Tuesday 25 October 2011

ದೀಪಾವಳಿಯ ಮಾತು ಕಥೆ.


ಮಾತು ಮುಖ್ಯ ಯಾಕೆ ಗೊತ್ತೇ? ಮಾತೇ ಮುತ್ತು.. ಮಾತು ಮನೆ ಕೆಡಿಸಿತು ..

ಭಾರತಾಂಬೆ ನಮ್ಮ "ಮಾತೆ " ನಿನ್ನ ಜೀವಕಿಂತ ಮೇಲು ಹೇಳುವವರೂ ಇದ್ದಾರಲ್ಲಾ.. .. ವಾಗ್ಭೂಷಣಂ ಭೂಷಣಂ.. ಮಾತು ಚೆನ್ನಾಗಿರಲಿ.. ಇಷ್ಟವಾಗಲಿ ..

ಕೇಯೂರಾಣಿ ನ ಭೂಷಯಂತಿ ಪುರುಷಂ ಹಾರಾ ನ ಚಂದ್ರೋಜ್ವಲಾ
ನ ಸ್ನಾನಂ ನ ವಿಲೇಪನಂ ನ ಕುಸುಮಂ ನಾಲಂಕೃತಾ ಮೂರ್ಧಜಾಃ
ವಾಣ್ಯೇಕ್ಯಾ ಸಮಲಂಕರೋತಿ ಪುರುಷಂ ಯಾ ಸಂಸ್ಕೃತಾಧಾರ್ಯತೇ
ಕ್ಷೀಯಂತೇ ಖಲು ಭೂಷಣಾನಿ ಸತತಂ ವಾಗ್ಭೂಷಣಂ ಭೂಷಣಮ್ ... ..

ಮಾತು ಮಾತು ಮಥಿಸಿ ಬಂದ ನಾದದ ನವನೀತ..

ವಾದೇ ವಾದೇ ಜಾಯತೇ ತತ್ವಭೋಧಃ.. ಮಾತು ಅನುಭವಕ್ಕೆ, ವಾದಕ್ಕೆ (ವಾದದಲ್ಲಿ ವಿಧಗಳಿವೆ) ಮತ್ತೆ ಸ್ವಾಧ್ಯಾಯಕ್ಕೆ ಉಪಯೋಗ ಆಗಬೇಕು...

ವಾದಲ್ಲಿ ಮೂರು ವಿಧ ಇದೆ.
೧. ವಾದ - ಈ ಚರ್ಚೆಯ ಉದ್ದೇಶ ಸೋಲು ಗೆಲುವಿಂದ ಮುಖ್ಯವಾಗಿ ಸತ್ಯದ ಆವಿಷ್ಕಾರ.
೨. ಜಲ್ಪ- ಇದರಲ್ಲಿ ಗೆಲುವೇ ಪ್ರಧಾನ. ಪ್ರತಿಪಾದಿಸಿದ ವಿಷಯ ಸುಳ್ಳಾದರೂ ಸರಿ.
೩. ವಿತಂಡ - ಇದು ಪ್ರಧಾನ ವಾದದ ವಿಷಯ ಬಿಟ್ಟು ಬೇರೆ ವಿಷಯದ ಬಗ್ಗೆ ಚರ್ಚೆ ಮಾಡುವುದು... ..

ವಾದ ಒಳ್ಳೆದಿರಲಿ, ಸತ್ಯವಾಗಿರಲಿ .. ...

ಮಾತಾಡದಿದ್ದರೂ ಸಮಸ್ಯೆಯೇ ಮಾರಾಯರೆ, ಹಿಂದೆ ದಕ್ಷಯಾಗದ ಸಮಯಲ್ಲಿ ಶಿವ ಮಾತಾಡದ್ದಕ್ಕೆ,

ಸರಸಿಜಾಸನನೆಂದ ನುಡಿಗೆ ನಾ ಮರುಳಾಗಿ
ತರಳೆಯನು ಕೊಟ್ಟೆ ನಿರರ್ಥ
ಪರಿಕಿಸಲು ಕೋಡಗನ ಕೈಯ್ಯ ಮಾಲೆಯ
ತೆರನಾದುದಕಟೆನ್ನ ಬದುಕು.

