಕು ತಂತಿಗಳ ೩ನೇ ಅಧ್ಯಾಯಕ್ಕಾಗಿ ಕಾಯುತ್ತೇನೆ.

  ಅಂದಹಾಗೆ ಈ ಕೀರ್ತನೆ ನನಗೂ ಇಷ್ಟ.

  ReplyDelete
 2. ಭಾಗ ಒಂದರಿಂದ ಎರಡಕ್ಕೆ ಬಂದಾಗ ಮಾತುಗಳು ಇನ್ನಷ್ಟು ಆಳವಾಗಿದೆ ಅನ್ನಿಸಿತು. ಅಂತರಕೆ ಜಿಗಿದಾಗ ಬರುವಾಗ ಹೆಜ್ಜೆಗಳು ಭಾರ ಅನ್ನಿಸಬಹುದು.ಭಾರದಲ್ಲಿ ಹುದುಗಿರುವ ಸತ್ತ್ವ ಶ್ರೇಷ್ಠವಾಗಿದೆ.

  ReplyDelete
 3. ಸಂಗೀತಕ್ಕೆ ಸೀರೆ, ಈಗ ಜೀನ್ಸು ತೊಟ್ಟು ಹೊರಗೆ ಬಂದಾಗ ಒಮ್ಮೆಗೇ ಪಿಚ್ಚೆನಿಸಿತು. ನಾನೂ ರೀಬಾಕ್ ಶೂ ಧರಿಸಿಯೇ ಸಂಗೀತ ಕೇಳಿದವನೆಂದು ಸ್ವಲ್ಪ ಸಮಾಧಾನ.
  ----------- ಬರಹ ಬರೆಯುವಲ್ಲಿನ ತಾಂತ್ರಿಕತೆ ಮತ್ತು ಇದ್ದಕ್ಕಿದ್ದಂತೆ ನೀಡುವ ನಿಧಾನ ಶಾಕ್! :-)
  ಖಂಡಿತ ನೀವು ಮುಂದೆ ಹೋಗಬಲ್ಲಿರಿ ಭಟ್ರೇ.. :-)

  ReplyDelete
 4. ಈ ಕಥೆಯನ್ನು ಹಿಂದೆಯೇ ಓದಿದ್ದೆ. ಆದರೆ ಇವತ್ತು ಕಾಡಿದಷ್ಟು ಅಂದು ಕಾಡಿರಲಿಲ್ಲ! ಕಥೆ, ಭಾವಯಾನಕ್ಕೆ ಕರೆದೊಯ್ದು, ಮನಸ್ಸಿನಾಳವನ್ನು ಸೋಕುತ್ತದೆ. ಭಾವಗಳು ಘನೀಕರಿಸಿಕೊಂಡು ಮನಸ್ಸನ್ನು ಜಿಜ್ಞಾಸೆಗೆ ನೂಕುತ್ತವೆ. ಲಿವಿಂಗ್ ಟುಗೆದರ್, ಡೇಟಿಂಗ್ ನಂಥ ವಿಷಯಗಳ ಬಗ್ಗೆ ಬೆಳಕು ಚೆಲ್ಲುವ ಪರಿ ಚೆನ್ನಾಗಿದೆ. ಇಂದಿನ ಕಾಲಕ್ಕೆ ತಕ್ಕ ಕಥಾ ಹಂದರ ಇದ್ದು, ಕಥೆ ಸರಾಗವಾಗಿ ಓದಿಸಿಕೊಳ್ಳುತ್ತದೆ.

  - ಪ್ರಸಾದ್.ಡಿ.ವಿ.

  ReplyDelete
 5. ಈ ಕಥೆಯನ್ನು ಹಿಂದೊಮ್ಮೆ ಓದಿದ್ದರೂ, ಈ ಮಟ್ಟಿಗೆ ಅಂದು ಕಾಡಿರಲಿಲ್ಲ! ಭಾವಯಾನಕ್ಕೆ ಕರೆದೊಯ್ಯುವ ಕಥೆ ಮನಸ್ಸಿನಾಳವನ್ನು ಸೋಕಿಬಿಡುತ್ತದೆ. ಪ್ರತಿಯೊಂದು ಯೋಚನೆಗಳೂ ಓದುಗನ ಮನಸ್ಸನ್ನು ಜಿಜ್ಞಾಸೆಗೆ ನೂಕುತ್ತದೆ. ಇಂದಿನ ಕಾಲಕ್ಕೆ ತಕ್ಕ ಕಥಾ ಹಂದರವನ್ನು ಹೊಂದಿರುವ ಕಥೆ ಲಿವಿಂಗ್ ಟುಗೆದರ್, ಡೇಟಿಂಗ್ ನಂಥ ಪದಗಳಿಗೆ ಅರ್ಥ ಕಲ್ಪಿಸುವ ಪ್ರಯತ್ನವನ್ನೂ ಮಾಡಿದೆ. ನಿಮಗೆ ಕವನವಲ್ಲದೆ, ಗದ್ಯದ ಕಲೆಯೂ ಒಲಿದಿದೆ. ಸೂಪರ್ ಕಿರಣಣ್ಣ :-)

  - ಪ್ರಸಾದ್.ಡಿ.ವಿ.

  ReplyDelete