ಹೇಳಿ ದಕ್ಷ ಯಾಗ ಮಾಡಿಸಿ, ಕೊನೆಗೆ ವೀರಭಧ್ರನಿಂದ ಹತನಾಗುವ ಹಾಗಾಯಿತನ್ನೆ...ಇಷ್ಟಕ್ಕೂ ಕಾರಣ ಶಿವ ಮಾತನಾಡದಿದ್ದುದೇ ಅಲ್ವಾ ?

ನುಡಿದರೆ ಮುತ್ತಿನ ಹಾರದಂತಿರಬೇಕು
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು
ನುಡಿದರೆ ಸ್ಫಟಿಕದ ಸಲಾಕೆಯಂತಿರಬೇಕು
ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು
ನುಡಿಯೊಳಗಾನು ನೆಡೆಯದಿದ್ದರೆ ಮೆಚ್ಚ ನಮ್ಮ ಕೂಡಲಸಂಗಮದೇವ

ಇದು ಬಸವಣ್ಣನ ವಚನ.. ಮಾತು ಎಷ್ಟು ಇಂಪಾರ್ಟೆಂಟು ಅಲ್ವಾ.. ಜಸ್ಟ್ ಮಾತ್ ಮಾತಲ್ಲಿ

ಮತ್ತೆ ಮಾತು ! ಮಾತುಗಳಲ್ಲಿ ಎಷ್ಟು ವಿಧ ನೋಡಿ ! ಬಿರುಮಾತು, ಪಿಸುಮಾತು, ಗಾಳಿಮಾತು ... ಬಿರುಬಿಸಿಲಿನಲ್ಲಿಯೂ ನಲ್ಲೆಯ ಪಿಸುಮಾತು ತಂಗಾಳಿಯಾದೀತು !! ಮತ್ತೆ ಇನ್ನೊಂದಿದೆ ಮಾತು ಕೊಡುವುದು..ಮಾತು ಕೊಟ್ಟು ಸಿಕ್ಕಿಬೀಳುವುದಿದೆ, ಸಿಕ್ಕಿಬಿದ್ದಮೇಲೆ ಮಾತುಕೊಡುವುದೂ ಇದೆ..

ಮಾತಿನಿಂ ನಗೆ ನುಡಿಯು ಮಾತಿನಿಂ ಹಗೆಹೊಲೆಯು
ಮಾತಿನಿಂ ಸರ್ವಸಂಪದವು ಜಗಕೆ
ಮಾತೆ ಮಾಣಿಕವು ಸರ್ವಜ್ಞ ... ಅಂತ ಸರ್ವಜ್ಞನೂ ಒಂದು ಮಾತು ಹೇಳಿದ್ದಾನೆ .

ಚನ್ನವೀರ ಕಣವಿ ಅನ್ನುವ ಅಮೋಘ ಸಾಹಿತಿ ಕನ್ನಡಕ್ಕೆ ಒಳ್ಳೆ ಕೊಡುಗೆ ನೀಡಿದ್ದಾರೆ... ಸಾಹಿತ್ಯಲೋಕದಲ್ಲಿ ಅವರದ್ದೇ ಆದ ವಿಶೇಷ ಸ್ಥಾನ ಇರುವ ಕವಿ ಅವರು ..ಅವರ ಒಂದು ಕವನದ ಸಾಲು ಹೀಗಿದೆ ...

ನಾವು ಆಡುವ ಮಾತು ಹೀಗಿರಲಿ ಗೆಳೆಯ
ಮೃದುವಚನ ಮೂಲೋಕ ಗೆಲ್ಲುವುದು ತಿಳಿಯ
ಮೌನ ಮೊಗ್ಗೆಯನೊಡೆದು ಮಾತರಳಿ ಬರಲಿ
ಮೂರು ಗಳಿಗೆಯ ಬಾಳು ಮಗಮಗಿಸುತಿರಲಿ.... ಹೇಗಿದೆ ಮಾತು ?

 ಚಾಣಕ್ಯನ ಬಗ್ಗೆ ಕೇಳದವರ್ಯಾರು ? ತನ್ನ ನೀತಿಯ ಭೋಧೆಗಳಿಂದಲೇ ಹೆಸರುವಾಸಿ. ಅವನೂ ಮಾತಿನ ಬಗ್ಗೆ ಮಾತಿನ ನೀತಿ ಹೇಳಿದ್ದಾನೆ .. ಇಂತಿದೆ ಅದು..
ಪ್ರಿಯ ವಾಕ್ಯ ಪ್ರದಾನೇನ ಸರ್ವೇ ಪಷ್ಯಂತಿ ಜಂತವಃ ತಸ್ಮಾತ್ ತದೇವ ವಕ್ತವ್ಯಂ ವಚನೇ ಕಾ ದರಿದ್ರತಾ . (ಪ್ರಿಯವಾಕ್ಯಗಳನ್ನು ಮಾತನಾಡುವುದರಿಂದ ಎಲ್ಲರೂ ಚೆನ್ನಾಗಿರುತ್ತಾರೆ, ಆದ್ದರಿಂದ ಅದನ್ನೇ ಮಾತಾಡು , ಶಬ್ಧಗಳಿಗೆ ದಾರಿದ್ರ್ಯವಿದೆಯೇ?

ಎಲ್ಲರಿಗೂ ದೀಪಾವಳಿಯ ಶುಭಾಶಯ.. ಹೋಗಿ ಹೋಗಿ ಇಲ್ಲಿ ಶುಭಾಶಯ ಹೇಳ್ತೀರಲ್ಲಾ ಅಂತ ಸಿಟ್ಟು ಮಾಡ್ಕೋಬೇಡಿ.. ಒಂದು ವಿಷಯ ಹೇಳ್ತೀನಿ.. ಜಾಸ್ತಿ ಮಾತಾಡುವವರಿಗೆ , ಬಡಾಯಿ ಕೊಚ್ಚುವವರಿಗೆ "ಪಟಾಕಿ " ಅಂತಲೂ ಅನ್ವರ್ಥ ನಾಮ ಇದೆ . ಈ ದೀಪಾವಳಿಯನ್ನು ಮನಸ್ಸುತುಂಬಿ ಬಾಯಿ ಪಟಾಕಿಯಿಂದ ಆಚರಿಸಿ.. ..ಮತ್ತೊಮ್ಮೆ ಶುಭಾಶಯಗಳು ..

3 comments:

  1. ತುಂಬಾ ವಿಷಯ ತಿಳಿಸಿಕೊಟ್ಟೀದ್ದೀರಿ. ಧನ್ಯವಾದಗಳು :) ನಿಮಗೂ ಕೂಡ ಹಬ್ಬದ ಶುಭಾಷಯಗಳು :) ದೇವರು ಶುಭವನ್ನು ತರಲಿ :)

    ReplyDelete
  2. ತಮಗೂ ದೀಪಾವಳಿ ಹಬ್ಬದ ಶುಭಾಶಯಗಳು..

    ReplyDelete
  3. ಈಶ್ವರಣ್ಣನ ಮಾತು ಅಂದ್ರೆ ಬಸವಲಿಂಗಣ್ಣ ನುಡಿದಂತೆ. ಇವರ ಪಕ್ಕದಲ್ಲಿ ನಿಲ್ಲುತ್ತಾರೆ ಮಾನ್ಯ ಬಿ.ಎಂ.ಬಷೀರ್. ವಿತಂಡ ವಾದಕ್ಕೆ ಒಂದು ಮಾತು,ಸಾವಿರ ಪೆಟ್ಟು. ಒಂದೇ ಪೆಟ್ಟು,ಮನಸ್ಸು ನೂರು ಹೋಳು..... ಈ ಕೆಳಗಿನ ಸಾಲಂತೂ.. ಶ್ರೇಷ್ಠ.. ಅತಿ ಶ್ರೇಷ್ಠ....
    ವಾದಲ್ಲಿ ಮೂರು ವಿಧ ಇದೆ.
    ೧. ವಾದ - ಈ ಚರ್ಚೆಯ ಉದ್ದೇಶ ಸೋಲು ಗೆಲುವಿಂದ ಮುಖ್ಯವಾಗಿ ಸತ್ಯದ ಆವಿಷ್ಕಾರ.
    ೨. ಜಲ್ಪ- ಇದರಲ್ಲಿ ಗೆಲುವೇ ಪ್ರಧಾನ. ಪ್ರತಿಪಾದಿಸಿದ ವಿಷಯ ಸುಳ್ಳಾದರೂ ಸರಿ.
    ೩. ವಿತಂಡ - ಇದು ಪ್ರಧಾನ ವಾದದ ವಿಷಯ ಬಿಟ್ಟು ಬೇರೆ ವಿಷಯದ ಬಗ್ಗೆ ಚರ್ಚೆ ಮಾಡುವುದು... ..

    ವಾದ ಒಳ್ಳೆದಿರಲಿ, ಸತ್ಯವಾಗಿರಲಿ .. ...

    ReplyDelete